ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಫೋಟದ ಸುದ್ದಿಗಳು, ಸುದ್ದಿಯಾಗದ ಸ್ಫೋಟಕಗಳು

Last Updated 16 ಜೂನ್ 2018, 10:07 IST
ಅಕ್ಷರ ಗಾತ್ರ

ಯೋಗಾಯೋಗ ಹೇಗಿತ್ತು ನೋಡಿ: ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ಪಕ್ಷದ ಕಚೇರಿ ಎದುರು ಏಪ್ರಿಲ್ 17ರಂದು ಬೈಕ್‌ನಲ್ಲಿ ಇಟ್ಟಿದ್ದ ಅಮೋನಿಯಂ ನೈಟ್ರೇಟ್ ಎಂಬ ಸಿಡಿಮದ್ದು ಸಿಡಿಯಿತು. ಹದಿನಾರು ಜನರು ಗಾಯಗೊಂಡರು. ಅದೇ ದಿನ, ಏಪ್ರಿಲ್ 17ರಂದೇ ಹದಿನೈದು ಸಾವಿರ ಕಿಲೊಮೀಟರ್ ಆಚೆ ಅಮೆರಿಕದ ಟೆಕ್ಸಾಸ್‌ನಲ್ಲಿ ಅಮೋನಿಯಂ ನೈಟ್ರೇಟನ್ನು ಉತ್ಪಾದಿಸುತ್ತಿದ್ದ ರಸಗೊಬ್ಬರ ಫ್ಯಾಕ್ಟರಿಯೊಂದು ಸ್ಫೋಟಗೊಂಡಿತು.

ಬೆಂಕಿ ಆರಿಸಲು ಹೋದ ಹದಿನಾರು ಜನರು ಸತ್ತರು. ಇನ್ನೂರಕ್ಕೂ ಹೆಚ್ಚು ಮಂದಿಗೆ ಗಾಯಗಳಾದವು. ಸುಮಾರು 80 ಮನೆಗಳು ಧ್ವಂಸವಾದವು. ಇಂದು (ಗುರುವಾರ) ಅಧ್ಯಕ್ಷ ಒಬಾಮ ಮತ್ತು ಎಲ್ಲ ಜೀವಂತ ಮಾಜಿ ಅಧ್ಯಕ್ಷರುಗಳು ಟೆಕ್ಸಾಸ್‌ನ ಸ್ಫೋಟದ ಸ್ಥಳಕ್ಕೆ ಭೇಟಿಕೊಟ್ಟು ಸಾಂತ್ವನ ಹೇಳಲಿದ್ದಾರೆ.

ಕಾಕತಾಳೀಯ ಇನ್ನೂ ಇದೆ: ಇಂಥದ್ದೇ ಅಮೋನಿಯಂ ನೈಟ್ರೇಟ್ ಪುಡಿಯನ್ನು ತುಂಬಿಕೊಂಡಿದ್ದ ಹಡಗೊಂದು ಇದೇ ಟೆಕ್ಸಾಸ್‌ನಲ್ಲಿ 66 ವರ್ಷಗಳ ಹಿಂದೆ ಇದೇ ಏಪ್ರಿಲ್ 16ರಂದು ಸ್ಫೋಟಗೊಂಡಿತ್ತು. 1947ರ ಆ ದುರಂತ ಅಮೆರಿಕದ ಅತ್ಯಂತ ಘೋರ ಔದ್ಯಮಿಕ ದುರಂತವೆನಿಸಿದೆ. ಫ್ರಾನ್ಸ್‌ನಿಂದ ಬಂದ ಹಡಗಿಗೆ ಆಗಷ್ಟೇ 2300 ಟನ್ ನೈಟ್ರೇಟ್ ಪುಡಿಯಿದ್ದ ಚೀಲಗಳನ್ನು ಹೇರಲಾಗಿತ್ತು. ಸ್ಫೋಟ ಎಷ್ಟು ಭೀಕರವಾಗಿತ್ತೆಂದರೆ ಆಕಾಶದಲ್ಲಿದ್ದ ಎರಡು ವಿಮಾನಗಳು ನೆಗೆದು ಬಿದ್ದವು.

ಬಂದರಿನಲ್ಲಿದ್ದ ಪೆಟ್ರೊ ಕೆಮಿಕಲ್ ಸ್ಥಾವರಗಳು, ತೈಲದ ತೊಟ್ಟಿಗಳು ಕಿಚ್ಚೆದ್ದು ಸಾವಿರಕ್ಕೂ ಹೆಚ್ಚು ಮನೆಗಳು ಕುಸಿದು 581 ಜನರು ಅಸು ನೀಗಿದರು. ಎಲ್ಲ ಅಗ್ನಿಶಾಮಕಗಳು ಧ್ವಂಸಗೊಂಡವು. ಸ್ಫೋಟಿಸಿದ ಹಡಗಿನ ಸಮೀಪವೇ ಅದೇ ಆ ನೈಟ್ರೇಟನ್ನು ಹೊತ್ತು ನಿಂತಿದ್ದ ಇನ್ನೊಂದು ಹಡಗು ಹದಿನಾರು ಗಂಟೆಗಳ ನಂತರ ಸ್ಫೋಟಿಸಿತು. ಮಸಣ ಮೌನದ ನಡುವೆ ಈ ಎರಡನೆಯ ಸ್ಫೋಟದ ಸಂದರ್ಭದಲ್ಲಿ ಯಾರೂ ಯಾರ ನೆರವಿಗೂ ಧಾವಿಸುವಂತಿರಲಿಲ್ಲ.

ಐದು ವರ್ಷಗಳ ಹಿಂದೆ 2009ರಲ್ಲಿ ಇದೇ ಟೆಕ್ಸಾಸ್‌ನ ಇನ್ನೊಂದು ರಸಗೊಬ್ಬರ ಫ್ಯಾಕ್ಟರಿಗೆ ಬೆಂಕಿ ಹೊತ್ತಿಕೊಂಡಿತ್ತು. ಆಸುಪಾಸಿನ 80 ಸಾವಿರ ನಿವಾಸಿಗಳನ್ನು ದೂರ ಸಾಗಿಸಲಾಗಿತ್ತು. 2007ರಲ್ಲಿ ಮೆಕ್ಸಿಕೊದಲ್ಲಿ ಇದೇ ಅಮೋನಿಯಂ ನೈಟ್ರೇಟನ್ನು ಸಾಗಿಸುವ ಟ್ರಕ್ ಒಂದು ಅಪಘಾತಕ್ಕೀಡಾಗಿ, ಸ್ಫೋಟಗೊಂಡು 40 ಜನರು ಸಾವಿಗೀಡಾಗಿ 150ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.

ಫ್ರಾನ್ಸಿನ ಹಡಗು ಟೆಕ್ಸಾಸ್‌ನಲ್ಲಿ ಸ್ಫೋಟಗೊಂಡಿದ್ದು ಎಲ್ಲರೂ ಮರೆತೇ ಬಿಟ್ಟಿದ್ದಾಗ 2001ರಲ್ಲಿ ಫ್ರಾನ್ಸ್‌ನ ಟೌಲೊಸ್ ಪಟ್ಟಣದಲ್ಲಿ ಅದೇ ಬಗೆಯ ಅಮೋನಿಯಂ ನೈಟ್ರೇಟನ್ನು ಉತ್ಪಾದಿಸುತ್ತಿದ್ದ ಅಝೋಟಿ ಫ್ಯಾಕ್ಟರಿಯ ಗೋದಾಮಿನಲ್ಲಿದ್ದ 2000 ಟನ್ ರಸಗೊಬ್ಬರ ಸ್ಫೋಟಿಸಿತು. ನೆಲ ಭೀಕರವಾಗಿ ನಡುಗಿ ರಿಕ್ಟರ್ ಮಾಪಕದಲ್ಲಿ 3.4 ತೀವ್ರತೆಯ ಭೂಕಂಪನವೂ ದಾಖಲಾಗಿ, ಕಂಬ ತೊಲೆಗಳು ಮೂರು ಕಿಲೊಮೀಟರ್ ದೂರಕ್ಕೂ ಸಿಡಿದು ಬಿದ್ದವು.

ಪಟ್ಟಣದ ಸುತ್ತಲಿನ ಗುಡ್ಡ ಬೆಟ್ಟಗಳಲ್ಲಿ ಸ್ಫೋಟದ ಮರುಧ್ವನಿ ಮತ್ತೆ ಮತ್ತೆ ಬಂದಿದ್ದರಿಂದ ಸರಣಿ ಸ್ಫೋಟದ ಭ್ರಮೆ ಹುಟ್ಟಿಸಿತು. ಗೋದಾಮು ಇದ್ದಲ್ಲಿ 200 ಮೀಟರ್ ಅಗಲದ 30 ಮೀಟರ್ ಆಳದ ಕಂದರ ಬಿತ್ತು. ಒಟ್ಟು 29 ಜನರ ಮರಣದೊಂದಿಗೆ ಎರಡೂವರೆ ಸಾವಿರ ಜನರು ಗಂಭೀರ ಗಾಯಗೊಂಡರು. ಕಿಟಕಿ ಗಾಜುಗಳಿಂದ ಹತ್ತಾರು ಸಾವಿರ ಜನರಿಗೆ ಗಾಯಗಳಾದವು. ಸಮೀಪದ ಲೆಮಿರೇಲ್ ಪಟ್ಟಣದ ಎಲ್ಲ ಶಾಲೆ, ಆಸ್ಪತ್ರೆಗಳನ್ನು ಖಾಲಿ ಮಾಡಿಸಲಾಯಿತು.

ನಮ್ಮಲ್ಲಿ ರಸಗೊಬ್ಬರ ಫ್ಯಾಕ್ಟರಿಗಳಲ್ಲಿ ದೊಡ್ಡ ಸ್ಫೋಟಗಳಾಗಿಲ್ಲ. ಆದರೆ ಕೀಟನಾಶಕಗಳಿಗೆ ಬೇಕಾದ ಮೀಥೈಲ್ ಐಸೊಸೈನೇಟ್ (ಎಮ್‌ಐಸಿ) ಎಂಬ ಮೂಲವಿಷವನ್ನು ತಯಾರಿಸುತ್ತಿದ್ದ ಯೂನಿಯನ್ ಕಾರ್ಬೈಡ್ ಫ್ಯಾಕ್ಟರಿಯಲ್ಲಿ 1984ರ ಡಿಸೆಂಬರಿನಲ್ಲಿ ಸೋರಿಕೆ ಸಂಭವಿಸಿ, ನಾಲ್ಕು ಸಾವಿರ ಜನರ ಪ್ರಾಣ ತೆಗೆದು ಇಂದಿಗೂ ಸಂಕಷ್ಟಗಳಿಂದ ಮುಕ್ತಿ ಸಿಕ್ಕಿಲ್ಲ.

ರಸಗೊಬ್ಬರವಾಗಿ ಬಳಕೆಯಾಗುವ ಅಮೋನಿಯಂ ನೈಟ್ರೇಟ್ ಬಿಳಿಪುಡಿಯ ರೂಪದಲ್ಲಿದ್ದು, ಯೂರಿಯಾದಂತೆ ಕಾಣುತ್ತದೆ. ಯೂರಿಯಾದಲ್ಲಿ ಶೇ. 45ರಷ್ಟು ಸಾರಜನಕ (ನೈಟ್ರೋಜನ್) ಇದ್ದರೆ ಇದರಲ್ಲಿ ತುಸು ಕಡಿಮೆ, ಅಂದರೆ ಶೇ 34ರಷ್ಟು ನೈಟ್ರೋಜನ್ ಇದೆ. ಹತ್ತು ಮೂಟೆ ಯೂರಿಯಾ ಒಯ್ಯುವ ಬದಲು, ಅಷ್ಟೇ ಸಾರಜನಕ ಪಡೆಯಲು ಹನ್ನೆರಡು ಮೂಟೆ ಅಮೋನಿಯಂ ನೈಟ್ರೇಟನ್ನು ಸಾಗಿಸಬೇಕಾಗುತ್ತದೆ.

ಅನುಕೂಲ ಏನೆಂದರೆ ಯೂರಿಯಾದಷ್ಟು ಸುಲಭವಾಗಿ ಅಮೋನಿಯಂ ನೈಟ್ರೇಟ್ ಆವಿಯಾಗಿ ವಾತಾವರಣಕ್ಕೆ ವ್ಯರ್ಥ ಸೇರುವುದಿಲ್ಲ. ಯೂರಿಯಾದ ಹಾಗೆ ಇದೂ ತೇವವನ್ನು ಹೀರಿಕೊಂಡು ಗಟ್ಟಿ ಮುದ್ದೆಯಾಗುತ್ತದೆ. ನೀರಿನ ಸ್ಪರ್ಶದಿಂದ ತಂಪಾಗುತ್ತದೆ; ಅಷ್ಟೇ ಸುಲಭವಾಗಿ ಬೆಂಕಿಯ ಸ್ಪರ್ಶದಿಂದ ಸ್ಫೋಟಗೊಳ್ಳುತ್ತದೆ. ಮುದ್ದೆಯಾಗಿದ್ದರಂತೂ ಸ್ಫೋಟ ಇನ್ನೂ ಶಕ್ತಿಶಾಲಿಯಾಗಿರುತ್ತದೆ.

ಕೆಲವು ದೇಶಗಳಲ್ಲಿ ರೈತರು ಇದನ್ನು ಗೊಬ್ಬರಕ್ಕಿಂತ ಹೆಚ್ಚಾಗಿ ಸ್ಫೋಟಕದಂತೆ ಬಳಸಿ ಕೆರೆಹೊಂಡ, ಇಂಗುಗುಂಡಿಗಳನ್ನು ಸೃಷ್ಟಿಸಲು ಬಳಸುತ್ತಾರೆ. ಧ್ವಂಸವಾದಿಗಳು ಅಮೋನಿಯಂ ನೈಟ್ರೇಟ್ ಮುದ್ದೆಯ ಜೊತೆಗೆ ಇನ್ನೊಂದು ವಸ್ತುವನ್ನು ಇಟ್ಟು (ಅದೇನೆಂಬುದು ಇಲ್ಲಿ ಬೇಡ) ಸ್ಫೋಟಕವನ್ನು ಸಿದ್ಧಪಡಿಸುತ್ತಾರೆ.

ಲಕ್ಷಾಂತರ ಜನರನ್ನು ಆಸ್ಪತ್ರೆಗಳಿಗೆ ಅಟ್ಟಿದ ಅಮೋನಿಯಂ ನೈಟ್ರೇಟ್ ಪುಡಿ ಬೇರೊಂದು ಕಾರಣಕ್ಕಾಗಿ ತಾನೇ ಆಸ್ಪತ್ರೆಗೆ ಹೋಗಿ ಕೂತಿರುತ್ತದೆ. ಗಾಯ, ಉಳುಕು, ಊತಗಳಿಗೆ ತಕ್ಷಣ ತಂಪು ನೀಡಬೇಕೆಂದರೆ ಐಸ್‌ಪ್ಯಾಕ್ ಬಳಸುತ್ತಾರೆ ತಾನೆ? ನಮ್ಮ ಆಸ್ಪತ್ರೆಗಳಲ್ಲಿ ಕರೆಂಟ್ ಇರುವುದಿಲ್ಲ, ಇದ್ದರೂ ಫ್ರಿಜ್ ಕೆಟ್ಟಿರುವಾಗ ಐಸ್ ಸಿಗುವುದಿಲ್ಲ. ಅಂಥ ಸಂದರ್ಭದಲ್ಲಿ ಅಮೋನಿಯಂ ನೈಟ್ರೇಟ್ ಪುಡಿಗೆ ನೀರು ಸೇರಿಸಿದರೆ ಬರ್ಫದಷ್ಟು ತಂಪಾಗುತ್ತದೆ.

ಪ್ರಥಮ ಶುಶ್ರೂಷೆಯ ಪೆಟ್ಟಿಗೆಗಳಲ್ಲಿ ಅದು ರೆಡಿಮೇಡ್ ರೂಪದಲ್ಲೂ ಸಿಗುತ್ತದೆ. ಅಂದರೆ, ಒಂದು ಚೀಲದಲ್ಲಿ ನೀರು ಹಾಕಿ, ರಸಗೊಬ್ಬರದ ಪುಡಿಯ ಪೊಟ್ಟಣ ಇಟ್ಟು ಸೀಲ್ ಮಾಡಿ ಇಟ್ಟಿರುತ್ತಾರೆ. ಚೀಲವನ್ನು ಜೋರಾಗಿ ಒತ್ತಿದರೆ, ಒಳಗಿದ್ದ ಪುಡಿಯ ಪೊಟ್ಟಣ ಹರಿದು ನೀರಿನೊಂದಿಗೆ ಕರಗುತ್ತದೆ. ಸ್ಫೋಟವಾಗುವುದಿಲ್ಲ. ಬದಲಿಗೆ ಸುತ್ತಲಿನ ಶಾಖವನ್ನೆಲ್ಲ ಶೀಘ್ರವಾಗಿ ಹೀರಿಕೊಂಡು ಇಡೀ ಚೀಲವೇ ಅತಿಶೀತಲವಾಗುತ್ತದೆ. ಯೂರಿಯಾವನ್ನು ನೀರಲ್ಲಿ ಕರಗಿಸಿದರೂ ಹೀಗೆ ಮಂಜುಗಡ್ಡೆಯಷ್ಟು ತಂಪಿನ ಅನುಭವವಾಗುತ್ತದೆ; ರೈತರಿಗೆ ಗೊತ್ತಿರುವ ಸಂಗತಿ ಇದು.

ಹಾಗೆ ನೋಡಿದರೆ ಸ್ಫೋಟದ ಧ್ವಂಸಕ್ಕಿಂತ, ಆಮೊನಿಯಂ ನೈಟ್ರೇಟನ್ನು ರಸಗೊಬ್ಬರದ ಪುಡಿಯಾಗಿ ಹೊಲ-ಗದ್ದೆಗಳಿಗೆ ಎರಚುವಾಗ ಕೃಷಿಕರ ಆರೋಗ್ಯದ ಮೇಲಾಗುವ ಹಾನಿಯೇ ತೀರ ದೊಡ್ಡದು. ಎಲ್ಲ ಬಗೆಯ ರಸಗೊಬ್ಬರ ಬಳಸುವಾಗಲೂ ತುಂಬಾ ಎಚ್ಚರಿಕೆ ಬೇಕು. ಅಮೋನಿಯಂ ನೈಟ್ರೇಟ್ ವಿಷ(ಯ)ದ ಬಗ್ಗೆ ಜಾಗರೂಕತೆ ಎಷ್ಟಿದ್ದರೂ ಸಾಲದು.

ಅದನ್ನು ಎರಚುವಾಗ ಉಸಿರು, ಕಣ್ಣು, ತ್ವಚೆ, ಗಂಟಲು ಎಲ್ಲಕ್ಕೂ ಸೂಕ್ಷ್ಮ ಕಣಗಳು ಅಂಟಿಕೊಳ್ಳುತ್ತವೆ. ಅವು ತುಸು ಕಿರಿಕಿರಿ ಎಂದು ಮೊದಲು ಅನಿಸಿದರೂ ದೀರ್ಘ ಕಾಲೀನ ಪರಿಣಾಮ ಘಾತುಕ ಸ್ವರೂಪದ್ದಾಗಿರುತ್ತವೆ. ವಿಜ್ಞಾನಿಗಳು ಪಟ್ಟಿ ಮಾಡಿರುವ ಮಾಹಿತಿಗಳ ಪ್ರಕಾರ ಇವನ್ನು ಪದೇ ಪದೇ ಬಳಸುತ್ತಿದ್ದರೆ, ಕರುಳಿಗೆ, ಮೂತ್ರಪಿಂಡಕ್ಕೆ, ಶ್ವಾಸಕೋಶಗಳಿಗೆ, ನರಕೋಶ ಧಕ್ಕೆ ತರುತ್ತದೆ ಅಷ್ಟೇ ಅಲ್ಲ, ಕೆಲವರಲ್ಲಿ ಅದು ಕ್ಯಾನ್ಸರ್ ಉಂಟುಮಾಡುತ್ತದೆ, ಕೆಲವರಿಗೆ ವಿಕಲಾಂಗ ಶಿಶುಗಳು ಜನಿಸುತ್ತವೆ.

ನಮ್ಮಲ್ಲಿ ರೈತರಿಗೆ ಎಚ್ಚರಿಕೆ ಕೊಡುವುದು ಹಾಗಿರಲಿ, ಅವರು ಬಳಸುವ ರಸಗೊಬ್ಬರದಲ್ಲಿ ನೈಟ್ರೇಟ್ ಪ್ರಮಾಣ ಎಷ್ಟಿದೆ, ಯಾವ ರೂಪದಲ್ಲಿದೆ ಎಂಬುದರ ಮಾಹಿತಿಯೂ ಸ್ಥಳೀಯ ಭಾಷೆಯಲ್ಲಿ ಇರುವುದಿಲ್ಲ. ಘಾಟು ಕೀಟನಾಶಕಗಳನ್ನೇ ಮುಖವಾಡ ತೊಡದೆ ಸಿಂಪಡನೆ ಮಾಡುವ ರೈತರು ಸಭ್ಯ ಸಕ್ಕರೆಪುಡಿಯಂತೆ ಕಾಣುವ ಅ. ನೈಟ್ರೇಟ್ ಲವಣಗಳನ್ನು ಬಿಡುಬೀಸಾಗಿ ಬಳಸುತ್ತಾರೆ.

ಅನಕ್ಷರಸ್ಥರ ಕತೆ ಹಾಗಿರಲಿ, ಗ್ರಾಮೀಣ ವಿದ್ಯಾರ್ಥಿಗಳ ಪಠ್ಯ ಪುಸ್ತಕಗಳಲ್ಲಿ ರಸಗೊಬ್ಬರ, ಕೀಟನಾಶಕಗಳ ದುರ್ಬಳಕೆ ಬಗ್ಗೆ ಒಂದು ವಾಕ್ಯವೂ ಕಾಣಸಿಗುವುದಿಲ್ಲ. ಪಂಜಾಬಿನ ಊರೂರಿನಲ್ಲಿ ಕ್ಯಾನ್ಸರ್ ಹಬ್ಬಿದ್ದು ಹಾಗೂ ಅವರು ಏರುವ ರೈಲಿಗೆ  ಕ್ಯಾನ್ಸರ್ ಟ್ರೇನ್ ಎಂತಲೇ ಹೆಸರು ಬಂದಿದ್ದು ಈಗೀಗ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆಯಾದರೂ ಅಂಥ ಮಾಹಿತಿ ದಶಕಗಳ ನಂತರವಾದರೂ ಪಠ್ಯಪುಸ್ತಕಗಳಲ್ಲಿ ಬರುತ್ತದೊ ಹೇಳುವಂತಿಲ್ಲ.

ಪಂಜಾಬಿನ ವಿಷಯ ದೂರದ್ದು ಬಿಡಿ, ಟ್ರೇನ್‌ಗಳೇ ಇಲ್ಲದ ನಮ್ಮ ಊರುಗಳ ಸಂಗತಿ ಇನ್ನೂ ಕ್ರೂರವಿದ್ದೀತು. ಬಸ್‌ಗಳಲ್ಲಿ, ಟೆಂಪೊಗಳಲ್ಲಿ, ಟ್ರ್ಯಾಕ್ಟರ್‌ಗಳಲ್ಲಿ ಹಳ್ಳಿಗಳಿಂದ ನಿತ್ಯವೂ ಪಟ್ಟಣಗಳ ಆಸ್ಪತ್ರೆಗೆ ಬರುವ ರೈತರ ಗೋಳನ್ನು ನೋಡುವವರು ಯಾರು? ಬಂದರೂ ನೆಮ್ಮದಿ ಇದೆಯೆ?  ಅವರ ಸ್ಥಿತಿಯನ್ನು ನೋಡೋಕಾಗ್ತಿಲ್ಲಾರೀ ಪಾಪ  ಎನ್ನುತ್ತಾರೆ, ಕಳೆದ ವಾರವಷ್ಟೆ ಬಳ್ಳಾರಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಓಡಾಡಿ ಬಂದ ವೈದ್ಯಲೇಖಕಿ ಡಾ. ವಸುಂಧರಾ ಭೂಪತಿ.

ಹಳ್ಳಿಗಳಲ್ಲಂತು ನೆಲವೇ ವಿಷಮಯವಾಗಿದೆ. ಪಟ್ಟಣಕ್ಕೆ ಬಂದರೆ ಉಸಿರಲ್ಲಿ ಕಬ್ಬಿಣದ ಅದುರಿನ ದೂಳು, ಕುಲುಮೆಗಳ ಮಾಲಿನ್ಯ, ಕಲ್ಲಿದ್ದಲ ಪುಡಿಯ ಸಿಂಚನ. ಸಮೀಕ್ಷೆ ಮಾಡಿದರೆ ಊರೂರಲ್ಲಿ ಕಾಮಾಲೆ, ಆಸ್ತಮಾ, ಗರ್ಭಕೋಶದ ಕ್ಯಾನ್ಸರ್, ವಿಕಲಾಂಗ ಶಿಶುಗಳ ಜನನಗಳ ಸರಮಾಲೆಯೇ ಸಿಗಬಹುದು. ಕೃಷಿ ವಿಜ್ಞಾನಿಗಳೇ ಆಗಲಿ, ವೈದ್ಯ ತಜ್ಞರೇ ಆಗಲಿ, ಆರೋಗ್ಯ ಇಲಾಖೆಯ ಆಡಳಿತಶಾಹಿಯೇ ಆಗಲಿ, ಗ್ರಾಮೀಣ ಭಾರತದ ಆರೋಗ್ಯ ಸಮೀಕ್ಷೆ ನಡೆಸುವುದನ್ನು ನಾವು ಎಂದಾದರೂ ಕೇಳಿದ್ದೇವೆಯೆ?

ಫ್ಯಾಕ್ಟರಿಗಳಲ್ಲಿ ತಯಾರಾಗುವ ಹಾಗೂ ವಿದೇಶಗಳಿಂದ ಆಮದು ಆಗುವ ವಿಷಗಳೆಲ್ಲವನ್ನೂ ಗ್ರಾಮಭಾರತಕ್ಕೆ ಸುರಿಯುವ ಸರ್ಕಾರ ಅಲ್ಲಿನವರ ಆರೋಗ್ಯ ರಕ್ಷಣೆಗೆ ಮಾತ್ರ ಹಣವನ್ನು ಮೀಸಲಿಡುವುದಿಲ್ಲ. ಮತದಾರರಿಗೆ ಟಿವಿ, ವಾಷಿಂಗ್ ಮಶಿನ್‌ಗಳ ಆಮಿಷ ಒಡ್ಡುವ ಅಭ್ಯರ್ಥಿಗಳು ಎಲ್ಲಾದರೂ ಊರಿನ ಆಸ್ಪತ್ರೆಗೆ ಕಡೇ ಪಕ್ಷ ಒಂದು ಪ್ರಥಮ ಸಹಾಯದ ಪೆಟ್ಟಿಗೆಯನ್ನಾದರೂ ಒದಗಿಸಿದ ಉದಾಹರಣೆ ಇದೆಯೆ? ಅಮೋನಿಯಂ ನೈಟ್ರೇಟ್ ಸ್ಫೋಟಿಸಿದಾಗೆಲ್ಲ ದೌಡಾಯಿಸಿ ಸುದ್ದಿ ಮಾಡುವ ಮಾಧ್ಯಮಗಳು ಜಿಲ್ಲಾ ಆಸ್ಪತ್ರೆಯ ರೋಗಿಗಳ ಸಮೀಕ್ಷೆ ನಡೆಸಿ ಸ್ಫೋಟಕ ಸುದ್ದಿಯನ್ನು ಪ್ರಕಟಿಸಿದ್ದು ಎಲ್ಲಾದರೂ ಉಂಟೆ?

ಸ್ಫೋಟದ ವಿಷಯವನ್ನೇ ಇಂದು ಮತ್ತೆ ಮತ್ತೆ ಪ್ರಸ್ತಾಪಿಸಲು ಕಾರಣವೇನೆಂದರೆ ಭೂಮಿಯ ಮೇಲಿನ ಇದುವರೆಗಿನ ಅನಿರೀಕ್ಷಿತ ಸ್ಫೋಟಗಳಲ್ಲಿ ಅತ್ಯಂತ ಭೀಕರವೆನಿಸಿದ ಚೆರ್ನೊಬಿಲ್ ಪರಮಾಣು ಸ್ಥಾವರ ಸ್ಫೋಟವಾಗಿ ನಾಳೆ ಏಪ್ರಿಲ್ 26ಕ್ಕೆ 26 ವರ್ಷಗಳು ತುಂಬಿದವು. ಹಿರೊಶಿಮಾಕ್ಕಿಂತ 400 ಪಟ್ಟು ಹೆಚ್ಚಿನ ವಿಕಿರಣವನ್ನು ಎರಡು ಲಕ್ಷ ಚದರ ಕಿ.ಮೀವರೆಗೆ ಚದುರಿಸಿ, ಮೂರೂವರೆ ಲಕ್ಷ ಜನರ ಎತ್ತಂಗಡಿಗೆ ಕಾರಣವಾದ ಈ ದುರಂತದಲ್ಲಿ ಮಡಿದವರ ಲೆಕ್ಕ ಎಂದೂ ಸಿಗುವಂತಿಲ್ಲ.

ಅಷ್ಟೇನೂ ಸುದ್ದಿಯಾಗದ ಸ್ಫೋಟಕ ವಿಷಯ ಏನು ಗೊತ್ತೆ? ಕೂಡುಂಕುಳಂ ಪರಮಾಣು ಸ್ಥಾವರಕ್ಕೆ ಯಂತ್ರ ಸಾಮಗ್ರಿಗಳನ್ನು ಪೂರೈಸುತ್ತಿದ್ದ ರಷ್ಯದ ಝಿಯೊ ಪೊಡೊಸ್ಕ್ ಎಂಬ ಸರ್ಕಾರಿ ಕಂಪೆನಿಯ ನಿರ್ದೇಶಕ ಸರ್ಗಿ ಶುಟೊವ್‌ನನ್ನು ಭ್ರಷ್ಟಾಚಾರ ಮತ್ತು ವಂಚನೆಯ ಆರೋಪಗಳ ಮೇಲೆ ಜೈಲಿಗೆ ಕಳಿಸಿದ್ದಾರೆ. ಕಳಪೆ ಸಾಮಗ್ರಿಗಳನ್ನು ಉತ್ತಮವೆಂದು ಭಾರತ, ಚೀನಾ, ಬಲ್ಗೇರಿಯಾ ಮತ್ತು ಇರಾನಿನ ಪರಮಾಣು ಸ್ಥಾವರಗಳಿಗೆ ರವಾನಿಸಿ ಹಣ ನುಂಗುತ್ತಿದ್ದ ಆರೋಪ ಈತನ ಮೇಲಿದೆ.

ಕೂಡುಂಕುಳಂ ಸ್ಥಾವರದ ಸುರಕ್ಷತೆಗೆ ಬೇಕಿದ್ದ ಎಲ್ಲ ಸೂಕ್ಷ್ಮ ಉಪಕರಣಗಳೂ ಝಿಯೊ ಕಂಪೆನಿಯಿಂದಲೇ ಬಂದಿದ್ದು, ಯಾವುದೂ ಈ ಮೊದಲು ರಷ್ಯದಲ್ಲಿ ಪರೀಕ್ಷೆಗೊಳಪಟ್ಟಿರಲಿಲ್ಲ ಎಂಬುದೂ ತಿಳಿದು ಬಂದಿದೆ. ಅವನ್ನೆಲ್ಲ ಕಳಚಿ ಹಾಕಿ ಹೊಸದನ್ನು ಜೋಡಿಸದೇ ಸ್ಥಾವರವನ್ನು ಅವಸರದಲ್ಲಿ ಚಾಲೂ ಮಾಡಿದರೆ - ಮುಂದೊಂದು ದಿನ ಅಲ್ಲಿ ಚೆರ್ನೊಬಿಲ್ ಮಾದರಿಯ ಸ್ಫೋಟವೇ ಫುಕುಶಿಮಾ ಮಾದರಿಯ ಭೂಕಂಪನ ಮತ್ತು ಸುನಾಮಿಯನ್ನು ಉಂಟುಮಾಡೀತು.

- ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in-

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT