ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಫ್ಟಿ ಪಿನ್ನಿನ ಮೊನೆಯಲ್ಲಿತ್ತು ರಾಮಬಾಣ

Last Updated 11 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಮೂರು ದಿನ ಗೋವಾದಲ್ಲಿ ಕಳೆದದ್ದೇ ಗೊತ್ತಾಗಲಿಲ್ಲ. ವೈನಾದರೂ ಎಷ್ಟೂಂತ ಕುಡಿಯೋದು? ಸುಮ್ಮನೆ ಇಪ್ಪತ್ತನಾಲ್ಕು ತಾಸೂ ಕೊಚ್ಚೆಯಲ್ಲಿ ಸುಖಿಸುತ್ತಿರುವ ಹಂದಿಗಳಂತೆ ಕುಡಿದು ಕುಡಿದು ತಲೆನೋವು ಬಂತು. ಎರಡು ಸಾರಿ ಕರುಳೆಲ್ಲ ಕಿತ್ತು ಬರುವ ಹಾಗೆ ವಾಂತಿ ಆದ ಮೇಲೆ ವೈನು ‘ಮಾಯೆ’ ಅದರ ಮೇಲೆ ಹಾಕುವ ದುಡ್ಡು ನಶ್ವರ ಎನ್ನುವ ಸತ್ಯ ಗೋಚರವಾಯ್ತು.

ಸರಿಸುಮಾರು ಅದೇ ಸಮಯಕ್ಕೆ ಆದ ಇನ್ನೊಂದು ಸತ್ಯ ದರ್ಶನವೆಂದರೆ ಖಾಲಿ ಹೊಟ್ಟೆಯಲ್ಲಿ ವೈನು, ವಿಸ್ಕಿ ಕುಡಿದಾಗ ಶುರುವಾಗುವ ‘ತಲೆನೋವು’ ದೇವರಂತೆ ಸರ್ವಾಂತರ್ಯಾಮಿಯೂ, ದೇಹ ಅಳಿದ ಮೇಲೂ ಶಾಶ್ವತವಾಗಿ ಇರಬಲ್ಲಂಥ ತಾಕತ್ತಿರುವ ಒಂದು ಜೈವಿಕ ವಿದ್ಯಮಾನ ಎನ್ನುವುದು. ಗೋವಾದಲ್ಲಿ ಇದ್ದ ಎರಡು ರಾತ್ರಿಗಳಲ್ಲಿ ಒಂದು ರಾತ್ರಿ ವಾಂತಿ ಮಾಡೋದರಲ್ಲೇ ಕಳೆದುಹೋಯ್ತು.

ಎಲ್ಲರೂ ವೈನನ್ನು ನೀರಿನಂತೆ ಕುಡಿದರು. ಇವರ ಟೇಬಲ್ಲಿಗೆ ವೈನ್ ಸಪ್ಲೈ ಮಾಡಿದ ಹುಡುಗನಿಗೆ ಇವರು ಕುಡಿಯೋದರಲ್ಲಿ ‘ಅಮೆಚೂರ್’ ಎನ್ನುವುದು ಗೊತ್ತಾಯಿತು. ಏಕೆಂದರೆ ಕುಡಿದ ಮೇಲೆ ಹೊಟ್ಟೆಗೆ ಏನಾದರೂ ತಿನ್ನುವುದನ್ನು ಬಿಟ್ಟು ಹುಡುಗಿಯರು ಬರೀ ಲಿಕ್ವಿಡ್ ಡಯಟ್ ಮೇಲೇ ಜೀವನ ಸಾಗಿಸುವ ಪ್ಲಾನ್ ಮಾಡಿಕೊಂಡಿದ್ದರು.

ಎಷ್ಟನೇ ಸಾರಿ ಹುಡುಗ ವೈನ್ ತಂದು ಕೊಟ್ಟ ಎನ್ನುವುದು ಯಾರಿಗೂ ನೆನಪಿರಲಿಲ್ಲ. ಅವನೇ ‘ಮೇಡಮ್, ನೀವು ವೈನ್ ಕುಡಿಯೋ ದುಡ್ಡಿಗೆ ವಿಸ್ಕಿನೇ ಬರುತ್ತೆ. ಕಿಕ್ಕೂ ಜಾಸ್ತಿ. ತಂದು ಕೊಡ್ಲಾ?’ ಎಂದು ರಶ್ಮಿಯನ್ನು ಕೇಳಿದ.

ಆರ್ಮಿ ಆಫೀಸರ ಮಗಳಲ್ಲವೇ ಅವಳು? ಡ್ರಿಂಕ್ಸ್ ಬಗ್ಗೆ ಗೊತ್ತೇ ಇತ್ತು. ಸ್ನೇಹಿತೆಯರಿಗೆ ಬೇಡ ಅಂತ ಹೇಳಲು ಸನ್ನೆ ಮಾಡಿದಳು. ಯಾರಿಗೂ ಅರ್ಥ ಆಗಲಿಲ್ಲ. ಅಲ್ಲದೆ ಚೂರೇ ಕುಡಿದ್ರೆ ಏನಾಗುತ್ತೆ? ಟೇಸ್ಟ್ ನೋಡಬೋದಲ್ವಾ ಅನ್ನೋ ಉಡಾಫೆ ಬೇರೆ. ‘ವಿಸ್ಕಿಯನ್ನು ರೂಮಿಗೆ ಕಳ್ಸಿ’ ಅಂತ ಹೇಳಿ ತೇಲುಗಣ್ಣಲ್ಲೇ ರೂಮಿಗೆ ಹೋಗಿ ಕೂತರು. ವಿಸ್ಕಿ ಬಂತು. ತಲಾ ಒಂದೊಂದು ಪೆಗ್ಗು.

ಅದನ್ನ ಹೆಂಗೆ ಕುಡೀಬೇಕು ಅಂತ ಹುಡುಗನ್ನ ಕೇಳೋಕೆ ಮುಜುಗರ. ಇದ್ದಿದ್ದರಲ್ಲಿ ಇದೆಲ್ಲದರ ಬಗ್ಗೆ ಸ್ವಲ್ಪ ತಿಳಿವಳಿಕೆ ರಶ್ಮಿಗೆ ಇತ್ತು. ಅವಳೇ ಹುಡುಗನಿಗೆ ಐಸ್ ತರಲು ಹೇಳಿ ರೂಮ್ ಬಾಗಿಲು ಮುಂದೆ ಮಾಡಿ ತನ್ನ ಗೆಳತಿಯರಿಗೆ ವಿಸ್ಕಿ ಸೇವನೆಯ ಬಗ್ಗೆ ಸ್ವಲ್ಪ ಜ್ಞಾನ ವಿತರಣೆ ಮಾಡಲು ತಿರುಗಿ ನೋಡಿದರೆ, ಅಲ್ಲಿ ಏನಿದೆ?

ಮೂರೂ ಜನ ವಿಸ್ಕಿಯನ್ನು ನೀರಿನಂತೆ ಕುಡಿದು ರಸ್ತೆಯ ಮೇಲೆ ತಂಪೊತ್ತಿನಲ್ಲಿ ಮಲಗಿದ ನಾಯಿಗಳಂತೆ ಮೈಚೆಲ್ಲಿದ್ದರು. ಕುಡಿದೋರ ಸಾವಾಸದಲ್ಲಿ ಕುಡಿಯದೇ ಇರೋನ ಅದೃಷ್ಟ ಏನೂಂತ ಹೇಳೋದು? ಅಲ್ಲದೆ, ದೇವರು ಯಾರ ಹಣೆಯಲ್ಲಾದರೂ ವಾಂತಿ ಬಳಿಯುವ ಕರ್ಮ ಬರೆದಿದ್ದರೆ ಏನು ಮಾಡೋಕಾಗತ್ತೆ?

ಆದರೆ, ಗುಂಪಿನಲ್ಲಿ ಎಲ್ಲರೂ ಸಮವಾಗಿ ಕುಡಿದಿದ್ದರೆ ಪರವಾಗಿಲ್ಲ. ಒಬ್ಬರಿಗೆ ಮಾತ್ರ ಸರ್ವ ಇಂದ್ರಿಯಗಳು ಹತೋಟಿಯಲ್ಲಿದ್ದು, ವಿಶೇಷವಾಗಿ ವಾಸನಾಶಕ್ತಿ ಸರಿ ಇದ್ದು, ಉಳಿದವರೆಲ್ಲ ವಯಕ್ ವಯಕ್ ಅಂತ ಗರಿಕೆ ತಿಂದ ನಾಯಿಯ ಥರ ಕಕ್ಕಿಕೊಳ್ಳುತ್ತಿದ್ದರೆ, ಶತ್ರುವಿಗೂ ಬೇಡ ಆ ಗತಿ. ರಶ್ಮಿ ಆ ರಾತ್ರಿ ಹೇಗೆ ಕಳೆದಳೋ ಗೊತ್ತಿಲ್ಲ. ಮೂರೂ ಜನ ಹುಡುಗಿಯರು ಒಬ್ಬರಾದ ಮೇಲೋಬ್ಬರು ಬಾತ್ರೂಮಿಗೆ ಹೋಗಿ ಮದ್ಯದ ಸ್ಟಾಕನ್ನು ಬಾಯಿಯ ಮೂಲಕ ಹೊರಕಳಿಸುತ್ತಿದ್ದರೆ ರೂಮಿನ ಹೊರಗೆ ಕುಳಿತ ರಶ್ಮಿ ಅಲ್ಲೇ ನಿದ್ದೆ ಮಾಡಿಬಿಟ್ಟಿದ್ದಳು.

ಅವಳು ರೂಮಿನಲ್ಲಿ ಇಲ್ಲ ಎನ್ನುವ ಎಚ್ಚರವೂ ಒಳಗಿದ್ದ ಸುರಸುಂದರಿಯರಿಗೆ ಇಲ್ಲದಾಗಿತ್ತು. ಬೆಳಿಗ್ಗೆ ರಶ್ಮಿ ರೂಮಿನ ಒಳಗೆ ಹೋದಾಗ ಮೂರೂ ಜನ ಸಾಯುವ ಹಾಗೆ ನಟನೆ ಮಾಡುತ್ತಿದ್ದರು. ರಶ್ಮಿಗೆ ಒಬ್ಬೊಬ್ಬರಿಗೂ ಕಪಾಳಕ್ಕೆ ಹೊಡೆಯುವಷ್ಟು ಸಿಟ್ಟು ಬಂದರೂ ಕಂಟ್ರೋಲ್ ಮಾಡಿಕೊಂಡು ಸುಮ್ಮನಾದಳು. ಇಂದುಮತಿ ರಶ್ಮಿಯನ್ನು ನೋಡಿ ‘ಹಿಹಿಹಿ’ ಎಂದು ಹಲ್ಲು ಕಿಸಿದು ‘ಬಾಳಾ ತಲೆನೋವು ಕಣೆ. ತಲೇಲಿ ಯಾರೋ ಕಲ್ಲು ತುಂಬ್ಸಿರೋ ಥರಾ ಅನ್ನಿಸ್ತಾ ಇದೆ...’ ಎಂದು ದುಃಖ ತೋಡಿಕೊಂಡಳು.

‘ಥೂ ಬೋಳಿ! ಅನುಭವಿಸು. ಕಲ್ಲೇನು, ನನ್ ಕೈಗೆ ಸಿಕ್ಕಿದ್ರೆ ನಿಮ್ ತಲೇಗೆ ಆಟಂ ಬಾಂಬ್ ತುಂಬ್ಸಿ ಟೈಮರ್ ಸೆಟ್ ಮಾಡ್ತಾ ಇದ್ದೆ’.
‘ಏ ಸಾರಿ ಕಣೇ...ತುಂಬಾ ವಾಂತಿ ಮಾಡ್ಕೊಂಡ್ವಿ ಅನ್ಸುತ್ತೆ’ ಎಂದು ಕಣ್ಣುಜ್ಜುತ್ತಾ ಎದ್ದಳು ವಿಜಿ.

‘ತುಂಬಾನಾ? ಆ ಬಾತ್ರೂಮಲ್ಲಿ ನಿಮ್ ಕರುಳೂ ಆಚೆ ಬಿದ್ದಿರ್ಬೇಕು ನೋಡಿ. ಕಂತ್ರಿ ನಾಯಿಗೆ ಎಲುಬು ಸಿಕ್ಕಿದ್ ಥರಾ ಆಡಿದ್ರಿ ನಿನ್ನೆ. ಇನ್ನೊಂದ್ ಸಾರಿ ನಿಮ್ ಜೊತೆ ಎಲ್ಲಿಗೂ ಬರಲ್ಲ ನಾನು’ ಎಂದು ರೇಗಿದಳು ರಶ್ಮಿ. ‘ಅಲ್ಲಾ, ಯಾಕೆ ಇಷ್ಟೊಂದ್ ತಲೆ ನೋವು?’ ಎನ್ನುತ್ತಾ ಸ್ವಗತದಲ್ಲಿ ಪ್ರಶ್ನೆ ಕೇಳಿಕೊಂಡು ಮುಗ್ಧತೆಯ ಪ್ರತಿರೂಪದಂತೆ ಎದ್ದು ಕುಳಿತಳು ಈಶ್ವರಿ.

‘ತಗುದ್ ನಾಲ್ಕು ಬಿಡ್ಬೇಕಷ್ಟೆ. ಏನ್ ಕುಡೀಬೇಕು ಅಂತ ಗೊತ್ತು ನಿನಗೆ. ಈಗ ನನ್ನೆದುರಿಗೆ ನಾಟ್ಕ ಆಡ್ತೀಯಾ, ನಿಮ್ಮಜ್ಜಿ! ಇನ್ನೊಂದ್ಸಾರಿ ಡ್ರಿಂಕ್ಸ್ ಆರ್ಡರ್ ಮಾಡಿದ್ರೆ ಹಲ್ಲ್ ಮುರ್ದು ಬಿಡ್ತೀನಿ. ಸಾರಾಯಿ ಕುಡುಸ್ಬೇಕು ನಿಮಗೆ, ಲೌಡೀರಾ!’ ಎಂದು ರಶ್ಮಿ ಕಿರುಚಿ ಬಯ್ಯುತ್ತಿದ್ದರೆ ಸಮುದ್ರದ ಅಲೆಗಳ ಹಿತವಾದ ಸದ್ದೂ ಮುಳುಗಿಹೋಗಿತ್ತು ಅವಳ ಸ್ವರ ಶ್ರೀಮಂತಿಕೆಯ ಮುಂದೆ.

ಎಲ್ಲರನ್ನು ಬಯ್ದರೂ, ರಶ್ಮಿಗೆ ತನ್ನ ಸ್ನೇಹಿತೆಯರ ಬಗ್ಗೆ ಒಂದು ಬಗೆಯ ಮಮಕಾರ. ಸಿಟ್ಟು ಇಳಿದ ಮೇಲೆ ಹುಡುಗಿಯರಿಗೆ ಚೆನ್ನಾಗಿ ನೀರು ಕುಡಿಯಿರಿ ಎಂದು ಹೇಳಿದಳು. ಒಬ್ಬೊಬ್ಬರೂ ಅರ್ಧ ಲೀಟರ್ ನೀರು ಕುಡಿದ ಮೇಲೆ ಸ್ವಲ್ಪ ತಹಬಂದಿಗೆ ಬಂದರು. ನಂತರ ಬ್ರೆಡ್ಡೋ, ಆಮ್ಲೆಟ್ಟೋ ಅದೇನು ಸೇರುತ್ತೋ ಅದನ್ನು ತಿಂದು ಈ ಗುಳಿಗೆ ತಗೊಳ್ಳಿ ಅಂತ ಒಂದೊಂದು ಡಿಸ್ಪಿರಿನ್ ಗುಳಿಗೆ ಕೊಟ್ಟಳು. ಒಂದು ತಾಸಿನ ಸಮಯದಲ್ಲಿ ಎಲ್ಲರೂ ಮೂಢ ಶ್ವಾನಗಳ ಸಂವೇದನೆಯನ್ನು ತೊರೆದು ಮನುಷ್ಯ ಜಗತ್ತಿಗೆ ಬಂದರು.

‘ಒಂದಿಷ್ಟು ಕಂಡೀಶನ್ನು. ಒಪ್ಪಿದರೆ ಸರಿ, ಇಲ್ಲಾಂದರೆ ನಿಮ್ಮ ದಾರಿ ನಿಮಗೆ, ನನ್ನ ದಾರಿ ನನಗೆ’ ಎಂದು ರಶ್ಮಿ ಮಾತು ಶುರು ಮಾಡಿದ ತಕ್ಷಣ ಉಳಿದ ಮೂವರು ಹುಡುಗಿಯರು ತಲೆ ತಗ್ಗಿಸಿ ಒಪ್ಪಿಗೆ ನೀಡಿದರು. ‘ಮೊದಲ್ನೇದು –ನಾಳೆ ಊರಿಗ್ ಹೊರಡೋದು. ಬಸ್ಸಲ್ಲಿ ಕೂರೋವರ್ಗೂ ನೀರು ಎಳ್ನೀರು ಬಿಟ್ಟು ಇನ್ನೇನೂ ಕುಡಿಯೋ ಹಂಗಿಲ್ಲ. ಬೇರೆ ಏನಾದ್ರೂ ಕುಡುದ್ರೆ ಅಲ್ಲೇ ತಗ್ದು ಬಾರಿಸ್ಬಿಡ್ತೀನಿ.

ಎರಡ್ನೇದು– ಇನ್ಯಾವಾಗ ಕುಡುದ್ರೂ ಡ್ರಿಂಕ್ಸ್ ಮಿಕ್ಸ್ ಮಾಡ್ಬಾರ್ದು. ವೈನು, ಬೀರು, ವಿಸ್ಕಿ ಹೀಗೆ ಎಲ್ಲದನ್ನೂ ಹೊಟ್ಟೆಗೆ ಹಾಕೋತಿದ್ರೆ ಎತ್ತಿ ಬಿಸಾಕುತ್ತೆ. ಅದೇನ್ ಹೊಟ್ಟೇನಾ ಇಲ್ಲಾ ಚರಂಡೀನಾ? ಕ್ಲಾಸ್ ಇಲ್ಲ ನಾಯಿಗಳಿಗೆ! ಮೂರನೇದು– ಕುಡುದ್ ಮೇಲೆ ಏನಾದ್ರೂ ತಿನ್ಬೇಕು. ಹಂಗೇ ಮಲಗ್ಬಾರ್ದು’ ಎಂದು ಸಾದ್ಯಂತವಾಗಿ ಕುಡಿತದ ಮೂಲಮಂತ್ರವನ್ನು ರಶ್ಮಿ ತನ್ನ ಸ್ನೇಹಿತೆಯರಿಗೆ ಉಸುರಿದಳು. ಎಲ್ಲರೂ ಸೋಬರ್ ಆಗಿ ಅಲ್ಲಿ ಇಲ್ಲಿ ಸುತ್ತಾಡಿದರು. ಸ್ಕರ್ಟು, ಸ್ಕಾರ್ಫು, ಬಳೆ, ಅದೂ ಇದೂ ಅಂತ ತಗೊಂಡು ಹೊಟ್ಟೆಗೆ ಬರೀ ದೋಸೆ, ಅನ್ನ, ಮೊಟ್ಟೆ ಇಂಥವನ್ನು ಮಾತ್ರ ತಿಂದರು. ಪುಣ್ಯಕ್ಕೆ ಯಾರ ಹೊಟ್ಟೆಯೂ ಕೈ ಕೊಡಲಿಲ್ಲ.

ಕೊನೆಯ ದಿನ ಸಂಜೆ ಎಂಟೂವರೆಗೆ ಬಸ್ಸು. ಗೋವಾ ಕಣ್ತುಂಬಿಕೊಂಡು ಎಲ್ಲರೂ ಬ್ಯಾಗುಗಳನ್ನು ಹೊತ್ತು ಹೊರಟರು. ಇನ್ನೊಂದು ಬಸ್ ಕ್ಯಾನ್ಸಲ್ ಆಗಿದ್ದರಿಂದಲೋ ಏನೋ ಇವರು ಹೊರಡಬೇಕಿದ್ದ ಬಸ್ ಅಸಾಧ್ಯ ರಶ್ ಇತ್ತು. ಸಿಂಥಿಯಾ ಎನ್ನುವ ಹೆಸರಿನ ವಯಸ್ಸಾದ ಹೆಂಗಸು ಸ್ಲೀಪರ್ ಬೇಕು ಅಂತ ಕಂಡಕ್ಟರನ ಹತ್ತಿರ ಅಂಗಲಾಚುತ್ತಿದ್ದಳು.

ಅವಳು ಬೆಂಗಳೂರಿಗೆ ಹೋಗಬೇಕಿತ್ತು. ಮಗಳಿಗೆ ಹುಷಾರಿಲ್ಲವಂತೆ. ಅಳಿಯ ಬೇಗ ಬಾ ಅಂತ ಹೇಳಿದ್ದಾನಂತೆ. ಸ್ಲೀಪರ್ ಬಸ್ಸನ್ನೇ ಬುಕ್ ಮಾಡಿದ್ದಳಂತೆ. ಆದರೆ ಅದು ಕ್ಯಾನ್ಸಲ್ ಆಯಿತಂತೆ. ಇವಳು ಹೋಗಲೇಬೇಕು ಅಂತ ಹಟ ಮಾಡಿದ್ದರಿಂದ ಇನ್ನೊಂದು ಬಸ್ಸಿನಲ್ಲಿ ಒಂದು ಸೀಟಿನ ವ್ಯವಸ್ಥೆ ಮಾಡಿದ್ದರು. ಆದರೆ ಇವಳಿಗೆ ವಯಸ್ಸಾಗಿರುವುದರಿಂದ ಸ್ಲೀಪರ್ ಇಲ್ಲದೆ ಬಹಳ ಹೊತ್ತು ಪ್ರಯಾಣ ಅಸಾಧ್ಯ ಎಂದು ಕಂಡಕ್ಟರನ ಹತ್ತಿರ ಹೇಳಿಕೊಂಡಿದ್ದಕ್ಕೆ ಅವನು ‘ನಮ್ಮ ಕೈಲಿ ಇಷ್ಟೇ ಆಗೋದು. ಸೀಟ್ ಸಿಗುತ್ತೆ. ಸ್ಲೀಪರ್ರೇ ಬೇಕು ಅಂತ ಅಂದ್ರೆ ಯಾರಾದ್ರೂ ಬಿಟ್ ಕೊಡ್ತಾರಾ ರಿಕ್ವೆಸ್ಟ್ ಮಾಡ್ಕೊಳಿ’ ಅಂತ ಕೈ ಚೆಲ್ಲಿ ಕೂತಿದ್ದ. ಇವಳು ಬಸ್ಸಿನ ಹತ್ತಿರ ಬಂದ ಹೆಣ್ಣು ಮಕ್ಕಳ ಹತ್ತಿರವೆಲ್ಲ ಅಂಗಲಾಚುತ್ತಿದ್ದಳು.

ನಾಲ್ಕು ಜನ ಹುಡುಗಿಯರು ಬಸ್ಸಿನ ಬಳಿ ಬಂದ ತಕ್ಷಣ ಸಿಂಥಿಯಾ ಅವರ ಹತ್ತಿರ ಓಡಿದಳು. ಅವರ ಕಾಲು ಹಿಡಿಯಲೂ ತಯಾರಾಗಿದ್ದಳು ಆ ತಾಯಿ. ಪಾಪ, ಅವಳ ದೈನ್ಯ ನೋಡಿ ಈಶ್ವರಿ ಹಿಂದೂಮುಂದೂ ಯೋಚಿಸದೆ ತಾನು ಮಲಗುವ ಬರ್ತ್ ಬಿಟ್ಟುಕೊಟ್ಟಳು. ಉಳಿದವರು ಕೆಂಡದಂಥಾ ಕಣ್ಣು ಬಿಟ್ಟರೂ, ಆಮೇಲೆ ಅಜ್ಜಿಯ ಕಥೆ ಕೇಳಿ ತಾವೂ ಸಹಾಯ ಮಾಡುವುದಾಗಿ ಭರವಸೆ ಕೊಟ್ಟರು.

ಸಿಂಥಿಯಾ ಕಂಡಕ್ಟರನಿಗೆ ನಾಲ್ಕೂ ಜನ ಹುಡುಗಿಯರನ್ನು ತೋರಿಸಿ ಇವರ ಬರ್ತ್‌ನಲ್ಲಿ ಅಡ್ಜಸ್ಟ್ ಮಾಡಿಕೊಳ್ಳುತ್ತೇನೆಂದು ತಿಳಿಸಿದಳು. ಅವನು ನಾಲ್ಕೂ ಜನ ಹುಡುಗಿರಯನ್ನೊಮ್ಮೆ ಪರಿಶೀಲಿಸಿ ‘ಅದೇನು ನಿಮ್ಮ ಅಡ್ಜಸ್ಟ್ಮೆಂಟು ಮಾಡ್ಕೊಳಿ. ನಮಗೆ ಕಂಪ್ಲೇಂಟ್ ಬರಬಾರ್ದು ಅಷ್ಟೇ’ ಎಂದು ತಾಕೀತು ಮಾಡಿದ. ನಾಲ್ಕೂ ಜನ ರೊಟೇಶನ್ನಿನಲ್ಲಿ ಸೀಟಿನಲ್ಲಿ ಕೂರುವುದು ಅಂತ ಸುಸ್ತಾದಾಗ ಮಲಗುವುದು ಅಂತ ನಿರ್ಧಾರ ಮಾಡಿಕೊಂಡರು. ಬರ್ತ್ ಸಿಕ್ಕ ತಕ್ಷಣ ಸಿಂಥಿಯಾ ಹೋಗಿ ಆರಾಮಾಗಿ ನಿದ್ದೆ ಮಾಡಿಬಿಟ್ಟಳು.

ಮೊದಲಿಗೆ ಸೀಟಿನಲ್ಲಿ ಈಶ್ವರಿಯೇ ಕೂತಳು. ಪಕ್ಕದಲ್ಲಿ ಮಧ್ಯವಯಸ್ಕ ಗಂಡಸೊಬ್ಬರು ಕುಳಿತಿದ್ದರು. ಈಶ್ವರಿಯ ಬ್ಯಾಗನ್ನು ಇಟ್ಟುಕೊಳ್ಳಲು ಸಹಾಯವನ್ನೂ ಮಾಡಿದರು. ಬಸ್ಸು ಹೊರಟಿತು.


ಸ್ವಲ್ಪ ಹೊತ್ತಿನಲ್ಲೇ ಬಸ್ಸಿನ ಡಗ್ ಚಿಕ ಡಗ್ ಚಿಕ ಮ್ಯೂಸಿಕ್ಕು ಮನಸ್ಸಿನ ಸುಪ್ತ ಹಂತಕ್ಕೆ ಹೋಗಿ ನಿದ್ದೆ ಆವರಿಸಿತು. ಮತ್ತೆ ಎಚ್ಚರಾದದ್ದು ಕೆಲವು ತಾಸಿಗಳ ನಂತರ. ಬಸ್ಸು ಕರ್ನಾಟಕವನ್ನು ಪ್ರವೇಶ ಮಾಡಿ ಆಗಿತ್ತು. ‘ಡಿನ್ನರ್ ಸ್ಟಾಪ್. ಫಿಫ್ಟೀನ್ ಮಿನಿಟ್ಸ್’ ಅಂತ ಕಂಡಕ್ಟರು ಕಿರುಚುತ್ತಿದ್ದ. ಎಲ್ಲರೂ ಧಡ ಭಡ ಇಳಿದು ಹೋದರು. ಹುಡುಗಿಯರೂ ಹೋಗಿ ಇಡ್ಲಿ ತಿಂದು ಬಂದರು. ಇಂದುಮತಿ ಈಶ್ವರಿಯನ್ನು ‘ಸೀಟಿನಲ್ಲಿ ಕೂರಲಾ? ನೀನೇ ಕೂತ್ಕೋತೀಯಾ?” ಎಂದು ವಿಚಾರಿಸಿದಳು.

ಈಶ್ವರಿಗೆ ನಿದ್ದೆ ಪೂರ್ತಿ ತಿಳಿಯಾಗಿತ್ತು. ನಿದ್ದೆಯಿಲ್ಲದೆ ಇರುವಾಗ ಕೂತರೇನು, ಮಲಗಿದರೇನು? ಉಳಿದವರಿಗಾದರೂ ರೆಸ್ಟ್ ಆಗುತ್ತೆ ಎಂದುಕೊಂಡು ‘ಇರ್ಲಿ ನೀನು ಹೋಗಿ ಮಲಗು. ನಾನು ಕೂತಿರ್ತೀನಿ. ನಂಗೆ ನಿದ್ದೆ ಬಂದ್ರೆ ಹೇಳ್ತೀನಿ’ ಎಂದಳು.

ಬಸ್ಸು ಮತ್ತೆ ಜನರನ್ನು ತುಂಬಿಸಿಕೊಂಡು ಹೊರಟಿತು. ಒಳಗೆ ಕತ್ತಲೆಯನ್ನು ಮೂಟೆ ಕಟ್ಟಿ ಎಸೆದಂತಿತ್ತು. ಜುರ್ರ್ ರ್ರ್ ಎಂದು ಬಸ್ಸು ನಾದಬದ್ಧವಾಗಿ ರಸ್ತೆಯ ಮೇಲೆ ಹೋಗುತ್ತಿದ್ದರೆ ಒಳಗಿದ್ದವರು ಮತ್ತೆ ನಿದ್ದೆಗೆ ಜಾರುತ್ತಿದ್ದರು.

ಪಕ್ಕದಲ್ಲಿದ್ದ ‘ಅಂಕಲ್’ ಆಗಲೇ ನಿದ್ದೆ ಮಾಡಿಯಾಗಿತ್ತು. ಸ್ವಲ್ಪ ಹೊತ್ತಿಗೆ ಈಶ್ವರಿಗೆ ನಿದ್ದೆ ಬಂದಂತೆ ಆಗುವುದಕ್ಕೂ, ಸೊಂಟಕ್ಕೆ ಏನೋ ತಗುಲುವುದಕ್ಕೂ ಧಿಗ್ ಎಂದು ಎಚ್ಚರಾಗಿ ನಿದ್ದೆ ಹಾರಿಹೋಯಿತು. ಸಂಪೂರ್ಣ ಎಚ್ಚರದ ಸ್ಥಿತಿ. ಏನು ತಗುಲುತ್ತಿದೆ ತನಗೆ? ಎಂದು ಕೈ ಸರಿಸಿ ನೋಡಿದರೆ ಏನೂ ಇಲ್ಲ. ಸರಿ ಮತ್ತೆ ಕಣ್ಣು ಮುಚ್ಚಿದಳು, ಮತ್ತೆ ಅದೇ ‘ಅರಿವಿನ ಸ್ಥಿತಿಯ’ ಪುನರಾವರ್ತನೆ. ಯಾರೋ ತನ್ನ ಸೊಂಟ, ತೋಳು, ಎದೆಯನ್ನೆಲ್ಲ ಸವರಿದ ಹಾಗೆ. ಹೃದಯದ ಬಡಿತ ಬಾಯಿಗೆ ಬಂದ ಹಾಗೆ ಭಯ ಆವರಿಸಿಕೊಳ್ಳತೊಡಗಿತು. ಕೂಗಲು ಬಾಯಿಂದ ಧ್ವನಿಯೇ ಹೊರಡುತ್ತಿಲ್ಲ. ಪಕ್ಕದ ಅಂಕಲ್ ಹಾಗೇ ಮಲಗಿದ್ದರು. ಮತ್ಯಾರು ಮಾಡುತ್ತಿರಬಹುದು ಎಂದು ಧೈರ್ಯ ಮಾಡಿ ಹಿಂದಕ್ಕೆ ತಿರುಗಿ ನೋಡಿದರೆ ಮಕ್ಕಳನ್ನು ಮಲಗಿಸಿಕೊಂಡ ತಾಯಿ ಹಾಗೇ ನಿದ್ದೆ ಮಾಡಿದ್ದಳು.

ಇದು ‘ಅಂಕಲ್’ ಕೈ ಚಳಕವೇ ಎಂದು ಖಾತ್ರಿಯಾಯಿತು ಈಶ್ವರಿಗೆ. ಆದರೆ ಕೂಗಿ ಎಲ್ಲರನ್ನೂ ಎಬ್ಬಿಸುವ ಹೊತ್ತಿಗೆ ಕೈ ಹಿಂದಕ್ಕೆ ತೆಗೆದುಕೊಂಡು ಬಿಡುತ್ತಾನೆ. ತನ್ನನ್ನು ಯಾರೂ ನಂಬಲಾರರು ಎಂದು ಅವಳಿಗೆ ಅನ್ನಿಸಿತು. ಮಿಸುಕಾಡಿದ ಹಾಗೆ ಮಾಡಿದಳು. ಆಗ ಮಾತ್ರ ‘ಕೈ ಚಳಕ’ ಕಡಿಮೆಯಾಯಿತು. ಹಾಗೇ ಮಿಸುಕಾಡುವಿಕೆಯಲ್ಲಿಯೇ ತನ್ನ ಮೈಯನ್ನು ಜೋಪಾನ ಮಾಡಿಕೊಂಡು ಬಸ್ಸು ಮತ್ತೆ ನಿಲ್ಲಿಸುವವರೆಗೂ ಕಾದಳು. ಬಸ್ಸು ಟಾಯ್ಲೆಟ್ ಬ್ರೇಕ್ ಅಂತ ನಿಲ್ಲಿಸಿದಾಗ ‘ಅಂಕಲ್’ ಮುಖ ನೋಡಿದಳು. ಅವನೋ, ಪರಮ ಸಾಧುವಿನಂತೆ ತಲೆ ತಗ್ಗಿಸಿ ಓಡಾಡುತ್ತಿದ್ದ. ‘ಕೈಚಳಕ’ದ ವಿಷಯವನ್ನು ಇಂದುಮತಿಗೆ ಹೇಳಿದಳು ಈಶ್ವರಿ.

‘ಅಯ್ಯೋ, ನೀನು ಹೋಗಿ ನನ್ ಜಾಗದಲ್ಲಿ ಮಲ್ಕೋ. ನಾನು ಸೀಟಲ್ಲಿ ಕೂರ್ತೀನಿ. ಡೋಂಟ್ ವರಿ. ಮಗ ಇನ್ನೊಂದು ಸಾರಿ ಯಾವಳ್ಗೂ ಕೈ ಬಿಡ್ಬಾರ್ದು ಹಂಗ್ ಮಾಡ್ತೀನಿ’ ಎಂದು ಶಪಥ ಮಾಡಿದಳು ಇಂದುಮತಿ.

ಕೆಲವು ಗಂಟೆಗಳ ನಂತರ ಬೆಳಕು ಹರಿಯಿತು. ಮತ್ತೆ ಬ್ರೇಕ್ ಸಿಕ್ಕಿತು. ಅಂಕಲ್ ಕಥೆ ಏನಾಯ್ತು ಅಂತ ಈಶ್ವರಿ ಇಂದುಮತಿಯನ್ನು ವಿಚಾರಿಸಿದಳು. ಅಲ್ನೋಡು ಎಂದು ಇಂದುಮತಿ ಕುಂಟುತ್ತಾ ಹೋಗುತ್ತಿದ್ದ ಮನುಷ್ಯನನ್ನು ತೋರಿಸಿದಳು. ಬೆರಳಿಗೆ ಹಾಕಿಕೊಳ್ಳಲು ಬ್ಯಾಂಡ್ ಏಡ್ ಇದೆಯಾ ಎಂದು ಅಂಕಲ್ ಡ್ರೈವರ್ ಹತ್ತಿರ ಕೇಳುತ್ತಿದ್ದ. ‘ಏನಾಯ್ತು ಸಾರ್?’ ಎಂದು ಡ್ರೈವರ್ ಕೇಳಿದ್ದಕ್ಕೆ ಅಂಕಲ್ಲು ತಲೆ ತಗ್ಗಿಸಿ ‘ಕಿಟಕಿ ಪರದೆ ಎಳಿಯೋಕೆ ಹೋಗಿ ಕೈ ಗಾಯ ಆಯ್ತು’ ಎಂದ. ಈಶ್ವರಿ ಇಂದುಮತಿಯತ್ತ ನೋಡಿದಳು. ಇಂದು ಕಣ್ಣು ಮಿಟುಕಿಸಿದಳು.

‘ಏನ್ ಮಾಡಿದ್ಯೇ ಅವನಿಗೆ?’

‘ಏನಿಲ್ಲ. ಅವ್ನ್ ಕೈ ಅವ್ನ್ ಹತ್ರ ಇರಲ್ಲ ಅಂತಿತ್ತು. ಅದಕ್ಕೆ ಮೆಡಿಸಿನ್ ಕೊಟ್ಟೆ’

‘ಏನು?’

‘ನನ್ ಮುಟ್ಟೋಕ್ ಬಂದಾಗ ಓಪನ್ ಮಾಡಿಟ್ಟುಕೊಂಡಿದ್ದ ಸೇಫ್ಟಿ ಪಿನ್ನಿಂದ ಜೋರಾಗ್ ಬೆರಳಿಗೆ ಚುಚ್ಚಿದೆ. ನಾಲ್ಕೈದು ಸಾರಿ ಹಂಗೇ ಆಯಿತು. ಆಮೇಲೆ ಅದೇ ಪಿನ್ ತಗೊಂಡು ತೊಡೆಗೆ ಚುಚ್ಚಿದೆ. ಹಾ! ಅಂತ ಬಾಯ್ ಬಡ್ಕೊಂಡ. ಅಯ್ಯೋ, ಏನಾಯ್ತು ಅಂತ ವಿಚಾರಿಸಿದೆ. ಆಮೇಲೆ ಅಣ್ಣ ದೇವರ ಹಾಗೆ ಸುಮ್ಮನೆ ಕೂತ’

ಇಂದುಮತಿ ಈಶ್ವರಿಗೆ ಬಸ್ಸಿನಲ್ಲಿ ‘ಸೇಫಾಗಿ’ ಪ್ರಯಾಣಿಸುವ ಒಂದು ಮಾರ್ಗ ಹೇಳಿಕೊಟ್ಟಳು. ‘ಬದುಕಲು ಕಲಿಯಿರಿ’ ಅನ್ನು ಹೆಣ್ಮಕ್ಕಳು ಬರೆದರೆ, ಇಂಥವೇ ಪಾಠ ಇರಬಹುದು ಅನ್ನಿಸೋ ಹಾಗೆ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT