ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಡಪದರ ಆನಂದದ ಗುರುಕುಲ

Last Updated 3 ಜನವರಿ 2018, 19:30 IST
ಅಕ್ಷರ ಗಾತ್ರ

ಈ ಬಾರಿ ಒಬ್ಬ ಕಲಾವಿದರ ಬಗ್ಗೆ ಬರೆಯುವವನಿದ್ದೇನೆ. ಆ ಮೂಲಕ ಕಲೆ, ಕಲಾವಿದ ಮತ್ತು ಸಮಾಜ ಇವುಗಳ ನಡುವಣ ಅಂತರ್‍ ಸಂಬಂಧವನ್ನು ಚರ್ಚಿಸುವವನಿದ್ದೇನೆ. ಕಲಾವಿದರ ಹೆಸರು ಆರ್.ಎಂ. ಹಡಪದ್ ಎಂದು. ಹೆಸರಿನಿಂದಲೇ ಚರ್ಚೆ ಆರಂಭ ಮಾಡುತ್ತೇನೆ.

ಹಡಪದ ಎಂಬುದು ಮೂಲತಃ ಒಂದು ಶೂದ್ರವೃತ್ತಿಯ ಹೆಸರು. ಈ ವೃತ್ತಿಯನ್ನು ಹಳೆಯ ಮೈಸೂರಿನವರು ಕ್ಷೌರಿಕ ಎಂತಲೂ, ಕರಾವಳಿ ಭಾಗದವರು ಭಂಡಾರಿ ಎಂತಲೂ,  ಸಂಸ್ಕೃತ ಭಾಷೆಯಲ್ಲಿ ನಾಪಿತ ಎಂತಲೂ ಕರೆಯುತ್ತಾರೆ. ಆರ್.ಎಂ. ಹಡಪದರ ಹಿರಿಯರು ಹಡಪದ ವೃತ್ತಿಯನ್ನು ತೊರೆದು ಬೇಸಾಯ ವೃತ್ತಿಗೆ ಬದಲಾಗಿದ್ದರು ಎಂದು ಕೇಳಿದ್ದೇನೆ. ಇರಲಿ.

ಹಡಪದವೆಂಬುದು ಶುದ್ಧೀಕರಿಸುವ ವೃತ್ತಿ. ಶುದ್ಧೀಕರಿಸುವವರು ಕೀಳು, ಶುದ್ಧೀಕರಿಸಲ್ಪಡುವವರು ಮೇಲು ಎಂಬುದು ಈ ಸಮಾಜದ ಶ್ರೇಣೀಕರಣ. ಆದರೆ, ಎಲ್ಲ ಶೂದ್ರ ವೃತ್ತಿಗಳಂತೆ ಈ ವೃತ್ತಿಯ ಜನರಲ್ಲಿಯೂ ಪ್ರತಿಭಾವಂತರು, ಕಲಾವಿದರು, ಸಂತರು, ವಚನಕಾರರು ಹುಟ್ಟಿ ಬಂದಿದ್ದಾರೆ. ಪ್ರತಿಭೆಯನ್ನು ಕೇವಲ ಬೌದ್ಧಿಕವಾಗಿ ಗುರುತಿಸದೆ ಸರ್ವಾಂಗೀಣ ಪ್ರತಿಭೆಯನ್ನು ಅಳೆಯುವುದು ಸಾಧ್ಯವಾಗುವುದಾದರೆ, ಆಗ ಶೂದ್ರ ಜನಾಂಗಗಳು ಮೇಲ್ಜಾತಿ–ಮೇಲ್ವರ್ಗಗಳಿಗಿಂತ ತುಂಬ ತುಂಬ ಮುಂದೆ ನಿಲ್ಲಬಲ್ಲವು. ಇರಲಿ. ಹಡಪದ ವೃತ್ತಿಯವರು ಪಾರಂಪರಿಕವಾಗಿ ಬಡವರು, ಆರಕ್ಕೇರದೆ ಮೂರಕ್ಕಿಳಿಯದೆ ಬದುಕಿ ಬಂದವರು. ಇತ್ತ ಜಮೀನುದಾರನೂ ಅಲ್ಲದ, ಅತ್ತ ಅಸ್ಪೃಶ್ಯ ದಲಿತನೂ ಅಲ್ಲದ, ನಾಪಿತ ಕರ್ಮ ಮಾಡಿ ಗ್ರಾಮಸ್ಥರಿಂದ ಕಾಳುಕಡ್ಡಿ ಸ್ವೀಕರಿಸಿಕೊಂಡು ಬಾಳುವೆ ಮಾಡುತ್ತಿದ್ದ ಮಂದಿ ಇವರು.

ಆರ್.ಎಂ. ಹಡಪದರು ಮೂಲತಃ ಬಾದಾಮಿಯವರು. ಅವರು ನನಗೆ ಗುರುಗಳು. ಅವರ ಅಡಿಯಲ್ಲಿ ಕೆಲಕಾಲ ಚಿತ್ರಕಲೆಯ ಅಭ್ಯಾಸ ಮಾಡಿದ್ದೇನೆ. ಎಲ್ಲ ಶಿಷ್ಯರನ್ನೂ ಗೆಳೆಯರಂತೆ ಕಾಣಬಲ್ಲವರಾಗಿದ್ದ ಹಡಪದರು ನನಗೂ ತಮ್ಮ ಗೆಳೆತನದ ಲಾಭ ಉಣಿಸಿದ್ದರು. ನಾನವರನ್ನು ಕಾಣುವ ಹೊತ್ತಿಗೆ ಹಡಪದರು ಬೆಂಗಳೂರು ನಗರವನ್ನು ತಲುಪಿ, ಶೇಷಾದ್ರಿಪುರದ ಸ್ವಸ್ತಿಕ್ ಚೌಕದ ಬಳಿಯ ತರಕಾರಿ ಮಾರುಕಟ್ಟೆಯ ಹಿಂಬದಿಯ ಒಂದು ಕಲ್ಲುಮಂಟಪದಲ್ಲಿ ಕಲಾಶಾಲೆ ನಡೆಸುತ್ತಿದ್ದರು.

ತಾತ್ಕಾಲಿಕ ಕಲಾಶಾಲೆಯನ್ನು ಈ ಕಲ್ಲುಮಂಟಪದಿಂದ ಎತ್ತಂಗಡಿ ಮಾಡಲು ಹರಸಾಹಸ ಪಡುತ್ತಿದ್ದ ನಗರಪಾಲಿಕೆಯು, ಹಾಗೆ ಮಾಡಲಾಗದೆ, ಕಲಾವಿದ– ಕಲಾಶಾಲೆ ಹಾಗೂ ತರಕಾರಿ ಕಸ ಮೂರನ್ನೂ ಅಲ್ಲಿಯೇ ಉಳಿಸಿತ್ತು. ಇದಾವುದರ ಪರಿವೆಯೂ ಇಲ್ಲದ ಹಡಪದರು ತಮ್ಮ ವೃತ್ತಿ ಹಾಗೂ ಪ್ರವೃತ್ತಿ ಎರಡೂ ಆಗಿದ್ದ, ಕಲೆಯ ಅಭ್ಯಾಸದಲ್ಲಿ ಮೂರೂ ಹೊತ್ತು ಆನಂದದಿಂದ ಮುಳುಗಿರುತ್ತಿದ್ದರು. ಅಲೆಮಾರಿ ಜನಾಂಗಗಳ ಗಟ್ಟಿತನವನ್ನು ನಾನು ಹಡಪದರಲ್ಲಿ ಕಂಡಿದ್ದೇನೆ. ಊರ ಬಯಲುಗಳಲ್ಲಿ ಹರಿದ ಸೀರೆಗಳನ್ನು ತೇಪೆಹಚ್ಚಿ ಟೆಂಟ್‍ಗಳನ್ನು ಹಾಕಿಕೊಂಡು, ಊರವರ ಚರ್ಮವಾದ್ಯಗಳನ್ನು ರಿಪೇರಿ ಮಾಡಿಕೊಂಡು, ಅವುಗಳನ್ನು ಅಸಾಧಾರಣವಾಗಿ ನುಡಿಸಬಲ್ಲವರೂ ಆದ ಅಲೆಮಾರಿಗಳಂತೆ ಹಡಪದರೂ ಸಹ. ತಾತ್ಕಾಲಿಕತೆ ಅವರನ್ನು ಯಾವತ್ತೂ ವಿಚಲಿತಗೊಳಿಸಲಿಲ್ಲ.

ನಾನು ತಿಳಿದಂತೆ, ಹಡಪದರಿಗೆ ಗುರುದಕ್ಷಿಣೆ ಕೊಡುತ್ತಿದ್ದ ಶಿಷ್ಯರೂ ಇದ್ದರು, ಆದರೆ ಕಡಿಮೆ ಇದ್ದರು. ಊಟ–ತಿಂಡಿಗಳ ವ್ಯವಸ್ಥೆಯೂ ಅಷ್ಟೆ, ಕಡಿಮೆಯಿತ್ತು. ಎದುರಿಗಿನ ಉಡುಪಿ ಹೋಟೆಲೇ ಗತಿ ಅವರ ಊಟಕ್ಕೆ ತಿಂಡಿಗೆ. ನನಗಿನ್ನೂ ನೆನಪಿದೆ, ಹಡಪದರನ್ನು ನಾನು ಮೊದಲ ಬಾರಿ ಭೆಟ್ಟಿಯಾದದ್ದು ಕಲಾಶಾಲೆಯ ಎದುರಿಗಿನ ಹೋಟೆಲಿನ ಬಾಗಿಲಿನಲ್ಲಿ. ಯಾವುದಾದರೂ ಕಲಾಶಾಲೆಯೊಂದರಲ್ಲಿ ಚಿತ್ರಕಲೆಯ ಅಭ್ಯಾಸ ಮಾಡಬೇಕೆಂಬ ಆಕಾಂಕ್ಷೆಯಿಂದ ನಾನು ಕೆನ್‍ ಕಲಾಶಾಲೆ ಹುಡುಕಿಕೊಂಡು ಅಲ್ಲಿಗೆ ಹೋಗಿದ್ದೆ. ಆಗಷ್ಟೆ ಸೆಂಟ್ರಲ್ ಕಾಲೇಜಿನ ನಾಟಕ ವಿಭಾಗದಲ್ಲಿ ಅಧ್ಯಾಪಕನಾಗಿ ಸೇರಿದ್ದೆ. ಅಂದು ಅವರ ಜೊತೆಗೆ, ಕೃಷ್ಣವರ್ಣದವರೂ ತುಂಬು ಹೃದಯದವರೂ ಆದ ಅವರ ಸಹೋದ್ಯೋಗಿ ಧನಲಕ್ಷ್ಮಿಯವರು ಇದ್ದರು. ಹೋಟೆಲಿನಿಂದ ಹೊರಬರುತ್ತಿದ್ದ ಹಡಪದರು ನನ್ನನ್ನು ಕಂಡು, ಮತ್ತೊಮ್ಮೆ ಒಳಹೊಕ್ಕು, ನನಗೆ ಕಾಫಿ ಕುಡಿಸಿ ಮಾತನಾಡಿಸಿದ್ದರು. ಚಿತ್ರಕಲೆ ಹೇಳಿಕೊಡಲು ಒಪ್ಪಿದ್ದ ಹಡಪ
ದರು, ಕೆನ್ ಕಲಾಶಾಲೆ ನಿಮಗೆ ದೂರ, ವಿದ್ಯಾರ್ಥಿಗಳಿಗೆ ಚಿತ್ರಕಲೆಯ ಅಭ್ಯಾಸ ಮಾಡಿಸಲಿಕ್ಕೆ ನಾನು ಸೆಂಟ್ರಲ್ ಕಾಲೇಜಿಗೇ ಬರುತ್ತಿರುತ್ತೇನೆ, ನೀವು ಅಲ್ಲಿಗೇ ಬನ್ನಿ ಎಂದಿದ್ದರು.

ನಾನು ಕೇವಲ ಆರು ತಿಂಗಳ ಕಾಲ ಸೆಂಟ್ರಲ್‍ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ಮಾಡಿದೆ. ಆನಂತರ ಉದ್ಯೋಗವೆಂಬ ಕಾಯಂ ಸ್ಥಿತಿಗೆ ನಮಸ್ಕಾರ ಹೇಳಿ, ಪೂರ್ಣಾವಧಿ ರಂಗಕರ್ಮಿ ಎಂಬ ತಾತ್ಕಾಲಿಕ ಸ್ಥಿತಿಗೆ ಕಾಯಂ ಆಗಿ ಸ್ಥಳಾಂತರಗೊಂಡೆ. ಆದರೆ ಸೆಂಟ್ರಲ್‍ ಕಾಲೇಜಿನಲ್ಲಿ ಇದ್ದ ಅಷ್ಟೂಸಮಯ ಹಡಪದರ ಅಡಿಯಲ್ಲಿ ಶಿಷ್ಯವೃತ್ತಿ ಮಾಡಿದೆ. ಹಡಪದ್ ಒಳ್ಳೆಯ ಗುರುಗಳಾಗಿದ್ದರು.ತನ್ನದೇ ಪಡಿಯಚ್ಚುಗಳನ್ನು ತಯಾರಿಸಲಿಲ್ಲ ಅವರು. ಸ್ವತಂತ್ರರಾದ ಹಾಗೂ ಪ್ರತಿಭಾನ್ವಿತರಾದ ಯುವ ವ್ಯಕ್ತಿತ್ವಗಳನ್ನು ರೂಪಿಸಿದರು. ಕಲಾ ವಿದ್ಯಾರ್ಥಿಯೊಬ್ಬ ಎಲ್ಲವನ್ನೂ ಕಾಣಬೇಕು, ಎಲ್ಲವನ್ನೂ ಕಲಿಯಬೇಕು, ಯಾವುದನ್ನೂ ಕಡೆಗಣಿಸಬಾರದು ಎಂದು ಹುರಿದುಂಬಿಸುತ್ತಿದ್ದರು. ಹಡಪದರು ಒಬ್ಬ ಸಮರ್ಥ ಕುಶಲಕರ್ಮಿ ಕೂಡ. ಅವರ ಕೈಗಳಿಗೆ ಬೆರಗುಗೊಳಿಸುವಂತಹ ಕೌಶಲ ದಕ್ಕಿತ್ತು. ಹಾಗಾಗಿ ಶಿಷ್ಯರಿಗೆ ಕೌಶಲದ ಭದ್ರಬುನಾದಿ ಹಾಕಿಕೊಡಬಲ್ಲವರಾಗಿದ್ದರು ಹಡಪದ್.

ಅಂದಿನ ದಿನಮಾನಗಳ ಕೆನ್‍ ಕಲಾಶಾಲೆಯ ಬಹುಮುಖ್ಯ ಲಕ್ಷಣವೆಂದರೆ ಅದರ ಹೊರಗಿನ ದಾರಿದ್ರ್ಯ ಹಾಗೂ ಒಳಗಿನ ಗಟ್ಟಿತನ. ಬೃಹತ್ ಕಟ್ಟಡ, ಆಧುನಿಕ ವ್ಯವಸ್ಥೆ, ಅಪಾರ ಧನರಾಶಿ ಯಾವುದೂ ಇರದ ಶಾಲೆಯೊಂದು ಕೇವಲ ಒಬ್ಬ ಒಳ್ಳೆಯ ಗುರುವಿನ ಕಾರಣದಿಂದಾಗಿ ಹೇಗೆ ಉತ್ತಮ ಶಿಕ್ಷಣ ನೀಡಬಲ್ಲುದು ಎಂಬುದಕ್ಕೆ ಉದಾಹರಣೆಯಂತಿತ್ತು ಕೆನ್‍ ಕಲಾಶಾಲೆ. ಕಲ್ಲುಮಂಟಪದ ಅಂಗಳದಲ್ಲಿ ಅಂಕುಡೊಂಕಾದ ಕಂಬಗಳನ್ನು ನೆಟ್ಟು, ಮಾಡಿಗೆ ತಗಡು ಹಾಸಿ ತಾತ್ಕಾಲಿಕವಾದ ಕಟ್ಟಡವನ್ನು ರೂಪಿಸಲಾಗಿತ್ತು. ಅಲ್ಲಿಯೇ ಶಾಲೆ, ಅಲ್ಲಿಯೇ ಶಯನ, ಅಲ್ಲಿಯೇ ಗ್ರಂಥಾಲಯ ಎಲ್ಲವೂ. ಆದರೆ ಶಾಲೆ ಮೂರೂ ಹೊತ್ತೂ ಗಿಜಿಗಿಜಿ ಎನ್ನುತ್ತಿರುತ್ತಿತ್ತು. ಪೂರ್ಣಾವಧಿ ಕಲಾ ವಿದ್ಯಾರ್ಥಿಗಳು, ಇತರೆ ಮಾಧ್ಯಮಗಳ- ನನ್ನಂತಹ ಆಸಕ್ತರು, ವಿವಿಧ ಬಗೆಯ ಡ್ರಾಪ್‍ ಔಟ್‍ಗಳು, ಬುದ್ಧಿಜೀವಿಗಳು, ಚಳವಳಿಗಾರರು.... ಆದಿಯಾಗಿ ಬೀಡಾಡಿ ನಾಯಿಗಳವರೆಗೆ ಎಲ್ಲರೂ ಸಮಾನವಾಗಿ ಅಲ್ಲಿ ಆಶ್ರಯ ಪಡೆದಿರುತ್ತಿದ್ದರು. ಕೆನ್ ಕಲಾಶಾಲೆಯ ಈ ಬೆರಕೆತನವೇ ಅದರ ಗಟ್ಟಿತನವೂ ಆಗಿತ್ತು. ಒಟ್ಟಿನಲ್ಲಿ ಆನಂದದ ಗುರುಕುಲವಾಗಿತ್ತು ಅದು.

ಸಂದರ್ಶಿಸಲಿಕ್ಕೆಂದು ಅಲ್ಲಿಗೆ ಆಗಾಗ ಹೆಸರಾಂತ ಕಲಾವಿದರು ಬರುತ್ತಿದ್ದರು. ಬರೋಡಾ, ಶಾಂತಿನಿಕೇತನ, ಪ್ಯಾರಿಸ್ಸು, ಲಂಡನ್ನು ಇತ್ಯಾದಿ, ಹೆಚ್ಚು ಪ್ರಸಿದ್ಧವೂ ಹೆಚ್ಚು ಸುವ್ಯವಸ್ಥಿತವೂ ಆದ ಕಲಾಶಾಲೆಗಳನ್ನು ಕಂಡು ಬಂದವರಾಗಿರುತ್ತಿದ್ದರು ಅವರೆಲ್ಲ. ಕೆನ್ ಶಾಲೆಯ ಸಹಜ ಬಡತನ ಹಾಗೂ ಸಮಯಸ್ಫೂರ್ತಿಗಳು ಅವರನ್ನು ಬೆರಗುಗೊಳಿಸುತ್ತಿತ್ತು.

ಹಡಪದರ ಶಾಲೆಯನ್ನು ಗುರುಕುಲವೆಂದು ಕರೆದೆ ನಾನು, ಬೇಕೆಂದೇ ಹಾಗೆ ಕರೆದೆ. ಗುರುಕುಲ ವ್ಯವಸ್ಥೆಯ ಬಗ್ಗೆ ಈಚೆಗೆ ತುಂಬ ಚರ್ಚೆ ನಡೆದಿದೆ. ಗುರುಕುಲಗಳೆಂಬ ಹೆಸರು ಹೊತ್ತ ಅನೇಕ ಸಂಸ್ಥೆಗಳು ಅನೇಕ ಕಡೆಗಳಲ್ಲಿ ಮೇಲೆದ್ದಿವೆ. ಹೆಚ್ಚಿನವು ಕಾಂಕ್ರೀಟಿನ ದುಬಾರಿ ಆಶ್ರಮಗಳು. ಅವುಗಳ ಕಟ್ಟಡಗಳನ್ನು ಹಿಂದೂ ಧಾರ್ಮಿಕ ಮಾದರಿ ಎಂದು ಕರೆಯಬಹುದಾದ, ಒಂದು ಕಲ್ಪಿತ ಮಾದರಿಯಲ್ಲಿ ಕಟ್ಟಲಾಗಿರುತ್ತದೆ. ವಿದ್ಯಾರ್ಥಿಗಳನ್ನು ಅನಗತ್ಯವಾಗಿ ಮೂಗುಹಿಡಿಸಿ ಕೂರಿಸಲಾಗಿರುತ್ತದೆ. ಎಲ್ಲೆಂದರಲ್ಲಿ ಕಾವಿ ಬಳಿಯಲಾಗಿರುತ್ತದೆ. ವಿದ್ಯಾರ್ಥಿಗಳಿಂದ ಭಜನೆಗಳನ್ನು ಹಾಡಿಸಲಾಗುತ್ತದೆ ಹಾಗೂ ವಿಧ್ವಂಸಕ ತಾತ್ವಿಕತೆಗಳನ್ನು ಅವರಿಗೆ ಬೋಧಿಸಲಾಗುತ್ತದೆ. ಮುಸಲ್ಮಾನ ಮದರಸಾಗಳ ಹಿಂದೂನಕಲುಗಳಂತೆ ಕಾಣುತ್ತವೆ ಹೆಚ್ಚಿನ ಗುರುಕುಲಗಳು ನನಗೆ.
ಗುರುಕುಲಗಳ ಕೇಂದ್ರದಲ್ಲಿರಬೇಕಾದದ್ದು ಒಬ್ಬ ಸಮರ್ಥ ಗುರುವೇ ಹೊರತು, ಕುಲವೂ ಅಲ್ಲ ಕಟ್ಟಡವೂ ಅಲ್ಲ. ಇಂದಿನ ಹೆಚ್ಚಿನ ಗುರುಕುಲಗಳು ಮೇಲ್ಜಾತಿ– ಮೇಲ್ವರ್ಗಗಳ ಧಾರ್ಮಿಕ ಹಳಹಳಿಕೆಯ ಫಲಗಳು ಎಂಬುದು ನನ್ನ ಗಟ್ಟಿ ಅಭಿಪ್ರಾಯ.

ಆದರೆ ಉತ್ತರ ಕರ್ನಾಟಕದ ದೂರದ ಬಾದಾಮಿಯಿಂದ ಬೆಂಗಳೂರಿಗೆ ಬಂದು, ಶೇಷಾದ್ರಿಪುರದ ತರಕಾರಿ ಮಾರುಕಟ್ಟೆಯ ಹಿಂಬದಿಯ ಕಲ್ಲುಮಂಟಪದಲ್ಲಿ ನೆಲೆಸಿದ ಹಡಪದರು ನಿರ್ಮಿಸಿದ- ಕೆನ್ ಎಂಬ ಅಪ್ಪಟ ಆಂಗ್ಲ ಹೆಸರಿನ, ಬೆರಕೆ ಕಲಾಶಾಲೆಯು ಗುರುಕುಲ ಪದ್ಧತಿಗೆ ಒಳ್ಳೆಯ ಮಾದರಿಯಾಗಿತ್ತು ಎಂದು ನಾನೆಂದರೆ ನೀವು ಹುಬ್ಬೇರಿಸಬಹುದು. ಆದರೆ ಕೊಂಚ ಯೋಚಿಸಿ.

ಹಡಪದರು ಸಮಕಾಲೀನರು. ಆದರೆ ಆ ಬಗ್ಗೆ ಅವರಿಗೆ ಅತಿಯಾದ ಪಾಪಪ್ರಜ್ಞೆಯೇನೂ ಇರಲಿಲ್ಲ. ಇಷ್ಟಕ್ಕೂ ಅವರು ಪರಂಪರೆಯನ್ನು ತಿರಸ್ಕಾರದಿಂದ ಕಂಡವರಲ್ಲ. ಎಲ್ಲಕ್ಕಿಂತ ಮಿಗಿಲಾಗಿ ವಿದ್ಯಾರ್ಥಿಗಳು ನಿರಂಕುಶಮತಿಗಳಾಗಿರಬೇಕು ಎಂಬ ನಂಬಿಕೆಯುಳ್ಳವರಾಗಿದ್ದರು ಅವರು. ಸೀಮಿತ ಬೌದ್ಧಿಕ ವಲಯಗಳಿಂದ, ಆದರೆ ಶ್ರೀಮಂತ ಸಾಮಾಜಿಕ ಹಿನ್ನೆಲೆಗಳಿಂದ ಬಂದವರಾಗಿರುತ್ತಾರೆ ವಿದ್ಯಾರ್ಥಿಗಳು ಎಂಬ ಅರಿವಿತ್ತು ಹಡಪದರಿಗೆ. ತಾನೇ ಅಂತಹದ್ದೊಂದು- ಸೀಮಿತ ಬೌದ್ಧಿಕ ಹಾಗೂ ಅಸೀಮ ಸಾಮಾಜಿಕ ಹಿನ್ನೆಲೆಯಿಂದ ಬಂದವರಾಗಿದ್ದರುತಾನೆ? ಶೂದ್ರ ವೃತ್ತಿಗಳು, ನಾವೆಲ್ಲ ತಿಳಿದಿರುವಂತೆ ಕೇವಲ ಮುಚ್ಚಿಡಬೇಕಾದ ಜಾತಿ ಅಸಹ್ಯಗಳು ಮಾತ್ರವೇ ಅಲ್ಲ. ತೆರೆದಿಡಬೇಕಾದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಿರಿಮೆಯೂ ಅಡಗಿದೆ ಅವುಗಳಲ್ಲಿ ಎಂಬ ಸಂಗತಿಯು ಹಡಪದರನ್ನು ಕಂಡಾಗ ಅರಿವಿಗೆ ಬರುತ್ತಿತ್ತು.

ತನ್ನ ವಿದ್ಯಾರ್ಥಿಯ ಅರಿವು ಹಾಗೂ ಅನುಭವ ಎರಡನ್ನೂ ಸಮರ್ಥವಾಗಿ ನಿಭಾಯಿಸಬಲ್ಲವರಾಗಿದ್ದರು ಹಡಪದರು. ಅರಿವನ್ನು ವಿಸ್ತರಿಸುತ್ತಲೇ ಅವರಿಗೆ ಅನುಭವ ಬದ್ಧತೆಯನ್ನು ಕಲಿಸುತ್ತಿದ್ದರು ಹಡಪದರು. ಇದು ಬಹಳ ಮುಖ್ಯವಾದ ಸಂಗತಿ. ಏಕೆಂದರೆ, ಇಂದಿನ ಹೆಚ್ಚಿನ ಗುರುಕುಲಗಳು ವಿದ್ಯಾರ್ಥಿಗಳ ಅರಿವು, ಅನುಭವ ಎರಡಕ್ಕೂ ಬೇಲಿ ಹಾಕುತ್ತವೆ. ಇತರರ ಬಗ್ಗೆ ತಾವೂ ಹೆದರುತ್ತವೆ ಹಾಗೂ ತಮ್ಮ ವಿದ್ಯಾರ್ಥಿಗಳಿಗೂ ಹೆದರುವಂತೆ ಕಲಿಸಿಕೊಡುತ್ತವೆ ಇವು. ಹಡಪದರು ಸಹಜ ಗುರುಗಳಾಗಿದ್ದರು. ಅವರು ಒಳ್ಳೆಯ ಕಲಾವಿದರೂ ಆಗಿದ್ದರು. ವಾಸ್ತವಿಕ ಶೈಲಿಯವು ಎನ್ನಬಹುದಾದ ಅವರ ವ್ಯಕ್ತಿಚಿತ್ರಗಳನ್ನು ಅರ್ಥಾತ್ ಪೋರ್‌ಟ್ರೇಟ್‌ಗಳನ್ನು ಮೆಚ್ಚಿದ್ದೇನೆ. ಅವರ ಸ್ಥಿರ ಚಿತ್ರಗಳು ಅರ್ಥಾತ್ ಸ್ಟಿಲ್‍ಲೈಫ್‍ಗಳನ್ನು ಕೂಡ ಮೆಚ್ಚಿದ್ದೇನೆ. ದೊಡ್ಡ ಕ್ಯಾನ್‍ವಾಸುಗಳಲ್ಲಿ ಕೆಲವೊಮ್ಮೆ ಹೆಚ್ಚು ಕಲಾತ್ಮಕವಾಗಿರಬೇಕೆಂಬ ಬಯಕೆಯಿಂದಾಗಿ ಚಿತ್ರಗಳಲ್ಲಿ ಅತಿಯಾದ ಸಾಂಕೇತಿಕತೆ ಹಾಗೂ ಅತಿಯಾದ ಅರ್ಥಗಾರಿಕೆ ನುಸುಳಿ ಬಿಡುತ್ತಿತ್ತು. ಬಣ್ಣ ವಿನ್ಯಾಸ ಹಾಗೂ ರಾಚನಿಕತೆ ಕೊಂಚ ಅತಿಯಾಯಿತೇನೋ ಎಂದು ಅನ್ನಿಸತೊಡಗುತ್ತಿತ್ತು. ಪಾಕ ಸಾಧಿಸುವ ಮೊದಲೇ ಒಲೆಯಿಂದ ಇಳಿಸಿ ಬಡಿಸಿದ ಅಡುಗೆಯೇನೋ ಎಂದು ಕೆಲವು ಕೃತಿಗಳನ್ನು ಕಂಡಾಗ ಅನ್ನಿಸುತ್ತಿತ್ತು. ಅದೇನೇ ಇರಲಿ, ಅವರ ರಾಚನಿಕ ಕೌಶಲ ಮಾತ್ರ ಅನುಮಾನಾತೀತವಾದದ್ದಾಗಿತ್ತು.

ಹೆಬ್ಬಾರರ ಗೆರೆಗಳಿಗಿದ್ದ ಲಾಲಿತ್ಯ ಹಡಪದರ ಗೆರೆಗಳಿಗಿರಲಿಲ್ಲ ನಿಜ. ಆದರೆ ಕಸುವಿನಿಂದ ಕೂಡಿದ ಗೆರೆಗಳಾಗಿದ್ದವು ಹಡಪದರವು. ಇನ್ನು ಬೌದ್ಧಿಕತೆ; ಹಡಪದರು ಬುದ್ಧಿಜೀವಿಯಾಗಿರಲಿಲ್ಲ. ಅವರೊಬ್ಬ ಸಾವಯವ ಜೀವಿಯಾಗಿದ್ದರು. ಅವರಲ್ಲಿ ಬೌದ್ಧಿಕತೆಯೆಂಬುದು ಮೆದುಳಿನಿಂದ ಹೊರಟು ಕೆಳಕ್ಕಿಳಿಯುತ್ತಿರಲಿಲ್ಲ, ಕೈಗಳಿಂದ ಹೊರಟು ಮೇಲಕ್ಕೇರುತ್ತಿತ್ತು. ಹಾಗಾದಾಗಲೆಲ್ಲ ಅವರ ಕೃತಿಗಳು ಗೆಲ್ಲುತ್ತಿದ್ದವು. ಒಟ್ಟಾರೆಯಾಗಿ ಹಡಪದರು ಒಂದು ಸಂಕ್ರಮಣ ವ್ಯಕ್ತಿತ್ವವಾಗಿದ್ದರು ಹಾಗೂ ಆಕರ್ಷಕ ವ್ಯಕ್ತಿಯಾಗಿದ್ದರು. ಇತ್ತ ಆಧುನಿಕತೆ ಅತ್ತ ಪರಂಪರೆ, ಇತ್ತ ಬೆಂಗಳೂರೆಂಬ ಮಹಾನಗರ ಅತ್ತ ಬಾದಾಮಿಯೆಂಬ ಮಹಾಸಾಮ್ರಾಜ್ಯ, ಜೊತೆಗೆ ಬಡತನ ಎಲ್ಲವೂ ಸೇರಿ ಹಡಪದರನ್ನು ರೂಪಿಸಿದ್ದವು.

ಅದೇನೇ ಇರಲಿ, ಹಡಪದರನ್ನು ಸುಲಭವಾಗಿ ಗ್ರಹಿಸುವುದು ಸಾಧ್ಯವಿಲ್ಲ. ಸುಲಭವಾಗಿ ತಳ್ಳಿ ಹಾಕುವುದೂ ಸಾಧ್ಯವಿಲ್ಲ. ಮತ್ತೇನಲ್ಲದಿದ್ದರೂ ಅವರು ರೂಪಿಸಿದ ಸಾಲು ಸಾಲುಶಿಷ್ಯಗಣದ ಪ್ರತಿಭೆಯೇ ಹಡಪದರ ಪ್ರತಿಭೆಗೂ ಸಾಕ್ಷಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT