ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟಿಂಗ್ ಆಪರೇಷನ್ ಸಕ್ಸಸ್!

ಅಕ್ಷರ ಗಾತ್ರ

ಅಯ್ಯ ಅವರ ಗೃಹಕಚೇರಿಯ ಬಳಿ, ಹೊರಲಾಗದ ಭಾರೀ ತೂಕವಿದ್ದ ಬ್ಯಾಗೊಂದನ್ನು ಹೊತ್ತುಕೊಂಡು, ಹರಟುತ್ತಾ ಬರುತ್ತಿದ್ದ ಪೆಕರನನ್ನು ಕಂಡು ಎಲ್ಲರಿಗೂ ಅಚ್ಚರಿ.

‘ಏನ್ ಪೆಕರ ಅವರೇ, ಇಲ್ಲಿ, ಈ ಹೊತ್ನಲ್ಲಿ?! ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್‌ ಕೊಟ್ಟು ನಿಮ್ಮನ್ನು ಮೈಸೂರಿಗೆ ಕಳುಹಿಸಿದ್ದಾರೆ ಅಂದುಕೊಂಡಿದ್ವಿ. ನೋಡಿದ್ರೆ ಜಾಫರ್‌ ಷರೀಫ್ ಸಾಹೇಬರ ತರಹ ಇಲ್ಲೇ ಇದ್ದೀರ’ ಎಂದು ಸ್ನೇಹಿತರು ಪ್ರಶ್ನಿಸಿದರು.
‘ಬೇಡ ಮಹರಾಯ, ನನಗೆ ಟಿಕೇಟೂ ಬೇಡ, ಕೊಡಲಿಲ್ಲ ಅಂತ ಬೇಜಾರ್‌ ಮಾಡ್ಕೊಂಡು ಪದ್ಮನಾಭನಗರದ ಕಡೆ ಹೋಗುವ ಕೆಲಸವೂ ಬೇಡ. ನಾನು ಇದ್ದ ಹಾಗೇ ಇರುತ್ತೇನೆ. ನಾನೊಬ್ಬ ಬಡಮತದಾರ, ಬಡ ಪತ್ರಕರ್ತ’ ಎಂದು ಪೆಕರ ಗೊಣಗಿದ.

‘ಗೊತ್ತಾಯ್ತು, ಗೊತ್ತಾಯ್ತು; ಈ ಬಡಪತ್ರಕರ್ತನ ಕತೆ ಚುನಾವಣೆ ಮುಗಿದ ಮೇಲೆ ಏನಾಗುತ್ತೆ ಅನ್ನೋದು ಗೊತ್ತಾಗುತ್ತೆ. ನಿಮ್ಮನ್ನೆಲ್ಲಾ ಜೈಲಿಗೆ ಕಳುಹಿಸುತ್ತೇನೆ ಎಂದು ಕ್ರೇಜಿವಾಲರು ಗುಡುಗಿದ್ದಾರೆ, ನೆನಪಿನಲ್ಲಿರಲಿ. ಫಲಿತಾಂಶ ಬಂದ ನಂತರ ಪರಪ್ಪನ ಅಗ್ರಹಾರದಲ್ಲಿ ಭೇಟಿಯಾಗ್ತೇನೆ, ಸೀಯೂ’ ಎಂದು ಸ್ನೇಹಿತರು ಪೆಕರನನ್ನು ಚುಡಾಯಿಸಿದರು.

‘ಅದೆಲ್ಲಾ ನಮೋ ನಮೋ ಭಜನೆ ಮಾಡುತ್ತಿರುವವರಿಗೆ ಸ್ವಾಮಿ, ನಾನು ಸರ್ವಪಕ್ಷ ಸಮಾನತತ್ವ ಪಾಲಕ. ದೆಹಲಿ­ಯಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಮಯ­ದಲ್ಲಿ ಎಲ್ಲ ಮಾಧ್ಯಮದವರೂ ಕ್ರೇಜಿಗಳಾಗಿದ್ದರು ಅನ್ನೋದು ಅವರು ಮರೆತು ಹೋದಂತೆ ಕಾಣುತ್ತದೆ. ಎಲ್ಲರ ಮೇಲೂ ಸುಮ್‌ಸುಮ್ನೆ ದಂಡ ಪ್ರಹಾರ ಮಾಡುವುದೇ ಕೆಲಸ ಅಂದ್ಕೊಂ­ಡಿ­ದ್ದಾರೆ. ಕ್ರೇಜಿಫೆಲೋಸ್’ ಎಂದು ಪೆಕರ ಸಿಟ್ಟು ಪ್ರದರ್ಶಿಸಿದ.

‘ಅದಿರಲಿ, ಈ ಉರಿ ಬಿಸಿಲಿನಲ್ಲಿ ಈ ರೀತಿ ಹೊರಲಾಗದ ಹೊರೆ ಹೊತ್ಕೊಂಡು ಅಡ್ಡಾಡ್ತ ಇದ್ದೀರಲ್ಲಾ ಏನ್ಸಮಾಚಾರ? ಅಯ್ಯ ಅವರ ಕಚೇರೀಲಿ ಏನ್ ಕೆಲ್ಸ?’ ಎಂದು ಸ್ನೇಹಿತರು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿದರು.
‘ಇರಪ್ಪ, ಅಯ್ಯ ಅವರನ್ನು ಭೇಟಿಯಾಗಿ ಈ ಸ್ಮಾಲ್‌ಗಿಫ್ಟ್ ಕೊಡಬೇಕು, ಅದಕ್ಕೆ ಬಂದಿದ್ದೀನಿ’ ಎಂದು ಪೆಕರ ಗೃಹ­ಕಚೇರಿಯ ಸೆಕ್ಯುರಿಟಿ ಚೆಕ್ ಬಳಿ ಹೋದ..

ಸ್ನೇಹಿತರೆಲ್ಲಾ ಹೌಹಾರಿದರು.
‘ಅಯ್ಯ, ಅವರತ್ರ ನಿನಗೇನಪ್ಪಾ ಕೆಲಸ?’ ಎಂದು ಎಲ್ಲರೂ ಒಮ್ಮೆಲೇ ಪ್ರಶ್ನಿಸಿದರು.
‘ನನ್ನತ್ರ ಒಂದು ಐಡಿಯಾ ಇದೆ. ಅದನ್ನು ಪಾಲಿಸಿದರೆ ಅಯ್ಯ ಅವರಿಗೆ ಬಂಪರ್. ದೆಹಲಿಯಲ್ಲಿ ಕ್ರೇಜಿವಾಲ್ ವಿಧಾನಸಭೆ ಚುನಾವಣೆ ಯಲ್ಲಿ ‘ಬುದ್ಧಿಜೀವಿ’ಗಳನ್ನು ನಿಲ್ಲಿಸಿ, ಗೆಲ್ಲಿಸಿ ಮೀಸೆ ತಿರುವಿದರು. ಅದೇ ಪಾಲಿಸಿಯನ್ನು ಬೆಂಗಳೂರಿ­ನಲ್ಲೂ ಮಾಡಬಹುದು. ಈಗ ಹೇಗೂ ಅಯ್ಯ ಅವರ ಬಳಗ­ದಲ್ಲಿ ನಾಲ್ವರು  ಆಸ್ಥಾನ ಸಾಹಿತಿಗಳಿದ್ದಾರೆ. ಅವರೆಲ್ಲರಿಗೂ ಬೆಂಗಳೂರು ಲೋಕಸಭಾ ಕ್ಷೇತ್ರಗಳ ಟಿಕೆಟ್ ಕೊಟ್ಟು ಒಂದು ‘ಕೈ’ ನೋಡಬಹುದು.

ಹೊಸಬರನ್ನು ಮತದಾರರು ಪುರಸ್ಕರಿಸುತ್ತಾರೆ. ದೆಹಲಿಗೆ ಹೋಗಿ ಈ ಸಾಹಿತಿಗಳು ಅಯ್ಯ ಅವರ ಪರವಾಗಿ ಪಿ.ಎಂ. ಹುದ್ದೆಗೆ ಲಾಬಿ ಮಾಡಬಹುದು’

‘ಸಾಕು ನಿಲ್ಲಿಸಿ ಪೆಕರ ಅವರೇ, ಈಗಾಗಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಇನ್ನೆಲ್ಲಿಯ ಸೀಟು? ಎಲ್ಲರೂ ವಿಧಾನಪರಿಷತ್ ಸ್ಥಾನಗಳ ಮೇಲೆ ಕಣ್ಣುಹಾಕಿಕೊಂಡು ಕುಳಿತುಕೊಂಡಿದ್ದಾರೆ, ಇನ್ನೆಲ್ಲಿಯ ಲೋಕಸಭೆ ಮಾತು?’ ಎಂದು ಸ್ನೇಹಿತರು ಕರೆಕ್ಷನ್ ಹಾಕಿದರು.

‘ಇಲ್ಲಾರಿ, ಇಪ್ಪತ್ತು ಕಡೆ ಕಮಲ ಅರಳುತ್ತೆ ಅಂತ ಸಮೀಕ್ಷೆ­ಗಳು ಭವಿಷ್ಯ ಹೇಳೋಕೆ ಶುರುಮಾಡಿವೆ. ಅದಕ್ಕೆ ಬೆಂಗಳೂರಿನ ನಾಲ್ಕು ಕಡೆ, ಆಸ್ಥಾನ ಸಾಹಿತಿಗಳು ಅರಳಲಿ ಎಂದು ನಾನು ಒಂದು ಐಡಿಯಾ ಕೊಡ್ತೀನಿ’ ಎಂದು ಪೆಕರ ವಿವರಿಸಿದ.
‘ಜೋಕ್ ಮಾಡಬೇಡ ಮಾರಾಯ. ಇದೇನು ಇಷ್ಟು ದೊಡ್ಡ ಪ್ಯಾಕೆಟ್?’ ಎಂದು ಸ್ನೇಹಿತರು ಅವನು ಹೊತ್ತು­ಕೊಂಡಿದ್ದ ಬ್ಯಾಗನ್ನೇ ನೋಡಿದರು.

‘ಅಯ್ಯ ಅವರಿಗೆ, ಸ್ಮಾಲ್ ಗಿಫ್ಟ್’ ಎಂದು ಪೆಕರ ಹೇಳುತ್ತಿದ್ದಂತೆಯೇ ಸ್ನೇಹಿತರು ಮತ್ತೆ ಬೆಚ್ಚಿಬಿದ್ದರು.
‘ಅಲ್ಲಯ್ಯಾ ನೀತಿಸಂಹಿತೆ ಜಾರಿಯಾಗಿರೋ ಸಮಯದಲ್ಲಿ ನೀನು ಮಾಡೋ ಕೆಲಸ ಇದೇನಾ? ಗಿಫ್ಟ್ ಕೊಡೋಕೆ ಬಂದಿದ್ದೀಯಾ ಅಂದ್ರೆ, ಸ್ಟಿಂಗ್ ಮಾಡ್ತಾ ಇದೀಯಾ ಅಂತ ಅರ್ಥವಾಗಲ್ವ? ಎಂಥಾ ಪೆಕರನಯ್ಯ ನೀನು’ ಎಂದು ಸ್ನೇಹಿತರು ಚುಚ್ಚಿದರು.

ಅಷ್ಟರಲ್ಲಿ ಸೆಕ್ಯುರಿಟಿಯವನು: ‘ಅಯ್ಯ ಅವರು ಮೀಟಿಂಗ್‌­ನಲ್ಲಿದ್ದಾರೆ, ಮೀಟ್ ಮಾಡೋಕೆ ಆಗಲ್ಲ, ಸ್ಸಾರಿ...’ ಎಂದ.
ಚುನಾವಣೆ ಸುದ್ದಿಗಳಿಗೆ ರಂಗು
ನಡೆಯುತ್ತಿದೆ ಭರ್ಜರಿ ಸ್ಟಿಂಗು
ಮಂತ್ರಿಯೇ ಆದನು ದಂಗು
ಕೊನೆಗೆ ತಿಂದರಲ್ಲಪ್ಪಾ ಇಂಗು
ಪೆಕರ ತನ್ನ ಹಟ ಬಿಡಲಿಲ್ಲ. ಮರುದಿನ ಬೆಳಿಗ್ಗೆಯೇ ಡಿಕುಶಿಮಾರ ಅವರ ಗೃಹ ಕಚೇರಿ ಬಳಿಗೆ ಬಂದ. ಈಗಾಗಲೇ ಎರಡು ಮೂರು ಬಾರಿ ಅವರ ಮನೆಗೆ ಬಂದು ಸಂದರ್ಶನ ನಡೆಸಿದ್ದುದರಿಂದ, ಸಚಿವರಿಗೂ ಪೆಕರನ ಮುಖಪರಿಚಯ­ವಾಗಿತ್ತು. ‘ಬೆಳಿಗ್ಗೆಬೆಳಿಗ್ಗೆಯೇ ಪತ್ರಕರ್ತರು ಬಂದು ಕುಳಿತರೆ ಹೇಗ್ರಿ? ಮಧ್ಯಾಹ್ನ ಬರೋದಿಕ್ಕೆ ಹೇಳ್ರಿ’ ಎಂದು ಸಚಿವರ ಅಪ್ಪಣೆ ಆಯ್ತು. ಪೆಕರ ತನ್ನ ಹೊರೆ ಹೊತ್ತುಕೊಂಡು ವಾಪಸಾದ.

ನನ್ನ ವಿರುದ್ಧ ಏನೋ ಸಂಚು ನಡೆಯುತ್ತಿದೆ ಎನ್ನುವ ಶಂಕೆ ಸಚಿವರಿಗೆ ಕಾಯಿಲೆತರ ಅಂಟಿಕೊಂಡಿತ್ತು. ‘ನೋಡ್ರಿ, ಮಧ್ಯಾಹ್ನ ಪೆಕರ ಬರುವುದರೊಳಗೆ ನನ್ನ ಮನೆಯ ಸುತ್ತ ಇರುವ ಎಲ್ಲ ಪೊಲೀಸ್‌ ಠಾಣೆಗಳಿಂದ ಐವತ್ತು ಜನ ಪೊಲೀ ಸರು ಮಫ್ತಿಯಲ್ಲಿ ಬಂದು ಇಲ್ಲಿ ಅವಿತುಕೊಂಡಿರಬೇಕು. ನನ್ನ ಕ್ಷೇತ್ರದಿಂದ ೭೦ ಮಂದಿ ಸಹಚರರು ಬಂದು ಮನೆಯ ಮುಂದೆ ಕಾರು ನಿಲ್ಲಿಸುವ ಜಾಗದಲ್ಲಿ ಅವಿತುಕೊಂಡಿರಬೇಕು.

ನನ್ನ ರೂಮಿನ ಬಾಗಿಲ ಬಳಿ ನಾಲ್ವರು  ಬಾಡಿಗಾರ್ಡ್‌ಗಳು ನಿಂತಿರಬೇಕು’ ಎಂದು ಆಪ್ತ ಸಹಾಯಕರಿಗೆ ಹೇಳುವ ಮೂಲಕ ಭಾರೀ ಸೆಕ್ಯುರಿಟಿ ಏರ್ಪಾಟು ಮಾಡಿಕೊಂಡರು.

ಉರಿ ಬಿಸಿಲಿನಲ್ಲಿ ಪೆಕರ ಸಚಿವರ ಮನೆಗೆ ಎಂಟ್ರಿ ಕೊಟ್ಟ. ಭಾರವಾದ ಬ್ಯಾಗು ಹೊತ್ತುಕೊಂಡು ನಡೆದುಕೊಂಡೇ ಬಂದುದರಿಂದ, ಬೆವರು ಸುರಿಯುತ್ತಿತ್ತು.  ಕುಳಿತು, ಸುಧಾರಿಸಿ ಕೊಂಡು, ನೀರು ಕುಡಿದು ಪ್ರಶ್ನೆ ಆರಂಭಿಸಿದ.
‘ಸಾರ್. ಕಲ್ಲುಗಣಿ, ಲ್ಯಾಂಡ್ ಮಾಫಿಯಾ ಬಗ್ಗೆ ನಿಮ್ಮ ಮೇಲಿರುವ ದೂರು...’ ಸಚಿವರಿಗೆ ಸಿಟ್ಟು ನೆತ್ತಿಗೇರಿತು.

‘ಈ ಎಲ್ಲ ಪ್ರಶ್ನೆಗಳನ್ನು ಯಾರು ಸ್ಪಾನ್ಸರ್ ಮಾಡಿದ್ದಾರೆ ಅಂತ ನನಗೆ ಗೊತ್ತು, ಪಾಪ, ನೀವು ಬಡಪಾಯಿ, ಹಾಸನ ಗ್ಯಾಂಗ್ ಕೈಗೊಂಬೆ ತರಹ ಕೇಳ್ತಾ ಇದೀರಾ ಬಿಡ್ರಿ’ ಎಂದು ಸಚಿವರು ಗಟ್ಟಿದನಿಯಲ್ಲೇ ಹೇಳಿದರು.
‘ಎಲೆಕ್ಷನ್ ಹತ್ರ ಬಂತು ಸಾರ್, ನನ್ನ ಕಡೆಯಿಂದ ಸ್ಮಾಲ್ ಗಿಫ್ಟ್ ಇದೆ ತೆಗೆದುಕೊಳ್ಳಿ’ ಎಂದು ಪೆಕರ ತನ್ನ ಬ್ಯಾಗಿನೊಳಗಿಂದ ದೊಡ್ಡ ಪ್ಯಾಕೆಟ್ ತೆಗೆದ.

‘ತಡೀರಿ, ಈ ಗಿಫ್ಟ್ ನನಗೆ ಬೇಡ. ನನ್ನ ಅಧಿಕಾರಿಗಳಿಗೆ ಕೊಡಿ. ಅವರು ನಿಮ್ಮ ಕೆಲಸ ಮಾಡಿಕೊಡ್ತಾರೆ’ ಎಂದು ಹೇಳಿ ಸಚಿವರು ಬೆಲ್ ಒತ್ತಿದರು.

ತಕ್ಷಣವೇ ಪೊಲೀಸರು ದಡದಡನೆ ಒಳಗೆ ನುಗ್ಗಿ, ಗಿಫ್ಟ್ ಪ್ಯಾಕೆಟ್ ಕಿತ್ತುಕೊಂಡರು. ಪೆಕರನ ಕಾಲನ್ನು ಒಬ್ಬ, ಎರಡೂ ಕೈಗಳನ್ನು ಮತ್ತಿಬ್ಬರು ಪೊಲೀಸರು ಒತ್ತಿ ಹಿಡಿದುಕೊಂಡರು. ನಾಲ್ವರು ಗನ್‌ಮ್ಯಾನ್‌ಗಳು ಪೆಕರನ ತಲೆಗೆ ಗುರಿಯಿಟ್ಟು ಗನ್ ಹಿಡಿದುಕೊಂಡರು. ಪೆಕರ ಕಂಗಾಲಾದ.

‘ಏನ್ರೀ, ನನ್ನ ವಿರುದ್ಧವೇ ಮಾರುವೇಷದ ಕಾರ್ಯಾಚರಣೆ ಮಾಡ್ತಾ ಇದೀರಾ? ಆರು ಸಚಿವರ ವಿರುದ್ಧ ನೀವು ಸ್ಟಿಂಗ್ ಮಾಡ್ತಾ ಇರೋದು ನನಗೆ ಗೊತ್ತಿಲ್ಲಾ ಅಂತ ಮಾಡಿದಿರಾ? ಆರು ಲಕ್ಷ ರೂಪಾಯಿ ಪ್ಯಾಕೆಟ್ ತಂದು ಬ್ರೇಕಿಂಗ್ ನ್ಯೂಸ್ ಮಾಡಲು ನೋಡ್ತಾ ಇದೀರಾ? ನಿಮ್ಮ ಆಟ ನನ್ನತ್ರ ನಡಿಯಲ್ಲ’ ಎಂದು ಗರ್ಜಿಸಿದ ಸಚಿವರು, ಇವರ ವಿರುದ್ಧ ಎಫ್‌ಐಆರ್ ಹಾಕಿ ಎಂದು ಪೊಲೀಸರಿಗೆ ಆದೇಶಿಸಿದರು. ಅವರು ದೂರು ಕೊಟ್ರೆ ತಗೋಬೇಡಿ ಎಂದೂ ಹುರಿಗಾಳು ಹಾಕಿದರು.

ಪೆಕರ ‘ಇದು ಸ್ಟಿಂಗ್ ಅಲ್ಲಾ ಸಾರ್...’ ಎಂದು ಹೇಳಹೊರಟ. ಅರಣ್ಯರೋದನವಾಯಿತು. ಸಚಿವರ ಅಭಿಮಾನಿ­ಗಳು ಕೈಬೆರಳಿಗೆ ಉಂಗುರ ಹಾಕಿಕೊಂಡು, ಪೆಕರನ ತಲೆಗೆ ಡಿಶುಂಡಿಶುಂ ಮಾಡಲಾರಂಭಿಸಿದ್ದರು.

ಅಷ್ಟರಲ್ಲಿ ಗಿಫ್ಟ್ ಪ್ಯಾಕೆಟ್ ಓಪನ್ ಮಾಡಿದ ಪೊಲೀಸರು, ಸಾರ್ ಎಂದು ಕೂಗಿಕೊಂಡರು. ಪ್ಯಾಕೆಟ್‌ನಲ್ಲಿ ಮಹಾತ್ಮ ಗಾಂಧೀಜಿ ಆತ್ಮಚರಿತ್ರೆ, ಲೋಹಿಯಾ ಅಂಡ್ ಪಾರ್ಲಿಮೆಂಟ್, ಭಗವದ್ಗೀತೆ, ದೇಶದ ಸಂವಿಧಾನದ ಪ್ರತಿ ಇದ್ದುದನ್ನು ಕಂಡು ಸಚಿವರ ಹಣೆಯ ಮೇಲೆ ನೆರಿಗೆ ಮೂಡಿತು.

‘ಪ್ಯಾಕೆಟ್‌ನಲ್ಲಿ ಇದ್ದದ್ದು ಇದೇನಾ? ಇದೇನ್ರಿ ಇದು’ ಎಂದು ಪೆಕರನನ್ನು ಪ್ರಶ್ನಿಸಿದರು.
‘ಈ ಪುಸ್ತಕಗಳನ್ನು ದಯವಿಟ್ಟು ಓದಿ. ರಾಜಕೀಯ ಶೈಲಿ ಬದಲಿಸಿಕೊಳ್ಳಿ, ಒಳ್ಳೆಯ ಆಡಳಿತ ಕೊಡಿ, ಎಲ್ಲ ಆರು ಭ್ರಷ್ಟ ಸಚಿವರಿಗೆ ಇದನ್ನು ಗಿಫ್ಟಾಗಿ ಕೊಡಲು ಹೋಗಿದ್ದೆ. ಯಾರೂ ಸಿಗಲಿಲ್ಲ. ನಿಮಗೆ ಕೊಟ್ರೆ ನೀವು ಅಭಿಮಾನಿಗಳ ಕೈಲಿ ಗೂಸಾ ಕೊಡಿಸ್ತಾ ಇದ್ದೀರಾ’ ಎಂದು ಪೆಕರ ದೈನೇಸಿ ಸ್ಥಿತಿಯಲ್ಲಿ ವಿವರಿಸಿದ. ಗೆಟೌಟ್ ಎಂದು ಚೀರುತ್ತಾ ಸಚಿವರು ಎದ್ದು ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT