ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಡಗೆ ಅದು? ತೇಲುವ ಅಮರಾವತಿ!

Last Updated 6 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

(ನನ್ನ ಗ್ರಹಿಕೆಯ ಅಲಾಸ್ಕ ಭಾಗ: ೪)

ಅದು ವ್ಯಾಂಕೋವರ್‌ನಲ್ಲಿ ನನ್ನ ಕೊನೆಯ ರಾತ್ರಿ. ಆ ರಾತ್ರಿ ನನಗೆ ಬಹಳ ಹೊತ್ತು ನಿದ್ರೆ ಬರಲಿಲ್ಲ ಎಂದು ನನ್ನ ಬದುಕಿನ ಬಹುತೇಕ ರಾತ್ರಿಗಳ ಬಗ್ಗೆ ಹೇಳಬಹುದು. ಎಸ್ಕಿಮೋ ಜನರ ಬಗ್ಗೆ, ಅಲಾಸ್ಕ ಬಗ್ಗೆ ಬಹಳ ಹೊತ್ತು ಓದುತ್ತಾ ಕುಳಿತಿದ್ದೆ. ಹಡಗು ಚಲಿಸುವ ಜಲಮಾರ್ಗದ ಹಾದಿ ಯಾವುದು, ಅದು ಯಾವಾಗ ಕೆನಡಾ ಗಡಿ ದಾಟಿ, ಅಮೆರಿಕಾ ಗಡಿಯನ್ನು ಪ್ರವೇಶಿಸುತ್ತದೆ? ಬಂದರು ಕಟ್ಟೆಗಳು ಯಾವುವು? ಅವುಗಳ ನಡುವಿನ ಅಂತರವೇನು? ಹಡಗಿನಲ್ಲಿ ಹದಿನೈದು ದಿನ, ಅಂದರೆ ಮುನ್ನೂರರವತ್ತು ಗಂಟೆ, ಇಪ್ಪತ್ತೊಂದು ಸಾವಿರದ ಆರು ನೂರು ನಿಮಿಷ, ಹನ್ನೆರಡು ಲಕ್ಷದ ತೊಂಬತ್ತಾರು ಸಾವಿರ ಸೆಕೆಂಡುಗಳನ್ನು ಬರಿಯ ಸಹನೀಯವಾಗಿ ಮಾತ್ರವಲ್ಲ ಸ್ವಾರಸ್ಯಕರವಾಗಿ ಹೇಗೆ ಕಳೆಯುವುದು ? ಅದೇಕೋ ಒಂಟಿತನ ಅಧೀರನಾಗಿಸುತ್ತಿತ್ತು. ರಾತ್ರಿ ಮಲಗಿದ್ದಾಗ ಹಡಗಿನ ಕ್ಯಾಬಿನ್‌ನಲ್ಲಿ ಹೃದಯಾಘಾತವಾದರೆ, ಮರುದಿನ ಮುಂಜಾನೆಯವರೆಗೂ ಯಾರಿಗೂ ಸುದ್ದಿ ತಿಳಿಯುವುದಿಲ್ಲವಲ್ಲ ಎಂಬ ಅಮಂಗಳ ಯೋಚನೆಯ ಕಾಟ ಬೇರೆ. ನಿಮ್ಮದು ಅತ್ಯಂತ ಆರೋಗ್ಯಕರ ಹೃದಯ ಎಂದು ಹೊರಡುವ ಮುನ್ನ ಭರವಸೆ ಕೊಟ್ಟಿದ್ದ ಡಾ|| ಸಿ.ಎನ್. ಮಂಜುನಾಥರ ಮಾತು ನೆನಪಾಗಿ ಧೈರ್ಯ ಬಂತು. ಇನ್ನೂ ಒಂದು ಕ್ಷೀಣ ಆಸೆ- ಕೊನೆ ಗಳಿಗೆಯಲ್ಲಿ ರಂಗಸ್ವಾಮಿ ಬಂದರೂ ಬರಬಹುದು ಅಂತ. ನನ್ನದೂ ಅವರದೂ ಮೂರು ದಶಕಗಳ ಅಖಂಡ ಸ್ನೇಹ. ಲಘುವಾಗಿ ಹರಟಿದ್ದೇವೆ. ಗಂಭೀರವಾಗಿ ಚರ್ಚಿಸಿದ್ದೇವೆ. ಹಳೆ ಮೆಟ್ಟಿನಲ್ಲಿ ಹೊಡೆದಾಡಿದ್ದೇವೆ. ಪರಸ್ಪರ ಆತುಕೊಂಡಿದ್ದೇವೆ. ಯಾರಾದರೂ ಬಂದು ನನ್ನನ್ನು ನಿಮ್ಮ ಹೆಣ ಹೊರಲು ನಾಲ್ಕು ಜನರನ್ನು ಆರಿಸಿಕೊಳ್ಳಿ ಎಂದು ಕೇಳಿದರೆ ಅದರಲ್ಲಿ ಒಂದು ಹೆಸರು ರಂಗಸ್ವಾಮಿಯವರದ್ದಾಗಿರುತ್ತದೆ. ಆಪ್ತಮಿತ್ರರು ಎಂಬುದು ಮಾತ್ರ ಕಾರಣವಲ್ಲ. ಅವರು ಕಟ್ಟುಮಸ್ತಾದ ಆಳು. ಹೆಗಲು ಗಟ್ಟಿಯಾಗಿದೆ. ಬೀಳಿಸದೆ ಹೊತ್ತೊಯ್ಯಬಲ್ಲರು. ಹಿರಿಯನಾದರೂ ನನಗಿಂತ ಹೆಚ್ಚು ಕಾಲ ಬಾಳಿಕೆ ಬರುವ ಜೀವ ಎಂಬ ಗುಮಾನಿ ಇದೆ.
 

ಎರಡೆರಡು ಅಲಾರಾಂ ಇಟ್ಟು ಮಲಗುವುದು, ಆದರೆ ಅವು ಸದ್ದು ಮಾಡುವ ಮೊದಲೇ ಎದ್ದುಬಿಡುವುದು ನನ್ನ ಇನ್ನೊಂದು ಇರುಳವ್ಯಸನ. ಆ ಮುಂಜಾನೆ ಹಾಗೇ ಆಯಿತು. ಐದಕ್ಕೆ ಅಲಾರಾಂ ಇಟ್ಟವನು ನಾಲ್ಕೂ ಐವತ್ತಕ್ಕೆ ಎದ್ದು ಕೂತಿದ್ದೆ. ಅದು ಯಾರನ್ನೂ ನಂಬದ ಸಿನಿಕತೆಯೋ, ಅತಿಯಾದ ಜಾಗರೂಕತೆಯೋ ಅರಿಯೆ. ಅಲಾರಾಂ ಇಡುವುದೇಕೆ? ಮುಂಚೆಯೇ ಎದ್ದು ಕೂರುವುದೇಕೆ ? ಮನಸ್ಸೆಂಬ ಅಲಾರಾಂ ಬಹಳ ಜಾಗರೂಕ. ಕಿಟಕಿಯಾಚೆ ಇಣುಕಿದರೆ ವ್ಯಾಂಕೋವರ್ ನಗರದ ವೈವಿಆರ್ ಏರ್‌ಪೋರ್ಟಿನ ತೂಕಡಿಸುವ ದೀಪ ರಾಶಿ. ಕ್ಯಾನ್‌ವಾಸು ಧರಿಸಿ ವಾಕಿಂಗ್ ಎಂದು ಕರೆಯಬಹುದಾದ ಒಂದು ಕ್ಷಣಿಕ ನಡಿಗೆ ಹಿಡಿದೆ. ಅದು ವಾಕಿಂಗ್‌ಗೆ ಸೂಕ್ತವಾದ ಜಾಗವಾಗಿರಲಿಲ್ಲ. ಬೆಳಗಿನ ವಿಮಾನ ಹಿಡಿಯಲು ಓಡುವ ಕಾರುಗಳು ರೊಯ್‌ಗುಡುತ್ತಿದ್ದವು. ಸಣ್ಣ ಸುತ್ತು ಮುಗಿಸಿ ಪ್ರಾಣಾಯಾಮ ಎಂದು ಕರೆಯಬಹುದಾದ ಇನ್ನೊಂದು ಚೇಷ್ಟೆಗೆ ತೊಡಗಿದೆ. ಪ್ರಯಾಣ ನಿಮಿತ್ತವೋ, ಒಂಟಿತನದ ಶೂನ್ಯತೆಗೋ ಯಾತಕ್ಕೂ ಶ್ರುತಿ ಸೇರಲಿಲ್ಲ. ಕಾಫಿ ಮೇಕರ್‌ನಿಂದ ಒಂದು ಕಪ್ಪು ಕಾಫಿ ಕುಡಿದೆ. ಕ್ಷಮಿಸು, ವೀಸಾ ಸಿಗಲಿಲ್ಲ, ಬರೋಕಾಗ್ಲಿಲ್ಲ. ಹೋಗಿದ್ದು ಬಾ. ಶುಭವಾಗಲಿ- ಎಂಬ ಅಂತಿಮ ಕರೆಯನ್ನು ಗೆಳೆಯರಿಂದ ನಾನೇ ಕಲ್ಪಿಸಿಕೊಂಡು ಎದೆ ಗಟ್ಟಿಮಾಡಿಕೊಂಡೆ.

ಅಂಥ ಕರೆಯೇನೋ ಬಂತು. ಆದರೆ ಆ ಕರೆಗೆ ಇನ್ನೆರಡು ವಿಸ್ತೃತ ವಾಕ್ಯಗಳಿದ್ದುವು. ನನ್ನ ಜಾಗಕ್ಕೆ ಯಾರಾದರೂ ಸಿಕ್ಕರೆ ಕರೆದುಕೊಂಡು ಹೋಗು. ಒಂದು ವೇಳೆ ಯಾರೂ ಸಿಗದಿದ್ದರೆ ಹಡಗಿನಲ್ಲಿ ಚೆಕ್ ಇನ್ ಮಾಡುವಾಗ ನನಗೆ ಸಡನ್ನಾಗಿ ಹುಷಾರು ತಪ್ಪಿತು, ಅದರಿಂದ ಬರಲಾಗಲಿಲ್ಲ ಅಂತ ಹೇಳು. ಲಘು ಹೃದಯಾಘಾತ ಎಂದರೂ ಅಡ್ಡಿ ಇಲ್ಲ. ಹಾಗೆ ಹೇಳಿದರೆ ಮಾತ್ರ ರೀಫಂಡು ಸಿಗುತ್ತದೆ ಎಂದರು ಶ್ರೀಯುತರು. ಕೂಡಲೇ ಗೊತ್ತಿದ್ದ ನಂಬರುಗಳಿಗೆಲ್ಲ ಕರೆ ಮಾಡತೊಡಗಿದೆ. ನಮ್ಮ ಬೆಳ್ಳೂರು ಕ್ರಾಸಿನಲ್ಲಿ ಜಹೀರ್ ಅಂತ ಒಬ್ಬ ಯಾರ್ರಿ ನಾಗ್ಮಂಗ್ಲ, ಪಾಂಡೊಪುರ, ಪಟ್ಣ, ಮೈಸೋರ್ ಎಂದು ಖಾಸಗಿ ಬಸ್ಸಿನ ಬಳಿ ಕೂಗುತ್ತಾ ನಿಲ್ಲುತ್ತಿದ್ದ. ಥೇಟು ಅವನಂತೆಯೇ ನಾನು ಹದಿನೈದು ದಿನ ಅಲಾಸ್ಕ ಯಾರು ಬರ್ತೀರಿ? ಅಂತ ಒಬಾಮಾ ಒಬ್ಬನನ್ನು ಬಿಟ್ಟು ಬಹುತೇಕ ಜನರನ್ನು ಕೇಳಿದೆ. ಸಡನ್ನಾಗಿ ಕರೆದರೆ ನಾವು ಸ್ವರ್ಗಕ್ಕೂ ಬರಲಾರೆವು ಅಂದರು.

ಈ ಕರೆಯಿಂದ ಆದ ಘೋರ ಅನಾಹುತವೆಂದರೆ ನಾನು ಅಲಾಸ್ಕಗೆ ಒಬ್ಬನೇ ಹೋಗಬೇಕಾಗಿದೆ ಎಂಬ ಸುದ್ದಿ ಸಿಎನ್‌ಎನ್ ಒಂದನ್ನು ಬಿಟ್ಟು ಅಮೆರಿಕನ್ನಡಿಗರ ಮೌಖಿಕ ವಾಹಿನಿಯಲ್ಲಿ ಬಿತ್ತರಗೊಂಡು, ಕೆನಡಾಗೂ ಹರಡಿ ಅಯ್ಯೋ ಪಾಪ ಎಂಬ ಉದ್ಗಾರಗಳು ಹೊಮ್ಮಿ ಎಲ್ಲರ ಅನುಕಂಪದ ಕರೆಗಳು ಶುರುವಾದವು. ಯುದ್ಧಕ್ಕೆ ಕಳುಹಿಸುವವರಂತೆ, ಇದು ಕೊನೆಯ ಯಾತ್ರೆ ಎಂಬಂತೆ ಹಲವರು ಲೊಚಗುಟ್ಟಿದರು. ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡುವ ಲೋಕಚಿಂತಕರಿರುತ್ತಾರಲ್ಲ; ಅಂಥ ಮನಸ್ಸಿನ ಕೆಲವರು ವ್ಯಾಂಕೋವರ್ ಕನ್ನಡ ಕೂಟವೂ ಸೇರಿದಂತೆ ಅನೇಕ ಕನ್ನಡ ಸಂಘಗಳ ಸದಸ್ಯರಿಗೆ ಈಮೈಲ್ ಮೂಲಕ ಅಲಾಸ್ಕ ಛಲೋ ಕರೆ ಕೊಟ್ಟಿದ್ದರು. ಪ್ರಯಾಣಕ್ಕೊಂದು ಖಾಸಗೀತನ ಇರಬೇಕು.

ವಿದೇಶ ಯಾತ್ರೆಯ ಫೋಟೊ ಅಚ್ಚಿಸುವವರದು ಶ್ರದ್ಧಾಂಜಲಿಯ ಫೋಟೊ ರೀತಿಯಲ್ಲೇ ಇರುತ್ತದೆ. ಆದ್ದರಿಂದ ಸದ್ದಿಲ್ಲದೆ ಪ್ರವಾಸ ಹೋಗಬೇಕು ಎಂದು ನಂಬುವವ ನಾನು. ಗೆಳೆಯರ ದೆಸೆಯಿಂದ-ಅಮೆರಿಕವನ್ನೊಂದು ಜಗತ್ತು ಎಂದು ನಂಬುವುದಾದರೆ -ಜಗಜ್ಜಾಹೀರಾಯಿತು. ನನ್ನೆರಡು ಕೂಸುಮರಿಗಳಂತಿದ್ದ ಬ್ಯಾಗೇಜುಗಳನ್ನೆಳೆದುಕೊಂಡು ಬಿಲ್ ಚುಕ್ತಾ ಮಾಡಲು ರಿಸೆಪ್ಶನ್‌ಗೆ ಬಂದಾಗ ಅವನು ನನ್ನ ಉದ್ದನೆ ಹೆಸರು ಗಮನಿಸಿ ಓಹೋ ನಿಮಗೊಂದು ಕೊರಿಯರ್ ಬಂದಿದೆ ಎಂದ. ಗಾಬರಿ ಮತ್ತು ಕುತೂಹಲಗಳಿಂದ ತೆರೆದರೆ ಒಂದು ದಪ್ಪ ಪುಸ್ತಕ ; ಒಂದು ಸಣ್ಣ ಕಾಗದ:

ನೀವು ಒಬ್ಬರೇ ಅಲಾಸ್ಕಗೆ ಹೋಗುತ್ತಿರುವ ಸುದ್ದಿ ವ್ಯಾಂಕೋವರ್‌ನಿಂದ ೨೩೪೯ ಮೈಲಿ ದೂರವಿರುವ ಅಮೆರಿಕಾದ ರಾಜಧಾನಿ ವಾಷಿಂಗ್‌ಟನ್ ಡಿ.ಸಿ.ವರೆಗೂ ತಲುಪಿತು. ನಮಗೆಲ್ಲ ದುಃಖವಾಗಿದೆ. ಎರಡು ವಾರ ಹಡಗಿನಲ್ಲಿ ಒಬ್ಬರೇ ಪ್ರಯಾಣಿಸಿದರೆ ಬರುವ ವೇಳೆಗೆ ಹುಚ್ಚು ಹಿಡಿದಂತಾಗುತ್ತದೆ. ಈ ರೀತಿ ಅನೇಕರಿಗೆ ಆಗಿದೆಯಂತೆ. ಮನಸ್ಸನ್ನು ಯಾವುದಾದರೂ ವಿಷಯದಲ್ಲಿ ಕೇಂದ್ರೀಕರಿಸುವುದು ಒಳ್ಳೆಯದು. ನಿಮ್ಮ ಬೇಸರ ಕಳೆಯಲು ಈ ಪುಸ್ತಕ ಕಳುಹಿಸುತ್ತಿದ್ದೇನೆ. ಇದು ನನಗೆ ಇಷ್ಟವಾದ ಪುಸ್ತಕ. ನಿಮಗೂ ಇಷ್ಟವಾಗಬಹುದು-. ನಿಮ್ಮ ಶ್ರೇಯೋಭಿಲಾಷಿ ಶಶಿಕಲಾ ಚಂದ್ರಶೇಖರ್ ಇದು ಕಾಗದದ ಒಕ್ಕಣೆ. ಜತೆಯಲ್ಲಿ Orhan Pamuk ಬರೆದ The Museum of Innocence ಎಂಬ ಪುಸ್ತಕ. ಅವನಿಗೆ ೨೦೦೬ರಲ್ಲಿ ನೊಬೆಲ್ ಪ್ರಶಸ್ತಿ ದೊರಕಿತ್ತು. ಇಸ್ತಾಂಬುಲ್ ನಿವಾಸಿಯಾದ ಪಮುಕ್‌ಗೆ ಅಪಾರ ಓದುಗರು ಜಗತ್ತಿನಾದ್ಯಂತ ಇದ್ದಾರೆ. ಅವನ ಕೃತಿಗಳು ಐವತ್ತಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿವೆ. ಆತನ ಮುಖ್ಯ ಕೃತಿಗಳೆಂದರೆ Other Colours, Istambul, Snow, My Name Is Red, The White Castle, The Black Book, The New Life ಇತ್ಯಾದಿ. ಶಶಿಕಲಾ ಎಂಬ ಮಹಾತಾಯಿ ನನಗಾಗಿ ಒಂದು ಪುಸ್ತಕ ಕಳುಹಿಸಿದ್ದರು. ಅದೊಂದು ಹೃದಯ ವಿದ್ರಾವಕ ದುರಂತ ಪ್ರೇಮ ಕಥನ. ಪ್ರೇಮ ಕಥೆಯ ಜತೆಜತೆಗೇ ಇಸ್ತಾಂಬುಲ್‌ನ ಅನೇಕ ಸಾಮಾಜಿಕ, ರಾಜಕೀಯ ವಿಪ್ಲವಗಳನ್ನು ಹೇಳುತ್ತಾ ಹೋಗುತ್ತದೆ. ನನ್ನ ಇಂಗ್ಲಿಷ್ ಓದು ನಿಧಾನ. ಕಠಿಣ ಪದಗಳಿಗೆ ಮಕ್ಕಳಿಂದ ಅಥವಾ ಶಬ್ದಕೋಶದಿಂದ ಅರ್ಥ ಹುಡುಕಿಕೊಳ್ಳುತ್ತಾ ಹೋಗುತ್ತೇನೆ. ಹತ್ತನೇ ಕ್ಲಾಸಿನ ಸಿಹಿಪುಟ್ಟಿಗಿರುವ ಇಂಗ್ಲಿಷ್ ಶಬ್ದಸಂಪತ್ತು ನನಗಿಲ್ಲ. ಈ ಪರಾವಲಂಬಿತನ ಜನ್ಮೇಪಿ ಉಳಿಯುವಂತೆ ಕಾಣುತ್ತದೆ. ಈ ಪುಸ್ತಕ ಒಂಟಿತನವನ್ನು ನೀಗುತ್ತದೋ, ಹೆಚ್ಚಿಸುತ್ತದೋ ಎಂಬ ಆತಂಕದಲ್ಲಿ ಪುಸ್ತಕವನ್ನು ಕಂಕುಳಲ್ಲಿ ಇರುಕಿ ಹಡಗಿನತ್ತ ನಡೆದೆ.

ಹಡಗೆ ಅದು ? ತೇಲುವ ಅಮರಾವತಿ. ಕೆನಡಾ ಪ್ಲೇಸ್‌ನಲ್ಲಿ ನಿಂತಿತ್ತು. ಅದು ನನಗಾಗಿಯೇ ಕಾಯುತ್ತಿದೆ ಎಂದು ಬೀಗಿದೆ. ಯಾತಕ್ಕೂ ಇರಲಿ ಎಂದು ಭೂಮಿಯನ್ನೊಮ್ಮೆ ನೋಡಿದೆ. ಮೇಪಲ್ ಎಲೆಗಳು ಹೂವುಗಳಂತಾಗುತ್ತಿದ್ದವು. ಈ ಪ್ರಾಂತ್ಯದಲ್ಲಿ ಸೆಪ್ಟೆಂಬರ್- ಅಕ್ಟೋಬರ್ ತಿಂಗಳ ಫಾಲ್ ನೋಡುವುದೆಂದರೆ ಮರಮರವೂ ಒಂದು ವರ್ಣಚಿತ್ರ. ಭೂಮಿಯ ಸೊಬಗನ್ನು ಕಣ್ಣಿಗಿಳಿಸಿಕೊಂಡು ಹಡಗನ್ನೇರಿದೆ. ಡೈಮಂಡ್ ಪ್ರಿನ್ಸೆಸ್‌ಕ್ರೂಸ್ ಎಂಬ ಹದಿನೆಂಟು ಮಹಡಿಯ ಭವ್ಯ ರಾಜಕುಮಾರಿ ತೇಲುತ್ತ ವಾಲುತ್ತ ನಿಂತಿದ್ದಳು. ವಿಪರೀತ ಜನ. ಅಲಾಸ್ಕಗೆ ವರ್ಷದ ಕೊನೆಯ ಟ್ರಿಪ್ಪು. ಬಹುದೇಶೀಯರು, ಬಹುಭಾಷಿಕರು. ಒಂಟಿ ಜೀವ ನಾನೊಬ್ಬನೇ. ಒಮ್ಮೆ ರಂಗಸ್ವಾಮಿ ಅವರನ್ನು ಕಟುವಾಗಿ ಶಪಿಸಿದೆ. ಅಸಂಖ್ಯ ತಪಾಸಣೆ. ಸೆಕ್ಯುರಿಟಿ ಚೆಕ್. ಎರಡು ಕೆಂಪು ಸೂಟ್‌ಕೇಸುಗಳು ಮತ್ತು ಒಂದು ಬ್ಯಾಕ್ ಪ್ಯಾಕು. ಸಿಹಿಪುಟ್ಟಿ ಎಲ್ಲತರ ಮೇಲೆ ಎನಾಮೆಲ್ ಪೈಂಟಿನಿಂದ ಎನ್‌ಸಿ ಎಂದು ಬರೆದು ಗುರುತಿಸಲು ಸುಲಭ ಮಾಡಿದ್ದಳು. ಕೈಗೆ ಬಣ್ಣ ಸಿಕ್ಕರೆ ಅವಳು ಊಟದ ತಟ್ಟೆಯ ಮೇಲೂ ಚಿತ್ರ ಬಿಡಿಸಬಲ್ಲಳು. ಇಮಿಗ್ರೇಶನ್ ಮುಗಿಸಿದ ಮೇಲೆ ಲಗ್ಗೇಜ್ ಕೊಂಡೊಯ್ಯುವವ ಇಷ್ಟೇನಾ ಎಂದ. ಏಕೆಂದರೆ ಎಲ್ಲರೂ ಅತಿಭಾರ ಹೊತ್ತ ಕೂಲಿಗಳಂತೆ ಬಂದಿದ್ದರು. ಅಗತ್ಯ, ಅಗತ್ಯ ಎಂದು ಅನಗತ್ಯಗಳನ್ನೇ ಹೊತ್ತು ಬರುತ್ತಾರೆ. ಒಂದನ್ನೂ ಬಳಸದೆ ಮರಳಿ ಹೊತ್ತು ಹೋಗುತ್ತಾರೆ. ಅಗತ್ಯಗಳನ್ನು ಆದ್ಯತೆಯ ಮೇರೆಗೆ ಕಡಿತಗೊಳಿಸಿದರೆ ಲಗ್ಗೇಜು ಕಡಿಮೆಯಾಗುತ್ತದೆ. ಯಾತ್ರೆಗೆ ಹೋಗುವುದು ಅನುಭವದ ತೂಕ ಹೊತ್ತು ತರಲು, ಲಗ್ಗೇಜನ್ನಲ್ಲ.

ಸಂಬಂಧಗಳೂ ಸೇರಿದಂತೆ, ಏನನ್ನು ಹೊರಬೇಕು, ಏನನ್ನು ಹೊರಬಾರದು ಎಂದು ನಿರ್ಣಯಿಸುವುದು ಜೀವನಯಾತ್ರೆಯಲ್ಲಿ ಬಹಳ ಮುಖ್ಯ. ಬೋರ್ಡಿಂಗ್ ಪಾಸ್ ಪಡೆಯುವಾಗ ಅವನು ಕೇಳಿದ : ವೇರ್ ಈಸ್ ಜಕ್ಕೇನಹಲ್ಲಿ? ನಾನು ಹೇಳಿದೆ : ಪ್ಲೀಸ್ ಅರೇಂಜ್ ಫಾರ್ ರೀಫಂಡ್. ಹಿ ಹ್ಯಾಡ್ ಎ ಹಾರ್ಟ್ ಅಟ್ಯಾಕ್. ಸುಳ್ಳು ಹೇಳುವುದರಲ್ಲಿ ನನಗೆ ಸಾಕಷ್ಟು ನೈಪುಣ್ಯವಿದೆ. ಆ ಬಿಳಿಯ ನಂಬಿಕೊಂಡ. ಟೆಲಿಫೋನ್ ಎತ್ತಿಕೊಂಡು ಜಕ್ಕೇನಹಲ್ಲಿ ಈಸ್ ನಾಟ್ ಕಮಿಂಗ್.

ಹಿ ಹ್ಯಾಡ್ ಎ ಹಾರ್ಟ್ ಅಟ್ಯಾಕ್ ಎಂದ. ಅದು ಹದಿನೆಂಟು ಮಹಡಿಗಳಿಗೂ ಪ್ರತಿಧ್ವನಿಸತೊಡಗಿತು. ಅಲ್ಲಿ ಪ್ರತಿ ಪ್ರಯಾಣಿಕನನ್ನು ವಿಚಾರಿಸಿಕೊಳ್ಳಲು ಹತ್ತಾರು ವಿಭಾಗಗಳಿರುತ್ತವೆ. ಕ್ಯಾಬಿನ್, ರೆಸ್ಟೋರೆಂಟ್, ಮೆಡಿಕಲ್, ಸ್ಪೋರ್ಟ್ಸ್, ರಿಕ್ರಿಯೇಶನ್, ಕ್ಯಾಸಿನೋ, ಲೈಬ್ರರಿ, ಆರ್ಟ್ ಗ್ಯಾಲರಿ, ಸ್ಪಾ, ಥಿಯೇಟರ್, ಲಾಬಿ, ಲಾಂಡ್ರಿ ಎಲ್ಲ ಕಡೆಗೆ ಜಕ್ಕೇನಹಲ್ಲಿ ಈಸ್ ನಾಟ್ ವೆಲ್. ನಗಾತಿಹಲ್ಲಿ ಈಸ್ ಅಲೋನ್ ಇನ್ ದಿ ಕ್ಯಾಬಿನ್- ಎಂಬ ಸುದ್ದಿ ರವಾನಿಸಲ್ಪಟ್ಟಿತು. ನನಗೆ ರಂಗಸ್ವಾಮಿಯವರು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಬಿರುಸಾಗಿ ಎದೆಯುಬ್ಬಿಸಿ ಬೆವರಿಳಿಸುತ್ತಾ ವಾಕ್ ಮಾಡುತ್ತಿರುವ ದೃಶ್ಯ ನೆನಪಾಗುತ್ತಿತ್ತು. ನಾಚಿಕೆಯನ್ನು ತೋರಗೊಡದೆ ಹಡಗಿನ ಮೆಟ್ಟಲೇರತೊಡಗಿದೆ.
(ಮುಂದುವರಿಯುವುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT