ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗರಣ ತನಿಖೆ; ಸಿಬಿಐ ಸ್ವತಂತ್ರ ನಡಿಗೆ ಎಂದು?

Last Updated 14 ಮೇ 2013, 19:59 IST
ಅಕ್ಷರ ಗಾತ್ರ

ನಂಬಿದರೆ ನಂಬಿ, ಬಿಟ್ಟರೆ ಬಿಡಿ... ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಾದ ಸಿಬಿಐ ಏಕೆ ಸ್ವತಂತ್ರ ಘಟಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವೇ ಈಚೆಗೆ ಕೇಳಿದೆ. ಪ್ರಕರಣ ಒಂದರ ಬಗ್ಗೆ ವಿಚಾರಣೆ ನಡೆಯುತ್ತಿದ್ದಾಗ ನ್ಯಾಯಮೂರ್ತಿಯೊಬ್ಬರು `ಸಿಬಿಐ ಸ್ವತಂತ್ರ ಸಂಸ್ಥೆ. ಅದು ಯಾರ ಮರ್ಜಿಗೂ ಕಾಯಬೇಕಿಲ್ಲ. ದಕ್ಷತೆಯಿಂದ, ನಿಷ್ಪಕ್ಷಪಾತದಿಂದ ಕಾರ್ಯನಿರ್ವಹಿಸಲು ಪೂರ್ಣ ಅವಕಾಶವಿದೆ' ಎಂದಿದ್ದರು. ಆದರೆ ಸಿಬಿಐ ಮಾತ್ರ ಅಂತಹದ್ದೊಂದು ಅವಕಾಶ ತನ್ನೆದುರಿಗಿದೆ ಎಂಬುದನ್ನೇ ಮರೆತಂತೆ ನಡೆದುಕೊಂಡಿದೆ.

ಮಾಜಿ ಕಾನೂನು ಸಚಿವ ಅಶ್ವನಿ ಕುಮಾರ್ ಮೇಲೆ ನಿಖರ ದಾಖಲೆಗಳಿರುವ ಪ್ರಕರಣ ಎದುರಿಗಿತ್ತು. ಕಲ್ಲಿದ್ದಲು ನಿಕ್ಷೇಪವಿರುವ ಪ್ರದೇಶಗಳ ಹಂಚಿಕೆಯ ವಿವಾದಕ್ಕೆ ಸಂಬಂಧಿಸಿದಂತೆ ಸಚಿವರು ವರದಿಯೊಂದನ್ನು ತಿದ್ದಿರುವುದು ಸ್ಪಷ್ಟವಾಗಿತ್ತು. ಸರ್ಕಾರದ ನೇರ ಹಸ್ತಕ್ಷೇಪವೂ ಎದ್ದು ಕಂಡಿತ್ತು. ಕಾನೂನು ಸಚಿವರ ಮೂಗಿನ ನೇರಕ್ಕೆ ಎಲ್ಲವೂ ತಯಾರಾಗಿತ್ತು.

ಸರ್ವೋಚ್ಚ ನ್ಯಾಯಾಲಯ ಈ ತನಿಖೆಗೆ ಸಂಬಂಧಪಟ್ಟಂತೆ ಸಿಬಿಐ ಯಾವುದೇ ಪ್ರಭಾವಕ್ಕೆ ಮಣಿಯದೆ ಸ್ವತಂತ್ರ ವರದಿ ಕೊಡಬಹುದೆಂದು ನಿರೀಕ್ಷಿಸಿತ್ತು. ಆದರೆ ಹಾಗಾಗಲಿಲ್ಲ. ಹಾಗೆ ಮಾಡಿದರೆ ಅದು ಸರ್ಕಾರದ ವಿರುದ್ಧ ನಡೆದುಕೊಂಡಂತಾಗುತ್ತದೆ ಎಂದು ಸಿಬಿಐ ನಿರ್ಧರಿಸಿದಂತಿತ್ತು. ಹೌದು, ನಿಜಕ್ಕೂ ಇದು ಸಿಬಿಐ ವೈಫಲ್ಯವಷ್ಟೇ ಅಲ್ಲ, ಸರ್ಕಾರದ್ದೂ. ಸಿಬಿಐ ತನ್ನ ಪರಿಮಿತಿಯೊಳಗೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಸರ್ಕಾರ ಅವಕಾಶ ನೀಡಬೇಕಿತ್ತು. ಇದು ಸಿಬಿಐ ಎಂಬ ದೇಶದ ಉನ್ನತ ಮಟ್ಟದ ತನಿಖಾ ಸಂಸ್ಥೆಗೆ ಸರ್ಕಾರ ನೀಡಿರುವ ಸ್ವಾತಂತ್ರ್ಯದ ಪರಿ !

ಸಿಬಿಐಗೆ ಸಂಪೂರ್ಣ ಸ್ವತಂತ್ರ ಸ್ಥಾನಮಾನ ನೀಡುವ ಬಗ್ಗೆ ಮಸೂದೆಯೊಂದು ಒಪ್ಪಿಗೆಗಾಗಿ ಲೋಕಸಭೆಯಲ್ಲಿ ಕೊಳೆಯುತ್ತಾ ಬಿದ್ದಿದೆ. ಅದು ಕಾಂಗ್ರೆಸ್ ಇರಬಹುದು ಅಥವಾ ಬಿಜೆಪಿ ಆಗಿರಬಹುದು, ಸಿಬಿಐ ಪ್ರಬಲಗೊಳ್ಳುವುದನ್ನು ಯಾವುದೇ ರಾಜಕೀಯ ಪಕ್ಷ ಇಷ್ಟಪಡುವುದಿಲ್ಲ. ಅದೇನೇ ಇರಲಿ, ಈಚೆಗೆ ಸಿಬಿಐ ತನಗೆ ಸಿಕ್ಕಿದ ಉತ್ತಮ ಅವಕಾಶದಲ್ಲಿಯೂ ಗಟ್ಟಿಯಾಗಿ ಸ್ವತಂತ್ರ ಧ್ವನಿ ಎತ್ತಲು ವಿಫಲಗೊಂಡಿತು.

ಭಾರತದ ರಾಜಕಾರಣದಲ್ಲಿ ಇವತ್ತಿಗೂ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಸುದ್ದಿಗಳೇ ಹೆಚ್ಚು ಗಮನ ಸೆಳೆಯುತ್ತಿರುವುದಂತೂ ವಾಸ್ತವ. ಪ್ರಸಕ್ತ ಕೇಂದ್ರ ಸರ್ಕಾರವಂತೂ ಹಗರಣಗಳಿಗೆ ಸಂಬಂಧಿಸಿದಂತೆ ದಾಖಲೆಯನ್ನೇ ನಿರ್ಮಿಸಿಬಿಟ್ಟಿದೆ. ಹತ್ತು ಹಲವು ಹಗರಣಗಳಿಗೆ ಸಂಬಂಧಿಸಿದಂತೆ ಸಿಬಿಐ ತನಿಖಾ ಸಿಬ್ಬಂದಿಗೆ ಹಿಂದೆಂದೂ ಯಾವುದೇ ಪ್ರಕರಣದಲ್ಲಿ ಈ ಮಟ್ಟಿಗಿನ ಸಾಕ್ಷ್ಯಾಧಾರಗಳು ಸಿಕ್ಕಿರಲಿಕ್ಕಿಲ್ಲ. ಆದರೆ ಸಿಬಿಐ ಅಂತಿಮದಲ್ಲಿ ಯಶಃ ಕಂಡಿದ್ದು ಅಷ್ಟರಲ್ಲೇ ಇದೇ ಬಿಡಿ. ಈ ತನಿಖಾ ಸಂಸ್ಥೆಯ ಅಧಿಕಾರದ ಮಿತಿಗಳೇ ಇದಕ್ಕೆ ಕಾರಣ ಎನ್ನಬಹುದೇನೊ. ವಿವಾದಕ್ಕೆ ಒಳಗಾದ ಕಾನೂನು ಸಚಿವರು ಈಚೆಗೆ ನೀಡಿದ ಸಮಜಾಯಿಷಿಯಂತೂ ಬಹಳ ದುರ್ಬಲವಾಗಿತ್ತು.

ಹಗರಣಗಳು ದೊಡ್ಡ ಮಟ್ಟದಲ್ಲಿ ಬಯಲುಗೊಂಡು, ದೇಶದಾದ್ಯಂತ ಚರ್ಚೆಗೆ ಗ್ರಾಸವಾದಾಗ ಉನ್ನತ ಸ್ಥಾನದಲ್ಲಿರುವ ಕೆಲವರ ತಲೆಗಳು ಉರುಳುವುದು ಸಾಮಾನ್ಯವಾಗಿ ಬಿಟ್ಟಿದೆ. ಜತೆಗೆ ತನಿಖೆಗೆ ಸಿಬಿಐಗೂ ಒಪ್ಪಿಸಲಾಗುತ್ತದೆ. ಆದರೆ ಸರ್ಕಾರದ ಒಂದು ಭಾಗವೇ ಆಗಿರುವ ಸಿಬಿಐನಿಂದ ಹೆಚ್ಚಿನದೇನನ್ನೂ ನಿರೀಕ್ಷಿಸುವಂತಿಲ್ಲ ಎಂಬ ಮಾತಿನಲ್ಲಿ ಹುರಳಿಲ್ಲದಿಲ್ಲ. ಸಿಬಿಐನ ಹಲವು ಮಂದಿ ನಿವೃತ್ತ ನಿರ್ದೇಶಕರು ಕೃತಿಗಳನ್ನು ರಚಿಸಿದ್ದಾರೆ, ಲೇಖನಗಳನ್ನು ಬರೆದಿದ್ದಾರೆ. ಯಾವ ಹಗರಣಗಳ ತನಿಖೆಯ ಸಂದರ್ಭಗಳಲ್ಲಿ `ಮೇಲಿನಿಂದ' ಎಷ್ಟೆಷ್ಟು ಫೋನ್ ಕರೆಗಳು ಬಂದಿದ್ದವು, ಪ್ರಭಾವ ಬೀರಿದ್ದವು, ಒತ್ತಡ ಹೇರಿದ್ದವು ಎಂದೆಲ್ಲಾ ಅವರೆಲ್ಲರೂ ಬರೆದುಕೊಂಡಿದ್ದಾರೆ ತಾನೆ.

ಪ್ರಸಕ್ತ ರಾಜಕೀಯ ವಾತಾವರಣವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಪ್ರಧಾನಿ ಮನಮೋಹನ್ ಸಿಂಗ್ ಅವರು ಸೂಚನೆ ನೀಡಿದ್ದಾರೋ, ಇಲ್ಲವೋ ಎಂದು ಹೇಳುವುದು ಕಷ್ಟವಾಗುತ್ತದೆ. ಸಾರ್ವಜನಿಕವಾಗಿ ಅವರಿಗೆ ಆ ಮಟ್ಟಿಗೆ ಪರಿಶುದ್ಧ ವ್ಯಕ್ತಿತ್ವ ಇದೆ. ಪ್ರಧಾನಿ ಸಿಂಗ್ ಅವರು ಆ ತೆರನಾದ ಸೂಚನೆ ನೀಡುವಂತಹವರಲ್ಲ ಎಂಬ ತೀರ್ಮಾನಕ್ಕೇ ಜನ ಬಂದು ಬಿಡುತ್ತಾರೆ. ಆದರೆ ಹಗರಣಗಳು ಸುದ್ದಿಯಾದಾಗ ಕೆಲವು ಅಧಿಕಾರಿಗಳ ಹೆಸರುಗಳೂ ಕೇಳಿಬರುತ್ತದ್ದಲ್ಲಾ, ಕೊನೆಗೂ ಅಂತಹವರಲ್ಲಿ ಶಿಕ್ಷೆಗೆ ಒಳಗಾಗುವವರ ಸಂಖ್ಯೆ ತೀರಾ ಕಡಿಮೆ. ಸಂಪೂರ್ಣ ತನಿಖೆಯ ನಂತರ ಕೊನೆಗೆ ಏನೂ ಗೊತ್ತಾಗುವುದೇ ಇಲ್ಲ !

ಇಂತಹ ಸಂಗತಿಗಳು ನನಗೆ ಅಚ್ಚರಿಯನ್ನಂತು ಉಂಟು ಮಾಡಿಲ್ಲ. ಕಾಂಗ್ರೆಸ್ ಪಕ್ಷ ಇಂತಹ ಹಲವು ಪ್ರಸಂಗಗಳನ್ನು ಎದುರಿಸಿದೆ. ಈಗ ಅಶ್ವನಿ ಕುಮಾರ್, ಮಾಜಿ ರೈಲ್ವೆ ಸಚಿವ ಪವನ್ ಕುಮಾರ್ ಬನ್ಸಾಲ್ ಪ್ರಕರಣಗಳು ತೆರೆಯ ಮರೆಗೆ ಸರಿಯುತ್ತಿದ್ದಂತೆಯೇ, ಇನ್ನೊಂದು ಪ್ರಕರಣ ಎದ್ದು ಕುಣಿಯತೊಡಗುತ್ತದೆ. ಸ್ವಾತಂತ್ರ್ಯಾನಂತರ ಈವರೆಗೆ ಕೇಂದ್ರದಲ್ಲಿ ಪ್ರಸಕ್ತ ಮನಮೋಹನ್ ಸಿಂಗ್ ಸರ್ಕಾರ ಕಂಡಷ್ಟು ಹಗರಣಗಳನ್ನು ಕಂಡಿಲ್ಲ ಎನಿಸುತ್ತದೆ.

ಇದೀಗ ಸಿಬಿಐ ಮತ್ತು ಕಾನೂನು ಸಚಿವಾಲಯ ಪ್ರಕರಣವಂತು ಇನ್ನೂ ವಿಶೇಷವೇ. ಎಲ್ಲರೂ ನಿರೀಕ್ಷಿಸಿದ್ದಂತೆ ಕಾಂಗ್ರೆಸ್ ಮೊದಲಿಗೆ ಆರೋಪವನ್ನು ಅಲ್ಲಗಳೆಯಿತು. ನಂತರ ತೀರಾ ಬೇಜವಾಬ್ದಾರಿಯ ಸ್ಪಷ್ಟೀಕರಣವೊಂದನ್ನು ನೀಡಿತ್ತು. ಕೊನೆಗೆ ಕಾನೂನು ಸಚಿವರ ಮೂಗಿನ ಅಡಿಯಲ್ಲಿಯೇ ಎಲ್ಲವೂ ನಡೆದಿದೆ ಎಂಬುದನ್ನು ಒಪ್ಪಿಕೊಂಡಿತು. ಆದರೆ ಮೂರು ಮಂದಿ ನ್ಯಾಯಮೂರ್ತಿಗಳ ಪೀಠವು ಸಿಬಿಐ ನಿರ್ದೇಶಕ ರಣಜಿತ್ ಸಿನ್ಹಾ ಅವರಿಗೆ ನಿರ್ದೇಶನ ನೀಡಿ ಈ ಹಗರಣಕ್ಕೆ ಸಂಬಂಧಿಸಿದಂತೆ ತೆರೆಮರೆಯಲ್ಲಿರುವವರ ಬಗ್ಗೆಯೂ ವಿವರ ನೀಡಲು ತಿಳಿಸಿತು. ರಣಜಿತ್ ಅದೆಷ್ಟರ ಮಟ್ಟಿಗೆ ಮುಕ್ತವಾಗಿ ನಡೆದುಕೊಂಡರೋ ಗೊತ್ತಿಲ್ಲ. 

ಸಿಬಿಐನಂತಹ ಸಂಸ್ಥೆ ವರ್ಷ ಉರುಳಿದಂತೆ ದುಃಸ್ಥಿತಿ ಕಾಣುತ್ತಲೆ ಬಂದಿದೆ ಎಂಬುದು ನಮಗೆ ಗೊತ್ತಿದೆ. ಇಂತಹ ತನಿಖೆಗಳ ಸಂದರ್ಭದಲ್ಲಿ ತನ್ನ ರಾಜಕೀಯ ಶಕ್ತಿಯಿಂದಾಗಿ ಆರೋಪಪಟ್ಟಿಯಲ್ಲಿ ಸರ್ಕಾರದ ಮಾತೇ ಅಂತಿಮವಾಗಿರುತ್ತದೆ. ಸರ್ವೋಚ್ಚ ನ್ಯಾಯಾಲಯ ಆಗಿಂದಾಗ್ಗೆ ಚಾಟಿ ಬೀಸುತ್ತಿದ್ದರೂ, ಸಿಬಿಐನ ಹಲವು ತನಿಖೆಗಳು ಇವತ್ತಿಗೂ ಹಲವು ಪ್ರಶ್ನೆಗಳನ್ನು ಎದುರಿಸುತ್ತಲಿವೆ. ಸಿಬಿಐ ಸಂಸ್ಥೆಯ ವಿಶ್ವಾಸಾರ್ಹತೆ ಮತ್ತು ಸ್ವತಂತ್ರ ತನಿಖಾ ಶಕ್ತಿಯನ್ನು ಹೆಚ್ಚಿಸುವ ದಿಸೆಯಲ್ಲಿ ವಿಭಿನ್ನ ರಾಜಕೀಯ ಪಕ್ಷಗಳಂತೂ ಆಗಿಂದಾಗ್ಗೆ ಅಮೂಲ್ಯ ಸಲಹೆಗಳನ್ನು ನೀಡುತ್ತಲೇ ಬಂದಿವೆ. ಆದರೆ ಯಾವುದೇ ಸರ್ಕಾರ ಕೂಡಾ ಈವರೆಗೆ ಈ ತನಿಖಾ ಸಂಸ್ಥೆಯ ಮೇಲಿನ ತನ್ನ ನಿಯಂತ್ರಣವನ್ನು ಕಳೆದುಕೊಳ್ಳಲು ಇಷ್ಟ ಪಟ್ಟಿಲ್ಲ.

ಪ್ರಸಕ್ತ ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿಯನ್ನೇ ನೋಡಿ. ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಅಶ್ವನಿ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಸಂಸತ್ ಕಲಾಪಕ್ಕೆ ಇನ್ನಿಲ್ಲದಂತೆ ಅಡ್ಡಿ ಉಂಟು ಮಾಡಿತು. ಇತರ ಪಕ್ಷಗಳ ಸದಸ್ಯರೂ ಸಚಿವ ಅಶ್ವನಿ ಅವರ ತಲೆದಂಡಕ್ಕಾಗಿ ತುದಿಗಾಲಲ್ಲಿ ನಿಂತಂತೆ ಕಾಣಿಸುತ್ತಿತ್ತು. ಆದರೆ ಸಿಬಿಐ ಮೇಲೆ ಸರ್ಕಾರದ ಸವಾರಿಯನ್ನು ತಡೆಯುವ ನಿಟ್ಟಿನಲ್ಲಿ ಪರಿಣಾಮಕಾರಿ ಪ್ರಸ್ತಾವವನ್ನು ನೀಡಲು ಯಾರೂ ಆಸಕ್ತಿ ತೋರಲಿಲ್ಲ.

ಆದರೆ ಸರ್ವೋಚ್ಚ ನ್ಯಾಯಾಲಯ ಅತೀವ ಆಸಕ್ತಿ ತೋರಿ ಸಿಬಿಐ ತನ್ನ ಶಕ್ತಿ ತೋರಬೇಕೆಂದು ಒತ್ತಿ ಹೇಳಿದ್ದೊಂದು ಸ್ವಾಗತಾರ್ಹ ಸಂಗತಿಯೇ ಆಗಿದೆ. ಆದರೆ ಸಿಬಿಐಗೆ ಯಾವ ತೆರನಾದ ಪೂರ್ಣ ಸ್ವಾತಂತ್ರ್ಯ ಎಂಬ ಅಂಶ ಕೂಡಾ ಕುತೂಹಲಕಾರಿಯಾಗಿದೆ.ಈ ನಡುವೆ ಹಗರಣಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಸಮಜಾಯಿಷಿಗಳ ಮೇಲೆ ಸಮಜಾಯಿಷಿಗಳು ಬಂದಿರುವುದೊಂದು ವಿಪರ್ಯಾಸ. ಆದರೆ ಒಮ್ಮೆ ಕಳೆದುಕೊಂಡ ವಿಶ್ವಾಸಾರ್ಹತೆಯನ್ನು ಮರಳಿ ಪಡೆಯುವುದು ಅದೆಷ್ಟು ಕಷ್ಟ ಎಂಬ ಸತ್ಯ ಆಡಳಿತಗಾರರಿಗೆ ಮನದಟ್ಟಾಗಬೇಕಾದ ಅಗತ್ಯವಿದೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT