ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಯಲ್ಲಿ...

Last Updated 15 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ದೇಶಭಕ್ತಿಯನ್ನು ಬೆಳೆಸುವ ಚಲನಚಿತ್ರಗಳ ತಯಾರಿಕೆ ಇಂದಿನ ತುರ್ತು ಅಗತ್ಯವಾಗಿದೆಯೇ? ಭಾರತೀಯ ಚಿತ್ರರಂಗದ ಶತಮಾನೋತ್ಸವ ಸಂದರ್ಭದಲ್ಲಿ ಇಂತಹ ಒಂದು ಚರ್ಚೆ ಅಗತ್ಯವಾಗಿದೆ. ‘ಭಾಗ್ ಮಿಲ್ಖಾ ಭಾಗ್’ ಚಿತ್ರದಲ್ಲಿ ಆಟೋಟ ಮತ್ತು ಸ್ವಾತಂತ್ರ್ಯ, ದೇಶ ಮತ್ತು ಭಾವುಕತೆ ಮಿಳಿತವಾಗಿ ಪ್ರೇಕ್ಷಕರಲ್ಲಿ ಭಾವೋದ್ವೇಗವನ್ನು ಹೆಚ್ಚಿಸುತ್ತದೆ. ಜನ ಅದನ್ನು ಸ್ವಾಗತಿಸಿದ್ದಾರೆ.

ಕನ್ನಡದ ಉದಾಹರಣೆಯನ್ನೇ ನೋಡುವುದಾದರೆ ‘ಸಂಗೊಳ್ಳಿ ರಾಯಣ್ಣ’ದ ಯಶಸ್ಸು ಬದಲಾಗುತ್ತಿರುವ ಪ್ರೇಕ್ಷಕನ ಮನಸ್ಥಿತಿಯನ್ನು ಹೇಳುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರ ಜೀವನಕಥೆ ಆಧರಿಸಿದ ಚಲನಚಿತ್ರಗಳು ತಯಾರಾಗುತ್ತಿವೆ. ಸಾಧನೆ ಮೆರೆವ ಕ್ರೀಡಾಪಟುಗಳ ಜೀವನಗಾಥೆಯತ್ತ ಸಿನಿಮಾದವರು ಈಗ ಕಣ್ಣು ಹಾಯಿಸುತ್ತಿದ್ದಾರೆ. ಮಿಲ್ಖಾ ಸಿಂಗ್ ಆಯಿತು. ಈಗ ಮೇರಿಕೋಮ್ ಚಿತ್ರ ತಯಾರಾಗುತ್ತಿದೆ. ಇಂತಹ ಚಿತ್ರಗಳು ಯುವಜನರನ್ನು ನಿಜಕ್ಕೂ ಆಕರ್ಷಿಸುತ್ತಿದೆಯೇ?

ಚಿತ್ರರಂಗ ಈಗ ಪರಿವರ್ತನೆಯ ಹಾದಿಯಲ್ಲಿದೆ. ಚಲನಚಿತ್ರದ ನಿರೂಪಣೆ, ಅದರ ವ್ಯಾಕರಣ ಎಲ್ಲವೂ ಬದಲಾಗಿರುವ ಸಂದರ್ಭ ಇದು. ಕಿರುತೆರೆಯಲ್ಲಿ ಮೂಡಿ ಬರುವ, ಯುವಜನರ ಆಶೋತ್ತರಗಳನ್ನು ಪೂರೈಸುವ ಸಮಯಾನುಕೂಲ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಆಯ್ಕೆಬದ್ಧರನ್ನಾಗಿ ಮಾಡಿದೆ. ಇದು ಚಿತ್ರರಂಗಕ್ಕೆ ಒಂದು ಸವಾಲು. ಹಿಂದಿ ಚಿತ್ರವಾಗಲಿ, ತಮಿಳು, ತೆಲುಗಾಗಲಿ, ಕನ್ನಡವೇ ಆಗಲಿ ತನ್ನ ಪ್ರೇಕ್ಷಕರನ್ನು ಮೊದಲು ಗುರುತಿಸಿಕೊಂಡು ಮುಂದೆ ಅಡಿಯಿಡಬೇಕಾದ ಕಾಲ ಬಂದೊದಗಿದೆ.

ಸೂತ್ರಬದ್ಧ ಸಿನಿಮಾ ಕಥೆಗಳಿಗೆ ಅಂಟಿಕೊಂಡು, ಅದದೇ ರೀಲುಗಳನ್ನು ಸುತ್ತುತ್ತಿರುವ ನಮ್ಮ ಸಿನಿಮಾ ಮಂದಿ ಸಾಮಾಜಿಕ ಜವಾಬ್ದಾರಿ ಮೆರೆಯಬೇಕು ಎಂದೇ ಎಲ್ಲರೂ ಆಶಿಸುತ್ತಾರೆ. ಲಾಂಗು, ಮಚ್ಚು, ಬಾಂಬುಗಳನ್ನು ಹಿಡಿದು ಹಿಂಸಾ ಪ್ರವೃತ್ತಿಯನ್ನು ಹೆಚ್ಚಿಸುವ, ಯುವಕರ ಮನಸ್ಸುಗಳನ್ನು ಕೆಟ್ಟ ಮಾರ್ಗಕ್ಕೆ ಪ್ರಚೋದಿಸುವ ಚಿತ್ರಸಾಲುಗಳ ನಡುವೆ ಕ್ರೀಡಾಪಟುಗಳನ್ನು ಕುರಿತ ಕತೆ, ಸ್ವಾತಂತ್ರ್ಯ ಹೋರಾಟಗಾರರ ಕತೆ ಆಪ್ಯಾಯಮಾನ. ಆದರೆ ನೈಜತೆಗೆ ಕಮರ್ಷಿಯಲ್ ಸ್ಪರ್ಶವನ್ನು ಕೊಡುವುದು, ಅತಿರೋಚಕತೆ ಸೃಷ್ಟಿಸುವ ಸಲುವಾಗಿ, ನಾಯಕನನ್ನು ವಿಜೃಂಭಿಸುವ ಸಲುವಾಗಿ ಇತಿಹಾಸವನ್ನು ತಿರುಚುವುದು ಸಾಂಸ್ಕೃತಿಕ ವಿಧ್ವಂಸ ಕೃತ್ಯವಾಗುತ್ತದೆ.

ಇತ್ತೀಚಿನ ಒಂದು ಘಟನೆಯನ್ನು ಗಮನಿಸಿ. ‘ವೀರ ಬಸವಣ್ಣ’ ಚಿತ್ರದ ಪ್ರಚಾರದಲ್ಲಿ ಬಸವಣ್ಣ ಖಡ್ಗ ಹಿಡಿದು ನಿಂತ ವೀರಾವೇಶದ ಭಂಗಿ ಇದೆ. ತಪೋಮುದ್ರೆಯಲ್ಲಿರುವ ಶಿವನ ತೊಡೆಯ ಬಳಿ ಪಿಸ್ತೂಲೊಂದಿದೆ. ‘ಭಜರಂಗಿ’ ಚಿತ್ರದ ಪೋಸ್ಟರ್‌ಗಳನ್ನು ಗಮನಿಸಿ. ಲಾಂಗ್ ಹಿಡಿದ ನಾಯಕ ನಟ ರುದ್ರಾವತಾರದಲ್ಲಿ ಲಾಂಗ್ ಝಳಪಿಸಿ, ಬೀಸುತ್ತಿರುವ ಭಂಗಿ ಇದೆ, ‘ಕಡ್ಡಿ ಪುಡಿ’ ಚಿತ್ರದ ಪೋಸ್ಟರ್ ನೋಡಿ. ನಾಯಕ ನಟ ಲಾಂಗ್ ಹಿಡಿದು ನಿಂತಿದ್ದಾನೆ. ಮೈಯೆಲ್ಲಾ ರಕ್ತಸಿಕ್ತವಾಗಿದೆ. ‘ಸಿಲ್ಕ್’ ಪೋಸ್ಟರ್‌ಗಳಲ್ಲಿ ನಾಯಕಿಯ ‘ಆಟ’ ಸ್ವಲ್ಪ ವಿಪರೀತವೇ ಆಯಿತು.

ಲೂಸ್ ಹೆಸರಿನಲ್ಲಿ, ಮೆಂಟಲ್ ಹೆಸರಿನವರು ಏನೇನು ಗಿಮಿಕ್ ಮಾಡುತ್ತಿದ್ದಾರೆ ಎಲ್ಲರಿಗೂ ಗೊತ್ತು. ‘ಸೂಪರ್’ ಚಿತ್ರದ ಪೋಸ್ಟರ್ ಬಗ್ಗೆ ಹೈಕೋರ್ಟಿನ ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಅವರು ಮಾಡಿರುವ ಟೀಕೆ ಅರ್ಥವತ್ತಾಗಿದೆ. ‘ಸೂಪರ್ ಚಿತ್ರದ ಪೋಸ್ಟರ್‌ಗಳನ್ನು ನಾನು ನೋಡಿದ್ದೇನೆ.

ಚಿತ್ರದ ನಾಯಕ ಹರಿದ ಪ್ಯಾಂಟ್ ಧರಿಸಿಕೊಂಡು ಕುಳಿತಿರುತ್ತಾನೆ. ಅದರಲ್ಲಿ ಸಮಾಜಕ್ಕೆ ನೀಡುತ್ತಿರುವ ಸಂದೇಶ ಏನಿದೆ? ಹಳೆಯ ಚಿತ್ರಗಳಲ್ಲಿ ನೀಡುತ್ತಿದ್ದ ಸಂದೇಶ ಇಂದಿನ ಚಲನಚಿತ್ರಗಳಲ್ಲಿ ಇದೆಯೇ? ಚಲನಚಿತ್ರರಂಗದಲ್ಲಿ ಸಾಮಾನ್ಯಜ್ಞಾನದ ಕೊರತೆ ಇದೆ. ಒಳ್ಳೆಯ ಚಿತ್ರಗಳನ್ನು ನೀಡಬಲ್ಲ ನಟ, ನಿರ್ದೇಶಕರ ಕೊರತೆ ಚಿತ್ರರಂಗವನ್ನು ಕಾಡುತ್ತಿದೆ’ ಎಂದು ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದು ಕನ್ನಡ ಚಿತ್ರರಂಗದಲ್ಲಿನ ಸಮಸ್ಯೆ ಮಾತ್ರವಲ್ಲ. ಭಾರತದ ಎಲ್ಲ ಭಾಷಾ ಚಿತ್ರಗಳೂ ಇಂತಹ ಗಿಮಿಕ್ ಮೂಲಕವೇ ಅಸ್ತಿತ್ವದಲ್ಲಿ ಉಳಿಯಲು ಯತ್ನಿಸುತ್ತಿವೆ. ‘ಸೂಪರ್’ ಚಿತ್ರದಲ್ಲಿ ನಾಯಕ ಹರಿದ ಪ್ಯಾಂಟ್ ಶರಟು ಹಾಕಿರಬಹುದು. ತಲೆಗೂದಲನ್ನು, ಮುಳ್ಳುಹಂದಿಯ ರೀತಿಯಲ್ಲಿ ಬಾಚಿರಬಹುದು. ಚಿತ್ರವಿಚಿತ್ರ ವೇಷದಲ್ಲಿ ಕಾಣಿಸಿಕೊಳ್ಳಬಹುದು. ಇವೆಲ್ಲವನ್ನು ಅವರು ಯುವಜನತೆಯ, ಯುವ ಪ್ರೇಕ್ಷಕರ ಮನೋಭಿಲಾಷೆಗಾಗಿ ಮಾಡುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ.

ಹೈಕೋರ್ಟ್‌ ನ್ಯಾಯಮೂರ್ತಿ ರಾಮಮನೋಹರ ರೆಡ್ಡಿ ಅವರು ರಾಜ್ಯ ಪ್ರಶಸ್ತಿ ನೀಡುವಲ್ಲಿ, ಸಮಿತಿಯಿಂದ ನಡೆದಿರುವ ಅಚಾತುರ್ಯವನ್ನು ಕೂಡ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿನ ಪ್ರಶಸ್ತಿ ಪಟ್ಟಿಯ ನ್ಯಾಯಾನ್ಯಾಯಗಳ ಬಗ್ಗೆ ಸಿಬಿಐ ತನಿಖೆ ನಡೆಸಲು ಆದೇಶ ಹೊರಡಿಸಿದ್ದಿದ್ದರೆ ಸಾಂಸ್ಕೃತಿಕ ಲೋಕದ ಅತಿ ದೊಡ್ಡ ಹಗರಣ, ಭ್ರಷ್ಟಾಚಾರ, ರಾಜಕೀಯ ಹಸ್ತಕ್ಷೇಪ, ಸ್ವಜನಪಕ್ಷಪಾತ ಎಲ್ಲವೂ ಹೊರಬರುತ್ತಿದ್ದವು. ಅಂತಹ ಒಂದು ಸುನಾಮಿಯಿಂದ ಕನ್ನಡ ಚಿತ್ರರಂಗ ಸ್ವಲ್ಪದರಲ್ಲಿ ಪಾರಾಗಿದೆ.

ಆದರೆ ನ್ಯಾಯಮೂರ್ತಿಗಳು ಕನ್ನಡ ಚಿತ್ರರಂಗದಲ್ಲಿನ ಜ್ಞಾನಶೂನ್ಯತೆಯನ್ನು ಬಯಲಿಗೆಳೆದಿರುವುದು ಚಿತ್ರರಂಗದವರು ಗಂಭೀರವಾಗಿ ಪರಿಗಣಿಸಲು ಇದು ಸಕಾಲ. ಪೋಸ್ಟರ್‌ಗಳೇ ಇಷ್ಟು ಕೆಟ್ಟ ಸಂದೇಶ ರವಾನಿಸುತ್ತಿದ್ದರೆ, ಚಿತ್ರಕಥೆ ಇನ್ನೆಷ್ಟು ಸಂದೇಶವಾಹಕವಾಗಿರಲು ಸಾಧ್ಯ ಎನ್ನುವ ಅವರ ಪ್ರಶ್ನೆ, ಜನಸಾಮಾನ್ಯರ ಪ್ರಶ್ನೆ ಕೂಡ.

ಈ ಹಿಂದೆ ಇದೇ ನ್ಯಾಯಮೂರ್ತಿಗಳು, ‘ರಾಜಕುಮಾರ್, ವಿಷ್ಣುವರ್ಧನ್ ಅವರ ಕಾಲದಲ್ಲಿ ಬರುತ್ತಿದ್ದಂತಹ, ಉತ್ತಮ ಸಂದೇಶವಿರುವ ಚಲನಚಿತ್ರಗಳೇ ಬರುತ್ತಿಲ್ಲ’ ಎಂದು ಹೇಳಿರುವುದನ್ನು ಗಮನಿಸಬೇಕು. ಇದು ಚಿತ್ರರಂಗದವರ ಸಾಮಾಜಿಕ ಜವಾಬ್ದಾರಿಯನ್ನು ನೆನಪಿಸುತ್ತದೆ.

‘ಹಿಂದಿನ ಕಾಲದ ಚಿತ್ರಗಳೇ ಚೆನ್ನಾಗಿದ್ದವು. ಇಂದಿನ ಚಿತ್ರಗಳಲ್ಲಿ ಹುರುಳೇ ಇಲ್ಲ’ ಎಂದು ಹೇಳುವುದು ಆಯಾ ಕಾಲಮಾನದ ಆಡುಮಾತಾಗಿಯೇ ಉಳಿದುಕೊಂಡಿದೆ. ಮೂಕಿ ಚಿತ್ರಗಳನ್ನಾಗಲಿ, ಇಪ್ಪತ್ತು ವರ್ಷದ ಹಳೆಯ ಚಿತ್ರರಂಗವನ್ನಾಗಲಿ ನಾವು ಇಂದು ಆಸ್ವಾದಿಸಲು ಸಾಧ್ಯವಿಲ್ಲ. ಚಲನಚಿತ್ರ ಹೊಸ ಪೀಳಿಗೆಯ ಕೈಯಲ್ಲಿರುವುದರಿಂದ ಅದು ವೇಗವನ್ನು ಪಡೆದುಕೊಂಡಿದೆ. ಈ ವೇಗ ಏಕತಾನತೆಗೊಂಡಾಗ ಜನ ಹೊಸತನ್ನು ಬಯಸುತ್ತಾರೆ. ಅಂತಹ ಸಮಯದ ಹುಡುಕಾಟದಲ್ಲೇ  ಮಿಲ್ಖಾಸಿಂಗ್ ಅಂತಹವರ ಕತೆಗಳು ರೋಚಕ ರೂಪದಲ್ಲಿ ತೆರೆಗೆ ಬರುತ್ತವೆ. ಗರಂಹವಾ, ಉಪಕಾರ್, ಪೂರಬ್ ಔರ್ ಪಶ್ಚಿಮ್, ಲಗಾನ್ ಹೀಗೆ ಕಾಲಮಾನಕ್ಕೆ ತಕ್ಕಂತೆ ಒಂದೊಂದು ಚಿತ್ರಗಳು ಬಂದಿವೆ. ಬರುತ್ತಲೇ ಇವೆ.

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸಿನಿಮಾ ನಮಗೆ ಉತ್ತಮ ಅಸ್ತ್ರವಾಗಲೇ ಇಲ್ಲ. ಫಿಲಂಗಳ ರೇಷನಿಂಗ್‌ನಿಂದಾಗಿ ಚಿತ್ರರಂಗದ ಬೆಳವಣಿಗೆಯೇ ಕುಂಠಿತವಾಗಿದ್ದ ಸಮಯ ಅದು. ಬ್ರಿಟೀಷರ ವಿರುದ್ಧ ಚಲನಚಿತ್ರಗಳ ಪಾತ್ರಧಾರಿಗಳು ಆಡುತ್ತಿದ್ದ ಮಾತುಗಳು ಸೆನ್ಸಾರ್ ಸುಳಿಯಲ್ಲಿ ಸಿಕ್ಕಿಹಾಕಿಕೊಂಡು ಪರದಾಡುತ್ತಿದ್ದವು.

ಗಾಂಧೀಜಿ ಅವರನ್ನು ನೇರವಾಗಿ ಬೆಂಬಲಿಸುವಂತಹ ಕ್ರಾಂತಿಕಾರಿ ಚಿತ್ರಗಳು ಬರಲಿಲ್ಲ. ಚಿತ್ರರಂಗದವರು ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ನೇರವಾದ ಕಥಾಚಿತ್ರಗಳಿಗೆ ಆದ್ಯತೆ ನೀಡಿದರು. ವರದಕ್ಷಿಣೆ ಸಮಸ್ಯೆ, ಕುಡಿತದ ಕೆಟ್ಟ ಪರಿಣಾಮ, ಜಾತಿ, ಬಡರೈತ, ಭೂಮಾಲೀಕರ ದಬ್ಬಾಳಿಕೆ ಮೊದಲಾದ ಜ್ವಲಂತ ಸಮಸ್ಯೆಗಳನ್ನು ಬಿಂಬಿಸುವ ವಸ್ತುವಿನತ್ತ ಹೆಚ್ಚಿನ ಗಮನ ನೀಡಲಾಯಿತು.

ಗಾಂಧೀಜಿ, ನೆಹರೂ, ಸುಭಾಷ್‌ಚಂದ್ರ ಭೋಸ್ ಮೊದಲಾದ ನಾಯಕರಿಂದ ಹೆಚ್ಚು ಪ್ರೇರಣೆಗೊಂಡು ಅವರ ಹೆಸರುಗಳನ್ನು ತಮ್ಮ ಸಂಸ್ಥೆಗೆ ಇಡುವಷ್ಟರ ಮಟ್ಟಿಗೆ ರಾಷ್ಟ್ರಪ್ರೇಮವನ್ನು ಮೆರೆದ ಉದಾಹರಣೆಗಳಿವೆ. ಕನ್ನಡದ ಉದಾಹರಣೆಯನ್ನೇ ಗಮನಿಸುವುದಾದರೆ, ಶಂಕರ್‌ಸಿಂಗ್ ಅಂತಹ ಉತ್ಕಟ ರಾಷ್ಟ್ರ ಪ್ರೇಮವನ್ನು ಮೆರೆದರು. ಅರಸೀಕೆರೆಯಲ್ಲಿ ಅವರು ನಡೆಸುತ್ತಿದ್ದ ಟೂರಿಂಗ್ ಟಾಕೀಸ್‌ಗಳಿಗೆ ಮಹಾತ್ಮ ಟೂರಿಂಗ್ ಟಾಕೀಸ್ ಹಾಗೂ ಜವಾಹರ್ ಟೂರಿಂಗ್ ಟಾಕೀಸ್ ಎಂದು ಹೆಸರಿಟ್ಟಿದ್ದರು. 1947ರ ಆಗಸ್ಟ್ 15 ರಂದು ದೇಶಕ್ಕೆ ಸ್ವಾತಂತ್ರ್ಯ ಬಂದ ನೆನಪಿಗಾಗಿ ‘ಮಹಾತ್ಮ ಪಿಕ್ಚರ್ಸ್’ ಚಿತ್ರ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದರು.

ಸ್ವಾತಂತ್ರ್ಯ ಬಂದ ಸಮಯದಲ್ಲಿ ಹಿಂದೂ - ಮುಸ್ಲಿಂ ಹತ್ಯಾಕಾಂಡ ನಡೆಯುತ್ತಿದ್ದ ದಾರುಣ ಸಮಯ. ಈ ಸಮಯದಲ್ಲಿ ಆರ್. ನಾಗೇಂದ್ರರಾವ್ ಅವರು, ಹಿಂದೂ - ಮುಸ್ಲಿಂ ಏಕತೆಗೆ ನೆರವಾಗಬಲ್ಲ ‘ಮಹಾತ್ಮ ಕಬೀರ್’ ಚಲನಚಿತ್ರವನ್ನು ತಯಾರಿಸಿದರು. ಪಶ್ಚಿಮ ಬಂಗಾಳದಲ್ಲೂ ರವೀಂದ್ರನಾಥ ಟ್ಯಾಗೋರ್ ಅವರ ದೇಶಭಕ್ತಿ ಗೀತೆಗಳನ್ನು ಚಲನಚಿತ್ರಗಳಲ್ಲಿ ಅಳವಡಿಸಲಾಗುತ್ತಿತ್ತು. ವಂದೇ ಮಾತರಂ, ಕೂಡ ಆಗ ದೇಶದ ಬಗ್ಗೆ ಅಭಿಮಾನ ಉಕ್ಕಿಸುವ ಗೀತೆಯಾಗಿ ಬಳಕೆಯಾಗುತ್ತಿತ್ತು.

ಆದರೆ ಇತ್ತೀಚಿನ ವರ್ಷಗಳಲ್ಲಿ ಸ್ವಾತಂತ್ರ್ಯದ ಅರ್ಥ ಕುಗ್ಗುತ್ತಿದೆ. ಚಲನಚಿತ್ರಗಳು ಭಯೋತ್ಪಾದಕತೆಯನ್ನು ವಿಜೃಂಭಿಸುತ್ತಿವೆ. ಉಗ್ರಗಾಮಿಗಳೇ ಚಿತ್ರದ ಕತೆಯಲ್ಲಿ ವಿಲನ್‌ಗಳಾಗಿ ಕಾಣಿಸಿಕೊಳ್ಳುತ್ತಾರೆ. ಭಯೋತ್ಪಾದಕರಿಂದ ದೇಶವನ್ನು ಉಳಿಸಬೇಕು, ಭಯೋತ್ಪಾದಕರು ಹಾಕಿರುವ ಭಾರೀ ಸ್ಕೆಚ್ಚನ್ನು ವಿನಾಶಗೊಳಿಸಬೇಕು ಎನ್ನುವ ವಸ್ತುಗಳನ್ನೇ ದೇಶಪ್ರೇಮದ ಹೆಸರಿನಲ್ಲಿ ನಿರ್ಮಿಸಲಾಗುತ್ತಿದೆ.

ಬಾಂಬುಗಳ ಮೂಲಕ ವಿನಾಶ ಮಾಡುವುದು, ಆತ್ಮಾಹುತಿದಳ, ಮಾನವ ಬಾಂಬ್‌ಗಳು ಚಲನಚಿತ್ರಗಳಲ್ಲಿ ಹೇರಳವಾಗಿ ಬಳಕೆಯಾಗುತ್ತಿದ್ದು, ಅತಿರಂಜನೆಯ ರೂಪ ಪಡೆಯುತ್ತಿದೆ. ಭೂಗತ ದೊರೆಗಳ ಕತೆಗಳು ರಂಜನೀಯವಾಗಿ ರೂಪುಗೊಳ್ಳುತ್ತಿವೆ. ಸಮಾಜಕ್ಕೆ ಇಂತಹ ಚಿತ್ರಗಳು ಕೊಡುವ ಸಂದೇಶವೇನು? ನಮ್ಮ ಹೈಕೋರ್ಟಿನ ನ್ಯಾಯಮೂರ್ತಿಗಳು ಸರಿಯಾದ ಸಮಯದಲ್ಲಿ ಸರಿಯಾದ ಮಾತನ್ನೇ ಹೇಳಿದ್ದಾರೆ.

ಸ್ವಲ್ಪ ಅತಿರಂಜಕತೆ ಇದ್ದರೂ ಮಿಲ್ಖಾ ಸಿಂಗ್‌ನ ಕತೆ, ಲಾಂಗು ಮಚ್ಚುಗಳ ಕತೆಗಿಂತ, ದಾದಾಗಿರಿ, ದಬಾಂಗ್, ಪೊಲೀಸ್‌ಗಿರಿ ಕತೆಗಿಂತ ಮೇಲು. ಸಿನಿಮಾ ಶತಮಾನೋತ್ಸವ ಸಮಯದಲ್ಲಾದರೂ ಯುವ ಪ್ರೇಕ್ಷಕರಿಗೆ ಪ್ರೇರಣೆಯಾಗುವಂತಹ ಸ್ವಾತಂತ್ರ್ಯವೀರರ ಕತೆಗಳು ನೈಜವಾಗಿ ತೆರೆಯ ಮೇಲೆ ವಿಜೃಂಭಿಸಲಿ ಎಂದು ಹಾರೈಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT