ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಿನ ಮಾದರಿ ಬೆನ್ನು ಹತ್ತಿದರೆ ಆಗುವುದೇ ಹೀಗೆ...

Last Updated 18 ಜೂನ್ 2016, 19:30 IST
ಅಕ್ಷರ ಗಾತ್ರ

ಅವಕಾಶಗಳೇ ಹಾಗೆ, ಅವು ಮತ್ತೆ ಮತ್ತೆ ಬಂದು ನಮ್ಮ ಮನೆ ಬಾಗಿಲು ತಟ್ಟುವುದಿಲ್ಲ. ಅವು ಒದಗಿ ಬಂದಾಗ ನಾವು ಬಳಸಿಕೊಳ್ಳಬೇಕು. ಒದ್ದು ಹೋಗಬಾರದು.

ಅನುಪಮಾ ಶೆಣೈ ತಮ್ಮ ಮನೆ ಬಾಗಿಲಿಗೆ ಬಂದ ಅವಕಾಶವನ್ನು ಒದ್ದು ಹೋದರೇ? ನಡೆದ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಹಾಗೆಯೇ ಅನಿಸುತ್ತದೆ. ಅವರು ರಾಜೀನಾಮೆ ಕೊಡಲು ಅಂಥ ಪ್ರಬಲ  ಕಾರಣವೇನೂ ಇರಲಿಲ್ಲ. ವೈಯಕ್ತಿಕವಾಗಿ ಅವರ ಮೇಲೆ ಆ ಗಳಿಗೆಯಲ್ಲಿ ಯಾವ ಒತ್ತಡವೂ ಇರಲಿಲ್ಲ.

ಹಾಗೆ ನೋಡಿದರೆ ಯಾವುದೋ ಅಕ್ರಮ ಕಟ್ಟಡ ನಿರ್ಮಾಣದ ವಿಚಾರದಲ್ಲಿ ಅವರು ತಲೆ ಹಾಕಲೇಬಾರದಿತ್ತು. ಅದು ಕ್ರಿಮಿನಲ್‌ ಅಪರಾಧ ಪ್ರಕರಣವಾಗಿರಲಿಲ್ಲ. ಸಿವಿಲ್ ಪ್ರಕರಣವಾಗಿತ್ತು. ಸಿವಿಲ್ ಪ್ರಕರಣದಲ್ಲಿ ತಲೆ ಹಾಕಬಾರದು ಎಂದು ಪೊಲೀಸ್‌ ನಿಯಮಗಳೇ ಹೇಳುತ್ತವೆ.

ಅವರು ಕೂಡ್ಲಿಗಿಯಲ್ಲಿ ಮದ್ಯದ ಲಾಬಿಯನ್ನು ಬಗ್ಗು ಬಡಿಯಬೇಕು ಎಂದುಕೊಂಡಿದ್ದರು. ರಾಜ್ಯದಲ್ಲಿ ಸರ್ಕಾರ ಸಾರಾಯಿ ನಿಷೇಧ ಮಾಡಿದ ನಂತರ ಕಡಿಮೆ ದರದ ಬ್ರಾಂದಿ ಮತ್ತು ರಮ್‌ ಅನ್ನೇ ಹಳ್ಳಿಗಳ ಅಂಗಡಿಗಳಲ್ಲಿ ಇಟ್ಟು ಮಾರಾಟ ಮಾಡುತ್ತಿದ್ದಾರೆ. ನಗರ ಮತ್ತು ಪಟ್ಟಣಗಳಲ್ಲಿನ ಮದ್ಯದ ಅಂಗಡಿಗಳಿಂದ ಖರೀದಿ ಮಾಡಿದ ಅಕ್ರಮ ಸರಕಿದು.

ಕಳೆದ ದೀಪಾವಳಿ ಸಮಯದಲ್ಲಿ ಲಾರಿ ಚಾಲಕನೊಬ್ಬ ಕುಡಿದ ಅಮಲಿನಲ್ಲಿ ಎರಡು ವರ್ಷದ ಹಸುಳೆ ಮೇಲೆ  ಅತ್ಯಾಚಾರ ಎಸಗಿ ಮಗುವನ್ನು ಕೊಂದು ಹಾಕಿದ್ದ. ಅತ್ಯಾಚಾರ ಮತ್ತು ಕೊಲೆಯ ಕಾರಣ ಹುಡುಕುತ್ತ ಹೋಗಿ ಅಕ್ರಮ ಮದ್ಯ ಮಾರಾಟವೇ ಅದಕ್ಕೆ ಮೂಲ ಎಂಬ ಅಭಿಪ್ರಾಯಕ್ಕೆ ಅನುಪಮಾ ಬಂದರು. ಅದಕ್ಕೆ ಕಡಿವಾಣ ಹಾಕಬೇಕು ಎಂದು ನಿರ್ಧರಿಸಿದರು.

ಅಕ್ರಮವಾಗಿ ಮದ್ಯ ಮಾರಾಟ ಮಾಡುವುದನ್ನು ತಡೆಯುವುದು ಕೂಡ ಪೊಲೀಸ್‌ ಇಲಾಖೆಯ ಕೆಲಸವಲ್ಲ ಅದು ಅಬ್ಕಾರಿ ಇಲಾಖೆಯ ಕೆಲಸ. ಕಳ್ಳಬಟ್ಟಿ ಮಾರಾಟ ತಡೆಯುವುದೂ ಅಬ್ಕಾರಿ ಇಲಾಖೆಯ ಕೆಲಸವೇ. ಆದರೂ ಅನುಪಮಾ ಶೆಣೈ ಅವರ ದಾಳಿಗಳಿಗೆ ಯಾರೂ ಅಡ್ಡಿ ಮಾಡಿರಲಿಲ್ಲ. ಆದರೆ, ಜನವರಿಯಲ್ಲಿ ಆದ ತಮ್ಮ ದಿಢೀರ್‌ ವರ್ಗಾವಣೆ ಹಿಂದೆ ಮದ್ಯ ಮಾರಾಟಗಾರರ ಲಾಬಿ ಕೆಲಸ ಮಾಡಿರಬಹುದು ಎಂದು ಅವರಿಗೆ ಅನುಮಾನ ಇತ್ತು.

ಮೊನ್ನೆ ಕೂಡ್ಲಿಗಿಯ ಅಂಬೇಡ್ಕರ್‌ ಭವನದ ಎದುರು ಮದ್ಯದ ಅಂಗಡಿ ಮಾಲೀಕರ ಕಟ್ಟಡವೊಂದು ಮೇಲೆ ಬರುವಾಗ ಅವರನ್ನು ಬಗ್ಗು ಬಡಿಯಲು ಸಕಾಲ ಎಂದು ಅನುಪಮಾ ಲೆಕ್ಕ ಹಾಕಿದರು. ಆದರೆ, ಅವರು ಅಂದುಕೊಂಡಂತೆ ಕಟ್ಟಡ ನಿರ್ಮಿಸುತ್ತಿದ್ದವರ ಮೇಲೆ ಕ್ರಮ ತೆಗೆದುಕೊಳ್ಳಲು ಆಗಲಿಲ್ಲ. ಕೆಳಹಂತದ ಅಧಿಕಾರಿಗಳ ಸಹಕಾರವೂ ಅವರಿಗೆ ಸಿಗಲಿಲ್ಲ.

ಬೇರೆ ದಾರಿ ಇಲ್ಲ ಎಂದುಕೊಂಡರೋ ಏನೋ, ರಾಜೀನಾಮೆ ಕೊಟ್ಟು ಹೊರನಡೆದರು. ಅವರಿಗೆ ಹತಾಶೆ ಕಾಡುತ್ತಿದ್ದಂತಿತ್ತು. ತಮ್ಮ ಆಣತಿ ನಡೆಯುತ್ತಿಲ್ಲ ಎಂದು ಅವರಿಗೆ ಅನಿಸತೊಡಗಿತ್ತು. ರಾಜೀನಾಮೆಗೆ ನಿರ್ದಿಷ್ಟ ಕಾರಣವೇನು ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿಲ್ಲ ಅಥವಾ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ತಾವು ಕೂಡ್ಲಿಗಿಯಲ್ಲಿ ಎದುರಿಸುತ್ತಿರುವ ಕಷ್ಟವೇನು ಎಂದೂ ಹೇಳಿಕೊಂಡಿಲ್ಲ. ಬರೀ ಹಿರಿಯ ಅಧಿಕಾರಿಗಳು ಮಾತ್ರವಲ್ಲ ಅವರು ಬಯಸಿದ್ದರೆ ಗೃಹ ಸಚಿವರ ಅಥವಾ ಮುಖ್ಯಮಂತ್ರಿಗಳ ವೇಳೆಯನ್ನೂ  ಕೇಳಬಹುದಿತ್ತು.

ಅನುಪಮಾ ಅವರಂಥ ಅಪ್ಪಟ ಪ್ರಾಮಾಣಿಕ ಮತ್ತು ನಿಷ್ಕಳಂಕ ಅಧಿಕಾರಿಗೆ ನಿಜವಾಗಿಯೂ ತೊಂದರೆಯಾಗಿದ್ದರೆ ಮೇಲಧಿಕಾರಿಗಳಾಗಲೀ, ಗೃಹ ಸಚಿವರಾಗಲೀ ಅಥವಾ ಸ್ವತಃ ಮುಖ್ಯಮಂತ್ರಿಗಳೇ ಆಗಲೀ ಸಹಾಯ ಮಾಡದೇ ಇರುತ್ತಿರಲಿಲ್ಲ. ಆಡಳಿತಕ್ಕೆ ಪ್ರಾಮಾಣಿಕತೆ ಬೇಕೋ ಬೇಡವೋ ಗೊತ್ತಿಲ್ಲ. ಆದರೆ, ವ್ಯವಸ್ಥೆಗೆ ಬೇಕಾಗಿರುತ್ತದೆ. ಯಾವ ವಿಧದಿಂದಲಾದರೂ ಪ್ರಾಮಾಣಿಕರ ನೆರವಿಗೆ ಅದು ಬಂದು ನಿಲ್ಲುತ್ತದೆ. 

ಅದನ್ನು ಅನುಪಮಾ ಬಳಸಿಕೊಳ್ಳಲಿಲ್ಲ. ಅವರಿಗೆ ತಮ್ಮ ಮೇಲಿನ ಎಲ್ಲ ಅಧಿಕಾರದ ಹಂತಗಳಲ್ಲಿ ನಂಬಿಕೆ ಹೊರಟು ಹೋದಂತೆ ಆಗಿತ್ತು. ಅವರದಲ್ಲ  ಎನ್ನಲಾದ (?) ಫೇಸ್‌ಬುಕ್‌ ಖಾತೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಅದನ್ನೇ ಹೇಳುತ್ತಿದ್ದುವು.

ಕಳೆದ ಜನವರಿಯಲ್ಲಿ ತಮ್ಮ ಕರೆಯನ್ನು 40 ಸೆಕೆಂಡ್‌ ತಡೆದು ನಿಲ್ಲಿಸಿದ್ದ ಅನುಪಮಾ ಅವರನ್ನು ವರ್ಗ ಮಾಡಿಸಿರುವುದಾಗಿ ಕೊಚ್ಚಿಕೊಂಡಿದ್ದ ಜಿಲ್ಲೆಯ ಉಸ್ತುವಾರಿ ಸಚಿವ ಪರಮೇಶ್ವರ್‌ ನಾಯಕ್‌ ವಿರುದ್ಧ ಬರೀ ಕೂಡ್ಲಿಗಿ ಮಾತ್ರವಲ್ಲ ಇಡೀ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಮತ್ತು ಇಂಡಿಯಿಂದ ಅನುಪಮಾ ಅವರನ್ನು ಮತ್ತೆ ಕೂಡ್ಲಿಗಿಗೆ ವರ್ಗ ಮಾಡಬೇಕು ಎಂದು ಒತ್ತಾಯಿಸಿ ಜನಾಂದೋಲನವೇ ನಡೆದಿತ್ತು.

ಈ ಸಾರಿ ಅಂಥ ಯಾವ ಪ್ರತಿಕ್ರಿಯೆಯೂ ಬರಲಿಲ್ಲ. ಕೇವಲ ಆರು ತಿಂಗಳಲ್ಲಿ ಅನುಪಮಾ ಅವರ ಜನಪ್ರಿಯತೆ ಏಕೆ ಹೀಗೆ ಜರ್ರನೆ ಇಳಿದು ಹೋಯಿತು? ಇದನ್ನು ಅನುಪಮಾ ಅರ್ಥ ಮಾಡಿಕೊಳ್ಳಬೇಕಿತ್ತು. ಅನುಪಮಾ ತಾವು ಒಬ್ಬ ಸರ್ಕಾರಿ ನೌಕರಳು ಎಂಬುದನ್ನು ಮರೆತುಬಿಟ್ಟರು. ಸರ್ಕಾರದ ಮುಖ್ಯಸ್ಥರಾದ ಸಿದ್ದರಾಮಯ್ಯ ಅವರ ವಿರುದ್ಧ ಲಘುವಾದ ಮಾತುಗಳನ್ನು ಹರಿಬಿಟ್ಟರು.

ಜಿಲ್ಲಾ ಉಸ್ತುವಾರಿ ಸಚಿವರ  ವಿರುದ್ಧ ಬ್ಲ್ಯಾಕ್‌ಮೇಲ್‌ ಮಾಡುವಂಥ ಸಂದೇಶಗಳನ್ನೂ ತೇಲಿ ಬಿಟ್ಟರು. ನಂತರ ಅದೆಲ್ಲ ತಮ್ಮದಲ್ಲ ಎಂದು ನುಣುಚಿಕೊಂಡರು. ಈಗಲೂ ಅವರು ತಮ್ಮ ಫೇಸ್‌ ಬುಕ್‌ ಖಾತೆ ಹ್ಯಾಕ್‌ ಆಗಿತ್ತು ಎಂದು ಯಾರಿಗೂ ದೂರು ಕೊಟ್ಟಿಲ್ಲ.

ಅವರು ದಿಢೀರ್‌ ರಾಜೀನಾಮೆ ಕೊಟ್ಟುದನ್ನು ನೋಡಿದರೆ ತಮ್ಮ ಬಾಧ್ಯತೆಗಳಿಂದ ಓಡಿ ಹೋಗಲು ಆಕೆ ತೀರ್ಮಾನಿಸಿದಂತೆ ಇತ್ತು. ಬಳ್ಳಾರಿ ಜಿಲ್ಲೆಯ ಪೊಲೀಸ್‌ ವರಿಷ್ಠರೂ ಒಬ್ಬ ಯುವಕರು. ಅನುಪಮಾ ಅವರನ್ನು ಭೇಟಿ ಮಾಡಲು ಅವರು ಸಿದ್ಧರಿದ್ದರು. ಆ ಅವಕಾಶವನ್ನೂ ಆಕೆ ಬಳಸಿಕೊಳ್ಳಲಿಲ್ಲ. ಸರ್ಕಾರಕ್ಕೆ ಅವರ ರಾಜೀನಾಮೆ ಒಪ್ಪಿಕೊಳ್ಳದೇ ಬೇರೆ ದಾರಿಯೇ ಇರಲಿಲ್ಲ. ‘ಕೊಟ್ಟ ಕುದುರೆಯನ್ನು ಏರದವಳು ಧೀರಳೂ ಅಲ್ಲ, ಶೂರಳೂ ಅಲ್ಲ’ ಎನ್ನುವಂತೆ ಆಯಿತು.

ಅನುಪಮಾ ಪ್ರತಿಭಾವಂತೆ. ನೇರವಾಗಿ ಡಿವೈ.ಎಸ್.ಪಿ ಹುದ್ದೆಗೆ ಬಿಡಿಗಾಸೂ ಕೊಡದೇ ಆಯ್ಕೆಯಾದವರು. ಬಡ ಕುಟುಂಬದ ಹೆಣ್ಣು ಮಗಳು. ತರಬೇತಿ ಅವಧಿಯಲ್ಲಿ ‘ಅತ್ಯುತ್ತಮ ಅಭ್ಯರ್ಥಿ’ ಎಂದು ಹೆಸರು ಮಾಡಿದವರು. ಹೆಣ್ಣು ಮಕ್ಕಳು ಮುಂದೆ ಬರುವುದು ಎಷ್ಟು ಕಷ್ಟ ಎಂದು ಅವರಿಗಿಂತ ಬೇರೆ ಯಾರಿಗೆ ಗೊತ್ತಿರಲು ಸಾಧ್ಯವಿಲ್ಲ. ಅವರಿಗೆ ಬೇಗ ಐ.ಪಿ.ಎಸ್‌ ಸಿಗುತ್ತಿತ್ತು. ಕನಿಷ್ಠ 20–22 ವರ್ಷಗಳ ಕಾಲ ಅವರು ಐ.ಪಿ.ಎಸ್‌ ಅಧಿಕಾರಿಯಾಗಿ ಜನರ  ಸೇವೆ ಮಾಡಲು ಅವಕಾಶವಿತ್ತು. ಏನಿಲ್ಲವೆಂದರೂ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕಿ (ಎ.ಡಿ.ಜಿ.ಪಿ) ಹುದ್ದೆವರೆಗೆ ತಲುಪಬಹುದಿತ್ತು.

ಅನುಪಮಾ ಕೂಡ್ಲಿಗಿಗೆ ಬಂದ ಕೂಡಲೇ ಅಲ್ಲಿನ ಗೊಲ್ಲರ ಹಟ್ಟಿಗೆ ಹೋಗಿ ಮುಟ್ಟಾದ, ಹೆರಿಗೆಯಾದ ಹೆಣ್ಣು ಮಕ್ಕಳನ್ನು ಅಮಾನುಷವಾಗಿ ನಡೆಸಿಕೊಳ್ಳುವ ಪದ್ಧತಿಗೆ ಕೊನೆ ಹಾಡಲು ಪ್ರಯತ್ನ ಮಾಡಿದ್ದರು. ಒಳ್ಳೆಯ ಛಾಯಾಗ್ರಾಹಕರೂ ಆಗಿರುವ ನಮ್ಮ ಸ್ಥಳೀಯ ವರದಿಗಾರರನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದರು. ಗೊಲ್ಲರ ಹಟ್ಟಿಯಲ್ಲಿನ ಅಮಾಯಕರಿಗೆ ತಿಳಿವಳಿಕೆ ಹೇಳಿದ್ದ ಅನುಪಮಾ, ವಿಷಯಕ್ಕೆ ಆದ್ಯತೆ ಕೊಡಬೇಕೇ ಹೊರತು ತಮ್ಮನ್ನು ವೈಭವಿಸಬಾರದು ಎಂದು ನಮ್ಮ ವರದಿಗಾರರಿಗೆ ಕೋರಿಕೊಂಡಿದ್ದರು. ಅಂದರೆ ಆಕೆಗೆ ಆಗ ಪ್ರಚಾರದ ಹುಚ್ಚು ಇರಲಿಲ್ಲ ಎಂದು ಅರ್ಥ. ಒಬ್ಬ ಡಿವೈ.ಎಸ್‌.ಪಿ ಆಗಿ ಅವರು ಇಂಥ ಎಷ್ಟೆಲ್ಲ ಕೆಲಸಗಳನ್ನು ಮಾಡಬಹುದಿತ್ತು!

ಅವರು ರಾಜೀನಾಮೆ ಸಲ್ಲಿಸುವುದಕ್ಕಿಂತ ಮುಂಚೆ ತಮ್ಮ ಅಧೀನ ಕೆಲಸ ಮಾಡುವ ಒಬ್ಬ ಮಹಿಳಾ ಕಾನ್ಸ್‌ ಟೆಬಲ್‌ಳ ಸ್ಥಿತಿಗತಿ ನೋಡಬೇಕಿತ್ತು. ಆಕೆಗಿಂತ ತಾನು ಎಷ್ಟು ಉತ್ತಮ ಜೀವನ ನಡೆಸುತ್ತಿರುವೆ ಎಂದು ಗಮನಿಸಿಕೊಳ್ಳಬೇಕಿತ್ತು. ಸರ್ಕಾರ ತನಗೆ ಕೊಟ್ಟ ನೌಕರಿಯ ಅವಕಾಶವನ್ನು ಹೇಗೆ ಜನಕಲ್ಯಾಣಕ್ಕೆ ಬಳಸಿಕೊಳ್ಳಬೇಕು ಎಂದು ಯೋಚಿಸಬೇಕಿತ್ತು. ಮೇಲಿನ ಮಾದರಿ ಬೇಕಿದ್ದರೆ ಅವರು ಸೋನಿಯಾ ನಾರಂಗ್‌ ಅವರಂಥ ಹಿರಿಯ ಅಧಿಕಾರಿಯ ಕಡೆ ನೋಡಬೇಕಿತ್ತು. ಸೋನಿಯಾ ನಾರಂಗ್‌ ಕೂಡ ಅನುಪಮಾ ಹಾಗೆಯೇ ಆರಂಭದಲ್ಲಿ ಒಂದು ಉಪವಿಭಾಗದಲ್ಲಿ ಕೆಲಸ ಮಾಡಿದವರು.

ಬಹಳ ಹಾರಾಡುತ್ತಿದ್ದ ಒಬ್ಬ ಶಾಸಕನನ್ನು ಎತ್ತಿ ತಮ್ಮ ಜೀಪಿನಲ್ಲಿ ಹಾಕಿಕೊಂಡು ಠಾಣೆಗೆ ಹೋಗಿ ನೀರಿಳಿಸಿದವರು. ಮತ್ತೆ ಉಸಿರೆತ್ತದಂತೆ ಮಾಡಿದವರು. ತೀರಾ ಈಚೆಗೆ, ಲೋಕಾಯುಕ್ತ ಎಸ್‌.ಪಿ ಆಗಿದ್ದಾಗ ಅಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದ ಬಗೆಗೆ ಉಪಲೋಕಾಯುಕ್ತರಿಗೆ ಒಂದು ಪತ್ರ ಬರೆದು ತಣ್ಣಗೆ ಕುಳಿತವರು.

ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಭಾಸ್ಕರ್‌ ರಾವ್‌ ಅವರು ರಾಜೀನಾಮೆ ಕೊಡಲು, ಅವರ ಮಗ ಅಶ್ವಿನ್‌ ರಾವ್‌, ಲೋಕಾಯುಕ್ತದ ಸಾರ್ವಜನಿಕ ಸಂಪರ್ಕ ಅಧಿಕಾರಿ ಮತ್ತು ಕೆಲವರು ದಲ್ಲಾಳಿಗಳು, ಪತ್ರಕರ್ತರು ಜೈಲಿಗೆ ಹೋಗಲು ಕಾರಣರಾದವರು. ಸೋನಿಯಾ ಅವರು ಬರೆದ ಒಂದು ಪತ್ರ ಇಂಥ ಅದ್ಭುತ ಇತಿಹಾಸವನ್ನೇ ಸೃಷ್ಟಿ ಮಾಡಿತು. ಹಾಗೆಂದು ಸೋನಿಯಾ ಹೆಮ್ಮೆ ಪಟ್ಟುಕೊಂಡು ಊರೆಲ್ಲ ಡಂಗುರ ಹೊಡೆಯುತ್ತ ಓಡಾಡಲಿಲ್ಲ.

ಅವರ ವಿರುದ್ಧ ಮುಖ್ಯಮಂತ್ರಿಗಳು ಆಧಾರವಿಲ್ಲದ ಒಂದು ಆರೋಪ ಮಾಡಿದಾಗ ಅದನ್ನು ಆಕೆ ಬಹಿರಂಗವಾಗಿಯೇ ನಿರಾಕರಿಸುವ ದಿಟ್ಟತನ ತೋರಿಸಿದರು. ಅದರಿಂದ ಅವರಿಗೆ ಯಾವ ತೊಂದರೆಯೂ ಆಗಲಿಲ್ಲ. ಈಗ ಅವರು ಬಡ್ತಿ ಪಡೆದು ರಾಷ್ಟ್ರೀಯ ತನಿಖಾ ದಳಕ್ಕೆ ಹೋಗಿದ್ದಾರೆ. ಅನುಪಮಾ ಕೂಡ ಇನ್ನೊಬ್ಬ ಸೋನಿಯಾ  ನಾರಂಗ್‌ ಆಗಬಹುದಿತ್ತು.

ಈಗ ಪುದಚೇರಿಯ ಲೆಫ್ಟಿನೆಂಟ್‌ ಗವರ್ನರ್‌ ಆಗಿರುವ ಕಿರಣ್‌ ಬೇಡಿ ದೆಹಲಿಯ ತಿಹಾರ್‌ ಜೈಲಿನ ಐ.ಜಿ.ಪಿ ಆಗಿದ್ದಾಗ ಮಾಡಿದ ಕಾರಾಗೃಹ ಸುಧಾರಣೆಗೆ ಮ್ಯಾಗ್ಸೆಸೆ ಪ್ರಶಸ್ತಿ ಅವರನ್ನು  ಹುಡುಕಿಕೊಂಡು ಬಂತು. ಕಿರಣ್‌ ಬೇಡಿಯವರ ಜೊತೆಗೆ ನಮಗೆ ಅನೇಕ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ, ತಿಹಾರ್‌ ಜೈಲಿನಲ್ಲಿ ಅವರು ಮಾಡಿದ ಹಾಗೆ ಯಾವ ಗಂಡಸೂ ಕೆಲಸ ಮಾಡಲಿಲ್ಲ.

ಅನುಪಮಾಗೆ ಐ.ಪಿ.ಎಸ್‌ನಲ್ಲಿ ಮಾತ್ರವಲ್ಲ ಐ.ಎ.ಎಸ್‌ನಲ್ಲಿಯೂ ಬೇಕಾದಷ್ಟು ಒಳ್ಳೆಯ ಮಾದರಿಗಳು ಇದ್ದುವು. ನಾನು ಆ ಹೆಸರುಗಳನ್ನು ಬರೆದರೆ ಅವರಿಗೆ ಸಂಕೋಚ ಆಗಬಹುದು ಎಂದು ಇಲ್ಲಿ ಬರೆಯುತ್ತಿಲ್ಲ. ರಾಜ್ಯದ ಸೇವೆಯಲ್ಲಿ ಇರುವ ಎಷ್ಟು ಐ.ಎ.ಎಸ್‌ ಅಧಿಕಾರಿಗಳಿಗೆ ವಿನಾಕಾರಣ ವರ್ಗ ಆಗಿಲ್ಲ, ಕಿರುಕುಳ ಆಗಿಲ್ಲ? ಅವರನ್ನು ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಚೆಂಡಾಡಿದರೂ ಅವರು ಮರು ಮಾತನಾಡದೇ ಅಲ್ಲಿ ಹೋಗಿ ವರದಿ ಮಾಡಿಕೊಂಡಿದ್ದಾರೆ, ಮತ್ತು ಅಲ್ಲಿ ಏನಾದರೂ ತಮ್ಮ ಗುರುತು ಉಳಿಸುವ ಕೆಲಸ ಮಾಡಬಹುದೇ ಎಂದು ಪ್ರಯತ್ನ ಮಾಡಿದ್ದಾರೆ.

ನನಗೆ ಪರಿಚಯದ ಹಿರಿಯ ಐ.ಎ.ಎಸ್‌ ಅಧಿಕಾರಿಯೊಬ್ಬರು ಒಳ್ಳೆಯ ಇಲಾಖೆಯಿಂದ ಅಷ್ಟೇನೂ ಮುಖ್ಯವಲ್ಲದ ಇಲಾಖೆಗೆ ವರ್ಗವಾಗಿ ಬಂದು ಕೆಲವೇ ತಿಂಗಳಲ್ಲಿ ಎಷ್ಟೊಂದು ಉತ್ತಮ ಕೆಲಸ ಮಾಡಿದರು ಎಂದರೆ ಅಲ್ಲಿಂದಲೂ ಅವರಿಗೆ ವರ್ಗಾವಣೆ ಆದೇಶ ಬಂದಾಗ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಒಬ್ಬ ಮಹಿಳೆ ನನ್ನನ್ನು ಸಂಪರ್ಕಿಸಿ ಗೊಳೋ ಎಂದು ಅತ್ತರು. ಹೇಗಾದರೂ ಮಾಡಿ ತಮ್ಮ ಅಧಿಕಾರಿಯನ್ನು ಉಳಿಸಿಕೊಡಿ ಎಂದು ಕೋರಿಕೊಂಡರು.

ಅವರು ಮಾಡಿದ ಕೆಲಸದ ಪಟ್ಟಿಯನ್ನು ನನಗೆ ಮೇಲ್‌ ಮಾಡಿದರು. ನನ್ನ ಅಸಹಾಯಕತೆಯನ್ನು ಅಥವಾ ಅಂಥ ಕೆಲಸ ಮಾಡಲಾಗದ ಮಿತಿಯನ್ನು ಅವರಿಗೆ ಮನವರಿಕೆ ಮಾಡಿಕೊಡಲು ನನಗೆ ಸಾಕಾಗಿ ಹೋಯಿತು. ಹಾಗೆಂದು ಆ ಅಧಿಕಾರಿ ತಮ್ಮ ಹುದ್ದೆ ತೊರೆದು ಹೋದರೇ? ಈಗಲೂ ಅವರು ಸೇವೆಯಲ್ಲಿ ಇದ್ದಾರೆ.

ಇದು ಭ್ರಷ್ಟ ವ್ಯವಸ್ಥೆ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ, ಒಬ್ಬ ಅಧಿಕಾರಿಗೆ ತಾನು ಭ್ರಷ್ಟನಾಗದೇ ಉಳಿಯಲು ಇದೇ ವ್ಯವಸ್ಥೆ ಅವಕಾಶವನ್ನೂ ಮಾಡಿಕೊಡುತ್ತದೆ. ಅಧಿಕಾರಿಗಳ ನೆರವು  ಇಲ್ಲದೇ ರಾಜಕಾರಣಿಗಳು  ಭ್ರಷ್ಟಾಚಾರ ಮಾಡಲು ಸಾಧ್ಯವಿಲ್ಲ. ಅದೇ ಕಾರಣಕ್ಕಾಗಿ ಅವರು ತಮಗೆ ಬೇಕಾದ ಅಧಿಕಾರಿಗಳನ್ನು ತಮ್ಮ ಕ್ಷೇತ್ರಕ್ಕೆ ಹಾಕಿಕೊಳ್ಳುತ್ತಾರೆ.

ಅವರಿಂದ ಅಭಿವೃದ್ಧಿ ಕೆಲಸ ಮಾಡಿಸಲು ಅನುಕೂಲ ಎಂಬುದೆಲ್ಲ ಶುದ್ಧ ಬೊಗಳೆ. ಆದರೆ, ಒಬ್ಬ ಅಧಿಕಾರಿ ಭ್ರಷ್ಟನಲ್ಲ ಅಥವಾ ಭ್ರಷ್ಟನಾಗಲು ಆಕೆ ಅಥವಾ ಆತ ಸಿದ್ಧರಿಲ್ಲ ಎಂದು ತಿಳಿದರೆ ಯಾವ ರಾಜಕಾರಣಿಯೂ ಅವರ ತಂಟೆಗೆ ಹೋಗುವುದಿಲ್ಲ. ಹೆಚ್ಚೆಂದರೆ ಅವರಿಗೆ ಮತ್ತೆ ಮತ್ತೆ ವರ್ಗ ಆಗಬಹುದು! ಸರ್ಕಾರಿ ನೌಕರಿಗೆ ಸೇರಿದ ಒಬ್ಬ ಪ್ರಾಮಾಣಿಕ ಅಧಿಕಾರಿ ಒಂದು ಕಡೆ ಮನೆ ಮಾಡಿ ಮಗುವಿಗೆ ಒಂದು ಕಡೆ ಶಿಕ್ಷಣಕ್ಕೆ ಸೇರಿಸಿ ಹೆಂಡತಿಯನ್ನು ಜೊತೆ ಮಾಡಿ ಇಟ್ಟು ತಾನು ಸೂಟ್‌ಕೇಸ್‌ ಸಿದ್ಧ ಮಾಡಿಟ್ಟುಕೊಂಡರೆ 30 ವರ್ಷಗಳ ಸೇವಾವಧಿಯಲ್ಲಿ ಕನಿಷ್ಠ 60 ಊರುಗಳನ್ನು ಸರ್ಕಾರಿ ವೆಚ್ಚದಲ್ಲಿ ನೋಡಿಕೊಂಡು ಬರಬಹುದು! ಯಾರಿಗುಂಟು ಯಾರಿಗಿಲ್ಲ!

ಒಬ್ಬ ಪ್ರಾಮಾಣಿಕ ಅಧಿಕಾರಿಯನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳದೇ ಇದ್ದರೆ ಅದು ಆ ಸರ್ಕಾರದ ಅಯೋಗ್ಯತನವನ್ನು ತೋರಿಸುತ್ತದೆಯೇ ಹೊರತು ಇನ್ನೇನನ್ನೂ ಅಲ್ಲ. ರಾಜಕಾರಣಿಗಳಿಗೆ ಐದೇ ವರ್ಷ. ಮುಂದಿನದು ಜನರ ಕೃಪೆ. ಅಧಿಕಾರಿಗಳದು ಹಾಗೆ ಅಲ್ಲ. ಒಂದು ಸಾರಿ ನೇಮಕವಾದರೆ ಕನಿಷ್ಠ ಮೂವತ್ತು ವರ್ಷಗಳ ಕಾಲ ಅವರು ಅಧಿಕಾರದಲ್ಲಿ ಇರಬಹುದು. ಎಷ್ಟೊಂದು ಅಧಿಕಾರ! ಎಷ್ಟೊಂದು ಸವಲತ್ತು! ಅದೇ ಅಧಿಕಾರಕ್ಕಾಗಿ, ಸವಲತ್ತಿಗಾಗಿ ಎಷ್ಟೊಂದು ಜನರು ಹೊರಗೆ ನಿಂತು ಕಾಯುತ್ತಿಲ್ಲ!

ಸರ್ಕಾರಿ ವ್ಯವಸ್ಥೆಯಲ್ಲಿಯೇ ಅನುಪಮಾ ಅವರಿಗೆ ಬೇಕಾದಷ್ಟು ನಮ್ರ ಮಾದರಿಗಳು ಇದ್ದುವು, ಪರಿಹಾರ ಕೇಳುವ,  ಪಡೆಯುವ ಮಾರ್ಗಗಳು ಇದ್ದುವು. ಆದರೆ, ಅವರು ‘ಹೀರೋಯಿಸಂ’ ಹಿಂದೆ ಬಿದ್ದಿದ್ದರು ಎಂದು ಅನಿಸುತ್ತದೆ. ಅವರು ರಾಜೀನಾಮೆ ಕೊಟ್ಟು ಹೋಗುವಾಗ ನೆನಪಿಸಿಕೊಂಡ ಒಬ್ಬ ಅಧಿಕಾರಿ ಕೂಡ ಹೀಗೆಯೇ ‘ಹೀರೋಯಿಸಂ’ ಬೆನ್ನು ಹತ್ತಿದವರು. ಅನುಪಮಾ ಬೆನ್ನು ಹತ್ತಿದ್ದು ಸೋಲಿನ ಮಾದರಿ. ಸೋಲನ್ನು ಬೆನ್ನು ಹತ್ತಿದರೆ ಹೀಗೇ ಆಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT