ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಿಕರ ತ್ಯಾಗವನ್ನು ಗೌರವಿಸುವ ಮಾದರಿಗಳು...

Last Updated 20 ಆಗಸ್ಟ್ 2017, 20:32 IST
ಅಕ್ಷರ ಗಾತ್ರ

ಹೊಸ ಉಪಕ್ರಮವೊಂದರ ಮೂಲಕ ನಮ್ಮ ದೇಶದ ಸೈನಿಕರನ್ನು ಗೌರವಿಸಲು ಏರ್‌ ಇಂಡಿಯಾ ತೀರ್ಮಾನಿಸಿದೆ. ಇನ್ನು ಮುಂದೆ ಏರ್‌ ಇಂಡಿಯಾ ವಿಮಾನಗಳನ್ನು ಏರಲು ಇತರ ಪ್ರಯಾಣಿಕರಿಗಿಂತ ಮೊದಲು ಸೈನಿಕರಿಗೆ ಅವಕಾಶ ಮಾಡಿಕೊಡಲಾಗುತ್ತದೆ.

ಈ ಕ್ರಮದಿಂದಾಗಿ ಸೈನಿಕರಲ್ಲಿ ತಾವು ತುಸು ವಿಶೇಷ ವ್ಯಕ್ತಿಗಳು ಎಂಬ ಭಾವನೆ ಬರುತ್ತದೆ. ಇತರ ಭಾರತೀಯರ (ಇವರ ಸಾಧನೆಗಳು ಏನೇ ಇದ್ದಿರಬಹುದು) ಸೇವೆಗಳಿಗಿಂತ ಹೆಚ್ಚು ಅರ್ಥಗರ್ಭಿತವಾಗಿರುವ ಸೈನಿಕರ ಸೇವೆಗೆ (ಸೈನಿಕರು ವ್ಯಕ್ತಿಗತವಾಗಿ ಸಾಧಿಸಿದ್ದು ಏನೇ ಇದ್ದಿರಬಹುದು) ಗೌರವ ಸಲ್ಲಿಸಲು ಈ ಕ್ರಮ... ನಾವು ಈ ಹಂತದಲ್ಲಿ ಒಮ್ಮೆ ನಿಂತು, ಏರ್‌ ಇಂಡಿಯಾ ಕಂಪೆನಿಯ ನಂಬಿಕೆಗಳನ್ನು ಪ್ರಶ್ನಿಸಬೇಕು.

ಭಾರತದ ಒಬ್ಬ ಶಿಕ್ಷಕ, ಅಂಚೆಯಣ್ಣ ಹಾಗೂ ಮನೆಗಳಿಗೆ ಅಡುಗೆ ಅನಿಲದ ಸಿಲಿಂಡರ್ ವಿತರಿಸುವವನ ಸೇವೆ ಕಡಿಮೆ ಪ್ರಾಮುಖ್ಯ ಪಡೆದಿದ್ದು ಏಕೆ? ಅವುಗಳಿಗೆ ಪ್ರಾಮುಖ್ಯ ಕಡಿಮೆ ಎಂದು ನಾವು ಭಾವಿಸಿದ್ದೇವೆ, ಆದರೆ ಏಕೆ ಹೀಗೆ? ಸೈನಿಕರು ಮಾಡುವ ಕೆಲಸ ಅಪಾಯಕ್ಕೆ ಮೈಒಡ್ಡುವಂಥದ್ದು ಎಂದು ನಾವು ವಾದಿಸಬಹುದು. ಅದೇ ರೀತಿಯಲ್ಲಿ ವಿದ್ಯುತ್‌ ಇಲಾಖೆಯ ಲೈನ್‌ಮೆನ್‌ ಕೆಲಸಗಳು ಕೂಡ ಅಪಾಯಕಾರಿಯೇ. ಕಾರ್ಯಾಚರಣೆಗಳಲ್ಲಿ ಸಾಯುವ ಸೈನಿಕರಿಗಿಂತ ಹೆಚ್ಚಿನ ಸಂಖ್ಯೆಯ ಜನ ಒಳಚರಂಡಿ ಅಥವಾ ಅವುಗಳಿಗೆ ಹೊಂದಿಕೊಂಡ ಟ್ಯಾಂಕ್‌ ಸ್ವಚ್ಛಗೊಳಿಸುವಾಗ ಸಾಯುತ್ತಿದ್ದಾರೆ ಎಂಬುದನ್ನು ಅಂಕಿ-ಅಂಶಗಳು ಹೇಳುತ್ತವೆ. ಈ ಕೆಲಸಗಾರರಿಗೆ ಯಾವುದೇ ಪದಕ, ಗೌರವ ಅಥವಾ ಪಾರಿತೋಷಕ ಸಿಗುವುದಿಲ್ಲ. ಕಡೇ ಪಕ್ಷ, ಅವರಿಗೆ ಸಿಗಬೇಕಿರುವ ಸಂಭಾವನೆಯೂ ಸಿಗುವುದಿಲ್ಲ.

ಅದೇನೇ ಇರಲಿ. ಆ ಬಗ್ಗೆ ಹೆಚ್ಚು ಚರ್ಚಿಸಲು ಹೋಗುವುದಿಲ್ಲ. ಗಣರಾಜ್ಯಕ್ಕೆ ಅತ್ಯಂತ ಅಗತ್ಯವಿರುವ ಕೆಲಸಗಳನ್ನು ಸೈನಿಕರೇ ನಿಭಾಯಿಸುತ್ತಾರೆ, ಹಾಗಾಗಿ ಅವರು ಇತರ ಯಾರಿಗೂ ಸಿಗದ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಭಾವಿಸೋಣ.

ಸರ್ಕಾರಿ ಒಡೆತನದ ವಿಮಾನಯಾನ ಕಂಪೆನಿಯ ವಿಮಾನಗಳನ್ನು ಯಾರು ಮೊದಲು ಏರಬೇಕು ಎಂಬುದು ಸೈನಿಕರನ್ನು ಗೌರವಿಸಲು ಇರುವ ಸೂಕ್ತ ಮಾದರಿಯೇ? ಇಲ್ಲ ಎಂಬುದು ನನ್ನ ಉತ್ತರ. ಅಲ್ಲದೆ, ಪೊಳ್ಳಾಗಿರುವ ಹಾಗೂ ಸೈನಿಕರ ಹಿತಾಸಕ್ತಿಗೆ ವಿರುದ್ಧವಾಗಿರುವ 'ಗೌರವಿಸುವ ಕ್ರಮ'ವೊಂದನ್ನು ಇದು ಉದ್ದೇಶಪೂರ್ವಕವಾಗಿ ಮುಂದುವರಿಸುತ್ತದೆ. ಈ ಬಗ್ಗೆ ವಿವರಿಸುವೆ.

ನಮ್ಮ ಮಿಲಿಟರಿ ಸಿಬ್ಬಂದಿಗೆ ಸಿಗಬೇಕಿರುವುದು ಸಿಗುವಂತೆ ಮಾಡಲು ಹಲವು ಮಾರ್ಗಗಳಿವೆ. ಮೊದಲನೆಯ ಮಾರ್ಗ, ಸರಿಯಾದ ವೇತನ ಹಾಗೂ ಉತ್ತಮ ಸೌಲಭ್ಯಗಳನ್ನು ಕೊಡುವುದು. ತಮಗೆ ಸಿಗುತ್ತಿರುವ ಆಹಾರ ಹಾಗೂ ತಮ್ಮ ಪರಿಸ್ಥಿತಿಯ ಬಗ್ಗೆ ಈಚೆಗೆ ಹೇಳಿಕೊಂಡ ಸೈನಿಕರ ಮೇಲೆ ಕೈಗೊಂಡ ಕಠಿಣ ಕ್ರಮಗಳು ನಾವು ಅವರ ಬಗ್ಗೆ ಗಂಭೀರವಾಗಿ ಆಲೋಚಿಸುತ್ತಿಲ್ಲ ಎಂಬುದನ್ನು ತೋರಿಸಿವೆ. ಸೈನಿಕರಿಗೆ ಸಿಗುವ ಆಹಾರದ ಗುಣಮಟ್ಟ ಹೆಚ್ಚಿಸಲು ತಮ್ಮ ಸಾಮರ್ಥ್ಯವನ್ನು ಬಳಸಲು ಏರ್‌ ಇಂಡಿಯಾ ಒಪ್ಪಿದ್ದಿದ್ದರೆ ಸೈನಿಕರಿಗೆ ಹೆಚ್ಚಿನ ಗೌರವ ಸಲ್ಲಿಸಿದಂತೆ ಆಗುತ್ತಿತ್ತು.

ನಮ್ಮ ಸೈನಿಕರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯವಂತರಾಗಿರುವಂತೆ ನಾವು ನೋಡಿಕೊಳ್ಳಬೇಕು. ಇದು ಎರಡನೆಯ ಮಾರ್ಗ. ಒತ್ತಡಕ್ಕೆ ಒಳಗಾದ ಸೈನಿಕರು ತಮ್ಮ ಮೇಲಧಿಕಾರಿಗಳನ್ನು ಅಥವಾ ತಮ್ಮ ಜೊತೆ ಇರುವ ಸೈನಿಕರನ್ನು ಹತ್ಯೆ ಮಾಡಿದ ವರದಿಗಳು ಅವರು ಆರೋಗ್ಯವಂತರಾಗಿ ಇಲ್ಲ ಎಂಬುದನ್ನು ಹೇಳುತ್ತವೆ. ನಮ್ಮ ಹಲವು ಸೈನಿಕರು ಮಾನಸಿಕವಾಗಿ ಆರೋಗ್ಯವಾಗಿ ಇಲ್ಲ, ಅವರ ಚಿಕಿತ್ಸೆಗೆ ಅಗತ್ಯ ನೆರವು ಸಿಗುತ್ತಿಲ್ಲ ಎಂಬ ಮಾತಿಗೆ ನಿವೃತ್ತ ಸೈನಿಕರ ಸಂಘಟನೆಗಳು, ಒಕ್ಕೂಟಗಳು ಆಧಾರ ಒದಗಿಸುತ್ತವೆ.

ಸೈನಿಕರು ಸೇವೆಯಲ್ಲಿ ಇರುವ ಹಾಗೂ ನಿವೃತ್ತರಾದ ನಂತರದ ಅವಧಿಯಲ್ಲಿ ಅವರಿಗೆ ಒಳ್ಳೆಯ ಪಿಂಚಣಿ, ಉದ್ಯೋಗ ಅವಕಾಶ ಮತ್ತು ಶಿಕ್ಷಣದ ಅವಕಾಶಗಳನ್ನು ನೀಡುವುದು ಅವರನ್ನು ಗೌರವಿಸಲು ಇರುವ ಮೂರನೆಯ ಮಾರ್ಗ. ಈ ಕೆಲಸವನ್ನು ಅಮೆರಿಕ ಬಹಳ ಚೆನ್ನಾಗಿ ಮಾಡುತ್ತಿದೆ. ಅದರಲ್ಲೂ ಮುಖ್ಯವಾಗಿ, ನಿವೃತ್ತ ಯೋಧರಿಗೆ ಕಾಲೇಜು ವಿದ್ಯಾರ್ಥಿ ವೇತನಗಳನ್ನು ನೀಡುತ್ತಿದೆ. ನಮ್ಮಲ್ಲಿ ಅದು ಇಲ್ಲ. ಉದ್ಯೋಗ ಅವಕಾಶಗಳು ಹಾಗೂ ಪಿಂಚಣಿ ವಿಚಾರದಲ್ಲಿ ನಾನು ತುಸು ಅಧ್ಯಯನ ಮಾಡಿದ್ದೇನೆ. ನಮ್ಮದು ಕಡಿಮೆ ಸಂಪನ್ಮೂಲಗಳು ಇರುವ ಬಡ ರಾಷ್ಟ್ರವಾಗಿದ್ದರೂ, ಇತರ ಯಾವುದೇ ಸರ್ಕಾರಿ ಉದ್ಯೋಗಿಯಾಗಿದ್ದವನಿಗೆ ಸಿಗುವುದಕ್ಕಿಂತ ಹೆಚ್ಚಿನ ಸೌಲಭ್ಯಗಳು ನಮ್ಮ ಸೈನಿಕರಿಗೆ ಸಿಗುತ್ತಿವೆ.

ಉತ್ತಮ ಸಾಧನೆ ತೋರುವ ಸೈನಿಕರಿಗೆ ಪದಕಗಳು ಹಾಗೂ ಇತರ ಪಾರಿತೋಷಕಗಳ ಮೂಲಕ ಗೌರವ ಸಲ್ಲಿಸಬೇಕು ಎನ್ನುವುದು ನಾಲ್ಕನೆಯ ಮಾರ್ಗ. ಆದರೆ ಆ ಪದಕಗಳು ಅವರಿಗೆ ಸಿಗುತ್ತಿಲ್ಲ ಎಂಬುದನ್ನು ಈಚೆಗಿನ ವರದಿಯೊಂದು ಹೇಳುತ್ತದೆ. ಪದಕ ಘೋಷಣೆ ಆಗಿರುವ ಬಗ್ಗೆ ಸೈನಿಕರಿಗೆ ತಿಳಿಸಿದರೂ, ಅವರಿಗೆ ಅದನ್ನು ನೀಡಲಾಗುತ್ತಿಲ್ಲ. ಯೋಧರು ಪದಕದ ಮಾದರಿಯನ್ನು ಮಿಲಿಟರಿ ಕ್ಯಾಂಟೀನ್‌ಗಳಿಂದ ಖರೀದಿಸಿ, ಧರಿಸುತ್ತಿದ್ದಾರಂತೆ. ಇದು ನಾಚಿಕೆಗೇಡಿನ ವಿಚಾರ ಎಂಬುದು ನನ್ನ ಅನಿಸಿಕೆ.

ನಮ್ಮ ಯೋಧರನ್ನು ಗೌರವಿಸಬಹುದಾದ ಐದನೆಯ ಹಾಗೂ ಕೊನೆಯ ಮಾರ್ಗವು ಅತ್ಯಂತ ಅರ್ಥಪೂರ್ಣ. ನಮ್ಮ ಶೌರ್ಯವಂತ ಯೋಧರನ್ನು ನಿಯೋಜಿಸಿರುವ ಸಂಘರ್ಷಮಯ ಪ್ರದೇಶಗಳ ಸಂಖ್ಯೆಯನ್ನು ನಾವು ಕಡಿಮೆ ಮಾಡಬೇಕು. ಏನೂ ಬೆಳೆಯದ ಸಿಯಾಚಿನ್ ಪ್ರದೇಶದಲ್ಲಿ ಪ್ರತಿ ವರ್ಷ ನಮ್ಮ ಒಂದು ಡಜನ್ ಸೈನಿಕರು ಮಡಿಯುತ್ತಿದ್ದಾರೆ. ಅವರನ್ನು ಅಲ್ಲಿ ನಿಯೋಜಿಸಿರುವುದು ಏಕೆ? ಅಲ್ಲಿ ಅವರು ಸಾಯುವುದು ಶತ್ರುಗಳಿಂದ ಗುಂಡೇಟು ತಿಂದು ಅಲ್ಲ, ಬದಲಿಗೆ ಅಲ್ಲಿನ ಹವಾಮಾನದ ಕಾರಣದಿಂದ. ಪಾಕಿಸ್ತಾನದ ಜೊತೆ ಮಾತುಕತೆ ನಡೆಸಲು, ಸಿಯಾಚಿನ್ ಹಾಗೂ ಸಾಲ್ತೊರೊ ಪ್ರದೇಶದಲ್ಲಿನ ಎರಡೂ ಕಡೆ ಸೈನಿಕರ ಸಂಖ್ಯೆ ಕಡಿತ ಮಾಡಲು ಪ್ರಯತ್ನಿಸಬಾರದೇ? ನಾವು ಪಾಕಿಸ್ತಾನದ ಜೊತೆ ಮಾತುಕತೆ ನಡೆಸಿದರೆ ಮಾತ್ರ ಇದು ಸಾಧ್ಯ. ಆದರೆ, ಈ ಸಂದರ್ಭದಲ್ಲಿ, ನಮ್ಮ ಸೈನಿಕರು ಪ್ರಾಣ ಕಳೆದುಕೊಳ್ಳುವುದಕ್ಕೆ ನಮ್ಮ ಅಭ್ಯಂತರವಿದ್ದಂತಿಲ್ಲ.

ಆಂತರಿಕವಾಗಿ, ಅಂದರೆ ದೇಶದ ಈಶಾನ್ಯ ರಾಜ್ಯಗಳಲ್ಲಿ, ಆದಿವಾಸಿ ಸಮುದಾಯಗಳು ಹೆಚ್ಚಿರುವ ಪ್ರದೇಶದಲ್ಲಿ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ನಮ್ಮ ಸೇನೆ ಹಾಗೂ ಅರೆಸೇನಾ ಪಡೆಗಳನ್ನು ನಿಯೋಜಿಸುವುದು ಹೆಚ್ಚುತ್ತಿದೆ. ಈ ಸಮಸ್ಯೆಗಳಿಗೆ ಪರಿಹಾರ ಇರುವುದು ರಾಜಕೀಯ ಕ್ರಮಗಳಲ್ಲಿಯೇ ಹೊರತು ಮಿಲಿಟರಿ ಕಾರ್ಯಾಚರಣೆಗಳಲ್ಲಿ ಅಲ್ಲ. ಈ ಮೂರು ಪ್ರದೇಶಗಳಲ್ಲಿ ಸಶಸ್ತ್ರ ಪಡೆಗಳನ್ನು ಎಪ್ಪತ್ತು ವರ್ಷಗಳಿಂದ ಬಳಕೆ ಮಾಡಲಾಗಿದೆ. ಆದರೆ ಇದರಿಂದ ಒಳ್ಳೆಯ ಫಲಿತಾಂಶ ಸಿಕ್ಕಿಲ್ಲ. ಈ ಸಮಸ್ಯೆಗೆ ಸಶಸ್ತ್ರ ಪಡೆಗಳ ಬಳಕೆ ಮಾತ್ರವೇ ಪರಿಹಾರ ಎಂದು ಹೇಳುವುದನ್ನು ನಾವು ಮುಂದುವರಿಸಿದರೆ, ನಮ್ಮ ಸೈನಿಕರು ಹಾಗೂ ಅವರನ್ನು ಎದುರಿಸುವ ನಮ್ಮದೇ ಪ್ರಜೆಗಳು ಬೆಲೆ ತೆರಬೇಕಾಗುತ್ತದೆ.

ಭಾರತದ ಯೋಧರು ಎಲ್ಲೇ ಯುದ್ಧ ಮಾಡುವಂತೆ ಹೇಳಿದರೂ ಮಾಡುತ್ತಾರೆ. ಅವರು ಅದನ್ನು ಯಾವತ್ತಿನಿಂದಲೂ ಮಾಡುತ್ತಿದ್ದಾರೆ. ಯೋಧರ ಸೇವೆ ಹಾಗೂ ಅವರ ತ್ಯಾಗ ಅತ್ಯಂತ ಮಹತ್ವದ ಕಾರಣಗಳಿಗೆ ಮಾತ್ರ ಆಗುವಂತೆ ನೋಡಿಕೊಳ್ಳುವುದು ಪ್ರಜಾತಾಂತ್ರಿಕ ಸಮಾಜದ ಹೊಣೆ. ನಮಗಾಗಿ ಅನಗತ್ಯವಾಗಿ ಪ್ರಾಣ ತ್ಯಾಗ ಮಾಡಲು ಅವರಿಗೆ ನಾವು ಪ್ರಜಾತಾಂತ್ರಿಕ ಸಮಾಜವಾಗಿ ಹೇಳಬಾರದು. ಇದು ನಾವು ಸೈನಿಕರನ್ನು ಗೌರವಿಸಬಹುದಾದ ಏಕಮೇವ, ಅತ್ಯಂತ ಮಹತ್ವಪೂರ್ಣ ಮಾರ್ಗ. ಆದರೆ ಅದು ಆಗುತ್ತಿರುವಂತೆ ನನಗೆ ಕಾಣುತ್ತಿಲ್ಲ. ಸೈನಿಕರು ಪ್ರಾಣ ತ್ಯಾಗ (ಕೆಲವೊಮ್ಮೆ ಅನಗತ್ಯ ಪ್ರಾಣತ್ಯಾಗ) ಮಾಡುತ್ತಿರುವವರೆಗೂ ಅವರನ್ನು ಗೌರವಿಸುತ್ತಿರುತ್ತೇವೆ, ಇದರಲ್ಲಿ ನಮಗೆ ಬೇಸರ ಇಲ್ಲ ಎಂಬಂತೆ ಆಗಿದೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಿರ್ಮಿಸಿರುವ ಈ ಮಿಲಿಟರೀಕೃತ ವಾತಾವರಣದಲ್ಲಿ ರಾಷ್ಟ್ರೀಯವಾದಿಗಳ ಚಮಚಾಗಿರಿಯನ್ನು ಏರ್‌ ಇಂಡಿಯಾ ಕಂಪೆನಿ ಮಾಡುತ್ತಿದೆ ಎಂಬುದು ನನ್ನ ಊಹೆ. ದೇಶದೊಳಗೆ ಹಾರಾಟ ನಡೆಸುವ ವಿಮಾನಗಳಲ್ಲಿ ಸಸ್ಯಾಹಾರಿ ಆಹಾರವನ್ನು ಮಾತ್ರ ಒದಗಿಸಲಾಗುವುದು ಎಂದು ಏರ್‌ ಇಂಡಿಯಾ ಈಗಾಗಲೇ ಹೇಳಿದೆ. ಇದು ಬಹುಶಃ ಆರ್‌ಎಸ್‌ಎಸ್‌ ಸಂಘಟನೆಯನ್ನು ಖುಷಿಪಡಿಸಿರಬಹುದು. ಚಮಚಾಗಿರಿ ಬಗ್ಗೆ ನನ್ನದೇನೂ ತಕರಾರು ಇಲ್ಲ - ಎಲ್ಲರೂ ಆ ಕೆಲಸ ಮಾಡುತ್ತಾರೆ ಎಂಬುದು ನನ್ನ ಊಹೆ.

ಆದರೆ ಈ ಮಾದರಿಯ 'ಸಾಮಾನ್ಯ, ಮಾಮೂಲಿ' ಎಂಬಂತಹ ಕ್ರಮಗಳು ಸೈನಿಕರ ತ್ಯಾಗದ ನಿಜ ಅರ್ಥವನ್ನು ಕುಗ್ಗಿಸುತ್ತವೆ. ಇಂಥ ಕ್ರಮಗಳಿಂದ ಸರ್ಕಾರಕ್ಕೆ ಖುಷಿ ಆದರೂ, ವಾಸ್ತವ ಮರೆಯಾಗುತ್ತದೆ.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT