ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವ್ಯಾಸಿ ಲೇಖಕ ಹಾಗೂ ಸಾಹಿತ್ಯವೆಂಬ ಸ್ನೇಹಿತರ ಕ್ಲಬ್ಬು

Last Updated 3 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಕನ್ನಡ ಸಾಹಿತಿಗಳು ಹವ್ಯಾಸಿಗಳು, ಮಧ್ಯಮ ವರ್ಗೀಯರು. ಮೇಲ್‌ವರ್ಗವಾಗಲು ಬಯಸುತ್ತ, ಏನೇನೋ ಕಸರತ್ತು ನಡೆಸುತ್ತ, ಸಾಹಿತ್ಯವನ್ನೇ ಸಾಮಾಜಿಕ ಏಣಿಯನ್ನಾಗಿಸಿಕೊಂಡಿರುವ ಸಮರ್ಥರು. ಸೃಜನಶೀಲತೆಯೆಂಬುದು ಇವರಿಗೆ ಒಂದು ಹವ್ಯಾಸ. ವೃತ್ತಿಯಿಂದ ಇವರು, ಭಾಷಾ ಶಿಕ್ಷಕರು ಇಲ್ಲವೇ ವಿವಿಧ ಬಗೆಯ ಮಧ್ಯಮವರ್ಗೀಯ ವೃತ್ತಿನಿರತರು. ಸಾಹಿತ್ಯವೆಂಬುದು ಇವರಿಗೆ ಒಂದು ಪುಸ್ತಕ ಮಾತ್ರ.

ಪುಸ್ತಕದ ರಚನೆ, ನಿರ್ವಚನೆ, ಪ್ರಕಾಶನ, ವಿತರಣೆ ಎಲ್ಲವೂ ಹವ್ಯಾಸಿಯೇ ಹೌದು. ಪುಸ್ತಕವನ್ನು ಕೊಂಡು ಓದುವ ಹಾಗೂ ಸಾಹಿತ್ಯಕ್ಕಾಗಿ ಜೀವ ಕೊಡುವ ಸಾಮಾನ್ಯ ಕನ್ನಡಿಗರು ಇಲ್ಲವೇ ಇಲ್ಲ ಎಂಬಷ್ಟು ಸಣ್ಣ ಸಂಖ್ಯೆಯಲ್ಲಿದ್ದಾರೆ. ಸಾಮಾನ್ಯ ಕನ್ನಡಿಗರು ಸಾಹಿತ್ಯದಲ್ಲಿ ಕನ್ನಡವನ್ನು ಗುರುತಿಸುತ್ತಾರೆಯೇ ಹೊರತು ಕನ್ನಡದಲ್ಲಿ ಸಾಹಿತ್ಯವನ್ನಲ್ಲ. ಸಿನಿಮಾ ಹಾಡುಗಳಾಗಿ ಅಥವಾ ಕತೆಗಳಾಗಿ ಬಂದಾಗ ಸಾಹಿತಿಗಳಿಗೊಂದಿಷ್ಟು ಮಾನ್ಯತೆ ಬರುತ್ತದೆ ಅಷ್ಟೆ.

ಇನ್ನು ಸಂಸ್ಥೆ: ಈ ಸಂಸ್ಥೆಯನ್ನು ಜೀವಂತವಾಗಿಟ್ಟಿರುವವರು ಸ್ನೇಹಿತರು, ಸಾಹಿತಿಗಳ ಸ್ನೇಹಿತರು. ಇಂತಹ ಸ್ನೇಹಿತರ ಕ್ಲಬ್ಬುಗಳ ಕ್ರೋಡೀಕರಣವೇ ಸಾಹಿತ್ಯ ಸಂಸ್ಥೆ ಎಂದರೆ ತೀರ ತಪ್ಪಾಗಲಾರದು. ಜನರಿಗೂ ಸಾಹಿತ್ಯಕ್ಕೂ ವರ್ಷಕ್ಕೊಮ್ಮೆ ಸಾಹಿತ್ಯ ಸಮ್ಮೇಳನಗಳಲ್ಲಿ ತಾತ್ಕಾಲಿಕ ಸಂಬಂಧ ಉಂಟಾಗುತ್ತದೆ, ಉಂಟಾದಷ್ಟೇ ವೇಗವಾಗಿ ಮುರಿದುಬೀಳುತ್ತದೆ.

ಸಿಟ್ಟಾಗಬೇಡಿ. ಸಾಹಿತ್ಯ ಸಂಸ್ಥೆಯನ್ನು ಗೇಲಿ ಮಾಡಲಿಕ್ಕಾಗಿ, ಅಥವಾ ಸಾಹಿತಿ ಮಿತ್ರರನ್ನು ಕಿಚಾಯಿಸಲಿಕ್ಕಾಗಿ, ಈ ಮಾತುಗಳನ್ನಾಡುತ್ತಿಲ್ಲ ನಾನು. ಮಾತಿನ ಪರಿಭಾಷೆ ಬದಲಿಸುತ್ತಿದ್ದೇನೆ ಅಷ್ಟೆ. ಇಷ್ಟಕ್ಕೂ ಹವ್ಯಾಸಿತನ ಬೈಗುಳವೇಕಾಗಬೇಕು? ಅಥವಾ ವರ್ಗಹಿತವನ್ನು ಕಾಪಾಡಿಕೊಳ್ಳುವುದು ಒಂದು ಪ್ರವೃತ್ತಿ ಏಕಾಗಬೇಕು? ಹವ್ಯಾಸವೆಂಬುದು ಬೈಗುಳವೆಂದಾದರೆ ನಾವು ರಂಗಕರ್ಮಿಗಳು ದಶಕಗಳಿಂದ ನಮ್ಮನ್ನು ನಾವೇ ಹವ್ಯಾಸಿ ರಂಗಕರ್ಮಿಗಳೆಂದು ಬೈದುಕೊಳ್ಳುತ್ತಿದ್ದೇವೆ.

ನಾನೊಬ್ಬ ವೃತ್ತಿಪರ ರಂಗಕರ್ಮಿ, ಅಷ್ಟಿಷ್ಟು ಸಾಹಿತ್ಯ ರಚನೆಯನ್ನೂ ಮಾಡಿರುವವನು. ನನ್ನಂತೆಯೇ ಹಲವರು-ಅವರೆಲ್ಲ ನನಗಿಂತ ಕಿರಿಯರು, ವೃತ್ತಿಪರವಾಗಿ ರಂಗಕರ್ಮ ನಡೆಸುತ್ತಿದ್ದಾರೆ. ಹವ್ಯಾಸಿ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ. ಹವ್ಯಾಸಿತನದ ಬಗ್ಗೆ ಮಾತನಾಡಲಿಕ್ಕೆ ನಮಗೊಂದಿಷ್ಟು ಅನುಭವವಿದೆ.

ನಾವು, ವೃತ್ತಿಪರತೆ ಎಂಬ ಪದವನ್ನು ಆಗಾಗ್ಗೆ ಬಳಸುತ್ತಿರುತ್ತೇವೆ. ರಂಗಮಾಧ್ಯಮದಲ್ಲಿ ಈ ಪದಕ್ಕೆ ವಿಶೇಷವಾದ ಹಾಗೂ ಇತ್ಯಾತ್ಮಕವಾದ ಅರ್ಥವಿದೆ. ಆಸೆಬುರುಕವಾದ ಹಾಗೂ ಅರೆವೃತ್ತಿಪರವಾದ ವಾತಾವರಣದಲ್ಲಿ ಉಳಿದೂ, ಹಟ ಹಿಡಿದು ಕೆಲಸ ಮಾಡಿದರೆ, ಮಹತ್ವಾಕಾಂಕ್ಷಿ ರಂಗಪರಂಪರೆಯೊಂದನ್ನು ಕಟ್ಟಬಹುದು ಎಂದು ನಾವು ನಂಬುತ್ತೇವೆ. ಸಾಹಿತ್ಯದಲ್ಲಿಯೂ ಇದು ಸಾಧ್ಯವಿದೆ ಎಂಬುದು ಈ ಲೇಖನದ ಪ್ರತಿಪಾದನೆಯಾಗಿದೆ.

ಇಷ್ಟಕ್ಕೂ ಹಿಂದೆ ಇದು ಸಾಧ್ಯವಾಗಿತ್ತು. ಹವ್ಯಾಸಿ ಲೇಖಕರ ನಡುವಿನಿಂದಲೇ ಆಧುನಿಕ ಕನ್ನಡ ಸಾಹಿತ್ಯ ಹುಟ್ಟಿಬಂದಿತ್ತು, ಮಹತ್ವಾಕಾಂಕ್ಷಿ ಲೇಖಕರು ಹುಟ್ಟಿಬಂದಿದ್ದರು. ಆದರೆ ಒಂದು ವ್ಯತ್ಯಾಸವಿದೆ. ಆಗ ಸಾಹಿತ್ಯ, ರಂಗಭೂಮಿ ಎರಡೂ ಚಳವಳಿ ರೂಪದಲ್ಲಿದ್ದವು. ಇಂದು ಇವು ಕೇವಲ ಹವ್ಯಾಸಿ ಸಂಸ್ಥೆಗಳಾಗಿವೆ.

ಹವ್ಯಾಸ ಒಂದು ಸವಲತ್ತು, ಮಧ್ಯಮ ವರ್ಗದ ಹಕ್ಕು. ಚಳವಳಿಯಾದರೋ ಒಂದು ಬಾಧ್ಯಸ್ಥಿಕೆ. ಹಕ್ಕು ಮತ್ತು ಬಾಧ್ಯಸ್ಥಿಕೆ ಎರಡೂ ಕೂಡಿ ಕೆಲಸ ಮಾಡಿದಾಗ ಮಾತ್ರ, ಮಧ್ಯಮವರ್ಗದ ಬೇಜವಾಬ್ದಾರಿ ಪ್ರವೃತ್ತಿ ಮಾಯವಾಗಿ ಮಹತ್ವಾಕಾಂಕ್ಷಿ ಒಬ್ಬ ಲೇಖಕ/ಲೇಖಕಿ  ಮೂಡಿಬರುತ್ತಾನೆ/ ಬರುತ್ತಾಳೆ. ಕೇವಲ ಹವ್ಯಾಸ ಸಾಕು ಎಂದಾದರೆ ಸಾಹಿತ್ಯವೇ ಏಕೆ, ಗಾಂಜಾ ಸೇದಬಹುದು, ಗುಂಡು ಹಾಕಬಹುದು... ಏನೆಲ್ಲಾ ಮಾಡಬಹುದು.

ಈಗ ಚಳವಳಿಗಳು ಹಿಂದೆ ಸರಿದಿವೆ. ಅಲ್ಲ, ಸರಿಸಲಾಗಿದೆ. ಮಾರುಕಟ್ಟೆಯನ್ನು ಮುಂದೆ ಸರಿಸುವ ಸಲುವಾಗಿ ಚಳವಳಿಗಳನ್ನು ಹಿಂದೆ ಸರಿಸಲಾಗಿದೆ. ಹಾಗೆ ಸರಿಸಿ, ನಮ್ಮಿಂದ ಹಸಿಹಸಿ ಹವ್ಯಾಸಗಳನ್ನು ಖರೀದಿಸಲಿಕ್ಕೆ ಸಿದ್ಧವಿದೆ ಮಾರುಕಟ್ಟೆ. ನಾವು ಲಾಭದಾಶೆಗೆ ಬಲಿಬಿದ್ದು, ಇಲ್ಲವೇ ಹಸಿಹಸಿ ಹವ್ಯಾಸಗಳನ್ನು ಕಲಾಕೃತಿಗಳೆಂದು ಸಂವಹನ ಮಾಧ್ಯಮಕ್ಕೆ ಮಾರಾಟ ಮಾಡುತ್ತೇವೆ, ಇಲ್ಲವೇ ಅಪಕ್ವ ಕೃತಿಗಳನ್ನು ನಾವೇ ಮುದ್ರಿಸಿ  ಸ್ನೇಹಿತರಿಗೆ ಹಂಚುತ್ತೇವೆ. ಹೌದು.

ಇಂದಿನ ಸಾಹಿತ್ಯ ಹಾಗೂ ರಂಗ ಚಳವಳಿಗಳು ಎಡಬಿಡಂಗಿಯಾಗಿದ್ದರೆ, ಅವುಗಳ ಸಂರಚನೆಗಳು ಪೇಲವವಾಗಿದ್ದರೆ, ಅದಕ್ಕೆ ಮತ್ತಾರನ್ನೂ ದೂರಬೇಕಿಲ್ಲ. ಮಾರುಕಟ್ಟೆ ಮತ್ತು ಕಾಯಂನೌಕರಿ ಎಂಬ ಅವಳಿ ಅನಿಷ್ಟಗಳಿಗೆ ನಾವು ಸಾಹಿತಿ–ಕಲಾವಿದರು ಬಲಿಬಿದ್ದಿದ್ದೇವೆ.

ಸೃಜನಶೀಲತೆಗೂ ಚಳವಳಿಗೂ ಇರಬೇಕಾದ ಇತ್ಯಾತ್ಮಕ ಸಂಬಂಧ ಅರ್ಥವಾಗಬೇಕೆಂದರೆ ನವೋದಯವನ್ನು ಗಮನಿಸಬೇಕು ನಾವು. ಅನೇಕರು ನವೋದಯವನ್ನು ಒಂದು ಚಳವಳಿಯೆಂದೇ ಪರಿಗಣಿಸುವುದಿಲ್ಲ. ಚಳವಳಿಗಳು ಏನಿದ್ದರೂ ಎಪ್ಪತ್ತರ ದಶಕದಲ್ಲಿ ಆರಂಭವಾಯಿತು ಎಂದೇ ಇವರು ಭಾವಿಸುತ್ತಾರೆ. ಎಪ್ಪತ್ತರ ದಶಕದ ಚಳವಳಿ ನಿರ್ದಿಷ್ಟವಾದ ಹಾಗೂ ಪರ್ಯಾಯವಾದ ಒಂದು ರಾಜಕೀಯ ಸಿದ್ಧಾಂತವನ್ನು ಮುಂದೊತ್ತಿತು ಎಂಬ ಕಾರಣಕ್ಕಾಗಿ ಇವರು, ಪ್ರಾಯಶಃ ಹಾಗೆ ಮಾಡುತ್ತಿರಬಹುದು.

ಬಂಡಾಯ ಹಾಗೂ ಸಮುದಾಯ ಎರಡೂ ಚಳವಳಿಗಳಾಗಿದ್ದವು ನಿಜ. ಇವು ರಾಜಕೀಯವನ್ನು ಮುಂದೊತ್ತಿದವು. ನವೋದಯ ಚಳವಳಿ ಸ್ವರಾಜ್ಯವನ್ನು ಮುಂದೊತ್ತಿತು. ಸ್ವರಾಜ್ಯಕ್ಕೆ ರಾಜಕೀಯ ಆಯಾಮಕ್ಕಿಂತ ಮಿಗಿಲಾಗಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಆಯಾಮವಿ‌ತ್ತು. ನವೋದಯ ಲೇಖಕರು, ತಮ್ಮ ಮಿತಿಗಳೊಳಗೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ನವೋದಯ ಚಳವಳಿ ಅಂತರಗಂಗೆಯಂತಿತ್ತು.

ವಸಾಹತುಶಾಹಿ ರಾಜಕೀಯ, ಯಂತ್ರನಾಗರಿಕ ಆರ್ಥಿಕತೆ ಹಾಗೂ ಯಂತ್ರನಾಗರಿಕ ಸಂಸ್ಕೃತಿಗಳನ್ನು ನವೋದಯ ಲೇಖಕರು, ತಮ್ಮ ಕೃತಿಗಳಲ್ಲಿ ಅಲ್ಲಲ್ಲಿ, ವಿರೋಧಿಸಿದರಾದರೂ ಅವರ ಮಾರ್ಗ ಸಾಹಿತ್ಯಕ ಅನುಸಂಧಾನವಾಗಿತ್ತು. ಇತ್ತ ಶೇಕ್ಸ್‌ಪಿಯರ್, ಅತ್ತ ಟಾಲ್‌ಸ್ಟಾಯ್, ಅತ್ತ ವರ್ಡ್ಸ್‌ವರ್ತ್, ಇತ್ತ ಕಾಳಿದಾಸ, ಇತ್ತ ವಚನಕಾರರು, ಅತ್ತ ವಿಜ್ಞಾನಿಗಳು ಆಂಗ್ಲಭಾಷೆ... ಹೀಗೆ ಹಲವು ಹತ್ತು ಸಂಗತಿಗಳನ್ನು ಹಲವು ಹತ್ತು ದಿಕ್ಕುಗಳಿಂದ ಸ್ವೀಕರಿಸಿ ಕನ್ನಡಕ್ಕೊಂದು ಭದ್ರ ಬುನಾದಿ ಹಾಕಿಕೊಟ್ಟರು ಅವರು.

ನವೋದಯದ ನವಿರಾದ ಚಳವಳಿ ಮಾರ್ಗಕ್ಕೊಂದು ಉದಾಹರಣೆ ಕೊಡಬಯಸುತ್ತೇನೆ. ನನಗೂ ಪರಿಚಿತವಿರುವ ಉದಾಹರಣೆಯಿದು. ನಾನಾಗ ಇನ್ನೂ ಹುಡುಗ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿ ಸೇರಿಕೊಂಡಿದ್ದೆ. ಅರವತ್ತರ ದಶಕದ ಮಧ್ಯ ಭಾಗವದು. ರಾಜರತ್ನಂ ಇನ್ನೂ ಇದ್ದರು.

ಸೆಂಟ್ರಲ್ ಕಾಲೇಜಿನ ಕನ್ನಡ ಸಂಘ ಇನ್ನೂ ಇತ್ತು. ರಾಜರತ್ನಂ, ಒಬ್ಬ ದೊಡ್ಡ ಲೇಖಕ ಮಾತ್ರವಾಗಿರದೆ ಒಬ್ಬ ಕಾರ್ಯಕರ್ತನೂ ಆಗಿದ್ದರು. ಚಳವಳಿಯೊಂದರ ಕಾರ್ಯಕರ್ತ ಹೇಗಿರಬೇಕು ಎಂಬುದಕ್ಕೆ ಪರಿಶುದ್ಧ ಮಾದರಿಯಂತಿದ್ದರು ರಾಜರತ್ನಂ.

ಎಲ್ಲಕ್ಕಿಂತ ಮಿಗಿಲಾಗಿ, ರಾಜರತ್ನಂ ಅವರದ್ದು ಸರಳ ಬದುಕು. ತನ್ನ ಗಳಿಕೆಯ ಬಹುಪಾಲು ಹಣವನ್ನು ಅವರು ಕನ್ನಡಕ್ಕಾಗಿ ಖರ್ಚು ಮಾಡುತ್ತಿದ್ದರು. ಜನಪ್ರಿಯ ಮಾತುಗಾರ ಆತ. ಹಾಗಾಗಿ ಸಭೆ ಸಮಾರಂಭಗಳಿಗೆ ತುಂಬ ಆಮಂತ್ರಣ ಬರುತ್ತಿತ್ತು. ಸಾಧ್ಯವಿದ್ದಷ್ಟೂ ಸಭೆಗಳಿಗೆ ಹೋಗಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯಗಳ ಬಗ್ಗೆ ಮಾತನಾಡುತ್ತಿದ್ದರು.

ಆದರೆ ಒಂದು ಷರತ್ತು ವಿಧಿಸುತ್ತಿದ್ದರು. ಸಭೆಗೆ ತಾನು ಬರಬೇಕೆಂದರೆ ಕರ್ನಾಟಕ ಸಂಘದ ನೂರು ರೂಪಾಯಿ ಮೌಲ್ಯದ ಪುಸ್ತಕಗಳನ್ನು ಸಂಘಟಕರು ಕೊಳ್ಳಬೇಕು ಹಾಗೂ ತಮ್ಮ ಸದಸ್ಯರಿಗೆ ಮಾರಬೇಕು ಎಂದು ಷರತ್ತು ವಿಧಿಸುತ್ತಿದ್ದರು. ಷರತ್ತಿನ ಬಲವಂತ ಹಾಕಿ ಅವರು ಮಾರುತ್ತಿದ್ದ ಪುಸ್ತಕಗಳಾವುವೂ ಅವರ ಪುಸ್ತಕಗಳಾಗಿರುತ್ತಿರಲಿಲ್ಲ.

ಇತರೆ ಯುವ ಬರಹಗಾರರ ಪುಸ್ತಕಗಳಾಗಿರುತ್ತಿದ್ದವು. ಪುಸ್ತಕಗಳನ್ನು ತಾನೇ, ತನ್ನ ಬಗಲ ಚೀಲದಲ್ಲಿ ಹೊತ್ತೊಯ್ಯುತ್ತಿದ್ದರು. ಬೆಂಗಳೂರು ನಗರವಾದರೆ ನಡೆದೇ ಹೋಗುತ್ತಿದ್ದರು. ಇದೊಂದು ಮಾದರಿ. ಇಂದು ಮರೆಯಾಗಿರುವ ಮಾದರಿ. ಕುವೆಂಪು, ಕಾರಂತ, ಗೊರೂರು, ಸಿದ್ದವನಹಳ್ಳಿ, ಮಧುರಚೆನ್ನರೂ ಸಹ ಚಳವಳಿಗಾರನ ಸಮರ್ಥ ಮಾದರಿಗಳೆಂದು ನಾವು ಮೊದಲು ಸ್ವೀಕರಿಸಬೇಕಿದೆ.

ನಾನು ಕಟ್ಟಿದ್ದು ಸಮುದಾಯ ಚಳವಳಿ. ಅದು ನಂತರದ ಚಳವಳಿ. ಬೀದಿಗಿಳಿಯುವುದಕ್ಕೆ, ರಂಪ ಮಾಡುವುದಕ್ಕೆ ಹೇಸುತ್ತಿರಲಿಲ್ಲ ಸಮುದಾಯ ಚಳವಳಿ. ದುರಂತವೆಂದರೆ, ಸಮುದಾಯದ ಮೇಲ್‌ಮೇಲಿನ ರಂಪಗಳು ಮಾತ್ರವೇ ಇವತ್ತು ಜನರ ಮನಸ್ಸಿನಲ್ಲಿ ಉಳಿದು ಬಂದಿವೆ. ಸಮುದಾಯವೂ ಸಹ ಸರಳ ಬದುಕಿನ ಚಳವಳಿಯಾಗಿತ್ತು.

ಒಬ್ಬ ವೃತ್ತಿಪರ ಚಳವಳಿಗಾರನಾಗಿ ತಿಂಗಳಿಗೆ ಮೂರುನೂರು ರೂಪಾಯಿಗಳ ಭತ್ಯ ಪಡೆದು, ಅಷ್ಟರಲ್ಲಿಯೇ ನಾನು ಜೀವನ ನಡೆಸುತ್ತಿದ್ದೆ, ಸಂತೋಷದಿಂದ ನಡೆಸುತ್ತಿದ್ದೆ. ಬಸ್ಸುಗಳಲ್ಲಿ ಪಯಣಿಸುತ್ತಿದ್ದೆ, ಸೈಕಲ್ಲು ತುಳಿಯುತ್ತಿದ್ದೆ. ಕರ್ನಾಟಕದ ಮೂಲೆ ಮೂಲೆ ತಲುಪಿ, ತಳಸಮುದಾಯಗಳನ್ನು ಹುಡುಕಿ, ಹಿಡಿದು, ಸ್ನೇಹಸಾಧಿಸಿ, ನಾಟಕವಾಡಿ, ಆಡಿಸಿ ಬರುತ್ತಿದ್ದೆ. ನನ್ನಂತೆಯೇ ಅನೇಕರು ಮಾಡುತ್ತಿದ್ದರು.

ಆದರೆ ಒಂದು ವ್ಯತ್ಯಾಸವಿದೆ, ಪ್ರಮುಖ ವ್ಯತ್ಯಾಸವದು. ಆಗ ಮಾರುಕಟ್ಟೆಯ ಅಬ್ಬರ ಶುರುವಾಗಿರಲಿಲ್ಲ. ಜಾಹೀರಾತು, ಸಂವಹನ ಮಾಧ್ಯಮ, ಇಂಟರ್‌ನೆಟ್ಟು ಯಾವುದೂ ಶುರುವಾಗಿರಲಿಲ್ಲ. ಶ್ರಮದ ನಡಿಗೆ, ಸರಳ ಬದುಕು, ನೇರ ಸಂವಹನ ಹೆಚ್ಚೂಕಡಿಮೆ ಅನಿವಾರ್ಯವಾಗಿತ್ತು. ಇವತ್ತಿನ ಮಹತ್ವಾಕಾಂಕ್ಷಿ ಲೇಖಕ ಹೇಗಿರಬೇಕು ಎಂದು ನನ್ನನ್ನು ನಾನೇ ಪ್ರಶ್ನೆ ಮಾಡಿಕೊಳ್ಳುವುದಿದೆ.

ಇಂದಿನ ಲೇಖಕ ಸಂತೆಯಲ್ಲಿ ನಿಂತ ಕಬೀರ. ಹಾಗಾಗಿ ಅವನಲ್ಲಿ ನಂಬಿಕೆಗಿಂತ ಮಿಗಿಲಾಗಿ ಅಪನಂಬಿಕೆ ಇರಬೇಕು, ಇತರರ ಬಗ್ಗೆ ಅಲ್ಲ ತನ್ನದೇ ಬಗ್ಗೆ. ಆತ/ ಆಕೆ ಸಂಶಯ ಪಿಶಾಚಿಯಾಗಿರಬೇಕು, ಇತರರ ಬಗ್ಗೆ ಅಲ್ಲ ತನ್ನದೇ ಬಗ್ಗೆ. ತನ್ನನ್ನು ತಾನು ಸೀಳಿಕೊಂಡು ಎರಡಾಗಿಸಿಕೊಂಡಿರಬೇಕು. ತಾನು ಬೇರೆ ತನ್ನ ಪಾತ್ರ ಬೇರೆ ಎಂಬಂತಿರಬೇಕು. ಪಾತ್ರವೇ ತಾನೆಂಬ ಭ್ರಮೆಗೆ ತಪ್ಪಿಯೂ ಬೀಳಬಾರದು. ರಿಸ್ಕುಗಳನ್ನು ತೆಗೆದುಕೊಳ್ಳಬೇಕು. ಅವು ತಮಾಷೆಯಾಗಿ, ಹಾಸ್ಯಾಸ್ಪದವಾಗಿ ಕಂಡರೂ ಸರಿಯೆ ಸಿದ್ಧಮಾದರಿಗಳನ್ನು ದೂರ ಇಟ್ಟಿರಬೇಕು.

ತನ್ನ ವೈಯಕ್ತಿಕ ಬದುಕಿನಲ್ಲಿ ಚಾರ್ಲಿ ಚಾಪ್ಲಿನ್ ಹೀಗೆ ಮಾಡುತ್ತಿದ್ದನಂತೆ. ತನ್ನನ್ನು ಚಾಪ್ಲಿನ್ ಎಂದೂ ತನ್ನ ಪಾತ್ರವನ್ನು ಚಾರ್ಲಿ ಎಂದೂ ಕರೆದುಕೊಳ್ಳುತ್ತಿದ್ದನಂತೆ. ಹಲವಾರು ವರ್ಷಗಳ ಕಾಲ, ಎಲ್ಲರೂ ಚಾರ್ಲಿಗಾಗಿ ಮುಗಿಬೀಳುತ್ತಿದ್ದಾಗ, ಚಾಪ್ಲಿನ್ ಅಜ್ಞಾತನಾಗಿ ಉಳಿದಿರುತ್ತಿದ್ದ.

ಮೇಕಪ್ ಕಳಚಿಕೊಂಡು, ತನ್ನದೇ ಸಿನಿಮಾ ನಡೆಯುತ್ತಿದ್ದ ಚಿತ್ರಮಂದಿರಗಳಿಗೆ ತೆರಳಿ, ಜನರ ನಡುವೆ ಸದ್ದಿರದೆ ಕುಳಿತು ತನ್ನನ್ನೇ ತಾನು ಅಳೆದುಕೊಳ್ಳುತ್ತಿದ್ದ. ಅಥವಾ ಲೇಖಕ ಹೆಮಿಂಗ್‌ವೇಯನ್ನು ತೆಗೆದುಕೊಳ್ಳಿ. ಆತ ಸ್ಪೇನಿನಲ್ಲಿ ಫ್ಯಾಸಿಸಂ ವಿರುದ್ಧ ಸೈನಿಕನಂತೆ ಹೋರಾಡಿದ್ದರೆ ಅದು ಕೇವಲ ಬದ್ಧತೆಯ ಕಾರಣಕ್ಕಾಗಿ ಅಲ್ಲ. ಅದಕ್ಕೆ ಸೃಜನಶೀಲತೆಯ ಅಗತ್ಯವೂ ಇತ್ತು. ಬದುಕನ್ನು ಅರಿಯಬೇಕಿತ್ತು ಅವನು.


ಆದರೆ, ರಿಸ್ಕಿನ ನಿಜವಾದ ಅರ್ಥ ತಿಳಿಯಬೇಕೆಂದರೆ ಹೆಮಿಂಗ್‌ವೇ ಸೂಕ್ತ ಉದಾಹರಣೆಯಲ್ಲ. ಆತ ಯಶಸ್ಸಿನ ಉದಾಹರಣೆ. ನೂರಾರು ಮಹತ್ವಾಕಾಂಕ್ಷಿ ಲೇಖಕರು ರಿಸ್ಕ್ ತೆಗೆದುಕೊಂಡು, ಯುದ್ಧ ಮಾಡಿ, ಅಂಡಲೆದು, ದೂರದೇಶದ ಕೊಳೆಗೇರಿಗಳಲ್ಲಿ ಬದುಕಿ, ಯಶಸ್ವಿಯಾಗದೆ ಸತ್ತರು. ಅವರು ರಿಸ್ಕಿನ ನಿಜವಾದ ಉದಾಹರಣೆಗಳು. ಅಪಯಶಸ್ಸಿಗೆ ಹೆದರುವವರು ದೊಡ್ಡ ಲೇಖಕನಾಗಲಾರರು. ನಾವು ಕನ್ನಡದ ಲೇಖಕರು ರಿಸ್ಕು ಸ್ವೀಕರಿಸಬಲ್ಲೆವಾದರೆ ನಮ್ಮಲ್ಲೊಬ್ಬ ಹೆಮಿಂಗ್‌ವೇ ಮೇಲೆದ್ದು ಬಂದಾನು.

ನಮ್ಮ ಇಂದಿನ ಬದುಕು ಇಪ್ಪತ್ತನೆಯ ಶತಮಾನದ ಯುರೋಪಿನ ಬದುಕಿಗಿಂತ, ಎಷ್ಟೋ ಪಾಲು ಸಂಕೀರ್ಣವೂ ಕೊಲೆಗಡುಕವೂ ಹಾದರಗಿತ್ತಿಯೂ ಆಗಿದೆ. ಇಂತಹ ಬದುಕನ್ನು ಚಿತ್ರಿಸಬಯಸುವ ನಾವು, ಇದನ್ನು ಸಾರಾಸಗಟಾಗಿ ತಿರಸ್ಕರಿಸಬೇಕು. ಆದರೆ ಶ್ರದ್ಧೆಯಿಂದ ಚಿತ್ರಿಸಬೇಕು. ಹಾಗೆ ಮಾಡದೆ ಕೇವಲ ಮೇಲ್‌ವರ್ಗದ ಕ್ಲಬ್ಬುಗಳಲ್ಲಿ ಕುಳಿತುಕೊಂಡು ಅಥವಾ ಹಸಿಹಸಿ ಸೀರಿಯಲ್ಲುಗಳನ್ನು ಮಾರಿಕೊಂಡು ಬದುಕಿದರೆ ಕನ್ನಡ ಸಾಹಿತ್ಯ ಮಹತ್ವಾಕಾಂಕ್ಷಿ ಹೇಗಾದೀತು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT