ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಿಸು ಬಾ ಎಂದ ಗುರುವಿಗೆ ಶರಣು ಎಂದೆ

Last Updated 7 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನಾನಿನ್ನೂ ಆಗ ಒಂಬತ್ತನೇ ಅಥವಾ ಹತ್ತನೇ ತರಗತಿ ವಿದ್ಯಾರ್ಥಿ. 60ನೇ ದಶಕದ ಕೊನೆಯ ಒಂದೆರಡು ವರ್ಷಗಳು ಇರಬೇಕು. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಬಿಟ್ಟು ಕೊಡಬಾರದು ಎಂದು ರಾಜ್ಯದಲ್ಲಿ ನಿಜವಾಗಿಯೂ ಉಗ್ರ ಚಳವಳಿ ನಡೆಯುತ್ತಿದ್ದ ಕಾಲ ಅದು! ಅದೇ ಕಾರಣಕ್ಕೆ ಬೆಂಗಳೂರಿನಲ್ಲಿ ಗೋವಿಂದರಾಜ ಎಂಬುವರು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ (?) ಮಾಡಿಕೊಂಡರು. ಚಳವಳಿ ಮತ್ತಷ್ಟು ಉಗ್ರವಾಯಿತು. ಎಲ್ಲ ಊರಿನಲ್ಲಿ ಜನರು ಧರಣಿ ಮಾಡಿದರು. ಮೆರವಣಿಗೆ ಮಾಡಿದರು. ಉಪವಾಸ ಕುಳಿತರು.

ನಮ್ಮ ಊರಿನ ಗ್ರಾಮದೇವತೆಯ ಕಟ್ಟೆಯ ಮೇಲೆ ಸರದಿ ಉಪವಾಸ ಏರ್ಪಾಟಾಗಿತ್ತು. ಏನು ಅನಿಸಿತೋ ಏನೋ ಗೊತ್ತಿಲ್ಲ. ನಾನೂ ಉಪವಾಸದಲ್ಲಿ ಭಾಗವಹಿಸಿದೆ. ಚಿಕ್ಕ ವಯಸ್ಸು. 24 ಗಂಟೆಗಳ ಸತತ ಉಪವಾಸ ತಡೆಯುವ ಶಕ್ತಿ ಇರಲಿಲ್ಲ. ಆದರೆ, ಸತ್ಯಾಗ್ರಹ ಶಿಬಿರದ ಮುಂದೆ ಇಟ್ಟ ದೊಡ್ಡ ಕಪ್ಪು ಹಲಗೆಯಲ್ಲಿ ನನ್ನ ಹೆಸರು ನೋಡಿ ಹೆಮ್ಮೆ ಅನಿಸಿತ್ತು.

ಮರುದಿನ ಶಾಲೆಗೆ ಹೋದೆ. ನನ್ನ ವಿಜ್ಞಾನ ಗುರುಗಳಾದ ಎ.ಬಿ.ಯರ್ನಾಳ ಅವರು ನನಗೆ ಎದ್ದು ನಿಲ್ಲಲು ಹೇಳಿದರು. ಕೆಂಪಗಿನ ಅವರ ಮುಖ ಮತ್ತಷ್ಟು ಕೆಂಪಗಾಗಿತ್ತು. `ಬೆಳಗಾವಿ ಗಡಿ ವಿವಾದದ ಬಗ್ಗೆ ನಿನಗೆ ಏನು ಗೊತ್ತಿದೆ' ಎಂದು ಕೇಳಿದರು. ನನಗೆ ಏನೂ ಗೊತ್ತಿರಲಿಲ್ಲ. `ಮತ್ತೆ ನೀನು ಏಕೆ ಉಪವಾಸ ಕುಳಿತೆ' ಎಂದು ಕೇಳಿದರು. ಅದಕ್ಕೂ ನನ್ನ ಬಳಿ ಸ್ಪಷ್ಟ ಉತ್ತರ ಇರಲಿಲ್ಲ. ಏನೋ ಅಷ್ಟಿಷ್ಟು ಪೇಪರಿನಲ್ಲಿ ಓದಿದ್ದೆ. ಹೇಳಲು ಧೈರ್ಯ ಸಾಲಲಿಲ್ಲ.

`ನಿನ್ನ ಬಗ್ಗೆ ನನಗೆ ಹೆಮ್ಮೆ ಇದೆ. ನನ್ನ ತರಗತಿಯಲ್ಲಿ ನೀನು ಒಬ್ಬನೇ ಹಾಗೆ ಉಪವಾಸ ಕುಳಿತುದು. ಇಡೀ ದಿನ ನೀನು ಏನೂ ತಿಂದಿಲ್ಲ ಎಂದೂ ನನಗೆ ಗೊತ್ತಿದೆ. ಆದರೆ, ನೀನು ಮಾಡಿದ್ದು ಸರಿಯಲ್ಲ. ನಿನ್ನ ಕ್ರಿಯೆಗಳಿಗೆ ಒಂದು ಅರ್ಥ ಇರಬೇಕು. ಯಾರೋ ಹೇಳಿದರು ಎಂದು ಹೀಗೆ ಮಾಡಿದರೆ ನೀನು ಉದ್ಧಾರವಾದಂತೆಯೇ' ಎಂದು ಒಂದು ಇಡೀ ಪೀರಿಯಡ್ ಬುದ್ಧಿ ಹೇಳಿದರು. ಪೆಚ್ಚು ಅನಿಸಿತು. ಆದರೆ, ನಾನು ನನ್ನ ಜೀವನದಲ್ಲಿ ಮತ್ತೆ ಅಂಥ ತಪ್ಪು ಮಾಡಲಿಲ್ಲ.

ಮೊನ್ನೆ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ನಾನು ಮತ್ತು ಕವಿ ಎಚ್.ಎಸ್.ವೆಂಕಟೇಶಮೂರ್ತಿ, ಸುರಾನಾ ಕಾಲೇಜಿನಲ್ಲಿ ಗುರುವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು. ಅತ್ತ ಎಚ್.ಎಸ್.ವಿ ಅವರಿಗೆ ಗುರುವಂದನೆ ನಡೆಯುತ್ತಿದ್ದಾಗ ಇತ್ತ ನನ್ನ ಗುರುಗಳು ಚಿತ್ತಭಿತ್ತಿಯ ಮೇಲೆ ಸಾಲಾಗಿ ಬಂದು ಹೋದರು. ಮನಸ್ಸು ಮೃದುವಾಗುತ್ತ ಹೋಯಿತು.

ಎಂಥೆಂಥ ಶಿಕ್ಷಕರು ನಮಗೆ ಕಲಿಸಿದರು ಎಂದು ಅಂದುಕೊಂಡೆ. ಯರ್ನಾಳ ಗುರುಗಳು ಮೊನ್ನೆ ಮೊನ್ನೆ ತೀರಿಕೊಂಡರು. ಅವರು ಉಗ್ರ ಸಿಟ್ಟಿನ ಶಿಕ್ಷಕರಾಗಿದ್ದರು. ವಿಜ್ಞಾನ ಮತ್ತು ಗಣಿತ ಹೇಳಿಕೊಡುವುದರಲ್ಲಿ ಅಷ್ಟೇ ಎತ್ತಿದ ಕೈಯಾಗಿದ್ದರು. ಯಾವ ತಪ್ಪನ್ನೂ ಕ್ಷಮಿಸುತ್ತಿರಲಿಲ್ಲ. ಯಾರೂ ಅವರ ಜತೆಗೆ ಸಲಿಗೆಯಿಂದ ನಡೆದುಕೊಳ್ಳುವ ಧೈರ್ಯ ಮಾಡುತ್ತಿರಲಿಲ್ಲ. ಅವರು ಅಲ್ಲಿ ಬರುತ್ತಾರೆ ಎಂದರೆ ಇಲ್ಲಿ ತಲೆ ಮರೆಸಿಕೊಂಡು ಓಡಿ ಮೂಲೆ ಸೇರಿ ಬಿಡುತ್ತಿದ್ದೆವು. ನನ್ನ ಈ ಶಿಕ್ಷಕರ ಹೆಸರನ್ನು ಎಷ್ಟು ಜನರು ಕೇಳಿದ್ದಾರೋ ಗೊತ್ತಿಲ್ಲ. ಅವರ ಶಿಷ್ಯಂದಿರು ಜೀವನದಲ್ಲಿ ಏನೇನೋ ಆದರು. ಆದರೆ ಆ ಗುರು ತಮ್ಮ ಹಳ್ಳಿಯಲ್ಲಿಯೇ ಉಳಿದುಕೊಂಡು ಜೀವ ತೇದರು.

ನಾವು ಒಂದೊಂದು ತರಗತಿಯಿಂದ ತೇರ್ಗಡೆಯಾಗುತ್ತ ಹೋದಂತೆ ಶಿಕ್ಷಕರು ಹಿಂದೆ ಉಳಿಯುತ್ತ ಹೋಗುತ್ತಾರೆ. ಮತ್ತೆ ಅವರನ್ನು ಯಾವಾಗ ಭೇಟಿಯಾಗುತ್ತೇವೆಯೋ ಏನೋ? ನಮ್ಮ ಜೀವನ ನಮ್ಮನ್ನು ಯಾವುದೋ ದಾರಿಯಲ್ಲಿ ಯಾವುದೋ ಊರಿಗೆ ಎಳೆದುಕೊಂಡು ಹೋಗುತ್ತದೆ. ನಲವತ್ತು ವರ್ಷಗಳ ನಂತರ ಮತ್ತೆ ಯರ್ನಾಳ ಗುರುಗಳನ್ನು ನಮ್ಮ ಊರಿನಲ್ಲಿಯೇ ಭೇಟಿ ಮಾಡಿದ್ದೆ. ವಯಸ್ಸಿನಿಂದ ಹಣ್ಣಾಗಿದ್ದಂತೆ ಕಂಡರು. ಒಂದೆರಡು ಮಾತನಾಡಿದೆ. ತಲೆಯ ಮೇಲೆ ಕೈ ಸವರಿ ಹೊರಟು ಹೋದರು. ಅವರಿಗೆ ನನ್ನ ಯಾವ ನೆನಪೂ ಇರಲಿಲ್ಲ.

ಅವರಂಥವರೇ ಮತ್ತೊಬ್ಬ ಗುರುಗಳು, ಎನ್.ಎಚ್. ಹಿರೇಕುರುಬರ ಎಂದು ಅವರ ಹೆಸರು. ಅವರೂ ಮೊನ್ನೆ ಮೊನ್ನೆ ತೀರಿಕೊಂಡರು. ಕುಳ್ಳ ಆಕೃತಿ. ಗಟ್ಟಿ ಶಾರೀರ. ಅದ್ಭುತವಾಗಿ ಮಹಾಭಾರತದ ಕಥೆ ಹೇಳುತ್ತಿದ್ದರು. ಇತಿಹಾಸ ಪಾಠದಲ್ಲಿ ಅವರು ಎತ್ತಿದ ಕೈ. ಪ್ರತಿದಿನ ಗ್ರಂಥಾಲಯಕ್ಕೆ ಬರುತ್ತಿದ್ದರು. `ಇಲ್ಲಸ್ಟ್ಟ್ರೆಟೆಡ್ ವೀಕ್ಲಿ' ಪತ್ರಿಕೆಯನ್ನು ಮಡಿಚಿ ಎದೆಯ ಮೇಲೆ ಹಿಡಿದುಕೊಂಡು ಅವರು ಗ್ರಂಥಾಲಯದಿಂದ ಹೊರಗೆ ಬರುತ್ತಿದ್ದ ದೃಶ್ಯ ಈಗಲೂ ಹಾಗೆಯೇ ಕಣ್ಣ ಮುಂದೆ ಕಟ್ಟಿದಂತೆ ಇದೆ. ಅವರದು ಕಪ್ಪುದೇಹ. ಆದರೆ, ಸದಾ ಶುಭ್ರ ಶ್ವೇತ ವಸನಧಾರಿ. ತಲೆಯ ಮೇಲೆ ನಶ್ಯದ ಬಣ್ಣದ ಟೊಪ್ಪಿಗೆ ಧರಿಸಿರುತ್ತಿದ್ದರು. ಅವರು ನಮ್ಮನ್ನು ಕೇವಲ ಪಠ್ಯದ ಹುಳುಗಳಾಗದಂತೆ ಗ್ರಂಥಾಲಯದ ಕಡೆಗೆ ಸೆಳೆದರೇ ಎಂದು ಈಗ ಅನಿಸುತ್ತದೆ.

ಒಂದು ಸಾರಿ ಗ್ರಂಥಾಲಯದ ಒಳಗೆ ಹೊಕ್ಕ ನಾನು ಹೊರಗೆ ಬರಲೇ ಇಲ್ಲ. ನನ್ನ ಬದುಕಿನ ದಾರಿ ಬೇರೆಯೇ ಆಯಿತು. ಗ್ರಂಥಾಲಯದ ಕಡೆಗೆ ಬರದ ನನ್ನ ಗೆಳೆಯರು ಎಂಜಿನಿಯರುಗಳು ಮತ್ತು ವೈದ್ಯರು ಆದರು! ಸದಾ ಗರಿ ಗರಿಯಾದ ಧೋತರ, ಬಿಳಿ ಅಂಗಿ, ಅದರ ಮೇಲೆ ಒಂದು ಕಪ್ಪು ಕೋಟು ಧರಿಸಿ ಪಾಠ ಮಾಡುತ್ತಿದ್ದ  ಸಿ.ಎಸ್.ಹಿರೇಮಠ ಗುರುಗಳು ಕನ್ನಡದ ಪ್ರೀತಿಯನ್ನು ಬೆಳೆಸಿದರು. ಶುದ್ಧ ಬರವಣಿಗೆಯ ಮಹತ್ವ ಹೇಳಿಕೊಟ್ಟರು. ಅವರೂ ತೀರಿಕೊಂಡರು. ಇಂಗ್ಲಿಷ್ ಕಲಿಸುತ್ತಿದ್ದ ಎಸ್.ಬಿ.ಕನ್ನೂರ್ ಗುರುಗಳು `ಧರ್ಮೋ ರಕ್ಷತಿ ರಕ್ಷಿತಃ' ಎಂದರು. ಅವರು ಈಗಲೂ ಇದ್ದಾರೆ. ಆಗೀಗ ಮಾತನಾಡುತ್ತಾರೆ. ಇವರೆಲ್ಲರೂ ಹೈಸ್ಕೂಲಿನಲ್ಲಿಯೇ ನಮಗೆ ಪಾಠ ಮಾಡಿದವರು. ಎಲ್ಲ ಅರ್ಥದಲ್ಲಿಯೂ ಪಾಯ ಸರಿಯಾಗಿಯೇ ಬಿತ್ತು ಎಂದು ಅನಿಸುತ್ತದೆ.

ಬಿ.ಎ ದಲ್ಲಿ ಓದುತ್ತಿದ್ದಾಗ ನನ್ನನ್ನು ಒಬ್ಬ ಕಾಲೇಜು ಶಿಕ್ಷಕನಾಗಿ ಮಾಡಬೇಕು ಎಂದು ಮತ್ತೊಬ್ಬ ಸಿ.ಎಸ್.ಹಿರೇಮಠರು ಏನೆಲ್ಲ ಮಾಡಿದರು. ಅವರ ಪ್ರಯತ್ನ ಕೈಗೂಡಲಿಲ್ಲ. ಅವರ ಒತ್ತಾಸೆಯಿಂದ ನಾನು ಕನ್ನಡದಲ್ಲಿ ಎಂ.ಎ ಮಾಡುವುದು ಮಾತ್ರ ಸಾಧ್ಯವಾಯಿತು. ಅದೇ ಕಾಲೇಜಿನಲ್ಲಿ ಹಿಂದಿ ಪಾಠ ಮಾಡುತ್ತಿದ್ದ ಎ.ಎ.ಸನದಿಯವರು ಒಂದು ದಿನ ತಮ್ಮ ಮನೆಗೆ ಕರೆದು ಗೋಪಾಲಕೃಷ್ಣ ಅಡಿಗರು ಸಂಪಾದಿಸುತ್ತಿದ್ದ `ಸಾಕ್ಷಿ' ಸಂಚಿಕೆಗಳನ್ನು ಕೊಟ್ಟು ಓದಲು ಹೇಳಿದರು. ಆ ಮೂಲಕ ಅವರು ನನ್ನ ಓದಿನ, ಚಿಂತನೆಯ, ಬರವಣಿಗೆಯ ದಾರಿಯನ್ನೇ ಬದಲಿಸಿದರು. ಮತ್ತೆ ಮೂವತ್ತು ವರ್ಷಗಳು ಕಳೆದು ಹೋದುವು. ಹಿರೇಮಠರನ್ನು ಮತ್ತೆ ಭೇಟಿ ಮಾಡಲು ಆಗಲಿಲ್ಲ. ಅವರೂ ಧಾರವಾಡದ ಬಳಿಯ ಒಂದು ಹಳ್ಳಿಯಲ್ಲಿ ವಾಸವಾಗಿದ್ದಾರಂತೆ. ಸನದಿಯವರೂ ತೀರಿಕೊಂಡರು.

ಎಂ.ಎ ಓದುವಾಗ ಎಂ.ಎಂ.ಕಲಬುರ್ಗಿಯವರು ಎರಡೂ ವರ್ಷ ನಮಗೆ ಕಲಿಸಿದರು. ಕೆಂಡದಂಥ ಆ ಮನುಷ್ಯ ನನ್ನ ಉಡಾಳತನವನ್ನು ಗಮನಿಸಿದರು. ಆದರೆ, ಅದಕ್ಕಾಗಿ ಅವರು ನನ್ನನ್ನು ಶಿಕ್ಷಿಸಲಿಲ್ಲ. ಈಗಲೂ ಅವರು ನನ್ನನ್ನು ತಮ್ಮ ಉಡಾಳ ಶಿಷ್ಯ ಎಂದೇ ತಿಳಿದಿದ್ದಾರೆ. ಯಾರಿಗಾದರೂ ಪರಿಚಯಿಸುವಾಗ ಹಾಗೆಯೇ ಪರಿಚಯಿಸುತ್ತಾರೆ! ಈಗ ನಾನು ಏನಾದರೂ ಆಗಿದ್ದರೆ ಅದಕ್ಕೆ ಅವರು ಕಾರಣ, ಅವರು ಮಾಡಿದ ಪಾಠ ಕಾರಣ. ಅವರು ಕಲಿಸಿದ ಶೀಲ ಕಾರಣ. ನಿಷ್ಠುರತೆ ಕಾರಣ. ಅವರಿಗೆ ತನ್ನ ಈ ಶಿಷ್ಯ ಹಾಳಾಗಲಾರ ಎಂಬ ಭರವಸೆ ಇತ್ತೇ? ಗೊತ್ತಿಲ್ಲ. ಭದ್ರ ಪಾಯದ ಮೇಲೆ ಕಟ್ಟಡವೂ ಗಟ್ಟಿಯಾಗಿ ನಿಂತುಕೊಂಡಿತು!

ವೇದಿಕೆ ಮೇಲೆ ವೆಂಕಟೇಶಮೂರ್ತಿಯವರು ಕವಿ ಕುಮಾರವ್ಯಾಸ ಹೇಳಿದ `ಆಚಾರ್ಯಪಥ ಮದ'ದ ಬಗೆಗೆ ಮಾತನಾಡುತ್ತಿದ್ದರು. ತನ್ನ ಗುರುಗಳು ಇಂಥವರು ಎಂದೆಲ್ಲ ಹೇಳುವುದು ಒಂದು `ಮದ'. ಕುಮಾರವ್ಯಾಸ ಹೇಳಿದ್ದು ಆ ಮದವನ್ನು! ವೆಂಕಟೇಶಮೂರ್ತಿಯವರೂ ತಮ್ಮ ಗುರುಗಳ ಹೆಸರುಗಳನ್ನು ಹೇಳುತ್ತ ಹೋದರು. ಅವರ ಮುಖದಲ್ಲಿ ಅದೇ ಹೆಮ್ಮೆಯ ಕಾಂತಿ. ಮಾತಿನಲ್ಲಿ ಅದೇ ಮದದ ಸೋಂಕು! ನಿಂತ ನಿಲುವಿನಲ್ಲಿ ಕುಣಿತ.

ಕುವೆಂಪು ನನ್ನ ಗುರುಗಳಾಗಿದ್ದರು, ಡಿ.ಎಲ್.ನರಸಿಂಹಾಚಾರ್ಯರು ನನ್ನ ಗುರುಗಳಾಗಿದ್ದರು ಎಂದು ಹೇಳುವವರ `ಮದ'ವನ್ನು ನಾನೂ ನೋಡಿದ್ದೇನೆ. ಕುವೆಂಪು ಅವರಿಗೂ ತಮ್ಮ ಗುರು ಟಿ.ಎಸ್.ವೆಂಕಣ್ಣಯ್ಯ ಅವರ ಬಗೆಗೆ ಇದೇ ಮದ ಇತ್ತು!. ಕಲಬುರ್ಗಿಯವರು ನನ್ನ ಗುರುಗಳು ಎಂದು ಹೇಳುವಾಗ ನನ್ನ `ಮದ'ವೇನೂ ಹಾಗೆ ಹೇಳುವವರಿಗಿಂತ ಕಡಿಮೆಯಿಲ್ಲ. ಆದರೆ, ಯರ್ನಾಳರು, ಹಿರೇಕುರುಬರರು, ಹಿರೇಮಠರು, ಕನ್ನೂರರು ಎಂಬಂಥ `ಅನಾಮಿಕರು' ನನ್ನ ಗುರುಗಳು ಎಂದು ಹೇಳುವಾಗಲೂ ನನಗೆ ಅದೇ `ಮದ' ಇದೆ.

ಎಚ್.ಎಸ್.ವಿ ಅವರು ಆಚಾರ್ಯ ಪಥ ಮದದ ಜತೆಗೆ `ಶಿಷ್ಯ ಪಥ ಮದ'ವನ್ನೂ ಸೇರಿಸಿದರು. ಉತ್ತುಂಗ ಸ್ಥಾನಕ್ಕೆ ಹೋದ ತಮ್ಮ ಶಿಷ್ಯರ ಹೆಸರುಗಳನ್ನು ಪ್ರಸ್ತಾಪ ಮಾಡಿದರು. ತನ್ನ ಗುರುಗಳು ಇಂಥವರು ಎಂಬ ಮದ ಎಲ್ಲ ಶಿಷ್ಯರಿಗೂ ಇರುವ ಹಾಗೆಯೇ ಗುರುವಿಗೆ ತನ್ನ ಶಿಷ್ಯರು ಇಂಥಿಂಥವರು ಎಂಬ ಮದವೂ ಇರುತ್ತದೆ. ಶಿಷ್ಯನಾದವನಿಗೆ ಇನ್ನೂ ಏನೇನೋ ಮದಗಳು ಇರಬಹುದು!
 

ಆದರೆ, ಗುರುವಿಗೆ ಇರುವ ಮದ ತನ್ನ ಶಿಷ್ಯ ಇಂಥವನು ಎಂಬುದು ಮಾತ್ರ. ಏಕೆಂದರೆ ಗುರು ಇದ್ದಲ್ಲಿಯೇ ಇರುತ್ತಾನೆ. ಶಿಷ್ಯ ಮಾತ್ರ ಎಲ್ಲಿಂದ ಎಲ್ಲಿಗೋ ಹೋಗುತ್ತಾನೆ. ಯಾವ ಯಾವ ಪದವಿಯಲ್ಲಿಯೋ ಹೋಗಿ ಕುಳಿತು ಬಿಡುತ್ತಾನೆ. ಹಾಗೆ ಎಲ್ಲಿಗೋ ಹೋದ, ಯಾವ ಪದವಿಯನ್ನೋ ಹಿಡಿದ ಶಿಷ್ಯ ಬಂದು ತನ್ನನ್ನು ಸೋಲಿಸಲಿ ಎಂದು ಗುರು ಬಯಸುತ್ತ ಇರುತ್ತಾನೆ. ಅದು ಗುರುವಿನ ಹಿರಿಮೆ, ಹೆಮ್ಮೆ. ತನ್ನ ನಿಜವಾದ ಗುರುವನ್ನು ಸೋಲಿಸಬೇಕು ಎಂದು ಯಾವ ಶಿಷ್ಯ ತಾನೇ ಬಯಸುತ್ತಾನೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT