ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಂತೀಪ್ರಿಯರಿಗಾಗಿ ಮತ್ತೊಂದು ಫೋನ್

Last Updated 8 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಸ್ವಂತೀ (ಸೆಲ್ಫೀ) ಫೋನ್‌ಗಳ ಮಹಾ ಪೂರವೇ ಮಾರುಕಟ್ಟೆಗೆ ಬಂದಿದೆ. ಬಹುತೇಕ ಫೋನ್ ತಯಾರಕರು ಸೆಲ್ಫೀಫೋನ್ ಹೆಸರಿನಲ್ಲಿ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿ ದ್ದಾರೆ. ಹಾಗಿರುವಾಗ ಏಸುಸ್ ಕಂಪೆನಿ ಯಾಕೆ ಹಿಂದುಳಿಯಬೇಕು? ಅವರೂ ಸ್ವಂತೀ ಫೋನ್ ತಯಾರಿಸಿದ್ದಾರೆ. ಅಂತಹ ಒಂದು ಫೋನಿನ ವಿಮರ್ಶೆ ಯನ್ನು ಇದೇ ಅಂಕಣದಲ್ಲಿ ಒಂದು ವರ್ಷದ ಹಿಂದೆ ಮಾಡಲಾಗಿತ್ತು. ಅದು ಈಗ ಹಳತಾಯಿತು ತಾನೆ? ಈಗ ಏಸುಸ್‌ನವರು ಹೊಸದಾಗಿ ಸ್ವಂತೀ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ದ್ದಾರೆ. ಅದುವೇ ಝೆನ್‌ಫೋನ್ 4 ಸೆಲ್ಫೀ. ಇದರಲ್ಲಿ ಮೂರು ಮಾದರಿಗಳಿವೆ. ಈ ಸಲ ನಾವು ವಿಮರ್ಶಿಸುತ್ತಿರುವುದು ಅಂತಹ ಒಂದು ಮಾದರಿಯ ಏಸುಸ್ ಝೆನ್‌ಫೋನ್ 4 ಸೆಲ್ಫೀ (Ausus Zenfone 4 Selfie).

ಇದರ ರಚನೆ ಮತ್ತು ವಿನ್ಯಾಸ ಬಹುತೇಕ ಹಿಂದೆ ಏಸುಸ್‌ನವರು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದ ಝೆನ್‌ಫೋನ್ 3ರಂತೆ ಇದೆ. ತೆಳ್ಳನೆಯ ದೇಹ, ಹಗುರವಾದ ಫೋನ್, ಸ್ವಲ್ಪ ದೊರಗಾದ ಹಿಂಭಾಗ, ಬದಿಗಳಲ್ಲಿ ವಕ್ರವಾದ ಹಿಂಭಾಗದ ಕವಚ, ಇತ್ಯಾದಿಗಳಿವೆ. ಮುಂದುಗಡೆ ಮೇಲ್ಭಾಗದಲ್ಲಿ ಎದುರುಗಡೆಯ (ಸ್ವಂತೀ) ಕ್ಯಾಮೆರಾಗಳು ಮತ್ತು ಪಕ್ಕದಲ್ಲಿ ಎಲ್‌ಇಡಿ ಫ್ಲಾಶ್‌ಗಳಿವೆ. ಬಲಭಾಗದಲ್ಲಿ ಆನ್/ಆಫ್ ಬಟನ್‌ ಮತ್ತು ಅದರ ಮೇಲ್ಭಾಗದಲ್ಲಿ ವಾಲ್ಯೂಮ್ ಬಟನ್ ಇವೆ. ಹಿಂಭಾಗದಲ್ಲಿ ಕ್ಯಾಮೆರಾ ಮತ್ತು ಅದರ ಪಕ್ಕದಲ್ಲಿ ಫ್ಲಾಶ್ ಇದೆ. ಮೇಲ್ಭಾಗದಲ್ಲಿ 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಇದೆ. ಹಿಂಭಾಗದ ಕವಚ ತೆಗೆಯಲಸಾಧ್ಯ. ಎಡಭಾಗದಲ್ಲಿ ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕುವ ಟ್ರೇ ಇದೆ. ಒಟ್ಟಿನಲ್ಲಿ ರಚನೆ ಮತ್ತು ವಿನ್ಯಾಸಕ್ಕೆ ಪೂರ್ತಿ ಮಾರ್ಕು ನೀಡಬಹುದು. ಒಂದು ಉತ್ತಮ ದರ್ಜೆಯ ಫೋನನ್ನು ಕೈಯಲ್ಲಿ ಹಿಡಿದ ಅನುಭವವಾಗುತ್ತದೆ.

ಈ ಫೋನಿನ ಪ್ರಮುಖ ಆಕರ್ಷಣೆ ಎಂದರೆ ಇದರಲ್ಲಿರುವ ಸ್ವಂತೀ ಕ್ಯಾಮೆರಾಗಳು. ಎದುರುಗಡೆಯ ಸ್ವಂತೀ ಕ್ಯಾಮೆರಾಕ್ಕೆ ಕೂಡ ಫ್ಲಾಶ್ ಇರುವುದು ಇದರ ಹೆಚ್ಚುಗಾರಿಕೆ. ಫೋಕಸ್‌ಗೆ ಲೇಸರ್ ಬಳಸುವ ಕೆಲವೇ ಫೋನ್ ಕ್ಯಾಮೆರಾಗಳಲ್ಲಿ ಇದೂ ಒಂದು. ಏಸಸ್‌ನವರು ಕ್ಯಾಮೆರಾದ ಕಿರುತಂತ್ರಾಂಶಕ್ಕೆ ಹಲವು ಬದಲಾವಣೆಗಳನ್ನು ಮಾಡಿದ್ದಾರೆ. ಹಲವು ಆಯ್ಕೆಗಳಿವೆ. ಉದಾ - ಅತಿ ಹೆಚ್ಚಿನ ರೆಸೊಲೂಶನ್, ಮುಖವನ್ನು ಸುಂದರಗೊಳಿಸುವುದು, ಪನೊರಾಮ, ಅತಿ ಕಡಿಮೆ ಬೆಳಕಿನಲ್ಲಿ ಫೋಟೊ ತೆಗೆಯುವುದು, ಫೋಟೊದಿಂದ ಅನಗತ್ಯವಾದ ವ್ಯಕ್ತಿಗಳನ್ನು ಅಳಿಸುವುದು, ಟೈಂಲಾಪ್ಸ್, ಇತ್ಯಾದಿ. ಇವೆಲ್ಲದರ ಜೊತೆ ಮ್ಯಾನ್ಯುವಲ್ ಆಯ್ಕೆಯೂ ಇದೆ.

ಐಎಸ್‌ಓ, ಎಕ್ಸ್‌ಪೋಶರ್, ಷಟ್ಟರ್ ವೇಗ, ಇತ್ಯಾದಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಕ್ಯಾಮೆರಾಗಳಲ್ಲಿ f/2 (ಸ್ವಂತೀ) ಲೆನ್ಸ್‌ಗಳನ್ನು ಬಳಸಲಾಗಿದೆ. 16:9 ಮತ್ತು 4:3 ಅನುಪಾತಗಳಲ್ಲಿ ಫೋಟೊ ತೆಗೆಯಬಹುದು. ಹೈಡೆಫಿನಿಶನ್ ವಿಡಿಯೊ ಚಿತ್ರೀಕರಣವೂ ಸಾಧ್ಯ. 120 ಡಿಗ್ರಿಗಳಷ್ಟು ದೃಶ್ಯವನ್ನು ಸ್ವಂತೀ ತೆಗೆಯುವಾಗ ಸೆರೆಹಿಡಿಯುವುದು ಈ ಫೋನ್ ಕ್ಯಾಮೆರಾದ ವಿಶೇಷತೆ. ಅಂದರೆ ನಿಮಗೆ ಸ್ವಂತೀಕೋಲಿನ ಅಗತ್ಯವಿಲ್ಲ. ಸ್ವಂತೀ ತೆಗೆಯುವಾಗ ಮುಖವನ್ನು ಸುಂದರಗೊಳಿಸುತ್ತದೆ.

ಎಷ್ಟರ ಮಟ್ಟಿಗೆ ಎಂದರೆ ನಿಮ್ಮ ಮುಖಕ್ಕೆ ಯಾರೋ ಸೌಂದರ್ಯವರ್ಧಕ ಹಾಕಿದ್ದಾರೆ ಎಂಬ ಭಾವನೆ ಬರುತ್ತದೆ! ನಿಮಗೆ ಅದು ಇಷ್ಟವಿಲ್ಲದಿದ್ದಲ್ಲಿ ಹಾಗೆ ಮಾಡಬೇಡ ಎಂದು ಕ್ಯಾಮೆರಾ ದ ಕಿರುತಂತ್ರಾಂಶಕ್ಕೆ ಆದೇಶ ನೀಡಬಹುದು. ಈ ಫೋನ್‌ ಕ್ಯಾಮೆರಾ ಬಳಸಿ ತೆಗೆದ ಚಿತ್ರಗಳ ಗುಣಮಟ್ಟ ಒಂದು ಮಟ್ಟಿಗೆ ಚೆನ್ನಾಗಿವೆ. ಮುಖ್ಯವಾಗಿ ಸ್ವಂತೀ ಚಿತ್ರಗಳು ನಿಜಕ್ಕೂ ಚೆನ್ನಾಗಿವೆ. ಕಡಿಮೆ ಬೆಳಕಿನಲ್ಲೂ ಉತ್ತಮ ಸ್ವಂತೀ ತೆಗೆಯುತ್ತದೆ. ಸ್ವಂತೀ ತೆಗೆಯುವುದು ನಿಮ್ಮ ಪ್ರಥಮ ಆದ್ಯತೆಯಾಗಿದ್ದಲ್ಲಿ ನೀವು ಇದನ್ನು ಖಂಡಿತ ಕೊಳ್ಳಬಹುದು.

ಇದರಲ್ಲಿ ಬಳಸಿರುವುದು ಮೇಲ್ದರ್ಜೆಯ ಪ್ರೊಸೆಸರ್ ಅಲ್ಲ. ಅಂತೆಯೇ ಕೆಲಸದ ವೇಗ ಅಷ್ಟಕ್ಕಷ್ಟೆ. ಅಂಟುಟು ಬೆಂಚ್‌ಮಾರ್ಕ್‌ 44218 ಇದೆ. ಅಂದರೆ ಇದರ ಕೆಲಸದ ವೇಗ ಕಡಿಮೆ ಎಂದು ತೀರ್ಮಾನಿಸಬಹುದು. ಆಟಗಳನ್ನು ಆಡುವ ಅನುಭವ ಪರವಾಗಿಲ್ಲ. ಆದರೆ ಅತಿ ಶಕ್ತಿಯನ್ನು ಬೇಡುವ ಆಟಗಳನ್ನು ಆಡುವ ಅನುಭವ ಅಷ್ಟಕ್ಕಷ್ಟೆ. ಹೈಡೆಫಿನಿಶನ್ ವಿಡಿಯೊ ಪ್ಲೇ ಚೆನ್ನಾಗಿ ಆಗುತ್ತದೆ. ಆದರೆ 4k ವಿಡಿಯೊ ಪ್ಲೇ ಆಗುವುದಿಲ್ಲ. ಆಡಿಯೋ ಇಂಜಿನ್ ಪರವಾಗಿಲ್ಲ. ಇಯರ್‌ಫೋನ್ ನೀಡಿಲ್ಲ.

ಬ್ಯಾಟರಿ ಬಾಳಿಕೆ ಮಾತ್ರ ಅಷ್ಟೇನೂ ತೃಪ್ತಿದಾಯಕವಾಗಿಲ್ಲ. ಬೇಗನೆ ಖಾಲಿಯಾಗುತ್ತದೆ. ತುಂಬ ಹೊತ್ತು ಕ್ಯಾಮೆರಾ ಬಳಸಿದಾಗ, ಆಟ ಆಡುವಾಗ ಹಾಗೂ ಚಾರ್ಜ್ ಮಾಡುವಾಗ ಸ್ವಲ್ಪ ಬಿಸಿಯಾಗುತ್ತದೆ.
**

ಕಸಾಪ ಸಂಕ್ಷಿಪ್ತ ನಿಘಂಟು

ಕನ್ನಡದ ಉತ್ತಮ ನಿಘಂಟುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ಸಂಕ್ಷಿಪ್ತ ನಿಘಂಟು ಒಂದು. ಇದು ಸುಮಾರು 40 ಸಾವಿರ ಪದಗಳನ್ನು ಒಳಗೊಂಡಿದೆ. ಈ ನಿಘಂಟುವನ್ನು ನಾನು ಯಾವಾಗಲೂ ಬಳಸುತ್ತಿರುತ್ತೇನೆ. ಲೇಖನ ಬರೆಯುವಾಗ ಪದಗಳ ಬಗೆಗೆ ಅನುಮಾನ ಬಂದಾಗ, ಯಾವ ಬಳಕೆ ಶುದ್ಧ ಎಂದು ತಿಳಿಯಬೇಕಾದಾಗ ಎಲ್ಲ ನಾನು ಈ ನಿಘಂಟುವಿನ ಮೊರೆ ಹೋಗುತ್ತೇನೆ.

ಈಗ ಈ ನಿಘಂಟು ಆ್ಯಂಡ್ರಾಯ್ಡ್ ಬಳಕೆದಾರರಿಗೆ ಕಿರುತಂತ್ರಾಂಶದ (ಆ್ಯಪ್) ರೂಪದಲ್ಲಿ ಲಭ್ಯ. ಇದು ನಿಮಗೆ ಬೇಕಿದ್ದಲ್ಲಿ Kasapa Sankshipta Nighantu ಎಂದು ಗೂಗಲ್‌ ಪ್ಲೇ ಸ್ಟೋರಿನಲ್ಲಿ ಹುಡುಕಬೇಕು ಅಥವಾ http://bit.ly/gadgetloka302 ಜಾಲತಾಣಕ್ಕೆ ಭೇಟಿ ನೀಡಬೇಕು. ಕೆಲವು ಪದಗಳು ಹಳೆಯ ಯುನಿಕೋಡ್ ಅಲ್ಲದ ಫಾಂಟ್‌ನಿಂದ ಯುನಿಕೋಡ್‌ಗೆ ಪರಿವರ್ತಿಸುವಾಗ ಪೂರ್ತಿಯಾಗಿ ಪರಿವರ್ತಿತವಾಗದೆ ಇನ್ನೂ ಉಳಿದುಕೊಂಡಿವೆ. ಅದು ಯಾವ ಪದವಿರಬಹುದು ನಾವೇ ಊಹಿಸಿಕೊಳ್ಳಬೇಕು. ಮುದ್ರಿತ ನಿಘಂಟುವಿನಲ್ಲಿ ಪ್ರತಿ ಪದಕ್ಕೂ ನಾಮಪದ, ಕ್ರಿಯಾಪದ ಇತ್ಯಾದಿಯಾಗಿ ನಮೂದಿಸಿದ್ದಾರೆ. ಆದರೆ ಈ ಕಿರುತಂತ್ರಾಂಶದಲ್ಲಿ ಅದಿಲ್ಲ.

**

ಮತ್ತೆ ಬಂದ ಯಶಿಕಾ ಕ್ಯಾಮೆರಾ

ಸುಮಾರು ಮೂರು ದಶಕಗಳ ಹಿಂದೆ ಫಿಲ್ಮ್ ಕ್ಯಾಮೆರಾ ಬಳಸಿ ಛಾಯಾಗ್ರಹಣ ಮಾಡುತ್ತಿದ್ದವರಿಗೆಲ್ಲ ಯಶಿಕಾ ಇಲೆಕ್ಟ್ರ 35 ಕ್ಯಾಮೆರಾ ನೆನಪಿರಬಹುದು. ಫೋಟೊಗ್ರಫಿ ಕ್ಷೇತ್ರದಲ್ಲೇ ಒಂದು ಮಟ್ಟಿನ ಕ್ರಾಂತಿ ಮಾಡಿದ ಕ್ಯಾಮೆರಾವದು. ಅದು ಎಸ್‌ಎಲ್‌ಆರ್ ಕ್ಯಾಮೆರಾವಲ್ಲ.

ಯಶಿಕಾ ಕಂಪನಿ ಈಗ ಆ ಕ್ಯಾಮೆರಾದಲ್ಲಿ ಫೋಟೊ ತೆಗೆದ ಭಾವನೆ ಬರುವಂತಹ ಡಿಜಿಟಲ್ ಕ್ಯಾಮೆರಾ ತಯಾರಿಸಿದೆ. ಅದರ ಹೆಸರು ಯಶಿಕಾ ವೈ 35. ಈ ಕ್ಯಾಮೆರಾ ನೋಡಲು ಹಳೆಯ ಯಶಿಕಾ ಇಲೆಕ್ಟ್ರಾ 35 ಕ್ಯಾಮೆರಾದಂತೆಯೇ ಕಾಣಿಸುತ್ತದೆ. ಫೋಟೊ ತೆಗೆಯುವ ವಿಧಾನವೂ ಅದೇ ರೀತಿ. ಒಂದು ಫೋಟೊ ತೆಗೆದ ನಂತರ ಲಿವರ್ ತಿರುಗಿಸಿದ ನಂತರವೇ ಇನ್ನೊಂದು ಫೋಟೊ ತೆಗೆಯಬಹುದು. ಇದರಲ್ಲಿ ಫೋಟೊ ತೆಗೆದ ಕೂಡಲೇ ಅದನ್ನು ನೋಡಲು ಆಗುವುದಿಲ್ಲ. ಫೋಟೊಗಳು ಎಸ್‌ಡಿ ಕಾರ್ಡಿನಲ್ಲಿ ಸಂಗ್ರಹವಾಗುತ್ತವೆ. ಈ ಕಾರ್ಡನ್ನು ಗಣಕ ಅಥವಾ ಲ್ಯಾಪ್‌ಟಾಪ್‌ಗೆ ಜೋಡಿಸಿ ಫೋಟೊಗಳನ್ನು ನೋಡಬೇಕು. ಹಳೆಯ ಕ್ಯಾಮೆರಾದಂತೆ ಇದರಲ್ಲೂ ಕ್ಯಾಸೆಟ್ ಹಾಕಿಯೇ ಫೋಟೊ ತೆಗೆಯಬೇಕು! ಆದರೆ ಅದು ಫಿಲ್ಮ್ ಕ್ಯಾಸೆಟ್ ಅಲ್ಲ.

**

ಗ್ಯಾಜೆಟ್‌ ಸಲಹೆ

ಪ್ಯಾಲೆಸ್ಟೈನ್ ಅರಬನೊಬ್ಬ ಬುಲ್‌ಡೋಜರ್ ಮುಂದೆ ನಿಂತುಕೊಂಡು ತೆಗೆದ ತನ್ನ ಸ್ವಂತೀ ಫೋಟೊವನ್ನು ಫೇಸ್‌ಬುಕ್‌ನಲ್ಲಿ ಹಾಕಿದ. ಅದರ ಕೆಳಗೆ ‘ಗುಡ್‌ಮಾರ್ನಿಂಗ್’ ಎಂದು ಅರ್ಥ ಬರುವ ಅರೇಬಿಕ್ ಪದವನ್ನು ಬರೆದಿದ್ದ. ಫೇಸ್‌ಬುಕ್‌ನ ಸ್ವಯಂಚಾಲಿತ ಅನುವಾದ ಅದನ್ನು ಹೀಬ್ರೂ ಭಾಷೆಗೆ ‘ಅವರನ್ನು ಆಕ್ರಮಿಸಿ’ ಎಂದು ಅನುವಾದಿಸಿತ್ತು. ಅದನ್ನು ಓದಿದ ಇಸ್ರೇಲಿ ಪೊಲೀಸರು ಆತನನ್ನು ಬಂಧಿಸಿದರು. ಎಲ್ಲ ತಿಳಿದ ನಂತರ ಬಿಡುಗಡೆ ಮಾಡಿದರೆನ್ನಿ.

**

ಗ್ಯಾಜೆಟ್‌ ತರ್ಲೆ

ಅರ್ಜುನರ ಪ್ರಶ್ನೆ: ಅಂಟುಟು ಬೆಂಚ್ ಮಾರ್ಕ್ ಕಂಡುಹಿಡಿಯುವುದು ಹೇಗೆ?
ಉ: Antutu Benchmark ಎಂಬ ಆ್ಯಪ್‌ ಬಳಸಿ. ಈ ಬಗ್ಗೆ ಇದೇ ಅಂಕಣದಲ್ಲಿ ಬರೆಯಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT