ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಂತೀ ಪ್ರಿಯರಿಗಾಗಿ ಜಿಯೋನೀ ಎ1

Last Updated 4 ಮೇ 2017, 17:46 IST
ಅಕ್ಷರ ಗಾತ್ರ

ಇತ್ತೀಚೆಗೆ ಬಹುತೇಕ ಎಲ್ಲ ಸ್ಮಾರ್ಟ್‌ಫೋನ್‌ಗಳನ್ನು ಫೋನ್ ಎಂದು ಮಾರಾಟ ಮಾಡುತ್ತಿಲ್ಲ. ಬದಲಿಗೆ ಕ್ಯಾಮೆರಾ ಎಂದೇ ಮಾರುತ್ತಿದ್ದಾರೆ. ಅದರಲ್ಲೂ ಕೆಲವರು ಸೆಲ್ಫೀ ಸ್ಪೆಶಲ್ ಎಂದು ಮಾರಾಟ ಮಾಡುತ್ತಿದ್ದಾರೆ. ಆ ಸಾಲಿಗೆ ಜಿಯೋನಿಯೂ ಸೇರಿದೆ. ಭಾರತದಲ್ಲಿ ಮಾರಾಟವಾಗುತ್ತಿರುವ  ಚೀನಾ ದೇಶದ ಸ್ಮಾರ್ಟ್‌ಫೋನ್‌ಗಳಲ್ಲಿ ಜಿಯೋನೀ ಕೂಡ ಒಂದು. ಈ ಕಂಪೆನಿಯ ಒಂದೆರಡು ಫೋನ್‌ಗಳನ್ನು ಈ ಅಂಕಣದಲ್ಲಿ ವಿಮರ್ಶಿಸಲಾಗಿತ್ತು. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಜಿಯೋನೀ ಎ1 (Gionee Marathon A1) ಎಂಬ ಫೋನನ್ನು.

ಗುಣವೈಶಿಷ್ಟ್ಯಗಳು
2 ಗಿಗಾಹರ್ಟ್ಸ್ ವೇಗದ ಎಂಟು ಹೃದಯಗಳ ಪ್ರೊಸೆಸರ್ (MT6755), 4+64 ಗಿಗಾಬೈಟ್ ಮೆಮೊರಿ, ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್ ಹಾಕುವ ಸೌಲಭ್ಯ, 2/3/4ಜಿ ಎರಡು ಸಿಮ್ (ಮೈಕ್ರೋ ಮತ್ತು ನ್ಯಾನೊ), 1920 x 1080 ಪಿಕ್ಸೆಲ್ ರೆಸೊಲೂಶನ್‌ನ 5.5 ಇಂಚು ಗಾತ್ರದ (13.97 ಸೆ.ಮೀ.) ಪರದೆ, 13 ಮೆಗಾಪಿಕ್ಸೆಲ್‌ ರೆಸೊಲೂಶನ್‌ನ ಪ್ರಾಥಮಿಕ ಮತ್ತು 16 ಮೆಗಾಪಿಕ್ಸೆಲ್ ರೆಸೊಲೂಶನ್‌ನ ಸ್ವಂತೀ ಕ್ಯಾಮೆರಾ, ಪ್ರಾಥಮಿಕ ಮತ್ತು ಸ್ವಂತೀ ಕ್ಯಾಮೆರಾಗಳಿಗೆ ಫ್ಲಾಶ್, ವೈಫೈ, ಬ್ಲೂಟೂತ್, ಎಫ್‌ಎಂ ರೇಡಿಯೊ, ಬೆರಳಚ್ಚು ಸ್ಕ್ಯಾನರ್, ಆಂಡ್ರಾಯ್ಡ್‌ 7, 154.5 x 76.5 x 8.3 ಮಿ.ಮೀ. ಗಾತ್ರ, 183 ಗ್ರಾಂ ತೂಕ, 4010 mAh ಶಕ್ತಿಯ, ತೆಗೆಯಲಸಾಧ್ಯವಾದ ಬ್ಯಾಟರಿ, ಇಯರ್‌ಬಡ್, ಇತ್ಯಾದಿ. ನಿಗದಿತ ಬೆಲೆ ₹21,499, ಅಮೆಝಾನ್‌ನಲ್ಲಿ ₹19,490ಕ್ಕೆ ದೊರೆಯುತ್ತಿದೆ. ಲೋಹದ ದೇಹವಿದೆ. ವಿಶೇಷ ಲೋಹದಿಂದ ದೇಹವನ್ನು ತಯಾರಿಸಲಾಗಿದೆ ಎಂದು ಕಂಪೆನಿಯವರು ಹೇಳಿಕೊಂಡಿದ್ದಾರೆ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಎಡಭಾಗದಲ್ಲಿ ಸಿಮ್ ಕಾರ್ಡ್‌ಗಳನ್ನು ಹಾಕಲು, ಪಿನ್‌ ಮೂಲಕ ಚುಚ್ಚಿದಾಗ ಹೊರಬರುವ ಚಿಕ್ಕ ಟ್ರೇ ಇದೆ. ಈ ಟ್ರೇಯಲ್ಲಿ ಒಂದು ಮೈಕ್ರೊಸಿಮ್ ಮತ್ತು ಮೆಮೊರಿ ಕಾರ್ಡ್‌ ಹಾಕಬಹುದು ಅಥವಾ ಒಂದು ಮೈಕ್ರೊ ಸಿಮ್ ಮತ್ತು ಒಂದು ನ್ಯಾನೋ ಸಿಮ್ ಹಾಕಬಹುದು. ಎದುರುಗಡೆ ಕೆಳಭಾಗದಲ್ಲಿ ಸಾಫ್ಟ್‌ಬಟನ್‌ಗಳಿವೆ. ಎದುರುಗಡೆ ಮಧ್ಯಭಾಗದಲ್ಲಿ ಬೆರಳಚ್ಚು ಸ್ಕ್ಯಾನರ್ ಇದೆ. ಕೆಳಭಾಗದಲ್ಲಿ ಯುಎಸ್‌ಬಿ ನಮೂನೆಯ ಕಿಂಡಿ ಇದೆ.

ಮೇಲ್ಭಾಗದಲ್ಲಿ 3.5 ಮಿ.ಮೀ. ಇಯರ್‌ಫೋನ್‌ ಕಿಂಡಿಗಳಿವೆ. ಹಿಂಭಾಗದ ಕವಚ ತುಂಬ ನುಣುಪೂ ಅಲ್ಲ, ತುಂಬ ದೊರಗೂ ಅಲ್ಲ ಎನ್ನಬಹುದು. ಬದಿಗಳಲ್ಲಿ ಸ್ವಲ್ಪ ಬಾಗಿದೆ. ಕೈಯಲ್ಲಿ ಹಿಡಿದುಕೊಂಡಾಗ ಒಂದು ಮೇಲ್ದರ್ಜೆ ಫೋನನ್ನು ಹಿಡಿದುಕೊಂಡ ಅನುಭವವಾಗುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ಫೋನಿನ ರಚನೆ ಮತ್ತು ವಿನ್ಯಾಸ ಚೆನ್ನಾಗಿದೆ. ಈ ವಿಭಾಗದಲ್ಲಿ ಇದಕ್ಕೆ ಪೂರ್ತಿ ಮಾರ್ಕು ನೀಡಬಹುದು.

ಈ ಫೋನ್ ಕಡಿಮೆ ಬೆಲೆಯದು ಅಲ್ಲ, ತುಂಬ ದುಬಾರಿಯೂ ಅಲ್ಲ, ಮಧ್ಯಮ ಬೆಲೆಯದು. ಆದರೆ ಇದರ ಪ್ರೊಸೆಸರ್ ವೇಗ ಅಷ್ಟೇನೂ ಇಲ್ಲ. ಅಂಟುಟು ಬೆಂಚ್‌ಮಾರ್ಕ್ 49,157 ಅಷ್ಟೇ ಇದೆ. ಹೋಲಿಕೆಗೆ ₹34,999 ಬೆಲೆಯ ಒನ್‌ಪ್ಲಸ್ 3ಟಿ ಫೋನಿನ ಅಂಟುಟು ಬೆಂಚ್‌ಮಾರ್ಕ್ 1,55,553 ಇದೆ. ಆದರೆ ದೈನಂದಿನ ಚಟುವಟಿಕೆಗಳಲ್ಲಿ ಇದು ಕಡಿಮೆ ವೇಗದ ಫೋನ್ ಎಂದು ಅನ್ನಿಸುವುದಿಲ್ಲ. ಸಾಮಾನ್ಯ ಆಟಗಳನ್ನು ಆಡುವ ಅನುಭವ ಚೆನ್ನಾಗಿಯೇ ಇದೆ. ಹಲವು ಮಂದಿ ತಮ್ಮ ಅನುಭವಗಳನ್ನು ಅಂತರಜಾಲದಲ್ಲಿ ದಾಖಲಿಸಿ ಈ ಫೋನ್ ಬೇಗನೆ ಬಿಸಿಯಾಗುತ್ತದೆ, ಅದರಲ್ಲೂ ಆಟ ಆಡುವಾಗ ತುಂಬ ಬಿಸಿಯಾಗುತ್ತದೆ ಎಂದು ಬರೆದಿದ್ದಾರೆ. ಆದರೆ ನನಗೆ ಹಾಗೆ ಅನ್ನಿಸಲಿಲ್ಲ.

ಈ ಫೋನಿನ ವೈಶಿಷ್ಟ್ಯವಿರುವುದು ಇದರ ಸ್ವಂತೀ (ಸೆಲ್ಫೀ) ಕ್ಯಾಮೆರಾದಲ್ಲಿ. ಇದರ ಪ್ರಾಥಮಿಕ ಕ್ಯಾಮೆರಾ 13 ಮೆಗಾಪಿಕ್ಸೆಲ್‌ನದು. ಅದರ ಕಿರುತಂತ್ರಾಂಶದಲ್ಲಿ (ಆ್ಯಪ್) ಹಲವು ವಿಶೇಷ ಸವಲತ್ತುಗಳನ್ನು ನೀಡಿದ್ದಾರೆ. ಮ್ಯಾನ್ಯುವಲ್ ವಿಧಾನವೂ ಇದೆ. ಮ್ಯಾನ್ಯುವಲ್ ವಿಧಾನದಲ್ಲಿ ಮ್ಯಾನ್ಯುವಲ್ ಫೋಕಸ್ ಕೂಡ ಇದೆ. ಆದರೆ ಷಟ್ಟರ್ ವೇಗದ ಆಯ್ಕೆಗಳು ಸಾಲದು. 1/30ಕ್ಕಿಂತ ಹೆಚ್ಚಿನ ಆಯ್ಕೆ ಇಲ್ಲ. ಪ್ರಾಥಮಿಕ ಕ್ಯಾಮೆರಾದ ಫಲಿತಾಂಶಗಳು ಕೆಲವು ಸಂದರ್ಭಗಳಲ್ಲಿ ಮಾತ್ರ ಚೆನ್ನಾಗಿ ಬರುತ್ತವೆ. ಕೆಲವೊಮ್ಮೆ ಫೋಕಸ್ ಮಾಡಲು ಸ್ವಲ್ಪ ಕಷ್ಟಪಡುತ್ತದೆ. ಕಡಿಮೆ ಬೆಳಕಿನಲ್ಲೂ ಫೋಟೊ ಅಷ್ಟೇನೂ ಚೆನ್ನಾಗಿ ಬರುವುದಿಲ್ಲ. ಸ್ವಂತೀ ಫೋಟೊಗಳು ಚೆನ್ನಾಗಿ ಬರುತ್ತವೆ. ಯಾಕೆಂದರೆ ಸ್ವಂತೀ ಕ್ಯಾಮೆರಾ 16 ಮೆಗಾಪಿಕ್ಸೆಲ್‌ನದು. ಸ್ವಂತೀ ತೆಗೆಯಲೂ ಫ್ಲಾಶ್ ಇರುವ ವಿಶೇಷ ಫೋನ್ ಇದು. ಸ್ವಂತೀ ತೆಗೆಯುವಾಗ ಹಲವು ವಿಶೇಷ ಆಯ್ಕೆಗಳೂ ಇವೆ. ಉತ್ತಮ ಸ್ವಂತೀ ಕ್ಯಾಮೆರಾ ಇರುವ ಫೋನ್‌ಗಳ ಪಟ್ಟಿಗೆ ಇದನ್ನು ಸೇರಿಸಬಹುದು.

ಪರದೆಯ ಗುಣಮಟ್ಟ ಚೆನ್ನಾಗಿದೆ. ಹೈಡೆಫಿನಿಶನ್ ಮಾತ್ರವಲ್ಲ 4k ವಿಡಿಯೊಗಳೂ ಪ್ಲೇ ಆಗುತ್ತವೆ. ಇದರ ಆಡಿಯೊ ಇಂಜಿನ್ ಸುಮಾರಾಗಿದೆ. ಇಯರ್‌ಬಡ್ ನೀಡಿದ್ದಾರೆ. ಆದರೆ ಒಂದೇ ಪ್ರತಿ ಕುಶನ್ ನೀಡಿದ್ದಾರೆ. ಇಯರ್‌ಬಡ್‌ನ ಗುಣಮಟ್ಟ ಮಾತ್ರ ಏನೇನೂ ಚೆನ್ನಾಗಿಲ್ಲ. ಸುಮಾರು ₹100-200ಕ್ಕೆ ಮಾರುಕಟ್ಟೆಯಲ್ಲಿ ದೊರೆಯುವ ಇಯರ್‌ಬಡ್‌ಗಳಿರುವಷ್ಟೇ ಗುಣಮಟ್ಟ ಇದರದ್ದಾಗಿದೆ. ನಿಮ್ಮಲ್ಲಿರುವ ಬೇರೆ ಉತ್ತಮ ಇಯರ್‌ಫೋನ್ ಜೋಡಿಸಿದರೆ ಸ್ವಲ್ಪ ಮಟ್ಟಿಗೆ ಉತ್ತಮ ಎನ್ನುವಂತಹ ಸಂಗೀತ ಆಲಿಸಬಹುದು.

ಹಲವು ತಯಾರಕರಂತೆ ಇವರೂ ಆಂಡ್ರಾಯ್ಡ್‌ ಅನ್ನು ಸ್ವಲ್ಪ ಬದಲಾಯಿಸಿದ್ದಾರೆ. ಆದರೆ ಈ ಬದಲಾವಣೆ ನನಗೆ ಇಷ್ಟವಾಗಿಲ್ಲ. ಕೆಲವು ಸಂದರ್ಭಗಳಲ್ಲಿ ಕಿರಿಕಿರಿಯಾಗುತ್ತದೆ. 4010 mAh ಶಕ್ತಿಯ ಬ್ಯಾಟರಿ ಇದೆ. ಆದರೆ ಇಷ್ಟು ಶಕ್ತಿಯ ಬ್ಯಾಟರಿ ಇದೆ ಎಂದು ಅನ್ನಿಸುವುದಿಲ್ಲ. ಒಂದೇ ದಿನದಲ್ಲಿ ಬ್ಯಾಟರಿ ಖಾಲಿಯಾಗುತ್ತದೆ. ಭಾಷೆಗಳಲ್ಲಿ ಇಂಗ್ಲಿಷ್‌ ಬಿಟ್ಟರೆ ಬೇರೆ ಯಾವ ಆಯ್ಕೆಯೂ ಇಲ್ಲ. ಕನ್ನಡದ ತೋರುವಿಕೆ (ರೆಂಡರಿಂಗ್) ಸರಿಯಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ಉತ್ತಮ ಸ್ವಂತೀ ನಿಮ್ಮ ಪ್ರಥಮ ಆದ್ಯತೆಯಾಗಿದ್ದರೆ, ಈ ಫೋನ್ ನೀವು ಕೊಳ್ಳಬಹುದು. ಆದರೂ ಬೆಲೆ ಸ್ವಲ್ಪ ಹೆಚ್ಚಾಯಿತು ಎಂದೇ ನನ್ನ ಅಭಿಪ್ರಾಯ. ಇದರ ವಿಡಿಯೊ ವಿಮರ್ಶೆ ನೋಡಬೇಕಿದ್ದರೆ bit.ly/gadgetloka276v ಜಾಲತಾಣಕ್ಕೆ ಭೇಟಿ ನೀಡಿ.

ವಾರದ ಆ್ಯಪ್: ಗಣಕದ ಮೂಲಕ ಫೋನ್ ನಿಯಂತ್ರಣ

ನಿಮ್ಮ ಆಂಡ್ರಾಯ್ಡ್ ಫೋನ್ ಬಳಸಿ ಯಾವುದಾದರೂ ಪ್ರೆಸೆಂಟೇಶನ್ ಮಾಡಬೇಕು ಎಂದಿಟ್ಟುಕೊಳ್ಳಿ. ಉದಾಹರಣೆಗೆ, ಸ್ಮಾರ್ಟ್‌ಫೋನ್ ಬಳಸುವುದು ಹೇಗೆ ಅಥವಾ ಆಂಡ್ರಾಯ್ಡ್‌ ಫೋನಿನಲ್ಲಿರುವ ಕೆಲವು ಕಿರುತಂತ್ರಾಂಶಗಳ ಕಾರ್ಯವಿಧಾನ ಹೇಗೆ ಎಂಬುದರ ಪ್ರಾತ್ಯಕ್ಷಿಕೆಯನ್ನು ಸಭಿಕರಿಗೆ ತೋರಿಸಬೇಕು. ಇಂತಹ ಸಂದರ್ಭದಲ್ಲಿ ನಿಮ್ಮ ಫೋನಿನ ಪರದೆಯನ್ನು ಲ್ಯಾಪ್‌ಟಾಪ್‌ನಲ್ಲಿ ಕೂಡ ತೋರಿಸಬೇಕು. ಆಗ ಅಲ್ಲಿಂದ ಪ್ರೊಜೆಕ್ಟರಿಗೆ ಜೋಡಿಸಿ ಪ್ರದರ್ಶಿಸಬಹುದು. ಹೀಗೆ ಮಾಡಲು ಅನುವು ಮಾಡಿಕೊಡುವ ಕಿರುತಂತ್ರಾಂಶ ಬೇಕಿದ್ದಲ್ಲಿ ನೀವು ಗೂಗಲ್‌ ಪ್ಲೇ ಸ್ಟೋರಿನಲ್ಲಿ Vysor - Android control on PC ಎಂದು ಹುಡುಕಬೇಕು ಅಥವಾ bit.ly/gadgetloka276 ಜಾಲತಾಣಕ್ಕೆ ಭೇಟಿ ನೀಡಬೇಕು. ಈ ಕಿರುತಂತ್ರಾಂಶಕ್ಕೆ ಪೂರಕ ತಂತ್ರಾಂಶವನ್ನು ನೀವು ಗಣಕದಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಈ ಕಿರುತಂತ್ರಾಂಶ ಬಳಸಿ ನೀವು ನಿಮ್ಮ ಆಂಡ್ರಾಯ್ಡ್‌ ಫೋನಿನ ಸಂಪೂರ್ಣ ನಿಯಂತ್ರಣವನ್ನು ನಿಮ್ಮ ಗಣಕದಿಂದಲೇ ಮಾಡಬಹುದು!

ಗ್ಯಾಜೆಟ್‌ ಸುದ್ದಿ: ಮಿಥ್ಯಾ  ಬೆರಳಚ್ಚು

ಇತ್ತೀಚೆಗೆ ಬರುತ್ತಿರುವ ಬಹುತೇಕ ಸ್ಮಾರ್ಟ್‌ಫೋನ್‌ಗಳಲ್ಲಿ ಬೆರಳಚ್ಚು ಸ್ಕ್ಯಾನರ್ ಇದೆ. ಕೈಗೆ ಗ್ಲೌಸ್ ಹಾಕಿದ್ದಾಗ ಬೆರಳಚ್ಚು ಮೂಲಕ ಫೋನನ್ನು ಅನ್‌ಲಾಕ್ ಮಾಡುವುದು ಹೇಗೆ? ಅದಕ್ಕೆಂದೇ ವಿಶೇಷ ಗ್ಲೌಸ್ ಬಂದಿದೆ. ಅದರಲ್ಲೂ ಒಂದು ಮಿಥ್ಯಾ ಬೆರಳಚ್ಚು ಸ್ಟಿಕ್ಕರ್ ಇದೆ. ಈ ಬೆರಳಚ್ಚನ್ನು ಒಮ್ಮೆ ನಿಮ್ಮ ಫೋನಿನಲ್ಲಿ ದಾಖಲಿಸಿಕೊಂಡರೆ ಮುಗಿಯಿತು. ನಂತರ ಗ್ಲೌಸ್ ಮೂಲಕ ಫೋನನ್ನು ಅನ್‌ಲಾಕ್ ಮಾಡಬಹುದು.

ಗ್ಯಾಜೆಟ್‌ ಸಲಹೆ

ಭೀಮ ಅವರ ಪ್ರಶ್ನೆ: ಲಇಕೊ ಲ2 ಮತ್ತು ನುಬಿಯ ಝಡ್ 11 ಮಿನಿ ಎಸ್ (LeEcole 2  Nubia Z 11 MiniS) ಇವುಗಳಲ್ಲಿ ಯಾವುದು ಉತ್ತಮ? 
ಉ: ಲಇಕೊ ಲ2.

ಗ್ಯಾಜೆಟ್‌ ತರ್ಲೆ: ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ. ಬೇಕಿದ್ದರೆ ನೋಡಿ. ಜಂಗಮರ ಕೈಯಲ್ಲೂ ಉಂಟು ಜಂಗಮವಾಣಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT