ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬ್ಬ ಮಾಡಲು ಆಗದವರ ವೃತ್ತಿ ಸಂಕಟ

Last Updated 3 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಬ್ಬದ ಸಾಲು ಬಂದು ಎಲ್ಲರೂ ಮನೆಯಲ್ಲಿ ಕೂಡಿ ಸಂಭ್ರಮಿಸುತ್ತಿರುವಾಗ ಕೆಲವರು ಕೆಲಸದಲ್ಲಿ ತೊಡಗಿರಲೇ ಬೇಕಾಗುತ್ತದೆ. ಆಸ್ಪತ್ರೆ ಸಿಬ್ಬಂದಿ, ಮಾಲ್ಗಳಲ್ಲಿ ಕೆಲಸ ಮಾಡುವವರು, ಪೊಲೀಸರು, ಮಾಧ್ಯಮ ನೌಕರರು, ಹೋಟೆಲ್ ಮತ್ತು ರೆಸ್ಟೋರೆಂಟ್ ಸಿಬ್ಬಂದಿ, ಪೌರಕಾರ್ಮಿಕರು, ವಿದ್ಯುತ್ ಮತ್ತು ನೀರು ಸರಬರಾಜು ಮಾಡುವವರು... ಜಗವೆಲ್ಲ ಸಡಗರದಲ್ಲಿ ಮುಳುಗಿರುವಾಗ ಇಂಥವರು ತಮ್ಮ ಕರ್ತವ್ಯದಲ್ಲಿ ನಿರತರಾಗಿರುತ್ತಾರೆ.

ಪತ್ರಿಕೋದ್ಯಮದಲ್ಲಿ ಇಂಥ ಅನಿವಾರ್ಯ ಇರುವುದರಿಂದ ಏನಾಗಿದೆ? ಡೆಸ್ಕ್ ಮತ್ತು ಎಡಿಟೋರಿಯಲ್ ಪ್ರೊಡಕ್ಷನ್ ಕೆಲಸಕ್ಕೆ ಇಷ್ಟಪಟ್ಟು ಬರುವ ಜನ ತೀರ ಅಪರೂಪವಾಗಿ ಹೋಗಿದ್ದಾರೆ. ನಾಲ್ಕೈದು ಮಾಧ್ಯಮ ಕಾಲೇಜುಗಳನ್ನು ಹತ್ತಿರದಿಂದ ಕಾಣುವ ಅವಕಾಶ ಇದ್ದುದರಿಂದ ಇದನ್ನು ಹೇಳುತ್ತಿದ್ದೇನೆ. ಅಲ್ಲಿ ಓದುವ ವಿದ್ಯಾರ್ಥಿಗಳು ಬಹುಪಾಲು ಟಿವಿ ಕಡೆಗೆ ಹೋಗುವ ತವಕದಲ್ಲಿರುತ್ತಾರೆ. ಅವರ ಮಟ್ಟಿಗೆ ಇಂದು ಟಿ.ವಿ. ಮಾಧ್ಯಮಕ್ಕಿರುವ ಆಕರ್ಷಣೆ ಮುದ್ರಣ ಮಾಧ್ಯಮಕ್ಕಿಲ್ಲ. ಟಿ.ವಿ.ಯಲ್ಲಿ ಕೆಲಸ ಮಾಡುವುದು ಗ್ಲಾಮರಸ್ ಎಂದು ತಿಳಿದು ಅಲ್ಲಿ ಹೆಸರು ಮಾಡುವ ಕನಸು ಕಾಣುತ್ತಿರುತ್ತಾರೆ. ಬರವಣಿಗೆಗಿಂತ ಮಾತುಗಾರಿಕೆ ಕಲಿಯುವ ಉತ್ಸಾಹದಲ್ಲಿರುತ್ತಾರೆ.

ಮುದ್ರಣ ಮಾಧ್ಯಮದಲ್ಲಿ ಸಿನಿಮಾ ಸ್ಟಾರ್ ಥರ ಮೆರೆಯುವ ಪತ್ರಕರ್ತರು ತೀರ ಅಪರೂಪ. ಹೆಸರು ಮಾಡುವುದು ಕೂಡ ವರದಿಗಾರರು, ಡೆಸ್ಕ್ ಪತ್ರಕರ್ತರಲ್ಲ. ಇಂಥ ಕಾರಣಗಳೆಲ್ಲ ಸೇರಿ ಡೆಸ್ಕ್ ಪತ್ರಕರ್ತರು ಕೌಟುಂಬಿಕ ಮತ್ತು ಸಾಮಾಜಿಕ ಜೀವನ ಮಿಸ್ ಮಾಡಿಕೊಳ್ಳುತ್ತಿರುತ್ತಾರೆ. ಮಧ್ಯಾಹ್ನ ಅಥವಾ ಸಂಜೆಯಿಂದ ಪ್ರಾರಂಭವಾಗಿ ಅರ್ಧ ರಾತ್ರಿ ಕಳೆಯುವವರೆಗೂ ಡೆಸ್ಕ್ ಕೆಲಸ ಮಾಡುವವರು ಕುಟುಂಬದ ಜೊತೆ ಒಂದು ನಾಟಕ, ಸಿನಿಮಾ, ಸಂಗೀತ ಕಚೇರಿಗೆ ಹೋಗುವುದು ಅಸಾಧ್ಯವಾಗಿಹೋಗಿರುತ್ತದೆ.

ಇಂಥ ಸೃಜನಾತ್ಮಕ ಅವಕಾಶವಿಲ್ಲದೆ ಮೊದ್ದಾಗಿ ಹೋಗುವ, ಬೌದ್ಧಿಕವಾಗಿ ಬೆಳೆಯಲಾಗದ ಭಯವೂ ಹಲವು ಪತ್ರಕರ್ತರನ್ನು ಕಾಡುತ್ತಿರುತ್ತದೆ. ನಾನು ಬಲ್ಲ ಒಬ್ಬರು ಪ್ರತಿಭಾವಂತ ಡೆಸ್ಕ್ ಪತ್ರಕರ್ತೆ ಸುಮಾರು ₨ ೮೦,೦೦೦ ಸಂಬಳ ಪಡೆಯುತ್ತಿದ್ದರು. ಅದನ್ನು ಬಿಟ್ಟು ₨ ೨೦,೦೦೦ದ ಪಾರ್ಟ್ ಟೈಮ್ ಕೆಲಸ ಒಪ್ಪಿಕೊಂಡಿದ್ದಾರೆ. ದುಡ್ಡು ಕಡಿಮೆ ಆಯಿತು ಎಂಬ ಬೇಜಾರೇನೋ ಅವರಲ್ಲಿದೆ. ಆದರೆ ತಮಗೆ ಡೆಸ್ಪರೇಟ್ ಆಗಿ ಬೇಕಾದ ಸಮಯ ಕೊನೆಗೂ ಸಿಕ್ಕಿತಲ್ಲ ಎನ್ನುವ ಖುಷಿಯಲ್ಲಿ ಸದ್ಯಕ್ಕೆ ತೇಲಾಡುತ್ತಿದ್ದಾರೆ! 
  
ತಿದ್ದಿ ಬರೆಯುವ, ಸಮಂಜಸ ಹೆಡ್‌ಲೈನ್ ಕೊಡುವ, ಮಾಹಿತಿ ಸರಿಯಿದೆಯೋ ಇಲ್ಲವೋ ಚುರುಕಾಗಿ ಕಂಡು ಹಿಡಿಯುವ, ಪೇಜ್ ಡಿಸೈನ್ ಮಾಡಲು ಬೇಕಾದ ಸೌಂದರ್ಯ ಪ್ರಜ್ಞೆ ಹೊಂದಿರುವ ಡೆಸ್ಕ್ ಪತ್ರಕರ್ತರು ಬರುಬರುತ್ತಾ ಕಡಿಮೆಯಾಗುತ್ತಿದ್ದಾರೆ. ಚೆನ್ನಾಗಿ ಮಾತಾಡಲು ಬಂದರೂ ಬರೆಯಲು ಬಾರದವರ ಸಂಖ್ಯೆ ಹೆಚ್ಚಾಗುತ್ತಿದೆ. ಬರವಣಿಗೆಯ ಯುಗ ಕಳೆದು ಮಾತುಗಾರಿಕೆಯ ಯುಗ ಮತ್ತೆ ಮರಳಿದೆ ಎಂಬ ವ್ಯಾಖ್ಯಾನ ಸರಿ ಇರಬಹುದು. ಆದರೆ ಡೆಸ್ಕ್ ಕೆಲಸ ಮಾಡಲು ಅವಶ್ಯವಾದ ದಕ್ಷತೆ, ಅರಿವು, ಆಸಕ್ತಿ ಇರುವವರು ಕೂಡ ಪತ್ರಿಕೋದ್ಯಮದಿಂದ ದೂರ ಉಳಿಯುವ ಪ್ರಸಂಗಗಳು ಹೇರಳವಾಗುತ್ತಿವೆ. ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ವರದಿಗಾರರು ಸಿಗುವಷ್ಟು ಸುಲಭವಾಗಿ ಡೆಸ್ಕ್ ಕೆಲಸ ಮಾಡುವವರು ಸಿಗುತ್ತಿಲ್ಲ.

ಡೆಸ್ಕ್ ಕೆಲಸದಲ್ಲಿ ಜಾಣ್ಮೆ ಇರುವವರು ಸಾಮಾನ್ಯವಾಗಿ ಅಂತರ್ಮುಖಿ ಸ್ವಭಾವದವರು ಎಂಬ ಭಾವನೆ ಇದೆ. ಓದಿನಲ್ಲಿ ಆಸಕ್ತಿಯಿರುವ, ವರದಿಗಾರರಿಗಿಂತ ಚೆನ್ನಾಗಿ ಬರೆಯುವ, ತಪ್ಪು ಕಂಡು ಹಿಡಿದು ಸರಿಪಡಿಸುವ ಆತ್ಮವಿಶ್ವಾಸವಿರುವ ಪತ್ರಕರ್ತರು ಡೆಸ್ಕ್ ಕೆಲಸಕ್ಕೆ ಹೋಗುತ್ತಾರೆ. ಅಪರಿಚಿತರನ್ನೂ ಮಾತಾಡಿಸಿ, ಅಧಿಕಾರಿಗಳನ್ನು ಪುಸಲಾಯಿಸಿ ಅಥವಾ ಗದರಿಸಿ ಸುದ್ದಿ ತರುವ ಛಾತಿ ಇದ್ದರೆ ಅಂಥವರು ವರದಿಗಾರಿಕೆಗೆ ಹೋಗುತ್ತಾರೆ ಎಂಬುದು ಈ ನಂಬಿಕೆಯ ಇನ್ನೊಂದು ಮುಖ.

‘ಟೆಂಪಲ್ ಟ್ರೀಸ್ ದೆಜೈನ್ಸ್’ ಸಂಸ್ಥೆಯಲ್ಲಿ ಸುನೀತಾ ಧೈರ್ಯಮ್

ಐದಾರು ವರ್ಷದಿಂದೀಚೆಗೆ ಡೆಸ್ಕ್ ಕೆಲಸ ಮಾಡುತ್ತಿದ್ದ ಉತ್ತಮ ಕಸುಬುದಾರರು ಪತ್ರಿಕೋದ್ಯಮವನ್ನೇ ಬಿಟ್ಟು ಬೇರೆಡೆ ಹೋಗುತ್ತಿದ್ದಾರೆ. ಇದು ೧೯೯೮-೯೯ ಸಮಯದ ಇಂಟರ್ನೆಟ್ ಬೂಮ್ ವಲಸೆಯ ರೀತಿಯದಲ್ಲ. ಡೆಸ್ಕ್ ಕೆಲಸವೇ ಸಾಕಾಗಿ ಬೇರೆಡೆ ಹೋಗುತ್ತಿರುವವರು ಇಂದು ಸುಮಾರು ಜನರಿದ್ದಾರೆ.

ಅಂಥವರ ಹೊಸ ನೌಕರಿ: ಟೆಕ್ ರೈಟಿಂಗ್, ಕಾರ್ಪೊರೇಟ್ ಕಮ್ಯುನಿಕೇಷನ್, ಸುದ್ದಿಪತ್ರ ಸಂಪಾದನೆ, ಕಾಲೇಜಿನಲ್ಲಿ ಪಾಠ ಹೇಳುವುದು... ಇವೆಲ್ಲ ಅವರು ಅಷ್ಟಾಗಿ ಇಷ್ಟಪಡುವ ಕೆಲಸವಲ್ಲದಿದ್ದರೂ, ವಾರಕ್ಕೆರಡು ದಿನ ರಜಾ, ಕ್ಯಾಬ್ ಸೌಕರ್ಯ, ಹಬ್ಬ ಹರಿದಿನ ಬಂದಾಗ ಮನೆಯಲ್ಲಿರುವ ಅನುಕೂಲ, ನೈಟ್ ಶಿಫ್ಟ್ ಇಲ್ಲದಿರುವುದು, ಮತ್ತು ಒಳ್ಳೆಯ ಸಂಬಳ ಅವರನ್ನು ಆ ದಿಕ್ಕಿನಲ್ಲಿ ಒಯ್ಯುತ್ತಿವೆ.

ಇಂಥ ಕಷ್ಟವೇ ಇಂಗ್ಲೆಂಡ್ ದೇಶದ ಪತ್ರಿಕೋದ್ಯಮಕ್ಕೂ ಎದುರಾಗಿದೆಯಂತೆ. ಅವರು ಕಂಡುಕೊಂಡ ಪರಿಹಾರ ಏನು? ಡೆಸ್ಕ್ ಪತ್ರಕರ್ತರಿಗೆ ವರದಿಗಾರರಿಗಿಂತ ಎರಡು ಪಟ್ಟು ಹೆಚ್ಚು ಸಂಬಳ ಕೊಟ್ಟು ಅವರನ್ನು ಉಳಿಸಿಕೊಳ್ಳುತ್ತಿದ್ದಾರಂತೆ. ಇದು ‘ಡಿಮ್ಯಾಂಡ್ ಅಂಡ್ ಸಪ್ಲೈ’ ಆಟ ಇರಬಹುದು. ಆದರೆ ಇದು ಆರೋಗ್ಯಕರವೇ? ಪ್ರಿಂಟ್ ಮಾಧ್ಯಮದ ಥ್ರಿಲ್ ಗಿಂತ ಅದರ ಕಷ್ಟ ದೊಡ್ಡದಾಗಿ ಗೋಚರಿಸಿ, ಅಂಥ ದರ್ಶನದಿಂದ ಆಗಬಹುದಾದ ಏರು ಪೇರು ಈಗ ನಮ್ಮ ಮುಂದಿದೆ.  
ಬಂಡೀಪುರದಿಂದ ಏನು ತಂದಿರಿ?

ಬೆಂಗಳೂರಿನ ಪ್ರವಾಸಿಗರು ಬಂಡಿಪುರಕ್ಕೆ ಹೋಗಿ ವೀಕೆಂಡ್ ಕ್ಯಾಂಪ್ ಮಾಡಿ ಬರುವುದು ತುಂಬ ಜನಪ್ರಿಯವಾಗಿದೆ. ಐದಾರು ಗಂಟೆ ಪ್ರಯಾಣ ಮಾಡಿ ಬಂಡೀಪುರ ತಲುಪುವ ಪ್ರವಾಸಿಗರಿಗೆ ಮೊದಲು ಎದುರಾಗುವುದು ಕೆಲವು ಮಲಯಾಳಿ ರೆಸ್ಟೋರೆಂಟ್ಗಳು. ಕೇರಳದ ಊರುಗಳಿಂದ ಮೈಸೂರು, ಬೆಂಗಳೂರಿಗೆ ಬರಲು ಇದೊಂದು ಮುಖ್ಯದಾರಿ. ಹಾಗಾಗಿ ದಾರಿಯುದ್ದಕ್ಕೂ ಕನ್ನಡ ಮತ್ತು ಇಂಗ್ಲಿಷ್ ಅಲ್ಲದೆ ಮಲಯಾಳಂನಲ್ಲಿ ಕೂಡ ಬೋರ್ಡ್ ಹಾಕಿರುವುದನ್ನು ಕಾಣಬಹುದು. ಬಂಡೀಪುರ ಪ್ರವೇಶ ಮಾಡುವ ಮುನ್ನ ಬಲಗಡೆ ನಿಮ್ಮ ಕಣ್ಣಿಗೆ ಒಂದು ಸವೆನಿಯರ್ ಅಂಗಡಿ ಬೀಳುತ್ತದೆ. ಅದರ ಹೆಸರು ‘ಟೆಂಪಲ್ ಟ್ರೀಸ್ ವೈಲ್ಡ್ಲೈಫ್ ಸವೆನಿಯರ್ ಶಾಪ್’.

ಸುನೀತಾ ಧೈರ್ಯಮ್ ಎಂಬ ಕಲಾವಿದೆ ಹುಟ್ಟು ಹಾಕಿರುವ ಸಂಸ್ಥೆ ‘ಟೆಂಪಲ್ ಟ್ರೀಸ್ ದೆಜೈನ್ಸ್’ ( www.templetreedesigns.com ). ಇದರ ಉದ್ದೇಶ ಅವರೇ ನಡೆಸುವ ಮರಿಯಮ್ಮ ಚಾರಿಟೇಬಲ್ ಟ್ರಸ್ಟ್ ಗೆ ಸಹಾಯ ಮಾಡುವುದು. ಕಾಡಿನಲ್ಲಿ ವಾಸವಾಗಿರುವ ಜನರಿಗೆ ಈ ಸಂಸ್ಥೆ ಉಚಿತ ವೈದ್ಯಕೀಯ ನೆರವು ನೀಡುತ್ತಿದೆ. ಬಂಡಿಪುರ ಹತ್ತಿರದ ಮಂಗಳ ಹಳ್ಳಿಯಲ್ಲಿ ಸುನೀತ ನೆಲೆಸಿ ಈ ಸೇವಾ ಸಂಸ್ಥೆಯನ್ನು ನಡೆಸುತ್ತಿದ್ದಾರೆ.

ಪ್ರವಾಸಿಗರು ನೆನಪಿಗೆ ಒಯ್ಯಲು ಅಂಗಿ, ಟೋಪಿ, ಚೀಲಗಳನ್ನು ಸುನೀತ ಅವರ ಸಂಸ್ಥೆ ತಯಾರಿಸಿ ಮಾರುತ್ತಿದೆ. ಆ ಪ್ರದೇಶದ ಜನ ಬಿಡಿಸಿದ ಚಿತ್ರಗಳು, ತಯಾರಿಸಿದ ಉಪ್ಪಿನಕಾಯಿಗಳ ಜೊತೆಗೆ ಕಾಡು ಮತ್ತು ವನ್ಯಜೀವಿಗಳ ಬಗೆಗಿನ ಪುಸ್ತಕಗಳೂ ಈ ಅಂಗಡಿಯಲ್ಲಿ ಸಿಗುತ್ತವೆ. ನಾನು ಕಂಡಂತೆ ಇಷ್ಟು ಚೆಂದದ ನೆನಪಿನ ವಸ್ತುಗಳು ಆ ಸುತ್ತಮುತ್ತ ಬೇರೆಲ್ಲೂ ಸಿಗುವುದಿಲ್ಲ. ಬಂಡೀಪುರ ಕಾಡಿಗೆ ಹೋಗುವ ಪ್ಲಾನ್ ಇದ್ದರೆ ಈ ಸದಭಿರುಚಿಯ ಅಂಗಡಿಗೆ ಹೋಗಿ ಬನ್ನಿ. 

ನಮಸ್ಕಾರ. ಮತ್ತೆ ಸಿಗೋಣ 
ಒಂದು ವರ್ಷಕ್ಕೂ ಹೆಚ್ಚು ಕಾಲ ಈ ಅಂಕಣ ಬರೆದಿದ್ದೇನೆ. ಈಗ ವಿದಾಯ ಹೇಳುವ ಸಮಯ ಬಂದಿದೆ. ಇದು ‘ಮೆಟ್ರೊ’ ಸಂಚಿಕೆಯ ಅಂಕಣವಾಗಿದ್ದರಿಂದ ಇಂದಿನ ಬೆಂಗಳೂರಿನ ಬದುಕಿನ ಅಂಶಗಳು ಇಲ್ಲಿ ಪ್ರತಿಫಲನವಾಗಬೇಕು ಎಂಬ ಆಶಯದಿಂದ ವಿಷಯಗಳನ್ನು ಆರಿಸಿಕೊಳ್ಳುತ್ತಿದ್ದೆ. ಆಯಾ ವಾರದ ವಿಷಯಗಳಲ್ಲದೇ ನನಗೆ ಕುತೂಹಲ, ವಿಸ್ಮಯ ಹುಟ್ಟಿಸಿದ ವಿಷಯಗಳ ಬಗ್ಗೆಯೂ ಬರೆಯುವ ಅವಕಾಶ ಇಲ್ಲಿ ನನಗಿತ್ತು.

ಬರೆಯಲು ಪ್ರೋತ್ಸಾಹಿಸಿದ ಸಂಪಾದಕ ಕೆ.ಎನ್.ಶಾಂತಕುಮಾರ್ ಅವರಿಗೆ, ಸ್ನೇಹಿ ‘ಮೆಟ್ರೊ’ ಸಿಬ್ಬಂದಿ ವರ್ಗಕ್ಕೆ, ಮತ್ತು ಆತ್ಮೀಯ ಓದುಗರಿಗೆ ನನ್ನ ವಂದನೆ. ಇಲ್ಲಿ ಬರೆದ ವಿಷಯಗಳಿಗೆ ಸೂಕ್ಷ್ಮ ಗಮನ ಕೊಟ್ಟು ಹಲವು ಓದುಗರು ಇಮೇಲ್ ಮಾಡಿ ಪ್ರತಿಕ್ರಿಯಿಸಿದ್ದಾರೆ. ಇವರೆಲ್ಲರಿಗೂ ನಾನು ಋಣಿ. ಥ್ಯಾಂಕ್ಸ್ ಅಂಡ್ ಗುಡ್‌ಬೈ! ಮತ್ತೆ ಭೇಟಿಯಾಗೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT