ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಸಂಭ್ರಮ ಮತ್ತು ಸೂತಕದ ನೆರಳು

Last Updated 14 ಆಗಸ್ಟ್ 2016, 19:48 IST
ಅಕ್ಷರ ಗಾತ್ರ

ಸ್ವಾತಂತ್ರ್ಯ ಈ ದೇಶದ ಸಾಮಾನ್ಯ ಮನುಷ್ಯನಿಗೆ ನೀಡಿದ ಸ್ವಾತಂತ್ರ್ಯವನ್ನು ಬಳಸಿಕೊಂಡು 70ನೇ ಸ್ವಾತಂತ್ರ್ಯದ ಆಚರಣೆಯ ಇಂದಿನ ದಿನ ಸಾಮಾನ್ಯ ಮನುಷ್ಯನ  ಭಾಷೆಯಲ್ಲಿ ಒಂದು ಪ್ರಶ್ನೆ ಕೇಳಬೇಕು. ಈ ಪ್ರಶ್ನೆ ಈ ದೇಶದ ಅಷ್ಟೂ ರಾಜ್ಯಗಳ ಮುಖ್ಯಮಂತ್ರಿಗಳಿಗೆ, ಈ ಪ್ರಶ್ನೆ ಈ ದೇಶದ ಅಷ್ಟೂ ರಾಜ್ಯಗಳ ಗೃಹ ಮಂತ್ರಿಗಳಿಗೆ, ಈ ಪ್ರಶ್ನೆ ಈ ದೇಶದ ಸುಪ್ರೀಂ ಕೋರ್ಟು ಮತ್ತು ಎಲ್ಲಾ ಹೈಕೋರ್ಟುಗಳ ನ್ಯಾಯಮೂರ್ತಿಗಳಿಗೆ, ಈ ಪ್ರಶ್ನೆ ಕೇಂದ್ರ ಸರ್ಕಾರದ ಮತ್ತು ಅಷ್ಟೂ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿ ಮತ್ತು ಗೃಹ ಕಾರ್ಯದರ್ಶಿಗಳಿಗೆ ಮತ್ತು ಕೊನೆಯದಾಗಿ ಈ ಪ್ರಶ್ನೆ ಕೇಂದ್ರ ಗೃಹ ಸಚಿವರಿಗೆ ಮತ್ತು ಈ ದೇಶದ ಪ್ರಧಾನ ಮ೦ತ್ರಿಗಳಿಗೆ. ವಿಷಯ ಸಾಂವಿಧಾನಿಕವಾಗಿ ರಾಜ್ಯ ಸರ್ಕಾರ ಮತ್ತು ನ್ಯಾಯಾಂಗಕ್ಕೆ ಸಂಬಂಧಿಸಿದ್ದು ಎನ್ನುವ ಕಾರಣಕ್ಕೆ ಪ್ರಧಾನ ಮಂತ್ರಿಗಳನ್ನು ಪಟ್ಟಿಯ ಕೊನೆಯಲ್ಲಿ ಹೆಸರಿಸಿದ್ದು.

ಇದು ಪ್ರಶ್ನೆ: ಬೀದಿ ಬೀದಿಗಳಲ್ಲಿ ಜನ ಗುಂಪು ಕಟ್ಟಿಕೊಂಡು  ಅರಣ್ಯ ನ್ಯಾಯ ಪಾಲಿಸುತ್ತಾ ಅವರ ದೃಷ್ಟಿಯಲ್ಲಿ ತಪ್ಪಿತಸ್ಥರೆಂದು ಕಂಡವರಿಗೆ ಮಧ್ಯಯುಗದ ಪಾಳೇಗಾರರ ರೀತಿ ಕ್ರೂರವಾಗಿ ಶಿಕ್ಷಿಸಬಹುದಾದರೆ ನೀವೆಲ್ಲ ಇದ್ದೂ ವ್ಯರ್ಥವಲ್ಲವೇ?  ಪ್ರಶ್ನೆಯನ್ನು ಸ್ವಲ್ಪ ವಿವರಿಸಬೇಕು.

ಜನ ಬೀದಿಯಲ್ಲಿ ನ್ಯಾಯ ನಿರ್ಣಯ ಮಾಡಿ ಶಿಕ್ಷಿಸುವ ಘಟನೆಗಳು ಹಿಂದೆ ಯಾವತ್ತೋ ಒಮ್ಮೆ ನಡೆಯುತ್ತಿದ್ದವು. ಈಗ ಹಾಗಲ್ಲ. ಟಿ.ವಿ. ಚಾನೆಲ್‌ಗಳು ಪ್ರತೀ ಕ್ಷಣಕ್ಕೂ ಇಂತಹ ಒಂದು ಹೊಸ ಘಟನೆಯನ್ನು ನಮ್ಮ ಮುಂದಿಡುತ್ತವೆ. ಇವೇನೂ ಸಾಮಾನ್ಯ ಅಪರಾಧ ಸುದ್ದಿಗಳಂತೆ ಓದಿ ಮರೆಯಬಹುದಾದ ಘಟನೆಗಳಲ್ಲ. ಇಂತಹ ಒಂದು ಘಟನೆ ಅಪರೂಪಕ್ಕೆ ಎಲ್ಲೋ ನಡೆದರೂ ಅದು ಸರ್ಕಾರವನ್ನು ಬೆಚ್ಚಿ ಬೀಳಿಸಬೇಕು.

ಯಾಕೆಂದರೆ ಬೀದಿ ಬೀದಿಗಳಲ್ಲಿ ನ್ಯಾಯ ನಿರ್ಣಯವಾಗತೊಡಗಿದರೆ, ಯಾರು ಯಾರ ಜತೆ ಮಾತನಾಡಬಹುದು, ಯಾರು ಯಾರ ಜತೆ ತಿರುಗಾಡಬಹುದು ಎನ್ನುವುದನ್ನು ಒಂದಷ್ಟು ಸಂಘಟನೆಗಳು ನಿರ್ಣಯಿಸಿ ನೈತಿಕ ಪೊಲೀಸ್‌ಗಿರಿ  ಪ್ರದರ್ಶಿಸತೊಡಗಿದರೆ, ಎಲ್ಲಾ ರೀತಿಯ ಅಭಿಪ್ರಾಯಭೇದಗಳನ್ನೂ ಹಿಂಸೆಯ ಮೂಲಕವೇ ಜನ ಪರಿಹರಿಸತೊಡಗಿದರೆ ಅಲ್ಲಿ ರಾಜ್ಯವ್ಯವಸ್ಥೆ ಎನ್ನುವುದು ಇದ್ದರೂ ಸತ್ತಂತೆ. ಸರ್ಕಾರ ಅಭಿವೃದ್ಧಿ ಕೆಲಸಗಳನ್ನೂ, ಕಲ್ಯಾಣ ಕಾರ್ಯಕ್ರಮಗಳನ್ನೂ ಮಾಡದಿದ್ದರೆ ಆಕಾಶ ಬಿದ್ದುಹೋಗುವುದಿಲ್ಲ. ಆದರೆ ಅಪರಾಧದ ವಿಚಾರಣೆ, ನ್ಯಾಯ-ಅನ್ಯಾಯದ ವಿಚಾರಣೆ ಮತ್ತು ಶಿಕ್ಷೆ ನೀಡುವ ಕೆಲಸವನ್ನು  ಖಾಸಗಿ ವ್ಯಕ್ತಿಗಳೋ, ಶಕ್ತಿಗಳೋ ಮಾಡಲು ತೊಡಗಿದರೆ ಅದು ಇಡೀ ಆಡಳಿತ ವ್ಯವಸ್ಥೆಯನ್ನು ಅಣಕಿಸಿದಂತೆ, ಅವಮಾನಿಸಿದಂತೆ ಮತ್ತು ಅದರ ಸಾರ್ವಭೌಮಾಧಿಕಾರವನ್ನು ಬೀದಿ ಬೀದಿಗಳಲ್ಲಿ ಪ್ರಶ್ನಿಸಿದಂತೆ. ಇಂತಹ ಬೆಳವಣಿಗೆಗಳು ಸರ್ಕಾರದಲ್ಲಿದ್ದವರನ್ನು ತಟ್ಟಬೇಕಾದ ರೀತಿಯಲ್ಲಿ ತಟ್ಟುವುದಿಲ್ಲ, ಮುಟ್ಟಬೇಕಾದ ರೀತಿಯಲ್ಲಿ ಮುಟ್ಟುವುದಿಲ್ಲ ಎಂದಾದರೆ ಮುಂದೆ ಅಪಾಯ ಕಾದಿದೆ. ಸ್ವಾತಂತ್ಯ ಅರ್ಥ ಕಳೆದುಕೊಳ್ಳಲಿದೆ.

ಇಷ್ಟು ಹೇಳಿದಾಕ್ಷಣ ಇದು ಇತ್ತೀಚೆಗೆ ಹೆಚ್ಚುತ್ತಿರುವ ಗೋರಕ್ಷಕರ ಅತಿರೇಕಗಳ ವಿಷಯ ಎಂದು ಅನ್ನಿಸಬಹುದು. ಅಲ್ಲ. ಇವೆಲ್ಲ ಹೋದ ನಾಲ್ಕೈದು ವರ್ಷಗಳಿಂದಲೂ ಜೋರಾಗಿ ನಡೆಯುತ್ತಿವೆ. ಗೋರಕ್ಷಕರ ಬಗ್ಗೆ ನ್ಯಾಯವಾಗಿ ಹೇಳಬೇಕು ಎಂದರೆ ಬೀದಿ ನ್ಯಾಯ ನಿರ್ಣಯದ ಸಂಸ್ಕೃತಿಯನ್ನು ಅವರು ಹುಟ್ಟು ಹಾಕಲಿಲ್ಲ. ಯಾವತ್ತೋ ಯಾವ ಎಗ್ಗೂ ಇಲ್ಲದೆ ಪ್ರವರ್ಧಮಾನಕ್ಕೆ ಬಂದಿರುವ ಅನಾಗರಿಕ ವಿಧಾನವೊಂದನ್ನು ಅವರು ತಮಗೆ ಸರಿ ಕಂಡದ್ದನ್ನು ಹೇರಲು ಬಳಸುತ್ತಿದ್ದಾರೆ ಅಷ್ಟೆ. ಅಂದರೆ ಗೋರಕ್ಷಕರೆಲ್ಲ ದೊಡ್ಡ ಸಂಖ್ಯೆಯಲ್ಲಿ ಬೀದಿಗಿಳಿಯುವ ಮುನ್ನವೇ ಇಂಥದ್ದೆಲ್ಲಾ ಬೇರೆ ಬೇರೆ ಕಡೆ ಬೇರೆ ಬೇರೆ ಪ್ರಮಾಣದಲ್ಲಿ ಪದೇ ಪದೇ ನಡೆಯುತ್ತಿತ್ತು. ಸಣ್ಣ ಪುಟ್ಟ ಕಳ್ಳತನದಲ್ಲಿ ಸಿಕ್ಕಿಹಾಕಿಕೊಂಡವರನ್ನು,   ಅನುಮಾನಾಸ್ಪದವಾಗಿ ಕಂಡವರನ್ನು, ವಿಭಿನ್ನ ಮತಗಳಿಗೆ ಸೇರಿದ ಹೆಣ್ಣು-ಗಂಡು ಜೋಡಿಯನ್ನು ಹಿಡಿದು ಬಡಿಯುವ ಪ್ರವೃತ್ತಿ ಆರಂಭದಲ್ಲಿ ಕಾಣಿಸಿಕೊಂಡಾಗ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ.

ಬದಲಾಗಿ ಟೆಲಿವಿಷನ್ ಚಾನೆಲ್‌ಗಳು ಇದಕ್ಕೊಂದು ಫ್ಯಾಷನ್ ರೂಪ ನೀಡಿದವು. ಇದೇನೋ ಮನರಂಜನೆ ಎಂಬಂತೆ ಇಂತಹ ದೃಶ್ಯಗಳನ್ನು ತೀರಾ ಕೆಳಮಟ್ಟದ ವಿವರಣೆಯೊಂದಿಗೆ ಪ್ರೇಕ್ಷಕರಿಗೆ ಉಣಬಡಿಸಿದವು. ಈ ಘಟನೆಗಳ ವಿವರಣೆಗೆಂದೇ  ಹೊಸ ಪದ ಪುಂಜ ಸೃಷ್ಟಿಯಾಗಿ ಕನ್ನಡ ಸಾಹಿತ್ಯವೂ ಶ್ರೀಮಂತವಾಯಿತು. ಇವುಗಳಲ್ಲಿ ಕೆಲವು ಪದಗಳನ್ನು ಮಡಿವಂತ ಪತ್ರಿಕೆಗಳು ಯಥೇಚ್ಛವಾಗಿ ಬಳಸಲಾರಂಭಿಸಿದವು. ಇಂತಹ ಕಾರ್ಯಕ್ರಮಗಳನ್ನು ಸೆರೆ ಹಿಡಿಯುವವರಿಗಾಗಲೀ, ಅವುಗಳನ್ನು ವಿವರಿಸುವವರಿಗಾಗಲೀ, ಅವುಗಳನ್ನು ನೋಡಿ ಆನಂದಿಸಿದವರಿಗಾಗಲೀ ತಾವೆಂತಹ ಅನಿಷ್ಟ ಮತ್ತು ಸಂವಿಧಾನ ಬಾಹಿರ ಪ್ರವೃತ್ತಿಯನ್ನು ಪ್ರೋತ್ಸಾಹಿಸುತ್ತಿದ್ದೇವೆ ಎನ್ನುವ ಒಂದು ಸಣ್ಣ ಅಳುಕೂ ಬಾರದೆ ಹೋದದ್ದು ಹೇಗೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಸಮಾಜಶಾಸ್ತ್ರೀಯ ಅಧ್ಯಯನವೇ ಬೇಕಾದೀತು.

ಹೀಗೆ ಬೀದಿ ನ್ಯಾಯ ನಿರ್ಣಾಯಕರು ಮತ್ತು ಪ್ರಜಾತಂತ್ರದ ನಾಲ್ಕನೇ ಅಂಗ ಒಟ್ಟು ಸೇರಿ  ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದರೆ ಅದನ್ನು ಶಾಸನಸಭೆಯಲ್ಲಿ ಕುಳಿತು ಕಾನೂನು ಮಾಡುವವರು, ಸರ್ಕಾರದಲ್ಲಿ ಕುಳಿತು ಕಾನೂನು ಜಾರಿಗೊಳಿಸುವವರು ಮತ್ತು ನ್ಯಾಯಾಲಯಗಳಲ್ಲಿ ಕುಳಿತು ಕಾನೂನುಬದ್ಧ ಆಡಳಿತವನ್ನು (rule of law)  ಎತ್ತಿ ಹಿಡಿಯಬೇಕಾದವರು ನಾಟಕ ನೋಡುವಂತೆ ನೋಡಿ ತಮ್ಮ ಪಾಡಿಗೆ ತಾವಿದ್ದುಬಿಟ್ಟರು. ಈಗ ದೇಶದ ಸಂವಿಧಾನ, ಕಾನೂನು, ಕೋರ್ಟು, ನೀತಿ, ನಿಯಮ ಎಲ್ಲವನ್ನೂ ಅಣಕಿಸುವಂತೆ ದೇಶದ ಬೀದಿ ಬೀದಿಗಳಲ್ಲಿ ಜನ ತಮಗಿಷ್ಟ ಬಂದ ರೀತಿ ನ್ಯಾಯಾನ್ಯಾಯ ತೀರ್ಮಾನ ಮಾಡಿ ಶಿಕ್ಷೆ ವಿಧಿಸುತ್ತಿದ್ದಾರೆ. ಇದೆಲ್ಲ ಎಲ್ಲಿ ಹೋಗಿ ತಲುಪಬಹುದೆಂದು ಊಹಿಸಿದರೆ ಭಯವಾಗುತ್ತದೆ.

ಇಷ್ಟಾದರೂ  ಸರ್ಕಾರಿ ವ್ಯವಸ್ಥೆಯ ಮೌನ ದಂಗುಬಡಿಸುತ್ತದೆ. ಎಲ್ಲರಿಗೂ ಪ್ರಧಾನಿಯ ಮೌನ ಮುಖ್ಯವಾಯಿತೇ ಹೊರತು ಇಡೀ ವ್ಯವಸ್ಥೆಯೇ ಇದರ ವಿಚಾರದಲ್ಲಿ ಬೇರೆಯೇ ರೀತಿಯಲ್ಲಿ ಮೌನವಾಗಿರುವುದು ಕಾಣಿಸಲಿಲ್ಲ. ಯಾರಿಗೂ ಇಂತಹ ಘಟನೆಗಳೆಲ್ಲ  ಕಾನೂನು ವ್ಯವಸ್ಥೆಯ ಮತ್ತು ಸಂವಿಧಾನ ಬದ್ಧ ಆಡಳಿತವನ್ನು  ಬುಡ ಅಲುಗಾಡಿಸಬಲ್ಲ ಬೆಳವಣಿಗೆಯ ಮೊಳಕೆಗಳಾಗಿ ತೋರಲಿಲ್ಲ. ಗೋರಕ್ಷಕರು ಬೀದಿಗಿಳಿದ ನಂತರ ಇದನ್ನು ಕೆಲವರು ಅಲ್ಪಸಂಖ್ಯಾತರ ಮೇಲಿನ ದಾಳಿ ಎನ್ನುವ ಅರ್ಥದಲ್ಲಿ ಖಂಡಿಸಿದರು. ಇನ್ನು ಕೆಲವರಿಗೆ ಇದು ದಲಿತರ ಮೇಲಿನ ದಾಳಿಯಾಗಿ ಅಸಹನೀಯವಾಗತೊಡಗಿತು. ಇದು ಮೂಲಭೂತವಾಗಿ ಮನುಷ್ಯ ಮನುಷ್ಯನ ಮೇಲೆ ನಡೆಸುವ ದಾಳಿ- ಇದು ಯಾವ ಕಾರಣಕ್ಕೆ ನಡೆದರೂ ಇದನ್ನು ನಾಗರಿಕ ಸಮಾಜ ಸಹಿಸಬಾರದು ಎಂದು ಯಾರಿಗೂ ಅನ್ನಿಸಲಿಲ್ಲ.

ಗೋರಕ್ಷಣೆಯ ವಿಚಾರದಲ್ಲಿ ಹೀಗೆಲ್ಲ ಮಾಡುವುದು ಸರಿಯೇ ಎಂದು ಕೆಲವರು ಚರ್ಚೆ ಆರಂಭಿಸಿದರು. ಗೋರಕ್ಷಣೆಯಲ್ಲ, ಮನುಷ್ಯನ ರಕ್ಷಣೆಯ ಹೆಸರಿನಲ್ಲೂ ಈ ರೀತಿ ಹಿಂಸೆಗಿಳಿಯುವಂತಿಲ್ಲ ಎಂದು ಯಾರೂ ಹೇಳಲಿಲ್ಲ. ಮೊನ್ನೆ ಪ್ರಧಾನ ಮಂತ್ರಿ ನೀಡಿದ ಪ್ರತಿಕ್ರಿಯೆ ನೋಡಿ. ಗೋರಕ್ಷಕರ ಪೈಕಿ ಬಹುಮಂದಿ ನಕಲಿಗಳು ಎಂದು ಅವರು ಹೇಳಿದರು. ಅಂದರೆ ಅಸಲಿ ಗೋರಕ್ಷಕರಾದರೆ ಹೀಗೆಲ್ಲಾ ಮಾಡಬಹುದೆಂದೇ?  ಕ್ರೂರವಾಗಿ ಶಿಕ್ಷೆ ಅನುಭವಿಸಿದವರು ಯಾವ ಕಾನೂನನ್ನೂ ಉಲ್ಲಂಘಿಸಿಲ್ಲ ಎನ್ನುವ ಕಾರಣಕ್ಕೆ ಇನ್ನು ಕೆಲವರು ಗೋರಕ್ಷರರ ಅತಿರೇಕಗಳನ್ನು ಖಂಡಿಸಿದರು. ಅಂದರೆ ಕಾನೂನು ಉಲ್ಲಂಘಿಸಿದವರನ್ನು ಯಾರು ಹೇಗೆ ಬೇಕಾದರೂ ಹಿಂಸಿಸಬಹುದೆಂದೇ? ಹೀಗೆಲ್ಲಾ ಪ್ರಶ್ನೆಗಳು ಬರುತ್ತಿರುವುದನ್ನು ನೋಡಿದರೆ ಘಟನೆಗಳನ್ನು ಖಂಡಿಸುವವರು ಕೂಡಾ ಒಟ್ಟು ಘಟನೆಗಳ ಹಿಂದಿನ ಅಪಾಯಕಾರಿ ಪ್ರವೃತ್ತಿಯನ್ನು ಪ್ರೋತ್ಸಾಹಿಸುತ್ತಿರುವ ಹಾಗಿದೆ.

ಇಂತಹ ಒಂದೊಂದು ಘಟನೆಯೂ ಸರ್ಕಾರ ಮತ್ತು ನ್ಯಾಯಾಂಗವನ್ನು ಕೆಲ ಸಂಘಟನೆಗಳು ಹೇಗೆ ಕಾಲ ಕಸದಂತೆ ಕಾಣುತ್ತವೆ ಎನ್ನುವುದಕ್ಕೆ ಸಾಕ್ಷಿ. ‘ನಿಮ್ಮ ಮೇಲೆ ನಮಗೆ ನಂಬಿಕೆ ಇಲ್ಲ ಅಥವಾ ನೀವೇನು ಮಹಾ’ ಎಂದು ಬೀದಿಗಳಲ್ಲಿ ನ್ಯಾಯ ನಿರ್ಣಯಿಸುವ ಮಂದಿ ಸರ್ಕಾರಕ್ಕೆ ಮತ್ತು ನ್ಯಾಯಾಂಗಕ್ಕೆ ಸವಾಲು ಹಾಕುತ್ತಿದ್ದಾರೆ. ಒಂದು ಪೊಲೀಸ್ ಸ್ಟೇಷನ್‌ನ ಪರಿಧಿಯೊಳಗೆ ಇಂತಹ ಘಟನೆ ಸಂಭವಿಸಿದಾಗ ಅಲ್ಲಿನ ಪೊಲೀಸ್ ಮಂದಿ ಇದು ತಮ್ಮ ಮುಖದ ಮೇಲೆ ಬಿದ್ದ ಉಗುಳು ಎನ್ನುವ ರೀತಿಯಲ್ಲಿ ಕಾಣಬೇಕು. ಅಷ್ಟು ಸಂವೇದನೆ ಇತ್ಯಾದಿ ಇದ್ದವರು ಆ ಇಲಾಖೆಗೆ ಬರುವುದೇ ಇಲ್ಲ. ಆದಕಾರಣವೇ ಅವರ ಮೇಲೆ ಒಂದು ಚುನಾಯಿತ ಸರ್ಕಾರ, ಒಂದು ನ್ಯಾಯಾಂಗ ವ್ಯವಸ್ಥೆ ಇತ್ಯಾದಿಗಳೆಲ್ಲ ಇರುವುದು. ಸರ್ಕಾರದಲ್ಲಿರುವವರಿಗೆ ಇ೦ತಹ ಬೆಳವಣಿಗೆಗಳ ಗಂಭೀರತೆ ಸುಲಭದಲ್ಲಿ ಅರ್ಥವಾಗುವುದಿಲ್ಲ ಎಂದೇ ಭಾವಿಸೋಣ. ಆದರೆ ನ್ಯಾಯಾಂಗಕ್ಕೇನಾಗಿದೆ?

ಸರ್ಕಾರದ ಪರಿಧಿಯೊಳಗೆ ಲಂಗುಲಗಾಮಿಲ್ಲದೆ ಇತ್ತೀಚೆಗಿನವರೆಗೆ ಮೂಗು ತೂರಿಸುತ್ತಿದ್ದ ನ್ಯಾಯಾಂಗ ಈ ವಿಚಾರದಲ್ಲಿ ಯಾಕೆ ಉಷ್ಟ್ರ ಪಕ್ಷಿಯಂತೆ ಮರಳಲ್ಲಿ ತಲೆ ಹೂತು ಕುಳಿತಿರುವುದು ಎಂದು ಅರ್ಥವಾಗಲಿಲ್ಲ. ಪ್ರತಿಯೊಂದಕ್ಕೂ ಆತಂಕ ವ್ಯಕ್ತಪಡಿಸುವ ನಾಯಪೀಠಗಳಿಗೆ ಇಂತಹ ಘಟನೆಗಳು ಮಾಮೂಲಿ ಅಂತ ಅನ್ನಿಸಿದ್ದೇಕೆ? ಈ ಬೀದಿ ನ್ಯಾಯ ನಿರ್ಣಯ ಒಂಥರಾ ಸರ್ಕಾರೇತರ ಗುಂಪುಗಳು ಹೇರುವ ಸ್ಥಳೀಯ ಮಟ್ಟದ ತುರ್ತು ಪರಿಸ್ಥಿತಿಯ ಹಾಗೆ. ಯಾಕೆಂದರೆ ಇಂತಹ ಪ್ರಕರಣಗಳಲ್ಲಿ ಕಾನೂನು, ಹಕ್ಕುಗಳು, ಸಂವಿಧಾನ ಇತ್ಯಾದಿಗಳೆಲ್ಲ ಕಾಲುಮುರಿದು ಬೀಳುತ್ತವೆ.

ದೇಶದ ಮೇಲೆ ಹೇರಿದ ತುರ್ತುಪರಿಸ್ಥಿತಿಯನ್ನು ಆ ಪರಿ ಖಂಡಿಸಿದ್ದವರಿಗೆಲ್ಲ ಈ ಸೂಕ್ಷ್ಮ ತುರ್ತುಪರಿಸ್ಥಿತಿ (micro-scale emergencies) ಹೇಗೆ ಸಹ್ಯವಾಗುತ್ತವೆ? ತುರ್ತು ಪರಿಸ್ಥಿತಿ ಕಾಲದ ಕುಖ್ಯಾತ ಎಡಿಎಂ ಜಬಲ್ಪುರ ಪ್ರಕರಣ ಜ್ಞಾಪಿಸಿಕೊಳ್ಳಿ. ಇದರ ಮೇಲೆ ಸುಪ್ರೀಂ ಕೋರ್ಟ್‌ನಲ್ಲಿ  ವಾದ ವಿವಾದ ನಡೆಯುತ್ತಿದ್ದಾಗ ಸರ್ಕಾರಕ್ಕೆ ತನ್ನನ್ನು ಮಾರಿಕೊಂಡಿರದ ಜಸ್ಟಿಸ್ ಖನ್ನಾ ಅವರು ಅಟಾರ್ನಿ ಜನರಲ್ ನಿರೇನ್ ಶಾ ಅವರನ್ನು ಒಂದು ಪ್ರಶ್ನೆ ಕೇಳುತ್ತಾರೆ: ‘ಅಂದರೆ ಈ ಪರಿಸ್ಥಿತಿಯಲ್ಲಿ ಸರ್ಕಾರ ಕಾನೂನುಬಾಹಿರವಾಗಿ ಜನರ ಜೀವ ತೆಗೆದರೂ ನಾವು ಕೇಳುವಂತಿಲ್ಲವೇ?’ ಈ ಪ್ರಶ್ನೆಗೆ ಯಾವ ಅಳುಕೂ ಇಲ್ಲದೆ ನಿರೇನ್ ಶಾ  ಹೇಳುತ್ತಾರೆ: ‘ಹೌದು ಮೈ ಲಾರ್ಡ್. ನೀವುಗಳು ಅದನ್ನೂ ಕೇಳುವಂತಿಲ್ಲ’.  ಜಸ್ಟಿಸ್ ಖನ್ನಾ ಅದನ್ನು ಒಪ್ಪುವುದಿಲ್ಲ.

ಆದರೆ ನ್ಯಾಯ ಪೀಠದಲ್ಲಿದ್ದ ಉಳಿದವರು ಅದನ್ನು ಒಪ್ಪುತ್ತಾರೆ. ಅಂದರೆ ಎಂತಹ ಪರಿಸ್ಥಿತಿಯಲ್ಲೂ ಕಾನೂನು ಕಾಲು ಮುರಿದು ಬೀಳಬಾರದು ಎನ್ನುವ ನಿಲುವನ್ನು ಧೈರ್ಯವಾಗಿ ತಳೆಯುವ ಒಬ್ಬ ನ್ಯಾಯಾಧೀಶ ತುರ್ತುಪರಿಸ್ಥಿಯ ಕಾಲದಲ್ಲೂ ಸಿಗುತ್ತಾರೆ. ಆದರೆ ಈಗ ಇಡೀ ನ್ಯಾಯಾಂಗವೇ ಬಾಯಿಮುಚ್ಚಿ ಕುಳಿತಿದೆ. ಇಷ್ಟೊಂದು ಜನ ಪ್ರವೃತ್ತ, ನಿವೃತ್ತ ನ್ಯಾಯಾಂಗದ ಪ್ರಭೃತಿಗಳ ಮಧ್ಯೆ ಒಬ್ಬನೇ ಒಬ್ಬ ಬೀದಿಯಲ್ಲಿ ನಡೆಯುವ ನ್ಯಾಯ ನಿರ್ಣಯವು ಸರ್ಕಾರ ಮತ್ತು ನ್ಯಾಯಾಂಗದ ಪರಮಾಧಿಕಾರದ ಮೇಲೆ ನಡೆಯುವ ನೇರ ದಾಳಿ ಅಂತ ಹೇಳಲು ಮುಂದೆ ಬರುತ್ತಿಲ್ಲ ಎನ್ನುವುದು ಬೇಸರ ಮತ್ತು ಆತಂಕದ ವಿಚಾರ. ಎಲ್ಲರೂ ಈ ಸರ್ಕಾರ ತುರ್ತುಪರಿಸ್ಥಿತಿಯನ್ನು ಪರೋಕ್ಷವಾಗಿ ಹೇರುತ್ತಿದೆ ಎನ್ನುತ್ತಿದ್ದಾರೆ. ನಡೆಯುತ್ತಿರುವ ಘಟನಾವಳಿಗಳನ್ನೆಲ್ಲ ನೋಡುತ್ತಿದ್ದರೆ ನಾವೀಗ ಚಿಂತಿಸಬೇಕಿರುವುದು ಸರ್ಕಾರ ಹೇರಬಹುದಾದ ಪರೋಕ್ಷ ತುರ್ತು ಪರಿಸ್ಥಿತಿ ಕುರಿತಲ್ಲ, ಸರ್ಕಾರೇತರ ಶಕ್ತಿಗಳು ಬೀದಿ ಬೀದಿಗಳಲ್ಲಿ ಹೇರುತ್ತಿರುವ ಖಾಸಗಿ ತುರ್ತುಪರಿಸ್ಥಿಯನ್ನು.

ಫ್ರೆಡ್ರಿಕ್ ನೀಚ್ಸೆ ಎಂಬ ಪ್ರಖ್ಯಾತ ಜರ್ಮನ್ ತತ್ವಜ್ಞಾನಿ  ‘ದೇವರು ಸತ್ತ, ದೇವರನ್ನು ನಾವು ಕೊಂದಿದ್ದೇವೆ’ ಎಂದು ಬರೆದಿದ್ದ. ನೀಚ್ಸೆಯಂತಹ ಪ್ರಖರ ಮನಸ್ಥಿತಿಯ ಯಾರಾದರೂ ಭಾರತದಲ್ಲಿದ್ದಿದ್ದರೆ ಇಲ್ಲಿ ನಡೆಯುವ ಬೀದಿ ನ್ಯಾಯನಿರ್ಣಯ ನೋಡಿ ಸ್ವಾತಂತ್ರ್ಯೋತ್ಸವದ ಈ ದಿನ ‘ಸ೦ವಿಧಾನ ಸಾಯುತ್ತಿದೆ’  ‘ಆ ಸೂತಕದ ನಡುವೆ  ನಾವು ಸ್ವಾತಂತ್ರ್ಯ ಆಚರಿಸುತ್ತಿದ್ದೇವೆ’ ಎಂದು  ಭಾಷಣ ಮಾಡುತ್ತಿದ್ದ. ದೇಶರಕ್ಷಕರು ಆತನನ್ನು  ಹಿಡಿದು ಯಾವುದಾದರೂ ಪೊಲೀಸ್ ಸ್ಟೇಷನ್ ಪಕ್ಕದ  ಕಂಬಕ್ಕೆ ಕಟ್ಟಿ ಚರ್ಮ ಸುಲಿದು ಅದನ್ನು ವಿಡಿಯೊ ಮಾಡಿ  ಯೂ ಟ್ಯೂಬ್‌ಗೆ ಅಪ್‌ಲೋಡ್ ಮಾಡುತ್ತಿದ್ದರು. ರಜಾ ದಿನವಾದ ಕಾರಣ ಮನೆಯಲ್ಲೇ ಉಳಿದಿದ್ದ ಮುಖ್ಯಮಂತ್ರಿಗಳು, ಗೃಹ ಮಂತ್ರಿಗಳು, ಮುಖ್ಯ ಕಾರ್ಯದರ್ಶಿಗಳು, ಗೃಹ ಕಾರ್ಯದರ್ಶಿಗಳು, ನ್ಯಾಯಾಧೀಶರು ಮತ್ತು ಪ್ರಧಾನ ಮಂತ್ರಿಯ ಕಚೇರಿಯವರೆಲ್ಲಾ ಆ ವಿಡಿಯೊವನ್ನು ತಮ್ಮ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿ, ಯಾವುದಕ್ಕಾದರೂ ಇರಲಿ ಒಂದು ‘ಡೋಸಿಯರ್ ತಯಾರಿಸಿ’ ಎಂದು ಸಂಬಂಧಪಟ್ಟವರಿಗೆ ಇ–ಮೇಲ್ ಆದೇಶ ಕಳುಹಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT