ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗಲುಗತ್ತಲೆಯಿಂದ ಪಾರುಗಾಣಿಸು

Last Updated 21 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಏಸು ಎಂದರೆ ತಕ್ಷಣ ಎದೆ ತುಂಬುವ ಭಾವ ಯಾವುದು? ಕ್ಷಮೆ! ಏಸು ಕ್ಷಮಾಗುಣದ ಪ್ರತಿನಿಧಿ. ನಿನ್ನ ತಪ್ಪುಗಳಿಗೆ ಪಶ್ಚಾತ್ತಾಪ ಪಡು. ಬೇರೆಯವರ ತಪ್ಪುಗಳನ್ನು ಕ್ಷಮಿಸು. ಇವೆರಡು ಮಾತುಗಳು ಏಸುವಿನ ಉಪದೇಶದ ಪ್ರಮುಖ ಸಾರ. ಕೇವಲ ಬೆಳ್ಳಿಯ ಹತ್ತು ನಾಣ್ಯಗಳಿಗಾಗಿ ಜುಡಾಸ್ ಇಸ್ಕಾರಿಯಟ್ ಎಂಬ ಪ್ರೀತಿಯ ಶಿಷ್ಯ ತನ್ನನ್ನು ಸೈನಿಕರಿಗೆ ಹಿಡಿದುಕೊಡುತ್ತಾನೆಂದು ಏಸುವಿಗೆ ಗೊತ್ತು.

ತನಗದು ಗೊತ್ತು ಎಂಬುದನ್ನು ಜುಡಾಸ್‌ಗೆ ತಿಳಿಯುವಂತೆ, ಇತರರಿಗೆ ತಿಳಿಯದಂತೆ ಏಸು ನಾಲ್ಕಾರು ಬಾರಿ ಹೇಳುತ್ತಾನೆ. ಅದೂ ತನ್ನ ಕೊನೆಯ ಭೋಜನದಲ್ಲಿ. ಈ ವಿಶ್ವಾಸಘಾತುಕತನದಿಂದ ತಪ್ಪಿಸಿಕೊಳ್ಳಬಹುದಾಗಿತ್ತೆ? ವಿಷದ ಬಟ್ಟಲನ್ನು ನಾಳೆ ಏಕೆ ಇಂದೇ ತಂದುಕೊಡು ಎಂದ ಸಾಕ್ರಟೀಸನ ಕ್ಷಾತ್ರದಂತೆ, ದೇವರ ಲೀಲಾ ನಾಟಕದಲ್ಲಿ ನಾವೆಲ್ಲ ನಿಮಿತ್ತ ಮಾತ್ರದವರಾದ್ದರಿಂದ ಸಮರ್ಪಣಾಭಾವದಿಂದ ತನ್ನ ಪಾತ್ರ ನಿರ್ವಹಿಸುವ ನಿರ್ಲಿಪ್ತ ನಟನಂತೆ, ಅಂತಿಮವಾಗಿ ಈ ಧರ್ಮಯುದ್ಧದಲ್ಲಿ ತಾನೇ ಗೆದ್ದುಬರುವೆ ಎಂಬ ಛಲದಿಂದ ಏಸು ಮರಣಕ್ಕೆ ಮುಂದಾಗುತ್ತಾನೆ. ಪ್ರೀತಿ ವಾತ್ಸಲ್ಯಗಳನ್ನು ಧಾರೆ ಎರೆಯುತ್ತ ಬೆಳೆಸಿದ ಆಪ್ತಶಿಷ್ಯ ಶಾಂತಿ, ದಯೆ, ಕ್ಷಮಾಗುಣಗಳ ಪ್ರತಿರೂಪವಾಗಿದ್ದ ಗುರು ಏಸುವನ್ನು ಹಿಡಿದುಕೊಡುತ್ತಾನೆ. ಸೈನಿಕರು ಬಂದಾಗ ಜುಡಾಸ್ ಏಸುವಿನ ಕೆನ್ನೆಗೆ ಮುತ್ತನ್ನಿತ್ತು ಅವನನ್ನು ಪರೋಕ್ಷವಾಗಿ ಗುರುತಿಸುತ್ತಾನೆ. ಮರಣ ಚುಂಬನ !

ಮಾನವ ಚರಿತ್ರೆಯಲ್ಲಿ, ಪುರಾಣಗಳಲ್ಲಿ ಅದೆಷ್ಟೋ ವಿಶ್ವಾಸಘಾತುಕ ಪ್ರಕರಣಗಳಿವೆ. ಪ್ರಿಯಕರನೊಡನೆ ಶೃಂಗಾರ ಕೇಳಿಯಲ್ಲಿ ಮೈಮರೆತಿದ್ದಾಗ ಅವನ ಜೀವದ ಗುಟ್ಟು ತಲೆಗೂದಲಿನಲ್ಲೇ ಇದೆ ಎಂದು ತಿಳಿದುಕೊಂಡು, ಅದನ್ನು ಶತ್ರುಗಳಾದ ಫಿಲಿಸ್ಟೈನರಿಗೆ ರಟ್ಟುಮಾಡಿ ಅದಮ್ಯ ಪ್ರೀತಿ ನೀಡಿದ್ದ ಪ್ರಿಯಕರ ಸ್ಯಾಮ್‌ಸನ್‌ನನ್ನು ಬಲಿಗೊಡುತ್ತಾಳೆ, ಅವನ ಮೆಚ್ಚಿನ ಪ್ರಿಯತಮೆ ಡಿಲೈಲಾ. ಈ ಸಂಗತಿಯು ಬೈಬಲ್‌ನ ಹಳೆಯ ಒಡಂಬಡಿಕೆಯಲ್ಲಿದೆ. ಸಿಂಹಾಸನಕ್ಕಾಗಿ ವಿಶ್ವಾಸದ್ರೋಹ ಎಸಗಿದ ಪ್ರಕರಣಗಳು ಅಸಂಖ್ಯ. ಡೇವಿಡ್ ಚಕ್ರವರ್ತಿಗೆ ಅವನ ಮಗ ಅಬ್‌ಸಲೋಮ್ ದ್ರೋಹ ಬಗೆದಿದ್ದು ಮತ್ತೊಂದು ಅಂಥದ್ದೇ ಪ್ರಕರಣ. ಮಹಾಭಾರತದ ಶಕುನಿ, ಚರಿತ್ರೆಯಲ್ಲಿ ಸಿಗುವ ಮೀರ್ ಸಾದಿಕ್, ಮಲ್ಲಪ್ಪ ಶೆಟ್ಟಿ-ವೆಂಕಟರಾಯ ಮುಂತಾದ ಪಾತ್ರಗಳು ನಂಬಿಕೆದ್ರೋಹದ ಸಂಕೇತಗಳಾಗಿವೆ. ಆದರೆ ಹೊಸ ಒಡಂಬಡಿಕೆಯಲ್ಲಿ ಬರುವ ಜುಡಾಸ್‌ನ ನಂಬಿಕೆದ್ರೋಹ ಇವೆಲ್ಲಕ್ಕಿಂತ ಭಯಾನಕವಾದದ್ದು.

ಶಿಕಾರಿಪುರ ಹರಿಹರೇಶ್ವರ ಅವರು ತೀರಿಕೊಳ್ಳುವ ಮುನ್ನ ಬರೆದ ಸಂಶೋಧನಾಪೂರ್ಣ, ಅಧ್ಯಯನಶೀಲ ಕೃತಿ ಬೈಬಲ್‌ನಲ್ಲಿ ಜಾನ್‌ನ ಸುವಾರ್ತೆಯನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಅವರ ಪತ್ನಿ ನಾಗಲಕ್ಷ್ಮಿ ಹರಿಹರೇಶ್ವರ ಹೊರತಂದಿದ್ದಾರೆ. ನಾನು ವಿಮರ್ಶಕನಲ್ಲ. ಆದರೆ ಓದುಗನಾಗಿ ನನ್ನ ಗ್ರಹಿಕೆಗೆ ಸಿಕ್ಕಿದ್ದನ್ನು ಇಲ್ಲಿ ದಾಖಲಿಸುತ್ತಿದ್ದೇನೆ.

ಸಾಮಾನ್ಯವಾಗಿ ಧರ್ಮ ಗ್ರಂಥಗಳು ತಮ್ಮ ಶುಷ್ಕತೆ ಮತ್ತು ನಿಷೇಧಾತ್ಮಕ ಗುಣದಿಂದ ಜನಸಾಮಾನ್ಯರಿಂದ ದೂರ ಉಳಿಯುತ್ತವೆ. ದೂರದಿಂದ ನಮಸ್ಕರಿಸಿ ಪೂಜಿಸಿಬಿಟ್ಟರಾಯಿತು. ಇದು ನಾವು ಪ್ರವೇಶಿಸುವ ದಾರಿಯಲ್ಲ. ತಿಳಿದವರು ಓದಿ ಹೇಳಿದ್ದರಲ್ಲಿ ಕೆಲವನ್ನು ಕೇಳಿ ಅನುಕೂಲವಿರುವ ಆಚರಣೆಗಳನ್ನು ನಡೆಸಿದರಾಯಿತು. ಧರ್ಮಗ್ರಂಥಗಳ ಓದು ಎಂದರೆ ಕಬ್ಬಿಣದ ಕಡಲೆ ಎಂಬುದು ಸಾಮಾನ್ಯ ಜನರ ನಿಲುವು. ಇದು ಎಲ್ಲ ಧರ್ಮಗ್ರಂಥಗಳಿಗೂ ಅನ್ವಯಿಸುವಂಥದು. ವಾಸ್ತವವಾಗಿ ಎಲ್ಲ ಧರ್ಮಗಳೂ, ಪ್ರವಾದಿಗಳೂ ಜನ ಸಾಮಾನ್ಯನ ಬಿಡುಗಡೆಗಾಗಿ, ಸಾಂತ್ವನಕ್ಕಾಗಿ ಪ್ರಯತ್ನಿಸಿದರು. ಈಗ ಧರ್ಮಗಳೇ ಬಯಲು ಬಂದೀಖಾನೆಗಳಾಗಿರುವುದನ್ನು ಕಾಣುತ್ತೇವೆ. ಧರ್ಮ ಮತ್ತು ಮನುಷ್ಯನ ನಡುವೆ ಮಧ್ಯವರ್ತಿಯಾಗಿ ಜನ್ಮತಳೆದ ಪುರೋಹಿತಷಾಹಿ ಮೂಲದ ಸಾರವನ್ನು ತಿರುಚಿ, ತನ್ನ ಹೊಟ್ಟೆಪಾಡಿನ ಅಗತ್ಯಕ್ಕೆ ತಕ್ಕಂತೆ ವ್ಯಾಖ್ಯಾನ ಮಾಡಿದ್ದರಿಂದ ಧರ್ಮದ ಮೂಲ ಸೆಲೆಗಳು ಸಾಮಾನ್ಯನಿಗೆ ಸಿಗದಂತಾದವು. ಸಂವಹನಕ್ಕೆ ಬೇಕಾದ ಭಾಷೆಯನ್ನೇ ವಂಚನೆಯ ಆಯುಧವನ್ನಾಗಿ ಬಳಸಲಾಯಿತು.

ಆದರೆ ಹರಿ ಬರೆದ ಈ ಪುಸ್ತಕ ಸರಳಗನ್ನಡದಲ್ಲಿ ಮತ್ತು ಮಾನವೀಯ ನೆಲೆಯಲ್ಲಿ ಪ್ರಕಟಗೊಂಡಿದೆ. ದಟ್ಟ ಹಗಲುಗತ್ತಲೆಯಿಂದ ಪಾರುಗಾಣಿಸು ಎಂದೇ ಅವರು ಅಧ್ಯಯನಕ್ಕೆ ತೊಡಗುತ್ತಾರೆ. ಏಸುವನ್ನು ಕುರಿತು ಮ್ಯಾಥ್ಯೂ, ಮಾರ್ಕ್, ಲ್ಯೂಕ್ ಈ ಮೂವರು ಬರೆದ ಸುವಾರ್ತೆಗಳು ಸಮಾನದೃಷ್ಟಿಯ ಪ್ರಗಾಥಗಳು. ಆದರೆ ನಾಲ್ಕನೆಯವನಾದ ಜಾನ್ ಬರೆದ ಸುವಾರ್ತೆ ಭಿನ್ನವಾದದ್ದು. ಈ ಭಿನ್ನವಾದ ಸುವಾರ್ತೆಕಾರರನ್ನು ಹರಿ ಹಿಂಬಾಲಿಸಿದ್ದಾರೆ. ಸುವಾರ್ತೆ ಎಂದರೆ ಸಾಮಾನ್ಯ ಶುಭಸಂದೇಶವಲ್ಲ. ಅದು ದೇವರ ವಾರ್ತೆ. ಸುವಾರ್ತೆಗೆ Gospel ಎಂದೂ ಸುವಾರ್ತೆಕಾರರಿಗೆ Gospelists ಎಂದೂ ಕರೆಯುತ್ತಾರೆ. ಕೊನೆಯವನಾದ ಜಾನ್‌ಗೆ ಪ್ರಚಲಿತ ಸುವಾರ್ತೆಗಳಿಗಿಂತ ವಿಶಿಷ್ಟವಾದದ್ದನ್ನು ಬರೆಯಬೇಕೆಂದು ಎನಿಸಿರಬೇಕು. ಆದರೆ ಹರಿ ನಾಲ್ಕೂ ಸುವಾರ್ತೆಗಳನ್ನು ಆಳವಾಗಿ ಓದಿಕೊಂಡಿದ್ದಾರೆ. ಅವುಗಳನ್ನು ಅಲ್ಲಲ್ಲಿ ಹೋಲಿಸುತ್ತಾರೆ. ಜಾನ್‌ನನ್ನೇ ಆಯ್ಕೆ ಮಾಡಿಕೊಳ್ಳಲು ಮುಖ್ಯ ಕಾರಣ, ಆತನಲ್ಲಿರುವ ಧಾರ್ಮಿಕ ಸೌಹಾರ್ದತೆ. ದಿನೇ ದಿನೇ ಧರ್ಮದ ಹೆಸರಿನಲ್ಲಿ ಅಗ್ನಿಕುಂಡವಾಗುತ್ತಿರುವ ಇಂದಿನ ಜಗತ್ತಿಗೆ ಧಾರ್ಮಿಕ ಸೌಹಾರ್ದತೆ ಅಗತ್ಯವಾದ ಔಷಧ.

ಹರಿಹರೇಶ್ವರ ತಮ್ಮ ಕಾವ್ಯಶಕ್ತಿಯಿಂದ ಈ ಧಾರ್ಮಿಕ ಗ್ರಂಥವನ್ನು ಕವಿತೆ ಹೇಳುವ ಕುಶಲತೆಯಿಂದ ನಿರೂಪಿಸಿದ್ದಾರೆ. ಜುಡಾಸ್ ತನ್ನನ್ನು ಹಿಡಿದುಕೊಡುತ್ತಾನೆಂದು ತಿಳಿದ ಏಸುವಿನ ಸ್ಥಿತಿಯನ್ನು ಅವರು ವಿವರಿಸಿರುವ ಏಳು ಘಟ್ಟಗಳು ಉತ್ತಮ ಕವಿತೆಯೊಂದನ್ನು ಓದಿದ ಅನುಭವ ಕೊಡುತ್ತವೆ. ೪೩ ಅಧ್ಯಾಯಗಳಲ್ಲಿ ಸಾಗುವ ಈ ಕೃತಿಗೆ ಅಡಿಟಿಪ್ಪಣಿಗಳದೇ ಭಾರ. ಎಲ್ಲವನ್ನೂ ಅಥೆಂಟಿಕ್ ಆಗಿಸುವ ಉತ್ಸಾಹದಲ್ಲಿ ಹರಿ ಅಡಿಗಡಿಗೂ ಆಕರಗ್ರಂಥಗಳ ಅಪಾರ ವಿವರವನ್ನು ಕೊಡುತ್ತಾ ಹೋಗುತ್ತಾರೆ. ಮುನ್ನುಡಿಯಲ್ಲಿ ಖ್ಯಾತ ವಿದ್ವಾಂಸ ಡಾ.ಬಿ.ಎಸ್. ತಲ್ವಾಡಿಯವರು ನನ್ನ ಅನುಭವಕ್ಕೆ ಬಂದ ಹಾಗೆ ಪ್ರಾಯಶಃ ಸುವಾರ್ತಕರನ್ನು ಕುರಿತು ಇಂತಹ ಅಧ್ಯಯನ ಕನ್ನಡದಲ್ಲಿ ಇಲ್ಲಿಯತನಕ ನಡೆದಿಲ್ಲ ಎನ್ನುತ್ತಾರೆ. ತಂದೆಯ ಪುಸ್ತಕಕ್ಕೆ ತನ್ನ ಅನಿಸಿಕೆಗಳನ್ನು ಬರೆದ ಹರಿಯ ಮಗಳು ನಂದಿನಿ ಸತ್ಯವೇ ದೇವರು- ದೇವರೇ ಸತ್ಯ. ಹಾಗಿದ್ದರೆ ಈ ತರ್ಕ ನಮ್ಮನ್ನು ಎಲ್ಲಿಗೆ ತಂದು ನಿಲ್ಲಿಸುತ್ತದೆ? ಮನುಷ್ಯನೇ ದೇವರು- ದೇವರೇ ಮನುಷ್ಯ. ದೇವರೇ ಸತ್ಯ-ಸತ್ಯವೇ ದೇವರು. ಹಾಗೆಂದ ಮೆಲೆ ಮನುಷ್ಯನೇ ಸತ್ಯವಲ್ಲವೆ? ಎನ್ನುತ್ತಾರೆ. ಮನುಷ್ಯನೇ ಸತ್ಯವಲ್ಲವೆ? ಎಂಬ ಪ್ರಶ್ನೆ ಬಹಳ ಮೌಲಿಕವಾದದ್ದು.

*
ಅಮೆರಿಕಾದಲ್ಲಿದ್ದಾಗ ಹರಿ ಅಮೆರಿಕನ್ನಡ ಪತ್ರಿಕೆ ಶುರು ಮಾಡಿದ್ದರು. ಈ ಅಮೆರಿಕನ್ನಡ ಪತ್ರಿಕೆಗೆ ಗಮ್ಮು ಅಂಟಿಸಿ, ಅಡ್ರಸ್ ಹಚ್ಚಿ, ಮೈಲ್ ಮಾಡುತ್ತಾ ನಮಗೆ ಮಕ್ಕಳು ದೊಡ್ಡವರಾದದ್ದೇ ತಿಳಿಯಲಿಲ್ಲ ಎನ್ನುತ್ತಿದ್ದರು ನಾಗಲಕ್ಷ್ಮಿ. ಕನ್ನಡಿಗರು ಎಂದಿನಂತೆ ಕೊಂಡು ಓದಲಿಲ್ಲ; ಪತ್ರಿಕೆ ನಿಂತುಹೋಯಿತು. ಬೇರೆಯವರ ಕೆಲಸಕ್ಕೆ ಎರಡು ಹೆಜ್ಜೆ ಮುಂದಿರುತ್ತಿದ್ದ ಹರಿ; ಸ್ವಂತ ಕೆಲಸಕ್ಕೆ ಹಿಂದಿರುಗುತ್ತಿದ್ದರು. ವಿದೇಶಕ್ಕೆ ಬಂದವರು ಎಂಬ ಅವರ ಕಾವ್ಯ ಸಂಗ್ರಹವನ್ನು ನಮ್ಮ ಅಭಿವ್ಯಕ್ತಿಯಿಂದ ಪ್ರಕಟಿಸಿದೆ. ಹರಿ ಅನೇಕ ಅನಿವಾಸಿ ಪ್ರತಿಭೆಗಳ ಪುಸ್ತಕಗಳನ್ನು ಪ್ರಕಟಿಸುವಂತೆ ಒತ್ತಾಸೆ ತಂದರು. ಹತ್ತಕ್ಕೂ ಹೆಚ್ಚು ಎನ್ನಾರೈ ಕನ್ನಡಿಗರ ಪುಸ್ತಕಗಳನ್ನು ನಾನು ಪ್ರಕಟಿಸಲು ಹರಿಯ ಸಲಹೆಯೇ ಕಾರಣ. ಒಮ್ಮೆಯಂತೂ ನಟ್ಟಿರುಳಿನಲ್ಲಿ ಅಮೆರಿಕಾದಿಂದ ಕರೆ ಮಾಡಿ,  ಇದೊಂದು ಪುಸ್ತಕ, ಒಂದು ವಾರದಲ್ಲೆ ತರಬೇಕು ಚಂದ್ರು ಎಂದು ಒತ್ತಾಯಿಸಿದರು. ಸಂದರ್ಭವೂ ಹಾಗಿತ್ತು. ಪ್ರೊ. ವೈ.ಆರ್. ಮೋಹನ್ ಹಾಸಿಗೆ ಹಿಡಿದಿದ್ದರು. ಪಾರ್ಕಿನ್‌ಸನ್ ಸಂಬಂಧಿ ರೋಗ ಅವರ ದೇಹವನ್ನು ಹೊಕ್ಕಿತ್ತು. ನೆನಪುಗಳೇ ಔಷಧವೆಂದು ವೈದ್ಯರು ಹೇಳಿದ್ದರು. ಬಾಲ್ಯದ ನೆನಪುಗಳ ಗಣಿಯಂತಿದ್ದ ಒಂದು ಪುಸ್ತಕ ಬರೆದಿದ್ದರು.

ಅಹೋರಾತ್ರಿ ಹೊರತಂದ ಆ ಪುಸ್ತಕದ ಹೆಸರು ನೆನಪುಗಳು. ಪ್ರೊ. ವೈ.ಆರ್. ಮೋಹನ್ ಬದುಕಿ ಉಳಿದರು. ಇದಕ್ಕೆ ಹರಿಯ ಸಾಂದರ್ಭಿಕ ನೆರವು, ಮಾನವೀಯತೆಯೇ ಕಾರಣ. ಅಲ್ಲಿನ ನೆನಪುಗಳು ಮಲೆನಾಡಿನವು; ಅದ್ಭುತವಾದ ಪುಸ್ತಕ ಅದು. ಆ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂತು. ತನ್ನ ಆಸುಪಾಸಿನಲ್ಲಿದ್ದ ಲೇಖಕರಿಗೆ, ಸಂಸ್ಕೃತಿಗೆ ಹರಿ ಹೇಗೆ ನೆರವಾಗುತ್ತಿದ್ದರು ಎನ್ನುವುದಕ್ಕೆ ಇದು ಚಿಕ್ಕ ಉದಾಹರಣೆ.

ಹರಿ ಅಮೆರಿಕಾದಲ್ಲಿ ಮೇಲುಸೇತುವೆ ನಿರ್ಮಿಸುವ ಎಂಜಿನಿಯರ್ ಆಗಿ ದುಡಿದು ಸರ್ಕಾರಿ ಸೇವೆಯಿಂದ ನಿವೃತ್ತರಾಗಿ ಮೈಸೂರಿನಲ್ಲಿ ನೆಮ್ಮದಿಯಿಂದಿದ್ದರು. ಚಿಕ್ಕವರಿಂದ ದೊಡ್ಡವರವರೆಗೆ ಎಲ್ಲರನ್ನೂ ಹಚ್ಚಿಕೊಂಡು ಎಲ್ಲರನ್ನೂ ಪ್ರೀತಿಸುತ್ತಾ, ಎಲ್ಲರಿಗೂ ನೆರವಾಗುತ್ತಾ ಹರಿ ನಿಜಕ್ಕೂ ಸಂಭ್ರಮಿಸತೊಡಗಿದ್ದರು. ಇಲ್ಲಿಂದ ಅಮೆರಿಕೆಗೆ ಅವರು ಸಾಂಸ್ಕೃತಿಕವಾಗಿ ಮೇಲುಸೇತುವೆಗಳನ್ನು ಕಟ್ಟುತ್ತಲೇ ಇದ್ದರು. ಲೇಖನ ಬರೆಸುವುದು, ಪುಸ್ತಕ ಅಚ್ಚಿಸುವುದು, ಬಿಡುಗಡೆ ಮಾಡುವುದು, ಮನೆಯಲ್ಲಿ ಸಾಹಿತ್ಯ ಚರ್ಚೆ ನಡೆಸುವುದು, ಅನಾಥರನ್ನು ಬಡಮಕ್ಕಳನ್ನು ಓದಿಸುವುದು. ತೆರೆಯ ಹಿಂದೆ ಸದ್ದಿಲ್ಲದೆ ಪರೋಪಕಾರವನ್ನೂ ದಿನಚರಿಯಂತೆ ನಿರ್ವಹಿಸಿದ ಹರಿಯನ್ನು ಕೀರ್ತಿಶೇಷರೆನ್ನುವುದು ಉತ್ಪ್ರೇಕ್ಷೆಯಲ್ಲ. ಪರೋಪಕಾರದಲ್ಲಿ ಬದುಕಿನ ಧನ್ಯತೆ ಕಂಡುಕೊಂಡ ಅಪ್ಪಟ ಭಾರತೀಯ. ನಿರ್ಗಮಿಸಿದಾಗಲೂ ತನ್ನ ದೇಹವನ್ನು ದಾನ ಕೊಡಬಯಸಿದ ಮೌಲ್ಯನಿಷ್ಠೆ ಅವರದು.

ಎಲ್ಲ ಧರ್ಮಗಳನ್ನು ಪ್ರೀತಿಸು, -ಆದರೆ ನಿನ್ನ ಧರ್ಮದಲ್ಲಿ ಜೀವಿಸು ಎಂದ ಗಾಂಧೀಜಿಯವರ ಮಾತು ಇಲ್ಲಿ ನೆನಪಾಗುತ್ತದೆ. ಹಿಂದೂ ಧರ್ಮದಲ್ಲಿ ಆಳವಾದ ಶ್ರದ್ಧೆ ನಂಬಿಕೆ ಇರಿಸಿಕೊಂಡಿದ್ದ ಹರಿಹರೇಶ್ವರ ಅಷ್ಟೇ ಶ್ರದ್ಧೆಯಿಂದ ಬೈಬಲ್‌ನ ಜಾನ್‌ನ ಸುವಾರ್ತೆಗಳನ್ನು ಕನ್ನಡೀಕರಿಸಿದ್ದಾರೆ. ಇದು ಹಿಂದೂ-ಕ್ರೈಸ್ತ ಧರ್ಮಗಳ ತೌಲನಿಕ ಅಧ್ಯಯನವೂ ಆಗಿದೆ. ಕ್ರೈಸ್ತರಲ್ಲದವರೂ ಕುತೂಹಲ ಮತ್ತು ಗೌರವದಿಂದ ಆಸ್ವಾದಿಸಬಹುದಾದ ಕೃತಿಯಾಗಿದೆ. ಇದು ಯಾವುದೇ ವಿಶ್ವವಿದ್ಯಾನಿಲಯ ಕರೆದು ಡಾಕ್ಟರೇಟ್ ಕೊಡಬಹುದಾಗಿದ್ದ ಸಂಶೋಧನಾತ್ಮಕ ಕೃತಿಯೂ ಹೌದು. ಅನೇಕ ಮಾನವೀಯ ಮೌಲ್ಯಗಳನ್ನು ಪ್ರತಿನಿಧಿಸುವ ಈ ಕೃತಿ ಹರಿಹರೇಶ್ವರ ಅವರನ್ನು ಅರ್ಥಪೂರ್ಣವಾಗಿ ಪ್ರತಿನಿಧಿಸುವುದಲ್ಲದೆ, ಅವರು ಕೊಟ್ಟು ಹೋದ ಶುಭಸಂದೇಶದಂತೆಯೇ ಇದೆ.

*
ಬರಹಗಾರನೊಬ್ಬ ಅನ್ಯಧರ್ಮದ ಕೃತಿಗಳನ್ನು ಅನ್ವೇಷಿಸಬೇಕು. ಅಲ್ಲಿನ ಮಾನವಪರ ವಿಚಾರಗಳನ್ನು ಹೆಕ್ಕಿ ತೆಗೆಯಬೇಕು. ಅನಗತ್ಯವಾದ ಸಂಶಯ, ಗೊಂದಲ ಮತ್ತು ಪೂರ್ವಾಗ್ರಹಗಳನ್ನು ಇಲ್ಲವಾಗಿಸಬೇಕು. ನೀನು ನಿನ್ನ ಧರ್ಮದ ತಮಟೆ ಬಾರಿಸಿಕೊಂಡರೆ ಸಾಲದು. ಹೊರಗಿನದು ಮತ್ತು ಉತ್ತಮವಾದದ್ದು ಎಲ್ಲರಿಗೂ ಸಿಗುವಂತಾಗಬೇಕು. ಈಗ ಪರಿಸ್ಥಿತಿ ಎಷ್ಟು ಕೆಟ್ಟದ್ದಾಗಿದೆ! ಮೊನ್ನೆ ಒಂದು ಸಿನಿಮಾಕ್ಕೆ ಹೋಗಿದ್ದೆ. ಅದು ಉತ್ತಮವಾದ ಸಿನಿಮಾ. ಆರಂಭದಲ್ಲಿ ಕನಕದಾಸರ ಕೀರ್ತನೆ ಇದೆ. ಅದು ಶುರುವಾಗುತ್ತಿದ್ದಂತೆ ಅವಿವೇಕಿ ಪ್ರೇಕ್ಷಕನೊಬ್ಬ ಎಲ್ಲರಿಗೂ ಕೇಳುವಂತೆ ಗಟ್ಟಿಯಾಗಿ ವೋ.. ಡೈರೆಕ್ಟ್ರು ಕುರುಬಣ್ಣ ಕಣೋ ಎಂದು ಕೂಗಿದ. ಇದು ಎಂಥ ಅಸಹ್ಯವಾದ ಊಹೆ! ಬಸವಣ್ಣನ ಬಗ್ಗೆ ಮಾತನಾಡುವವನು ಲಿಂಗಾಯತನೇ ಆಗಿರಬೇಕು; ಅಂಬೇಡ್ಕರ್ ಬಗ್ಗೆ ಮಾತನಾಡುವವನು ದಲಿತನೇ ಆಗಿರಬೇಕು; ಕುವೆಂಪು ಬಗ್ಗೆ ಮಾತನಾಡುವವನು ಒಕ್ಕಲಿಗನೇ ಆಗಿರಬೇಕು ಎಂದು ಯೋಚಿಸುವುದು ನಮ್ಮೆಲ್ಲರ ದುರಂತವಲ್ಲವೆ? ಎಷ್ಟು ಜನ ಏಸು, ಬುದ್ಧ, ಬಸವರು ಬಂದರೂ ನಮ್ಮನ್ನು ಈ ಹಗಲುಗತ್ತಲೆಯಿಂದ ಪಾರುಗಾಣಿಸುವವರು ಕಾಣುತ್ತಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT