ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಹಾರ್ದತೆಗಾಗಿ ಸಹಭಾಗಿತ್ವದ ಶಾಂತಿಯಾತ್ರೆ

Last Updated 16 ಜೂನ್ 2018, 9:16 IST
ಅಕ್ಷರ ಗಾತ್ರ

ಗುಜರಾತ್ ಗಲಭೆಗಳ ( 2002) ನಂತರ, ನೋವುಂಡ ಸಮುದಾಯಗಳ ಗಾಯಗಳನ್ನು ಮಾಯಿಸಲು ವಿವಿಧ ಪಕ್ಷಗಳು ಒಗ್ಗೂಡಿ ಕೆಲಸ ಮಾಡಬೇಕೆಂದು ಆಗ ರಾಜ್ಯಸಭೆಯ ಸದಸ್ಯರಾಗಿದ್ದ ನಾನಾಜಿ ದೇಶ್‌ಮುಖ್ ಒತ್ತಾಯಿಸಿದ್ದರು.

ಹಿಂಸಾಚಾರದ ವ್ಯಾಪಕತೆ ಅರಿವಾಗುತ್ತಿದ್ದಂತೆಯೇ `ಪ್ರಧಾನಿ ಮತ್ತು ಪ್ರತಿಪಕ್ಷದ ನಾಯಕರು ಒಟ್ಟಾಗಿ ಅಹಮದಾಬಾದ್‌ಗೆ  ಬಂದು ಕೋಮುಸೌಹಾರ್ದದ ವಾತಾವರಣ ಕಲುಷಿತವಾಗಲು ಬಿಡುವುದಿಲ್ಲ ಎಂಬಂತಹ ಸಂದೇಶವನ್ನು ಗಲಭೆಪೀಡಿತ ಪ್ರದೇಶಗಳಲ್ಲಿ ಸಂಚರಿಸಿ ಜನರಿಗೆ ನೀಡಬೇಕಿತ್ತು~ ಎಂದು ಸಮಾಜ ಕಾರ್ಯಕರ್ತರೂ ಆಗಿದ್ದ ಈ ರಾಜಕಾರಣಿ ಆಗ ಹೇಳಿದ್ದರು.
 
ಅಟಲ್‌ಬಿಹಾರಿ ವಾಜಪೇಯಿ ಹಾಗೂ ಸೋನಿಯಾ ಗಾಂಧಿ `ಗಲಭೆಪೀಡಿತ ಪ್ರದೇಶಗಳಿಗೆಲ್ಲಾ ಜತೆಯಾಗಿ ಹೋಗಿದ್ದರೆ, ಆಗ ಎರಡೂ ಕಡೆಯಲ್ಲಿನ ವಿಷ ಗಾಳಿಯನ್ನು ಹೊರಹಾಕಿರಬಹುದಿತ್ತು~ ಎಂದು ದೇಶ್‌ಮುಖ್ ಹೇಳಿದ್ದರು.

 ನಾನಾಜಿ ದೇಶ್‌ಮುಖ್ ಅವರ ಈ ಮನವಿ ತಾನೇತಾನಾಗಿ ಹೃದಯದಿಂದ ಬಂದದ್ದಾಗಿತ್ತು. ಇತಿಹಾಸದಲ್ಲಿ ಈ ತರಹದ್ದು ಈ ಹಿಂದೆಯೂ ನಡೆದಿತ್ತೆ ಎಂಬುದನ್ನು ಅವರು ಆಲೋಚಿಸಿಯೂ ಇರಲಾರರು.

ಹೀಗಿದ್ದೂ ಕನಿಷ್ಠ ಇಂತಹ ಮೂರು ಪ್ರಸಂಗಗಳು ಇತಿಹಾಸದಲ್ಲಿವೆ. 1947ರ ಆಗಸ್ಟ್‌ನಲ್ಲಿ, ಕೊಲ್ಕೊತ್ತಾದಲ್ಲಿ ಕೋಮು ಹಿಂಸಾಚಾರ ನಿಲ್ಲಿಸಲು  ಶಾಂತಿಯಾತ್ರೆ ಹಾಗೂ ಉಪವಾಸ ಸತ್ಯಾಗ್ರಹ ನಡೆಸಲು ತಮ್ಮ ಜೊತೆ ಬರಬೇಕೆಂದು ಮಹಾತ್ಮಾ ಗಾಂಧಿ ಆಗಿನ ಬಂಗಾಳದ ಮುಖ್ಯಮಂತ್ರಿ ಎಚ್. ಎಸ್. ಸುಹ್ರಾವಾರ್ಡಿ ಅವರನ್ನು ಆಹ್ವಾನಿಸಿದ್ದರು.

ಉತ್ತರ ಕೊಲ್ಕೊತ್ತಾದ ಬೆಲಿಯಾಘಟದ ಬಡಾವಣೆಯ `ಹೈದಾರಿ ಮಂಝಿಲ್~ನಲ್ಲಿ  ಗಾಂಧಿ ಹಾಗೂ ಸುಹ್ರಾವಾರ್ಡಿ ಅನೇಕ ದಿನಗಳು ಒಟ್ಟಾಗಿ ಕಳೆದಿದ್ದರು. ಅಚ್ಚರಿಯ ಸಂಗತಿ ಎಂದರೆ ಈ ಶಾಂತಿಯಾತ್ರೆಯ ಪ್ರಾಯಶ್ಚಿತ್ತ ಕ್ರಮದಿಂದ ದಂಗೆಕೋರರಿಗೇ ನಾಚಿಕೆಯಾಗಿ ತಮ್ಮ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ ಶರಣಾಗತರಾಗಿದ್ದರು. ವೈರಿಯ ಬಳಿ ಸಾರಿ ಗಲಭೆಪೀಡಿತ ನಗರಕ್ಕೆ ಶಾಂತಿಯನ್ನು ಗಾಂಧಿ ತಂದಿದ್ದರು.

ಕೋಮು ಸೌಹಾರ್ದಕ್ಕೆ ಸಂಬಂಧಿಸಿದಂತೆ ಗಾಂಧಿ - ಸುಹ್ರಾವಾರ್ಡಿ ಪ್ರಯೋಗ  ಸಾಧಾರಣವಾಗಿ ಚೆನ್ನಾಗಿಯೇ ಗೊತ್ತಿರುವಂತಹದ್ದು. ರಿಚರ್ಡ್ ಅಟೆನ್‌ಬರೊ ಅವರ ಪ್ರಸಿದ್ಧ ಸಿನಿಮಾದಲ್ಲಿಯೂ ಈ ಪ್ರಸಂಗ ಬರುತ್ತದೆ. ಜೊತೆಗೆ ಬಹು ಮಾರಾಟ ಕಂಡ ಅತ್ಯಂತ ಜನಪ್ರಿಯ ಪುಸ್ತಕ `ಫ್ರೀಡಂ ಅಟ್ ಮಿಡ್‌ನೈಟ್~ ಪುಸ್ತಕದಲ್ಲೂ ವಿವರವಾಗಿ  ಈ ಪ್ರಸಂಗ ಚಿತ್ರಿತವಾಗಿದೆ.
 
ಆದರೆ ಇಂತಹದೇ ಇನ್ನಿತರ ಎರಡು ಪ್ರಯೋಗಗಳು ಇಂದು ಮರೆತುಹೋಗಿವೆ. ಇದಕ್ಕೆ ಅವು ಯಶಸ್ವಿಯಾಗಲಿಲ್ಲ ಎಂಬುದು ಭಾಗಶಃ ಕಾರಣ. ಉಪಖಂಡದ ಪೂರ್ವ ಭಾಗದಲ್ಲಿ ಗಲಭೆ ಹತ್ತಿಕ್ಕಲು ಗಾಂಧಿ ನೆರವು ನೀಡಿದ್ದರೆ, ಪಶ್ಚಿಮ ಭಾಗದಲ್ಲಿ ರಕ್ತಪಾತ  ಮುಂದುವರಿದಿತ್ತು.

ಪಶ್ಚಿಮ ಪಂಜಾಬ್‌ನಲ್ಲಿ ಸಿಖ್ಖರು ಹಾಗೂ ಹಿಂದೂಗಳನ್ನು ಹತ್ಯೆ ಮಾಡಲಾಯಿತು ಅಥವಾ ಅಲ್ಲಿಂದ ಹೊರಹಾಕಲಾಯಿತು. ಹಾಗೆಯೇ ಪೂರ್ವ ಪಂಜಾಬ್‌ನಿಂದ ಮುಸ್ಲಿಮರನ್ನು ಅಷ್ಟೇ ಮಟ್ಟದ ಅನಾಗರೀಕತೆಯಿಂದ ಕೊಲ್ಲಲಾಯಿತು ಅಥವಾ ಹೊರದಬ್ಬಲಾಯಿತು. 

ಹತಾಶೆಯಿಂದ, ಇಬ್ಬರು ಮುಸ್ಲಿಂ ಲೀಗ್ ನಾಯಕರಾದ ಚೌಧರಿ ಖಾಲಿಕ್ವುಝಮನ್ ಹಾಗೂ ಈ ಹಿಂದೆ ಹೆಸರಿಸಲಾದ ಸುಹ್ರವಾರ್ಡಿಯವರು ಶಾಂತಿಗಾಗಿ ಮನವಿಯ ಕರಡನ್ನು ಸಿದ್ಧ ಪಡಿಸಿದ್ದರು. ಇವನ್ನು ಗಾಂಧಿ ಹಾಗೂ ಜಿನ್ನಾ ಹೆಸರುಗಳಲ್ಲಿ ವಿತರಿಸಬೇಕಿತ್ತು. 

ತಮ್ಮ  ರಾಷ್ಟ್ರಗಳಲ್ಲಿನ ಅಲ್ಪಸಂಖ್ಯಾತರನ್ನು ರಕ್ಷಿಸುವಂತೆ ಹಾಗೂ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡದಿರುವಂತೆ ಎರಡೂ ರಾಷ್ಟ್ರಗಳಲ್ಲಿನ ನಾಯಕರುಗಳಿಗೆ ಕರೆ ನೀಡುವುದಾಗಿತ್ತು ಇದು.  ಈ ಹೇಳಿಕೆಗೆ ಸಹಿ ಹಾಕಲು ಗಾಂಧಿ ಒಪ್ಪಿದರು. ಆದರೆ ಜಿನ್ನಾ ನಿರಾಕರಿಸಿದರು.

ಎರಡು ವರ್ಷಗಳ ನಂತರ, 1949-50ರ ಚಳಿಗಾಲದಲ್ಲಿ, ಪೂರ್ವ ಪಾಕಿಸ್ತಾನದಲ್ಲಿ ಮತ್ತೆ   ಕೋಮುಗಲಭೆಗಳು ಹೊಸದಾಗಿ ಆರಂಭವಾದವು. ಸಾವಿರಾರು ಹಿಂದೂಗಳು ಭಾರತಕ್ಕೆ ಭೀತಿಯಿಂದ ಓಡಿಬಂದರು. ಇದು ಪಾಕಿಸ್ತಾನ ಸರ್ಕಾರಕ್ಕೆ ತೀವ್ರ ಮುಜುಗರ ತಂದಿಟ್ಟಿದ್ದಲ್ಲದೆ ಭಾರತ ಸರ್ಕಾರದ ಮೇಲೆ  ತೀವ್ರ ಹೊರೆ ಹೊರಿಸಿತು.

ಪಂಜಾಬ್‌ನಂತಲ್ಲದೆ, ಬಂಗಾಳದಲ್ಲಿ  ಜನಾಂಗೀಯ ಹತ್ಯಾಕಾಂಡದ ಪ್ರಕ್ರಿಯೆ, ವಿಭಜನೆ ಸಂದರ್ಭದಲ್ಲಿದ್ದಷ್ಟು ಕ್ರೂರವಾಗಿರಲಿಲ್ಲ.  ಪೂರ್ವ ಪಾಕಿಸ್ತಾನದಲ್ಲಿ ಹಿಂದೂಗಳು ಹಾಗೂ ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರು ಶಾಂತಿಯುತವಾಗಿ ಘನತೆಯಿಂದ ಬಾಳಬಹುದೆಂಬ ನಂಬಿಕೆ ಆಗ ಇದ್ದೇ ಇತ್ತು. 

  1949-50ರ ಗಲಭೆಗಳು ಈ ನಂಬಿಕೆಗಳಿಗೆ ಪೆಟ್ಟು ಕೊಟ್ಟವು. ಇದನ್ನು ಸರಿ ಪಡಿಸುವುದಕ್ಕಾಗಿ ಗಲಭೆಪೀಡಿತ ಪ್ರದೇಶಗಳಲ್ಲಿ ಒಟ್ಟಾಗಿ ಸಂಚರಿಸಿ ಹಿಂಸಾಚಾರ ಅಂತ್ಯಕ್ಕೆ ಕರೆ ನೀಡುವ ಕುರಿತ ಸಲಹೆಯನ್ನು ಪಾಕಿಸ್ತಾನಿ ಪ್ರಧಾನಿ ಲಿಯಾಖತ್ ಆಲಿ ಖಾನ್‌ಗೆ  ಭಾರತದ  ಪ್ರಧಾನಿ ಜವಾಹರಲಾಲ್ ನೆಹರೂ ನೀಡಿದರು. ನೆಹರೂ ಸಲಹೆಗೆ ಲಿಯಾಖತ್ ಸಮ್ಮತಿ ದೊರೆಯಲಿಲ್ಲ.

2002ರಲ್ಲಿ ನಾನಾಜಿ ದೇಶಮುಖ್ ಮಾಡಿದ್ದ ಮನವಿ ಪ್ರಸ್ತಾಪಿಸಿದ ಕೂಡಲೆ, ಐದು ದಶಕಗಳ ಹಿಂದೆ ಮಾಡಲಾಗಿದ್ದ ಈ ಎರಡು ವಿಫಲ ಹಾಗೂ ಒಂದು ಯಶಸ್ವಿ ಪ್ರಯತ್ನಗಳು ಇತಿಹಾಸಕಾರನ ಮನದ ಮುಂದೆ ನಿಲ್ಲುವುದು ಸಹಜ. ಹೀಗಿದ್ದೂ ದೇಶಮುಖ್ ಅವರ ಮನವಿಯನ್ನು ಈಗಲೂ ನಾನು ನೆನಪಿಸಿಕೊಂಡಲ್ಲಿ, ಅದು ಈಗಲೂ ಸಮಕಾಲೀನವಾದ್ದ್ದದು ಎನಿಸುತ್ತದೆ.
 
ಕೊಕ್ರಝಾರ್‌ನಲ್ಲಿನ ನೋವಿನ ವ್ಯಾಪ್ತಿ ಈ ಲೇಖಕನಿಗೆ ಮನದಟ್ಟಾಗುತ್ತಲೇ, ಅಸ್ಸಾಂಗೆ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಪ್ರಮುಖ ಪ್ರತಿ ಪಕ್ಷದ ನಾಯಕ ಎಲ್ ಕೆ ಅಡ್ವಾಣಿ  ಒಟ್ಟಾಗಿ ಹೋಗುತ್ತಾರೆಂಬ ನಂಬಿಕೆ ನನ್ನ ಮೊದಲ ಸಹಜ ಪ್ರತಿಕ್ರಿಯೆಯಾಗಿತ್ತು. ಅಡ್ವಾಣಿ ಹಾಗೂ ಡಾ ಸಿಂಗ್ ಅವರಿಬ್ಬರೂ ನಿರಾಶ್ರಿತರೇ (ಕ್ರಮವಾಗಿ ಸಿಂಧ್ ಹಾಗೂ ಪಶ್ಚಿಮ ಪಂಜಾಬ್‌ನಿಂದ); ನಿಮ್ಮದೇ ಮನೆ, ನಿಮ್ಮದೇ ಜೀವನೋಪಾಯ ಕಳೆದುಕೊಳ್ಳುವುದೆಂದರೆ ಏನೆಂಬುದು ಇಬ್ಬರಿಗೂ ಗೊತ್ತಿತ್ತು.

ಇದಲ್ಲದೆ ಡಾ ಸಿಂಗ್ ಅವರು ಅಸ್ಸಾಂನಿಂದ ಸಂಸತ್ ಸದಸ್ಯರಾದವರು.
ನಾನು ನನ್ನ ಈ ಆಶಯವನ್ನು ನನ್ನ ಸ್ನೇಹಿತರೊಬ್ಬರಿಗೆ ತಿಳಿಸಿದ್ದೆ. ಆಗ ತಕ್ಷಣ ಅವರು ಈ ಅನಿಸಿಕೆ ದಡ್ಡತನದ್ದಲ್ಲದ್ದಾದರೂ ಮುಗ್ಧವಾದದ್ದು ಎಂದು ತಕ್ಷಣಕ್ಕೆ ಪ್ರತಿಕ್ರಿಯಿಸಿದ್ದರು. ಈ ಇಬ್ಬರು ವ್ಯಕ್ತಿಗಳಿಗೂ ವಯಸ್ಸಾಗಿದೆ, ಸಾಕಷ್ಟು ಸೋತುಹೋಗಿದ್ದಾರೆ, ಸಾಕಷ್ಟು ಸಿನಿಕತನವೂ ಅವರನ್ನಾವರಿಸಿಕೊಂಡಿದೆ.
 
ತಮ್ಮನ್ನು ತಾವು ಜಾಗೃತಗೊಳಿಸಿಕೊಂಡು ಕೊಕ್ರಝಾರ್‌ಗೆ ಹೋದರೂ, `ವಾಪಸ್ ಜಾವೊ~ ಎಂಬಂತಹ  ಘೋಷಣೆಗಳು ಹಾಗೂ ಕಪ್ಪು ಬಾವುಟಗಳು ಅವರನ್ನಲ್ಲಿ ಸ್ವಾಗತಿಸಬಹುದು. ನನ್ನ ಸ್ನೇಹಿತರ ಎಣಿಕೆ ತಪ್ಪಾಗಿರಲಿಲ್ಲ. ಸಂಸತ್ತಿನಲ್ಲಿ ಈ ವಿಚಾರ ಚರ್ಚಿಸಲು ಈ ಇಬ್ಬರು ವ್ಯಕ್ತಿಗಳು ಆಗಮಿಸಿದಾಗ, ಅದು ಬರೀ ಕೊಂಕುನುಡಿಗಳ ಕೆಸರೆರಚಾಟ ಹಾಗೂ ಮತ್ತೊಬ್ಬರ ಸಿದ್ಧಾಂತ, ಪಕ್ಷದ ವಿರುದ್ಧದ ಟೀಕೆಗಳಿಗೆ ಸೀಮಿತವಾಗಿತ್ತು.

ಅವರ ಆ ನಡತೆ ಅವರ ಸ್ವಭಾವಗಳಿಗೆ ಅನುಗುಣವಾಗಿತ್ತು. `ಡೆಮಾಕ್ರಸಿ ಅಂಡ್ ಇಟ್ಸ್ ಇನ್‌ಸ್ಟಿಟ್ಯೂಷನ್ಸ್~ ಎಂಬ ತಮ್ಮ ಹೊಸ ಪುಸ್ತಕದಲ್ಲಿ ಆಂಡ್ರೆ ಬೆಟೈಲೆ ಹೀಗೆ ಬರೆಯುತ್ತಾರೆ. ಇಂದಿನ ಭಾರತದಲ್ಲಿ `ಸರ್ಕಾರ ಹಾಗೂ ವಿರೋಧ ಪಕ್ಷಗಳ ಮಧ್ಯದ ಅವಿಶ್ವಾಸ ಪ್ರಜಾಪ್ರಭುತ್ವದ ಬುಡವನ್ನೇ ಅಲ್ಲಾಡಿಸುವಂತಹದ್ದು.
 
ಒಂದೆಡೆ ಅವಿಶ್ವಾಸ ಹಾಗೂ ಸಂಶಯ, ಮುಚ್ಚುವಿಕೆ ಹಾಗೂ ತೇಲಿಸುವಿಕೆಗೆ ಕಾರಣವಾಗುತ್ತದೆ. ಪ್ರತಿಪಕ್ಷವನ್ನು ಜವಾಬ್ದಾರಿಯುತ, ನ್ಯಾಯಬದ್ಧ ರಾಜಕೀಯ ಸಂಸ್ಥೆಯಾಗಿ ರೂಪಿಸುವ ಉದ್ದೇಶವೇ ಹಾಳಾಗುತ್ತಿದೆ~. ಲೋಕಸಭೆ, ರಾಜ್ಯಸಭೆಗಳಲ್ಲಿ,  ಹಾಗೆಯೇ ಟೆಲಿವಿಷನ್ ಸ್ಟುಡಿಯೊಗಳಲ್ಲಿ ನಿಯಮಿತವಾಗಿ ಕಂಡಂತೆ ಭಾರತದ ಎರಡು ಪ್ರಮುಖ ರಾಜಕೀಯ ಪಕ್ಷಗಳು ಕಾಂಗ್ರೆಸ್ ಹಾಗೂ ಭಾರತೀಯ ಜನತಾ ಪಕ್ಷ (ಬಿಜೆಪಿ) ಪರಸ್ಪರರ ವಿರುದ್ಧ ದ್ವೇಷ ಕಾರುತ್ತವೆ.

ಭ್ರಷ್ಟಾಚಾರ ಹಾಗೂ ದೇಶಭಕ್ತಿ ಇಲ್ಲದ ಆರೋಪಗಳನ್ನು ಯಾವಾಗಲೂ ಮಾಡಲಾಗುತ್ತದೆ. ಸರ್ಕಾರ ಮಂಡಿಸುವ ವಿಧೇಯಕಗಳನ್ನು ಸಂಸತ್ತಿನಲ್ಲಿ ಆಳವಾಗಿ ಚರ್ಚಿಸುವುದೇ ಅಪರೂಪ. ಕೂಗಾಟ, ಕಿರುಚಾಟ ಅಥವಾ ಸಭಾತ್ಯಾಗದ ಮೂಲಕ ಅದನ್ನು ನಿಷ್ಫಲಗೊಳಿಸಲಾಗುತ್ತದೆ.

ಈ ರೀತಿಯಲ್ಲಿ ರಾಷ್ಟ್ರೀಯ ಹಿತಾಸಕ್ತಿ ಎಂಬುದನ್ನು ನಿಯಮಿತವಾಗಿ ಪಕ್ಷ ರಾಜಕಾರಣದಲ್ಲಿ ಗೆಲವು ಸಾಧಿಸುವ ಕಸರತ್ತಿನಲ್ಲಿ ಗೌಣವಾಗಿಸಲಾಗುತ್ತದೆ. ಇಂತಹ ಪಕ್ಷರಾಜಕಾರಣ  ವಿವೇಚನಾಯುಕ್ತವಾದ ಆರ್ಥಿಕ ಹಾಗೂ ವಿದೇಶಾಂಗ ನೀತಿಗಳನ್ನು ರೂಪಿಸುವ ಕ್ರಮಕ್ಕೆ ತೀವ್ರ ಧಕ್ಕೆ ಒದಗಿಸುತ್ತದೆ. ಬಹುಶಃ ಪ್ರದೇಶಗಳು ಹಾಗೂ ಸಮುದಾಯಗಳ ಮಧ್ಯೆ ಶಾಂತಿಯನ್ನು  ಕಾಪಾಡುವುದಕ್ಕೂ ಹಾನಿ ಉಂಟುಮಾಡುತ್ತದೆ.
 
2003ರಲ್ಲಿ  ಅಟಲ್ ಬಿಹಾರಿ ವಾಜಪೇಯಿ ಶ್ರೀನಗರಕ್ಕೆ ಭೇಟಿ ನೀಡಿದರು. ಎರಡು ದಶಕಗಳಲ್ಲಿ ಹಾಗೆ ಭೇಟಿ ನೀಡಿದ ಮೊದಲ ಪ್ರಧಾನಿಯಾಗಿದ್ದರು ಅವರು. ಆ ರಾಜ್ಯದಲ್ಲಿ ಆಗ ಅಧಿಕಾರದಲ್ಲಿದ್ದದ್ದು  ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಹಾಗೂ ಕಾಂಗ್ರೆಸ್‌ನ ಸಮ್ಮಿಶ್ರ ಸರ್ಕಾರ.

ವಾಜಪೇಯಿ ಅವರು ಸಾರ್ವಜನಿಕ ಭಾಷಣ ಮಾಡಿದಾಗ ಪಿಡಿಪಿ ಸದಸ್ಯರು ಹಾಜರಾಗಿದ್ದರು. ಆದರೆ ಕಾಂಗ್ರೆಸ್ ಸಚಿವರು ದೂರ ಉಳಿದಿದ್ದರು. ಅದು ಆಘಾತಕಾರಿ ಹಾಗೂ ಹಗೆತನದ  ಧೋರಣೆಯಾಗಿತ್ತು. ವಾಜಪೇಯಿ ಅವರು ಕಾಶ್ಮೀರಕ್ಕೇನೂ ಸ್ವಯಂಸೇವಕನ ವೈಯಕ್ತಿಕ ಸಾಮರ್ಥ್ಯದಲ್ಲಿ ಆಗಮಿಸಿರಲಿಲ್ಲ.  ಭಾರತದ ಚುನಾಯಿತ ಪ್ರಧಾನಿಯಾಗಿ ಆಗಮಿಸಿದ್ದರು.

 ಐದು ವರ್ಷಗಳ ನಂತರ ಕಾಶ್ಮೀರದಲ್ಲಿ (ಕಾಶ್ಮೀರ ಕುರಿತಾಗಿ) ಹಗೆತನದ ಸರದಿ ಬಿಜೆಪಿಯದಾಗಿತ್ತು. ಪ್ರಧಾನಿ ಡಾ ಮನಮೋಹನ ಸಿಂಗ್ ಹಾಗೂ ಪಾಕಿಸ್ತಾನಿ ಅಧ್ಯಕ್ಷ ( ಪರ್ವೆಜ್ ಮುಷರಫ್)ರ ಮಧ್ಯೆ ಮಾತುಕತೆಗಳು ನಡೆಯುತ್ತಿತ್ತು. ಹತೋಟಿ ರೇಖೆಯನ್ನು ಎರಡು ರಾಷ್ಟ್ರಗಳ ಮಧ್ಯದ ವ್ಯವಸ್ಥಿತ ಗಡಿಯಾಗಿ ಪರಿವರ್ತಿಸುವ ಕುರಿತಾದ ಶಾಂತಿ ಒಪ್ಪಂದ ಸಕ್ರಿಯವಾಗಿ ಚರ್ಚೆಯಾಗುತ್ತಿತ್ತು.
 
ಈ ಪ್ರಮುಖ ಕಾಲಘಟ್ಟದಲ್ಲಿ ಬಿಜೆಪಿ ಹಾಗೂ ಅದರ ಸಂಗಾತಿಗಳು ಅಮರನಾಥ ವಿಚಾರದ ಬಗ್ಗೆ ಚಳವಳಿ ಆರಂಭಿಸಿದರು. ಇದು ಯಾವ ಮಟ್ಟಕ್ಕೆ ಹೋಯಿತೆಂದರೆ ಜಮ್ಮು ಮತ್ತು ಶ್ರೀನಗರದ ಮಧ್ಯೆ ರಸ್ತೆ ಮುಚ್ಚುವಷ್ಟರ ಮಟ್ಟಿಗೆ. ಕಣಿವೆಗೆ ಅನೇಕ ದಿನಗಳ ಕಾಲ ಔಷಧಿ, ಆಹಾರ ಮತ್ತಿತರ ವಸ್ತುಗಳ ಸರಬರಾಜುಗಳೇ ಸ್ಥಗಿತಗೊಂಡವು.

ಈ ಕ್ರಿಯೆ ಹೇಗಿತ್ತೆಂದರೆ, ಕಾಂಗ್ರೆಸ್ ವಿರುದ್ಧ ನಮಗೆ  ಒಂದಷ್ಟು ಗೆಲುವು ಸಾಧ್ಯವಾಗುವುದಾದಲ್ಲಿ ನೀವು ಉಪವಾಸ ಬೀಳುತ್ತೀರೊ ಸಾಯುತ್ತೀರೊ ನಮಗೆ ಸಂಬಂಧಿಸಿದ್ದಲ್ಲ ಎಂದು  ಬಿಜೆಪಿ ಕಾಶ್ಮೀರಿಗಳಿಗೆ ಹೇಳಿದಂತಿತ್ತು.
  ಹೀಗಾಗಿಯೇ  2002ರಲ್ಲಿ ನಾನಾಜಿ ದೇಶಮುಖ್ ಅವರ ಮನವಿ ವೈಶಿಷ್ಟ್ಯದ್ದಾಗಿತ್ತು ಎಂದು ವಾಜಪೇಯಿ ಹಾಗೂ ಸೋನಿಯಾ ಗಾಂಧಿ ಇಬ್ಬರೂ ಭಾವಿಸುವುದು ಸಾಧ್ಯವಿರಲಿಲ್ಲ.     ದೇಶ್‌ಮುಖ್ ಅವರು ಹತಾಶೆಯಿಂದ ಹೇಳಿದ್ದರು.

`ಪ್ರಧಾನಿಯಾಗಲಿ, ಪ್ರತಿಪಕ್ಷದ ನಾಯಕರಾಗಲಿ ಗಲಭೆಗಳನ್ನು ನಿಲ್ಲಿಸಲು (ಗುಜರಾತ್‌ನಲ್ಲಿ) ಅಥವಾ ಅಲ್ಲಿಗೆ ಹೋಗಲು ಮುಂದಾಗಲಿಲ್ಲ. ಏಕೆಂದರೆ ರಾಷ್ಟ್ರದ ಒಳಿತಿಗಾಗಿ ಈ ಪಕ್ಷಗಳು ಕೈಜೋಡಿಸುವುದಿಲ್ಲ  ಅಥವಾ ಸಾಮಾಜಿಕ ಏಕತೆಗೂ ಅವಕಾಶ ನೀಡುವುದಿಲ್ಲ~.

ನನ್ನನ್ನು ಅಪ್ರಬುದ್ಧನೆನ್ನಿ, ಮೂರ್ಖ ಎನ್ನಿ. ಆದರೆ ಮುಂದಿನ ಪ್ರಮುಖ ಸಂಘರ್ಷ ಎದುರಾದಾಗ, ಯುವ ಪೀಳಿಗೆಯ ನಾಯಕರು  ಹೆಚ್ಚು ಉದಾತ್ತವಾಗಿ, ಕೆಚ್ಚಿನಿಂದ ಹಾಗೂ ನಿಸ್ವಾರ್ಥದಿಂದ ವರ್ತಿಸಲು ಸಿದ್ಧರಿರುತ್ತಾರೇನೊ.

ಈಗಲೂ  ಕೊಕ್ರಝಾರ್‌ಗೆ (ವೈದ್ಯರು ಹಾಗೂ ಔಷಧಗಳೊಂದಿಗೆ) ಒಟ್ಟಾಗಿ ನಿಯೋಗದಲ್ಲಿ ತೆರಳುವ ಸಲಹೆಯನ್ನು ನೀಡಲು ಅರುಣ್ ಜೇಟ್ಲಿಗೆ ರಾಹುಲ್ ಗಾಂಧಿ ಅವರು ದೂರವಾಣಿ ಕರೆ ಮಾಡಲು ಕಾಲ ಮಿಂಚಿಲ್ಲ. ಮನೆಮಠ ಕಳೆದುಕೊಂಡು ಅತಂತ್ರರಾಗಿರುವ ಎಲ್ಲಸಮುದಾಯಗಳವರಿಗೂ ಸಾಂತ್ವನ, ಒತ್ತಾಸೆ ಹಾಗೂ ಭರವಸೆ ಬೇಕಾಗಿದೆ ಎಂಬುದು ಎಲ್ಲರಿಗೂ ಗೊತ್ತು.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT