ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಹೂಡಿಕೆಗೆ ಹೆಚ್ಚು ಅವಕಾಶ

Last Updated 18 ಸೆಪ್ಟೆಂಬರ್ 2017, 16:25 IST
ಅಕ್ಷರ ಗಾತ್ರ

ಈಚಿನ ಚಟುವಟಿಕೆಯ ರೀತಿ ಗಮನಿಸಿದಾಗ ಕಂಪೆನಿಗಳು ತಮ್ಮ ತ್ರೈಮಾಸಿಕ ಫಲಿತಾಂಶಕ್ಕೂ ಮುನ್ನವೇ ಷೇರು ಬೆಲೆ ಏರಿಕೆ ಕಾಣುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ಮುಂದೆ ಅವು ತಮ್ಮ ಸಾಧನೆ ಪ್ರಕಟಿಸಿದಾಗ ಅತ್ಯುತ್ತಮವಾಗಿದ್ದಲ್ಲಿ ಮಾತ್ರ ಪೇಟೆಯ ಬೆಂಬಲ ದೊರೆಯಬಹುದು. ಸ್ವಲ್ಪ ಕಳಪೆಯಾದರೂ ಭಾರಿ ಕುಸಿತ ಕಾಣಬಹುದು. ಪೇಟೆ ಏರಿಕೆ ಎಷ್ಟು ತ್ವರಿತವೋ ಅದಕ್ಕೂ ಹೆಚ್ಚು ತ್ವರಿತ ಮತ್ತು ಹರಿತ ಕುಸಿತಕ್ಕೊಳಗಾದಾಗ ಇರುತ್ತದೆ ಎಂಬುದು ನೆನಪಿನಲ್ಲಿರಲೇಬೇಕು.

ಪೇಟೆಯಲ್ಲಿ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳುವುದು ಸರಳ ಎಂಬುದು ಈ ವಾರದ ಆರಂಭದ ದಿನ ಫಾರ್ಮಾ ವಲಯದ ಇಪ್ಕಾ ಲ್ಯಾಬೊರೇಟರೀಸ್ ಲಿಮಿಟೆಡ್ ಕಂಪೆನಿಯ ಷೇರಿನ ಬೆಲೆ ಏರಿಕೆಯು ದೃಢಪಡಿಸುತ್ತದೆ. ಈ ಷೇರಿನ ಬೆಲೆ ದಿನದ ಆರಂಭಿಕ ವಹಿವಾಟು  ₹420 ರ ಸಮೀಪವಿದ್ದು ನಂತರ ಏಕಮುಖವಾಗಿ ಏರಿಕೆ ಕಂಡು ₹497 ರವರೆಗೂ ತಲುಪಿ ₹470 ರ ಸಮೀಪ ಅಂತ್ಯ ಕಂಡಿತು. ಈ ಬೆಳವಣಿಗೆಯ ಹಿಂದೆ ಯಾವ ಪ್ರಭಾವಿ ಸಂಗತಿ ಇಲ್ಲ. ಆದರೆ, ಸರಿಯಾಗಿ ಮೂರು ತಿಂಗಳ ಹಿಂದೆ ₹850 ರ ಸಮೀಪವಿದ್ದು ಅಲ್ಲಿಂದ ₹400 ರ ವಾರ್ಷಿಕ ಕನಿಷ್ಠಕ್ಕೆ ಕುಸಿದು ಈಗ ಮತ್ತೆ ತ್ರೈಮಾಸಿಕ ಅಂತ್ಯದ ಸಮಯದಲ್ಲಿ ದಿಢೀರ್ ಚೇತರಿಕೆ ಕಂಡಿದೆ. ಇದು ವ್ಯಾಲ್ಯೂ ಪಿಕ್ ಚಟುವಟಿಕೆಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಡಿಸೆಂಬರ್‌ನಲ್ಲಿ ₹1,200 ರ ಸಮೀಪವಿದ್ದು ನಂತರ ಕುಸಿಯುತ್ತಾ ಮೇ ತಿಂಗಳಲ್ಲಿ  ₹533 ರ ವಾರ್ಷಿಕ ಕನಿಷ್ಠದವರೆಗೂ ತಲುಪಿ  ಅಲ್ಲಿಂದ  ಸೆಪ್ಟೆಂಬರ್‌ನಲ್ಲಿ ಪುಟಿದೆದ್ದು ₹865 ನ್ನು ತಲುಪಿತು.  ಕೇವಲ 9 ತಿಂಗಳಲ್ಲಿ ಈ ರೀತಿ ಭಾರಿ ಪ್ರಮಾಣದ ಏರಿಳಿತವನ್ನು ಪ್ರಮುಖ ಕಂಪೆನಿಯಾದ ದಿವೀಸ್ ಲ್ಯಾಬೊರೇಟರೀಸ್ ಷೇರು ಪ್ರದರ್ಶಿಸಿದೆ. ಇದಕ್ಕೆ ಕಂಪೆನಿಯ ಆಂತರಿಕ ಸಾಧನೆಯಾಗಲಿ, ಬೆಳವಣಿಗೆಯಾಗಲಿ ಕಾರಣವಾಗಿರದೆ ಅದು ಯುಎಸ್ಎಫ್‌ಡಿಎ ವಿಧಿಸಿದ  ಕ್ರಮವಾಗಿದೆ.

ಪೇಟೆಯಲ್ಲಿ ಅಗ್ರಮಾನ್ಯ ಕಂಪೆನಿಗಳಲ್ಲಿ ವ್ಯಾಲ್ಯೂ ಪಿಕ್ ಚಟುವಟಿಕೆ ಹೇಗಿರುತ್ತದೆ ಎಂಬುದಕ್ಕೆ ಈ ವಾರ ಏಷಿಯನ್ ಪೇಂಟ್ಸ್ ಷೇರಿನ ಬೆಲೆ ಚೇತರಿಕೆ ಉತ್ತಮ ಉದಾಹರಣೆಯಾಗಿದೆ.  ಈ ಕಂಪೆನಿಯ ಷೇರಿನ ಬೆಲೆಯು ಕಳೆದ ಒಂದು ತಿಂಗಳಲ್ಲಿ ₹1,115 ಸಮೀಪವಿದ್ದು, ₹1,1191 ಈ ವಾರದ ಕನಿಷ್ಠ ಬೆಲೆಯಾಗಿದೆ.  ಅಲ್ಲಿಂದ ದಿಢೀರನೆ ಏರಿಕೆ ಕಂಡು ಮಂಗಳವಾರ ₹1,258 ರ ವಾರ್ಷಿಕ ಗರಿಷ್ಠ ದಾಖಲೆ ನಿರ್ಮಿಸಿದೆ. ಇದೇ ರೀತಿಯ ಬೆಳವಣಿಗೆಯು ಬರ್ಜರ್ ಪೇಂಟ್ಸ್ ಷೇರಿನಲ್ಲೂ ಕಂಡುಬಂದಿದೆ.

ಮತ್ತೊಂದು ದಿಗ್ಗಜ ಕಂಪೆನಿ ಲಾರ್ಸನ್ ಅಂಡ್ ಟೊಬ್ರೊ ಒಂದೇ ವಾರದಲ್ಲಿ ₹1,116 ರಿಂದ ₹1,231 ರವರೆಗೂ ಏರಿಕೆ ಕಂಡಿತು. ಈ ತರಹದ ಏರಿಕೆಗೆ ಯಾವುದೇ ಮಹತ್ತರವಾದ ಕಾರಣಗಳು ಇಲ್ಲದಿದ್ದರೂ ಏರಿಕೆ ಕಂಡಿರುವುದು ವ್ಯಾಲ್ಯೂ ಪಿಕ್ ಮಾತ್ರವಾಗಿದೆ.

ಗುರುವಾರ  ದಿನದ ವಹಿವಾಟು ಆರಂಭವಾದಾಗ ಸುಮಾರು ₹132 ರ ಸಮೀಪವಿದ್ದ ಬಿಎಚ್‌ಇಎಲ್ ಷೇರಿನ ಬೆಲೆಯು ಸ್ವಲ್ಪ ಹೊತ್ತಿನ ನಂತರ ದಿಢೀರನೆ ₹ 145 ರವರೆಗೂ ಜಿಗಿತ ಕಂಡಿತು.  ಈ ತಿಂಗಳ ಅಂತ್ಯದಲ್ಲಿ ಬೋನಸ್ ಷೇರು ವಿತರಣೆಗೆ ನಿಗದಿತ ದಿನ ಗೊತ್ತುಪಡಿಸಿರುವ ಕಾರಣ,  ಅಂದು ಶಂಕು ಸ್ಥಾಪನೆಗೊಂಡ ಬುಲೆಟ್ ಟ್ರೇನ್‌ಗೆ ರೋಲಿಂಗ್ ಸ್ಟಾಕ್ ಕಾಂಟ್ರಾಕ್ಟ್  ಕವಾಸಾಕಿ ಸಂಸ್ಥೆಯೊಂದಿಗೆ ಪಡೆದುಕೊಂಡಿರುವ ಸುದ್ದಿ ಸಹ ಸೇರಿಕೊಂಡ ಕಾರಣ ಈ ಭಾರಿ ಜಿಗಿತ ಉಂಟಾಯಿತಾದರೂ ಅದು ಬಹಳ ಅಲ್ಪಕಾಲೀನವಾಗಿ ದಿನದ ಅಂತ್ಯದಲ್ಲಿ ₹137 ರ ಸಮೀಪ ಅಂತ್ಯಕಂಡಿತು.

ಒಟ್ಟಾರೆ, ಈ ವಾರದಲ್ಲಿ ಸಂವೇದಿ ಸೂಚ್ಯಂಕವು 585 ಅಂಶಗಳ ಏರಿಕೆ ಕಂಡಿದೆ.  ಮಧ್ಯಮ ಶ್ರೇಣಿ ಸೂಚ್ಯಂಕ 218 ಅಂಶಗಳ ಹಾಗೂ ಕೆಳಮಧ್ಯಮ ಶ್ರೇಣಿಯ ಸೂಚ್ಯಂಕ 362 ಅಂಶಗಳ ಏರಿಕೆ ಕಂಡು ಪೇಟೆಯ ಬಂಡವಾಳ ಮೌಲ್ಯ  ₹135.68 ಲಕ್ಷ ಕೋಟಿಗಳಿಗೆ ಏರಿಕೆ ಕಂಡಿತು. ವಿದೇಶಿ ವಿತ್ತೀಯ ಸಂಸ್ಥೆಗಳು ಸತತವಾದ ಮಾರಾಟದ ಹಾದಿಯಲ್ಲಿದ್ದರೂ ಸ್ಥಳೀಯ ವಿತ್ತೀಯ ಸಂಸ್ಥೆಗಳ ಕೊಳ್ಳುವಿಕೆಯು ಪೇಟೆಗೆ ಶ್ರೀರಕ್ಷೆಯಾಯಿತು.

ಹೊಸ ಷೇರು:  ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶುರೆನ್ಸ್ ಕಂಪೆನಿ ಲಿಮಿಟೆಡ್ ಕಂಪೆನಿ ಪ್ರತಿ ಷೇರಿಗೆ ₹651 ರಿಂದ ₹661 ರ ಅಂತರದಲ್ಲಿ ಈ ತಿಂಗಳ 15 ರಿಂದ 19 ರವರೆಗೂ ಆರಂಭಿಕ ಷೇರು ವಿತರಣೆ ಮಾಡಲಿದೆ. ಅರ್ಜಿಯನ್ನು 22 ಷೇರುಗಳ ಗುಣಕಗಳಲ್ಲಿ ಸಲ್ಲಿಸಬಹುದಾಗಿದೆ. ಎಸ್‌ಬಿಐ ಲೈಫ್ ಇನ್ಶುರೆನ್ಸ್‌ ಕಂಪೆನಿ ಲಿಮಿಟೆಡ್ ಷೇರುಗಳು ಸೆಪ್ಟೆಂಬರ್ 20 ರಿಂದ 22 ರವರೆಗೂ ಪ್ರತಿ ಷೇರಿಗೆ ₹685 ರಿಂದ ₹700 ರ ಅಂತರದಲ್ಲಿ ಆರಂಭಿಕ ವಿತರಣೆ ಮಾಡಲಾಗುವುದು. ಅರ್ಜಿಯನ್ನು 68 ಷೇರುಗಳ ಗುಣಕಗಳಲ್ಲಿ ಸಲ್ಲಿಸಬಹುದಾಗಿದೆ. ಪ್ರತಾಪ್ ಸ್ನ್ಯಾಕ್ಸ್ ಲಿಮಿಟೆಡ್ ಕಂಪೆನಿ ಸೆಪ್ಟೆಂಬರ್ 22 ರಿಂದ 26 ರವರೆಗೂ ಆರಂಭಿಕ ಷೇರು ವಿತರಿಸಲಿದೆ. ₹5 ರ ಮುಖಬೆಲೆಯ ಈ ಷೇರು ವಿತರಣೆ ಬೆಲೆ ಮತ್ತು ಅರ್ಜಿ ಸಲ್ಲಿಸಬೇಕಾದ ಷೇರುಗಳ ಸಂಖ್ಯೆ ವಿತರಣೆ ದಿನಕ್ಕೆ 5 ದಿನ ಮುಂಚಿತವಾಗಿ ಪ್ರಕಟಿಸ
ಲಾಗುವುದು.

ಬೋನಸ್ ಷೇರು:  ಭಾರತ್ ಫೋರ್ಜ್ ಲಿಮಿಟೆಡ್ ಕಂಪೆನಿಯು ವಿತರಿಸಲಿರುವ 1:1 ರ ಅನುಪಾತದ ಬೋನಸ್ ಷೇರಿಗೆ ಈ ತಿಂಗಳ 30 ನಿಗದಿತ ದಿನವಾಗಿದೆ. ಈ ದಿಕ್ಕಿನಲ್ಲಿ ಈ ತಿಂಗಳ 24 ರಂದು, ಬೋನಸ್ ಷೇರು ವಿತರಣೆಯ ಗೊತ್ತುವಳಿ ಅಂಗೀಕಾರದ ಫಲಿತಾಂಶವನ್ನು  ಪ್ರಕ
ಟಿಸಲಾಗುವದು. ಎಂಒಐಎಲ್ ಲಿಮಿಟೆಡ್ ಕಂಪೆನಿ ವಿತರಿಸಲಿರುವ 1:1 ರ ಅನುಪಾತದ ಬೋನಸ್ ಷೇರಿಗೆ ಈ ತಿಂಗಳ 28 ನಿಗದಿತ ದಿನ. ಇನ್‌ಫೀನೈಟ್ ಕಂಪ್ಯೂಟರ್ ಸೊಲ್ಯೂಷನ್ಸ್ (ಇಂಡಿಯಾ) ಲಿಮಿಟೆಡ್ ಕಂಪೆನಿ 1:26 ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ. ಈ ಬೋನಸ್ ಷೇರುಗಳನ್ನು ಪ್ರವರ್ತಕರು ಮತ್ತು ಅವರ ಸಮೂಹವನ್ನು ಹೊರತುಪಡಿಸಿ ಇತರೆ ಷೇರುದಾರರಿಗೆ ನೀಡಲಾಗುವುದು.  ಈ ಬೋನಸ್ ಷೇರುಗಳನ್ನು ಕಂಪೆನಿಯಲ್ಲಿ ಸಾರ್ವಜನಿಕ ಭಾಗಿತ್ವವನ್ನು ಹೆಚ್ಚಿಸುವ ಕಾರಣಕ್ಕಾಗಿ ನೀಡಲಾಗುತ್ತಿದೆ.

ಮುಖಬೆಲೆ ಸೀಳಿಕೆ:  ಯೆಸ್ ಬ್ಯಾಂಕ್ ಷೇರಿನ ಮುಖಬೆಲೆಯನ್ನು ₹10 ರಿಂದ ₹2 ಕ್ಕೆ ಸೀಳಲು ಈ ತಿಂಗಳ 22 ನಿಗದಿತ ದಿನ.

(98863 13380, ಸಂಜೆ 4.30 ರನಂತರ).

****

ವಾರದ ವಿಶೇಷ
ಷೇರುಪೇಟೆಯಲ್ಲಿ ಇತ್ತೀಚಿಗೆ ಅಗ್ರಮಾನ್ಯ ಕಂಪೆನಿಗಳು ಹೆಚ್ಚಿನ ಏರಿಳಿತ ಪ್ರದರ್ಶಿಸುತ್ತಿವೆ. ಏರಿಳಿತಗಳಿಗೆ ನೀಡುವ  ಕಾರಣಗಳು ವಿಭಿನ್ನವಾದರೂ ಅವು ಕಂಪೆನಿಯ ಆಂತರಿಕ ಪರಿಸ್ಥಿತಿಯನ್ನು, ಅವು ನೀಡುವ ಕಾರ್ಪೊರೇಟ್ ಫಲಗಳು ಮುಂತಾದವನ್ನು ಅವಲಂಭಿಸಿರುತ್ತದೆ ಎಂಬುದಕ್ಕೆ ಈ ವಾರದ ಕೆಲವು ಬೆಳವಣಿಗೆಗಳು ಉತ್ತಮ ಉದಾಹರಣೆಗಳಾಗಿವೆ.

ಈಚೀನ ದಿನಗಳಲ್ಲಿ ಷೇರಿನ ಬೆಲೆ ಏರಿಕೆ ಕಂಡಾಗ ಮಾಧ್ಯಮಗಳಲ್ಲಿ ವೈವಿಧ್ಯಮಯ ವಿಶ್ಲೇಷಣೆಗಳು ಹೊರಹೊಮ್ಮುತ್ತವೆ.  ದಿವೀಸ್ ಲ್ಯಾಬೊರೇಟರೀಸ್ ಷೇರಿನ ಬೆಲೆ ಏರಿಕೆಗೆ ಕಂಪೆನಿಯು ಯುಎಸ್‌ಎಫ್‌ಡಿಎ ತೋರಿಸಿದ್ದ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಯುಎಸ್‌ಎಫ್‌ಡಿಎಗೆ ಮತ್ತೊಮ್ಮೆ ಇನ್‌ಕ್ಯೂಷನ್‌ ಮಾಡಲು ಆಮಂತ್ರಿಸಿದೆ ಎಂಬ ಕಾರಣವನ್ನು ನೀಡಿದವು.  ಆದರೆ, ವಾಸ್ತವಾಂಶವೇ ಬೇರೆ.  ಕಂಪೆನಿ ಪ್ರಕಟಿಸಿರುವ ಪ್ರತಿ ಷೇರಿಗೆ ₹10 ರ ಲಾಭಾಂಶಕ್ಕೆ ಈ ತಿಂಗಳ 15 ನಿಗದಿತ ದಿನವಾಗಿರುವುದಲ್ಲದೆ, ಈ ತಿಂಗಳ 25 ರಂದು ಕಂಪೆನಿಯ ಎ ಜಿ ಎಂ ನಡೆಯಲಿರುವ ಕಾರಣ ಷೇರಿನ ಬೆಲೆ ಹೆಚ್ಚು ಚುರುಕಾಗಿದೆ.

ವಾಹನ ವಲಯದ ಕಂಪೆನಿ ಫೋರ್ಸ್ ಮೋಟಾರ್ಸ್ ಲಿಮಿಟೆಡ್ ಕಂಪೆನಿ ಷೇರಿನ ಬೆಲೆಯು ಮಂಗಳವಾರ ಹಿಂದಿನ ದಿನದ ಬೆಲೆ  ₹4,008 ರಿಂದ ₹4,300 ರವರೆಗೂ ಏರಿಕೆ ಕಂಡು ನಂತರ ₹4,223 ರ ಸಮೀಪ ಕೊನೆಗೊಂಡಿತು. ಈ ರೀತಿಯ ಭರ್ಜರಿ ಏರಿಕೆಗೆ ಮುಖ್ಯ ಕಾರಣ ಕಂಪೆನಿಯ ವಾರ್ಷಿಕ ಸಭೆ 13 ನೇ ಬುಧವಾರದಂದು ನಡೆಯಲಿರುವುದಾಗಿದೆ. ಕಳೆದ ಒಂದು ತಿಂಗಳಲ್ಲಿ ₹3,730 ರ ಸಮೀಪದಿಂದ ₹4,300 ತಲುಪಿದೆ. ನಂತರದ ದಿನಗಳಲ್ಲಿ ಏರಿಕೆಯ ರಭಸ ಶಮನವಾಯಿತು.

ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಷನ್ ಕಂಪೆನಿಯ ಷೇರಿನ ಬೆಲೆಯು ಕಳೆದ ಒಂದು ತಿಂಗಳಿನಿಂದ ₹152 ರ ಸಮೀಪದಿಂದ ₹173 ರವರೆಗೂ ಏರಿಕೆ ಕಂಡಿದೆ. ಅದರಲ್ಲೂ ವಿಶೇಷವಾಗಿ  ಬುಧವಾರ ಷೇರಿನ ಬೆಲೆ ಸುಮಾರು ₹10 ರಷ್ಟು ಏರಿಕೆಯನ್ನು ದಿನದ ಮಧ್ಯಂತರದಲ್ಲಿ ಪ್ರದರ್ಶಿಸಿದೆ. ಇದಕ್ಕೆ ಕಾರಣ ಕಂಪೆನಿಯ ಎಜಿಎಂ ಈ ತಿಂಗಳ 21 ರಂದು ನಡೆಯಲಿರುವುದಲ್ಲದೆ,  ಕಂಪೆನಿ ವಿತರಿಸಲಿರುವ ಪ್ರತಿ ಷೇರಿಗೆ ₹ 2.65 ರ ಲಾಭಾಂಶ ವಿತರಣೆಗೆ ಈ ತಿಂಗಳ 16 ನಿಗದಿತ ದಿನವಾಗಿರುವುದರಿಂದ ಆಸಕ್ತ ಚಟುವಟಿಕೆಗೆ ಪೂರಕ ಅಂಶವಾಗಿದೆ. ಸದ್ಯಕ್ಕೆ ಇಳಿಕೆಯಲ್ಲಿರುವ ಐಟಿಸಿ, ಅಪೊಲೊ ಹಾಸ್ಪಿಟಲ್, ಅಡ್ವಾನ್ಸ್ ಎಂಜೈಮ್ಸ್ ಮತ್ತು ಅಲೆಂಬಿಕ್ ಫಾರ್ಮಾ ಕಂಪೆನಿಗಳಲ್ಲಿ ಉತ್ತಮ ಹೂಡಿಕೆ ಅವಕಾಶಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT