ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ, ಸಮೃದ್ಧ ಹಸಿರಿನ ಭಾರತ

Last Updated 11 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಭಾರತ ಇಂದು ಜಗತ್ತಿನ ಹೊಟ್ಟೆಕಿಚ್ಚಿನ ಕೇಂದ್ರ   ಬಿಂದುವಾಗಿ ಬಿಟ್ಟಿದೆ. ಇದೇ ಪರಿಸ್ಥಿತಿ 19ನೇ ಶತಮಾನದಲ್ಲಿ ಇಂಗ್ಲೆಂಡ್‌ಗೆ, 1930ರ ದಶಕದಲ್ಲಿ ಅಮೆರಿಕಕ್ಕೆ, 1950ರ ದಶಕದಲ್ಲಿ ಜರ್ಮನಿಗೆ, 1970-80ರ ದಶಕದಲ್ಲಿ ಜಪಾನ್‌ಗೆ ಎದುರಾಗಿತ್ತು.

ಭಾರತ ಇಂದು ಸೂಪರ್ ಪವರ್ ಆಗಿ ಹೊರಹೊಮ್ಮುತ್ತಿದ್ದು, ಅದು ನಮಗೆ ಸಹ ಬಹಳ ಮಹತ್ವವಾಗಬೇಕು.

ದೇಶವನ್ನು ನಾವಿಂದು ಜವಾಬ್ದಾರಿಯುತ ರಾಷ್ಟ್ರವಾಗಿ ರೂಪಿಸಬೇಕು, ಸ್ಚಚ್ಛ ಮಾತ್ರವಲ್ಲ ಹಸಿರು ಭಾರತವನ್ನು ರೂಪಿಸಿಕೊಳ್ಳುವುದಕ್ಕೆ ನಮಗೆ ಅಪರೂಪದ ಅವಕಾಶವೊಂದು ಲಭಿಸಿದ್ದು, ಅದನ್ನು ನಾವು ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ.

ಬೆಂಗಳೂರಿನಲ್ಲಿ ಈಚೆಗೆ ಪರಿಸರ ಪೂರಕ ಕಟ್ಟಡಗಳಿಗೆ ಸಂಬಂಧಿಸಿದಂತೆ ಸಭೆಯೊಂದು ನಡೆದಿತ್ತು. ರಾಜ್ಯದಲ್ಲಿ ಪರಿಸರ ಸಂರಕ್ಷಣೆಗಾಗಿ ಶ್ರಮಿಸಿದ ಮತ್ತು ಶ್ರಮಿಸುತ್ತಿರುವ ಕೆಲವು ಮಂದಿಯನ್ನು ಸನ್ಮಾನಿಸುವುದಕ್ಕಾಗಿ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮತ್ತು ಸಿನಿಮಾ ನಟರೂ ಆಗಿರುವ ಪರಿಸರವಾದಿ ಸುರೇಶ್ ಹೆಬ್ಳೀಕರ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.

ವೇದಿಕೆಯಲ್ಲಿ ಮಾತಿಗೆ ನಿಂತ ಹೆಬ್ಳೀಕರ್ ಅವರು ತಾವು ನಟಿಸಿದ  `ಆಲೆಮನೆ~ ಚಿತ್ರದ ಬಗ್ಗೆ ಹೇಳಲಾರಂಭಿಸಿದರು. ಆ ಸಿನಿಮಾದ ಜನಪ್ರಿಯ `ನಮ್ಮೂರ ಮಂದಾರ ಹೂವೇ~ ಹಾಡಿನ ಬಗ್ಗೆ, ಅದು ಚಿತ್ರೀಕರಣಗೊಂಡ ಬಿಡದಿಯ ಮನಮೋಹಕ ಕೆರೆಯ ಬಗ್ಗೆ ವಿವರಿಸಿದರು.

ಚಿತ್ರೀಕರಣ ನಡೆದುದು 1980ರಲ್ಲಿ. ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋತ ಅವರು ಬಳಿಕ ಅದೆಷ್ಟೋ ವರ್ಷ ಅಲ್ಲಿಗೆ ಹೋಗುತ್ತಲೇ ಇದ್ದರು. ಚಿತ್ರೀಕರಣ ನಡೆದು 10 ವರ್ಷಗಳ ಬಳಿಕ ಬಿಡದಿ ಕೈಗಾರಿಕಾ ಪ್ರಾಂಗಣ ಆ ಭಾಗದಲ್ಲಿ ಬರುತ್ತಿದೆ ಎಂಬ ವಿಚಾರ ಅವರ ಕಿವಿಗೆ ಬಿತ್ತು.

ಹೀಗಾದರೆ ಆ ಸುಂದರ ಕೆರೆ ನಾಮಾವವೇಶವಾಗುವುದು ನಿಶ್ಚಿತ ಎಂಬುದು ಅವರ ಗಮನಕ್ಕೆ ಬಂತು. ಕೈಗಾರಿಕಾ ಪ್ರಾಂಗಣಕ್ಕೆ ಭೂ ಸ್ವಾಧೀನಕ್ಕೆ ಸಮ್ಮತಿ ಸೂಚಿಸಿದ ಸಚಿವರನ್ನು ಅವರು ಭೇಟಿ ಮಾಡಿ ಅಲ್ಲಿನ ಪರಿಸರದ ಬಗ್ಗೆ ಹೇಳಿಕೊಂಡರು.

`ಹೆಬ್ಳೀಕರ್ ಅವರೇ, ಒಂದು ಕೆರೆಯನ್ನು ಕಟ್ಟಿಕೊಂಡು ಏನು ಮಾಡುವುದಕ್ಕಿದೆ. ಅಲ್ಲಿ ಕೈಗಾರಿಕಾ ಪ್ರಾಂಗಣವಾದರೆ ವರ್ಷಕ್ಕೆ ತೆರಿಗೆ ರೂಪದಲ್ಲೇ ರೂ 75 ಕೋಟಿ  ಬರುತ್ತದೆ, ಅದು ವಿಧಾನಸೌಧದ ಇಡೀ ಸಿಬ್ಬಂದಿಯ ವರ್ಷದ ವೇತನ ಪಾವತಿಗೆ ನನಗೆ ನೆರವಾಗುತ್ತದೆ~ ಎಂದರಂತೆ.

ನಿರೀಕ್ಷಿಸಿದಂತೆ ಬಿಡದಿಯಲ್ಲಿ ಕೈಗಾರಿಕಾ ಪ್ರಾಂಗಣ ಬಂತು, ಕೆರೆಯೂ ನಾಶವಾಯಿತು. ಒಂದು ಕಾಲಕ್ಕೆ ಸ್ವರ್ಗದಂತೆ ಕಂಗೊಳಿಸುತ್ತಿದ್ದ ಕೆರೆ ಇಂದು ಅಲ್ಲಿ ಇಲ್ಲವೇ ಇಲ್ಲ. ಆ ಕೆರೆಯ ದೃಶ್ಯ ಮಾತ್ರ ಸಿನಿಮಾದ ಹಾಡಿನಲ್ಲಿ ಇಂದಿಗೂ ಹಾಗೆಯೇ ಉಳಿದುಕೊಂಡಿದೆ.

ಸಂತೋಷ್ ಹೆಗ್ಡೆ ಅವರು ತಾವು ಸಿದ್ಧಪಡಿಸಿದ `ರಿಪಬ್ಲಿಕ್ ಆಫ್ ಬಳ್ಳಾರಿ~ ವರದಿ ಬಗ್ಗೆ ಮಾತನಾಡಿ, ಜಿಲ್ಲೆಯಲ್ಲಿ ಇದೇ ರೀತಿ ಗಣಿಗಾರಿಕೆ ಮುಂದುವರಿದರೆ ಇನ್ನು 35 ವರ್ಷದೊಳಗೆ ಕಲ್ಲಿದ್ದಲು ಸಂಪತ್ತು ಬರಿದಾಗಲಿರುವುದನ್ನು ತಾವು ಬೆಟ್ಟುಮಾಡಿ ತೋರಿಸಿದ್ದಾಗಿ ಹೇಳಿದರು.
 
ಸಂತೋಷ್ ಹೆಗ್ಡೆ ಅವರ ಅಂದಾಜು ಸರಿ ಇಲ್ಲ, ಸಂಪತ್ತು ಬರಿದಾಗುವುದು 35 ವರ್ಷಗಳಲ್ಲಿ ಅಲ್ಲ, 55 ವರ್ಷಗಳಲ್ಲಿ ಎಂಬುದು ಸರ್ಕಾರದ ವಾದವಾಗಿತ್ತು!ನಾವೀಗ ಮಾತನಾಡುತ್ತಿರುವುದು ಏನೆಂದರೆ ಎಷ್ಟು ವರ್ಷದಲ್ಲಿ ನಮ್ಮ ಸಂಪತ್ತು ಬರಿದಾಗುತ್ತದೆ ಎಂಬ ಬಗ್ಗೆ.
 
ಬರಿದಾಗುವ ವರ್ಷದ ಎಣಿಕೆ 35-55 ವರ್ಷದೊಳಗೆಯೇ ಇದೆ. ಆದರೆ, ಭೂಮಿಯ ಈ ಸಂಪತ್ತು ಸಂಗ್ರಹವಾಗಲು 50-100 ದಶಲಕ್ಷ ವರ್ಷಗಳಷ್ಟು ಸಮಯ ಹಿಡಿದಿತ್ತು, ಅದನ್ನು ಬರಿದುಗೊಳಿಸುವಲ್ಲಿ ನಾವು ಪೈಪೋಟಿಗಿಳಿದು ಕೇವಲ ಕೆಲವೇ ವರ್ಷಗಳಲ್ಲಿ ಅವುಗಳನ್ನು ಇಲ್ಲವಾಗಿಸಲು ಟೊಂಕ ಕಟ್ಟಿದ್ದೇವೆ.

ಬಳ್ಳಾರಿ ಮತ್ತು ಗಣಿಗಾರಿಕೆಯಾಚೆಯೂ ಗಮನ ಹರಿಸಿದಾಗ ವಾರ್ಷಿಕ ಕಲ್ಲಿದ್ದಲಿನ ಬೇಡಿಕೆ ಪ್ರಮಾಣ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವುದು ಗಮನಕ್ಕೆ ಬರುತ್ತದೆ. ಸದ್ಯ ವರ್ಷಕ್ಕೆ 300 ದಶಲಕ್ಷ ಟನ್ ಕಲ್ಲಿದ್ದಲಿನ ಅಗತ್ಯ ಇದ್ದು, ವರ್ಷ ಕಳೆದಂತೆ ಅದರ ಬೇಡಿಕೆ ಹೆಚ್ಚಾಗುತ್ತಿದೆ.

2030ರ ಹೊತ್ತಿಗೆ ಕಲ್ಲಿದ್ದಲಿನ ಬೇಡಿಕೆ 1930 ದಶಲಕ್ಷ ಟನ್‌ಗಳಿಗೆ ಏರಲಿದೆ. ದೇಶದ ಶೇ 22ರಷ್ಟು ಕಲ್ಲಿದ್ದಲು ನಿಕ್ಷೇಪಗಳನ್ನು ಈಗಾಗಲೇ ಹಲವು ಕಂಪೆನಿಗಳಿಗೆ ಗುತ್ತಿಗೆಗೆ ನೀಡಲಾಗಿದೆ.

ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವೊಂದೇ ಶೇ 10ರಷ್ಟು ಕಲ್ಲಿದ್ದಲು ನಿಕ್ಷೇಪದ ಗಣಿಗಾರಿಕೆಗೆ ಕಂಪೆನಿಗಳಿಗೆ ಪರವಾನಗಿ ನೀಡಿದೆ. ಈ ಮೂಲಕ ದೇಶದ ಶೇ 32ರಷ್ಟು ಕಲ್ಲಿದ್ದಲು ಗಣಿಗಳು ಈಗಾಗಲೇ ಕೆಲವು ಕಂಪೆನಿಗಳ ಪಾಲಾಗಿಬಿಟ್ಟಿವೆ.

ಕೆಲವು ಕಂಪೆನಿಗಳು ಪರವಾನಗಿ ಹಿಡಿದುಕೊಂಡಿದ್ದರೂ ಗಣಿಗಾರಿಕೆ ನಡೆಸದೆ ಸೂಕ್ತ ಸಮಯಕ್ಕಾಗಿ ಕಾದು ಕುಳಿತಿವೆ. ಇರುವ ಗಣಿಗಳನ್ನು ಸಮರ್ಥವಾಗಿ ಬಳಸಿಕೊಳ್ಳದ ನಾವು ಹೊಸ ಸ್ಥಳಗಳಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಡೆಸಿ ಕಾಡು ನಾಶಪಡಿಸಲು ಸಜ್ಜಾಗಿರುವುದನ್ನು ಇದು ತೋರಿಸುತ್ತದೆ.

ಛತ್ತೀಸ್‌ಗಡ ಮತ್ತು ಒಡಿಶಾಗಳ ಸಂತನ್ ಪರಗಣ-ಗಂಧಮರ್ದನ್‌ವರೆಗಿನ ಅರಣ್ಯ ಪ್ರದೇಶದಿಂದ ಆರಂಭಿಸಿ ಆಂಧ್ರಪ್ರದೇಶದ ಗೋದಾವರಿ ತೀರದ ವರೆಗೆ 2000 ಕಿ.ಮೀ. ವ್ಯಾಪ್ತಿಯಲ್ಲಿ ಭಾರಿ ಪ್ರಮಾಣದಲ್ಲಿ ಬಾಕ್ಸೈಟ್, ಕಲ್ಲಿದ್ದಲು, ಕಬ್ಬಿಣದ ಅದಿರು ಮತ್ತು ಇತರ ಹಲವಾರು ಖನಿಜಗಳ ನಿಕ್ಷೇಪಗಳಿವೆ.

ಇವುಗಳನ್ನು ಕಳೆದ 40 ವರ್ಷಗಳಿಂದ ಹೊರತೆಗೆಯುತ್ತಲೇ ಬರಲಾಗಿದೆ. ಇನ್ನೂ 20-30 ವರ್ಷ ಇಲ್ಲಿ ಗಣಿಗಾರಿಕೆ ಮುಂದುವರಿಯಲಿದೆ ನಿಜ, ಬಳಿಕ ಇಲ್ಲಿ ಖನಿಜವೆಲ್ಲ ಬರಿದಾಗಿ ಬಿಡುತ್ತದೆ. ಈಗಲೂ ಅಲ್ಲಿ ದಟ್ಟ ಕಾಡು ಕಾಣಲು ಸಾಧ್ಯ.

ಆದರೆ ಗಣಿಗಾರಿಕೆ ಅವ್ಯಾಹತವಾಗಿ ನಡೆದರೆ ನಮ್ಮ ಮಕ್ಕಳು  ದೊಡ್ಡವರಾದಾಗ ಅವರಿಗೆ ಆ ಸುಂದರ ಕಾಡಿನ ದೃಶ್ಯಗಳು ಕಣ್ಣಿಗೆ ಬೀಳಲು ಸಾಧ್ಯವೇ ಇಲ್ಲ.

ಭೂಮಿ ಛಿದ್ರಗೊಳಿಸಿ ಹೊರತೆಗೆದ ಖನಿಜಗಳ ಮಾರಾಟದಿಂದ ಮಾತ್ರವೇ ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯವೇ? ಉದ್ಯಮದಲ್ಲಿ ದಕ್ಷತೆ ತರಲು ನಮಗೆ ಬೇರೆ ದಾರಿ ಇಲ್ಲವೇ? ಕೃಷಿ ಕ್ಷೇತ್ರದಲ್ಲಿ, ನಗರದಲ್ಲಿ ವಾಸಿಸುವ ನಮ್ಮ ಸುತ್ತಮುತ್ತಲಿನಲ್ಲೇ ಇಂಧನ ಉಳಿಸುವಂತಹ ಕ್ರಮಗಳನ್ನು ಅನುಸರಿಸಲು ಸಾಧ್ಯವಿಲ್ಲವೇ?

ಇದೇ ಕಾರಣಕ್ಕೆ ಮೇಲೆ ಹೇಳಿದ ಸಮಾರಂಭದಲ್ಲಿ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ಉಪಸ್ಥಿತಿಗೆ ಬಹಳ ಮಹತ್ವ ಇತ್ತು. ಸ್ವಚ್ಛ, ದಕ್ಷ ಸರ್ಕಾರದಿಂದ ಮಾತ್ರ ಹಸಿರು ಭಾರತವನ್ನು ರೂಪಿಸುವುದು ಸಾಧ್ಯ ಎಂಬ ಸ್ಪಷ್ಟ ಸಂದೇಶ ಅವರದ್ದಾಗಿತ್ತು.

ಅಧಿಕಾರಶಾಹಿ ಏನಿದ್ದರೂ ನೀತಿ ನಿಯಮಗಳನ್ನು ಜಾರಿಗೆ ತರುವುದು ಮಾತ್ರ.
ಆದರೆ, ಅದನ್ನು ರೂಪಿಸುವ ಗುರುತರ ಹೊಣೆ ಹೊತ್ತ ಸರ್ಕಾರ ತನ್ನ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿದರೆ ಮಾತ್ರ ದೇಶದ ಭವಿಷ್ಯ ಉಜ್ವಲವಾಗಿರಲು ಸಾಧ್ಯ.

ಸರ್ಕಾರಕ್ಕೆ ದೂರದೃಷ್ಟಿ ಇಲ್ಲದಿದ್ದರೆ ಅಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತದೆ, ಆಗ ಉತ್ತರದಾಯಿತ್ವವೇ ಇಲ್ಲವಾಗುತ್ತದೆ.ಭಾರತ ಇಂದು ಜಗತ್ತಿನ ಹೊಟ್ಟೆಕಿಚ್ಚಿನ ಕೇಂದ್ರಬಿಂದುವಾಗಿ ಬಿಟ್ಟಿದೆ.

ಇದೇ ಪರಿಸ್ಥಿತಿ 19ನೇ ಶತಮಾನದಲ್ಲಿ ಇಂಗ್ಲೆಂಡ್‌ಗೆ, 1930ರ ದಶಕದಲ್ಲಿ ಅಮೆರಿಕಕ್ಕೆ, 1950ರ ದಶಕದಲ್ಲಿ ಜರ್ಮನಿಗೆ, 1970-80ರ ದಶಕದಲ್ಲಿ ಜಪಾನ್‌ಗೆ ಎದುರಾಗಿತ್ತು.

ಭಾರತ ಇಂದು ಸೂಪರ್ ಪವರ್ ಆಗಿ ಹೊರಹೊಮ್ಮುತ್ತಿದ್ದು, ಅದು ನಮಗೆ ಸಹ ಬಹಳ ಮಹತ್ವವಾಗಬೇಕು.

ದೇಶವನ್ನು ನಾವಿಂದು ಜವಾಬ್ದಾರಿಯುತ ರಾಷ್ಟ್ರವಾಗಿ ರೂಪಿಸಬೇಕು, ಸ್ಚಚ್ಛ ಮಾತ್ರವಲ್ಲ ಹಸಿರು ಭಾರತವನ್ನು ರೂಪಿಸಿಕೊಳ್ಳುವುದಕ್ಕೆ ನಮಗೆ ಅಪರೂಪದ ಅವಕಾಶವೊಂದು ಲಭಿಸಿದ್ದು, ಅದನ್ನು ನಾವು ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ.

ಇಲ್ಲಿ ನಮ್ಮ ಹೊಣೆಗಾರಿಕೆಯೂ ದೊಡ್ಡದು. ನಾವು ಎಷ್ಟು ಪ್ರಮಾಣದಲ್ಲಿ ವಿದ್ಯುತ್ ಉಳಿಸುತ್ತೇವೆಯೋ ಅದು ಸಹ ದೊಡ್ಡ ಪ್ರಮಾಣದಲ್ಲಿ ಲೆಕ್ಕಕ್ಕೆ ಸಿಕ್ಕಿಬಿಡುತ್ತದೆ. ವಯನಾಡ್‌ನಲ್ಲಿ ಮಳೆ ಬೀಳದಿದ್ದರೆ ಬೆಂಗಳೂರಿನ ನಳದಲ್ಲಿ ನೀರು ಬರಿದಾಗುತ್ತದೆ.

ಛತ್ತೀಸ್‌ಗಡದ ದಟ್ಟ ಅರಣ್ಯ ಪ್ರದೇಶ ನಾಶವಾದರೆ ಭಾರತ ಮುಂದಿನ 70-80 ವರ್ಷಗಳಲ್ಲಿ ತನ್ನ ಭವ್ಯ ನಾಗರಿಕತೆಯನ್ನು ಸಂರಕ್ಷಿಸುವುದಕ್ಕೇ ಪರದಾಡಬೇಕಾದ ಸ್ಥಿತಿ ಎದುರಾಗಬಹುದು.

ನಾನು, ನೀವೆಲ್ಲ ಈಗ ಒಂದು ದೃಢ ನಿರ್ಧಾರಕ್ಕೆ ಬರಬೇಕು. ನಾವೆಲ್ಲ ಕಡಿಮೆ ಸಿಮೆಂಟ್, ಉಕ್ಕು, ಕಾಂಕ್ರೀಟ್ ಬಳಸಬೇಕು, ಮನೆಯಲ್ಲಿ ಮರವನ್ನು ಬಳಸಬಾರದು, ಶುದ್ಧ ನೀರಿಗೆ ಅವಲಂಬಿಸುವ ಪ್ರಮಾಣ ತಗ್ಗಿಸಿ ಮರುಸಂಸ್ಕರಿತ ನೀರನ್ನು ಬಳಸಬೇಕು, ಮನೆಯಲ್ಲಿ ಬಳಸುವ ವಿದ್ಯುತ್ ಪ್ರಮಾಣ ತಗ್ಗಿದಾಗ ಅದರ ಬೇಡಿಕೆಯೂ ತಗ್ಗುತ್ತದೆ.
 
ಉದ್ದಿಮೆಗಳು ಹೆಚ್ಚು ದಕ್ಷವಾಗಿ, ನಮ್ಮ ರೈತರು ವಿದ್ಯುತ್ ಕಡಿಮೆ ಬಳಸುವ ಪಂಪ್‌ಗಳನ್ನು ಬಳಸಿಕೊಂಡರೆ ಸಹಜವಾಗಿಯೇ ವಿದ್ಯುತ್ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ.
ದೇಶ ಹಸಿರಿನಿಂದ ಕಂಗೊಳಿಸಬೇಕಿದ್ದರೆ ಅದಕ್ಕೆ ಪರಿಹಾರ ನಮ್ಮ ಕೈಯಲ್ಲೇ ಇದೆ ಎಂಬುದಕ್ಕೆ ನಾನು ಇಷ್ಟೆಲ್ಲ ಹೇಳಬೇಕಾಯಿತು.

ಸರ್ಕಾರವನ್ನಷ್ಟೇ ದೂಷಿಸುತ್ತ ಕುಳಿತುಕೊಳ್ಳದೆ ನಮ್ಮ ಮನೆಯಿಂದಲೇ ಸ್ವಚ್ಛ ಮತ್ತು ಹಸಿರು ಭಾರತ ನಿರ್ಮಾಣದ ಸಂಕಲ್ಪ ಮೂಡಿಬಂದರೆ ಮಾತ್ರ ನಮಗೆ, ನಮ್ಮ ದೇಶಕ್ಕೆ ಭವಿಷ್ಯ ಇರಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT