ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ಯಾಕಾಂಡದ ಸಂತ್ರಸ್ತರಿಗೆ ನ್ಯಾಯ ಕೊಡಿಸುವ ರುದ್ರನಾಟಕ

Last Updated 29 ಜನವರಿ 2017, 19:30 IST
ಅಕ್ಷರ ಗಾತ್ರ

1984ರ ಸಿಖ್ ಹತ್ಯಾಕಾಂಡದಲ್ಲಿ ಜೀವ ಕಳೆದುಕೊಂಡವರಿಗೆ, ನೋವು ಅನುಭವಿಸಿದವರಿಗೆ ನ್ಯಾಯ ಕೊಡಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರ ಎಷ್ಟು ಗಂಭೀರವಾಗಿದೆ? ಎಲ್ಲ ಭಾರತೀಯರು ಈ ವಿಚಾರದಲ್ಲಿ ಆಸಕ್ತಿ ತಾಳಬೇಕು. ಏಕೆಂದರೆ, ಸಾಮೂಹಿಕ ಹತ್ಯಾಕಾಂಡದ ಪ್ರಕರಣಗಳಲ್ಲಿ ದೇಶ ನ್ಯಾಯ ಕೊಡಿಸಬಲ್ಲದೇ ಎಂಬುದಕ್ಕೆ ಈ ಪ್ರಶ್ನೆ ಉತ್ತರ ನೀಡುತ್ತದೆ.

ಇಂದಿರಾ ಗಾಂಧಿ ಹತ್ಯೆಯ ನಂತರ ನಡೆದ ಹತ್ಯಾಕಾಂಡದಲ್ಲಿ 3,325 ಜನರನ್ನು ಕೊಲ್ಲಲಾಯಿತು. ದೆಹಲಿಯೊಂದರಲ್ಲೇ 2,733 ಜನರ ಕೊಲೆಯಾಯಿತು. ಈ ಹತ್ಯಾಕಾಂಡದಲ್ಲಿ ಕಾಂಗ್ರೆಸ್ಸಿನ ಪ್ರಬಲ ನಾಯಕರು ಪಾಲ್ಗೊಂಡಿದ್ದಾರೆ ಎನ್ನಲಾಯಿತು. ಅವರ ಪೈಕಿ ಎಚ್‌ಕೆಎಲ್‌ ಭಗತ್‌ ಅವರಂತಹ ನಾಯಕರು ವಿಚಾರಣೆಯನ್ನೇ ಎದುರಿಸದೆ ಸಾವನ್ನಪ್ಪಿದರು. ಸಜ್ಜನ್ ಕುಮಾರ್, ಜಗದೀಶ್ ಟೈಟ್ಲರ್ ಮತ್ತು ಕಮಲ್ ನಾಥ್ ಅವರಂತಹ ನಾಯಕರು ನಮ್ಮ ನಡುವೆ ಇದ್ದಾರೆ. ಹತ್ಯಾಕಾಂಡದ ಬಗ್ಗೆ ಮೊದಲ ತನಿಖೆ ನಡೆಸಿದ ರಂಗನಾಥ್ ಮಿಶ್ರಾ ಆಯೋಗ, ಇವರ ಹೇಳಿಕೆಗಳನ್ನು ದಾಳಿಗೆ ತುತ್ತಾದವರ ಅನುಪಸ್ಥಿತಿಯಲ್ಲಿ ದಾಖಲಿಸಿಕೊಂಡಿತು. ರಾಜೀವ್‌ ಗಾಂಧಿ ನೇತೃತ್ವದ ಸರ್ಕಾರವನ್ನು ಹತ್ಯಾಕಾಂಡದ ಹೊಣೆಯಿಂದ ಮುಕ್ತಗೊಳಿಸಿತು.

32 ವರ್ಷಗಳ ಅವಧಿಯಲ್ಲಿ ಕೇಂದ್ರದಲ್ಲಿ ಒಂದು ಡಜನ್– ಕಾಂಗ್ರೆಸ್ ಮತ್ತು ಕಾಂಗ್ರೆಸ್ಸೇತರ– ಸರ್ಕಾರಗಳು ಆಡಳಿತ ನಡೆಸಿವೆ. ಆದರೆ, ಈ ಪ್ರಕರಣಗಳ ವಿಚಾರದಲ್ಲಿ ಅಷ್ಟೇನೂ ಪ್ರಗತಿ ಆಗಿಲ್ಲ. ವಾಜಪೇಯಿ ನೇತೃತ್ವದ ಸರ್ಕಾರ ನಾನಾವತಿ ಆಯೋಗ ರಚಿಸಿತು. ಅದು ನೀಡಿದ ವರದಿಯನ್ನು ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿತು. ಈ ವರದಿಯು ಹಲವು ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸಿತು. ಕಾಂಗ್ರೆಸ್ ಪರವಾಗಿ ಡಾ. ಸಿಂಗ್ ಅವರು ದೇಶದ ಕ್ಷಮೆ ಯಾಚಿಸಿದರು. ಟೈಟ್ಲರ್ ಸಚಿವ ಸ್ಥಾನ ಕಳೆದುಕೊಂಡರೂ, ನ್ಯಾಯ ಸಿಗಲಿಲ್ಲ.

ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ ಸರ್ಕಾರ ಕ್ರಮ ಕೈಗೊಳ್ಳುವ ಭರವಸೆ ನೀಡಿತು. ಮುಂದಿನ ಹೆಜ್ಜೆ ಏನಿರಬೇಕು ಎಂಬ ಸಲಹೆ ನೀಡಲು ಜಿ.ಪಿ. ಮಾಥುರ್ ನೇತೃತ್ವದ ಸಮಿತಿಯನ್ನು 2014ರ ಡಿಸೆಂಬರ್ 23ರಂದು ರಚಿಸಿತು. ಪ್ರಕರಣಗಳ ಪುನರ್‌ ಪರಿಶೀಲನೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕು ಎಂದು ಮಾಥುರ್ ಅವರು ಒಂದು ವಾರದ ಅವಧಿಯಲ್ಲಿ ಶಿಫಾರಸು ನೀಡಿದರು. ಈ ಎಸ್‌ಐಟಿಯು ಪೊಲೀಸ್‌ ಠಾಣೆಗಳಲ್ಲಿನ ದಾಖಲೆಗಳು ಹಾಗೂ ಹಿಂದಿನ ಆಯೋಗಗಳ ವರದಿಗಳನ್ನು ಪರಿಶೀಲಿಸಬೇಕಿತ್ತು.

ಅದರಲ್ಲೂ ಮುಖ್ಯವಾಗಿ, ಹೊಸ ಸಾಕ್ಷ್ಯಗಳು ಲಭಿಸಿದರೆ, ಹೊಸದಾಗಿ ಆರೋಪ ನಿಗದಿ ಮಾಡುವ ಅಧಿಕಾರವನ್ನು ಎಸ್‌ಐಟಿಗೆ ನೀಡಲಾಯಿತು.

2015ರ ಫೆಬ್ರುವರಿ 12ರಂದು ಎಸ್‌ಐಟಿ ರಚಿಸಲಾಯಿತು. ಕೆಲಸ ಆರಂಭಿಸಿದ ತಂಡಕ್ಕೆ ಹೊಸದಾಗಿ ಆರೋಪಪಟ್ಟಿ ಸಲ್ಲಿಸಲು ಆಗಲಿಲ್ಲ. ನಂತರ 2015ರ ಆಗಸ್ಟ್‌ನಲ್ಲಿ ಎಸ್‌ಐಟಿ ಅವಧಿಯನ್ನು ಇನ್ನೊಂದು ವರ್ಷಕ್ಕೆ ವಿಸ್ತರಿಸಲಾಯಿತು. ಆದರೆ, 2016ರ ಆಗಸ್ಟ್‌ವರೆಗೂ ಹೊಸ ಆರೋಪ ನಿಗದಿ ಮಾಡಲು ತಂಡಕ್ಕೆ ಸಾಧ್ಯವಾಗಲಿಲ್ಲ. ಪ್ರಕರಣಗಳ ತನಿಖೆಯ ಪ್ರಗತಿ ಎಲ್ಲಿಯವರೆಗೆ ಬಂದಿದೆ ಎಂಬುದನ್ನು ಬಹಿರಂಗಪಡಿಸಲಿಲ್ಲ. ಎಸ್‌ಐಟಿ ಅವಧಿಯನ್ನು ಮತ್ತೆ ವಿಸ್ತರಿಸಲಾಯಿತು. ಅದು ಫೆಬ್ರುವರಿ 11ರಂದು ಮುಗಿಯಲಿದೆ. ಹತ್ಯಾಕಾಂಡದಲ್ಲಿ ನೋವುಂಡವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಈ ಅವಧಿಯಲ್ಲೂ ಏನೂ ಆಗದಿದ್ದರೆ, ಅವರಿಗೆ ಅನ್ಯಾಯ ಎಸಗಿದಂತೆ ಆಗುತ್ತದೆ.

1984ರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 650 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳುತ್ತಿದೆ. ಇವುಗಳ ಪೈಕಿ 18 ಪ್ರಕರಣಗಳು ರದ್ದಾದವು, 268 ಪ್ರಕರಣಗಳ ಕಡತಗಳನ್ನು ಈಗ ಪತ್ತೆ ಮಾಡಲು ಆಗುತ್ತಿಲ್ಲ.  ಈ 268 ಪ್ರಕರಣಗಳನ್ನು ಎಸ್‌ಐಟಿ ಮತ್ತೆ ತನಿಖೆಗೆ ಒಳಪಡಿಸಿದೆ. 2016ರ ನವೆಂಬರ್‌ನಲ್ಲಿ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ಗೃಹ ಸಚಿವಾಲಯ, ‘ಈ ಹಂತದಲ್ಲಿ 218 ಪ್ರಕರಣಗಳು ಪರಿಶೀಲನೆಯ ವಿವಿಧ ಹಂತಗಳಲ್ಲಿವೆ’ ಎಂದು ಹೇಳಿದೆ. ‘ಇದುವರೆಗೆ 22 ಪ್ರಕರಣಗಳ ಬಗ್ಗೆ ಹೆಚ್ಚಿನ ತನಿಖೆಯಾಗಬೇಕು ಎಂದು ಗುರುತಿಸಲಾಗಿದೆ. ಈ ಪ್ರಕರಣಗಳಲ್ಲಿ ಮುಂದಡಿ ಇಡುವ ಮುನ್ನ ಎಸ್‌ಐಟಿಯು ಸಾರ್ವಜನಿಕ ನೋಟಿಸ್‌ ಪ್ರಕಟಿಸಿದೆ’ ಎಂದು ಸಚಿವಾಲಯ ಹೇಳಿದೆ.

ಪ್ರಥಮ ಮಾಹಿತಿ ವರದಿಯನ್ನು (ಎಫ್‌ಐಆರ್‌) ಗುರುಮುಖಿ ಅಥವಾ ಉರ್ದು ಭಾಷೆಯಲ್ಲಿ ದಾಖಲಿಸಿದ್ದ ಕಾರಣ ಅವುಗಳ ಪರಿಶೀಲನೆ ವಿಳಂಬವಾಗುತ್ತಿದೆ ಎಂದು ಸಚಿವಾಲಯ ಹೇಳುತ್ತಿದೆ. ಈ ಭಾಷೆಗಳಿಂದ ಅನುವಾದಿಸುವ ಕೌಶಲ ಇರುವವರ ಸಂಖ್ಯೆ ನಮ್ಮಲ್ಲಿ ಕಡಿಮೆಯೇನೂ ಇಲ್ಲ. ಹಾಗಾಗಿ, ಈ ಮಾತನ್ನು ನಂಬುವುದು ಕಷ್ಟ.

‘ಪ್ರಕರಣಗಳು ತೀರಾ ಹಳೆಯದಾಗಿರುವ ಕಾರಣ, ದಾಖಲೆಗಳನ್ನು ಒಗ್ಗೂಡಿಸಿ, ಪರಿಶೀಲಿಸುವ ಕಾರ್ಯ ಕಷ್ಟವಾಗಿದೆ. ಆದರೂ, ಈ ಸವಾಲನ್ನು ಸ್ವೀಕರಿಸಿರುವ ಎಸ್‌ಐಟಿ ಪ್ರಕರಣಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಪ್ರಯತ್ನ ನಡೆಸಿದೆ. ನೊಂದ ಕುಟುಂಬಗಳಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಪ್ರಕರಣಗಳ ಪರಿಶೀಲನೆಯನ್ನು ಕಾಳಜಿ ವಹಿಸಿ ನಡೆಸಲಾಗುತ್ತಿದೆ’ ಎಂದು ಸಚಿವಾಲಯದ ಪ್ರಕಟಣೆಯಲ್ಲಿ ಹೇಳಲಾಗಿದೆ.

ಈ ತನಿಖೆಗಳ ವಿಚಾರದಲ್ಲಿ ಪ್ರಗತಿ ಕಂಡುಬಂದಿರುವ ಬಗ್ಗೆ ಯಾವುದೇ ಆಧಾರ ಇಲ್ಲ. ನಾನು ಕೆಲಸ ಮಾಡುತ್ತಿರುವ ಆಮ್ನೆಸ್ಟಿ ಇಂಡಿಯಾ ಸಂಘಟನೆಯು ಈ ವಿಚಾರವಾಗಿ ಕಳೆದ ವರ್ಷ ದೆಹಲಿಯಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ನೊಂದ ಕುಟುಂಬಗಳನ್ನು ಪ್ರತಿನಿಧಿಸುವ ಸಂಘಟನೆಗಳ ಜೊತೆಯೂ ನಾವು ಕೆಲಸ ಮಾಡಿದ್ದೇವೆ. ಪ್ರಕರಣಗಳ ತನಿಖೆ ಗಂಭೀರವಾಗಿ ನಡೆಯುತ್ತಿದೆ ಎಂಬುದು ಅವರ ಗಮನಕ್ಕೂ  ಬಂದಿಲ್ಲ. ಉದಾಹರಣೆಗೆ: ಕ್ರೌರ್ಯಕ್ಕೆ ಸಾಕ್ಷಿಯಾಗಿರುವ, ಹಿಂಸಾಚಾರದಲ್ಲಿ ಜೀವ ಉಳಿಸಿಕೊಂಡವರನ್ನು ಸಂಪರ್ಕಿಸಿ, ಮತ್ತೆ ಅವರಿಂದ ಹೇಳಿಕೆ ಪಡೆಯುವ ಕೆಲಸ ಆಗಿಲ್ಲ. ಇದು ನೋವಿನ ಸಂಗತಿ. ತನಿಖೆಯಲ್ಲಿ ಆಸಕ್ತಿ ಇಲ್ಲದಿರುವುದನ್ನು ಅಥವಾ ಕ್ರಮ ಕೈಗೊಳ್ಳಲು ಉದ್ದೇಶಪೂರ್ವಕ ನಿರುತ್ಸಾಹ ಇರುವುದನ್ನು ಇದು ತೋರಿಸುತ್ತದೆ. ಸೂಕ್ತ ತನಿಖೆಯೇ ಇಲ್ಲದಿದ್ದರೆ, ಹೊಸ ಆರೋಪಗಳನ್ನು ನಿಗದಿ ಮಾಡುವುದು ಹೇಗೆ, ನ್ಯಾಯ ಕೊಡಿಸುವುದು ಹೇಗೆ?

ಭಾರತದಲ್ಲಿ ನಡೆದ ದೊಡ್ಡ ಪ್ರಮಾಣದ ಹಿಂಸಾಚಾರಗಳಲ್ಲಿ ಒಂದು ಸಾಮ್ಯತೆ ಇದೆ. ಹಿಂಸೆ ನಡೆದಾಗ ಅಧಿಕಾರದಲ್ಲಿದ್ದ ಪಕ್ಷಗಳು ನಂತರವೂ ಅಧಿಕಾರದಲ್ಲಿ ಮುಂದುವರಿಯುತ್ತವೆ. (ದುರದೃಷ್ಟದ ಸಂಗತಿಯೆಂದರೆ, ಇಂಥ ಹಿಂಸಾಚಾರಗಳು ಸಮುದಾಯಗಳ ಮತ ಒಗ್ಗೂಡಿಸಲು ನೆರವಾಗುತ್ತವೆ.) ತನಿಖೆಯನ್ನೇ ಧ್ವಂಸಗೊಳಿಸಲಾಗುತ್ತದೆ. ಇದು ದೇಶದಲ್ಲಿ ಹಲವು ಬಾರಿ ಆಗಿದೆ. ಬಹುತೇಕ ಸಂದರ್ಭಗಳಲ್ಲಿ ಕಾಂಗ್ರೆಸ್ ಅಧಿಕಾರಾವಧಿಯಲ್ಲೇ ಆಗಿದೆ. ಸಾಮೂಹಿಕ ಹಿಂಸಾಚಾರಗಳನ್ನು ನೋಡಲು ಇಷ್ಟಪಡದ ಭಾರತೀಯ ಸಮಾಜ ಅನುಭವಿಸಿದ ಹಲವು ನಷ್ಟಗಳನ್ನು ಸರಿಪಡಿಸಲು ಬಿಜೆಪಿಗೆ ಅವಕಾಶ ಇದೆ. ಪಂಜಾಬ್‌ ವಿಧಾನಸಭಾ ಚುನಾವಣೆಯ ಕಣದಲ್ಲಿರುವ ಹಲವು ಪಕ್ಷಗಳು 1984ರ ಹತ್ಯಾಕಾಂಡದ ಸಂತ್ರಸ್ತರಿಗೆ ನ್ಯಾಯ ಕೊಡಿಸುವ ಭರವಸೆಯನ್ನು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಲು ಒಪ್ಪಿವೆ. ಇದು ಒಳ್ಳೆಯ ವಿಚಾರ.

ನ್ಯಾಯ ಕೊಡಿಸುವ ದಂಡ ಕೇಂದ್ರ ಸರ್ಕಾರದ ಬಳಿ ಈಗಾಗಲೇ ಇದೆ. ಅದು ಎಸ್‌ಐಟಿಯ ಅವಧಿಯನ್ನು ಮತ್ತೆ ವಿಸ್ತರಿಸಬಾರದು. ಇಲ್ಲಿಯವರೆಗಿನ ಪ್ರಗತಿಯನ್ನು ಬಹಿರಂಗಪಡಿಸಬೇಕು.

ಅವಧಿಯನ್ನು ಮತ್ತೆ ಮತ್ತೆ ವಿಸ್ತರಿಸುತ್ತ ಸಾಗುವುದರಿಂದ ನ್ಯಾಯ ನಿರಾಕರಿಸಿದಂತೆ ಆಗುತ್ತದೆ. ಈ ಪ್ರಕರಣದಲ್ಲಿ ಮತ್ತೆ ಅವಧಿ ವಿಸ್ತರಿಸುವುದು ರುದ್ರನಾಟಕದಂತೆ ಆಗುತ್ತದೆ.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT