ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈದ್ಧಾಂತಿಕ ನಿಲುವು: ಪ್ರತಿಪಾದನೆಯ ಹಿಂಜರಿಕೆ

Last Updated 1 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಕಳೆದ ಕೆಲವು ದಿನಗಳಿಂದ ‘ಪ್ರಜಾವಾಣಿ’ಯ ಪುಟಗಳಲ್ಲಿ ನಡೆಯುತ್ತಿರುವ ಎಡ, ಬಲ ಮತ್ತು ಮಧ್ಯಮ  ಮಾರ್ಗಗಳ ಚರ್ಚೆಯು ನಮ್ಮ ಕಾಲದಲ್ಲಿ ಅಗತ್ಯವಾಗಿ ನಡೆಯಬೇಕಾಗಿರುವ ವಿಚಾರ ವಿನಿಮಯ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಈ ಚರ್ಚೆಯಲ್ಲಿ ಎಡ ಮತ್ತು ಬಲಗಳ ಸರಿಯಾದ ಗ್ರಹಿಕೆಗಿಂತ ಅವುಗಳ ವ್ಯಂಗ್ಯಚಿತ್ರಗಳೇ (ಕ್ಯಾರಿಕೇಚರ್) ಬಳಕೆಯಾಗುತ್ತಿವೆಯೇನೊ ಎಂದು ಒಮ್ಮೊಮ್ಮೆ ಅನಿಸುವುದೂ ಉಂಟು. ಈ ನಿಟ್ಟಿನಲ್ಲಿ ಕೆಲವು ಟಿಪ್ಪಣಿಗಳನ್ನು ಓದುಗರೊಡನೆ ಹಂಚಿಕೊಳ್ಳಬಯಸುತ್ತೇನೆ.

ರಾಜಕೀಯ ಶಕ್ತಿಗಳಾಗಿ ಮತ್ತು ಸಿದ್ಧಾಂತಗಳಾಗಿ, ಎಡ- ಬಲಗಳ ಚಿತ್ರಣ ನಮಗೆ ಮೊದಲು ದೊರಕುವುದು 1789ರ ಮೊದಲ ಫ್ರೆಂಚ್ ಕ್ರಾಂತಿಯ ನಂತರದ ದಿನಗಳಲ್ಲಿ. ಮೊದಲ ಫ್ರೆಂಚ್ ಗಣರಾಜ್ಯ ಸ್ಥಾಪನೆಯಾದಾಗ, ರಾಷ್ಟ್ರೀಯ ಶಾಸನಸಭೆಯಲ್ಲಿ ಅಧ್ಯಕ್ಷರ ಬಲಕ್ಕೆ ಫ್ರೆಂಚ್‌ ರಾಜನ ಬೆಂಬಲಿಗರನ್ನೂ ಮತ್ತು ಅಧ್ಯಕ್ಷರ ಎಡಕ್ಕೆ ಕ್ರಾಂತಿಯ ಸಮರ್ಥಕರನ್ನೂ ಕೂರಿಸಲಾಗುತ್ತಿತ್ತು. ಹೀಗೆ ಪ್ರಾರಂಭವಾದ ಎಡ - ಬಲಗಳ ವಿಂಗಡಣೆಯು 19ನೆಯ ಶತಮಾನದುದ್ದಕ್ಕೂ ತೀವ್ರಗೊಂಡಿತು. ಫ್ರೆಂಚ್ ಕ್ರಾಂತಿಯ ಅತಿಶಯ ದೌರ್ಜನ್ಯಗಳಿಂದ ಆತಂಕಿತರಾದ ಎಡ್ಮಂಡ್ ಬರ್ಕ್‌ರಂತಹ ಚಿಂತಕರು ಸಂಪ್ರದಾಯವಾದಿ ರಾಜಕೀಯ ದರ್ಶನಗಳನ್ನು ರಚಿಸಿದರು. ಇದಕ್ಕೆ ಪ್ರತಿಯಾಗಿ 19ನೆಯ ಶತಮಾನದ ಯುರೋಪನ್ನು ನಿಯಂತ್ರಿಸಿದ ಸಾಮ್ರಾಜಶಾಹಿ ಶಕ್ತಿಗಳ ವಿರುದ್ಧ ಹೋರಾಡಿದ ವಿದ್ಯಾರ್ಥಿಗಳು ಮತ್ತು ಕಾರ್ಮಿಕ ವರ್ಗಗಳು ಸಮಾಜವಾದಿ ದರ್ಶನಗಳನ್ನು ರೂಪಿಸಿದರು. ಎಡ- ಬಲಗಳ ಸೈದ್ಧಾಂತಿಕ ಸಂಘರ್ಷಗಳ ನಡುವೆ ತಮ್ಮ ನೆಲೆಯನ್ನು ಕಂಡುಕೊಳ್ಳಲು ಪ್ರಯತ್ನಿಸಿದ ಮಧ್ಯಮ (ಸೆಂಟ್ರಿಸ್ಟ್) ಮಾದರಿಗಳೂ ಈ ಸಂದರ್ಭದಲ್ಲಿ ನಮಗೆ ಕಂಡುಬರುತ್ತವೆ.
ಇಲ್ಲಿ ಗಮನಿಸಬೇಕಾಗಿರುವುದು ಇಷ್ಟು: ಆಧುನಿಕ ಸಮಾಜದಲ್ಲಿ ‘ಬದಲಾವಣೆ’ಯನ್ನು ತರುವ ವಿಚಾರದಲ್ಲಿ ಯಾವ ನಿಲುವನ್ನು ತಳೆಯುತ್ತಾರೆ ಎನ್ನುವುದರ ಆಧಾರದ ಮೇಲೆ ಎಡ ಮತ್ತು ಬಲಗಳ ನಡುವಿನ ಸೈದ್ಧಾಂತಿಕ ಮತ್ತು ರಾಜಕೀಯ ಭಿನ್ನತೆಗಳನ್ನು ಗುರುತಿಸುತ್ತೇವೆ.

ಸಾಮಾನ್ಯವಾಗಿ ಎಡಪಂಥವನ್ನು ಆಧುನಿಕ ಸಮಾಜದಲ್ಲಿ ‘ಗಣನೀಯ ಬದಲಾವಣೆ’ಯನ್ನು ಬಯಸಿದ ಕಮ್ಯುನಿಸಮ್, ಸಮಾಜವಾದ ಮತ್ತು ಉದಾರವಾದಗಳ (ಲಿಬರಲಿಸಮ್) ಜೊತೆಗೆ ಜೋಡಿಸುವುದು ಪ್ರತೀತಿ. ಆದರೆ ಈ ಮೂರೂ ಸಿದ್ಧಾಂತಗಳು ಬದಲಾವಣೆಯ ಸ್ವರೂಪ, ದಿಕ್ಕು ಮತ್ತು ಗತಿಯನ್ನು ವಿಭಿನ್ನವಾಗಿ ಗ್ರಹಿಸುತ್ತವೆ ಎನ್ನುವುದನ್ನು ನಾವು ಇಲ್ಲಿ ಮರೆಯಬಾರದು.  ಉದಾಹರಣೆಗೆ ಕಮ್ಯುನಿಸಮ್ ಕ್ಷಿಪ್ರವಾಗಿ ಮೂಲಭೂತ ಬದಲಾವಣೆಗಳನ್ನು ತರಲು ಆಶಿಸಿದರೆ, ಉದಾರವಾದವು ಹೆಚ್ಚು ಕ್ರಮಬದ್ಧವಾಗಿ (ಗ್ರಾಜ್ಯುವಲ್) ಅದೇ ಬದಲಾವಣೆಗಳನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸುವುದು.

ನನ್ನ ಈ ಮಾತಿಗೆ ಸಾಕ್ಷಿಯಾಗಿ ಆರ್ಥಿಕ ಅಸಮಾನತೆಯನ್ನು ಹೇಗೆ ಈ ಎರಡೂ ಸಿದ್ಧಾಂತಗಳನ್ನು ಆಧರಿಸಿದ ವ್ಯವಸ್ಥೆಗಳು ಕಡಿಮೆ ಮಾಡಲು ಯತ್ನಿಸುತ್ತವೆ ಎನ್ನುವುದನ್ನು ಗಮನಿಸಿ. ಕಮ್ಯುನಿಸ್ಟ್ ವ್ಯವಸ್ಥೆಯಲ್ಲಿ ಭೂಮಿಯೂ ಸೇರಿದಂತೆ ಖಾಸಗಿ ಆಸ್ತಿಗಳ ಮರುಹಂಚಿಕೆಯ ಮೂಲಕ ಅಸಮಾನತೆಯನ್ನು ತೊಡೆದುಹಾಕುವ ಪ್ರಯತ್ನ ನಡೆದರೆ, ಉದಾರವಾದಿ ವ್ಯವಸ್ಥೆಯಲ್ಲಿ ಅದೇ ಗುರಿಯನ್ನು ಸಾಧಿಸಲು ಪ್ರಗತಿಪರ ಆದಾಯ ತೆರಿಗೆಯನ್ನು ಒಂದು ಸಾಧನವಾಗಿ ಬಳಸಲಾಗುತ್ತದೆ. ಇಲ್ಲಿ ಹೆಚ್ಚಿನ ಆಸ್ತಿ ಮತ್ತು ಆದಾಯಗಳನ್ನು ಹೊಂದಿರುವವರು ನೀಡುವ ತೆರಿಗೆಯ ಪ್ರಮಾಣ ಮತ್ತು ದರ ಅವರಿಗಿಂತ ಕಡಿಮೆ ಆಸ್ತಿ ಮತ್ತು ಆದಾಯಗಳನ್ನು ಹೊಂದಿರುವವರಿಗಿಂತ ಹೆಚ್ಚಾಗಿರುತ್ತದೆ. ಹಾಗಾಗಿ ಗುರಿ ಮತ್ತು ಆಶಯಗಳಲ್ಲಿ ಸಾಮ್ಯತೆಯಿದ್ದಾಗಲೂ ಅವುಗಳನ್ನು ಸಾಧಿಸಲು ಚಲಿಸುವ ಪಥ ಮತ್ತು ಬಳಸುವ ಸಾಧನಗಳಲ್ಲಿ ವ್ಯತ್ಯಾಸವಿರುತ್ತದೆ. ಇಷ್ಟಾದರೂ ಎಡಪಂಥವನ್ನು ಸಾಮಾನ್ಯವಾಗಿ ಸ್ವಾತಂತ್ರ್ಯ, ಸಮಾನತೆ, ಹಕ್ಕುಗಳು, ಪ್ರಗತಿ, ಸುಧಾರಣೆ ಮತ್ತು ಅಂತರರಾಷ್ಟ್ರೀಯ ಮನೋಭಾವಗಳ ಜೊತೆಗೆ ತಳುಕು ಹಾಕುವುದುಂಟು.

ಇದಕ್ಕೆ ಪ್ರತಿಯಾಗಿ ಬಲಪಂಥೀಯರನ್ನು ಅಸ್ತಿತ್ವದಲ್ಲಿರುವ ಅಧಿಕಾರ, ಶ್ರೇಣಿ, ಸಾಮಾಜಿಕ ವ್ಯವಸ್ಥೆ, ಕರ್ತವ್ಯ, ಸಂಪ್ರದಾಯ ಮತ್ತು ರಾಷ್ಟ್ರೀಯತೆಗಳ ಸಮರ್ಥಕರೆಂದು ಗುರುತಿಸುವುದು ಪ್ರತೀತಿ. ಯಾವುದೇ ‘ಬದಲಾವಣೆ’ಯಾಗಬೇಕೆಂದರೂ ಈಗಿರುವ ಅಧಿಕಾರ ರಚನೆಗಳ ಒಳಗೆಯೇ ಆಗಲಿ ಎನ್ನುವ ನಿಲುವನ್ನು ಬಲಪಂಥೀಯರು ತಳೆಯುತ್ತಾರೆ. ಉದಾಹರಣೆಗೆ, ಧಾರ್ಮಿಕ ಸುಧಾರಣೆಗಳು ಈಗಾಗಲೆ ಅಸ್ತಿತ್ವದಲ್ಲಿರುವ ಮಠ- ದೇವಸ್ಥಾನ- ಗುರುಗಳಂತಹ ಸಾಂಸ್ಥಿಕ ರಚನೆಗಳ ನಡುವೆಯೇ ಆಗಲಿ ಎನ್ನುತ್ತಾರೆ. ಹಾಗಾಗಿ ಇಲ್ಲಿ ಮೂಲಭೂತ ಬದಲಾವಣೆಗಳಿಗೆ ಅವಕಾಶ ಕಡಿಮೆ. ಸಾಮಾನ್ಯವಾಗಿ ಸಂಪ್ರದಾಯವಾದಿಗಳು, ರಾಷ್ಟ್ರೀಯವಾದಿಗಳು, / ಸಾಮ್ರಾಜ್ಯವಾದಿಗಳು, ಫ್ಯಾಸಿಸ್ಟರು ಮತ್ತು ಪ್ರತಿಗಾಮಿಗಳನ್ನು ಬಲಪಂಥೀಯರೆಂದು ರಾಜ್ಯಶಾಸ್ತ್ರದಲ್ಲಿ ಬಣ್ಣಿಸಲಾಗುತ್ತದೆ. ಮೇಲ್ನೋಟಕ್ಕೆ ಸ್ಪಷ್ಟವಾಗುವ ಅಂಶವೆಂದರೆ, ಬಲಪಂಥೀಯ ಗುಂಪಿನಲ್ಲಿಯೂ ಅಪಾರ ಸೈದ್ಧಾಂತಿಕ ವೈವಿಧ್ಯವಿದೆ. ಆದರೂ ಸಾಮಾನ್ಯವಾಗಿ ಇಂದಿನ ದಿನಗಳಲ್ಲಿ ಬಲಪಂಥದ ಜೊತೆಗೆ ಗುರುತಿಸಲಾಗುವ ಮೌಲ್ಯಗಳಿವು: ವ್ಯಕ್ತಿಸ್ವಾತಂತ್ರ್ಯ ಹಾಗೂ ಸೀಮಿತ ಪ್ರಭುತ್ವ, ಮಾರುಕಟ್ಟೆಯ ಪ್ರಾಮುಖ್ಯತೆ, ಪ್ರಾಚೀನ ಧರ್ಮ, ಆಚರಣೆ ಮತ್ತು ಸಂಪ್ರದಾಯಗಳೆಡೆಗೆ ಗೌರವ ಇತ್ಯಾದಿ.

ನಾನು ಮೇಲೆ ಬಣ್ಣಿಸಿದ ಯುರೋಪಿನ ಐತಿಹಾಸಿಕ ಸಂದರ್ಭ ಒಂದೆಡೆಯಿರಲಿ. ಈ ಸಿದ್ಧಾಂತಗಳು ನಮಗೆ ಲಭ್ಯವಾದುದು ಭಾರತವು ವಸಾಹತೀಕರಣಕ್ಕೆ ಒಳಗಾಗುತ್ತಿದ್ದ ಸಮಯದಲ್ಲಿ. ಪಾಶ್ಚಿಮಾತ್ಯ ಶಿಕ್ಷಣ ಮತ್ತು ಯುರೋಪಿನ ತಾತ್ವಿಕ ಚಿಂತನೆಗಳಿಗೆ ಭಾರತವು ತೆರೆದುಕೊಳ್ಳುತ್ತಿದ್ದಾಗ, ಭಾರತೀಯರು ತಮ್ಮ ರಾಜಕೀಯ ದಾಸ್ಯದಿಂದ ಹೇಗೆ ಮುಕ್ತರಾಗಬೇಕು ಹಾಗೂ ಆ ಉದ್ದೇಶಕ್ಕಾಗಿ ಅವರೊಳಗೆ ಆಗಬೇಕಿರುವ ಬದಲಾವಣೆಗಳಾದರೂ ಏನು? ಈ ಪ್ರಶ್ನೆಗಳಿಗೆ 19 ಮತ್ತು 20ನೆಯ ಶತಮಾನಗಳಲ್ಲಿ ಭಾರತೀಯರು ಎಲ್ಲ ಸೈದ್ಧಾಂತಿಕ ನೆಲೆಗಳಿಂದಲೂ ಪ್ರೇರಿತರಾಗಿ, ಹೊಸ ಉತ್ತರಗಳನ್ನು ಹುಡುಕಿದರು, ಕಂಡುಕೊಂಡರು. ಹೊಸ ಬೌದ್ಧಿಕ ಮತ್ತು ಸಾಂಸ್ಕೃತಿಕ ಪರಂಪರೆಗಳನ್ನು ಕಟ್ಟಿಕೊಂಡರು. ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಪ್ರಯೋಗಗಳನ್ನು ನಡೆಸಿದರು. ಇವ್ಯಾವನ್ನೂ ಸುಲಭವಾಗಿ ಎಡ ಬಲಗಳೆಂದು ವಿಂಗಡಿಸಲು ಸಾಧ್ಯವಿಲ್ಲ. ಭಾರತೀಯ ಸಂಪ್ರದಾಯಗಳನ್ನು ವಿಮರ್ಶಾತ್ಮಕವಾಗಿ ನೋಡುತ್ತಲೆ ಹೊಸದೇನನ್ನೋ ಕಟ್ಟಬಯಸಿದ ರಾಮ್‌ಮೋಹನ್ ರಾಯ್, ದಯಾನಂದ ಸರಸ್ವತಿ, ಸ್ವಾಮಿ ವಿವೇಕಾನಂದರಂತಹವರನ್ನು ಯಾವ ನೆಲೆಯಲ್ಲಿ ಗ್ರಹಿಸಬೇಕು? ತನ್ನನ್ನು ಸನಾತನಿಯೆಂದು ಕರೆದುಕೊಳ್ಳುತ್ತಲೇ ಸನಾತನ ಹಿಂದೂ ಧರ್ಮದ ಆಚರಣೆಗಳಿಗೆ ಗಂಭೀರ ಸವಾಲನ್ನು ಹಾಕಿದ ಗಾಂಧೀಜಿಯವರನ್ನು  ನಾವು ಹೇಗೆ ಅರ್ಥೈಸಿಕೊಳ್ಳಬೇಕು? ವಾಸ್ತವದಲ್ಲಿ ಎಡಪಂಥೀಯ ಮತ್ತು ಬಲಪಂಥೀಯ ಪರಂಪರೆಗಳು ತಮ್ಮ ನೆಲೆಯನ್ನು ಕಂಡುಕೊಂಡದ್ದು ಸ್ವತಂತ್ರ ಭಾರತದಲ್ಲಿಯೆ. ಅದಕ್ಕೆ ಮೊದಲು ಆಧುನಿಕ ಭಾರತದ ವೈಚಾರಿಕತೆ ವಿಶಾಲದೃಷ್ಟಿಯ (ಎಕ್ಲೆಕ್ಟಿಕ್) ಸೃಜನಶೀಲ ಪರಂಪರೆಯಾಗಿತ್ತು ಎಂದರೆ ತಪ್ಪಾಗಲಾರದೇನೊ.

ಈ ಮೇಲಿನ ಮಾತುಗಳನ್ನು ಬರೆಯುವಾಗ, ಇಂದು ನಡೆಯುತ್ತಿರುವ ಚರ್ಚೆಯು ಕನ್ನಡದ ಸಾಂಸ್ಕೃತಿಕ ಮತ್ತು ಬೌದ್ಧಿಕ ಪ್ರಪಂಚಗಳೊಳಗೆ ಕಳೆದ ಐದು ದಶಕಗಳಲ್ಲಿ ನಡೆದಿರುವ ವೈಚಾರಿಕ ಸಂಘರ್ಷಗಳ ಒಳಗಿನಿಂದ ಹುಟ್ಟಿರುವುದು ಎನ್ನುವುದನ್ನು ನಾನು ಮರೆತಿಲ್ಲ. ಆದರೆ ಕರ್ನಾಟಕದೊಳಗೆ ಎಡ ಮತ್ತು ಬಲಗಳೆರಡೂ ಗಂಭೀರವಾದ ಸೈದ್ಧಾಂತಿಕ ಪರಂಪರೆಗಳಾಗಿ ಬೆಳೆದುಬರಲಿಲ್ಲ ಎನ್ನುವುದನ್ನು ವಿಷಾದದಿಂದಲೇ ಒಪ್ಪಬೇಕು. ಕಳೆದ ಎರಡು ದಶಕಗಳಲ್ಲಿಯಂತೂ ಇದು ವಿಶೇಷವಾಗಿ ಅನ್ವಯವಾಗುವ ಮಾತು. ನಮ್ಮ ಅನುಭವಗಳನ್ನು ತಾತ್ವೀಕರಿಸಿ ಹೊಸ ಸ್ವತಂತ್ರ ಗ್ರಹಿಕೆಗಳನ್ನು ಕೊಡುವುದಕ್ಕಿಂತಲೂ, ಹೊರಗಿನ ಸವಕಲು ವಿಚಾರಗಳ ನಕಲುಗಳನ್ನು ಕೊಡುವುದೇ ಹೆಚ್ಚು ಸಾಮಾನ್ಯವಾಗಿದೆ. ಹಾಗಾಗಿ, ಸೈದ್ಧಾಂತಿಕವಾಗಿ ಜನಪರವಾಗಿದ್ದರೂ ಎಡಪಂಥೀಯರು ಸಹ ಜನಸಾಮಾನ್ಯರನ್ನು ತಲುಪುವಲ್ಲಿ ಹೆಚ್ಚಿನ ಯಶಸ್ಸನ್ನು ಕಂಡಿಲ್ಲ. ಆಚರಣೆಗಳು ಮತ್ತು ನಂಬಿಕೆಗಳ ನೆಲೆಯಲ್ಲಿ ಹೆಚ್ಚಿನ ಜನಬೆಂಬಲವನ್ನು ಬಲಪಂಥೀಯರು ಪಡೆದಿದ್ದರೂ, ಸಶಕ್ತ ಬೌದ್ಧಿಕ ಪರಂಪರೆಯೊಂದನ್ನು ಅವರೂ ಕಟ್ಟಲಾಗಿಲ್ಲ.

ಸೈದ್ಧಾಂತಿಕ ವೈಪರೀತ್ಯಗಳಿಂದ ತಪ್ಪಿಸಿಕೊಳ್ಳಲು ಮಧ್ಯಮ ಮಾರ್ಗವೊಂದು ಅಗತ್ಯ ಎಂಬ ಕೂಗು ಹೊಸದೇನಲ್ಲ, ಇಂದಿನದು ಮಾತ್ರವೂ ಅಲ್ಲ. ಜಾಗತಿಕವಾಗಿ 1990ರ ದಶಕದಿಂದಲೂ ನಮ್ಮ ಸಾರ್ವಜನಿಕ ಚರ್ಚೆಗಳಲ್ಲಿ ಮೂರನೆಯ ಪಥದ ಮಾತು ಕೇಳಿಬರುತ್ತಿದೆ. ಆದರೆ ಮಧ್ಯಮ ಮಾರ್ಗದ ಉಲ್ಲೇಖ ಮಾಡುತ್ತಿದ್ದಂತೆ ಅಥವಾ ಬುದ್ಧನ ಪ್ರಸ್ತಾಪವಾಗುತ್ತಿದ್ದಂತೆ ಬೌದ್ಧಿಕ ಪುನರುಜ್ಜೀವನವಾಗುವುದಿಲ್ಲ, ಹೊಸ ದಾರಿಗಳು ತಾವಾಗಿಯೇ ತೆರೆದುಕೊಳ್ಳುವುದಿಲ್ಲ. ಮಧ್ಯಮಮಾರ್ಗವನ್ನು ಕಟ್ಟಿಕೊಳ್ಳುವಾಗ ಬುದ್ಧ ತೋರಿಸಿದ್ದು ಅಪಾರವಾದ ಬೌದ್ಧಿಕ ಶಿಸ್ತನ್ನು. ತಾನು ಪ್ರಾಯೋಗಿಕವಾಗಿ ಪರಿಶೀಲಿಸಲಾಗದ ತತ್ವಮೀಮಾಂಸೆಯ (ಮೆಟಾಫಿಸಿಕಲ್) ಪ್ರಶ್ನೆಗಳಿಗೆ ಬುದ್ಧ ತಲೆಹಾಕಲಿಲ್ಲ. ಬುದ್ಧನ ಬೌದ್ಧಿಕ ಪ್ರಾಮಾಣಿಕತೆ ಮತ್ತು ದಕ್ಷತೆ ನಮಗೆ ಅನುಕರಣೀಯ, ಇದರಿಂದ ನಮ್ಮ ಚಿಂತನೆಗೆ ಹೊಸ ಚೈತನ್ಯ ದೊರಕುತ್ತದೆ ಎನ್ನುವುದೆಲ್ಲವೂ ನಿಜ. ಆದರೆ ಬುದ್ಧನ ಬೌದ್ಧಿಕತೆಯನ್ನು ಇಂದು ಮಧ್ಯಮಮಾರ್ಗವನ್ನು ಪ್ರತಿಪಾದಿಸುತ್ತಿರುವವರು ಮಾತ್ರವಲ್ಲ, ಎಡಪಂಥ ಮತ್ತು ಬಲಪಂಥಗಳ ಪ್ರತಿಪಾದಕರೂ ಅನುಸರಿಸಬಹುದು.

ನನಗೆ ಕರ್ನಾಟಕದ ಇಂದಿನ ಸಂದರ್ಭದಲ್ಲಿಯೂ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಸಮಸ್ಯೆಯೆನಿಸುತ್ತಿಲ್ಲ. ಬದಲಿಗೆ ಪ್ರಾಮಾಣಿಕವಾಗಿ ತಮ್ಮ ಸೈದ್ಧಾಂತಿಕ ನಿಲುವುಗಳನ್ನು ಸಾರ್ವಜನಿಕವಾಗಿ ಪ್ರತಿಪಾದಿಸುವ ಧೈರ್ಯದ ಕೊರತೆಯೇ ಎದ್ದು ಕಾಣುತ್ತದೆ. ಉದಾಹರಣೆಗೆ, ಜಾತಿ ವ್ಯವಸ್ಥೆಯ ಇರುವಿಕೆ, ಅಸ್ಪೃಶ್ಯತೆಯ ಆಚರಣೆ, ಮಹಿಳೆಯರ ಹಕ್ಕುಗಳಂತಹ ವಿಚಾರಗಳಿಗೆ ಸಂಬಂಧಿಸಿದಂತೆ ಬಲಪಂಥದ ಪ್ರಾಮಾಣಿಕ ನಿಲುವುಗಳು ಸ್ಪಷ್ಟವಾಗಿ ಅಭಿವ್ಯಕ್ತವಾಗುತ್ತಿಲ್ಲ. ನಮ್ಮ ಇಂದಿನ ಸಮಾಜವನ್ನು ಬಲಪಂಥೀಯರು ಗ್ರಹಿಸುವುದು ಹೇಗೆ ಮತ್ತು ಅದರಲ್ಲಿ ಆಗಬೇಕಿರುವ ಬದಲಾವಣೆಗಳು ಯಾವುವು? ಈ ಪ್ರಶ್ನೆಗಳಿಗೆ ಬಲಪಂಥೀಯರ ಉತ್ತರಗಳು ಎಡಪಂಥೀಯ ಪರಂಪರೆಗಳಲ್ಲಿ ದೊರಕುವಷ್ಟು ಸ್ಪಷ್ಟವಾಗಿ ಸಿಗುತ್ತಿಲ್ಲ. ಈ ಒಂದು ನೆಲೆಯಲ್ಲಿ ಡಾ. ಸುಶಿ ಕಾಡನಕುಪ್ಪೆಯವರು ಎಡಪಂಥದಲ್ಲಿ ಬದಲಾವಣೆಗೆ ಇರುವ ಅವಕಾಶಗಳನ್ನು ಸಮರ್ಥಿಸಿಕೊಂಡಿದ್ದು (ಸಂಗತ, ನ. 24) ಸರಿಯಾದುದು. ಇಂತಹ ಅವಕಾಶಗಳನ್ನು ನಮ್ಮ ಎಡಪಂಥೀಯರು ಸಮರ್ಥವಾಗಿ ಬಳಕೆ ಮಾಡಿಕೊಂಡಿಲ್ಲ ಎನ್ನುವುದೂ ವಾಸ್ತವವೆ.

ಇವೆಲ್ಲವುಗಳ ನಡುವೆ ಉಳಿಯುವ ಪ್ರಶ್ನೆಗಳು ಇವು ಮಾತ್ರ: ಪ್ರತಿ ವ್ಯಕ್ತಿಯ ಘನತೆಯನ್ನು, ಭದ್ರತೆಯನ್ನು, ಆತ್ಮಗೌರವವನ್ನು ಕಾಪಾಡುವ ಚಿಂತನೆ, ಮೌಲ್ಯವ್ಯವಸ್ಥೆ ಯಾವುದು? ಅದರೆಡೆಗೆ ಚಲಿಸುವುದು ಹೇಗೆ? ಈ ಪ್ರಶ್ನೆಗಳು ಏಕಕಾಲದಲ್ಲಿ ವ್ಯಾವಹಾರಿಕ, ಬೌದ್ಧಿಕ ಹಾಗೂ ನೈತಿಕ ಪ್ರತಿಕ್ರಿಯೆಗಳನ್ನು ನಿರೀಕ್ಷಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT