ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿ ಮಕ್ಕಳ ಭವಿಷ್ಯ ಬರೆಯುವ ಶಕ್ತಿ ಮೂಲಗಳು

Last Updated 15 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಸಿದ್ಧುವನ್ನು ನಾನು ಭೇಟಿ ಮಾಡಿದಾಗ ಅವನು ಬಹಳ ಧೃತಿಗೆಟ್ಟಿದ್ದ. ಆಗಷ್ಟೇ ಪಿಯುಸಿ ಪರೀಕ್ಷೆಯ ಫಲಿತಾಂಶ ಹೊರಬಿದ್ದಿತ್ತು. ಆದರೆ ಅದು ಅವನ ನಿರೀಕ್ಷೆಯ ಮಟ್ಟದಲ್ಲಿ ಇರಲಿಲ್ಲ. ತನ್ನ ಇಡೀ ಕುಟುಂಬದಲ್ಲೇ ಕಾಲೇಜು ಮೆಟ್ಟಿಲು ಹತ್ತುವ ಸಾಹಸ ಮಾಡಿದ ಮೊದಲ ವ್ಯಕ್ತಿ ಅವನಾಗಿದ್ದ. ಹೀಗಾಗಿ ತನ್ನ ಕುಟುಂಬಕ್ಕೆ ಮಾತ್ರವಲ್ಲ ಇಡೀ ಊರಿಗೇ ಸಾಧಿಸಿ ತೋರಿಸಬೇಕಾದ ಅನಿವಾರ್ಯತೆ ಅವನಿಗಿತ್ತು.

ಅವನ ಹಳ್ಳಿಯ ಬಹುತೇಕರು 10ನೇ ತರಗತಿ ದಾಟಿ ಹೋಗಿರಲಿಲ್ಲ. ಹೀಗಾಗಿ ಹೆಗ್ಗಡದೇವನಕೋಟೆ ಪಟ್ಟಣದಲ್ಲಿದ್ದ ಕಾಲೇಜಿಗೆ ತೆರಳಿದ ಮೊದಲ ವ್ಯಕ್ತಿ ಸಿದ್ಧುವೇ ಆಗಿದ್ದ. ಅದಕ್ಕಾಗಿ ಕಷ್ಟಗಳ ಸರಮಾಲೆಯನ್ನೇ ಅವನು ಎದುರಿಸಬೇಕಾಯಿತು.

ಪಟ್ಟಣಕ್ಕೆ ಕರೆದೊಯ್ಯುವ ಏಕೈಕ ಬಸ್ ಹಿಡಿಯಲು ಮುಂಜಾನೆಯೇ ಸಿದ್ಧವಾಗುವುದರಿಂದ ಹಿಡಿದು, ದಿನವಿಡೀ ಉಪವಾಸವಿರುವುದು, ತಾನು ಆವರೆಗೂ ಕೇಳಿಯೇ ಇರದಿದ್ದ ಇಂಗ್ಲಿಷ್ ಪದಗಳನ್ನು ಅರ್ಥೈಸಿಕೊಳ್ಳಲು ತಿಣುಕಾಡುವುದು, ಕೃಷಿಯತ್ತ ಮತ್ತು ತನ್ನ ಕುಟುಂಬದ ಆದಾಯದತ್ತ ಹೆಚ್ಚು ಗಮನ ಹರಿಸದ್ದಕ್ಕೆ ಮನೆಯವರು- ಸ್ನೇಹಿತರಿಂದ ಗೇಲಿಗೆ ಒಳಗಾಗುವವರೆಗೆ ಎಲ್ಲವನ್ನೂ ಅವನು ಸಹಿಸಿಕೊಳ್ಳಲೇಬೇಕಾಗಿತ್ತು.

ನಗರದಲ್ಲಿದ್ದ ವೃತ್ತಿಪರ ಕೋರ್ಸ್‌ಗೆ ಸೇರಬೇಕೆಂಬ ಕನಸನ್ನು ಅವನು ಕಂಡಿದ್ದ. ಆದರೆ ಈಗ ಬಂದ ಫಲಿತಾಂಶ ನೋಡಿದರೆ ಅದು ಕನಸಾಗಿಯೇ ಉಳಿದುಹೋಗುತ್ತದೆ ಎಂಬ ಸತ್ಯ ಅವನಿಗೆ ಮನದಟ್ಟಾಗಿತ್ತು. ಕಳೆದ ಪಿಯುಸಿ ಎರಡು ವರ್ಷಗಳ ಅವಧಿಯಲ್ಲಿ ಅವನು ಆಗಾಗ್ಗೆ ನನ್ನನ್ನು ಭೇಟಿ ಮಾಡಿ ಮಾತುಕತೆ ಆಡುತ್ತಿದ್ದ.
 
ಅವನ ಆಕಾಂಕ್ಷೆಗಳ ಈಡೇರಿಕೆಗೆ ಪೂರಕವಾಗುವಷ್ಟು ಅಂಕಗಳು ಬರಬಹುದು ಎಂದು ನಾನು ಸಹ ನಂಬಿದ್ದೆ. ಈಗ ಮುಂದೆ ಏನು ಮಾಡಬೇಕೆಂಬ ಸಲಹೆ ಕೇಳಲು ಅವನು ನನ್ನ ಬಳಿ ಬಂದಿದ್ದ. ಆಗ ಒಂದಷ್ಟು ಕಠಿಣವಾಗೇ ನಡೆದುಕೊಂಡ ನಾನು, ಕಷ್ಟಪಡದಿದ್ದಕ್ಕೆ ತಕ್ಕ ಪ್ರತಿಫಲವೇ ನಿನಗೆ ಸಿಕ್ಕಿದೆ ಎಂದೆ. ಆಗ ದುಃಖಿತನಾದ ಸಿದ್ಧು ತನ್ನ ಕಥೆಯನ್ನು ಹೇಳಿಕೊಂಡ.
 
ಇದನ್ನು ಕೇಳಿ ಅವನದು ಒಂದು ಅಸಾಮಾನ್ಯ ಪರಿಸ್ಥಿತಿ ಎಂದುಕೊಂಡೆನಾದರೂ ಇದು ಅವನೊಬ್ಬನದೇ ಕಥೆಯಲ್ಲ, ನಮ್ಮ ಹಲವಾರು ಹಳ್ಳಿ ಮಕ್ಕಳ ದಿನನಿತ್ಯದ ವ್ಯಥೆಯೂ ಹೌದಲ್ಲವೇ ಎನಿಸಿತು.
ಮನೆಯ ಏಳು ಮಕ್ಕಳಲ್ಲಿ ಸಿದ್ಧು ಹಿರಿಯವನಾಗಿದ್ದ. ಅವನ ತಂದೆಗೆ ನಾಲ್ಕೆಕರೆ ಜಮೀನಿತ್ತು. ಅದರಲ್ಲಿ ಬೋರ್‌ವೆಲ್ ಕೊರೆಸಲು ಅವರು ಸಾಕಷ್ಟು ಸಾಲ ಮಾಡಿಕೊಂಡಿದ್ದರು.

ಆದರೆ ಸಾಕಷ್ಟು ನೀರು ಆ ಸ್ಥಳದಲ್ಲಿದೆ ಎಂಬ ವಿಷಯ ತಿಳಿದು ಅವರು ಸಂತಸಗೊಂಡಿದ್ದರು. ಒಮ್ಮೆ ಬೋರ್‌ವೆಲ್ ಕಾರ್ಯಾರಂಭ ಮಾಡಿ ನೀರು ಬರಲಾರಂಭಿಸಿದರೆ, ಕನಿಷ್ಠ ಎರಡು ಎಕರೆಗಾದರೂ ನೀರಾವರಿ ಸೌಲಭ್ಯ ಒದಗಿಸಬಹುದು ಎಂಬ ವಿಶ್ವಾಸ ಬಂದಿತ್ತು.

ಇದು ತಮ್ಮ ಕುಟುಂಬದ ಹಣೆಬರಹವನ್ನೇ ಬದಲಿಸಲಿದ್ದು, ತಮ್ಮ ಸಾಮಾಜಿಕ ಮತ್ತು ಆರ್ಥಿಕ ಮಟ್ಟ ಮೇಲೇರಲಿದೆ ಎಂದು ಸಿದ್ಧು ಭಾವಿಸಿದ್ದ. ಒಂದು ವೇಳೆ ಓದುವ ಸಲುವಾಗಿ ತಾನು ಮೈಸೂರಿಗೆ ಹೋದರೂ ಅದಕ್ಕೆ ತಗಲುವ ಶುಲ್ಕ ಭರಿಸಲು ತನ್ನ ತಂದೆಗೆ ಸಾಧ್ಯವಾಗುತ್ತದೆ ಎಂಬುದು ಅವನಿಗೆ ಖಚಿತವಾಗಿತ್ತು.
 
ಇಂತಹ ಅವನ ಕನಸೆಲ್ಲವೂ ನೀರಾವರಿಗೆ ಒಳಗಾಗಲಿದ್ದ ಆ ಎರಡು ಎಕರೆ ಭೂಮಿಯ ಸುತ್ತಲೇ ಗಿರಕಿ ಹೊಡೆಯುತ್ತಿತ್ತು. ಇನ್ನು ಬೋರ್‌ವೆಲ್‌ಗೆ ಅಗತ್ಯವಾದ ಸಬ್‌ಮರ‌್ಸಿಬಲ್ ಪಂಪ್ ಅಳವಡಿಸಿ ಎಷ್ಟು ಸಾಧ್ಯವೋ ಅಷ್ಟು ಬೇಗ ಅದಕ್ಕೆ ವಿದ್ಯುತ್ ಸಂಪರ್ಕ ಪಡೆಯುವುದಷ್ಟೇ ಬಾಕಿ ಉಳಿದಿತ್ತು.

ಇದು ಮಾಡುವುದಕ್ಕಿಂತ ಹೇಳುವುದಕ್ಕೆ ಸುಲಭವಾದ ಕೆಲಸವಾಗಿತ್ತು. ಸಿದ್ಧು ಮತ್ತು ಅವನ ತಂದೆಯಂತಹ ಜನರಿಗೆ ಸ್ಥಳೀಯ ವಿದ್ಯುತ್ ಕಚೇರಿಯಿಂದ ಕೆಲಸ ಮಾಡಿಸಿಕೊಳ್ಳುವುದು ಒಂದು ಸವಾಲೇ ಆಗಿತ್ತು. ಓದಲು ಬರುತ್ತಿದ್ದವನು ಮತ್ತು ಸಂಕೀರ್ಣ ನಿಯಮಗಳನ್ನು ಗ್ರಹಿಸಬಲ್ಲವನು ಇವನೊಬ್ಬನೇ ಆಗಿದ್ದುದರಿಂದ ಈ ಕಾರ್ಯಕ್ಕೆ ಸಿದ್ಧುವನ್ನೇ ಅವನ ಮನೆಯವರು ಅವಲಂಬಿಸಿದ್ದರು.

ಆದಷ್ಟು ಬೇಗ ಕೆಲಸ ಸಾಧಿಸಬೇಕೆಂಬ ಕಾರಣಕ್ಕೆ ಸ್ಥಳೀಯ ಅಧಿಕಾರಿಗಳು, ಎಲೆಕ್ಟ್ರಿಕಲ್ ಗುತ್ತಿಗೆದಾರರಂತಹ ಸಂಬಂಧಪಟ್ಟ ವ್ಯಕ್ತಿಗಳನ್ನು ಭೇಟಿಯಾಗಲು ಸಿದ್ಧು ತನ್ನ ಹೆಚ್ಚಿನ ಸಮಯವನ್ನು ಕಳೆದಿದ್ದ. ಆದರೆ ವ್ಯವಸ್ಥೆಯ ಕಾರ್ಯನಿರ್ವಹಣೆಯ ಮಾರ್ಗಗಳನ್ನು ಅರಿಯದ ಬಡವರಿಗೆ ತಮ್ಮ ಕಾರ್ಯ ಸಾಧಿಸಿಕೊಳ್ಳಲು ಸಾಕಷ್ಟು ಸಮಯವೇ ಬೇಕು ಎಂಬುದು ಮಾತ್ರ ಅವನಿಗೆ ತಿಳಿದಿರಲಿಲ್ಲ.

ಅಂತೂ ಇಂತೂ 8 ತಿಂಗಳು ಕಳೆದು, ಸಾಕಷ್ಟು ಹಣ ಕೈಬಿಟ್ಟುಹೋದ ನಂತರ ಬೋರ್‌ವೆಲ್‌ಗೆ ವಿದ್ಯುತ್ ಸಂಪರ್ಕ ಬಂತು. ಇದರಿಂದ ಇನ್ನು ಮುಂದಾದರೂ ತಾವು ವಾಣಿಜ್ಯ ಬೆಳೆ ಬೆಳೆಯಬಹುದು, ಇದು ತನ್ನ ಉನ್ನತ ಶಿಕ್ಷಣಕ್ಕೆ ನೆರವಾಗುತ್ತದೆ ಎಂದು ಸಿದ್ಧು ತಿಳಿದ. ಆದರೆ ಅವನಿಗೆ ನಿರಾಶೆಯಾಗಲು ಹೆಚ್ಚು ಸಮಯವೇನೂ ಬೇಕಾಗಲಿಲ್ಲ. 

ತಾಂತ್ರಿಕವಾಗಿ ಬೋರ್‌ವೆಲ್‌ಗೆ ವಿದ್ಯುತ್ ಸಂಪರ್ಕವೇನೋ ಸಿಕ್ಕಿತಾದರೂ ವಿದ್ಯುತ್ ಕಡಿತದ ಪಿಡುಗು ಅವನ ಇಡೀ ಊರನ್ನೇ ಆವರಿಸಿಕೊಂಡಿತ್ತು. ಎಲ್ಲ ಮೂರು ಫೇಸ್‌ಗಳೂ ಸೇರಿ ಕೇವಲ 4 ಗಂಟೆಗಳ ಕಾಲ 220 ವೋಲ್ಟ್‌ನ ವಿದ್ಯುತ್ ಮಾತ್ರ ದೊರೆಯುತ್ತಿತ್ತು. ಇದರಿಂದ ಆ ಸಂದರ್ಭದಲ್ಲಷ್ಟೇ ಬೋರ್‌ವೆಲ್ ಕೆಲಸ ನಿರ್ವಹಿಸುತ್ತಿತ್ತು.

ನಿರ್ದಿಷ್ಟ ಸಮಯದಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕಾಗಿತ್ತಾದರೂ, ವಾಸ್ತವದಲ್ಲಿ ಅದು ಕಾರ್ಯರೂಪಕ್ಕೆ ಬರುತ್ತಿರಲಿಲ್ಲ. ಬಹುತೇಕ ಸಂದರ್ಭಗಳಲ್ಲಿ ವಿದ್ಯುತ್ ಅನಿಯಮಿತವಾಗಿ ಇರುತ್ತಿತ್ತು, ಅದೂ ಸಿಂಗಲ್ ಫೇಸ್ ಮತ್ತು ಕಡಿವೆು ವೋಲ್ಟೇಜ್. ಪಂಪ್‌ಸೆಟ್‌ನ ಸ್ವಿಚ್ ಹಾಕುವ ಸಲುವಾಗಿ ಹಲವಾರು ರಾತ್ರಿಗಳಲ್ಲಿ ಸಿದ್ಧು ವಿದ್ಯುತ್‌ಗಾಗಿ ಕಾಯುತ್ತಾ ಕುಳಿತಿರಬೇಕಾಗುತ್ತಿತ್ತು.
 
ಅಲ್ಲದೆ ಪ್ರತಿ ಬಾರಿ ವಿದ್ಯುತ್ ಹೋಗಿ ಮತ್ತೆ ಬಂದಾಗಲೂ, ಎರಡು ಕಿ.ಮೀ ದೂರದಲ್ಲಿದ್ದ ತಮ್ಮ ಜಮೀನಿಗೆ ಪಂಪ್‌ಸೆಟ್ ಸ್ವಿಚ್ ಹಾಕಲು ನಡೆದುಕೊಂಡು ಹೋಗಬೇಕಾಗುತ್ತಿತ್ತು.
 
ಸ್ವಯಂಚಾಲಿತವಾಗಿ ಹೊತ್ತಿಕೊಳ್ಳುವ ಸ್ವಿಚ್‌ಗಳು ಮತ್ತು ಸಿಂಗಲ್ ಫೇಸ್ ವಿದ್ಯುತ್‌ನ್ನು 3 ಫೇಸ್‌ಗೆ ಪರಿವರ್ತಿಸುವ ಸಾಧನಗಳನ್ನು ನೆರೆಯ ಗ್ರಾಮಸ್ಥರು ಅಳವಡಿಸಿಕೊಂಡಿದ್ದ ವಿಷಯವನ್ನು ಸಿದ್ಧು ಕೇಳಿದ್ದ. ಅವುಗಳನ್ನು ಭರಿಸುವ ಶಕ್ತಿ ಅವನ ತಂದೆಗೆ ಇರಲಿಲ್ಲವಾದ್ದರಿಂದ ಪಂಪ್ ಚಾಲೂ ಮಾಡಲು ರಾತ್ರಿ ಕನಿಷ್ಠ 2-3 ಬಾರಿಯಾದರೂ ಸಿದ್ಧು ಎದ್ದು ಹೋಗುತ್ತಿದ್ದ.

ಇದರಿಂದ ಓದಿನ ಕಡೆ ಸೂಕ್ತ ಗಮನಹರಿಸಲು ಅವನಿಗೆ ಸಾಧ್ಯವಾಗುತ್ತಿರಲಿಲ್ಲ. ಸರಿಯಾದ ನಿದ್ರೆಯೂ ಇರುತ್ತಿರಲಿಲ್ಲವಾದ್ದರಿಂದ ತರಗತಿಯಲ್ಲಿ ಅವನು ಮಂಕಾಗಿಯೇ ಇರುತ್ತಿದ್ದ. ಮುಂಜಾನೆಯೇ ಮನೆ ಬಿಡುತ್ತಿದ್ದುದರಿಂದ ತಿಂಡಿ ತಿನ್ನಲು ಅಥವಾ ಊಟವನ್ನು ಡಬ್ಬಿಯಲ್ಲಿ ಕಟ್ಟಿಕೊಂಡು ಹೋಗಲು ಸಹ ಸಾಧ್ಯವಾಗುತ್ತಿರಲಿಲ್ಲ.

ಹೀಗಾಗಿ ಸಂಜೆ ಮನೆಗೆ ಹಿಂದಿರುಗಿದ ನಂತರವಷ್ಟೇ ದಿನದ ಮೊದಲ ತುತ್ತನ್ನು ಅವನು ಬಾಯಿಗಿಡುತ್ತಿದ್ದ. ಇಂತಹ ದುಃಸ್ಥಿತಿಯಲ್ಲಿದ್ದ ಸಿದ್ಧು ಪರೀಕ್ಷೆಯಲ್ಲಿ ಪಾಸಾಗಿದ್ದುದೇ ಒಂದು ಅಚ್ಚರಿಯ ವಿಷಯವಾಗಿತ್ತು.

ನಗರವಾಸಿಗಳಿಗೆ ವಿದ್ಯುತ್ ಕೈಕೊಟ್ಟರೆ ಒಂದಷ್ಟು ಹೊತ್ತು ಫ್ಯಾನ್ ಇಲ್ಲದೆ ಬೆವರು ಹರಿಸಬೇಕಾಗಬಹುದು ಮತ್ತು ಅದಕ್ಕಾಗಿ ಕೆಲ ಕಾಲ ಅವರು ಶಪಿಸಿಕೊಳ್ಳಬಹುದು ಅಥವಾ ಅಡುಗೆಮನೆಯಲ್ಲಿ ಮಿಕ್ಸಿ ಕೆಲಸ ಮಾಡದೇ ಇರಬಹುದು, ಇಲ್ಲವೇ ತಮ್ಮ ನೆಚ್ಚಿನ ಧಾರಾವಾಹಿ ನೋಡುವುದರಿಂದ ಅವರು ವಂಚಿತರಾಗಬಹುದು ಅಷ್ಟೆ.
 
ಹೀಗಾಗಿ ಶಕ್ತಿ ಮೂಲ ಮತ್ತು ಅಭಿವೃದ್ಧಿಯ ಮೇಲೆ ಅದರ ಪರಿಣಾಮಗಳ ನಡುವಿನ ಸಂಕೀರ್ಣ ಸಂಬಂಧಗಳನ್ನು ಯೋಚಿಸುವ ಗೋಜಿಗೇ ನಾವು ಹೋಗುವುದಿಲ್ಲ. ಆದರೆ ನಾಟಕೀಯ ಸಂಗತಿಯೆಂದರೆ, ಸಿದ್ಧುವಿನಂತಹವರು ಜಲವಿದ್ಯುತ್ ಉತ್ಪಾದಿಸುವ ಜಲಾಶಯಗಳನ್ನು ಹೊಂದಿದ ತಾಲ್ಲೂಕುಗಳಿಂದಲೇ ಬಂದವರು. ನುಗು ಮತ್ತು ಕಬಿನಿ ನದಿಗಳನ್ನು ಒಳಗೊಂಡ ವಿದ್ಯುತ್ ಘಟಕಗಳು ಎಚ್.ಡಿ ಕೋಟೆಯಲ್ಲಿವೆ.

ಇವುಗಳಿಂದ ನಿಯಮಿತವಾಗಿ 27.5 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಇದರಲ್ಲಿ ಬಹುಪಾಲು ವಿದ್ಯುತ್ ರಾಜ್ಯ ಗ್ರಿಡ್‌ಗೆ ಹೋಗುತ್ತದೆ. ಇದರಿಂದ ಸ್ಥಳೀಯರಿಗೆ ಈ ವಿದ್ಯುತ್‌ನ್ನು ಬಳಸುವುದಾಗಲೀ, ಅದರ ಮೇಲೆ ನಿಯಂತ್ರಣವಾಗಲೀ ಇರುವುದಿಲ್ಲ.

ರಾಜ್ಯದ ಆರನೇ ಒಂದು ಭಾಗದಷ್ಟು ಜನಸಂಖ್ಯೆ ಹೊಂದಿರುವ ಬೆಂಗಳೂರು ನಗರವೊಂದೇ ರಾಜ್ಯದ ಪಾಲಿನ ಶೇ 50ಕ್ಕಿಂತಲೂ ಹೆಚ್ಚು ವಿದ್ಯುತ್‌ನ್ನು ಬಳಸುತ್ತದೆ. ಇದರಿಂದ ಸಹಜವಾಗೇ ರಾಜ್ಯದ ಆರ್ಥಿಕ ಶಕ್ತಿಯಾಗಿ ಬೆಂಗಳೂರು ಮುಂದುವರಿದಿದ್ದರೆ, ಇತರ ಭಾಗಗಳು ಸೊರಗಿ ಹೋಗುತ್ತಿವೆ.

ಕರ್ನಾಟಕದ ಹಳ್ಳಿಗಳು ಮತ್ತು ಅಲ್ಲಿನ ಜನರು ತಮಗೆ ಒದಗಿಸುವ ಶಕ್ತಿ ಮೂಲಗಳನ್ನು ಹೊರತುಪಡಿಸಿ ಆರ್ಥಿಕ ಪ್ರಗತಿಯನ್ನು ಯೋಚಿಸುವುದೂ ಸಾಧ್ಯವಿಲ್ಲವಾಗಿದೆ.
 
ಸುಸ್ಥಿರ ಪರಿಸರ ಮತ್ತು ಸುರಕ್ಷೆಯ ವಿಷಯಗಳು ನಮ್ಮ ಶಾಖೋತ್ಪನ್ನ ಹಾಗೂ ಅಣು ವಿದ್ಯುತ್ ಘಟಕಗಳ ಬಗ್ಗೆ ಪರಾಮರ್ಶೆ ನಡೆಸುವಂತೆ ಮಾಡುತ್ತಿವೆ. ಇದರ ಜೊತೆಜೊತೆಗೆ ಅತ್ಯಂತ ಅಗತ್ಯವಾದ ಅಭಿವೃದ್ಧಿಯನ್ನೂ ನಾವು ಕಡೆಗಣಿಸುವಂತಿಲ್ಲ.

ಇವೆರಡೂ ವಿರೋಧಾಭಾಸದ ಸಂಗತಿಗಳಂತೆ ನಮಗೆ ಕಂಡರೂ, ಎರಡರ ನಡುವೆ ಸಮತೋಲನ ಕಾಯ್ದುಕೊಳ್ಳಲು ಇತರ ಪರ್ಯಾಯ ಮಾರ್ಗಗಳ ಬಗ್ಗೆ ನಾವು ಯೋಚಿಸಲೇಬೇಕಾಗಿದೆ.

ಗುಜರಾತ್‌ನಂತಹ ರಾಜ್ಯಗಳು ಗ್ರಾಮೀಣ ಪ್ರದೇಶಗಳಿಗೆ ಸ್ಥಿರ ಮತ್ತು ಸಮಂಜಸ ವಿದ್ಯುತ್ ಪೂರೈಸುವ ಸಲುವಾಗಿ ವಿತರಣಾ ಮಾರ್ಗಗಳನ್ನು ಪ್ರತ್ಯೇಕಿಸಿವೆ. ಇದರಿಂದ ತಮ್ಮ ನೀರಾವರಿ ಅಗತ್ಯಗಳಿಗೆ ನಿಗದಿತ ಸಮಯದಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಯ ಖಾತರಿ ಈ ಪ್ರದೇಶಗಳಿಗೆ ಸಿಗುತ್ತಿದೆ.
 
ಸ್ಥಳೀಯವಾಗಿ ವಿದ್ಯುತ್ ಪೂರೈಸಲು ಅನುವಾಗುವಂತೆ ಸಣ್ಣ ಗ್ರಿಡ್‌ಗಳನ್ನು ಒಳಗೊಂಡ ಚಿಕ್ಕ ಚಿಕ್ಕ ವಿದ್ಯುತ್ ಘಟಕಗಳನ್ನು ಉತ್ತೇಜಿಸುವುದು ಅಥವಾ ಕುಟುಂಬಗಳು ದಿನನಿತ್ಯದ ಬಳಕೆಯ ಸೋಲಾರ್ ದೀಪಗಳಿಗೆ ಸೋಲಾರ್ ಶಕ್ತಿಯ ಮರುಭರ್ತಿ ಮಾಡಿಕೊಳ್ಳಲು ಕೇಂದ್ರ ವಿದ್ಯುತ್ ಪೂರಣ ಘಟಕಗಳನ್ನು ಸ್ಥಾಪಿಸುವುದು ಅಥವಾ ಸ್ಥಳೀಯ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಮಹತ್ವದ ನಿಯಂತ್ರಣ ಹೊಂದಲು ಜನರಿಗೆ ಅವಕಾಶ ಕಲ್ಪಿಸುವ ಸಾಧ್ಯತೆಗಳತ್ತ ನಾವು ಮುಖ ಮಾಡಬೇಕಾಗಿದೆ. ಹೀಗಾದಾಗ ಸಿದ್ಧುವಿನಂತಹ ವಿದ್ಯಾರ್ಥಿಗಳು ತಮ್ಮ `ಭವ್ಯ~ ಭವಿಷ್ಯದ ಬಗ್ಗೆ ಕನಿಷ್ಠ ಕನಸನ್ನಾದರೂ ಕಾಣಬಹುದು.

ಆರ್ಥಿಕತೆ- ಪರಿಸರ- ಶಕ್ತಿ ಮೂಲ ಎಲ್ಲಕ್ಕೂ ಪರಸ್ಪರ ಸಂಬಂಧ ಇದೆ ಎಂಬುದನ್ನು ನಮ್ಮ ನೀತಿ ನಿರೂಪಕರು, ಪರಿಸರ ಕಾರ್ಯಕರ್ತರು, ರಾಜಕಾರಣಿಗಳೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಸಮತೋಲಿತ ಪರಿಹಾರ ಕಂಡುಕೊಳ್ಳಲು ಇವರೆಲ್ಲರೂ ಕೈಜೋಡಿಸಬೇಕು.
 
ಪ್ರಗತಿ, ಬೆಳವಣಿಗೆ, ಅಭಿವೃದ್ಧಿ ಎಲ್ಲವೂ ನಿಷ್ಪಕ್ಷಪಾತವಾಗಿರುವುದರ ಜೊತೆಗೆ ಪರಿಸರಕ್ಕೆ ಪೂರಕವಾಗಿಯೂ ಇದೆ ಎಂಬ ಭರವಸೆ ಮೂಡಿಸಬೇಕು. ನಮ್ಮ ಹಳ್ಳಿಗಳು ಉಳಿದು ಬೆಳೆದು ಅಭಿವೃದ್ಧಿಯಾಗದ ಹೊರತು ಕ್ಷಿಪ್ರ ನಗರೀಕರಣದ ಸಮಸ್ಯೆಗಳನ್ನು ಪರಿಹರಿಸುವುದು ಅಸಾಧ್ಯ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.
 
ನಮ್ಮ ಗ್ರಾಮಸ್ಥರ ಜೀವನ ಮಟ್ಟ ಸುಧಾರಿಸಿ, ಆರ್ಥಿಕ ಮಟ್ಟದ ಬಗ್ಗೆ ಅವರಲ್ಲಿ ಭರವಸೆ ಮೂಡಿಸಿದಾಗಷ್ಟೇ ರಾಜ್ಯ ಸಮಗ್ರ ಅಭಿವೃದ್ಧಿ ಕಾಣಬಹುದು. ಈ ನಿಟ್ಟಿನಲ್ಲಿ ನಮ್ಮ ಯೋಚನಾ ಲಹರಿ ಹರಿದಾಗ ಸರ್ವರಿಗೂ ಅರ್ಥಪೂರ್ಣ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ತಂದುಕೊಡಲು ಸಾಧ್ಯ.

 ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT