ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರಕ ಸಂಸ್ಕೃತಿ ಎಲ್ಲಿಯವರೆಗೆ?

Last Updated 11 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಸ್ಮಾರಕ ನಿರ್ಮಾಣ ಎನ್ನುವ ವಿಷಯವೇ ಖುಷಿಗಿಂತ ಹೆಚ್ಚಾಗಿ ವಿವಾದಕ್ಕೆ ಕಾರಣವಾಗುತ್ತದೆ. ಸಾಹಿತಿ ಆರ್.ಕೆ. ನಾರಾಯಣ್ ಅವರ ಮೈಸೂರಿನ ಮನೆ ಸ್ಮಾರಕವಾಗುವುದರ ಬಗ್ಗೆ ಸಾಹಿತಿಗಳ ಒಂದು ವರ್ಗ ಆಕ್ಷೇಪ ವ್ಯಕ್ತಪಡಿಸಿರುವುದು, ಅದರ ಪರ ಮತ್ತು ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವುದು ಈಗ ಎಲ್ಲರಿಗೂ ಗೊತ್ತಿರುವ ವಿಚಾರ.
 
ಆರ್.ಕೆ. ನಾರಾಯಣ್ ಸಿನಿಮಾ ರಂಗಕ್ಕೂ ಸ್ವಲ್ಪ ಪರಿಚಿತರೇ. ಶಂಕರ್‌ನಾಗ್ `ಮಾಲ್ಗುಡಿ ಡೇಸ್~ ಮೂಲಕ ನಾರಾಯಣ್ ಅವರನ್ನು ಕಿರುತೆರೆಗೆ ಪರಿಚಯಿಸಿದರು. ಕನ್ನಡ, ಹಿಂದಿ ಎರಡೂ ಭಾಷೆಯಲ್ಲಿ ಧಾರಾವಾಹಿ ಜನಪ್ರಿಯವಾಯಿತು.

ಇತ್ತೀಚೆಗೆ ಮಾಲ್ಗುಡಿ ಮರು ಪ್ರಸಾರವೂ ಆಯಿತು. ಒಂದು ಜನಪ್ರಿಯ ಧಾರಾವಾಹಿಯಾಗಿ ಇದು ಮತ್ತೆ ಮತ್ತೆ ಪ್ರಸಾರವಾಗುತ್ತಲೇ ಇರುತ್ತದೆ. ಆರ್.ಕೆ. ನಾರಾಯಣ್ ಅವರನ್ನು ನೆನಪಿಸುತ್ತಲೇ ಇರುತ್ತದೆ. ಟಿ.ಎಸ್, ನಾಗಾಭರಣ, `ಬ್ಯಾಂಕರ್ ಮಾರ್ಗಯ್ಯ~ ಮೂಲಕ ಆರ್.ಕೆ. ನಾರಾಯಣ್ ಅವರ ಸಾಹಿತ್ಯವನ್ನು ಸಿನಿಮಾ ಜಗತ್ತಿಗೆ ಪರಿಚಯಿಸಿದರು.
 
ಸಾಹಿತ್ಯ ಮತ್ತು ಸಿನಿಮಾ ಒಂದಕ್ಕೊಂದು ಪೂರಕ ಮಾಧ್ಯಮವಾಗಿರುವುದರಿಂದ, ಇವೆರಡಕ್ಕೂ ಅವಿನಾಭಾವ ಸಂಬಂಧ ಇರುವುದರಿಂದ ನಾರಾಯಣ್ ಸಾಹಿತ್ಯ ಕೂಡ ಸಿನಿಮಾ ಚೌಕಟ್ಟಿಗೆ ಹೊಂದಿಕೊಂಡಿತು.

ಹೆಸರಾಂತ ಸಾಹಿತಿಗಳ ಸಾಹಿತ್ಯ ಹೀಗೆ ಸಿನಿಮಾದಲ್ಲಿ ಮಿಳಿತವಾಗಿದೆ. ಕುವೆಂಪು, ಬೇಂದ್ರೆ, ಮಾಸ್ತಿ, ಶಿವರಾಮಕಾರಂತ, ಚಂದ್ರಶೇಖರ ಕಂಬಾರ, ಭೈರಪ್ಪ, ಅನಂತಮೂರ್ತಿ, ಕಾರ್ನಾಡ್ ಹೀಗೆ ಎಲ್ಲ ಖ್ಯಾತ ಸಾಹಿತಿಗಳ ಕೃತಿಗಳು ಸಿನಿಮಾ ಆಗಿವೆ.
 
ಆದರೆ ಸಿನಿಮಾದವರಾರೂ ಇವರನ್ನು ಸಿನಿಮಾ ರಂಗಕ್ಕೆ ಸೇರಿದವರು ಎಂದು ಹೇಳುವುದಿಲ್ಲ. ಸಾಹಿತಿಗಳು ಎಂದೇ ಅವರನ್ನು ವರ್ಗೀಕರಿಸುತ್ತಾರೆ. ಆರ್.ಕೆ. ನಾರಾಯಣ್ ಅವರ ವಿವಾದದಲ್ಲಿ ಸಿನಿಮಾದವರು ಪ್ರತಿಕ್ರಿಯಿಸಲೇ ಇಲ್ಲ. ನಮಗೂ ಅದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ಮೌನವಾಗಿದ್ದಾರೆ.
 
ಸಾಹಿತ್ಯವಲಯದಲ್ಲಿ ನಾರಾಯಣ್‌ರ ಸ್ಮಾರಕಕ್ಕೆ ವಿರೋಧ ವ್ಯಕ್ತವಾಗುತ್ತಲೇ ಇದೆ. (ಹಾಗೆ ನೋಡಿದರೆ ಮೈಸೂರಿನಲ್ಲಿ ಸ್ಮಾರಕ ಮಾಡುವ ಸಂಗತಿಗಳು ಬಹಳ ಇದೆ. ನವಜ್ಯೋತಿ ಸ್ಟುಡಿಯೋ, ಪ್ರೀಮಿಯರ್ ಸ್ಟುಡಿಯೋ ಇವುಗಳೆಲ್ಲ ಚಿತ್ರಜಗತ್ತಿಗೆ ಅಮೂಲ್ಯ ಕೊಡುಗೆ ನೀಡಿದ ಸ್ಥಳಗಳು. ಇಂತಹವೂ ಸ್ಮಾರಕಗಳಾಗಬೇಕು).

ಇತ್ತ ಬೆಳಗಾವಿಗೆ ಬನ್ನಿ. ಅಲ್ಲಿ ನಿರ್ಮಿಸಲಾಗಿರುವ `ಸುವರ್ಣ ಸೌಧ~ಕ್ಕೆ ಶಿವಸೇನೆಯ ಉದ್ಧವ್ ಠಾಕ್ರೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಕ್ಷೇಪಗಳಿಗೆ ಅರ್ಥವೇ ಇರುವುದಿಲ್ಲ. ಸಂಕುಚಿತ ಮನೋಭಾವ ಕೆಲವು ವಿಷಯಗಳಲ್ಲಿ ಪ್ರಧಾನವಾಗಿ ಕಾಣುತ್ತದೆ.

ರಾಜಕೀಯ, ಭಾಷಾಂಧತೆ ಮೊದಲಾದವು ಎದ್ದು ಕಾಣುತ್ತದೆ. ಸ್ಮಾರಕದ ಹಿಂದಿನ ಸಂಸ್ಕೃತಿಯನ್ನು ಗುರುತಿಸುವಷ್ಟು ಸಹನೆ ಕೆಲವರಲ್ಲಿ ಇಲ್ಲ. ಅಷ್ಟಲ್ಲದೆ ಈ ಸ್ಮಾರಕಗಳು ಏಕೆ? ಸಮಾಧಿಗಳ ಸಂರಕ್ಷಣೆ ಏಕೆ? ದೇಶದ ತುಂಬ ರಸ್ತೆ ರಸ್ತೆಗಳಲ್ಲಿ ಪ್ರತಿಮೆ ಸ್ಥಾಪನೆ ಏಕೆ? ಇವು ಇತಿಹಾಸದ ಹೆಜ್ಜೆ ಗುರುತುಗಳೇ ಹೌದು.

ಶಿಲಾಯುಗದ ಕಾಲದ ಕೆತ್ತನೆಗಳಾಗಲಿ, ಪ್ರತಿಮೆಗಳಾಗಲಿ, ಬಂಡೆಗಳ ಮೇಲಿನ ಕೆತ್ತನೆಗಳಾಗಲಿ ಇವೆಲ್ಲಾ ಇಂದು ನಮಗೆ ಇತಿಹಾಸವನ್ನು ಹೇಳುತ್ತವೆ. ಷೇಕ್ಸ್‌ಪಿಯರ್‌ನ ಮನೆ, ಕುವೆಂಪು ಅವರ ಕುಪ್ಪಳಿ ಮನೆ ಇವೆಲ್ಲಾ ಮಹಾಕವಿಯ ದರ್ಶನ ಮಾಡಿಸುತ್ತವೆ.

ಸಾಹಿತಿಗಳು, ವರ್ಣರಂಜಿತ ವ್ಯಕ್ತಿಗಳ, ದಾರ್ಶನಿಕರ, ಸಿನಿಮಾ, ರಂಗಭೂಮಿಯ ಮೇರು ವ್ಯಕ್ತಿಗಳ ಮನೆಯನ್ನು ಸ್ಮಾರಕ ಮಾಡಿ, ಸಾರ್ವಜನಿಕ ದರ್ಶನಕ್ಕೆ ಅನುವು ಮಾಡಿಕೊಡುವುದರಿಂದ ಆಯಾಕ್ಷೇತ್ರಕ್ಕೆ ಅವರ ಕೊಡುಗೆ ಅವರಲ್ಲಿದ್ದ ಕಲೆ ಶಾಶ್ವತವಾಗಿ, ಆದರ್ಶವಾಗಿ ಜನ ಸಂಸ್ಕೃತಿಯ ನಡುವೆ ಉಳಿದುಕೊಂಡಂತಾಗುತ್ತದೆ.

ಸಂಸ್ಕೃತಿಯೊಂದರ ಜೀವಂತಿಕೆ ಅದು. ಆದರೆ ಸ್ಮಾರಕ ನಿರ್ಮಾಣದಲ್ಲೂ ಅರೆಮನಸ್ಸಿದ್ದರೆ, ಅದರಲ್ಲಿ ಖಚಿತತೆ ಇಲ್ಲದಿದ್ದರೆ ಅದು ಅರ್ಥ ಕಳೆದುಕೊಳ್ಳುತ್ತದೆ. ಕನ್ನಡ ಚಿತ್ರರಂಗದ ಮೊಟ್ಟ ಮೊದಲ ನಾಯಕ ನಟ ಎಂ.ವಿ. ಸುಬ್ಬಯ್ಯನಾಯ್ಡು ಅವರ ಮನೆಯಾಗಲಿ, ಸಮಾಧಿಯಾಗಲಿ ಎಲ್ಲಿದೆ ಎಂಬುದು ಗೊತ್ತಿಲ್ಲ. ರಂಗಭೂಮಿ, ಸಿನಿಮಾ ಎರಡೂ ಕ್ಷೇತ್ರಗಳಲ್ಲಿ ಸಾಧನೆ ಮೆರೆದ ಗುಬ್ಬಿ ವೀರಣ್ಣ ಅವರ ಸಮಾಧಿ ಗುಬ್ಬಿಯಿಂದಾಚೆ ಯಾರೂ ಕೇಳಲಾಗದ, ನೋಡಲಾಗದ ದುಃಸ್ಥಿತಿಯಲ್ಲಿದೆ.
 
ರಾಜಕುಮಾರ್ ಅವರ ಸಮಾಧಿಯೇನೋ ಒಂದು ರೂಪಕ್ಕೆ ಬಂದಿದೆ. ಆದರೆ ಅಲ್ಲಿ ರಾಜ್‌ಕುಮಾರ್ ಅವರ ಸಂಪೂರ್ಣ ವ್ಯಕ್ತಿತ್ವದರ್ಶನ ಮೂಡಿಸುವ ಕೆಲಸ ಅಸ್ಪಷ್ಟವಾಗಿದೆ. ವಿಷ್ಣುವರ್ಧನ್ ಅವರ ಸಮಾಧಿ ಸ್ಮಾರಕವನ್ನು ಮೈಸೂರಿಗೆ ಸ್ಥಳಾಂತರಿಸುವ ಚರ್ಚೆ ನಡೆಯುತ್ತಿದೆ.
 
ಒಟ್ಟಿನಲ್ಲಿ ಸ್ಮಾರಕ ನಿರ್ಮಿಸುವ ವಿಷಯ ಕೆಲವೆಡೆ ಒಲ್ಲದ ಮನಸ್ಸಿನಿಂದ ನಡೆಯುತ್ತಿದೆ. ಮತ್ತೆ ಕೆಲವು ಸಂಗತಿಗಳು ವಿವಾದಕ್ಕೆ ಈಡಾಗುತ್ತಿವೆ. ಇತ್ತೀಚೆಗಂತೂ ಸ್ಮಾರಕ ನಿರ್ಮಾಣ ಎನ್ನುವುದು ಆಯಾ ವ್ಯಕ್ತಿಗಳ ಕುಟುಂಬದ ಸದಸ್ಯರ ಆಸಕ್ತಿಯಿಂದ ನಡೆಯುತ್ತಿದೆಯೇ ಹೊರತು ಜನಾಪೇಕ್ಷೆಯಿಂದ ಅಲ್ಲ ಎನ್ನುವುದು ಸಾಬೀತಾಗುತ್ತಿದೆ. ಬಲವಂತ ಸ್ಮಾರಕಗಳು ನಮಗೆ ಬೇಕೇ?

ಇವೆಲ್ಲದ್ದಕ್ಕಿಂತ ವ್ಯತಿರಿಕ್ತವಾಗಿ ಪಾಕಿಸ್ತಾನದಲ್ಲಿನ ಬೆಳವಣಿಗೆಯೊಂದನ್ನು ಪ್ರಸ್ತಾಪಿಸಬಹುದು. ಬಾಲಿವುಡ್‌ನಲ್ಲಿ ಖ್ಯಾತ ನಟರಾಗಿದ್ದ ರಾಜ್‌ಕಪೂರ್ ಅವರ ಮನೆಯನ್ನು ಪೆಶಾವರದ ಮೊಹಲ್ಲಾವೊಂದರಲ್ಲಿ ಪತ್ತೆಹಚ್ಚಿ, ಅದನ್ನು ಸಂರಕ್ಷಿಸಿ, ಮ್ಯೂಸಿಯಂ ಆಗಿ ಪರಿವರ್ತಿಸಲಾಗುತ್ತಿದೆ.

ರಾಜ್‌ಕಪೂರ್ ಅವರ ಮುತ್ತಾತ ಬಾಷಿಷ್‌ಹರನಾಥ್ ಅವರ ಸ್ವಂತ ಮನೆ ಇದು. 1924ರಲ್ಲಿ ರಾಜ್‌ಕಪೂರ್ ಜನಿಸಿದ್ದೇ ಇಲ್ಲಿ. ಐದು ಅಂತಸ್ತಿನ ಈ ಮನೆಯಲ್ಲೇ ಪೃಥ್ವಿರಾಜ್‌ಕಪೂರ್ ಸಿನಿಮಾ ಜೀವನ ಆರಂಭಿಸಿದರು. 1929ರಲ್ಲಿ ಪೃಥ್ವಿರಾಜ್ ಹಿಂದೀ ಚಿತ್ರಗಳಲ್ಲಿ ಅಭಿನಯಿಸಲು ಮುಂಬೈನತ್ತ ಬಂದರು.

ಪೆಶಾವರದಲ್ಲಿ ಈಗ ಹಿಂದೀ ಚಲನಚಿತ್ರಗಳದ್ದೇ ದರ್ಬಾರು. ಹಿಂದೀ ನಟ ನಟಿಯರೆಂದರೆ ಪ್ರೇಕ್ಷಕರು ಮುಗಿಬೀಳುತ್ತಾರೆ. ಜಪಾನಿನಲ್ಲಿ ರಜನೀಕಾಂತ್ ಎಂದರೆ ಪ್ರೇಕ್ಷಕರು ಖುಷಿಯಾಗುತ್ತಾರೆ.

ರಾಜ್‌ಕಪೂರ್‌ಗೆ ರಷ್ಯಾದಲ್ಲೂ ಅಭಿಮಾನಿಗಳಿದ್ದರು ಎನ್ನಿ. ಪೃಥ್ವಿರಾಜ್‌ಕಪೂರ್ ಇದ್ದ ಈ ಮನೆಯಲ್ಲಿ ಬಾಡಿಗೆದಾರರೊಬ್ಬರಿದ್ದಾರೆ. ಖೈಬರ್ ಪ್ರಾಂತ್ಯದ ಸರ್ಕಾರ ಅದನ್ನು ಖರೀದಿಸಿ, ವಶಕ್ಕೆ ಪಡೆದು ಮ್ಯೂಸಿಯಂ ಆಗಿ ಪರಿವರ್ತಿಸುವ ಕೆಲಸ ಆರಂಭಿಸಿದೆ. ಅಲ್ಲಿನ ಸಂಸ್ಕೃತಿ ಸಚಿವರು ಈ ಯೋಜನೆಗೆ ಅನುಮೋದನೆ ಕೊಟ್ಟಿದ್ದಾರೆ.

ಪೃಥ್ವಿರಾಜ್ ಮತ್ತು ರಾಜ್‌ಕಪೂರ್ 1929ರಲ್ಲೇ ಪೆಶಾವರದಿಂದ ಮುಂಬೈಗೆ ತೆರಳಿದ್ದಾರೆ. `ವಿಶ್ವ ಸಿನಿಮಾರಂಗಕ್ಕೆ ಪೆಶಾವರದ ಕೊಡುಗೆ~ ಎನ್ನುವ ರೀತಿಯಲ್ಲಿ ಪೆಶಾವರದ ಜನ ಹೆಮ್ಮೆಯಿಂದ ಈ ವಿಷಯವನ್ನು ಹೇಳುತ್ತಿದ್ದಾರೆ. ಅವರು ಭಾರತೀಯ, ಪಾಕ್ ಪ್ರಜೆಯಲ್ಲ ಎನ್ನುವ ಭಾವನೆಗಿಂತ `ನಮ್ಮವನೊಬ್ಬ~ ಎನ್ನುವ ಭಾವನೆ ಮೆರೆದಿರುವುದೇ ಇಲ್ಲಿನ ವೈಶಿಷ್ಟ್ಯ.
 
ಕೇರಳದಿಂದ ಆಮದಾದ ಎಂ.ಜಿ.ಆರ್. ತಮಿಳುನಾಡಿನವರಾಗಲಿಲ್ಲವೇ? ಕರ್ನಾಟಕದಿಂದ ತೆರಳಿ ಭಾರತದ ಸೂಪರ್ ಸ್ಟಾರ್ ಆಗಿರುವ ಮರಾಠಿಗ ರಜನೀಕಾಂತ್, ತಮಿಳುನಾಡಿನಲ್ಲಿ ನೆಲೆ ನಿಂತರೂ, ನಮ್ಮ ಕರ್ನಾಟಕದವರು ಎಂದು ನಾವು ಹೇಳುವುದಿಲ್ಲವೇ? ಜಯಲಲಿತಾ, ಪ್ರಕಾಶ್‌ರಾಜ್, ಐಶ್ವರ್ಯರೈ ಇವರೆಲ್ಲಾ ಕನ್ನಡಿಗರಾದರೂ ಹೊರ ರಾಜ್ಯಗಳಲ್ಲಿ ಅವರಿಗೆ ಮಣೆ ಹಾಕಿಲ್ಲವೇ?
ಕಲೆಗೆ, ಭಾಷೆ ಎನ್ನುವುದು ಮುಖ್ಯವೇ ಅಲ್ಲ. ಜಾತಿ, ಧರ್ಮಗಳನ್ನು ಮೀರಿದ ಗೌರವ ಕಲೆ, ಸಾಹಿತ್ಯಕ್ಕಿದೆ. ಆ ಸಂಸ್ಕೃತಿ ಜನಸಾಮಾನ್ಯರಲ್ಲಿ ಹಾಸು ಹೊಕ್ಕಿದೆ.

ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯರಾಗಿರುವ ನಟ ದಿಲೀಪ್‌ಕುಮಾರ್ (ಮಹಮದ್ ಯೂಸೂಫ್ ಖಾನ್) ಅವರ ಮನೆಯನ್ನು ಖೈಬರ್ ಫುಕ್ತುವಾ ಸರ್ಕಾರ `ರಾಷ್ಟ್ರೀಯ ಸ್ಮಾರಕ~ ಎಂದು ಘೋಷಿಸಿದೆ. ಅಲ್ಲಿ ದಿಲೀಪ್‌ಕುಮಾರ್ ಅವರಿಗೆ ಸಂಬಂಧಿಸಿದ ಚಿತ್ರ, ಹಾಗೂ ಎಲ್ಲ ವಿವರಗಳನ್ನು ಸಂಗ್ರಹಿಸಿಡಲಾಗಿದೆ.
 
ರಾಜ್‌ಕಪೂರ್ ಅವರಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಐದು ಅಂತಸ್ತಿನ ಅವರ ಪೂರ್ವಜರ ಮನೆಯಲ್ಲಿ ಸಂಗ್ರಹಿಸಿ ಸಾರ್ಥಕ ಸ್ಮಾರಕವನ್ನಾಗಿಸುವ ಕೆಲಸ ನಡೆಯುತ್ತಿದೆ. ಚಿತ್ರ ನಟನೇ ಆಗಿರಲಿ, ಸಾಹಿತಿಯೇ ಆಗಿರಲಿ ಸ್ಮಾರಕ ನಿರ್ಮಿಸಬೇಕು ಎಂದು ತೀರ್ಮಾನಿಸಿದ ನಂತರ ಅವನ್ನು ಪೂರ್ಣಗೊಳಿಸಿ ಸಂಪೂರ್ಣ ಶ್ರದ್ಧೆಯಿಂದ ಸಂರಕ್ಷಿಸಬೇಕಾಗುತ್ತದೆ. ಚೆನ್ನೈನಲ್ಲಿ ಎಂ.ಜಿ.ಆರ್. ಮನೆಯ ವಿಷಯವನ್ನೇ ನೋಡಿ.

ಅವರು ವಾಸವಿದ್ದ ಮನೆಯನ್ನೇ ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ. ಇಡೀ ಮನೆಯನ್ನೇ ಜೀವಂತ ಸ್ಮಾರಕ ಮಾಡುವುದು, ನಟರ ಅಭಿಮಾನಿಗಳಿಗೆ ಪುಳಕತರುವಂತಹ ವಿಷಯವೇ ಸರಿ.
 
ಎಲ್ಲ ನಟರ, ಸಾಹಿತಿಗಳ ವಿಷಯದಲ್ಲೂ ಇದೇ ಆಗಬೇಕು. ಆರ್.ಕೆ. ನಾರಾಯಣ್ ಅವರ ಮನೆಯನ್ನು ಖರೀದಿ ಮಾಡಿದಂತೆ ವ್ಯಾಪಾರವಾದರೂ ಸರಿ, ಸಂರಕ್ಷಿಸುತ್ತ, ಮುಂದಿನ ಜನಾಂಗಕ್ಕೆ ಅದನ್ನು ಬಿಟ್ಟು ಹೋಗುವ ಕೆಲಸ ಆಗಬೇಕು. 


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT