ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಮ್‌ಸಂಗ್ ಗೇರ್ ಎಸ್ 3: ಮತ್ತೊಮ್ಮೆ ದುಬಾರಿ ಸ್ಮಾರ್ಟ್‌ವಾಚ್

Last Updated 5 ಜುಲೈ 2017, 19:30 IST
ಅಕ್ಷರ ಗಾತ್ರ

ಮಾಮೂಲಿ ವಾಚ್‌ಗಳಿಗಿಂತ ಹೆಚ್ಚಿನ ಕೆಲಸ ಮಾಡಬಲ್ಲ ಬುದ್ಧಿವಂತ ವಾಚ್‌ಗಳನ್ನು ಸ್ಮಾರ್ಟ್‌ವಾಚ್ ಎನ್ನುತ್ತಾರೆ. ಅವುಗಳಲ್ಲೂ ಹಲವು ನಮೂನೆಗಳಿವೆ. ಹಲವು ಕಂಪೆನಿಗಳು ಸ್ಮಾರ್ಟ್‌ವಾಚ್‌ಗಳನ್ನು ತಯಾರಿಸುತ್ತಿವೆ. ಎಲ್ಲ ನಮೂನೆಯ ಗ್ಯಾಜೆಟ್‌ಗಳನ್ನು ತಯಾರಿಸುತ್ತಿರುವ ಪ್ರಖ್ಯಾತ ಕಂಪೆನಿ ಸ್ಯಾಮ್‌ಸಂಗ್ ಕೂಡ ಈ ಪಟ್ಟಿಯಲ್ಲಿದೆ. ಅವರ ಸ್ಮಾರ್ಟ್‌ವಾಚ್ ಎಸ್2 ಅನ್ನು ಇದೇ ಅಂಕಣದಲ್ಲಿ ವಿಮರ್ಶೆ ಮಾಡಲಾಗಿತ್ತು. ಈ ಸಲ ವಿಮರ್ಶೆ ಮಾಡುತ್ತಿರುವುದು ಸ್ಯಾಮ್‌ಸಂಗ್ ಕಂಪೆನಿಯ ಗೇರ್ ಎಸ್3 ಸ್ಮಾರ್ಟ್‌ವಾಚ್ (Samsung Gear S3).

ಗುಣವೈಶಿಷ್ಟ್ಯಗಳು

ಸ್ಮಾರ್ಟ್‌ವಾಚ್, 1 ಗಿಗಾಹರ್ಟ್ಸ್ ವೇಗದ ಪ್ರೊಸೆಸರ್ (Exynos 7270, Dual 1.0GHz), 768 ಮೆಗಾಬೈಟ್ ಪ್ರಾಥಮಿಕ ಮತ್ತು 4 ಗಿಗಾಬೈಟ್ ಸಂಗ್ರಹ ಮೆಮೊರಿ, 1.3 ಇಂಚು ಗಾತ್ರದ ಅಮೋಲೆಡ್ (AMOLED) ಸ್ಪರ್ಶಸಂವೇದಿ ಪರದೆ, ಗೊರಿಲ್ಲಾ ಗಾಜು, 360 x 360 ಪಿಕ್ಸೆಲ್ ರೆಸೊಲ್ಯೂಶನ್, ಬ್ಲೂಟೂತ್, ವೈಫೈ ಮತ್ತು ಎನ್‌ಎಫ್‌ಸಿ ಸಂಪರ್ಕ, 46 x 49 x 12.9 ಮಿ.ಮೀ. ಗಾತ್ರ, 57 ಗ್ರಾಂ ತೂಕ, 380 mAh ಶಕ್ತಿಯ ಬ್ಯಾಟರಿ. ಕ್ಲಾಸಿಕ್ ಮತ್ತು ಫ್ರಾಂಟಿಯರ್ ಎಂಬ ಎರಡು ಮಾದರಿಗಳಲ್ಲಿ ಲಭ್ಯ. ಕ್ಲಾಸಿಕ್ ಮಾದರಿಯ ಬೆಲೆ ಸುಮಾರು 28 ರಿಂದ 29 ಸಾವಿರ ರೂಪಾಯಿ.

ಇದು ಸ್ಯಾಮ್‌ಸಂಗ್ ಗೇರ್ ಎಸ್2ಗೆ ಸಂಪೂರ್ಣ ಬದಲಿಯಾಗಿ ಬಂದುದಲ್ಲ. ಎಸ್2ನಲ್ಲಿ 3ಜಿ ಸಿಮ್ ಹಾಕಬಹುದಾದ ಒಂದು ಮಾದರಿ ಇತ್ತು. ಎಸ್3ಯ ಎರಡೂ ಮಾದರಿಗಳಲ್ಲಿ ಸಿಮ್ ಹಾಕಲು ಸಾಧ್ಯವಿಲ್ಲ. ನಿಮಗೆ ಸಿಮ್ ಹಾಕುವ ಸ್ಮಾರ್ಟ್‌ವಾಚೇ ಬೇಕಿದ್ದಲ್ಲಿ ನೀವು ಎಸ್2 ಅನ್ನೇ ಕೊಳ್ಳಬೇಕು.

ರಚನೆ ಮತ್ತು ವಿನ್ಯಾಸ ಚೆನ್ನಾಗಿದೆ. ಎರಡು ಮಾದರಿಗಳೂ ವೃತ್ತಾಕಾರದಲ್ಲಿವೆ. ಬಲ ಭಾಗದಲ್ಲಿ ಎರಡು ಬಟನ್‌ಗಳಿವೆ. ಬದಲಿಸಬಹುದಾದ ಬೆಲ್ಟ್‌ಗಳಿವೆ. ಹಲವು ಬಣ್ಣ, ವಿನ್ಯಾಸದ ಬೆಲ್ಟ್‌ಗಳು ಲಭ್ಯವಿವೆ. ಪರದೆಯ ಮೇಲೆ ಬೆರಳಿನಲ್ಲಿ ಒತ್ತಿ ಸರಿಸಿದರೆ ಬೇರೆ ಬೇರೆ ಕಿರುತಂತ್ರಾಂಶಗಳನ್ನು (ಆ್ಯಪ್) ಒಂದೊಂದಾಗಿ ಬದಲಿಸಬಹುದು. ಚಾಲನೆಯಲ್ಲಿರುವ ಸಾಮಾನ್ಯ ಕಿರುತಂತ್ರಾಂಶಗಳೆಂದರೆ ಹವಾಮಾನ, ಕ್ಯಾಲೆಂಡರ್ ಮತ್ತು ದಿನಚರಿ, ಎಷ್ಟು ಹೆಜ್ಜೆ ನಡೆದಿದ್ದೇನೆ ಎಂಬ ಮಾಹಿತಿ, ಹೃದಯಬಡಿತದ ಸಂಖ್ಯೆ, ಇತ್ತೀಚೆಗಿನ ಸುದ್ದಿ ಮುಖ್ಯಾಂಶಗಳು ಮತ್ತು ಸಂದೇಶಗಳು, ಸಂಗೀತ ಪ್ಲೇಯರ್. ಹೀಗೆ ಯಾವುದೇ ಕಿರುತಂತ್ರಾಂಶವನ್ನು ಬಳಸುತ್ತಿದ್ದಾಗ ಮೇಲ್ಗಡೆಯ ಬಟನ್ ಒತ್ತಿದರೆ ವಾಚಿನ ಪ್ರಮುಖ ಪರದೆಗೆ ಹೋಗಬಹುದು. ಕೆಳಗಡೆಯ ಬಟನ್ ಒತ್ತಿದರೆ ಫೋನಿನಲ್ಲೇ ಇದ್ದ ಮತ್ತು ನೀವು ಇನ್‌ಸ್ಟಾಲ್ ಮಾಡಿದ ಕಿರುತಂತ್ರಾಂಶಗಳ ಐಕಾನ್‌ಗಳು ಕಂಡುಬರುತ್ತವೆ. ಇವು ಪರದೆಯಲ್ಲಿ ವೃತ್ತಾಕಾರದಲ್ಲಿರುತ್ತವೆ. ಈ ವಾಚಿನ ವೃತ್ತಾಕಾರದ ಫ್ರೇಂ ತಿರುಗುತ್ತದೆ. ಅದನ್ನು ತಿರುಗಿಸಿದಾಗ ಬೇರೆ ಬೇರೆ ಕಿರುತಂತ್ರಾಂಶಗಳ ಮುಂದೆ ಚಿಕ್ಕ ಚುಕ್ಕಿ ಒಂದರಿಂದ ಇನ್ನೊಂದಕ್ಕೆ ಸರಿಯುತ್ತದೆ. ಯಾವ ಕಿರುತಂತ್ರಾಂಶವನ್ನು ಬಳಸಬೇಕೋ ಅದರ ಮುಂದೆ ಚುಕ್ಕಿ ಬಂದಾಗ ಮೇಲ್ಗಡೆಯ ಬಟನ್ ಒತ್ತಿ ಅದನ್ನು ಚಾಲನೆ ಮಾಡಬಹುದು. ವಾಚಿನ ವಿವಿಧ ಆಯ್ಕೆಗಳನ್ನೂ ಮಾಡಲು ಇಲ್ಲೇ ಸೌಲಭ್ಯವಿದೆ. ಉದಾಹರಣೆಗೆ, ಬ್ಲೂಟೂತ್ ಅಥವಾ ವೈಫೈ, ಇತ್ಯಾದಿ. ಒಟ್ಟಿನಲ್ಲಿ ಇದರ ರಚನೆ ಮತ್ತು ವಿನ್ಯಾಸಕ್ಕೆ ಪೂರ್ತಿ ಮಾರ್ಕು ನೀಡಬಹುದು.

ಈ ಸ್ಮಾರ್ಟ್‌ವಾಚ್ ಕೆಲಸ ಮಾಡಬೇಕಾದರೆ ಇದು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್ ಆಗಿರುವ ಸ್ಯಾಮ್‌ಸಂಗ್ ಗೇರ್ ಎಂಬ ಕಿರುತಂತ್ರಾಂಶ (ಆ್ಯಪ್) ಜೊತೆ ಬ್ಲೂಟೂತ್ ಸಂಪರ್ಕ ಹೊಂದಬೇಕು. ಅಂದರೆ ನಿಮ್ಮಲ್ಲಿ ಸ್ಮಾರ್ಟ್‌ವಾಚ್ ಇಲ್ಲವಾದಲ್ಲಿ ಈ ವಾಚ್ ನಿರುಪಯುಕ್ತ. ಈ ಕಿರುತಂತ್ರಾಂಶ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳಲ್ಲಿ ತುಂಬ ಚೆನ್ನಾಗಿ ಕೆಲಸ ಮಾಡುತ್ತದೆ. ಇತರೆ ಫೋನ್‌ಗಳಲ್ಲಿ ಕೆಲವೊಮ್ಮ ಸರಿಯಾಗಿ ಇನ್‌ಸ್ಟಾಲ್ ಕೂಡ ಆಗುವುದಿಲ್ಲ. ಇನ್‌ಸ್ಟಾಲ್ ಆದರೂ ಅದನ್ನು ಪ್ರಾರಂಭ ಮಾಡಿದಾಗ ಕೆಲವು ಫೋನ್‌ಗಳಲ್ಲಿ ಸರಿಯಾಗಿ ಕೆಲಸ ಮಾಡುವುದಿಲ್ಲ. ಒಟ್ಟಿನಲ್ಲಿ ಈ ಕಿರುತಂತ್ರಾಂಶದ ಪೂರ್ತಿ ಪ್ರಯೋಜನ ಪಡೆಯಬೇಕಾದರೆ ನೀವು ಮೆಲ್ದರ್ಜೆಯ, ಅಂದರೆ ದುಬಾರಿಯಾದ ಸ್ಯಾಮ್‌ಸಂಗ್ ಫೋನ್‌ (ಉದಾ– ಗ್ಯಾಲಕ್ಸಿ ಎಸ್8) ಕೊಳ್ಳಬೇಕು!

ವಾಚಿನ ಅಡಿಭಾಗದಲ್ಲಿ ಹೃದಯ ಬಡಿತವನ್ನು ದಾಖಲಿಸುವ ಸಂವೇದಕ ಇದೆ. ಅದು ವಾಚಿನ ಅಡಿಭಾಗದಲ್ಲಿರುವ ಉಕ್ಕಿನ ಕವಚದ ಮಧ್ಯಭಾಗದಲ್ಲಿ ಚಿಕ್ಕ ಕಿಂಡಿಯಂತಿದೆ. ಅದಕ್ಕೆ ಗೊರಿಲ್ಲ ಗಾಜಿನ ಹೊದಿಕೆಯಿದೆ. ಹೃದಯಬಡಿತವನ್ನು ಅಳೆಯುವ ಹಲವು ಕಿರುತಂತ್ರಾಂಶಗಳು ಆಂಡ್ರಾಯ್ಡ್ ಫೋನ್‌ಗಳಿಗೆ ಲಭ್ಯವಿವೆ. ಅವು ಕ್ಯಾಮೆರಾವನ್ನು ಬಳಸುತ್ತವೆ. ಅಂತಹ ಕಿರುತಂತ್ರಾಂಶವು ತೋರಿಸುವ ಸಂಖ್ಯೆಗೂ ಈ ವಾಚ್ ತೋರಿಸುವ ಸಂಖ್ಯೆಗೂ ಸಣ್ಣ ವ್ಯತ್ಯಾಸ ಕಂಡುಬಂತು.

ಪರದೆ ನೋಡಲು ಚೆನ್ನಾಗಿದೆ. ಅಮೋಲೆಡ್ ಪರದೆಯಾಗಿರುವುದ ರಿಂದ ಹೆಚ್ಚು ಬ್ಯಾಟರಿ ಬಳಸುವುದಿಲ್ಲ. ಬ್ಯಾಟರಿ ಸುಮಾರು ಮೂರು ದಿನ ಬಾಳಿಕೆ ಬರುತ್ತದೆ. ಎಸ್2ನಲ್ಲಿ ಸುಮಾರು ಒಂದೂವರೆ ದಿನ ಮಾತ್ರ ಬಾಳಿಕೆ ಬರುತ್ತಿತ್ತು. ವಾಚನ್ನು ಚಾರ್ಜ್ ಮಾಡಲು ಒಂದು ಪೀಠವಿದೆ. ಆ ಪೀಠದಲ್ಲಿ ವಾಚನ್ನು ಇಟ್ಟರೆ ಸಾಕು. ಯಾವುದೇ ನೇರ ಸಂಪರ್ಕವಿಲ್ಲದೆ ನಿಸ್ತಂತು ವಿಧಾನದಿಂದ ವಾಚ್ ಚಾರ್ಜ್ ಆಗುತ್ತದೆ. ಈ ಪೀಠಕ್ಕೆ ಯುಎಸ್‌ಬಿ ಕೇಬಲ್ ಮೂಲಕ ವಿದ್ಯುತ್ ಸಂಪರ್ಕ ನೀಡಬೇಕು. ಸುಮಾರು ಒಂದು ಗಂಟೆಯಲ್ಲಿ ಚಾರ್ಜ್ ಆಗುತ್ತದೆ.

ಈ ವಾಚಿನಲ್ಲಿ ಬಳಕೆಯಾಗಿರುವುದು ಸ್ಯಾಮ್‌ಸಂಗ್‌ನವರೇ ಅಭಿವೃದ್ಧಿಗೊಳಿಸಿರುವ ಟೈಝೆನ್ ಎಂಬ ಕಾರ್ಯಾಚರಣ ವ್ಯವಸ್ಥೆ (operating system). ಆದರೆ ಟೈಝೆನ್ ತೊಂದರೆಯೆಂದರೆ ಈ ಕಾರ್ಯಾಚರಣ ವ್ಯವಸ್ಥೆಯನ್ನು ಸ್ಯಾಮ್‌ಸಂಗ್‌ನವರು ಮಾತ್ರ ಬಳಸುವುದು. ಅಂತೆಯೇ ಟೈಝೆನ್‌ಗೆ ಲಭ್ಯವಿರುವ ಕಿರುತಂತ್ರಾಂಶಗಳ ಸಂಖ್ಯೆ ಕಡಿಮೆ. ಪರದೆಯಲ್ಲಿ ಕಂಡುಬರುವ ವಾಚಿನ ಮುಖ ಬದಲಿಸಬಹುದು. ಹಲವು ವಿನ್ಯಾಸಗಳು ವಾಚಿನಲ್ಲೇ ಇವೆ. ಹೆಚ್ಚಿನ ವಿನ್ಯಾಸಗಳನ್ನು ಡೌನ್‌ಲೋಡ್ ಮಾಡಬಹುದು. ವಾಚಿನಲ್ಲಿ ಬಳಸಲು ಸ್ಯಾಮ್‌ಸಂಗ್‌ನವರೇ ಹಲವು ಕಿರುತಂತ್ರಾಂಶಗಳನ್ನು ನೀಡಿದ್ದಾರೆ. ಹಲವು ಆಟಗಳೂ ಲಭ್ಯವಿವೆ.

ಈ ವಾಚಿನಲ್ಲಿರುವ ಆರೋಗ್ಯ ಸಂಬಂಧಿ ಕಿರುತಂತ್ರಾಂಶಗಳ ಪೂರ್ತಿ ಪ್ರಯೋಜನ ಪಡೆಯಬೇಕಿದ್ದರೆ ಇದರ ಜೊತೆ ಬಳಸುವ ಆಂಡ್ರಾಯ್ಡ್ ಫೋನಿನಲ್ಲಿ ಸ್ಯಾಮ್‌ಸಂಗ್‌ನವರ S Health ಎಂಬ ಕಿರುತಂತ್ರಾಂಶವನ್ನು ಹಾಕಿಕೊಳ್ಳಬೇಕು. ಪ್ರತಿ ದಿನ ಎಷ್ಟು ಹೆಜ್ಜೆ ನಡೆದಿದ್ದೇನೆ, ಎಷ್ಟು ಓಡಿದ್ದೇನೆ, ಎಷ್ಟು ಕ್ರಿಯಾಶೀಲನಾಗಿದ್ದೆ, ಇತ್ಯಾದಿ ಹಲವು ಮಾಹಿತಿಗಳನ್ನು ಸಂಗ್ರಹಿಸಿ ಅವುಗಳ ಗ್ರಾಫ್ ಮಾಡಿ ತೋರಿಸುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ ಒಂದು ಉತ್ತಮ, ಆದರೆ ದುಬಾರಿ ಸ್ಮಾರ್ಟ್‌ವಾಚ್ ಎನ್ನಬಹುದು. ಇದರ ಪೂರ್ತಿ ಪ್ರಯೋಜನ ಪಡೆಯಬೇಕಾದರೆ ನಿಮ್ಮಲ್ಲಿ ಮೇಲ್ದರ್ಜೆಯ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಕೂಡ ಇದ್ದರೆ ಒಳ್ಳೆಯದು. ಸ್ಯಾಮ್‌ಸಂಗ್ ಫೋನ್ ಇಲ್ಲದೆಯೂ ಬಳಸಬಹುದು.

**

ವಾರದ ಆ್ಯಪ್ (app): ಜಿಎಸ್‌ಟಿ ಲೆಕ್ಕ ಹಾಕಿ

ಜುಲೈ 1 ರಿಂದ ದೇಶಾದ್ಯಂತ ಏಕರೂಪ ತೆರಿಗೆ ವ್ಯವಸ್ಥೆ ಜಾರಿಗೆ ಬಂದಿದೆ. ಅದಕ್ಕೆ ಜಿಎಸ್‌ಟಿ, ಅಂದರೆ ಉತ್ಪನ್ನ ಮತ್ತು ಸೇವಾ ತೆರಿಗೆ ಎಂಬ ಹೆಸರಿದೆ. ಯಾವ ಯಾವ ಉತ್ಪನ್ನ ಮತ್ತು ಸೇವೆಗಳಿಗೆ ಎಷ್ಟು ಶೇಕಡ ತೆರಿಗೆ ಇದೆ ಎಂದು ತಿಳಿಯುವುದು ಹೇಗೆ? ನೀವು ಕೊಂಡುಕೊಂಡ ವಸ್ತುವಿಗೆ ಅಂಗಡಿಯಾತ ಸರಿಯಾದ ತೆರಿಗೆಯನ್ನೇ ವಿಧಿಸಿದ್ದಾನೆ ಎಂದು ತಿಳಿಯುವುದು ಹೇಗೆ? ನೀವು ಒಬ್ಬ ವ್ಯಾಪಾರಿಯಾಗಿದ್ದಲ್ಲಿ ನಿಮ್ಮಲ್ಲಿರುವ ಯಾವ ಯಾವ ವಸ್ತುಗಳಿಗೆ ಎಷ್ಟೆಷ್ಟು ಶೇಕಡ ತೆರಿಗೆ ವಿಧಿಸಬೇಕು, ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಬೇಕೆ? ಹಾಗಿದ್ದರೆ ಗೂಗಲ್‌ ಪ್ಲೇ ಸ್ಟೋರಿಗೆ ಭೇಟಿ ನೀಡಿ GST Rate Calculator with HSN/SAC code and Guide ಎಂದು ಹುಡುಕಿ ಅಥವಾ bit.ly/gadgetloka285 ಜಾಲತಾಣಕ್ಕೆ ಭೇಟಿ ನೀಡಿ.

**

ಗ್ಯಾಜೆಟ್ ಸುದ್ದಿ: ಬೆಳಕು ನೀಡುವ ಬ್ಯಾಗ್

ಹೈಟಿ ದೇಶದಲ್ಲಿ ವಿದ್ಯುತ್ ಸರಬರಾಜು ನಮ್ಮ ದೇಶಕ್ಕಿಂತಲೂ ಕೆಟ್ಟದಾಗಿದೆ. ಅಲ್ಲಿ ರಾತ್ರಿ ಹೊತ್ತಿನಲ್ಲಿ ಮೇಣದಬತ್ತಿ ಬೆಳಕಿನಲ್ಲಿ ಓದುತ್ತಿದ್ದಾತನೊಬ್ಬ ಮೇಣದಬತ್ತಿ ಅಡ್ಡಬಿದ್ದು ಬೆಂಕಿ ಅವಘಡವಾಗಿ ಅಸುನೀಗಿದ. ಅದರಿಂದ ನೊಂದ ಆತನ ಸಂಬಂಧಿಯೊಬ್ಬ ಈ ಸಮಸ್ಯೆಗೆ ಪರಿಹಾರ ರೂಪಿಸಲೇಬೇಕೆಂದುಕೊಂಡು ಹೊರಟ. ಕೊನೆಗೆ ಆತ ತಯಾರಿಸಿದ್ದು ಸೋಲಾರ್ ಪ್ಯಾನೆಲ್ ಮತ್ತು ಎಲ್‌ಇಡಿ ಬಲ್ಬ್ ಅಳವಡಿಸಿದ ಬ್ಯಾಗ್.

ಈ ಬ್ಯಾಗ್ ಹಗಲು ಹೊತ್ತು ಸೂರ್ಯನ ಬೆಳಕನ್ನು ಹೀರಿಕೊಂಡು ತನ್ನಲ್ಲಿರುವ ಬ್ಯಾಟರಿಯನ್ನು ಚಾರ್ಜ್ ಮಾಡಿಕೊಳ್ಳುತ್ತದೆ. ಈ ಬ್ಯಾಟರಿಯನ್ನು ವಿದ್ಯುತ್ ಮೂಲಕವೂ ಚಾರ್ಜ್ ಮಾಡಬಹುದು. ಬ್ಯಾಗಿನಲ್ಲಿ ಅಳವಡಿಸಿರುವ ಎಲ್‌ಇಡಿ ಬಲ್ಬ್ ಅನ್ನು ಬೇಕಿದ್ದಾಗ, ಅಂದರೆ ರಾತ್ರಿ ಹೊತ್ತಿನಲ್ಲಿ ಪ್ರಜ್ವಲಿಸಿ ಅದರ ಬೆಳಕಿನಲ್ಲಿ ಓದಬಹುದು. ಈ ಬ್ಯಾಗ್‌ನಲ್ಲಿ ಯುಎಸ್‌ಬಿ ಕಿಂಡಿಯೂ ಇದೆ. ಅದನ್ನು ಬಳಸಿ ಸ್ಮಾರ್ಟ್‌ಫೋನನ್ನು ಚಾರ್ಜ್ ಮಾಡಲೂಬಹುದು.

**

ಗ್ಯಾಜೆಟ್ ತರ್ಲೆ

 
ಬೆಳಕು ನೀಡುವ ಬ್ಯಾಗ್

ಹೈಟಿ ದೇಶದಲ್ಲಿ ವಿದ್ಯುತ್ ಸರಬರಾಜು ನಮ್ಮ ದೇಶಕ್ಕಿಂತಲೂ ಕೆಟ್ಟದಾಗಿದೆ. ಅಲ್ಲಿ ರಾತ್ರಿ ಹೊತ್ತಿನಲ್ಲಿ ಮೇಣದಬತ್ತಿ ಬೆಳಕಿನಲ್ಲಿ ಓದುತ್ತಿದ್ದಾತನೊಬ್ಬ ಮೇಣದಬತ್ತಿ ಅಡ್ಡಬಿದ್ದು ಬೆಂಕಿ ಅವಘಡವಾಗಿ ಅಸುನೀಗಿದ. ಅದರಿಂದ ನೊಂದ ಆತನ ಸಂಬಂಧಿಯೊಬ್ಬ ಈ ಸಮಸ್ಯೆಗೆ ಪರಿಹಾರ ರೂಪಿಸಲೇಬೇಕೆಂದುಕೊಂಡು ಹೊರಟ. ಕೊನೆಗೆ ಆತ ತಯಾರಿಸಿದ್ದು ಸೋಲಾರ್ ಪ್ಯಾನೆಲ್ ಮತ್ತು ಎಲ್‌ಇಡಿ ಬಲ್ಬ್ ಅಳವಡಿಸಿದ ಬ್ಯಾಗ್.

ಈ ಬ್ಯಾಗ್ ಹಗಲು ಹೊತ್ತು ಸೂರ್ಯನ ಬೆಳಕನ್ನು ಹೀರಿಕೊಂಡು ತನ್ನಲ್ಲಿರುವ ಬ್ಯಾಟರಿಯನ್ನು ಚಾರ್ಜ್ ಮಾಡಿಕೊಳ್ಳುತ್ತದೆ. ಈ ಬ್ಯಾಟರಿಯನ್ನು ವಿದ್ಯುತ್ ಮೂಲಕವೂ ಚಾರ್ಜ್ ಮಾಡಬಹುದು. ಬ್ಯಾಗಿನಲ್ಲಿ ಅಳವಡಿಸಿರುವ ಎಲ್‌ಇಡಿ ಬಲ್ಬ್ ಅನ್ನು ಬೇಕಿದ್ದಾಗ, ಅಂದರೆ ರಾತ್ರಿ ಹೊತ್ತಿನಲ್ಲಿ ಪ್ರಜ್ವಲಿಸಿ ಅದರ ಬೆಳಕಿನಲ್ಲಿ ಓದಬಹುದು. ಈ ಬ್ಯಾಗ್‌ನಲ್ಲಿ ಯುಎಸ್‌ಬಿ ಕಿಂಡಿಯೂ ಇದೆ. ಅದನ್ನು ಬಳಸಿ ಸ್ಮಾರ್ಟ್‌ಫೋನನ್ನು ಚಾರ್ಜ್ ಮಾಡಲೂಬಹುದು.

**

ಗ್ಯಾಜೆಟ್ ತರ್ಲೆ

ಫೇಸ್‌ಬುಕ್ ಪೋಸ್ಟ್‌ಗಳಿಗೆ, ಲೈಕುಗಳಿಗೆ ಮತ್ತು ಕಮೆಂಟುಗಳಿಗೆ ಇನ್ನೂ ಜಿಎಸ್‌ಟಿ ವಿಧಿಸಿಲ್ಲ. ಆದುದರಿಂದ ಧೈರ್ಯವಾಗಿ ಅವುಗಳನ್ನು ಬಳಸಬಹುದು.

**

ಗ್ಯಾಜೆಟ್ ಸಲಹೆ

ನಾಗರಾಜರ ಪ್ರಶ್ನೆ: ನನ್ನ ಲೆನೋವೋ ವೈಬ್ ಕೆ4 ನೋಟ್ (Lenovo Vibe K4 Note) ಕೆಲ ತಿಂಗಳುಗಳಿಂದ ಯಾವುದೇ ಆ್ಯಪ್ ಅನ್ನು ಸಂಗ್ರಹಣಾ ಮೆಮೊರಿಯಿಂದ ಇನ್‌ಸ್ಟಾಲ್ ಮಾಡಿಕೊಳ್ಳುತ್ತಿಲ್ಲ. ಆದರೆ ಪ್ಲೇ ಸ್ಟೋರ್‌ನಿಂದ ನೇರವಾಗಿ ಇನ್‌ಸ್ಟಾಲ್ ಆಗುತ್ತದೆ. ದಯಮಾಡಿ ಸಂಗ್ರಹಣಾ ಮೆಮೊರಿಯಿಂದ ಇನ್‌ಸ್ಟಾಲ್ ಮಾಡುವುದು ಹೇಗೆ ಎಂದು ತಿಳಿಸಿ.

ಉ: ನಿಮ್ಮ ಫೋನಿನ ಸುರಕ್ಷೆಯಲ್ಲಿ ಅಜ್ಞಾತ ಮೂಲಗಳಿಂದ ಕಿರುತಂತ್ರಾಂಶಗಳನ್ನು ಇನ್‌ಸ್ಟಾಲ್ ಮಾಡುವುದನ್ನು ಅನುವು ಮಾಡಿ. ಅದಕ್ಕಾಗಿ Security > Unknown sources ಎಂಬುದನ್ನು ಆಯ್ಕೆ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT