ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಮತ್ತು ಅಹಂಕಾರಗಳ ಶಕ್ತಿ

Last Updated 22 ಜನವರಿ 2012, 19:30 IST
ಅಕ್ಷರ ಗಾತ್ರ

ನಮ್ಮ ಪುರಾಣದ ಕಥೆಗಳು ತುಂಬ ಸುಂದರವಾದವು. ಅವುಗಳಿಂದ ದೊರೆಯುವ ನೀತಿಪಾಠ ಮುಖ್ಯವಾದರೂ ಕೆಲವೊಮ್ಮೆ ನಮ್ಮನ್ನು ತುಂಬ ಚಿಂತನೆಗೆ ತಳ್ಳುತ್ತವೆ.

ಗಜೇಂದ್ರ ಮೋಕ್ಷದ ಕಥೆ ನಮಗೆಲ್ಲ ಪರಿಚಿತವಾದದ್ದು. ಒಂದು ಮದಿಸಿದ ಆನೆ ಪರಿವಾರದೊಂದಿಗೆ ಕೊಳದ ನೀರಿಗಿಳಿದಾಗ ಅಲ್ಲಿದ್ದ ಒಂದು ಮೊಸಳೆ ಅದರ ಕಾಲು ಹಿಡಿಯುತ್ತದೆ. ಎಷ್ಟು ಪ್ರಯತ್ನಿಸಿದರೂ, ಬಲ ಪ್ರಯೋಗಿಸಿದರೂ ಮೊಸಳೆಯ ಹಿಡಿತದಿಂದ ಪಾರಾಗಲು ಸಾಧ್ಯವಾಗುವುದಿಲ್ಲ. ಆಗ ಆನೆ ಮಹಾವಿಷ್ಣುವನ್ನು ಪ್ರಾರ್ಥಿಸಿದಾಗ ಆತ ಬಂದು ತನ್ನ ಸುದರ್ಶನ ಚಕ್ರದಿಂದ ಮೊಸಳೆಯ ಬಾಯಿ ಕತ್ತರಿಸಿ ಆನೆಯನ್ನು ಪಾರು ಮಾಡುತ್ತಾನೆ. ಆಗ ಆನೆ ಮತ್ತು ಮೊಸಳೆಗಳು ದೇವತೆಗಳಾಗಿ ನಿಲ್ಲುತ್ತವೆ. ಅವುಗಳು ಶಾಪದಿಂದ ಹೀಗೆ ಪ್ರಾಣಿಗಳಾಗಿದ್ದು ವಿಷ್ಣುವಿನ ದರ್ಶನದಿಂದ ಅವುಗಳ ಶಾಪ ವಿಮುಕ್ತಿಯಾಗುತ್ತದೆ.

ಇವರಿಬ್ಬರೂ ಯಾವ ದೇವತೆಗಳು? ಯಾಕೆ ಶಾಪ ಬಂದಿತು ಎನ್ನುವುದಕ್ಕೆ ಎರಡು ಮೂರು ಕಥೆಗಳಿವೆ. ಅವುಗಳಲ್ಲಿ ಒಂದು ಹೀಗಿದೆ.

ಕರ್ದಮ ಮತ್ತು ದೇವಹೂತಿಯರಿಗೆ ಅವಳಿ ಮಕ್ಕಳು ಜಯ-ವಿಜಯ. ಅವರು ಬ್ರಹ್ಮನ ಕೃಪೆಯಿಂದ ಹುಟ್ಟಿದವರು. ಇವರು ವಿಷ್ಣು ಭಕ್ತಿ ಪರಾಯಣರು. ಇವರ ವಿಷ್ಣು ಭಕ್ತಿ ಯಾವ ಮಟ್ಟದ್ದೆಂದರೆ ಪ್ರತಿದಿನ ಪೂಜಾ ಸಮಯಕ್ಕೆ ಭಗವಂತ ಇವರಿಗೆ ಸಾಕ್ಷಾತ್ ದರ್ಶನವನ್ನು ನೀಡುತ್ತಿದ್ದನಂತೆ. ಇವರು ಸದಾಕಾಲ ಭಗವಂತನ ಮನೆಯ ದ್ವಾರಪಾಲಕರಾಗಿ ಅವನ ಸಾನ್ನಿಧ್ಯದಲ್ಲೇ ಇರುತ್ತಿದ್ದವರು.

ಮರುತ್ತರಾಜ ಒಮ್ಮೆ ಬಹುದೊಡ್ಡ ಯಾಗವನ್ನು ಮಾಡಿದ. ಅದಕ್ಕೆ ಜಯ, ಯಜ್ಞಬ್ರಹ್ಮನಾಗಿ ಕಾರ್ಯನಿರ್ವಹಿಸಿದ. ವಿಜಯ, ಯಾಗದ ಪ್ರಧಾನ ಋತ್ವಿಜನಾಗಿ ನಿಂತ. ಯಾಗ ಪರಿಪೂರ್ಣವಾಯಿತು. ಜಗವೆಲ್ಲ ಮೆಚ್ಚಿತು. ಅದರಲ್ಲೂ ಜಯ-ವಿಜಯರಿಬ್ಬರೂ ಅದನ್ನು ನಿಭಾಯಿಸಿದ ರೀತಿಯನ್ನು ಎಲ್ಲರೂ ಹೊಗಳಿದರು. ರಾಜ ಮರುತ್ತನಿಗೆ ಬಹು ಸಂತೋಷವಾಗಿ ಅಪಾರವಾದ ಸಂಪತ್ತನ್ನು ಇಬ್ಬರಿಗೂ ನೀಡಿದ. ಮರಳಿ ತಮ್ಮ ಮನೆಗಳಿಗೆ ಬರುವಾಗ ಸೋದರರ ನಡುವೆ ವಾದ ಬೆಳೆಯಿತು. ಬಂದ ಸಂಪತ್ತನ್ನು ಸಮವಾಗಿ ಹಂಚಿಕೊಳ್ಳೋಣ ಎಂದು ಒಬ್ಬನೆಂದರೆ ಇನ್ನೊಬ್ಬ ಅದು ಸರಿಯಲ್ಲ ನಾವು ಸಂಪಾದಿಸಿದ್ದು ನಮಗೆ ಎಂದ. ಮಾತಿಗೆ ಮಾತು ಬೆಳೆದು ಇಬ್ಬರಲ್ಲೂ ಸಿಟ್ಟು ಏರಿತು. ಆಗ ಜಯ ಕೋಪದಿಂದ, `ನೀನು ಮಹಾ ಜಿಪುಣ, ಮೊಸಳೆಯಾಗಿ ಹೋಗು~ ಎಂದು ಶಾಪವಿತ್ತ. ಆಗ ವಿಜಯನೇನು ಕಮ್ಮಿ,  `ನಿನ್ನಂತಹ ಅಹಂಕಾರಿ ಮತ್ತಾರೂ ಇಲ್ಲ, ನೀನು ಆನೆಯಾಗಿ ಹೋಗಿ ಬದುಕು~ ಎಂದು ಶಾಪ ಕೊಟ್ಟ. ಇಬ್ಬರೂ ತಪಸ್ವಿಗಳಾದ್ದರಿಂದ ಶಾಪಗಳು ಫಲಿಸಿದವು.

ಮದೋನ್ಮತ್ತ ಆನೆಯಾಗಿದ್ದ ಜಯ ಸರೋವರದೊಳಗೆ ಇಳಿದಾಗ ಅಲ್ಲಿಯೇ ಮೊಸಳೆಯಾಗಿದ್ದ ವಿಜಯ ಅವನನ್ನು ಹಿಡಿದುಕೊಳ್ಳುತ್ತಾನೆ. ಜಯ ವಿಷ್ಣುವಿನ ಮೊರೆ ಹೋದಾಗ ಆತ ಬಂದು ಸುದರ್ಶನ ಚಕ್ರದಿಂದ ಬಿಡುಗಡೆ ಮಾಡಿದಾಗ ಇಬ್ಬರಿಗೂ ಮುಕ್ತಿ. ಮತ್ತೆ ಇಬ್ಬರೂ ವೈಕುಂಠವನ್ನು ಸೇರಿ ದ್ವಾರಪಾಲಕರಾಗುತ್ತಾರೆ.

ಕಥೆ ತುಂಬ ಚೆಂದವಾಗಿದೆ. ಆದರೆ ನನಗೆ ಬಂದ ಆತಂಕವೆಂದರೆ ಸದಾ ವಿಷ್ಣುವಿನ ಸಾನ್ನಿದ್ಯದಲ್ಲೇ ಇದ್ದು, ಮಹಾವಿಷ್ಣು ಭಕ್ತರೆನ್ನಿಸಿಕೊಂಡಂತಹ ಜಯ-ವಿಜಯರಿಗೂ ಸಂಪತ್ತಿನ ಆಸೆ ಬಂದದ್ದು ಹೇಗೆ? ಇಂದ್ರಿಯಗಳನ್ನು ಗೆದ್ದ ಖ್ಯಾತಿಯಿದ್ದ ಇಬ್ಬರಿಗೂ ಈ ಪರಿಯ ಸಿಟ್ಟು ಬಂದು ಶಾಪ ಕೊಡುವಂತೆ ಆದದ್ದು ಹೇಗೆ? ವಿಷ್ಣುವಿನ ಹತ್ತಿರವಿರುವ ಅಧಿಕಾರ ಹೊಂದಿದವರಿಗೇ ಹಣ ಮತ್ತು ಅಹಂಕಾರಗಳು ಮತ್ತು ಬರಿಸುವುದಾದರೆ, ಸಣ್ಣ ಪುಟ್ಟ ತಾತ್ಪೂರ್ತಿಕ ಅಧಿಕಾರಗಳನ್ನು ಪಡೆದ ಇಂದಿನ ನಾಯಕರು ಇವುಗಳಿಂದ ಮದೋನ್ಮತ್ತರಾಗಿ ವರ್ತಿಸುವುದು ಆಶ್ಚರ್ಯವಲ್ಲ. ಅಥವಾ ಹಣಕ್ಕೆ, ಅಹಂಕಾರಕ್ಕೆ ಯಾವ ಸ್ಥಾನದಲ್ಲೇ ಇದ್ದ ಜನರಿಗೆ ಮತ್ತು ಬರಿಸುವಷ್ಟು ಪ್ರಬಲ ಶಕ್ತಿ ಇದೆಯೇ? ಅದರಿಂದ ಪಾರಾಗುವುದು ಹೇಗೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT