ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ಆಯ್ಕೆಯ ಆಪ್‌ಗಳು

Last Updated 18 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ವರ ಕಥೆ ಮುಗಿಯಿತು ಎಂದು ಎಲ್ಲರೂ ಹೇಳಲು ಪ್ರಾರಂಭಿಸಿ ಸ್ವಲ್ಪ ಸಮಯದಲ್ಲಿ ಮತ್ತೆ ವಾಪಾಸು ಮೇಲೆದ್ದು ಬರುವುದನ್ನು ಮೈಕ್ರೋಸಾಫ್ಟ್ ಕಂಪೆನಿ ಹಲವು ಬಾರಿ ಸಾಧಿಸಿ ತೋರಿಸಿದೆ. ಈ ಸಲ ಅದೇ ಕಥೆ.

ಪಾತ್ರಧಾರಿ ಮಾತ್ರ ಮೊಬೈಲ್ ಫೋನ್ ಕಾರ್ಯಾಚರಣ ವ್ಯವಸ್ಥೆ (operating system). ಅಂಗೈ ಗಣಕ ಇತಿಹಾಸ ನೋಡಿದರೆ ಕೆಲವೇ ವರ್ಷಗಳ ಹಿಂದೆ ಮೊದಲ ಸ್ಥಾನದಲ್ಲಿದ್ದುದು ಮೈಕ್ರೋಸಾಫ್ಟ್. ನಂತರ ಬ್ಲಾಕ್‌ಬೆರಿ, ತದನಂತರ ಆಪಲ್ ಐಫೋನ್ ಮತ್ತು ಈಗ ಆಂಡ್ರೋಯಿಡ್ ಮೊದಲ ಸ್ಥಾನದಲ್ಲಿವೆ.

ಕಳೆದುಕೊಂಡ ಸ್ಥಾನವನ್ನು ಪುನಃ ಗಳಿಸಲು ಶತಾಯಗತಾಯ ಪ್ರಯತ್ನಿಸಿದ ಮೈಕ್ರೋಸಾಫ್ಟ್ ನೋಕಿಯಾ ಕಂಪೆನಿಯ ಜೊತೆ ಸೇರಿ ಲುಮಿಯಾ ಫೋನ್‌ಗಳಿಗೆ ತಮ್ಮ ವಿಂಡೋಸ್ ಫೋನ್ ಕಾರ್ಯಾಚರಣ ವ್ಯವಸ್ಥೆಯನ್ನು ಅಳವಡಿಸಲು ಮಾಡಿಕೊಂಡ ಒಪ್ಪಂದದ ಮೂಲಕ ಮತ್ತೆ ಮೇಲೆ ಬಂತು. ಈಗ ಆಂಡ್ರೋಯಿಡ್ ನಂತರ ಎರಡನೆಯ ಸ್ಥಾನದಲ್ಲಿ ವಿಂಡೋಸ್ ಫೋನ್ ಇದೆ.

ಇದಕ್ಕೆ ಪ್ರಮುಖ ಕಾರಣ ನೋಕಿಯಾ ಲುಮಿಯಾ ಫೋನ್‌ಗಳು. ಈಗಂತೂ ನೋಕಿಯಾ ಕಂಪೆನಿಯ ಮೊಬೈಲ್ ಫೋನ್ ವಿಭಾಗವನ್ನು ಮೈಕ್ರೋಸಾಫ್ಟ್ ಕೊಂಡುಕೊಂಡಿದೆ. ವಿಂಡೋಸ್ ಫೋನ್‌ಗಳಿಗೆ ಈಗ ಸರಿ ಸುಮಾರು ೨ ಲಕ್ಷ ಕಿರುತಂತ್ರಾಂಶಗಳು (ಆಪ್, app) ವಿಂಡೋಸ್ ಫೋನ್ ಸ್ಟೋರ್‌ನಲ್ಲಿ ಲಭ್ಯವಿವೆ. ಅವುಗಳಲ್ಲಿ ಫೇಸ್‌ಬುಕ್‌, ಟ್ವಿಟ್ಟರ್, ವಾಟ್ಸ್ಆಪ್, ಇನ್ಸ್ಟಾಗ್ರಾಂ, ಇತ್ಯಾದಿಗಳು ಬಹುಮಂದಿಗಳಿಗೆ ತಿಳಿದೇ ಇರುತ್ತದೆ. ಅವುಗಳನ್ನು ಬಿಟ್ಟು ಇನ್ನು ಕೆಲವು ಉಪಯುಕ್ತ ಆಪ್‌ಗಳನ್ನು ನಾವು ಈ ಸಂಚಿಕೆಯಲ್ಲಿ ನೋಡೋಣ.

ಟೈಪ್ ಕನ್ನಡ (Type Kannada)
ವಿಂಡೋಸ್ ಫೋನಿನ ಆವೃತ್ತಿ ೮ರಲ್ಲಿ ಹಿಂದಿ ಭಾಷೆಗೆ ಸಂಪೂರ್ಣ ಬೆಂಬಲ ಇದೆ. ಕನ್ನಡಕ್ಕೆ ಭಾಗಶಃ ಬೆಂಬಲ ಇದೆ. ಅಂದರೆ ಕನ್ನಡ ಯುನಿಕೋಡ್ ಪಠ್ಯದ ತೋರಿಕೆ (ರೆಂಡರಿಂಗ್) ಸರಿಯಾಗಿದೆ. ಕನ್ನಡದಲ್ಲಿರುವ (ಯುನಿಕೋಡ್‌ನಲ್ಲಿದ್ದರೆ ಮಾತ್ರ) ಜಾಲತಾಣಗಳ ವೀಕ್ಷಣೆ, ಫೇಸ್‌ಬುಕ್, ಟ್ವಿಟರ್‌ಗಳಲ್ಲಿ ಕನ್ನಡ ಪಠ್ಯದ ಓದುವಿಕೆ ಎಲ್ಲ ಮಾಡಬಹುದು.

ಯಾರಾದರೂ ನಿಮಗೆ ಕನ್ನಡ ಲಿಪಿಯಲ್ಲೇ (ಯುನಿಕೋಡ್‌ನಲ್ಲಿ) ಎಸ್ಎಂಎಸ್, ಇಮೈಲ್ ಕಳುಹಿಸಿದರೆ ನೀವದನ್ನು ಓದಬಹುದು. ಆದರೆ ಅದರಲ್ಲಿ ಕನ್ನಡದ ಕೀಲಿಮಣೆ ಇಲ್ಲ. ಈ ಸಮಸ್ಯೆಗೆ ಪರಿಹಾರ ರೂಪವಾಗಿ ಟೈಪ್ ಕನ್ನಡ ಎಂಬ ಆಪ್ ತಯಾರಾಗಿದೆ. ಇದು ತುಂಬ ಜನರಿಗೆ ಪರಿಚಿತವಿರುವ ಲಿಪ್ಯಂತರಣ ವಿಧಾನದಲ್ಲಿ ಕೆಲಸ ಮಾಡುತ್ತದೆ. namaskaara ಎಂದು ಟೈಪ್ ಮಾಡಿದರೆ ‘ನಮಸ್ಕಾರ’ ಎಂದಾಗುತ್ತದೆ.

ಇದನ್ನು ಬಳಸಿ ನೀವು ಕನ್ನಡದಲ್ಲೇ ಇಮೈಲ್, ಫೇಸ್‌ಬುಕ್, ಟ್ವೀಟಿಂಗ್, ಎಸ್ಎಂಎಸ್ ಎಲ್ಲ ಮಾಡಬಹುದು. ಇದರಲ್ಲಿ ಪಠ್ಯ ಟೈಪ್ ಮಾಡಿ ಅದನ್ನು ನಕಲು ಮಾಡಿಕೊಂಡು ನಿಮಗೆ ಬೇಕಾದ ಆಪ್‌ಗೆ ಅದನ್ನು ಅಂಟಿಸಬೇಕು. ಇದರ ಒಂದು ದೊಡ್ಡ ಬಾಧಕವೆಂದರೆ ಇದು ಕೆಲಸ ಮಾಡಲು ಅಂತರಜಾಲ ಸಂಪರ್ಕ ಅಗತ್ಯ.

ದಿ ಮಶಿನ್ (The Machine)
ಇದು ಒಂದು ಆಟ. ಇದರಲ್ಲಿ ಹಲವು ಹಂತಗಳಿವೆ. ಇದರಲ್ಲಿ ಹಲವು ಕ್ಲಿಷ್ಟವಾದ ಮೆಶಿನ್ಗಳಿವೆ. ಹಲವು ಚಕ್ರ, ಗೇರ್ ಹಾಗೂ ಯಂತ್ರದ ಭಾಗಗಳಿವೆ. ಇವೆಲ್ಲವುಗಳ ನಡುವೆ ಶಾಯಿಯ ಬಿಂದುವೊಂದನ್ನು ಅದು ನಾಶವಾಗದಂತೆ ಸಾಗಿಸಬೇಕು. ಅದನ್ನು ತಳ್ಳುವಾಗ ನೀವು ಮಾಧ್ಯಮಿಕ ಶಾಲೆಯಲ್ಲಿ ಕಲಿತ ಭೌತಶಾಸ್ತ್ರ ಕೆಲಸಕ್ಕೆ ಬರುತ್ತದೆ. ಈ ಆಟ ಮೆದುಳಿಗೂ ಸ್ವಲ್ಪ ಕೆಲಸ ಕೊಡುತ್ತದೆ. ಈ ಆಟದಲ್ಲಿ ೩೦ ಹಂತಗಳಿವೆ. ಎಲ್ಲ ಆಟಗಳಂತೆ ಹಂತದಿಂದ ಹಂತಕ್ಕೆ ಆಟ ಕ್ಲಿಷ್ಟವಾಗುತ್ತ ಸಾಗುತ್ತದೆ.

ಡಬ್ಲ್ಯುಪಿಸೆಂಟ್ರಲ್ (WPCentral)

ವಿಂಡೋಸ್ ಫೋನ್ ಬಗ್ಗೆ ಎಲ್ಲ ವಿಷಯಗಳ ಬಗ್ಗೆ ಒಂದು ತುಂಬ ಉಪಯುಕ್ತ ಜಾಲತಾಣವಿದೆ. ಅದುವೇ wpcentral.com. ಈ ಜಾಲತಾಣದಲ್ಲಿ ವಿಂಡೋಸ್ ಫೋನ್‌ಗಳ ಬಗ್ಗೆ ಸುದ್ದಿ, ಹೊಸ ಆಪ್‌ಗಳ ವಿಮರ್ಶೆ, ಆಟಗಳು, ಸಲಹೆಗಳು, ಇನ್ನೂ ಹಲವಾರು ಉಪಯುಕ್ತ ವಿಷಯಗಳಿವೆ.

ಈ ಜಾಲತಾಣದ ಆಪ್ wpcentral. ಇದನ್ನು ಹಾಕಿಕೊಂಡರೆ ಪ್ರತಿದಿನ ಆ ಜಾಲತಾಣಕ್ಕೆ ಭೇಟಿ ನೀಡುವ ಅಗತ್ಯವಿರುವುದಿಲ್ಲ. ಇತ್ತೀಚೆಗೆ ಒಂದು ದಿನದ ಮಟ್ಟಿಗೆ ಆಂಗ್ರಿ ಬರ್ಡ್ಸ್ ಆಟ ಉಚಿತವಾಗಿ ಲಭ್ಯವಿತ್ತು.

ಈ ಸುದ್ದಿ ಈ ಜಾಲತಾಣ ಅಥವಾ ಆಪ್ ಮೂಲಕ ಎಲ್ಲ ವಿಂಡೋಸ್ ಫೋನ್ ಬಳಕೆದಾರರಿಗೆ ತಿಳಿಯಿತು. ಈ ಆಪ್ಎರಡು ಆವೃತ್ತಿಗಳಲ್ಲಿ ಲಭ್ಯವಿದೆ. ಒಂದು ಆವೃತ್ತಿಗೆ  55 ರೂಪಾಯಿ ನೀಡಿ ಕೊಂಡುಕೊಳ್ಳಬೇಕು. ಈ ಆವೃತ್ತಿಯಲ್ಲಿ ಎಲ್ಲ ಸೌಲಭ್ಯಗಳು ಲಭ್ಯವಿವೆ. ಇನ್ನೊಂದು ಉಚಿತ ಆವೃತ್ತಿಯೂ ಇದೆ. ಇದನ್ನು ಹಾಕಿಕೊಂಡರೆ ಜಾಹೀರಾತುಗಳು ಬರುತ್ತವೆ ಮಾತ್ರವಲ್ಲ ಕೆಲವು ಸೌಲಭ್ಯಗಳು ಮೊಟಕಾಗುತ್ತವೆ.

ಫ್ಲಿಂಗ್ ಥಿಯರಿ (Fling Theory)
ಇದೊಂದು ಆಟ. ಎಲ್ಲ ಆಟಗಳಂತೆ ಹೊಡೆದಾಡುವ ಅಥವಾ ವಾಹನ ಓಟದ ಆಟವಲ್ಲ ಇದು. ಇದರ ಹಿಂದೆ ಸ್ವಲ್ಪ ಭೌತಶಾಸ್ತ್ರಮತ್ತೆ ಒಂದಿಷ್ಟು ಮೆದುಳಿಗೆ ಕಸರತ್ತು ಎಲ್ಲ ಇವೆ. ಇದನ್ನು ಆಡಲು ಸ್ವಲ್ಪ ಭೌತಶಾಸ್ತ್ರದ ಜ್ಞಾನ ಅಗತ್ಯ. ಅಡೆತಡೆಗಳನ್ನು ತಪ್ಪಿಸಿ ಇಲೆಕ್ಟ್ರಾನ್‌ಗಳನ್ನು ಗಮ್ಯ ಸ್ಥಾನ ತಲುಪಿಸಬೇಕು. ಅಲ್ಲಲ್ಲಿ ಇರುವ ಕಾಂತಕ್ಷೇತ್ರವನ್ನು ನಿಮ್ಮ ಅನುಕೂಲಕ್ಕೆ ಬುದ್ಧಿವಂತಿಕೆ ಉಪಯೋಗಿಸಿ ಬಳಸಿಕೊಳ್ಳಬೇಕು. ಈ ಆಟದಲ್ಲೂ ಹಲವು ಹಂತಗಳಿವೆ. ಎಲ್ಲ ಹಂತಗಳನ್ನು ದಾಟುವುದು ಅಷ್ಟೇನೂ ಸುಲಭವಲ್ಲ. 

ಫೌಂಡ್‌ಬೈಟ್‌ (Foundbite)
ನೀವು ಒಂದು ಪ್ರವಾಸಿ ತಾಣಕ್ಕೆ ಹೋಗಿರುತ್ತೀರಿ. ಆ ಸ್ಥಳದ ಫೋಟೊ ತೆಗೆದು ಇತರರ ಜೊತೆ ಹಂಚುವುದು ಎಲ್ಲರೂ ಮಾಡುವಂತಹ ಕೆಲಸ. ನೀವು ಹೋದ ಸ್ಥಳ ಒಂದು ಜಲಪಾತವಾಗಿದ್ದಲ್ಲಿ ಫೋಟೊದ ಜೊತೆ ಜಲಪಾತದ ಧ್ವನಿಯನ್ನೂ ಹಂಚಿಕೊಳ್ಳುವಂತಿದ್ದರೆ? ಈ ಆಪ್ ಅದಕ್ಕೆ ಸಹಾಯ ಮಾಡುತ್ತದೆ. ಫೋಟೊ ಜೊತೆ ಧ್ವನಿಯನ್ನೂ ಅದು ರೆಕಾರ್ಡ್ ಮಾಡಿಕೊಳ್ಳುತ್ತದೆ. ಈ ಆಪ್ ಜೊತೆ ಅವರದೇ ಜಾಲತಾಣವನ್ನು ನೀವು ಬಳಸಬೇಕಾಗುತ್ತದೆ.

ಭಾರತೀಯ ರೈಲ್ವೆ (IRCTC)

ಭಾರತೀಯ ರೈಲ್ವೆಯ ಟಿಕೇಟು ಕಾದಿರಿಸುವಿಕೆಗೆ ಇರುವ ಅಧಿಕೃತ ಜಾಲತಾಣ  www.irctc.co.in. ಇವರದೇ ಅಧಿಕೃತ ಆಪ್ ಕೂಡ ಲಭ್ಯವಿದೆ. ಜಾಲತಾಣದಲ್ಲಿ ಏನೇನು ಕೆಲಸ ಮಾಡಬಹುದೊ ಅದನ್ನೆಲ್ಲ ಈ ಆಪ್ ಬಳಸಿ ಮಾಡಬಹುದು. ರೈಲು ಪ್ರಯಾಣಕ್ಕೆ ಆಸನ ಕಾದಿರಿಸಲು ನೀವು ಗಣಕ ಮತ್ತು ಇಂಟರ್ನೆಟ್ ಬಳಸಲೇಬೇಕಾಗಿಲ್ಲ.

ಈ ಆಪ್ ಬಳಸಿಯೂ ಅದೇ ಕೆಲಸ ಮಾಡಬಹುದು. ಆದರೆ ಈ ಆಪ್ ಅದೇ ಜಾಲತಾಣಕ್ಕೆ ಸಂಪರ್ಕಿಸಿ ಕೆಲಸ ಮಾಡುತ್ತದೆ. ಈ ಜಾಲತಾಣವನ್ನು ಬಳಸಿ ಟಿಕೇಟ್ ಬುಕ್ ಮಾಡುವುದೆಂದರೆ ಒಂದು ದೊಡ್ಡ ಸಾಹಸವೇ. ಅದರಲ್ಲೂ ಬೆಳಿಗ್ಗೆ ಹೊತ್ತಿಗಂತೂ ಈ ಜಾಲತಾಣ ತುಂಬ ನಿಧಾನವಾಗಿ ಸ್ಪಂದಿಸುತ್ತದೆ. ಅದರಂತೆಯೇ ಈ ಆಪ್ ಕೂಡ ನಡೆದುಕೊಳ್ಳುತ್ತದೆ.

ಧೂಮ್ -3 (Dhoom:3 The Game) 
ತುಂಬ ಜನಪ್ರಿಯವಾಗಿರುವ ಧೂಮ್ ಚಲನಚಿತ್ರದ ಮೂರನೆಯ ಆವೃತ್ತಿ ಸದ್ಯದಲ್ಲೆ ಬಿಡುಗಡೆಯಾಗಲಿದೆ. ಅದರ ಹೆಸರಿನಲ್ಲೇ ತಯಾರಾಗಿರುವ ಅಧಿಕೃತ ಆಟ ಇದು. ಇದನ್ನು ತುಂಬ ಜನಪ್ರಿಯವಾಗಿರುವ ಟೆಂಪಲ್ ರನ್ ಆಟದ ಮೋಟಾರ್ ಬೈಕ್ ಆವೃತ್ತಿ ಎಂದೂ ಕರೆಯಬಹುದು. ಅಂದ ಹಾಗೆ ಇದನ್ನು ತಯಾರಿಸಿದವರು ನಮ್ಮ ಉಡುಪಿಯ ರೋಬೋಸಾಫ್ಟ್ ಕಂಪೆನಿಯವರು. 

ಗ್ಯಾಜೆಟ್ ಸಲಹೆ
ಬಿ. ಕಿರಣ್ ಅವರ ಪ್ರಶ್ನೆ: ನಾನು ಲುಮಿಯಾ 520 ಫೋನ್ ಕೊಂಡುಕೊಂಡಿದ್ದೇನೆ. ಆದರ ಜೊತೆ ಬಂದ ಇಯರ್ ಫೋನ್ ಅಷ್ಟೇನೂ ಚೆನ್ನಾಗಿಲ್ಲ. 1000 ರೂ ಆಸುಪಾಸಿನಲ್ಲಿ ಯಾವುದು ಒಳ್ಳೆಯ ಇಯರ್ ಫೋನ್ ಇದೆ? 
ಉ: ನಿಮಗೆ ಮೈಕ್ರೋಫೋನ್ ಬೇಕಿಲ್ಲವಾದಲ್ಲಿ ಕ್ರಿಯೇಟಿವ್ ಇಪಿ 630 ಕೊಳ್ಳಬಹುದು. ಮೈಕ್ರೋಫೋನ್ ಕೂಡ ಬೇಕಿದ್ದಲ್ಲಿ ಕೋವೋನ್ ಇಎಂ1 ಕೊಳ್ಳಬಹುದು.

ಸೂಚನೆ
ಹಲವು ಓದುಗರು ಕನ್ನಡ ಭಾಷೆಯನ್ನು ಇಂಗ್ಲಿಶ್ ಲಿಪಿಯಲ್ಲಿ ಬರೆದು ಇಮೈಲ್ ಮಾಡುತ್ತಾರೆ. ಅಂತಹವುಗಳನ್ನು ಓದಲು ತುಂಬ ತಾಳ್ಮೆ ಬೇಕಾಗುತ್ತದೆ. ಕೆಲವೊಮ್ಮೆ ಅವು ಏನು ಎಂದು ಅರ್ಥವೂ ಆಗುವುದಿಲ್ಲ. ಆದುದರಿಂದ ಅಂತಹ ಭಾಷೆಯಲ್ಲಿ ಇಮೈಲ್ ಮಾಡಬೇಡಿ. ಅಂತಹವುಗಳಿಗೆ ಉತ್ತರಿಸಲಾಗುವುದಿಲ್ಲ. ಕನ್ನಡದಲ್ಲಿ ಟೈಪಿಂಗ್ ಮಾಡಲು ಹಲವು ಉಪಾಯಗಳಿವೆ. ಪೂರ್ತಿ ಪಟ್ಟಿಗೆ ವಿಕಾಸ ಹೆಗಡೆಯವರ ಬ್ಲಾಗ್ ಅನ್ನು ನೋಡಿ -http://bit.ly/KannadaTyping.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT