ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಿನೆಂಟೇ ದಿನದಲ್ಲಿ `ಇಂದಿನ ರಾಮಾಯಣ'

Last Updated 8 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

`ಗಂಗ್ವಾ' ಚಿತ್ರದಲ್ಲಿ ಶಬಾನಾ ಆಜ್ಮಿ ಹಾಗೂ ಸಾರಿಕಾ ಮುಖ್ಯ ಪಾತ್ರದಲ್ಲಿದ್ದರು. ತಮಿಳಿನಲ್ಲಿ ಸರಿತಾ ಮಾಡಿದ್ದ ಮೃದು ಸ್ವಭಾವದ ಪಾತ್ರವನ್ನು ಶಬಾನಾ ನಿರ್ವಹಿಸಿದ್ದರು. ಆ ಪಾತ್ರಕ್ಕೆ ಅವರೇ ಸೂಕ್ತ ಎಂದು ನಾನೇ ಆಯ್ಕೆ ಮಾಡಿದ್ದೆ. ಯಾವುದೋ ಹಿಂದಿ ಚಿತ್ರದಲ್ಲಿ ಸಾರಿಕಾ ಅವರನ್ನು ನೋಡಿದ್ದೆ. ಅವರು ಇನ್ನೊಂದು ಮುಖ್ಯ ಪಾತ್ರಕ್ಕೆ ಹೊಂದುತ್ತಾರೆ ಎನ್ನಿಸಿತ್ತು. ಶಬಾನಾ ಅವರಿಗೆ ಬೇಕಾಗಿದ್ದದ್ದು ಸುಮಾರಾಗಿ ಇರುವಂಥ ಸೀರೆಗಳು. ಸಾರಿಕಾ ಅವರಿಗೆ ಕಣ್ಣುಕೋರೈಸುವಂಥ ಕಾಸ್ಟ್ಯೂಮ್ಸ ಅಗತ್ಯವಿತ್ತು. ಆ ಕಾಲದಲ್ಲಿ 10 ಸಾವಿರ ರೂಪಾಯಿ ಖರ್ಚು ಮಾಡಿ ಮುಂಬೈನಲ್ಲೇ ಶಬಾನಾ ಅವರಿಗೆ ಕಾಸ್ಟ್ಯೂಮ್ಸ ಖರೀದಿಸಿದೆ.

ಚಿತ್ರೀಕರಣ ಶುರುವಾದ ನಂತರ ಮದ್ರಾಸ್‌ನ ಅರುಣಾಚಲಂ ಸ್ಟುಡಿಯೋದಲ್ಲಿ ಒಂದು ಸೆಟ್ ಹಾಕಿಸಿದೆ. ಒಂದು ದಿನ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಅಲ್ಲಿಗೆ ಹೋದೆ. ನಿರ್ದೇಶಕ ರಾಜಶೇಖರ್ ಅಲ್ಲಿದ್ದರು. ಸಾರಿಕಾ ಚಿತ್ರೀಕರಣಕ್ಕೆ ಸಿದ್ಧರಾಗಿದ್ದರು. ಆಗ ಸಾರಿಕಾ ಹಾಗೂ ಕಮಲ ಹಾಸನ್ ನಡುವೆ ಪ್ರೇಮಾಂಕುರವಾಗಿತ್ತು. ನಮ್ಮ ಚಿತ್ರೀಕರಣದ ಸ್ಥಳಕ್ಕೂ ಕಮಲ ಹಾಸನ್ ಬಂದು, ಹೋಗುತ್ತಿದ್ದರು. ಎಷ್ಟೋ ಸಲ ಅವರೇ ಸಾರಿಕಾ ಅವರನ್ನು ಕರೆದುಕೊಂಡು ಹೋಗುತ್ತಿದ್ದರು. ಅದನ್ನು ಗಮನಿಸಿದ್ದ ನನಗೆ ಸಾರಿಕಾ ಬದುಕು ಹಸನಾಗಲಿದೆ ಎಂದೇ ಅನ್ನಿಸಿತ್ತು. ಆದರೆ ಆ ದಿನ ಸಾರಿಕಾ ನಾನು ಕೊಡಿಸಿದ್ದ ಎಲ್ಲಾ ಕಾಸ್ಟ್ಯೂಮ್‌ಗಳನ್ನು ತೊಟ್ಟಿರಲಿಲ್ಲ. ಕೆಲವು ಒಡವೆಗಳನ್ನು ಬೇಡ ಎಂದುಬಿಟ್ಟಿದ್ದರು. ಏಪ್ರಿಲ್, ಮೇ ತಿಂಗಳಿನಲ್ಲಿ ಮದ್ರಾಸ್‌ನಲ್ಲಿ ವಿಪರೀತ ಸೆಕೆ. ಹಾಗಾಗಿ ಆ ಒಡವೆಗಳನ್ನು ಹಾಕಿಕೊಂಡರೆ ತುರಿಕೆಯಾಗುತ್ತದೆ ಎಂದು ಹೇಳಿ ಅವರು ಕಾಸ್ಟ್ಯೂಮ್ಸ ನಿರಾಕರಿಸಿದ್ದರು. ರಾಜಶೇಖರ್ ಕೂಡ ಅವರ ಇಷ್ಟದಂತೆಯೇ ಕಾಸ್ಟ್ಯೂಮ್ಸ ಹಾಕಿ ಚಿತ್ರೀಕರಣ ನಡೆಸಲು ತೀರ್ಮಾನಿಸಿದ್ದರು. ನನಗೆ ಕೋಪ ಬಂದಿತು. `ಕಷ್ಟಪಟ್ಟು ಅಷ್ಟೆಲ್ಲಾ ಕಾಸ್ಟ್ಯೂಮ್ಸ ತಂದಿದ್ದೀನಿ. ಶೂಟಿಂಗ್ ನಿಲ್ಲಿಸಿ' ಎಂದು ಕೂಗಾಡಿದೆ. ರಾಜಶೇಖರ್ ನನ್ನನ್ನು ಸಮಾಧಾನ ಪಡಿಸಲು ಯತ್ನಿಸಿದರೂ ಕರಗಲಿಲ್ಲ. ಸಾರಿಕಾ ಅವರಿಗೆ ಕಾಸ್ಟ್ಯೂಮ್ಸ ಬದಲಿಸಲೇಬೇಕು ಎಂದು ತಾಕೀತು ಮಾಡಿದೆ.

ಕಾಸ್ಟ್ಯೂಮ್‌ಗಳು ಇದ್ದದ್ದು ವಾಹಿನಿ ಸ್ಟುಡಿಯೋದಲ್ಲಿ. ಅರುಣಾಚಲಂ ಸ್ಟುಡಿಯೋದಿಂದ ಅಲ್ಲಿಗೆ ಕಾರಿನಲ್ಲಿ ಸಾರಿಕಾ ಅವರನ್ನು ಕಳುಹಿಸಿ, ಅವರು ಕಾಸ್ಟ್ಯೂಮ್ಸ ಬದಲಿಸಿಕೊಂಡು ಬರಲು ವ್ಯವಸ್ಥೆ ಮಾಡಬೇಕಿತ್ತು. ಅಲ್ಲಿ ಯಾವ ಕಾರೂ ಇರಲಿಲ್ಲ. ಕೊನೆಗೆ ನನ್ನ ಕಾರಿನಲ್ಲಿಯೇ ಕರೆದುಕೊಂಡು ಹೋದೆ. ಅವರು ಸಿದ್ಧಗೊಂಡು ಮರಳುವವರೆಗೆ ಅಲ್ಲಿಯೇ ಕಾದೆ. ಒಂದು ಗಂಟೆ ಬೇಕಾಯಿತು, ಅವರು ಸಿದ್ಧಗೊಳ್ಳಲು. ಕರೆತಂದು ಮತ್ತೆ ಶೂಟಿಂಗ್ ಮಾಡಿಸಿದೆ.

ಅದರಿಂದ ಸಾರಿಕಾ ಅವರಿಗೆ ಸಹಜವಾಗಿಯೇ ಬೇಸರವಾಗಿತ್ತು. ಇನ್ನೊಂದು ದಿನ ಅದೇ ಜಾಗದಲ್ಲಿ ಹಾಡಿನ ಚಿತ್ರೀಕರಣ ನಿಗದಿಯಾಗಿತ್ತು. ಅಲ್ಲಿ ಅನೇಕ ಡಾನ್ಸರ್‌ಗಳು, ಕಲಾವಿದರು ಇದ್ದರು. ಒಂದೂವರೆ ಗಂಟೆ ಸಾರಿಕಾ ನಾಪತ್ತೆಯಾಗಿಬಿಟ್ಟರು. ನನಗೆ ವಿಪರೀತ ಕೋಪ ಬಂತು. ಕೂಗಾಡಿದೆ. ಹಿಂದೆ ನಾನು ಹೇಳಿದ್ದಂತೆ ಊಟಿಯಲ್ಲಿ ಮುನಿಸಿಕೊಂಡಿದ್ದ ಅದೇ ಸುರೇಶ್ ಒಬೆರಾಯ್ ಬಂದು ನನ್ನನ್ನು ಸಮಾಧಾನ ಮಾಡಿದರು. ಅಮರೀಷ್‌ಪುರಿ ಕೂಡ ಕೋಪ ಮಾಡಿಕೊಳ್ಳಬೇಡಿ ಎಂದು ನಾಲ್ಕು ಮಾತುಗಳನ್ನಾಡಿದರು. ಕಮಲ ಹಾಸನ್‌ಗೂ ನನ್ನ ಕಾರ್ಯವೈಖರಿ ಗೊತ್ತಾಗಿತ್ತು. ಸೆಟ್‌ಗೆ ಸರಿಯಾದ ಸಮಯಕ್ಕೆ ಪ್ರಭು ಹೋಗದೇ ಇರುವುದನ್ನು ಕಂಡು ಅವರು ದ್ವಾರಕೀಶ್ ಹತ್ತಿರ ಕಳುಹಿಸಿದರೆ ಇವರನ್ನು ಸರಿಮಾಡುತ್ತಾರೆ ಎಂದು ಹೇಳಿದ್ದರಂತೆ. ಮ್ಯಾನೇಜರ್ ರಾಮದೊರೈ ಈ ವಿಷಯವನ್ನು ಹೇಳಿದ್ದ.

ಕಲಾವಿದರು ಎಷ್ಟೇ ಸಂಭಾವನೆ ಪಡೆಯುವವರಾಗಲೀ, ನಾನು ಎಲ್ಲರನ್ನೂ ಒಂದೇ ರೀತಿ ಗೌರವಿಸುತ್ತಿದ್ದೆ. ಕೆಲಸದ ವಿಷಯದಲ್ಲಿ ಮಾತ್ರ ರಾಜಿಯಾಗುತ್ತಿರಲಿಲ್ಲ. ಅಶಿಸ್ತನ್ನು ಸಹಿಸದೇ ಇರಲು ಕಾರಣ ಸಿನಿಮಾ ಚೆನ್ನಾಗಿ ಮೂಡಿಬರಲಿ ಎಂಬ ಕಾಳಜಿಯಷ್ಟೆ.
*
`ಗಂಗ್ವಾ' ತಂಡವನ್ನು ಊಟಿಗೆ ಕಳುಹಿಸುವ ದಿನಾಂಕ ನಿಗದಿಯಾಯಿತು. ಅದರ ಹಿಂದಿನ ದಿನ ಒಂದು ಸಿನಿಮಾ ಪೂರ್ವಭಾವಿ ಪ್ರದರ್ಶನ ಆಯೋಜಿತವಾಗಿತ್ತು. ಮದ್ರಾಸ್‌ನಲ್ಲಿ ಸಂಭಾಷಣೆ ಬರೆಯುವುದರಲ್ಲಿ ಹೆಸರುವಾಸಿಯಾಗಿದ್ದ ವಿಶು ಮಾಡಿದ್ದ ಚಿತ್ರ ಅದು. ಹೆಸರು `ಊರುಕ್ಕು ಉಪದೇಶಂ'. ಮಾರನೇ ದಿನ ಬೆಳಿಗ್ಗೆ ಆರು ಗಂಟೆಗೆ ಕೊಯಮತ್ತೂರಿಗೆ ವಿಮಾನದಲ್ಲಿ ಹೊರಟು ಅಲ್ಲಿಂದ ಊಟಿ ತಲುಪಬೇಕಿತ್ತು. ಆದರೂ ಆ ಸಂಜೆ `ಊರುಕ್ಕು  ಉಪಕಾರಂ' ಸಿನಿಮಾ ನೋಡಲು ಹೋದೆ.

`ಮೇನಾ ಪ್ರಿವ್ಯೆ ಥಿಯೇಟರ್'ನಲ್ಲಿ ಪ್ರದರ್ಶನ ಆಯೋಜಿತವಾಗಿತ್ತು. ಇಂಟರ್‌ವೆಲ್‌ವರೆಗೆ ಚಿತ್ರ ನೋಡಿದೆ. ತುಂಬಾ ಹಿಡಿಸಿತು. ಸಂಗೀತ ಇಳಯರಾಜಾ ಅವರದ್ದೇ ಇರಬೇಕು ಎಂದುಕೊಂಡಿದ್ದೆ. ವಿಶು, `ಚಿತ್ರದ ಸಂಗೀತ ನಿರ್ದೇಶಕರು ಇವರೇ' ಎಂದು ಒಬ್ಬರನ್ನು ಪರಿಚಯ ಮಾಡಿಸಿದರು. ಅವರೇ ವಿಜಯ್ ಆನಂದ್. ಅವರ ಜೊತೆ ಕೆಲಸ ಮಾಡುತ್ತಿದ್ದವನೇ ದಿಲೀಪ. ಸಂಕೇತ್ ಸ್ಟುಡಿಯೋದಲ್ಲಿ ಆ ದಿಲೀಪ ತನ್ನ ಕೀಬೋರ್ಡ್‌ಗಳನ್ನು ಎತ್ತಿಕೊಂಡು ಹೋಗುತ್ತಿದ್ದುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಮದ್ರಾಸ್‌ನಿಂದ ಎಲ್ಲೆಲ್ಲಿ ಕೆಲಸ ಇರುತ್ತಿತ್ತೋ ಅಲ್ಲಿಗೆಲ್ಲಾ ಅವನು ಹೋಗಿಬಿಡುತ್ತಿದ್ದ. `ಡಾನ್ಸ್ ರಾಜಾ ಡಾನ್ಸ್' ಸಿನಿಮಾ ಮಾಡಿದ ಸಂದರ್ಭದಲ್ಲಿ ನಾನು `ನೀನೇ ನನ್ನ ಮುಂದಿನ ಚಿತ್ರದ ಸಂಗೀತ ನಿರ್ದೇಶಕನಾಗು'  ಎಂದೆ. `ಅವೆಲ್ಲಾ ನನಗೆ ಬೇಡ ಸರ್' ಎಂದು ಅವನು ತನ್ನ ಕೆಲಸದಲ್ಲಿ ತಾನು ಮುಳುಗಿದ್ದ. ಅದೇ ದಿಲೀಪ ಎ.ಆರ್.ರೆಹಮಾನ್; ಇಂದು ದೇಶದ ಪ್ರತಿಷ್ಠಿತ ಹಾಗೂ ಹೆಮ್ಮೆಯ ಸಂಗೀತ ನಿರ್ದೇಶಕ. ವಿಜಯ್ ಆನಂದ್ ನನ್ನ ಸುಮಾರು ಹದಿನೆಂಟು ಸಿನಿಮಾಗಳಲ್ಲಿ ಕೆಲಸ ಮಾಡಿದರು. ಅಂಥವರ ಗರಡಿಯಲ್ಲಿ ರೆಹಮಾನ್ ಆಗ ಕೆಲಸ ಮಾಡಿದ ಕ್ಷಣಗಳನ್ನು ಮರೆಯಲು ಸಾಧ್ಯವಿಲ್ಲ.

ಆ ದಿನ ಮೇನಾ ಥಿಯೇಟರ್‌ನಲ್ಲಿ ನೋಡಿದ `ಊರುಕ್ಕು  ಉಪದೇಶಂ' ಚಿತ್ರವನ್ನು ಕನ್ನಡದಲ್ಲಿ ಮಾಡಲು ನಿರ್ಧರಿಸಿದೆ. ರೀಮೇಕ್ ಹಕ್ಕನ್ನು ಬಲು ಬೇಗ ಪಡೆದುಕೊಂಡೆ. ವಿಷ್ಣುವರ್ಧನ್‌ಗೆ ಅದೇ ದಿನ ಫೋನ್ ಮಾಡಿ, ಆ ಚಿತ್ರದ ಪ್ರಸ್ತಾಪ ಮಾಡಿದೆ. ವಿಷ್ಣು ನಟಿಸಲು ಒಪ್ಪಿದ್ದೂ ಆಯಿತು.

`ಗಂಗ್ವಾ' ಚಿತ್ರದ ಎರಡು ಹಂತದ ಚಿತ್ರೀಕರಣದ ಅವಧಿಗಳ ನಡುವೆ 20 ದಿನ ಬಿಡುವಿತ್ತು. ಆಗಲೇ ಆ ಸಿನಿಮಾ ಚಿತ್ರೀಕರಣಕ್ಕೆ ಯೋಜನೆ ಸಿದ್ಧವಾಯಿತು. `ಇಂದಿನ ರಾಮಾಯಣ' ಚಿತ್ರ ಆದದ್ದು ಹಾಗೆ.

ಗಾಯತ್ರಿ ಅವರಿಗೆ ಫೋನ್ ಮಾಡಿ ಚಿತ್ರದ ಪ್ರಮುಖ ಪಾತ್ರದಲ್ಲಿ ಮಾಡುವಂತೆ ಕೇಳಿದೆ. ಅವರು ಏನೊಂದನ್ನೂ ಪ್ರಶ್ನಿಸದೆ ಒಪ್ಪಿಕೊಂಡರು. ತುಳಸಿ ಚಿತ್ರದ ನಾಯಕಿಯಾಗಿ ಆಯ್ಕೆಯಾದರು. ಊಟಿಯಲ್ಲಿ ಒಂದು ಹಾಡಿನ ಚಿತ್ರೀಕರಣ ನಡೆಯಲಿ ಎಂದುಕೊಂಡು ಅಲ್ಲಿಗೆ ತಂಡವನ್ನು ಕರೆದುಕೊಂಡು ಹೋದೆ. 

ವಿಜಯ್ ಆನಂದ್ ಅವರನ್ನು ಕರೆಸಿ, ಅಲ್ಲಿಯೇ ಹಾಡೊಂದಕ್ಕೆ ಮಟ್ಟು ಹಾಕಿಸಿದೆ. ಆ ಹಾಡು ಹಾಗೂ ಒಂದು ಹೊಡೆದಾಟದ ದೃಶ್ಯವನ್ನು ನಾನೇ ನಿರ್ದೇಶಿಸಿದೆ. ಆ್ಯಕ್ಷನ್, ಕಟ್ ಹೇಳುವ ಸಾಹಸಕ್ಕೆ ಮೊದಲು ನಾನು ಕೈಹಾಕಿದ್ದು ಆಗಲೇ. ಬಹುಶಃ ಅದನ್ನು ನೋಡಿಯೇ ವಿಷ್ಣು ನಾನು ನಿರ್ದೇಶಕ ಆಗಬೇಕೆಂದು ಮುಂದೆ ಪಟ್ಟು ಹಿಡಿದದ್ದು.

ಕೂನೂರಿನಲ್ಲಿ ರಿಟ್ಜ್ ಹೆಸರಿನ ಹೋಟೆಲ್ ಇತ್ತು. ಅಲ್ಲಿ ಹಿಂದಿ ಹಾಗೂ ಕನ್ನಡ ಚಿತ್ರತಂಡದವರನ್ನು ಠಿಕಾಣಿ ಹೂಡಿಸಿದೆ. ರಜನೀಕಾಂತ್, ಸುರೇಶ್ ಒಬೆರಾಯ್, ಮಜರ್ ಖಾನ್, ಅಲ್ತಾ ನೂಪುರ್, ವಿಷ್ಣುವರ್ಧನ್, ಗಾಯತ್ರಿ, ಸಿ.ಆರ್.ಸಿಂಹ ಎಲ್ಲರನ್ನೂ ಸೇರಿಸಿ ಭರ್ಜರಿ ಪಾರ್ಟಿ ಮಾಡಿದೆ. ಅದು ಮರೆಯಲಾಗದ ದಿನ.

ನಾವು `ಇಂದಿನ ರಾಮಾಯಣ' ಚಿತ್ರೀಕರಣದ ನಿರ್ಧಾರ ಮಾಡಿದ ನಂತರ `ಊರುಕ್ಕು  ಉಪದೇಶಂ' ತೆರೆಕಂಡಿತು. ಅಮ್ಮಿ ಫಿಲ್ಮ್ಸ್‌ನವರು ಅದರ ಹಂಚಿಕೆದಾರರು. ಆ ಚಿತ್ರ ಅಷ್ಟೇನೂ ಓಡಲಿಲ್ಲ. ಅದನ್ನು ನೋಡಿ ಆ ಹಂಚಿಕೆದಾರರು, `ಅದನ್ನು ಮಾಡಲು ಹೊರಟಿದ್ದೀರಲ್ಲಾ' ಎಂದರು. ವಿಷ್ಣುವರ್ಧನ್‌ಗೂ ವಿಷಯ ಗೊತ್ತಾಗಿ `ಸಿನಿಮಾ ಸುಮಾರಾಗಿ ಓಡುತ್ತಿದೆಯಂತೆ. ನಾವು ಮಾಡುವುದು ಕಷ್ಟವಲ್ಲವೇ' ಎಂದ. `ವಿಷ್ಣುವಿಗೆ ಚಿಕ್ಕಪ್ಪನ ಪಾತ್ರ ಕೊಟ್ಟಿದ್ದೀರಿ. ಅದನ್ನು ಜನ ಒಪ್ಪುವರೇ' ಎಂಬ ಪ್ರಶ್ನೆಯನ್ನೂ ಅಮ್ಮಿ ಫಿಲ್ಮ್ಸ್‌ನವರು ಮುಂದಿಟ್ಟರು. ಏನೇ ಆಗಲೀ, ಆ ಚಿತ್ರ ಮಾಡಲೇಬೇಕು ಎಂದು ತೀರ್ಮಾನಿಸಿದೆ. 18 ದಿನಗಳಲ್ಲೇ ಚಿತ್ರೀಕರಣ ಮುಗಿಸಿದ್ದಾಯಿತು.

ಬೆಂಗಳೂರಿನ ಅಲಂಕಾರ್ ಚಿತ್ರಮಂದಿರದಲ್ಲಿ ಬಿಡುಗಡೆಯಾದ ಆ ಚಿತ್ರ ನೂರು ದಿನ ಓಡಿತು. ಮೈಸೂರಿನಲ್ಲಿ 25 ವಾರ. ಮೊನ್ನೆ ಒಂದು ಮದುವೆಗೆ ಹೋಗಿದ್ದೆ. ಅಲ್ಲಿ ಯಾರೋ ಒಬ್ಬರು ಬಂದು, `ಇಂದಿನ ರಾಮಾಯಣವನ್ನು ಮೊನ್ನೆ ಟೀವಿಯಲ್ಲಿ ನೋಡಿದೆ. ಎಷ್ಟು ಒಳ್ಳೆಯ ಸಂದೇಶವಿದೆ. ಅಂಥದ್ದೇ ಇನ್ನೊಂದು ಸಿನಿಮಾ ಮಾಡಿ' ಎಂದು ಸಲಹೆ ಕೊಟ್ಟರು. `ಇಂದಿನ ರಾಮಾಯಣ'ದ ವಿಷಯದಲ್ಲಿ ನನ್ನ ಲೆಕ್ಕಾಚಾರ ಸುಳ್ಳಾಗಲಿಲ್ಲ. ಗೆಲುವು ದಕ್ಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT