ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಯ ನೆನಪಿನ ಮುಖಗಳು

Last Updated 3 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಆ ಮಕ್ಕಳು ನಮ್ಮಲ್ಲಿ ಕಲಿಯುವಾಗ ಅವರ ಎಳೆಯ ಮುಖದ ಮೇಲೆ ಜೀವನೋತ್ಸಾಹಗಳು ತಕಪಕ ಕುಣಿದಾಡುತ್ತಿರುತ್ತವೆ. ತುಂಟತನ, ನಾಚಿಕೆ, ಮುಗ್ಧತೆಗಳ ಆಳದಲ್ಲಿ ಸುಂದರ ಕನಸುಗಳಿರುತ್ತವೆ. ತಾನು ಎಲ್ಲರಿಗಿಂತ ಚೆನ್ನಾಗಿ ಕಾಣಬೇಕೆಂಬ ಕಾತರ, ಪ್ರೀತಿ, ಪ್ರೇಮ, ಸ್ನೇಹದ ವಿಷಯಗಳಿಗೆ ಕರಗುವ ಭಾವುಕತೆ, ಅವರ ಉಸಿರಾಟದಲ್ಲಿ ಸೇರಿ ಹೋಗಿರುತ್ತದೆ.

ವಾದ ಮಾಡಿ ಗೆಲ್ಲಬೇಕೆಂಬ ಪ್ರವೃತ್ತಿ, ತನಗೇ ಅರ್ಥವಾಗದ ವಿಚಿತ್ರ ಸಿಟ್ಟು, ಸಾಹಸಕ್ಕಿಳಿವ ಚಪಲ, ಹೆಮ್ಮೆ ಪಟ್ಟುಕೊಳ್ಳುವ ಗುಣ, ರಿಸ್ಕ್‌ಗಳಿಗೆ ಎದೆಯೊಡ್ಡುವ ಮನಸ್ಸು, ತನ್ನೊಳಗೇ ಆಗುತ್ತಿರುವ ಭಾವನಾತ್ಮಕ ಮತ್ತು ದೈಹಿಕ ಬದಲಾವಣೆಗಳ ಬಗ್ಗೆ ಕಾತರ ಮತ್ತು ಆತಂಕ. ಎಲ್ಲರೆದುರು ತಾನು ಮಿಂಚಬೇಕೆಂಬ ಆಸೆ. ಮನದೊಳಗೆ ಹೀಗೆ ಏನೇನೋ ಪುಳಕಗಳು ಏಳುವ ಆ ವಯಸ್ಸಿನಲ್ಲಿ ಅವರು ನಮ್ಮೆದುರು ಬೆಳೆಯುತ್ತಾರೆ.

ಓದಿ ನಲಿದಾಡಿ, ಕೂಗಿ ತರಲೆ ಮಾಡಿ, ದಿನಾ ಬೈಸಿಕೊಳ್ಳುತ್ತಲೇ ಪರೀಕ್ಷೆ ಬರೆಯುತ್ತಾರೆ.  ನಮ್ಮನ್ನು ಬಿಟ್ಟು ಹೋಗುವಾಗ ಅಷ್ಟೋ ಇಷ್ಟೋ ಕಣ್ಣೀರು ಸುರಿಸಿ, ಆಟೋಗ್ರಾಫ್ ಗೀಚಿಸಿಕೊಳ್ಳುತ್ತಾರೆ. ಕಷ್ಟ ಸುಖ ಮಾತಾಡಲು ಮೊಬೈಲ್ ನಂಬರ್ ಕೇಳಿ ಪಡೆಯುತ್ತಾರೆ. ಆ ಮೊಬೈಲಿಗೆ ಇವತ್ತಿಗೂ ಒಳ್ಳೊಳ್ಳೆಯ ಸಂದೇಶ ಕಳಿಸುವ ಸಭ್ಯ ಹುಡುಗರಿದ್ದಾರೆ. ಹಾಗೆಯೇ ಅಶ್ಲೀಲ ಜೋಕ್ಸ್ ಕಳಿಸಿ ಉಗಿಸಿಕೊಂಡವರೂ ಇದ್ದಾರೆ.  ನಿಮಗೇನು ಇನ್ನೂ ವಯಸ್ಸಿದೆಯಲ್ಲ ಸಾರ್. ನೀವೂ ವಸಿ ಎಂಜಾಯ್ ಮಾಡಲಿ ಎಂದು ಕಳಿಸಿದೆವು. ನೀವು ಇಷ್ಟು ಸೀರಿಯಸ್ಸಾದ್ರೆ ಹೆಂಗೆ ಸಾರ್ ಎಂದು ನನ್ನ ಮೇಲೆ ಮುನಿಸಿಕೊಂಡ ಹುಡುಗರೂ ಇದ್ದಾರೆ. ಹೀಗೆ ಕೆಲ ಕಾಲ ಸಂಪರ್ಕದಲ್ಲಿದ್ದು, ಆಮೇಲೆ ಇದ್ದಕ್ಕಿದ್ದಂತೆ  ಮಾಯವಾಗುವ ನಮ್ಮ ವಿದ್ಯಾರ್ಥಿಗಳು ಎಷ್ಟೋ ವರ್ಷಗಳ ನಂತರ ಎಲ್ಲೆಲ್ಲೋ ಸಿಗುತ್ತಾರೆ. ಆಶ್ಚರ್ಯ, ಸಂತಸ, ಮೂಡಿಸುತ್ತಾರೆ.

ರಸ್ತೆ, ಬಸ್ಸು, ರೈಲು, ಹೋಟೆಲ್ಲು ಇಲ್ಲೆಲ್ಲಾ ಸಿಗುವುದು ಕಾಮನ್ ಬಿಡಿ. ಕೆಲವರು ಕೈದಿಗಳಾಗಿ ಜೈಲಿನಲ್ಲಿ, ಹೊಡೆತ ತಿನ್ನುತ್ತಾ ಸ್ಟೇಷನ್ನಿನಲ್ಲಿ ಸಿಕ್ಕಿದ್ದೂ ಉಂಟು. ಮತ್ತೊಬ್ಬನಿಗೆ ಬೆಂಗಳೂರು ಬಸ್‌ ಸ್ಟ್ಯಾಂಡಿನಲ್ಲಿ ನನ್ನ ಮೇಲೆ ಅನುಮಾನ ಬಂದಿದೆ. ತಕ್ಷಣ ಕೇಳಲಾಗದೆ  ಏಕಾಂತಕ್ಕಾಗಿ ಶೌಚಾಲಯದ ತನಕವೂ ಹಿಂಬಾಲಿಸಿಕೊಂಡು ಬಂದುಬಿಟ್ಟ. ಅಲ್ಲಿ ತುರ್ತು ಕೆಲಸದಲ್ಲಿ ನಾನು ನಿರತನಾಗಿದ್ದ ಸಮಯ ನೋಡಿಕೊಂಡೇ ನಮಸ್ಕಾರ ಕುಕ್ಕಿದ. ನಿನಗೆ ಗುರು ಭಕ್ತಿ ತೋರಿಸೋದಕ್ಕೆ ಇದೇ ಜಾಗ ಬೇಕಿತ್ತಾ? ಎಂದು ನನ್ನ ಸಂಕಟ, ಸಿಟ್ಟು, ಹುಸಿನಗೆ ಈ ಮೂರನ್ನೂ ಮಿಕ್ಸ್ ಮಾಡಿಕೊಂಡು ಹೇಳಿದೆ. ಅದನ್ನವನು ಜೋಕ್ ಎಂದು ಭಾವಿಸಿ ಹ್ಹೆ..ಹ್ಹೆ... ನೀವಿನ್ನೂ ಜೋಕ್ಸ್ ಮಾಡೋದು ಬಿಟ್ಟೇ ಇಲ್ವಲ್ಲ ಸಾರ್ ಎಂದು ಮುಗ್ಧವಾಗಿ ನಗತೊಡಗಿದ. ಗುರು ಸಿಕ್ಕ ಸಂಭ್ರಮದಲ್ಲಿ ಕಾಮನ್ ಸೆನ್ಸ್‌ ಅನ್ನೂ ಮರೆತು ಮತ್ತೆ ಮಾತುಕತೆಗೆ ಪೀಠಿಕೆ ಹಾಕಿದ. ಇಲ್ಲಿ ಬ್ಯಾಡ ಹೊರಗೆ ಬರ್ತೀನಿ ಇರು ಎಂದರೂ ಶನಿ ಬಿಡುತ್ತಿಲ್ಲ. ಇಂಥ ಶಿಷ್ಯರೂ ಆಗಾಗ ಸಿಕ್ಕು ಫಜೀತಿ ಮೂಡಿಸುತ್ತಾರೆ.   

ಆ ದಿನಗಳ ಅವರ ಮೃದುಲ ಗುಣಗಳೀಗ ಮಾಯವಾಗಿರುತ್ತವೆ. ಕಣ್ಣಿನಲ್ಲಿ ಗೌರವದ ನಗೆ ಮಿಂಚುತ್ತಿದ್ದರೂ, ಮುಸುಡಿ ಮಾತ್ರ ಫಕ್ಕನೆ ಕಂಡು ಹಿಡಿಯಲಾರದಷ್ಟು ಬಲಿತು ಬಿಟ್ಟಿರುತ್ತವೆ. ನಮ್ಮಲ್ಲಿದ್ದಾಗ ಆ ಹುಡುಗರಿಗೆ ನೆಟ್ಟಗೆ ಮೀಸೆಯೂ ಮೂಡಿರುವುದಿಲ್ಲ. ಆದರೂ, ಆಗಾಗ, ಚಿಗುರದ ಕನಸುಗಳ ಮುಟ್ಟಿ ಮುಟ್ಟಿ ನೋಡಿಕೊಂಡು ಸಂಭ್ರಮಿಸಿರುತ್ತಾರೆ. ಕನ್ನಡಿಯಲ್ಲಿ ನೋಡಿ ಅಯ್ಯೋ ಇನ್ನೂ ನೆಟ್ಟಗೆ ಚಿಗಿತು ಬರುತ್ತಿಲ್ಲವಲ್ಲ ಎಂದು ದುಃಖಿಸಿರುತ್ತಾರೆ. ಇದ್ದುದ್ದರಲ್ಲಿ ಎಸ್ಸೆಸೆಲ್ಸಿಯಲ್ಲಿ ಡುಂಕಿ ಹೊಡೆದು ಬಂದವರೇ ನಿಜಕ್ಕೂ ಅದೃಷ್ಟವಂತರು. ಅವರಿಗೆ ಪ್ರಾಯಕ್ಕೆ ಎಷ್ಟು ಬೇಕೋ ಅಷ್ಟು ಮೀಸೆಗಳು ಜೊತೆಗೆ ಬೋನಸ್ ಗಡ್ಡವೂ ಹುಟ್ಟಿಕೊಂಡಿರುತ್ತವೆ. 

ಆ ಹುಡುಗಾಟಿಕೆಯ ಸಪೂರ ಶರೀರ ಈಗಿಲ್ಲ. ಈ ಕಾರಣಕ್ಕೇ ಒಮ್ಮೆಗೇ ಅವರು ಎದುರು ಸಿಕ್ಕು ಫಕ್ಕನೆ ನಮಸ್ಕಾರ ಸಾರ್ ಎಂದರೆ ಆಶ್ಚರ್ಯದ ಜೊತೆ ಗಾಬರಿಯೂ ಆಗುತ್ತದೆ. ಇನ್ನು ನಾನು ಯಾರೂಂತ ಗೊತ್ತಾಯಿತಾ ಸಾರ್ ಎಂಬ ಕಷ್ಟದ ಪ್ರಶ್ನೆ ಕೇಳಿದರೆ ಜೀವವೇ ಹೋದಂತಾಗುತ್ತದೆ. ನಾನಂತೂ, ಪೆಕರನಂತೆ ದೇಶಾವರಿ ನಗೆ ಚೆಲ್ಲಿ, ಮೌನವಾಗಿ ನಿಂತು ಪ್ರಶ್ನೆ ಕೇಳಿದ್ದ ಆಸಾಮಿಯನ್ನೇ ತಬ್ಬಿಬ್ಬುಗೊಳಿಸಿ ಬಿಡುತ್ತೇನೆ.

ಕೆಲವರು ಫೋನು ಮಾಡಿ ನಾನು ಯಾರೂಂತ ಗೊತ್ತಾಯಿತಾ ಸಾರ್ ಎಂದು ಕೇಳುವುದುಂಟು. ನನ್ನ ಜೀವನದಲ್ಲಿ ಹೈಯೆಸ್ಟ್ ಬಿ.ಪಿ. ತರಿಸುವ ಪ್ರಶ್ನೆ ಅಂತಿದ್ದರೆ ಇದೊಂದೇ ಇರಬೇಕು. ಆದರೂ ಫೋನು ಮಾಡಿದವರ ಅಭಿಮಾನಕ್ಕೆ ಧಕ್ಕೆಯಾಗಬಾರದೆಂದು ತಿಳಿದಷ್ಟು ಅವರ ಕುರಿತು ಹೇಳುವ ಪ್ರಯತ್ನ ಮಾಡುತ್ತೇನೆ. ಅಷ್ಟಾದರೂ ಫೋನು ಮಾಡಿದ ಗಿರಾಕಿ ತುಂಬಾ ಸತಾಯಿಸಿದರೆ, ಫೋನು ನೆಲಕ್ಕೆ ಕುಕ್ಕುವುದಷ್ಟೇ ಉಳಿದ ಕೆಲಸ. ಅಷ್ಟೊಂದು ಮಕ್ಕಳು ಎದುರಿಗೆ ಬಂದರೇನೆ ಕಂಡು ಹಿಡಿಯೋದು ಕಷ್ಟ. ಅಂತಹದರಲ್ಲಿ ಫೋನಿನಲ್ಲಿ ನನ್ನ ಶಿಷ್ಯರನ್ನು ಕಂಡು ಹಿಡಿಯೋದು ಸುತರಾಂ ನನ್ನಿಂದಾಗದ ಕೆಲಸ. ಆದರೂ ಆ ಮಕ್ಕಳು ನಮ್ಮ ಮೇಲಿನ ಪ್ರೀತಿಗೆ ಹೀಗೆ ಏನೇನೋ ಹುಡುಗಾಟಿಕೆ, ತರಲೆ ಮಾಡುತ್ತಾರೆ.  ನಾವದನ್ನು ಕಿರಿಕಿರಿ ಎಂದುಕೊಳ್ಳುವಷ್ಟು ಜಡವಾಗಬಾರದು. ನಮ್ಮ ಮೇಲಿನ ಪ್ರೀತಿ ವ್ಯಕ್ತಪಡಿಸಲು ಅವರಿಗೆ ನೂರಾರು ದಾರಿಗಳಿದ್ದಾವೆ ಅಲ್ಲವೇ?  

ಹಳೆಯ ವಿದ್ಯಾರ್ಥಿಯೊಬ್ಬ ಸಿಕ್ಕಾಗ ಇವನು ನನ್ನ ಶಿಷ್ಯ ಇರಬಹುದೇ? ಇಲ್ಲ  ಪರಿಚಿತನಿರಬಹುದೇ? ಏಕವಚನದಲ್ಲಿ ಮಾತಾಡಿಸುವುದು ಸೂಕ್ತವೋ? ಇಲ್ಲ ಬಹುವಚನದಲ್ಲಿ ವಿಚಾರಿಸಿಕೊಳ್ಳುವುದು ಒಳ್ಳೆಯದೋ?  ಎಂದು ಸಾಕಷ್ಟು ಚಡಪಡಿಸುತ್ತೇವೆ. ಶಿಷ್ಯನಾಗಿದ್ದರೆ ಏಕವಚನ ಓಕೆ. ಇಲ್ಲದಿದ್ದರೆ ಏನಪ್ಪ ಗತಿ ಎಂದು ಚಿಂತೆಯಾಗುತ್ತದೆ. ಅನುಮಾನ, ಫಜೀತಿ ಒಟ್ಟೊಟ್ಟಿಗೆ ಶುರುವಾಗುತ್ತದೆ. ಆದರೂ ಮೇಷ್ಟ್ರುಗಳಾದ ನಾವು ಎಷ್ಟು ಪಾಖಡಗಳೆಂದರೆ; ಎಲ್ಲಾ ಗೊತ್ತಾಗಿರುವ ತಜ್ಞರಂತೆ ಹ್ಹೆ..ಹ್ಹೆ.. ಎಂದು ತಲೆಯಾಡಿಸಿ ಗೊತ್ತಾಯಿತು... ಗೊತ್ತಾಯಿತು... ನೀನು ನಮ್ಮ ಶಿಷ್ಯ ಅಲ್ಲವೇನೋ? ಎಂದು ಸುಳ್ಳು ಸುಳ್ಳೇ ಹಲುಬುತ್ತೇವೆ. ಈ ಮಾತಿಗೆ ಶಿಷ್ಯಂದಿರು, ಹಾಗಾದರೆ ನಾನು ಯಾರೂಂತ ಹೇಳಿ ನೋಡೋಣ ಎಂದು ರಸಪ್ರಶ್ನೆ ಕಾರ್ಯಕ್ರಮವನ್ನೇ ಶುರುಮಾಡಿಕೊಳ್ಳುತ್ತಾರೆ. ಆಗ ಮುಗೀತು ಕಥೆ.

ಆದರೂ ನಾವೂ ಬಿಟ್ಟೇವಾ? ಮೇಷ್ಟ್ರೆಂಬ ಜಿಗುಟು ಜಾತಿ ನಮ್ಮದು. ಹೀಗಾಗಿ ಪಟ್ಟನ್ನು ಸುಲಭಕ್ಕೆ ಬಿಡುವುದಿಲ್ಲ. ಸಾರ್ ತಾವು ಯಾರೂಂತ ತಿಳಿಯಲಿಲ್ಲ. ಒಟ್‌ನಲ್ಲಿ ತಾವು ಪರಿಚಯದವರೇನೆ. ಆದರೆ ಎಲ್ಲಿ, ಯಾರು, ಯಾವಾಗ? ಅನ್ನೋದು ಮರೆತು ಹೋಗಿದೆ ಎಂದು ಬೇಕಂತಲೇ ಸಿಕ್ಕಾಪಟ್ಟೆ ಮರ್ಯಾದೆ ತೋರಿಸಿ ಬಿಡುತ್ತೇವೆ. ಆಗ ಪಾಪ ಆ ಹುಡುಗರ ಕಥೆ ಮುಗಿದಂತೇ ಲೆಕ್ಕ. ನಮ್ಮ ಗೌರವ, ಮರ್ಯಾದೆಗಳಿಂದ ಕಂಗಾಲಾಗುವ ಅವರು ನಮ್ಮನ್ನು ದಯವಿಟ್ಟು ಸಾರ್ ಅನ್ಬೇಡಿ ಸಾರ್. ನಾನು ನಿಮ್ಮ ಸ್ಟೂಡೆಂಟು. ಇಂಥ ವರ್ಷ, ಇಂಥ ಸೆಕ್ಷನ್‌ನಲ್ಲಿ ಕಲಿತ್ತಿದ್ದೆ ಎಂದು ಪಠಪಠಾಂತ ಬಾಯಿ ತೆರೆದು ಬಿಡುತ್ತಾರೆ. 

ಹಳೆಯ ಮುಖಗಳು ತಾವು ಓದಿದ ವರ್ಷ ಮರೆತಿದ್ದರೆ ನೆನಪಿಸಲು ಏನೇನೋ ಘಟನೆಗಳನ್ನು ಹೇಳುತ್ತಾರೆ. ಅವರ ಸಹಪಾಠಿಗಳ ಹೆಸರನ್ನು ನೆನಪಿಸುತ್ತಾರೆ. ನಾವು ಬೈದಿದ್ದು, ಹೊಡೆದಿದ್ದು ಕೆದಕುತ್ತಾರೆ. ಅಷ್ಟಕ್ಕೂ ನಾವು ಎಚ್ಚರವಾಗದಿದ್ದರೆ, ಆ ವರ್ಷದ ಪರಮ ಸುಂದರಿಯ ಹೆಸರನ್ನೋ; ಇಲ್ಲ ಓಡಿ ಹೋಗಿ ಮದುವೆಯಾದ ಪ್ರೇಮಿಗಳ ಸಂಗತಿಯನ್ನೋ, ಇಲ್ಲ ಕಾಲೇಜಿನಿಂದ ಟೂರಿಗೆ ಹೋಗಿದ್ದ ವಿಷಯವನ್ನೋ ಜ್ಞಾಪಕ ತರುತ್ತಾರೆ. ಅಪ್ಪಿತಪ್ಪಿಯೂ ನಾವು ಪಾಠ ಮಾಡಿದ ಕಹಿ ಘಟನೆಯನ್ನು ಯಾವ ಕಾರಣಕ್ಕೂ ನೆನಪಿಸಿಕೊಳ್ಳಲು ಹೋಗುವುದಿಲ್ಲ. ನಾವೇ ಭಂಡ ಬಿದ್ದು, ಕಕ್ಕುಲಾತಿ ಹೆಚ್ಚಾಗಿ ನಾನು ಪಾಠ ಎಷ್ಟೊಂದು ಚೆನ್ನಾಗಿ ಮಾಡ್ತಿದ್ದೆ ಅಲ್ವ ಎಂದು ಸುಳ್ಳು ಸುಳ್ಳೇ ವೀರತನ ತೋರಿಸಿಕೊಳ್ಳಬಹುದಷ್ಟೇ.  

ಹುಡುಗರ ಕಥೆ ಹೀಗಾದರೆ; ಆರೇಳು ವರ್ಷಗಳ ನಂತರ ಸಿಗುವ ಹೆಣ್ಣು ಮಕ್ಕಳ ಪಾಡು ಮತ್ತೊಂದು ತರಹದ್ದು. ಗಂಡ, ಮಕ್ಕಳು, ಅತ್ತೆ, ಮಾವರ ಫುಲ್ ಸೆಟ್ಟಿನೊಂದಿಗೆ ಅವರು ಸಿಗುತ್ತಾರೆ. ಅವರಿಗೋ ಪಾಠ ಹೇಳಿದ ಗುರುಗಳಿಗೆ ಕಂಡು ಮಾತಾಡಿಸುವ, ಗೌರವಿಸುವ ಹಂಬಲ. ಕಳೆದುಹೋದ ಸ್ವಾತಂತ್ರ್ಯದ ದಿನಗಳು ನೆನಪಿಗೆ ಬಂದು ಅವರು ಭಾವುಕರಾಗುವುದೇ ಹೆಚ್ಚು. 

ಕೈಯಲ್ಲೊಂದು ಕೂಸು, ಎರಡು ಮೂರು ಬ್ಯಾಗುಗಳು, ಜೊತೆಗೆ ಕುದಿಯುವ ಗಂಡ. ಸಂಸಾರದ ಜಂಜಡ ಹೊತ್ತುಕೊಂಡು ಸಿಗುವ ಅವರು ಹೆಚ್ಚು ಗಡಿಬಿಡಿಯಲ್ಲಿರುತ್ತಾರೆ. ಒತ್ತಡ, ಭಯದಲ್ಲಿರುತ್ತಾರೆ. ಹಂಬಲದಿಂದ ನಿಂತು ಮಾತಾಡಿಸುತ್ತಾರೆ. ಅವಳ ಗಂಡನಿಗೆ ಸಂತಸದಿಂದ ಪರಿಚಯಿಸುತ್ತಾರೆ. ಅವನಿಗೆ ಇಂಥ ಪರಿಚಯದ ಅಗತ್ಯವಿರುವುದಿಲ್ಲ. ಕೆಟ್ಟ ಒಣನಗೆ ಬಿಸಾಡಿ ಓಹೋ ಹೌದಾ! ಎಂದು ಔಪಚಾರಿಕವಾಗಿ ಮಾತಾಡಿಸುತ್ತಾನೆ. ತನ್ನ ಹೆಂಡತಿಯ ಗುರುವಾದವನ ಬಗ್ಗೆ ಅವನಿಗೆ ಯಾವ ಗೌರವಗಳೂ ಇರುವುದಿಲ್ಲ. ಅವಳ ಜುಲುಮೆಗೆ ಆ... ಹ್ಞೂ... ಎಂದು ಕುಂಯ್‌ಗುಡುತ್ತಾನಷ್ಟೇ. ಅವರಲ್ಲಿ ಅಪರೂಪಕ್ಕೆ ಕೆಲ ವಿದ್ಯಾರ್ಥಿನಿಯರ ಗಂಡಂದಿರು ಮಾತ್ರ ಸಿಕ್ಕು ಸ್ಪಂದಿಸಿ ಗೌರವದಿಂದ ಮಾತನಾಡಿದ್ದಿದೆ. ಜೊತೆಗೆ ತಮ್ಮ ಓದಿನ ದಿನಗಳನ್ನೂ ನಮ್ಮ ಅನುಭದೊಂದಿಗೆ ಕಲೆಸಿಕೊಂಡು ಸಂತಸ ಪಟ್ಟಿದ್ದೂ ಇದೆ. ಆದರೂ ನಮ್ಮ ಶಿಷ್ಯೆಯರು ಮದುವೆಯಾದ ನಂತರ ಸಿಕ್ಕಾಗ ಭಾರಿ ಬಂಧನದಲ್ಲಿ ಸಿಲುಕಿರುವುದು, ಒತ್ತಡದಲ್ಲಿ ನರಳಾಡುವಂತೆ ಕಂಡೇ ಕಾಣುತ್ತದೆ.

ಹುಡುಗರು ಮಾತ್ರ ಬಲು ಅಧಿಕಾರದಿಂದ ತಮ್ಮ ಹೆಂಡತಿಯರಿಗೆ ನಮ್ಮನ್ನು ಪರಿಚಯಿಸುತ್ತಾರೆ. ನಮ್ಮ ಪಾಠ, ಬೈಗುಳ, ಹೊಡೆತ, ಜೋಕ್ಸ್‌ಗಳನ್ನು ನೆನಪಿಸುತ್ತಾರೆ. ಕಾಲೇಜಿನ ದಿನಗಳ ನೆನೆದು ಆ ದಿನಗಳು ಎಷ್ಟು ಚೆನ್ನಾಗಿದ್ದವಲ್ಲಾ ಸಾರ್ ಎಂದು ಸಂಕಟಪಡುತ್ತಾರೆ. ತಮ್ಮ ಸಾಧನೆಗಳು ಏನಾದರೂ ಇದ್ದರೆ ಹೆಮ್ಮೆಯಿಂದ ವಿವರಿಸಿಕೊಳ್ಳುತ್ತಾರೆ. ಕೆಲವರು ಹಾಳಾಗಿ ಹೋದೆ ಸಾರ್; ನಿಮ್ಮ ಮಾತು ಕೇಳ್ಬೇಕಿತ್ತು. ಅವರ ಸಹವಾಸ ಮಾಡ್ಬಾರ್ದಾಗಿತ್ತು ಎಂದು ಗೋಳಾಡುತ್ತಾರೆ. ಆಗಿನ ಕಾಲೇಜಿನ ದಿನಗಳು ಎಷ್ಟು ಚೆನ್ನಾಗಿದ್ದವು. ಈಗಿರುವುದು ಸಿಕ್ಕಾಪಟ್ಟೆ ಬೋರ್ ಲೈಫ್ ಸಾರ್. ಈಗ ಹಣ ಇದೆ, ಕೆಲಸ ಇದೆ, ಮನೆ ಇದೆ, ಎಲ್ಲಾ ಇದೆ. ಆದರೆ ಆಗಿದ್ದ ಸ್ವಾತಂತ್ರ್ಯ, ಸ್ವಚ್ಛಂದದ ಬದುಕು ಈಗಿಲ್ಲ ಸಾರ್. ಜವಾಬ್ದಾರಿಗಳ ನಡುವೆ, ಒತ್ತಡಗಳ ನಡುವೆ ಸಿಕ್ಕು ಒದ್ದಾಡುತ್ತಿದ್ದೇವೆ ಸಾರ್ ಎಂದು ಕೆಲವರು ಲೊಚಗುಟ್ಟುತ್ತಾರೆ. ಪ್ರೀತಿ, ಸಂಕಟ, ಸಂಭ್ರಮ, ಯಾತನೆ, ನೆನಪು, ಎಲ್ಲವನ್ನೂ ನೆನಪಿಸಿಕೊಳ್ಳುತ್ತಾರೆ.

ಜೀವನದಲ್ಲಿ ಏನಾದರೂ ಸಾಧನೆ ಮಾಡಿ ಯಶಸ್ವಿಯಾದ ಮಕ್ಕಳನ್ನು ನೋಡಿದಾಗ ಸಂತೋಷವಾಗುತ್ತದೆ. ಬದುಕಲ್ಲಿ ವಿಫಲರಾಗಿ, ನಿರುದ್ಯೋಗಿಯಾಗಿ, ಸಮಸ್ಯೆಗಳ ಸುಳಿಗಳಲ್ಲಿ ಸಿಲುಕಿ ನರಳಾಡುವ ವಿದ್ಯಾರ್ಥಿಗಳನ್ನು ಕಂಡಾಗ ಅಷ್ಟೇ ದುಃಖವೂ ಆಗುತ್ತದೆ. ವಿದ್ಯಾರ್ಥಿಗಳ ಮುಖಚರ್ಯೆ ಅದೆಷ್ಟು ಬದಲಾಗಿರುತ್ತದೆ ಎಂದರೆ; ನಾವು ಅವರನ್ನು ಖಂಡಿತ ಕಂಡು ಹಿಡಿಯುವುದಿಲ್ಲ. ಅವರೇ ನಮ್ಮನ್ನು ಕಂಡು ಹಿಡಿದು ಮಾತಾಡಿಸಿದರೆ ಎಲ್ಲಾ ನೆನಪಾಗುತ್ತದೆ. ಕೆಲವರು ಮಾತಾಡಿಸದೆ ಮುಖ ತಿರುಗಿಸಿಕೊಂಡು ಹೋದರೂ ನಮಗೆ ಗೊತ್ತಾಗುವುದಿಲ್ಲ. ಕಾಲ ಅವರನ್ನು ಬದಲಾಯಿಸಿರುತ್ತದೆ. ನಮ್ಮನ್ನು ಮಾತ್ರ ಅಲ್ಲೇ ನಿಲ್ಲಿಸಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT