ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಲ್ಪ ದುಬಾರಿ ಎನಿಸಿದರೂ ಉತ್ತಮ ಲ್ಯಾಪ್‌ಟಾಪ್

Last Updated 19 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಒಂದಾನೊಂದು ಕಾಲದಲ್ಲಿ ಶಕ್ತಿಶಾಲಿಯಾದ ಸಣ್ಣಮಟ್ಟಿನ ಸರ್ವರ್ ಆಗಿಯೂ ಕೆಲಸ ಮಾಡಬಲ್ಲ ಗಣಕ ಎಂದರೆ ಅದು ಡೆಸ್ಕ್‌ಟಾಪ್ ಗಣಕವೇ ಆಗಬೇಕಿತ್ತು. ಆದರೆ ಈಗ ಕಾಲ ಬದಲಾಗಿದೆ.

ಲ್ಯಾಪ್‌ಟಾಪ್‌ಗಳಲ್ಲಿಯೂ ಶಕ್ತಿಶಾಲಿಯಾದವುಗಳು ಬರುತ್ತಿವೆ. ಇವುಗಳನ್ನು ಸಾಮಾನ್ಯವಾಗಿ ಗಣಕ ತಂತ್ರಾಂಶ ಕ್ಷೇತ್ರದಲ್ಲಿ ಕೆಲಸ ಮಾಡುವವರು ಬಳಸುತ್ತಾರೆ. ಆದುದರಿಂದ ಅಂತಹ ಲ್ಯಾಪ್‌ಟಾಪ್‌ಗಳಿಗೆ ಡೆವೆಲಪರ್ ಲ್ಯಾಪ್‌ಟಾಪ್ ಎಂಬ ಹೆಸರಿದೆ.

ಇವುಗಳಲ್ಲಿ ಶಕ್ತಿಶಾಲಿಯಾದ ಪ್ರೊಸೆಸರ್, ಅಧಿಕ ಮೆಮೊರಿ, ಸ್ವಲ್ಪ ಜಾಸ್ತಿ ಶಕ್ತಿಯ ಗ್ರಾಫಿಕ್ಸ್ ಮತ್ತು ಗ್ರಾಫಿಕ್ಸ್ ಮೆಮೊರಿ, ಹೆಚ್ಚು ಸಂಗ್ರಹ ಶಕ್ತಿಯ ಹಾರ್ಡ್‌ಡಿಸ್ಕ್ ಇತ್ಯಾದಿಗಳಿರುತ್ತವೆ. ಈ ವಾರ ಅಂತಹ ಒಂದು ಲ್ಯಾಪ್‌ಟಾಪ್ ಕಡೆಗೆ ನಮ್ಮ ವಿಮರ್ಶಾ ನೋಟ. ಅದುವೇ ಡೆಲ್ ಇನ್ಸ್‌ಪಿರೋನ್ 5558 (Dell Inspiron 5558).

ಗುಣವೈಶಿಷ್ಟ್ಯಗಳು
2.4 ಗಿಗಾಹರ್ಟ್ಸ್ ವೇಗದ 64 ಬಿಟ್ ಪ್ರೊಸೆಸರ್ (Intel i7-5500U),
16 ಗಿಗಾಬೈಟ್ ಮೆಮೊರಿ, 4 ಗಿಗಾಬೈಟ್ ಗ್ರಾಫಿಕ್ಸ್ ಮೆಮೊರಿ (NVIDIA

GeForce 920M), 2 ಟೆರ್ರಾಬೈಟ್ಸ್ ಸಂಗ್ರಹ ಶಕ್ತಿಯ ಹಾರ್ಡ್‌ಡಿಸ್ಕ್, 1920x 1080 ಪಿಕ್ಸೆಲ್ ರೆಸೊಲೂಶನ್‌ನ 15.6 ಇಂಚು ಗಾತ್ರದ ಪರದೆ, ಡಿ.ವಿ.ಡಿ. ಡ್ರೈವ್, ಕಾರ್ಡ್ ರೀಡರ್, ಎತರ್‌ನೆಟ್, ಎಚ್‌ಡಿಎಂಐ. ಯುಎಸ್‌ಬಿ ಕಿಂಡಿಗಳು, ವೈಫೈ, ಬ್ಲೂಟೂತ್, 2.45 ಕಿ.ಗ್ರಾಂ ತೂಕ, 25.9x37.8x2.3 ಸೆ.ಮೀ. ಗಾತ್ರ, ಇತ್ಯಾದಿ. ಬೆಲೆ ವಿಂಡೋಸ್ 10 ಹೋಮ್ ಆವೃತ್ತಿ ಜೊತೆ ಸುಮಾರು ₹70,000. ವಿಂಡೋಸ್ 10 ಪ್ರೋ ಆವೃತ್ತಿಯ ಜೊತೆ ಸುಮಾರು ₹78,000.   

ಇದರ ರಚನೆ ಮತ್ತು ವಿನ್ಯಾಸದಲ್ಲಿ ಹೇಳಿಕೊಳ್ಳುವಂತಹ ವಿಶೇಷ ಏನಿಲ್ಲ. ಎಲ್ಲ ಲ್ಯಾಪ್‌ಟಾಪ್‌ಗಳು ಇರುವಂತೆ ಇದೆ. ಆದರೆ ಇದರ ದೇಹ ಗಡುಸಾಗಿದ್ದು ಗಟ್ಟಿಮುಟ್ಟಾಗಿದೆ.ಒಂದು ಮಟ್ಟಿನ ಆಘಾತವನ್ನು ತಡೆದುಕೊಳ್ಳಬಹುದು. 2.3 ಸೆ.ಮೀ. ದಪ್ಪ ಎಂದರೆ ತೆಳ್ಳಗಿನ ಲ್ಯಾಪ್‌ಟಾಪ್ ಅಲ್ಲ ಎನ್ನಬಹುದು.

15.6 ಇಂಚು ಗಾತ್ರದ ಪರದೆ ಕೂಡ ದೊಡ್ಡದೇ. ಚಿಕ್ಕದಾಗಿದ್ದು ಹಗುರವಾಗಿರುವ ಲ್ಯಾಪ್‌ಟಾಪ್ ಬೇಕು ಎನ್ನುವವರಿಗೆ ಇದು ಹೇಳಿದ್ದಲ್ಲ. ವಿಮಾನದಲ್ಲಿ ಪ್ರಯಾಣಿಸುವಾಗ ಇದರಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಇದನ್ನು ಅಷ್ಟು ಸೀಮಿತ ಸ್ಥಳದಲ್ಲಿ ಬಳಸುವಂತಿಲ್ಲ. ಹ್ಞಾಂ, ನೀವು ಬ್ಯುಸಿನೆಸ್ ದರ್ಜೆಯಲ್ಲಿ ಪ್ರಯಾಣಿಸುವವರಾದರೆ ಬಳಸಲು ಸಾಧ್ಯ.

ನಾನು ಇದನ್ನು ಸುಮಾರು 5 ತಿಂಗಳುಗಳಿಂದ ಬಳಸುತ್ತಿದ್ದೇನೆ. ಒಮ್ಮೆಯೂ ಇದು ತಟಸ್ಥವಾಗಿಲ್ಲ. ಲೇಖನದ ಪ್ರಾರಂಭದಲ್ಲೇ ತಿಳಿಸಿದಂತೆ ಇದು ಪ್ರೋಗ್ರಾಮರ್‌ಗಳಿಗಾಗಿರುವ ಲ್ಯಾಪ್‌ಟಾಪ್. ನಾನು ಇದರಲ್ಲಿ ಸರ್ವರ್‌ಗಳನ್ನೂ ಹಾಕಿದ್ದೇನೆ.

ತುಂಬ ಪ್ರೊಸೆಸಿಂಗ್ ಶಕ್ತಿಯನ್ನು ಬೇಡುವ ಹಲವು ತಂತ್ರಾಂಶಗಳನ್ನು ಏಕಕಾಲದಲ್ಲಿ ಬಳಸಿಯೂ ನೋಡಿದ್ದೇನೆ. ನಾನು ಬಳಸುವಾಗ ಸಾಮಾನ್ಯವಾಗಿ ಹಲವು ತಂತ್ರಾಂಶಗಳು ಮತ್ತು ಸರ್ವರ್‌ ಏಕಕಾಲದಲ್ಲಿ ಕೆಲಸ ಮಾಡುತ್ತಿರುತ್ತವೆ. ನನೆಗೆ ಕೆಲಸ ಮಾಡುವಾಗ ಯಾವ ಅಡೆತಡೆ ಎಂದು ಅನ್ನಿಸಲಿಲ್ಲ.

ಇದರಲ್ಲಿ ಎಸ್‌ಎಸ್‌ಡಿ ಹಾರ್ಡ್‌ಡಿಸ್ಕ್ ಇಲ್ಲ. ಇದರಲ್ಲಿರುವುದು ಎರಡು ಟೆರ್ರಾಬೈಟ್ (2000 ಗಿಗಾಬೈಟ್) ಸಂಗ್ರಹಶಕ್ತಿಯ ಹಾರ್ಡ್‌ಡಿಸ್ಕ್. ಕೆಲವು ಹಾರ್ಡ್‌ಡಿಸ್ಕ್‌ಗಳಲ್ಲಿ ಚಿಕ್ಕ ಪ್ರಮಾಣದ (24 ಅಥವಾ 32 ಗಿಗಾಬೈಟ್) ಸಂಗ್ರಹಶಕ್ತಿಯ ಎಸ್‌ಎಸ್‌ಡಿ ಮೆಮೊರಿ ಕೂಡ ಇರುತ್ತದೆ. ಇಂತಹ ಹಾರ್ಡ್‌ಡಿಸ್ಕ್‌ಗಳು ನಾನು ಗಮನಿಸಿದಂತೆ ಕಿರಿಕಿರಿಯವೇ.

ಅವುಗಳಲ್ಲಿ ಲಿನಕ್ಸ್ ಮತ್ತು ವಿಂಡೋಸ್ ಎರಡನ್ನೂ ಬಳಸಬೇಕಿದ್ದರೆ ಅಷ್ಟು ಸುಲಭವಲ್ಲ. ಈ ಲ್ಯಾಪ್‌ಟಾಪ್‌ನಲ್ಲಿ ಅಂತಹ ಸಮಸ್ಯೆಯಿಲ್ಲ. ಹಾರ್ಡ್‌ಡಿಸ್ಕ್ ಇದುತನಕ ಚೆನ್ನಾಗಿಯೇ ಇದೆ. ಯಾವುದೇ ಕೆಟ್ಟ ಸೆಕ್ಟರ್‌ಗಳು ಬಂದಿಲ್ಲ.

ಈ ಲ್ಯಾಪ್‌ಟಾಪ್‌ನಲ್ಲಿ ಉತ್ತಮ ಗ್ರಾಫಿಕ್ಸ್ ಮತ್ತು ಅದಕ್ಕೆಂದೇ ಅಧಿಕ ಮೆಮೊರಿ ಇದೆ. ಆದುದರಿಂದ ಗ್ರಾಫಿಕ್ಸ್ ಕೆಲಸ ಮಾಡುವವರಿಗೂ ಇದು ಬಳಸಬಹುದಾದ ಲ್ಯಾಪ್‌ಟಾಪ್. ಫೋಟೊಶಾಪ್, ವಿಡಿಯೊ ಎಡಿಟಿಂಗ್, ಇತ್ಯಾದಿಗಳನ್ನು ತೊಂದರೆಯಿಲ್ಲದೇ ಮಾಡಬಹುದು.

ಪರದೆಯ ಗುಣಮಟ್ಟ ಪರವಾಗಿಲ್ಲ. ಎಲ್ಲ ಬಣ್ಣಗಳ ಪುನರುತ್ಪತ್ತಿ ತೃಪ್ತಿದಾಯಕವಾಗಿದೆ. ಪ್ರಖರತೆಯೂ ಚೆನ್ನಾಗಿದೆ. ಸ್ಪರ್ಶಪರದೆ ಇಲ್ಲ ಎನ್ನುವುದು ಅಂತಹ ದೊಡ್ಡ ತೊಂದರೆ ಎಂದು ನನಗೆ ಅನ್ನಿಸಿಲ್ಲ. ಸಿನಿಮಾ ವೀಕ್ಷಣೆಯ ಅನುಭವ ತೃಪ್ತಿದಾಯಕವಾಗಿದೆ.

ಆಟ ಆಡುವ ಅನುಭವಗಳೂ ಪರವಾಗಿಲ್ಲ. ಆಡಿಯೊ ಕೂಡ ತೃಪ್ತಿದಾಯಕವಾಗಿದೆ ಎನ್ನಬಹುದು. ಆದರೂ ಇದು ಪೂರ್ಣಪ್ರಮಾಣದ ಗ್ರಾಫಿಕ್ಸ್ ಅಥವಾ ಗೇಮಿಂಗ್ ಲ್ಯಾಪ್‌ಟಾಪ್ ಅಲ್ಲ. ಅಂತಹ ಲ್ಯಾಪ್‌ಟಾಪ್‌ಗಳಿಗೆ ಒಂದೂಕಾಲು ಲಕ್ಷ ರೂಪಾಯಿಗಳಿಗಿಂತ ಅಧಿಕ ಬೆಲೆಯಿದೆ.

ಈ ಲ್ಯಾಪ್‌ಟಾಪ್‌ನಲ್ಲಿ ಕಡಿಮೆ ರೆಸೊಲೂಶನ್‌ನ ಕ್ಯಾಮೆರಾ ಇದೆ. ಇದು ಫೋಟೊ ತೆಗೆಯಲು ಇರುವುದಲ್ಲ. ಸ್ಕೈಪ್ ಇತ್ಯಾದಿ ತಂತ್ರಾಂಶ ಬಳಸಿ ವಿಡಿಯೊ ಚಾಟ್ ಮಾಡಲು ಮಾತ್ರ ಇದರ ಬಳಕೆ. ಈ ಲ್ಯಾಪ್‌ಟಾಪ್‌ನ ಬ್ಯಾಟರಿ ಚೆನ್ನಾಗಿದೆ. ಇಷ್ಟು ಶಕ್ತಿಶಾಲಿಯಾದ ಲ್ಯಾಪ್‌ಟಾಪ್  ಆಗಿದ್ದೂ ಬ್ಯಾಟರಿ ಸುಮಾರು 4 ರಿಂದ 5 ಗಂಟೆ ಕಾಲ ಬಾಳಿಕೆ ಬರುತ್ತದೆ.

ತುಂಬ ಶಕ್ತಿಶಾಲಿಯಾದ ಲ್ಯಾಪ್‌ಟಾಪ್‌ಗಳ ಬಗ್ಗೆ ಒಂದು ಪ್ರಮುಖ ದೂರು ಎಂದರೆ ಅವು ತುಂಬ ಬಿಸಿಯಾಗುತ್ತವೆ ಎಂದು. ಈ ಲ್ಯಾಪ್‌ಟಾಪ್ ಅಷ್ಟೇನೂ ಬಿಸಿಯಾಗುವುದಿಲ್ಲ.  ಆದುದರಿಂದ ತೊಡೆ ಮೇಲೆ ಇಟ್ಟುಕೊಂಡೂ ಕೆಲಸ ಮಾಡಬಹುದು.

ಹಳೆಯ ಲ್ಯಾಪ್‌ಟಾಪ್‌ಗಳಂತೆ ಇದರಲ್ಲಿ ಸಿ.ಡಿ./ಡಿ.ವಿ.ಡಿ ಡ್ರೈವ್ ಇದೆ. ಅದರ ಬಳಕೆ ತುಂಬ ಕಡಿಮೆ. ಆದರೆ ಹಳೆಯದಾದ ವಿಜಿಎ ಪೋರ್ಟ್ ಇಲ್ಲ. ಎಚ್‌ಡಿಎಂಐ ಪೋರ್ಟ್ ಮಾತ್ರ ಇದೆ. ಪ್ರೆಸೆಂಟೇಶನ್ ನೀಡುವಾಗ ಇದು ಸ್ವಲ್ಪ ಕಿರಿಕಿರಿ ವಿಷಯ. ಇನ್ನೂ ಹಲವು ಪ್ರೊಜೆಕ್ಟರ್‌ಗಳು ವಿಜಿಎ ವಿಧಾನದಲ್ಲೇ ಕೆಲಸ ಮಾಡುತ್ತವೆ.

ಇನ್ನು ಹಲವು ಸ್ಥಳಗಳಲ್ಲಿ ಪ್ರೊಜೆಕ್ಟರಿನಲ್ಲಿ ಎಚ್‌ಡಿಎಂಐ ಸೌಲಭ್ಯವಿದ್ದರೂ ಸೂಕ್ತ ಕೇಬಲ್ ಇಟ್ಟಿರುವುದಿಲ್ಲ. ಆದುದರಿಂದ ಒಂದು ಎಚ್‌ಡಿಎಂಐನಿಂದ ವಿಜಿಎಗೆ ಪರಿವರ್ತಕವನ್ನು ಇಟ್ಟುಕೊಳ್ಳುವುದು ಉತ್ತಮ. ಒಟ್ಟಿನಲ್ಲಿ ಹೇಳುವುದಾದರೆ ನೀವು ಡೆವಲಪರ್ ಆಗಿದ್ದಲ್ಲಿ ನಿಮಗೆ ಇದು ಸೂಕ್ತ ಲ್ಯಾಪ್‌ಟಾಪ್ ಎನ್ನಬಹುದು.

***
ವಾರದ ಆ್ಯಪ್

ಷೇರು ಮಾರುಕಟ್ಟೆ ವಿವರ ತಿಳಿಯಿರಿ ಗೂಗಲ್‌ ಪ್ಲೇ ಸ್ಟೋರಿನಲ್ಲಿ ಷೇರು ಮಾರುಕಟ್ಟೆ ಮತ್ತು ಹಣಕಾಸು ವ್ಯವಹಾರದ ಬಗೆಗೆ ಹಲವು ಕಿರುತಂತ್ರಾಂಶಗಳು (ಆ್ಯಪ್) ದೊರೆಯುತ್ತವೆ. ಅಂತಹ ಒಂದು ಉತ್ತಮ ಕಿರುತಂತ್ರಾಂಶ ಬೇಕಿದ್ದರೆ ನೀವು ಪ್ಲೇ ಸ್ಟೋರಿನಲ್ಲಿ Moneycontrol Markets on Mobile ಎಂದು ಹುಡುಕಬೇಕು ಅಥವಾ bit.ly/gadgetloka249 ಜಾಲತಾಣಕ್ಕೆ ಭೇಟಿ ನೀಡಬೇಕು.

ಇದು ಬಳಸಲು ಸರಳವಾಗಿದೆ. ಷೇರು ಮಾರುಕಟ್ಟೆಯಲ್ಲಿ ಇತ್ತೀಚೆಗೆ ಏನು ನಡೆಯುತ್ತಿದೆ, ಯಾವ ಕಂಪೆನಿಯ ಷೇರಿಗೆ ಎಷ್ಟು ಬೆಲೆಯಿದೆ, ಮುಂಬಯಿ ಷೇರು ಮಾರುಕಟ್ಟೆಯ ಅಂಕಿ ಅಂಶಗಳು, ಮಾರುಕಟ್ಟೆ ವಿಶ್ಲೇಷಣೆ, ಸುದ್ದಿಗಳು, ಟಿ.ವಿ. ಪ್ರಸಾರ, ನಿಮ್ಮಲ್ಲಿರುವ ಷೇರುಗಳ ವಿವರ ದಾಖಲಾತಿ ಮತ್ತು ಅವುಗಳ ಸದ್ಯದ ಸ್ಥಿತಿಯ ವಿಶ್ಲೇಷಣೆ, ಇತ್ಯಾದಿ ಎಲ್ಲ ಸವಲತ್ತುಗಳು ಇದರಲ್ಲಿವೆ.

***
ಗ್ಯಾಜೆಟ್‌ ಸಲಹೆ

ಪ್ರಶ್ನೆ: ನನ್ನ ಡಿಎಸ್‌ಎಲ್‌ಆರ್ ಕ್ಯಾಮೆರಾದಲ್ಲಿ ತೆಗೆದ ಫೋಟೊಗಳನ್ನು ನನ್ನ ಲ್ಯಾಪ್‌ಟಾಪ್‌ಗೆ ವರ್ಗಾಯಿಸಿದ್ದೇನೆ. ಅವುಗಳನ್ನು ಇನ್‌ಸ್ಟಾಗ್ರಾಂಗೆ (Instagram) ಸೇರಿಸುವುದು ಹೇಗೆ?

ಉ: app.deskgram.com/download ಜಾಲತಾಣದಿಂದ ಡೆಸ್ಕ್‌ಗ್ರಾಂ ತಂತ್ರಾಂಶವನ್ನು ಡೌನ್‌ಲೋಡ್ ಮಾಡಿಕೊಂಡು ಅದನ್ನು ಅನುಸ್ಥಾಪಿಸಿ (install). ಅದರಲ್ಲಿ ನಿಮ್ಮ ಇನ್‌ಸ್ಟಾಗ್ರಾಂ ಖಾತೆಯನ್ನು ಸೇರಿಸಿ. ನಂತರ ಅದರ ಮೂಲಕ ಫೋಟೊಗಳನ್ನು ಸೇರಿಸಿ.

***
ಗ್ಯಾಜೆಟ್‌ ತರ್ಲೆ

ಗೂಗಲ್ ಅನುವಾದದ ಅವಾಂತರಗಳ ಬಗ್ಗೆ ಹಲವು ಸಲ ಈ ಅಂಕಣದಲ್ಲಿ ನೀಡಲಾಗಿದೆ. ನಿಮಗೆ ಬೋರ್ ಆಗಿದ್ದರೆ ಗೂಗಲ್ ಅನುವಾದದ ಕಿರುತಂತ್ರಾಂಶಕ್ಕೆ ಕೆಲವು ವಾಕ್ಯಗಳನ್ನು ನೀಡಿ ಅದು ಮಾಡುವ ಅನುವಾದವನ್ನು ನೋಡಿ. ಒಂದೆರಡು ಉದಾಹರಣೆಗಳು-

ಕನ್ನಡ: ನಿಮಗೆ ಬೋರ್ ಆಗಿದ್ದರೆ, ನನ್ನ ತಲೆ ತಿನ್ನಬೇಡಿ
ಇಂಗ್ಲಿಶ್: If you are a bore, eat my head
ಕನ್ನಡ: ನಿಮ್ಮ ಮನೆಯಲ್ಲಿ ಹಾಲು ಇದೆಯಾ?
ಇಂಗ್ಲಿಶ್: Milk member of your household?
ಕನ್ನಡ: ಎಡ ಪಂಥೀಯ ವಿಚಾರ ಧಾರೆಯ ವ್ಯಕ್ತಿ
English: The man thinking about the left-wing jet

***
ಗ್ಯಾಜೆಟ್‌ ಸುದ್ದಿ
ದೇಹದಲ್ಲಿ ನೀರೆಷ್ಟಿದೆ ತಿಳಿಯಿರಿ

ಧರಿಸಬಲ್ಲ ಆರೋಗ್ಯಪಟ್ಟಿಗಳ ಬಗ್ಗೆ ಗೊತ್ತು ತಾನೆ? ಅಂತಹ ಒಂದೆರಡು ಪಟ್ಟಿಗಳ ಬಗ್ಗೆ ಈ ಅಂಕಣದಲ್ಲಿ ವಿಮರ್ಶೆ ಬರೆಯಲಾಗಿತ್ತು. ಈ ಆರೋಗ್ಯಪಟ್ಟಿಗಳ ಸಾಲಿಗೆ ಹೊಸ ಸೇರ್ಪಡೆ –ದೇಹದಲ್ಲಿ ಇರುವ ನೀರನ್ನು ಅಳೆಯಬಲ್ಲ ಆರೋಗ್ಯಪಟ್ಟಿ. ನಮ್ಮಲ್ಲಿ ಹಲವು ಮಂದಿ ಕಾಲಕಾಲಕ್ಕೆ ನೀರು ಕುಡಿಯುವುದನ್ನು ಮರೆಯುತ್ತಾರೆ.

ಎಷ್ಟು ನೀರನ್ನು ಕುಡಿದಿದ್ದೇನೆ ಎಂಬುದನ್ನು ಆಗಾಗ ದಾಖಲಿಸಿ, ಸರಿಯಾದ ಕಾಲಕ್ಕೆ ನೀರು ಕುಡಿಯದಿದ್ದರೆ ಎಚ್ಚರಿಸುವ ಕಿರುತಂತ್ರಾಂಶಗಳು ಬೇಕಾದಷ್ಟಿವೆ. ಆದರೆ ಈ ಆರೋಗ್ಯಪಟ್ಟಿ ಹಾಗಲ್ಲ. ಅದು ದೇಹದಲ್ಲಿರುವ ನೀರಿನ ಮಟ್ಟವನ್ನು ಅಳೆಯುತ್ತಿರುತ್ತದೆ.

​ಅದು ಕಡಿಮೆಯಾದಾಗ ನೀರು ಕುಡಿಯಲು ಎಚ್ಚರಿಸುತ್ತದೆ. ಈ ಆರೋಗ್ಯಪಟ್ಟಿಯು ಇತರೆ ಆರೋಗ್ಯಪಟ್ಟಿಗಳು ಮಾಡುವ ಬೇರೆಲ್ಲ ಕೆಲಸಗಳನ್ನೂ ಮಾಡುತ್ತದೆ. ಇದು ಇನ್ನೂ ಮಾರುಕಟ್ಟೆಗೆ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT