ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಸಹಾಯ: ಸಾಲದಾಚೆಗಿನ ಸದಾಶಯ

Last Updated 9 ಜನವರಿ 2012, 19:30 IST
ಅಕ್ಷರ ಗಾತ್ರ

ಭಾಗ್ಯಮ್ಮ ಮತ್ತು ಇತರ 15 ಮಹಿಳೆಯರು ಒಂದೆಡೆ ಕುಳಿತು ಕಮಲಮ್ಮನ ಬಗ್ಗೆ ಮಾತನಾಡುತ್ತಿದ್ದರು. ಕಳೆದ ಎರಡು ವರ್ಷಗಳಿಂದಲೂ ಕಮಲಮ್ಮ ಅನುಭವಿಸುತ್ತಿದ್ದ ಸಂಕಷ್ಟದ ಬಗ್ಗೆ ಚರ್ಚಿಸುತ್ತಿದ್ದರು. ಆಕೆಯ ಕುಡುಕ ಗಂಡನಿಗೆ ಎಲ್ಲರೂ ಒಟ್ಟಾಗಿ ಹೋಗಿ ಛೀಮಾರಿ ಹಾಕಿ ಬರುವುದೋ ಅಥವಾ ಸಾಮಾಜಿಕವಾಗಿ ಅವನಿಗೆ ಬಹಿಷ್ಕಾರ ಹಾಕುವುದೋ, ಇಲ್ಲವೇ ಸಮೀಪದ ಪೊಲೀಸ್ ಠಾಣೆಗೆ ಹೋಗಿ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸುವುದೋ ಎಂದು ಚರ್ಚಿಸುತ್ತಿದ್ದರು. ಅವರ್ಲ್ಲಲಿ ಕೆಲವರು, ಕಮಲಮ್ಮನ ಕುಟುಂಬದ ಹಿತದೃಷ್ಟಿಯನ್ನು ಗಮನದಲ್ಲಿಟ್ಟು ಈ ಸಮಸ್ಯೆಗೆ ಸಂಧಾನದ ಮೂಲಕವೇ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳುತ್ತಿದ್ದರು.

ಅದಾಗಲೇ 50 ವರ್ಷ ಸಮೀಪಿಸುತ್ತಿದ್ದ ಕಮಲಮ್ಮನ ಮುಂದಿನ ಬದುಕಿಗೆ ಕುಟುಂಬ ಮತ್ತು ಗಂಡನ ಅಗತ್ಯ ಇರುವುದರಿಂದ ಯಾವ ಕ್ರಮ ಕೈಗೊಂಡರೂ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ತಿಳಿಹೇಳುತ್ತಿದ್ದರು.

ಕಮಲಮ್ಮನ ತುರ್ತು ಅಗತ್ಯಗಳಿಗೆ 250 ರೂಪಾಯಿ ಕೊಡಲು ಅವರೆಲ್ಲ ತೀರ್ಮಾನಿಸಿದರು. ಬಳಿಕ, ಆವರೆಗೆ ತಾವೆಲ್ಲ ಒಟ್ಟು ಸೇರಿ ಮಾಡಿರುವ ಉಳಿತಾಯದತ್ತ ಅವರ ಮಾತುಕತೆ ಹೊರಳಿತು. ಇದು ಅವರೆಲ್ಲರಿಗೆ ಪ್ರಿಯವಾದ ಮತ್ತು ವಿಶಿಷ್ಟವಾದ ಬುಧವಾರದ ಸಂಜೆಯಾಗಿತ್ತು. ಪ್ರತಿ ವಾರವೂ ಅದೇ ದಿನ ಸುಮಾರು ಎರಡು ಗಂಟೆ ಸಭೆ ಸೇರುತ್ತಿದ್ದ ಅವರು ಈ ಸಂದರ್ಭದಲ್ಲಿ ತಮ್ಮ ಅಭ್ಯುದಯ, ಸಮಸ್ಯೆಗಳು, ಆರೋಗ್ಯ, ಹವಾಮಾನ, ಉಳಿತಾಯ, ಸಾಲ ಎಲ್ಲವುಗಳ ಬಗ್ಗೆಯೂ ಮಾತನಾಡುತ್ತಿದ್ದರು. ಇದೊಂದು ನಿಜವಾದ ಅರ್ಥದ ಸ್ವಸಹಾಯ ಗುಂಪೇ ಆಗಿತ್ತು.

ತಮ್ಮದೇ ಆದ ಪ್ರತ್ಯೇಕ ಅಸ್ತಿತ್ವ ಕಂಡುಕೊಳ್ಳುವ, ಎಲ್ಲ ಜಂಜಡಗಳನ್ನೂ ಮರೆತು ಮನೆಯಿಂದ ಕೆಲ ಕಾಲ ದೂರ ಇರುವ, ಈ ಮೂಲಕ ತಮ್ಮ ಮಹಿಳಾತನ ಮತ್ತು ಖಾಸಗಿತನವನ್ನು ಅನುಭವಿಸುವ ಸ್ವಾತಂತ್ರ್ಯ ಪಡೆಯುವ... ಹೀಗೆ ಏನೆಲ್ಲವನ್ನೂ ನೀಡುತ್ತಿದ್ದ ಆ ಎರಡು ಗಂಟೆ ಅವರಿಗೆ ಹೆಚ್ಚು ಮಹತ್ವದ್ದಾಗಿತ್ತು. ಈ ಸಂದರ್ಭದಲ್ಲಿ ಅವರಲ್ಲಿ ಸೂಕ್ಷ್ಮವಾಗಿ ನಡೆಯುತ್ತಿದ್ದ ಸಾಮಾಜಿಕ, ಆರ್ಥಿಕ, ರಾಜಕೀಯ ಮಾತುಕತೆ ಅತ್ಯಂತ ಚೇತೋಹಾರಿಯಾಗಿತ್ತು.

ಇಂತಹ ಅನುಭವಗಳಿಂದಾಗಿಯೇ, ಮಹಿಳೆಯರ ಒಗ್ಗಟ್ಟಿಗೆ ವೇದಿಕೆ ಒದಗಿಸಿರುವ ಸ್ವಸಹಾಯ ಗುಂಪುಗಳು ಇಂದು ವಿಶ್ವವ್ಯಾಪಿಯಾಗಿವೆ. ಕಮಲಮ್ಮನ ಬಗ್ಗೆ ಚರ್ಚಿಸುತ್ತಿದ್ದ ಆ ಮಹಿಳೆಯರ ಗುಂಪನ್ನು ಕಂಡಾಗ ಆಂಧ್ರಪ್ರದೇಶದಲ್ಲಿ ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಸಂಗತಿಗಳು ನನ್ನ ನೆನಪಿಗೆ ಬಂದವು. ಅಲ್ಲಿ ಲಾಭವನ್ನು ದೃಷ್ಟಿಯಲ್ಲಿಟ್ಟುಕೊಂಡ ಹಲವಾರು ಕಿರು ಸಾಲ ನೀಡಿಕೆ ಸಂಸ್ಥೆಗಳು ಲಕ್ಷಾಂತರ ಹೆಣ್ಣು ಮಕ್ಕಳಿಗೆ 6 ಸಾವಿರ ಕೋಟಿಗೂ ಹೆಚ್ಚು ಹಣವನ್ನು ನೀಡಿವೆ.

ಅವರಲ್ಲಿ ಹಲವರಿಗೆ ದುಂಬಾಲು ಬಿದ್ದು ಸಾಲ ಕೊಟ್ಟು ಬಲವಂತವಾಗಿ ವಸೂಲಿ ಮಾಡಿಕೊಂಡಿದ್ದರಿಂದ ಅವರ ಬಡತನ ನೀಗುವುದರ ಬದಲು ಇನ್ನಷ್ಟು ಹೆಚ್ಚೇ ಆಗಿತ್ತು. ಸಾಲ ಕಟ್ಟಲಾಗದ ನೂರಾರು ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದು ಎಷ್ಟೊಂದು ದೊಡ್ಡ ಸಮಸ್ಯೆಯಾಯಿತೆಂದರೆ ಕಡೆಗೆ ಸರ್ಕಾರವೇ ಮಧ್ಯ ಪ್ರವೇಶಿಸಿ ಈ ಉದ್ದಿಮೆಯನ್ನು ನಿಯಂತ್ರಿಸಲು ಮುಂದಾಯಿತು. ನಿಜವಾಗಲೂ ಅಲ್ಲಿ ನಡೆದದ್ದೇನೆಂದರೆ, ಎಂಬಿಎ ಪದವೀಧರ ಕಾರ್ಯನಿರ್ವಾಹಕರಾದ ನಾಜೂಕಯ್ಯಂದಿರು, ತಂತ್ರಜ್ಞಾನ ಮತ್ತು ಬೃಹತ್ ಬಂಡವಾಳ ತೊಡಗಿಸಿ ಈ ಅಮಾಯಕ ಬಡವರಿಂದ ಲಾಭ ಮಾಡಿಕೊಳ್ಳಲು ಮುಂದಾಗಿದ್ದರು. ಈ ಮೂಲಕ ಸ್ಥಳೀಯ ಲೇವಾದೇವಿದಾರರನ್ನು ಬದಿಗೆ ತಳ್ಳಿದ್ದರು.

ದುರದೃಷ್ಟದ ಸಂಗತಿಯೆಂದರೆ, ಹೀಗೆ ಸ್ವಸಹಾಯ ಗುಂಪುಗಳ ಅಗಾಧ ಶಕ್ತಿ ಮತ್ತು ಸಾಮರ್ಥ್ಯದಿಂದ ಲಾಭ ಮಾಡಿಕೊಳ್ಳುವ ಆತುರದಲ್ಲಿ ಜಗತ್ತಿನಾದ್ಯಂತ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಅವುಗಳನ್ನು ಕೇವಲ ಕಿರು ಸಾಲ ಆಂದೋಲನ ಎಂಬಂತೆ ಬಿಂಬಿಸಿಬಿಟ್ಟಿವೆ. ಸ್ವಸಹಾಯ ಎಂಬುದು ಎಷ್ಟೊಂದು ಸಬಲವಾದುದು ಮತ್ತು ಎಂತಹ ಘನತೆ ಅದಕ್ಕಿದೆ ಎಂಬ ಮಹತ್ವವನ್ನೇ ಮರೆತಿರುವ ಜನ, ಅದನ್ನು ಕೇವಲ ವಾಹನ ಸಾಲ ನೀಡಿಕೆ ಮತ್ತು ವಸೂಲಾತಿಯ ಮಟ್ಟಕ್ಕಷ್ಟೇ ಇಳಿಸಿಬಿಟ್ಟಿದ್ದಾರೆ.

ಒಗ್ಗೂಡಿಸಿದ ಬಡತನ: ಬಡತನದ ಬವಣೆಯನ್ನು ಬಡವರಷ್ಟೇ ಅನುಭವಿಸಲು ಸಾಧ್ಯ. ಹೀಗಾಗಿ ಬಡವರ ನಿಜವಾದ ಅಗತ್ಯಗಳನ್ನು ಬಡವರು ಮಾತ್ರ ಸರಿಯಾಗಿ ಅರ್ಥ ಮಾಡಿಕೊಳ್ಳಬಲ್ಲರು. ಹೀಗೆ ತಮ್ಮ ಸಮಸ್ಯೆಗಳನ್ನು ಸ್ವತಃ ಅರ್ಥ ಮಾಡಿಕೊಂಡ ಅವರು, ತಮ್ಮ ಹಣದ ಉಳಿತಾಯಕ್ಕಾಗಿ ಒಟ್ಟಾದರು. ಉಳಿಸಿದ ಹಣದಿಂದ ಕಡು ಬಡವರಿಗೆ ಸಾಲ ನೀಡಲು ಮುಂದಾದರು. ಇದಕ್ಕಾಗಿ ಅವರು ವಿಧಿಸುತ್ತಿದ್ದ ಬಡ್ಡಿ ದರ, ಸಾಲ ಪಡೆದುಕೊಂಡವರ ತೀರಿಸುವ ಸಾಮರ್ಥ್ಯವನ್ನು ಅವಲಂಬಿಸಿರುತ್ತಿತ್ತು. ಬಡವರು ತಮ್ಮ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳುವುದಷ್ಟೇ ಅಲ್ಲ, ತಮ್ಮ ಪಾವತಿ ಸಾಮರ್ಥ್ಯವನ್ನು ಸಹ ಅರ್ಥ ಮಾಡಿಕೊಳ್ಳುವುದು ನಿಜಕ್ಕೂ ಒಂದು ಅದ್ಭುತವಾದ ವ್ಯವಸ್ಥೆಯೇ ಸರಿ.

ಬರೀ ಉಳಿತಾಯ ಮತ್ತು ಸಾಲ ನೀಡಿಕೆಯನ್ನೂ ಮೀರಿ ಅವರು ಬೆಳೆದಿದ್ದರು. ಸಾಲ ನೀಡಿಕೆಯು ಅವರ ಮೂಲ ಉದ್ದೇಶದ ಒಂದಂಶ ಮಾತ್ರವಾಗಿತ್ತು. ಹಲವು ಗುಂಪುಗಳು ಹೆಸರಿಗೆ ಅನ್ವರ್ಥವೆಂಬಂತೆ ಸ್ವಸಹಾಯ ಗುಂಪುಗಳೇ ಆಗಿ ಸದಸ್ಯರಿಗೆ ಮಾನಸಿಕ, ಸಾಮಾಜಿಕ ಮತ್ತು ರಾಜಕೀಯ ಬಲವನ್ನು ಒದಗಿಸಿದ್ದವು. ಹೊರಗಿನ ಶಕ್ತಿಗಳ ಶಿಫಾರಸು ಅಥವಾ ಮೂಗು ತೂರಿಸುವಿಕೆ ಅತ್ಯಲ್ಪ ಪ್ರಮಾಣದಲ್ಲಿತ್ತು.

ಮೂರು ದಶಕಗಳಿಗೂ ಹಿಂದೆ ಸ್ವಸಹಾಯ ಗುಂಪುಗಳು ಆರಂಭವಾದಾಗ ನಿಜವಾಗಲೂ ಅವು ಸಮುದಾಯ ಕೇಂದ್ರಿತವಾಗಿದ್ದವು. ಅವು ನೀಡುತ್ತಿದ್ದ ಸಾಲದ ಮೊತ್ತ ಸಹ ಗುಂಪಿನ ಸದಸ್ಯರ ಮರುಪಾವತಿ ಸಾಮರ್ಥ್ಯವನ್ನು ಅವಲಂಬಿಸಿರುತ್ತಿತ್ತೇ ಹೊರತು ಆ ಗುಂಪಿನ ಬಳಿ ಎಷ್ಟು ಹಣ ಒಟ್ಟುಗೂಡಿದೆ ಎಂಬುದರ ಮೇಲಲ್ಲ.

ಆದರೆ ಕೆಲ ವರ್ಷಗಳ ಹಿಂದೆ ಸರ್ಕಾರ ಈ ವ್ಯವಹಾರಕ್ಕೆ ಕಾಲಿಡುತ್ತಿದ್ದಂತೆಯೇ, ಗುಂಪಿನ ಸದಸ್ಯರ ಬಲ ಏನು ಮತ್ತು ಅವರ ದೌರ್ಬಲ್ಯ ಏನು ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವ ಗೋಜಿಗೇ ಹೋಗದೆ ಮೂಲ ಬಂಡವಾಳವನ್ನು ಕೊಡಲು ಮುಂದಾಯಿತು. ಅಲ್ಲಿ ವಿಕಸನದ ಯಾವುದೇ ಪ್ರಕ್ರಿಯೆಯಾಗಲೀ, ಈ ನಿಟ್ಟಿನಲ್ಲಿ ಸೂಕ್ತ ತರಬೇತಿಯಾಗಲೀ, ಸಾಲ ಎಂದರೇನು ಎಂಬುದನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವಾಗಲೀ ಯಾವುದೂ ಇರಲಿಲ್ಲ. ಉಳಿತಾಯದ ಶಕ್ತಿ ಮತ್ತು ಮಿತಿಗಳನ್ನು ಅರಿಯುವ ಪ್ರಯತ್ನ ಸಹ ನಡೆಯಲಿಲ್ಲ. ಒಟ್ಟಾರೆ ಮೂಲ ಬಂಡವಾಳವು ಆರ್ಥಿಕ ಪ್ರಕ್ರಿಯೆಗೆ ಚಿಮ್ಮು ಹಲಗೆಯಾಗುತ್ತದೆ, ಮಹಿಳೆಯರು ಮತ್ತು ಅವರ ಕುಟುಂಬಗಳನ್ನು ಬಡತನದ ಬೇಗೆಯಿಂದ ಹೊರತರುತ್ತದೆ ಎಂದಷ್ಟೇ ಅವರು ತಿಳಿದುಕೊಂಡಿದ್ದರು.

ಸಂಘಟಿತವಾದ ಮತ್ತು ಬೃಹತ್ ಪ್ರಮಾಣದ ಕಿರು ಸಾಲ ನೀಡಿಕೆ ಸಂಸ್ಥೆಗಳಂತೂ ಸ್ವಸಹಾಯ ಪರಿಕಲ್ಪನೆಯನ್ನು ಇನ್ನಷ್ಟು ಹಾಳುಗೆಡವಿದವು. ಈ ಸಂಸ್ಥೆಗಳು ಬರೀ ಸಾಮಾಜಿಕ ಕಳಕಳಿಯಿಂದಷ್ಟೇ ಈ ಕ್ಷೇತ್ರಕ್ಕೆ ಧುಮುಕಲಿಲ್ಲ. ಒಂದರ್ಥದಲ್ಲಿ ಅವು ಆ ಹೆಸರಿನಲ್ಲೇ ತಮ್ಮ ಕೆಲಸ ಆರಂಭಿಸಿದವಾದರೂ, ನಿಜವಾದ ಪ್ರಕ್ರಿಯೆ ಶುರುವಾದಾಗ ಲಾಭ ಗಳಿಕೆಯ ಆರ್ಥಿಕ ಕಳಕಳಿಯಷ್ಟೇ ಅವುಗಳಿಗೆ ಮುಖ್ಯವಾಯಿತು ಎನಿಸುತ್ತದೆ. ವಸೂಲಾತಿ ವ್ಯವಸ್ಥೆ ಅತ್ಯಂತ ಸಂಘಟಿತವಾಯಿತು.

ಮೊದಲು ಸ್ವಸಹಾಯ ಗುಂಪುಗಳ ಕಾರ್ಯನಿರ್ವಹಣೆಯು ತಮ್ಮ ಸದಸ್ಯರ ಸಾಲ ಮರುಪಾವತಿ ಸಾಮರ್ಥ್ಯವನ್ನು ಆಧರಿಸಿರಲಿಲ್ಲ. ಬದಲಿಗೆ ಅವರು ಸಾಲದ ಸದುಪಯೋಗ ಮಾಡಿಕೊಂಡು ಬಡತನವನ್ನು ಮೆಟ್ಟಿ ನಿಲ್ಲಲು ಮುಂದಾಗುವ ಸಾಮರ್ಥ್ಯವನ್ನು ಅವಲಂಬಿಸಿತ್ತು. ಹೀಗಾಗಿ ಬಡ್ಡಿ ದರ ಸದಸ್ಯರಿಗೆ ಹೊರೆಯಾಗದಂತೆ ಅವು ನೋಡಿಕೊಳ್ಳುತ್ತಿದ್ದವು. ಆದರೆ ಕಿರು ಸಾಲ ನೀಡಿಕೆ ಸಂಸ್ಥೆಗಳು, ಸಾಲ ಪಡೆದುಕೊಂಡವರು ಆ ಹಣವನ್ನು ಏನು ಮಾಡುತ್ತಾರೆ ಎಂಬ ಬಗ್ಗೆ ಗಮನಹರಿಸದೆ ಕೇವಲ ವಸೂಲಾತಿಯನ್ನಷ್ಟೇ ಪ್ರಮುಖ ಗುರಿಯಾಗಿ ಇರಿಸಿಕೊಂಡಿರುತ್ತವೆ. ಈ ಸಂಸ್ಥೆಗಳು ಶೇ 40- 50ರಷ್ಟು ಬಡ್ಡಿ ದರ ವಿಧಿಸುತ್ತವೆ. ಸ್ಥಳೀಯ ಲೇವಾದೇವಿದಾರರು ವಿಧಿಸುವ ಶೇ 100- 120ರಷ್ಟು ಬಡ್ಡಿ ದರಕ್ಕಿಂತ ಇದು ಕಡಿಮೆ ಎಂದೇ ಜನ ಭಾವಿಸುತ್ತಾರೆ.

ಇಂದು ಜಾಗತಿಕ ಕಿರು ಸಾಲ ನೀಡಿಕೆ ಸಂಸ್ಥೆಗಳು, ಖಾಸಗಿ ಸಂಸ್ಥೆಗಳ ಮಾದರಿಯಲ್ಲೇ ಜನರಿಂದ ಹಣ ಸಂಗ್ರಹಿಸುತ್ತಿವೆ. ಹೀಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸಿದರೆ ಅವರಿಗೆ ಲಾಭಾಂಶ ನೀಡಬೇಕಾಗುತ್ತದೆ. ಇದರ ಜೊತೆಗೆ ನಿರ್ವಹಣಾ ವೆಚ್ಚ ಕಳೆದು ಸ್ವತಃ ದೊಡ್ಡ ಪ್ರಮಾಣದ ಲಾಭ ಮಾಡಿಕೊಳ್ಳುವುದೂ ಅವುಗಳ ಗುರಿಯಾದ್ದರಿಂದ, ಸಾಲಗಾರರಿಗೆ ಅಧಿಕ ಬಡ್ಡಿ ದರ ವಿಧಿಸುವುದು ಅನಿವಾರ್ಯವಾಗುತ್ತದೆ.

ಈ ಇಡೀ ಪ್ರಕ್ರಿಯೆಯುದ್ದಕ್ಕೂ ಬಡವರು ಎಲ್ಲಿಯೂ ಸಕ್ರಿಯ ಪಾಲುದಾರರಾಗುವುದೇ ಇಲ್ಲ. ಅವರು ಕೇವಲ ಹಣ ಗಳಿಕೆಯ ಸಾಧನ ಮಾತ್ರ ಆಗಿರುತ್ತಾರೆ.

ಗ್ರಾಮೀಣ ಭಾಗಗಳಲ್ಲಿ ಆರ್ಥಿಕತೆಗೆ ಚಾಲನೆ ನೀಡಬೇಕಾದರೆ ಬೃಹತ್ ಪ್ರಮಾಣದ ಬಂಡವಾಳದ ಹರಿವು ಅಗತ್ಯ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಇಲ್ಲಿ ಕೇವಲ ಸಾಲ ನೀಡಿಕೆಗಷ್ಟೇ ಸೀಮಿತವಾಗದೆ ಸಾಮಾಜಿಕ ಕಳಕಳಿ ಹೊಂದಿದ ಮತ್ತು ವಿಶಾಲ ದೃಷ್ಟಿಕೋನದ ಕಿರು ಸಾಲ ನೀಡಿಕೆ ಸಂಸ್ಥೆಗಳ ಅಗತ್ಯ ಇದೆ. ಅದೆಂದರೆ ಸಣ್ಣ ಸ್ವಸಹಾಯ ಗುಂಪುಗಳು ಕಿರು ಸಾಲ ನೀಡುವ ದೊಡ್ಡ ಸಂಸ್ಥೆಗಳು ನೀಡುವ ಸಾಲವನ್ನು ಬಳಸಿಕೊಂಡು ಅವುಗಳ ಜೊತೆ ಸಹಭಾಗಿತ್ವ ಸಾಧಿಸುವಂತೆ ನೋಡಿಕೊಳ್ಳಬೇಕಾಗಿದೆ.

ಕಿರು ಸಾಲ ನೀಡಿಕೆ ಆಂದೋಲನವು ಏಕಮುಖವಾಗಿ ಹಣ ಗಳಿಕೆಯೊಂದನ್ನೇ ಗುರಿಯಾಗಿಸಿಕೊಳ್ಳದೆ ಅದರಾಚೆಗೂ ಚಿತ್ತ ಹರಿಸಬೇಕು. ಅದು ಸಮುದಾಯದ ಪಾಲ್ಗೊಳ್ಳುವಿಕೆ, ಸಮುದಾಯದ ಮಾಲೀಕತ್ವ, ಸಮುದಾಯ ಕೇಂದ್ರಿತ ಮನೋಧೋರಣೆಯ ಶಕ್ತಿ ಎಷ್ಟೆಂಬುದನ್ನು  ಅರಿಯಬೇಕು.

ಸೂಕ್ತ ಬಡ್ಡಿ ದರ ನಿಗದಿಪಡಿಸುವ ಹಾಗೂ ಸಾಲ ನೀಡಿಕೆ ಅನ್ಯ ಉದ್ದೇಶಕ್ಕೆ ಬಳಕೆಯಾಗುತ್ತಿದೆಯೋ ಅಥವಾ ಉತ್ಪನ್ನ ಸೃಷ್ಟಿಗೆ ಮೀಸಲಾಗಿದೆಯೋ ಎಂಬುದನ್ನು ಖಾತ್ರಿ ಮಾಡಿಕೊಳ್ಳುವವರ ಅಗತ್ಯ ಇಂದು ಹೆಚ್ಚಾಗಿದೆ. ಇದರ ಜೊತೆಗೆ ಜನರನ್ನು ತರಬೇತಿ ಮತ್ತು ಸಾಧನಾ ಸಲಕರಣೆಗಳ ಮೂಲಕವೂ ಸಬಲಗೊಳಿಸಬೇಕಾಗುತ್ತದೆ.
ಹೊಸ ತಂತ್ರಜ್ಞಾನ ಬಡವರನ್ನೂ ಒಳಗೊಳ್ಳುವಂತೆ ಮತ್ತು `ಮಹಿಳಾ ಸ್ನೇಹಿ~ ಆಗಿರುವಂತೆ ನೋಡಿಕೊಳ್ಳಬೇಕಾಗುತ್ತದೆ. ಮಹಿಳೆಯರನ್ನು ಬದಲಾವಣೆಯ ಪ್ರವರ್ತಕರನ್ನಾಗಿ, ತಾವು ನಡೆಸುವ ಗುಂಪುಗಳ ಒಡೆಯರನ್ನಾಗಿ, ತಮ್ಮ ಅಭಿವೃದ್ಧಿಗೆ ಪೂರಕವಾದ ಜವಾಬ್ದಾರಿಯನ್ನು ಅವರು ವಹಿಸಿಕೊಳ್ಳುವಂತೆ ಮತ್ತು ಬಡತನದ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಹೊಂದುವಂತೆ ಯಾವಾಗ ಮಾಡುತ್ತೇವೆಯೋ ಅದೇ ನಿಜವಾದ ಅರ್ಥದ ಸ್ವಸಹಾಯ. ಅದು ಬಾಹ್ಯ ಸಂಸ್ಥೆಯಿಂದ ನಡೆಯುವ ಪ್ರಕ್ರಿಯೆಯಾಗದೆ ಸಮುದಾಯ ಚಾಲಿತ ವ್ಯವಸ್ಥೆ ಆದಾಗ ಮಾತ್ರ ಈ ಆಶಯ ಈಡೇರುತ್ತದೆ.

ಕಿರು ಸಾಲ ನೀಡಿಕೆ ಉದ್ಯಮವು ಸ್ವಸಹಾಯ ಗುಂಪುಗಳ `ದೇಹ~ ಮಾತ್ರ. ಈ `ದೇಹ~ಕ್ಕೆ ಅತ್ಯಗತ್ಯವಾದ `ಆತ್ಮ~ವನ್ನೂ ಹೊಂದಿ, ನೈಜ ಸ್ವಸಹಾಯ ಆಂದೋಲನವಾಗಿ ಗುಂಪುಗಳು ಪರಿವರ್ತನೆಗೊಳ್ಳಬೇಕಿದೆ.
(ನಿಮ್ಮ ಅನಿಸಿಕೆ ತಿಳಿಸಿ
editpagefeedback@prajavani.co

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT