ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಮರ ಮಧುರ ಸೋಮ! ನೀ ಬಾ ಬೇಗ ಚಂದ್ರು ಮಾಮ!

Last Updated 16 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ದೊಡ್ಡ ಪರೀಕ್ಷೆಗಳೆಂದರೆ ಮೊದಲ ಪ್ರೇಮದ ಥರ. ತಲ್ಲಣ, ತವಕ, ಕುತೂಹಲ, ರೋಮಾಂಚನ, ಭ್ರಮನಿರಸನ, ಒಂಥರಾ ನಿರೀಕ್ಷೆ, ಎಲ್ಲ ಮುಗಿದ ನಂತರದ ನಿಟ್ಟುಸಿರು, ನೆನಪು, ಕಡೆಗೆ ಖಾಲಿತನವೂ ಒಂಥರಾ ಮೆಲುಕು ಹಾಕುವಂತೆ ಇರುತ್ತದೆ. ಪರೀಕ್ಷೆಯ ಬಗ್ಗೆ ತಾತ್ಸಾರ ಇದ್ದರಂತೂ ಯಾವ ತೊಂದರೆಯೂ ಇಲ್ಲ.

‘ಬಂದದ್ದೆಲ್ಲಾ ಬರಲಿ’ ಎನ್ನುವಂತೆ ಬದುಕುವ ಹತ್ತು ಹಲವು ಜನ ಭೂಮಂಡಲದ ಮೇಲೆ ಎಲ್ಲಾ ಕಾಲಮಾನದಲ್ಲೂ, ಎಲ್ಲಾ ಕೋರ್ಸುಗಳಲ್ಲೂ, ಸಕಲ ತರಗತಿಗಳಲ್ಲೂ ಇರುತ್ತಾರೆ. ಅವರ ದಾರಿಯೇ ಬೇರೆ. ಅಂಥವರಲ್ಲಿ ಹಲವರು ಕೇವಲ ಉದ್ಯೋಗಿಗಳಾಗಲು ಹುಟ್ಟಿದವರಲ್ಲ; ಬದಲಾಗಿ ಆನೆ ನಡೆದಂತೆ ತಮ್ಮದೇ ದಾರಿ ಮಾಡಿಕೊಳ್ಳುವವರು.

ಆದರೆ ಇನ್ನು ಕೆಲವರಿಗೆ ‘ಪರ್ಫಾರ್ಮೆನ್ಸ್ ಫಿಯರ್’ ಎನ್ನುವ ದೇವರೊಂದು ಮೈಮೇಲೆ ಬಂದು ಇಲ್ಲದ ಆಟಗಳನ್ನು ಆಡಿಸುತ್ತದೆ. ಅಂಥವರು ಸೂತ್ರದ ಬೊಂಬೆಗಳಂತೆ ಆಡುತ್ತಿರುತ್ತಾರೆ. ಸೂತ್ರ ಹಿಡಿದ ಕೈ ಅಗೋಚರ, ಅಗಮ್ಯ. ಭಯ ಮಾತ್ರ ದೃಶ್ಯವಾಗಿರುವಂಥದ್ದು; ಪಂಚೇಂದ್ರಿಯಗಳಿಗೆ ನಿಲುಕುವಂಥದ್ದು.
ಪರೀಕ್ಷೆ ನಡೆಯುವಾಗ ಐದು ಜನ ಹುಡುಗಿಯರ ಗುಂಪೊಂದು ಅವರವರ ವ್ಯಕ್ತಿತ್ವಕ್ಕೆ ತಕ್ಕಂತೆ ಎರಡು ಭಾಗವಾಯಿತು.

ಯಾವ ತಂಡದಲ್ಲಿ ಎಷ್ಟು ಜನ ಇದ್ದರೆನ್ನುವುದು ಮುಖ್ಯವಲ್ಲ. ಬದಲಾಗಿ ಯಾವ ತಂಡದಲ್ಲಿ ಎಷ್ಟು ಬಲ ಇದ್ದಿತೆಂಬುದು ಮುಖ್ಯ. ಉದಾಹರಣೆಗೆ ಇಂದುಮತಿ ಮತ್ತು ರಿಂಕಿ ಒಂದು ಕಡೆ ಸೇರಿದರೆ ಇಬ್ಬರು ಇದ್ದಾರೆ ಎನ್ನುವುದು ಲೆಕ್ಕಕ್ಕೆ ಮಾತ್ರ. ನಿಜವಾಗಿ ಇರುತ್ತಿದ್ದುದು ಒಂದೂವರೆ ಜನವಷ್ಟೇ. ರಿಂಕಿ ಎಷ್ಟೇ ಆಟ ಆಡಿದರೂ, ಎಷ್ಟು ಜನ ಹುಡುಗರ ಜೊತೆ ಓಡಾಡಿದರೂ, ಎಲ್ಲೆಲ್ಲಿಗೋ ತನ್ನ ಕಾರನಾಮೆಗಳನ್ನು ಕೊಂಡೊಯ್ದರೂ ಓದಿನ ವಿಷಯಕ್ಕೆ ಬಂದಾಗ ಅವಳ ಮನಸ್ಸು ಪಕ್ಕಾ ವಿಧೇಯ ವಿದ್ಯಾರ್ಥಿಯೇ.

ರಿಂಕಿಯ ಈ ದ್ವಂದ್ವ ಎಲ್ಲರಿಗೂ ಸೋಜಿಗ ಹುಟ್ಟಿಸುತ್ತಿದ್ದುದಂತೂ ನಿಜವೇ. ‘ನೋಡೇ ಲೌಡೀನಾ! ಎಲ್ಲೆಲ್ಲೋ ಸುತ್ತಿ ಕಾಲ ಕಳೆದ್ಲು. ಈಗ ನೋಡಿದ್ರೆ ಎಲ್ರ ತಲೆ ಮೇಲೆ ಹೊಡಿಯೋ ಹಂಗೆ ಮಾರ್ಕ್ಸ್ ತೆಗೆದುಬಿಡ್ತಾಳೆ!’ ಅಂತ ಅರ್ಧ ಅಸೂಯೆಯಿಂದಲೂ, ಅರ್ಧ ಅತಿ ಮೆಚ್ಚುಗೆಯಿಂದಲೂ ಇಂದುಮತಿ ಆಗಾಗ ಹೇಳುತ್ತಿದ್ದಳು.

ರಿಂಕಿ ಇದ್ದದ್ದೂ ಹಾಗೇಯೇ. ಕ್ಲಾಸಿಗೆ ಹೋದಳೋ ಬಿಟ್ಟಳೋ, ಆದರೆ ಎಂದೂ ಪ್ರೊಫೆಸರುಗಳ ಮುಂದೆ ಕೈಯ್ಯೊಡ್ಡುವಷ್ಟು ಅಟೆಂಡೆನ್ಸ್ ಶಾರ್ಟೇಜ್ ಮಾಡಿಕೊಳ್ಳಲಿಲ್ಲ. ಅಲ್ಲದೆ ಕ್ಲಾಸಿನಲ್ಲಿ ಎಲ್ಲ ವಿಷಯಗಳ ಬಗ್ಗೆ ಚರ್ಚೆಯಲ್ಲಿ ಅನಾಯಾಸವಾಗಿ ಭಾಗವಹಿಸಿ ಬಹುಮಾನಗಳನ್ನು ಗೆಲ್ಲುತ್ತಿದ್ದಳು. ಅಷ್ಟೇ ವೇಗವಾಗಿ ಮತ್ತೆ ಸಲೀಸಾಗಿ ಒಬ್ಬ ಹುಡುಗನನ್ನು ಹಿಂದಕ್ಕೆ ಬಿಟ್ಟು ಇನ್ನೊಬ್ಬ ಹುಡುಗನ ಜೊತೆ ಓಡಾಡಿಕೊಂಡಿರುತ್ತಿದ್ದಳು.

ಯಾರೋ ಒಬ್ಬ ಪಂಜಾಬಿ ಹುಡುಗನ ಬಗ್ಗೆ ಮಾತ್ರ ಬಹಳ ತೀವ್ರವಾಗಿ ತಲೆ ಕೆಡಿಸಿಕೊಂಡದ್ದನ್ನ ಬಿಟ್ಟರೆ ಭಾವನಾತ್ಮಕವಾಗಿ ಅವಳು ಎಂದೂ ಕಂಟ್ರೋಲ್ ತಪ್ಪಿ ನಡೆದುಕೊಳ್ಳಲಿಲ್ಲ.

ಕ್ಯಾಂಪಸ್ಸಿನ ತುಂಬಾ ಅವಳ ಮಾಜಿ, ಹಾಲಿ, ಭವಿಷ್ಯದ ಪ್ರೇಮಿಗಳಿದ್ದರೂ ಯಾರೂ ಹೊಡೆದಾಟಕ್ಕೆ ಬೀಳುವುದಾಗಲೀ, ಅವಳಿಗೆ ಎಂದೂ ತೊಂದರೆ ಕೊಡುವುದಾಗಲೀ ಮಾಡಲಿಲ್ಲ. ಎಟಿ ಎಂನಲ್ಲಿ ಕ್ಯೂ ನಿಂತಷ್ಟೇ ಶಿಸ್ತಿನಿಂದ, ಮತ್ತು ಅಷ್ಟೇ ಸಹಜವಾಗಿ ತಮ್ಮ ಸರದಿ ಮುಗಿದ ನಂತರ ಜಾಗ ಖಾಲಿ ಮಾಡುತ್ತಿದ್ದರು. ಸಂಬಂಧ ಆರಿದ ನಂತರ ರಿಂಕಿಯೂ ಅವರನ್ನು ಅಷ್ಟೇ ಗೌರವದಿಂದ ಬೀಳ್ಕೊಡುತ್ತಿದ್ದಳು ಅನ್ನಿಸುತ್ತೆ.

ಪರೀಕ್ಷೆ ಸಮಯ ಎಲ್ಲದಕ್ಕೂ ಒಂಥರಾ ಪರ್ವ ಕಾಲ. ಇದ್ದಕ್ಕಿದ್ದ ಹಾಗೆ ಕಾಣದ ದೇವರುಗಳೂ ಕಂಡು ಬಿಡುತ್ತಾರೆ. ಹಾಸ್ಟೆಲಾದರೆ ಟೇಬಲ್ಲಿನ ಮೇಲೆ ಪುಸ್ತಕಗಳ ಜೊತೆ ಒಂದು ಪುಟ್ಟ ಸರ್ವಧರ್ಮ ಸಮನ್ವಯ ದೇವಸ್ಥಾನ ಸೃಷ್ಟಿಯಾಗುತ್ತದೆ. ಕಣ್ ದೃಷ್ಟಿ ಗಣಪತಿಯ ಚಿತ್ರ, ಹಸ್ತದಿಂದ ಬೆಳಕನ್ನು ಹರಿಸುತ್ತಿರುವ ಸುಕ್ಕುಗಣ್ಣಿನ ಸಾಯಿಬಾಬ, ಜನಭರಿತ ಮೆಕ್ಕಾದ ಫೋಟೊ, ಬಾಲಯೇಸುವಿನ ಪೇಂಟಿಂಗು, ಅಲ್ಲೇ ತುಳಸೀ-ರುದ್ರಾಕ್ಷಿ ಮಾಲೆ, ತುದಿಗೆ ಶಿಲುಬೆಯುಳ್ಳ ರೋಸರಿ, ದಾರದ ಕುಚ್ಚಿನ ಬಣ್ಣ ಬಣ್ಣದ ಮಣಿಸರಗಳು– ಎಲ್ಲಕ್ಕೂ ಸಮಾನ ನಮನ ಸಲ್ಲಿಸಲು ಪುಟ್ಟ ದೀಪಗಳು, ಕ್ಯಾಂಡಲ್ಲುಗಳು ಇತ್ಯಾದಿ.

ಮತ್ತೆ ನಮ್ಮ ಪಾಪಗಳನ್ನು ತೊಳೆದು ಮಾರ್ಕ್ಸ್ ಕೊಡಲಿಕ್ಕೆ ಎಲ್ಲಾ ದೇವರ ವಶೀಲಿ ಬೇಕಲ್ಲ? ಪರೀಕ್ಷೆಯ ಇನ್-ಚಾರ್ಜು ಯಾವ ಧರ್ಮದವರಿದ್ದಾರೋ ಎನ್ನುವುದು ಗೊತ್ತಿಲ್ಲದಿದ್ದಾಗ ಎಲ್ಲರಿಗೂ ನಮಸ್ಕಾರ ಹಾಕುವುದು ಸೇಫ್ ತಾನೇ?

ಅದ್ಯಾವ ಭಯ ಎಲ್ಲರನ್ನೂ ನಡೆಸುತ್ತಿತ್ತು ಎನ್ನುವುದು ಗೊತ್ತಿಲ್ಲ. ಆದರೆ ಎಲ್ಲರೂ ಸಿಕ್ಕಸಿಕ್ಕಲ್ಲಿ ಕೂತು ಓದುವವರೇ. ಓದಿನ ತೀವ್ರತೆಯಲ್ಲಿ ಜೀವನದ ದಾರಿ ಹೊಸತಾಗಿ ಮೊಳೆಯುವುದೇನೋ ಎನ್ನುವಂತೆ. ಇಂದುಮತಿ ಮತ್ತು ವಿಜಿಗೆ ಇಂತಹ ಯಾವ ಅಂಜಿಕೆ, ಸಂಕೋಚಗಳೂ ಇಲ್ಲದಿದ್ದರೂ ತಕ್ಕ ಮಟ್ಟಿಗೆ ಅವರೂ ಕೂತು ಓದಿಕೊಂಡಿದ್ದರು.

ಕಾಲ ಮಾತ್ರ ಕ್ರೂರಿ. ಪರೀಕ್ಷೆಯ ಭಯದ ಜೊತೆಗೆ ತಂದೆ ತಾಯಿಗಳಿಂದ ಫೋನ್ ಕರೆಯನ್ನೂ ಮಾಡಿಸಿಬಿಟ್ಟಿದ್ದ, ಎಲ್ಲರ ಮಾತಾ ಪಿತೃಗಳು ಕೊನೆ ಪರೀಕ್ಷೆ ಮುಗಿದ ದಿನವೇ ಬರುವವರಿದ್ದರು. ಆದರೆ ಯಾವುದೇ ಅಡ್ವೆಂಚರ್ ಇಲ್ಲದೆ ಈ ದಿನಗಳನ್ನ ಮುಗಿಸುವುದು ಹೇಗೆ? ಹುಡುಗಿಯರ ಮನಸ್ಸಿನಲ್ಲಿ ಆಲೋಚನೆ ಬೋರು ಕೊರೆಯುತ್ತಿತ್ತು. ಒಂದು ಬೀಳ್ಕೊಡುಗೆಯ ಸೋಮರಸ ಗೋಷ್ಟಿ ಇಲ್ಲದೆ ಹೃದಯ ತುಂಬಿ ಬಂದೀತು ಹೇಗೆ? ಕಣ್ಣೀರು ಉಕ್ಕೀತು ಹೇಗೆ? ಮುಂದಿನ ಜೀವನದ ಅನಂತ ಶೂನ್ಯ ಕಂಡೀತು ಹೇಗೆ? ಸೋಮನಿಲ್ಲದೆ ಸುಖವಿಲ್ಲ. ಸೋಮನಿಲ್ಲದೆ ನೋವಿಲ್ಲ!

ಅದಕ್ಕಂತಲೇ ಪರೀಕ್ಷೆಗಳು ನಡೆಯುತ್ತಿದ್ದ ಕಾಲದಲ್ಲಿ ಒಂದು ಪ್ಲಾನಿಂಗ್ ಆಯಿತು. ಎಲ್ಲರ ಮನೆಗಳಿಗೆ ಹೊಸ ಮಾಹಿತಿ ಹೋಯಿತು. ಕೊನೆ ಪರೀಕ್ಷೆ ಆದ ಮೇಲೆ ಇನ್ನೊಂದು ವೈವಾ ಇದೆಯಂತೆ. ಅದು ಕಂಪಲ್ಸರಿ ಅಂತೆ, ಇಲ್ಲದಿದ್ದರೆ ರಿಸಲ್ಟ್ ಕೊಡೋಲ್ಲವಂತೆ ಅಂತ ಅತೀ ಭಯದ ನಟನೆಯೂ ಆಯಿತು.
‘ನಂಬಿದ್ರಾ ನಿಮ್ಮಪ್ಪ?’ ವಿಜಿ ಇಂದುಮತಿಯನ್ನು ಕೇಳಿದಳು. ಇಂದೂ ಪುಸ್ಸ್ಸ್ಸ್ ಅಂತ ನಗುತ್ತಾ ರಶ್ಮಿ ಕಡೆ ನೋಡಿದಳು. ರಶ್ಮಿಗ್ಯಾಕೋ ತನ್ನ ಅಪ್ಪ ಆರ್ಮಿ ಮ್ಯಾನ್ ತಾನು ಹೇಳಿದ್ದನ್ನ ನಂಬದೇ ಮೈಸೂರಿಗೆ ಬಂದುಬಿಟ್ಟರೆ ಅಂತ ಗುಮಾನಿ ಶುರುವಾಗಿತ್ತು. ರಿಂಕಿ ಮಾತ್ರ ಎಲ್ಲಾ ತಮಾಷೆಯನ್ನು ನೋಡುತ್ತಾ ಕೂಲ್ ಆಗಿದ್ದಳು.

‘ಲೈ ಮಂಗ! ನೀನ್ ಏಳ್ದಾ ನಿಮ್ಮಪ್ಪಂಗೆ ಹೊರಡೋದು ಲೇಟಾಗುತ್ತೆ ಅಂತಾ?’ ಇಂದುಮತಿ ಹುಬ್ಬು ಏರಿಸುತ್ತಾ ಕಣ್ಣು ಸಣ್ಣದು ಮಾಡುತ್ತಾ ಕೇಳಿದಳು.
‘ನಾನ್ ನಿನ್ ಥರ ಸ್ಟುಪಿಡ್ ಅಲ್ಲ ಮನೆಯವರಿಗೆ ಎಕ್ಸಾಂ ಡೇಟ್ಸ್ ಹೇಳಕ್ಕೆ’ ರಿಂಕಿ ಕೊಟ್ಟ ಉತ್ತರ ನೇರ ಮುಖಕ್ಕೆ ಬಂದು ರಪ್ ಅಂತ ಬಡಿಯಿತು.
ಇಂಟರ್ನೆಟ್ ಗೊತ್ತಿಲ್ಲದ ಕಾಲ, ವೆಬ್ ಸೈಟ್‌ಗಳಿಲ್ಲದ ಕಾಲ, ಸ್ಮಾರ್ಟ್ ಫೋನುಗಳಿಲ್ಲದ ಕಾಲ, ಸ್ಕೂಲು ಕಾಲೇಜಿನಿಂದ ಬರುವ ಎಸ್ಸೆಮ್ಮೆಸ್ಸುಗಳಿಲ್ಲದೆ ತಂದೆ ತಾಯಿಗಳಿಗೆ ನಾವು ಓದಲು ಹೋಗಿದ್ದೇವೆ ಅಂತ ಬರೀ ಮಾತೊಂದರಿಂದಲೇ ಭ್ರಮೆ ಹುಟ್ಟಿಸಬಹುದಿದ್ದ ಕಾಲ! ಆಹಾ! ಎಂಥಾ ಸುವರ್ಣಯುಗವಾಗಿತ್ತದು! ಅದು ಹಾಗಿರಲಿ.

ಎಕ್ಸಾಂ ಮುಗಿದ ದಿನ ಸಾಯಂಕಾಲ ವೈನು ಸೇವನೆ ಅಂತ ನಿರ್ಧಾರವಾಯಿತು. ರಿಂಕಿಯ ಪರಿಚಯದ ಸೀನಿಯರ್ ಹುಡುಗಿಯೊಬ್ಬಳು ತನ್ನ ಮನೇಲಿ ವೀ ಸಿ ಆರ್ ಇದೆ, ಮನೆಗೆ ಬಂದ್ರೆ ಸಿನಿಮಾ ನೋಡುತ್ತಾ ಪಾರ್ಟಿ ಮಾಡಬಹುದು ಅಂತ ಆಸೆಯನ್ನೂ ತೋರಿಸಿದಳು. ಎಲ್ಲರಿಗೂ ಪ್ರಾಣ ಬಾಯಿಗೆ ಬಂದಷ್ಟು ಭಾವಾನುಭೂತಿ ಆಯಿತು. ಎಂಥಾ ಒಳ್ಳೇ ಲೊಕೇಶನ್ ಸಿಕ್ಕಿತಪ್ಪಾ ಪಾರ್ಟಿ ಮಾಡಲು ಅಂತ!

ಎಕ್ಸಾಂ ಮುಗಿದ ಸಂಜೆ ಎಲ್ಲರೂ ಅವಳ ಮನೆಯಲ್ಲಿ ಸೇರಿ ಬಿಯರು, ವೈನು ಇಳಿಸಲು ಶುರು ಮಾಡಿದರು. ಸ್ವಲ್ಪ ಸ್ವಲ್ಪವೇ ಕುಡಿಯಬೇಕು, ಜಾಸ್ತಿ ಕುಡಿದು ರಂಪಾಟ ಮಾಡುವಂತಿಲ್ಲ ಅಂತ ಮೊದಲೇ ಸೀನಿಯರ್ ಸೌಮ್ಯ ಹೇಳಿದ್ದಳು.

ಸಿದ್ಧಾರ್ಥ ನಗರದ ಅವಳ ಮನೆಯಲ್ಲಿ ಇನ್ಯಾರೂ ಇರಲಿಲ್ಲ. ಹೆಸರಿಗಷ್ಟೇ ಸೌಮ್ಯ ಆಕೆ. ವ್ಯಕ್ತಿತ್ವ ಸಂಪೂರ್ಣ ವಿರುದ್ಧವೇ. ಅವಳ ಅಪ್ಪ ಅಮ್ಮ, ಮಗನೊಂದಿಗೆ ತಿರುಪತಿಗೆ ಪ್ರಯಾಣ ಬೆಳೆಸಿದ್ದರು. ಮಗಳಿಗೊಂದು ಒಳ್ಳೆಯ ಗಂಡು ಹುಡುಕಿಕೊಡಪ್ಪಾ ಅಂತ ಬೇಡಿಕೊಳ್ಳಲು. ಇವಳು ಇಲ್ಲಿ ಹುಡುಗಿಯರ ದಂಡು ಕಟ್ಟಿಕೊಂಡು ಕುಣಿಯುತ್ತಿದ್ದಳು. ಜೋರು ಮ್ಯೂಸಿಕ್ಕು ಬೇರೆ.

ಕುಣಿಯುತ್ತಾ, ಕುಡಿಯುತ್ತಾ ಇದ್ದಕ್ಕಿದ್ದಂತೆ ಹುಕಿ ಬಂದು ‘ಯೇಯ್! ಯಾರಾದ್ರೂ ಬ್ಲೂ ಫಿಲಂ ನೋಡ್ತೀರಾ? ಎನಿಬಡಿ ಗಾಟ್ ಗಟ್ಸ್? ಹಾ?’ ಅಂತ ಏರು ಧ್ವನಿಯಲ್ಲಿ ಚಾಲೆಂಜ್ ಮಾಡತೊಡಗಿದಳು. ರಶ್ಮಿ, ರಿಂಕಿ, ಇಂದುಮತಿ, ವಿಜಿ, ಈಶ್ವರಿ ಎಲ್ಲರೂ ಒಂದು ಕ್ಷಣ ಸ್ತಬ್ಧರಾದರು. ಮೊದಲು ಹೂಂ ಅನ್ನೋರು ಯಾರು ಅಂತ ಕುತೂಹಲ ಬೇರೆ!

ಬ್ಲೂ ಫಿಲಮ್ಮಿನ ವಿಷಯ ಅಲ್ಲಿಯವರೆಗೆ ಯಾರ ಮಾನಸ ಪ್ರಪಂಚವನ್ನೂ ಹೊಕ್ಕಿರಲಿಲ್ಲ. ನೈತಿಕತೆಗೂ, ಹುಚ್ಚು ಸಾಹಸಕ್ಕೂ ಮಧ್ಯೆ ಇರುವ ಸಾಕಷ್ಟೇ ದಪ್ಪನಾದ ಗೆರೆ ಇದು. ನೋಡಬಾರದೆನ್ನುವ ನಿಯಮವೇನಿಲ್ಲ, ಆದರೆ ಬ್ಲೂ ಫಿಲಂ ನೋಡುವುದರಿಂದ ಪ್ರತಿಭಟನೆಯ ಯಾವ ಆಯಾಮ ಪೂರೈಕೆ ಆಗುತ್ತೆ ಎನ್ನುವುದು ಸ್ಪಷ್ಟವಿಲ್ಲದ್ದರಿಂದ ಅದನ್ನ ನೋಡಬೇಕೇ ಬೇಡವೇ ಎನ್ನುವ ಚರ್ಚೆ ನಿರ್ಣಾಯಕ ಘಟ್ಟಕ್ಕೆ ಮುಟ್ಟುವ ಮುನ್ನವೇ ಸೌಮ್ಯ ತನ್ನ ಬ್ಯಾಗಿನೊಳಗಿಂದ ಯಾವುದೋ ಹಿಂದಿ ಸಿನಿಮಾದ ಹೆಸರಿದ್ದ ಕಪ್ಪು ಕ್ಯಾಸೆಟ್ಟನ್ನು ತೆಗೆದು ವೀ ಸಿ ಆರ್ ನ ಬಾಯಿಯೊಳಕ್ಕೆ ತುಂಬಿಸಿ ಟಿ.ವಿ ಆನ್ ಮಾಡಿಬಿಟ್ಟಳು. ಅದರ ಹೆಸರು ‘ಬ್ಲೂ ನೈಟ್ಸ್’ ಅಂತೇನೋ ಇತ್ತು. ಹೆಸರಲ್ಲೇನಿದೆ ಹೇಳಿ?

ಸಿನಿಮಾ ಶುರುವಾಯಿತು. ಎಲ್ಲರೂ ಮಂತ್ರಮುಗ್ಧರಂತೆ ಒಂದೊಂದು ಕುರ್ಚಿಗೆ ಕೂತರು. ಬಹಳ ಕಾಲ ಚಲಾವಣೆಯಲ್ಲಿ ಇದ್ದುದರಿಂದಲೋ, ಅಥವಾ ಯಾರೋ ಥೇಟರಿನಲ್ಲಿ ಕೂತು ಮದುವೆ ಶೂಟ್ ಮಾಡುವ ಕ್ಯಾಮೆರಾದಿಂದ ರೆಕಾರ್ಡ್ ಮಾಡಿದ್ದರಿಂದಲೋ ಸಿನಿಮಾ  ಮಸುಕುಮಸುಕಾಗಿ ಇತ್ತು. ಯಾರೋ ಒಂದಿಷ್ಟ್ ಜನ ಸುಮ್ಮನೆ ಗಲಾಟೆ ಮಾಡಿದಂತೆ ಸೌಂಡು ಬೇರೆ! ಏನಾದರೂ ಕಂಡೀತೇನೋ ಎನ್ನುವ ನಿರೀಕ್ಷೆಯಿಂದ ಎಲ್ಲರೂ ತದೇಕ ಚಿತ್ತದಿಂದ ನೋಡುತ್ತಿದ್ದವರೇ.

ಮಧ್ಯೆ ಮಧ್ಯೆ ಕದ್ದು ಇನ್ನೊಬ್ಬರ ಏಕಾಗ್ರತೆಯನ್ನು ಗಮನಿಸಿ ತಮ್ಮೊಳಗಿನ ಪ್ರಾಮಾಣಿಕತೆಯನ್ನು ಕಾಪಿಟ್ಟುಕೊಂಡಂತೆ ಭಾವಿಸುತ್ತಿದ್ದರು. ಅಕಸ್ಮಾತ್ ಹಾಗೆ ನೋಡುವಾಗ ಇನ್ನೊಬ್ಬರ ನೋಟವೂ ಕಲೆತುಬಿಟ್ಟರೆ ಪೆದ್ದು ಪೆದ್ದಾಗಿ ಹೆಹ್ಹೆಹ್ಹೆಹ್ಹ್ಹೆ ಅಂತ ನಕ್ಕು ಸುಮ್ಮನಾಗುತ್ತಿದ್ದರು.
ಅರ್ಧ ಗಂಟೆ ನೋಡಿದರೂ ಸಿನಿಮಾದಲ್ಲಿ ಅಪ್ಪಂತ ವಿಷಯ ಏನೂ ಗೊತ್ತಾಗಲಿಲ್ಲ. ‘ಥತ್ ಆಫ್‌ ಮಾಡೇ ಹೋಗ್ಲಿ. ಇನ್ ಸ್ವಲ್ಪ ಕುಡಿಯನ. ಬ್ಲೂ ಫಿಲಂ ಅಂದೆ ನೀನು! ಇದು ನೋಡಿದ್ರೆ ಬ್ಲರ್ ಫಿಲಂ ಆಯ್ತು! ಖರ್ಮ!’ ಅಂದಳು ವಿಜಿ. ಅವಳ ಮಾತಿನಲ್ಲೇ ನಿರಾಳತೆ ಇತ್ತೋ ಭ್ರಮನಿರಸನ ಇತ್ತೋ ಹೇಳುವುದು ಕಷ್ಟವಾಗಿತ್ತು.

‘ಹಲ್ಕಾ ಬೇವರ್ಸಿ! ಅಂಗಡಿಯವನು ಮೋಸ ಮಾಡಿದ್ದಾನೆ ನಮ್ಮಣ್ಣಂಗೆ. ಅವ್ನ್ ಬಂದ್ ಮೇಲೆ ಹೇಳ್ಬೇಕು’ ಅಂದಳು ಸೌಮ್ಯ.
‘ಏನಂತ ಹೇಳ್ತೀಯಾ? ನೀನ್ ತಂದಿದ್ ಬ್ಲೂ ಫಿಲಂ ಸರಿ ಇರ್ಲಿಲ್ಲ ಅಂತ ಹೇಳ್ತೀಯಾ? ನಿಂಗೆ ಹೆಂಗೆ ಗೊತ್ತು ಅಂತ ನಿಮ್ಮಣ್ಣ ಕೇಳಿದ್ರೆ?’ ಅಂತ ಕೇಳಿದಳು ಇಂದುಮತಿ. ಮುಂದಿನ ಅಪಾಯವನ್ನು ಮನಗಾಣದಿದ್ದ ಸೌಮ್ಯಳಿಗೆ ಜ್ಞಾನೋದಯವಾಗಿ ಅಣ್ಣನ ಹತ್ತಿರ ಈ ಸಂಗತಿಯನ್ನು ಎಸ್ಕಲೇಟ್ ಮಾಡುವ ವಿಚಾರವನ್ನು ಕೈಬಿಟ್ಟಳು.

ತಂತಮ್ಮ ಪಾಲಿನ ವೈನು, ಬಿಯರು ಕುಡಿದು ಊಟ ಮಾಡಿ ಎಲ್ಲರೂ ಸುಮ್ಮನೆ ಮಲಗಿದರು. ಬೆಳಿಗ್ಗೆ ಎದ್ದು ಚಹಾ ಮಾಡಿ ಸೌಮ್ಯಳನ್ನೂ ಎಬ್ಬಿಸಿ ಹುಡುಗಿಯರು ಹಾಸ್ಟೆಲಿನ ಕಡೆಗೆ ಹೊರಟರು. ರಿಂಕಿ ಮಾತ್ರ ಆಟೊದಲ್ಲಿ ದಾರಿಯುದ್ದಕ್ಕೂ ಯಾಕೋ ಹೊಟ್ಟೆ ತೊಳಸುತ್ತೆ ಅಂತ ದೂರು ಹೇಳಹತ್ತಿದಳು. ಹಾಸ್ಟೆಲಿನ ಹತ್ತಿರ ಬರುವ ಹೊತ್ತಿಗೆ ಅವಳ ಪರಿಸ್ಥಿತಿ ಬಿಗಡಾಯಿಸಿಬಿಟ್ಟಿತು. ಆಟೊದಿಂದ ಇಳಿದು ಒಳಗೆ ಬರುವಾಗಲೇ ತಲೆ ತಿರುಗುತ್ತೆ ಕಣ್ಣು ಕತ್ತಲೆ ಬರುತ್ತೆ ಹಂಗೆ ಹಿಂಗೆ ಅಂತ ಹೇಳಿಕೊಂಡೇ ಬಂದಳು.

ಒಳ ಹೋಗುವಾಗ ಅಟೆಂಡರ್ ಚಂದ್ರಣ್ಣ ಕಿರುಗಣ್ಣಿನಿಂದ ಇವರನ್ನೆಲ್ಲಾ ಒಮ್ಮೆ ಅವಲೋಕಿಸಿದ. ಏನೋ ವ್ಯವಹಾರ ಮುಗಿಸಿ ಬಂದಿವೆ ಅನ್ನುವ ಮಾತು ಸ್ಪಷ್ಟವಾಗಿತ್ತು. ಎಷ್ಟೆಂದರೂ ಅನುಭವೀ ಕಣ್ಣಲ್ಲವೇ ಅವನದ್ದು? ರೂಮಿನೊಳಕ್ಕೆ ಹೋದ ತಕ್ಷಣ ರಿಂಕಿ ದಬಕ್ ಅಂತ ಹಾಸಿಗೆ ಮೇಲೆ ಮಕಾಡೆ ಬಿದ್ದುಕೊಂಡಳು. ‘ಏನಾಯ್ತೇ ಇವಳಿಗೆ?’ ಅಂತ ವಿಜಿ ಕೇಳಿದಳು.

‘ಅಯ್ಯೋ ಆ ಬ್ಲೂ ಫಿಲಂ ಪೂರ್ತಿ ನೋಡೋಕಾಗಲಿಲ್ವಲ್ಲಾ ಅಂತ ಬಾಳ ಮನಸ್ಸಿಗೆ ಹಚ್ಚಿಕೊಂಡು ಹಿಂಗಾಗಿದಾಳೆ’ ಅಂತ ಇಂದುಮತಿ ನಗಾಡಿದಳು.
ಸಂಪೂರ್ಣವಾಗಿ ಅಲ್ಲದಿದ್ದರೂ ರಿಂಕಿಗೆ ತನ್ನ ಬಗ್ಗೆ ತಮಾಷೆ ಮಾಡುತ್ತಿರುವುದು ಅರ್ಥವಾಯಿತು.

‘ಶಟ್ ಅಪ್! ಬ್ಲಡಿ ಈಡಿಯಟ್’ ಎಂದು ಬೈದಳು. ಇಂಗ್ಲೀಶು ಭಾಷೆಯ ಸಮಸ್ಯೆಯೇನೆಂದರೆ ಬೈಗುಳಗಳು ಬೈಗುಳಗಳ ಥರಾ ಕೇಳಿಸದೇ ಇರುವುದು. ಉಪಯೋಗಿಸುವ ಮಾತುಗಳಿಗೆ ತಕ್ಕ ಹಾಗೆ ಒಂದು ಭಾವವನ್ನೂ, ಧ್ವನಿಯ ಏರಿಳಿತವನ್ನೂ ಸೇರಿಸದಿದ್ದರೆ ಬ್ಲಡಿ ಗಿಡಿ ಎನ್ನುವ ಮಾತೆಲ್ಲ ಪ್ರೀತಿಯ ಅಭಿವ್ಯಕ್ತಿಯಂತೆ ಕಾಣಲೂಬಹುದು.

ರಶ್ಮಿ ಮಾತ್ರ ರಿಂಕಿಯ ಹತ್ತಿರ ಹೋಗಿ ಸಹಾನುಭೂತಿಯಿಂದ ‘ಏನಾಗ್ತಾ ಇದೆ?’ ಅಂತ ಕೇಳಿದಳು. ನಿನ್ನೆ ಕುಡಿತ ಜಾಸ್ತಿಯಾದದ್ದಕ್ಕೆ ಆಸಿಡಿಟಿ ಆಗಿದೆ ಎಂದು ರಿಂಕಿ ಅರುಹಿದಳು. ‘ಬಾಳೆಹಣ್ಣು ತಿನ್ನು. ಸರಿ ಹೋಗುತ್ತೆ’ ಎಂದು ಪುಕ್ಕಟೆ ಸಲಹೆ ಕೊಟ್ಟಳು ರಶ್ಮಿ. ಹೌದೇನೋ ಅಂತ ರಿಂಕಿ ಬಾಳೆಹಣ್ಣು ತರಿಸಿಕೊಂಡು ತಿಂದೂ ಬಿಟ್ಟಳು. ಆಮೇಲೆ ಶುರುವಾದದ್ದು ವಾಂತಿಯ ಜಲಪಾತ. ರಿಂಕಿ ಆಗಾಗ ಬಾತ್ರೂಮಿಗೆ ಎದ್ದು ಹೋಗಿ ಬಂದು ಸುಸ್ತಾದಳು.

‘ಇನ್ನು ನನ್ ಕೈಲಿ ಏಳಕ್ಕಾಗಲ್ಲ. ವಾಂತಿ ಬಂದ್ರೆ ಏನ್ಮಾಡ್ಲಿ’ ಅಂತ ಅಂಗಲಾಚಿದಳು ರಿಂಕಿ. ರಿಂಕಿ ಬೆಡ್ ಪಕ್ಕ ಬಕೆಟ್ ಇಟ್ಟು ಎಲ್ಲರೂ ಜಾಗ ಖಾಲಿ ಮಾಡಿದರು. ರಿಂಕಿ ವ್ಯಾ ವೂ ಅಂತೆಲ್ಲಾ ಕಿರುಚಾಡಿಕೊಂಡು ವಾಂತಿ ಮಾಡ್ತಿದ್ರೆ ಚಂದ್ರಣ್ಣ ರೂಮಿನ ಒಳಕ್ಕೆ ಇಣುಕಿ ನೋಡಿದ.

‘ಏನ್ ವಿಸ್ಯ? ಯಾಕ್ ವುಸಾರಿಲ್ಲ ಆಯಮ್ಮಂಗೆ?’
‘ಅಪೆಂಡಿಸೈಟಿಸ್ ಅಂತೆ ಚಂದ್ರಣ್ಣ!’
‘ವೋ ಗೊತ್ತಾಯ್ತು ಬುಡಿ. ಕಳ್ಳೆಲ್ಲಾ ಕಿತ್ಕಬತ್ತದೆನೋ. ಕಂಟ್ರಿ ಕುಡ್ಕಂಡಿದ್ರಾ’ ಎಂದ.
‘ಛೆ! ಹಂಗೆಲ್ಲಾ ಇಲ್ಲಪ್ಪ!’
‘ನಿಮ್ ತರಾ ಎಷ್ಟ್ ಜನಾ ನೋಡಿವ್ನಿ ನಾನು. ನಂಗೇ ಊವಾ ಇಡಕ್ ಬತ್ತೀರಲ್ಲ? ಇರ್ಲಿ. ಏನಾರಾ ಉಳ್ದಿದ್ರೆ ಇಲ್ಲೇ ಬುಟ್ಟೋಗಿ. ನಮಗಾಯ್ತದೆ’ ಎಂದು ಹಲ್ಲು ಕಿರಿದ. ಹಾಸ್ಟೆಲು ವಾಸ ಮುಗಿಯುವ ಹೊತ್ತಿಗೆ ಎಷ್ಟು ಜನ ‘ನಮ್ಮವರು’ ಸಿಕ್ಕಿದರು ಅಂದ್ರೆ ಏನ್ ಹೇಳೋದು? ಸಿಕ್ಕವರೆಲ್ಲಾ ಸಮಾನ ಮನಸ್ಕರೇ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT