ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲನ್ನು ಗೆಲುವನ್ನಾಗಿಸುವ ಬಗೆ

Last Updated 18 ಜನವರಿ 2015, 19:30 IST
ಅಕ್ಷರ ಗಾತ್ರ

ಅಮೆರಿಕದ ರಾಷ್ಟ್ರಾಧ್ಯಕ್ಷರಲ್ಲಿ ಜಾರ್ಜ್‌ ವಾಷಿಂಗ್‍ಟನ್ ಹಾಗೂ ಅಬ್ರ­ಹಾಂ ಲಿಂಕನ್‌ ಅವರಷ್ಟು ಅತ್ಯಂತ ವಿಭಿನ್ನ ಗುಣದ ವ್ಯಕ್ತಿಗಳನ್ನು ಕಾಣುವುದು ಕಷ್ಟ.  ಇಬ್ಬರ ವ್ಯಕ್ತಿತ್ವ­ಗಳಲ್ಲಿ ಯಾವ ಸಾಮ್ಯತೆಯೂ ಕಾಣುವುದಿಲ್ಲ. ಜಾರ್ಜ್‌ ವಾಷಿಂ-­ಗ್‍ಟನ್ ಅತ್ಯಂತ ಶ್ರೀಮಂತ ಮನೆತನ­ದಿಂದ ಬಂದವರು.

ಆತ ಸದಾ ಏಕಾಂಗಿ­ಯಾ­ಗಿದ್ದು, ಸಂಪ್ರದಾಯವನ್ನು ಪಾಲಿ­ಸುವ ಹಾಗೂ ಹತ್ತಿರ ಹೋಗಲು ಯಾರಿಗಾ­ದರೂ ಭಯ ತರಿಸುವಂತಹ ವ್ಯಕ್ತಿತ್ವ ಅವರದು. ಆದರೆ, ಅಬ್ರಹಾಂ ಲಿಂಕನ್ ಇದಕ್ಕೆ ವ್ಯತಿರಿಕ್ತವೆಂಬಂತೆ ತೀರ ಬಡತನದಿಂದ ಬಂದವರು. ಯಾವುದೇ ಜನರ ಗುಂಪಿನಲ್ಲಿ ಸೇರಿ ಹೋಗುವಂತಹ ಗುಣ ಅವರದು. ಯಾರು ಏನೇ ಟೀಕೆ ಮಾಡಿ­ದರೂ ಅದನ್ನು ಸಹಿಸಿಕೊಂಡು ತಮ್ಮ ಮೇಲೆಯೇ ನಗೆ ಚಟಾಕಿ ಹಾರಿ­ಸುವ ಸುಲಭದ ಗುಣ ಲಿಂಕನ್ನರದು. ಆದರೆ, ಇವರಿಬ್ಬರ ನಡುವೆ ಅತ್ಯಂತ ಸಮಾನವಾ­ದ­ದ್ದೆಂದರೆ ಇಬ್ಬರೂ ಅನುಭವಿಸಿದ ಸೋಲಿನ ಸರಪಳಿಗಳು.

ಅಬ್ರಹಾಂ ಲಿಂಕನ್‌ ಜೀವನ ಸೋಲಿಗೆ ಪ್ರಸಿದ್ಧವಾದದ್ದು. ಸಂಕ್ಷಿಪ್ತವಾಗಿ ಅದನ್ನು ಹೇಳಬಹುದಾದದ್ದು ಹೀಗೆ. ಅವರೊಬ್ಬ ಉದ್ಯಮಿಯೊಂದಿಗೆ ಕೆಲಸ ಮಾಡಲು ಹೋಗಿ ಸೋತರು. ನಂತರ ರಾಜ್ಯದ ಚುನಾವಣೆಯಲ್ಲಿ ಸೋಲು. ಮತ್ತೊಮ್ಮೆ ತಾವೇ ವ್ಯಾಪಾರ ಮಾಡಲು ಹೋಗಿ ಅಪಾರ ಸೋಲು ಕಂಡರು. ಮುಂದೆ ಎಷ್ಟೋ ವರ್ಷಗಳ ಕಾಲ ಸಾಲದ ಹಣವನ್ನು ಕಟ್ಟುವು­ದರಲ್ಲೇ ಅವರ ಗಳಿಕೆ ಕರಗಿತು.  ಮುಂದೊಮ್ಮೆ ರಾಜ್ಯದ ಚುನಾವಣೆ­ಯಲ್ಲಿ ಗೆಲುವು, ಆದರೆ ಆಗ ಅವರ ಹೆಂಡತಿ ತೀರಿಹೋದಳು.

ಆಗ ಅವರು ತುಂಬ ಮಾನಸಿಕ ಒತ್ತಡಕ್ಕೆ ಒಳಗಾ­ಗಿದ್ದರು, ಖಿನ್ನತೆ ಬಹುಕಾಲ ಕಾಡಿತು. ರಾಜ್ಯದ ಶಾಸನಸಭೆಯ ಅಧ್ಯಕ್ಷ ಸ್ಥಾನಕ್ಕೆ ಸ್ವರ್ಧಿಸಿ ಸೋತರು. ಮುಂದೆ ಕಾಂಗ್ರೆಸ್‌ನ ಸ್ಥಾನಕ್ಕೆ ಚುನಾವಣೆಯಲ್ಲಿ ಸೋಲು.  ಅಮೆ­ರಿ­ಕದ ಸೆನೆಟ್‌ಗೆ ಆರಿಸಿ ಬರಲು ಪ್ರಯತ್ನಿಸಿ ಸೋತರು. ಮುಂದೆ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ ಅವರಿಗೆ ನೂರು ವೋಟು ಕೂಡ ಬರಲಿಲ್ಲ. ಕೊನೆಗೊಮ್ಮೆ ರಾಷ್ಟ್ರ­ಪತಿ ಸ್ಥಾನಕ್ಕೆ ಸ್ಪರ್ಧಿಸಿದಾಗ ಯಶ ದೊರಕಿತು. ಅದು ಅವರನ್ನು ಅಮೆರಿಕದ ಅತ್ಯಂತ ಯಶಸ್ವಿ ರಾಷ್ಟ್ರಪತಿಯನ್ನಾಗಿ ಮಾಡಿತು.

ಜಾರ್ಜ್‌ ವಾಷಿಂಗ್‍ಟನ್ ಕಮಾಂಡರ್ ಆಗಿ ತಮ್ಮ ಜೀವನದುದ್ದಕ್ಕೂ ಗೆದ್ದದ್ದು ಎರಡೇ ಯುದ್ಧಗಳನ್ನು. ಉಳಿದವುಗಳಲ್ಲಿ ಬರೀ ಸೋಲು. ಕೊನೆಯ ಯುದ್ಧ­ದಲ್ಲಂತೂ ಬ್ರಿಟಿಷ್ ಸೈನ್ಯ ಇವರನ್ನು ಲಾಂಗ್ ಐಲಾಂಡ್‌ನಿಂದ, ಬ್ರೂಕ್ಲಿನ್ ಸೇತುವೆಯಿಂದ, ಮ್ಯಾನ್‌ಹಟನ್ ದ್ವೀಪದವರೆಗೆ ಹಿಂದೆ ಓಡಿಸಿತು. ಎಲ್ಲ ಸೋಲು­ಗಳನ್ನು ತಾಳ್ಮೆಯಿಂದ ತಡೆದು­ಕೊಂಡ ವಾಷಿಂಗ್‍ಟನ್ ಕೊನೆಯ ಹಂತದಲ್ಲಿ ಯುದ್ಧವನ್ನು ಗೆದ್ದೇ ಬಿಟ್ಟರು.

ಬ್ರಿಟಿಷ್‌ ಜನರಲ್ ಕಾರ್ನವಾಲೀಸ್ ಶರಣಾಗತಿ  ಸೂಚಿಸುವಂತೆ ತನ್ನ ಖಡ್ಗವನ್ನು ನೀಡುತ್ತ ಹೇಳಿದ, ‘ಜನ­ರಲ್, ನಿಮಗೆ ನನ್ನ ಸಲಾಮ್. ನಿಮ್ಮಂತಹ ನಾಯಕರನ್ನು ನಾನು ಇದುವರೆಗೂ ನೋಡಿಲ್ಲ. ಪ್ರತಿ ಕ್ಷಣ­ದಲ್ಲೂ ಸೋಲನ್ನೇ ಕಾಣುತ್ತಲಿದ್ದರೂ ಗೆಲುವಿನ ಆಸೆಯನ್ನು ಬಿಡದೇ ಹೋರಾಡಿದ ನಿಮಗೆ ನನ್ನ ಅಭಿನಂದನೆ­ಗಳು. ನಿಮ್ಮ ಯಶಸ್ಸಿನ ಸೂತ್ರ ನನಗೆ ಈಗ ತಿಳಿಯಿತು’. ಲಿಂಕನ್ ಹಾಗೂ ವಾಷಿಂಗ್ಟನ್‌ ಅವರ ಬದುಕು ನಮಗೆ ಕಲಿಸುವ ಪಾಠವೆಂದರೆ ಸೋಲು ಪರಿಶ್ರಮದೊಂದಿಗೆ ಸೇರಿದರೆ ಯಶಸ್ಸು ದೊರೆಯುತ್ತದೆ.

ಸೋಲು ಒಂದು ಘಟನೆ ಮಾತ್ರ, ಅದು ಜೀವನವಲ್ಲ. ‘ಬದುಕಿನಲ್ಲಿ ಲಕ್ಷಾಂತರ ಘಟನೆಗಳು ಜರುಗುತ್ತವೆ. ಅದರಲ್ಲಿ ಕೆಲವು ಮಾತ್ರ ವೈಫಲ್ಯವನ್ನು ಕಾಣಬಹುದು. ಒಂದು ವಿಫಲತೆ ಒಬ್ಬ ಮನುಷ್ಯನ  ಪರಿಶ್ರಮದ ವಿಫಲತೆಯಲ್ಲ.  ಅದು ಆ ಕ್ಷಣದಲ್ಲಿ ಪ್ರಯತ್ನ ಸಾಕಾಗಲಿಲ್ಲವೆಂಬುದನ್ನು ಹೇಳುತ್ತದೆ. ಮುಂದಿನ ಕ್ಷಣದಲ್ಲಿ ಪ್ರಯತ್ನ­ವನ್ನು ಹೆಚ್ಚು ಮಾಡಿದರೆ ಸಾಕು ವಿಫಲತೆ ಓಡಿ ಹೋಗುತ್ತದೆ. ಇದನ್ನೇ ತಾನೇ ಈ ಇಬ್ಬರೂ ಮಹಾನುಭಾವರು ತಮ್ಮ ಬದುಕಿನ ಮೂಲಕ ಕಲಿಸಿದ್ದು? ನಾವು ಪಾಠ ಕಲಿತರೆ ನಮಗೇ ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT