ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ತಂತ್ರಜ್ಞಾನ: ತಂತ್ರಜ್ಞರ ಚಿತ್ತ

Last Updated 12 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಮಾಹಿತಿ ತಂತ್ರಜ್ಞಾನ ಕ್ಷೇತ್ರ ಕಳೆದ ಎರಡು  ವರ್ಷಗಳಿಂದ ಸುಸ್ಥಿರ ಜಗತ್ತನ್ನು ನಿರ್ಮಿಸುವುದು ಹೇಗೆ ಎಂಬ ಬಗ್ಗೆ ಚಿಂತನೆ ನಡೆಸತೊಡಗಿದೆ. ದಕ್ಷಿಣ ಕೊರಿಯಾದಲ್ಲಿ ಸಾಂಗ್ಡೊ ಯೋಜನೆ ಇಂತಹ ಬದಲಾವಣೆಗೆ ಸಿಕ್ಕಿರುವ ಅಪರೂಪದ ಉದಾಹರಣೆ. ಕೊರಿಯಾ ಸರ್ಕಾರದ ಸಹಯೋಗದೊಂದಿಗೆ ಈ ಐ.ಟಿ ಕಂಪೆನಿ ಅತ್ಯಾಧುನಿಕ ರೀತಿಯಲ್ಲಿ ಸಮುದಾಯಗಳ ನಡುವೆ ಸಂಪರ್ಕ ಸಾಧಿಸುವ ವ್ಯವಸ್ಥೆಯೊಂದನ್ನು ರೂಪಿಸಿದೆ.

ಕುತೂಹಲದ ಸಂಗತಿಯೆಂದರೆ ಕೊರಿಯಾದಲ್ಲಿ ಅಭಿವೃದ್ಧಿಯಾಗಿರುವ ಈ ಅತ್ಯಾಧುನಿಕ ಉತ್ಪನ್ನ ಮತ್ತು ಸೇವೆಯ ಕಲ್ಪನೆ ಮೂಡಿದ್ದು ಬೆಂಗಳೂರಿನಲ್ಲಿ! 2009ರ ಚಳಿಗಾಲದಲ್ಲಿ ಸ್ಯಾನ್‌ಫ್ರಾನ್ಸಿಸ್ಕೊದ ಮೇಯರ್ ಬೆಂಗಳೂರಿಗೆ ಆಗಮಿಸಿದ್ದರು. ಸಿಸ್ಟರ್ ಸಿಟಿ ಒಪ್ಪಂದ ಮಾಡಿಕೊಳ್ಳುವುದರ ಉದ್ದೇಶ ಇಂತಹ ವ್ಯವಸ್ಥೆಯನ್ನು ರೂಪಿಸಿಕೊಳ್ಳುವುದಕ್ಕಾಗಿಯೇ ಆಗಿತ್ತು. ಇಂದು ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ಕೂಡ ಆರ್ಥಿಕ, ಸಾಮಾಜಿಕ ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಕಡಿಮೆ ಮಾಡುವಂತಹ ಯೋಜನೆಗಳು ಬರುತ್ತಿರುವುದು ನಿಶ್ಚಿತ.

ಬೆಂಗಳೂರಿನಲ್ಲಿ ಉದಿಸಿದ ಈ ಚಿಂತನೆ ಜಗತ್ತಿನ ಇತರ ನಗರಗಳನ್ನು ಸುಲಭವಾಗಿ ತಲುಪುತ್ತಿದೆ. ಆದರೆ ಭಾರತದ ನಗರಗಳಿಗೇಕೆ ಇನ್ನೂ ತಲುಪಿಲ್ಲ? ಐಟಿ ಕಂಪೆನಿಗಳು ಈ ನಿಟ್ಟಿನಲ್ಲಿ ಚಿಂತಿಸಿಲ್ಲವೋ ಅಥವಾ ಸರ್ಕಾರದ ಸ್ಪಂದನ ಉತ್ತೇಜನಕಾರಿಯಾಗಿಲ್ಲವೋ. ಅದೆಲ್ಲ ಹಿಂದಿನ ಮಾತಾಯಿತು ಎಂದು ತೆಪ್ಪಗೆ ಕುಳಿತುಕೊಳ್ಳುವ ಅಗತ್ಯ ಇಲ್ಲ. ಈಗಲೂ ಮನಸ್ಸು ಮಾಡಿದರೆ ಅದನ್ನು ಸಾಧಿಸುವುದು ಕಷ್ಟವೇನಲ್ಲ.

ಜಗತ್ತಿನಲ್ಲಿ ಉತ್ಪಾದನೆಯಾಗುವ ಶೇ 75ರಷ್ಟು ಇಂಧನವನ್ನು ಜಗತ್ತಿನ 20-25 ಬೃಹತ್ ನಗರಗಳು ಬಳಸುತ್ತಿವೆ. ಇಂತಹ ಇಂಧನದಲ್ಲೂ ಶೇ 40ರಷ್ಟು ಇಂಧನವನ್ನು ಬಳಸುತ್ತಿರುವುದು ಕಟ್ಟಡಗಳು. ಐಟಿ ಕಂಪೆನಿಗಳು ಇದೀಗ ಇಂತಹ ನಗರಗಳತ್ತ ವಿಶೇಷ ಗಮನ ಹರಿಸಿ ಇಂಧನ ದಕ್ಷತೆ ಕ್ರಮಗಳನ್ನು ಕೈಗೊಳ್ಳುವತ್ತ ಕಾರ್ಯ ನಿರ್ವಹಿಸಬೇಕಿದೆ.

ಕಟ್ಟಡಗಳನ್ನು ಬಳಸಿಕೊಳ್ಳುವಲ್ಲಿಯೇ ನಮ್ಮಲ್ಲಿ ಸಮಸ್ಯೆ ಇದೆ. ಒಂದು ಕಟ್ಟಡದಲ್ಲಿ ಸರಾಸರಿ ಶೇ 40ರಷ್ಟು ಭಾಗವನ್ನು ಮಾತ್ರ ಬಳಸಿಕೊಳ್ಳುವ ಪರಿಪಾಠ ಇದೆ. ಕಟ್ಡಡವೊಂದರಲ್ಲಿ ಇಂಧನ ನಿರ್ವಹಣೆ, ಕಟ್ಡಡವನ್ನು ಬಳಸಿಕೊಂಡ ರೀತಿ ಮತ್ತು ಸುರಕ್ಷತೆಗಳು ಮುಖ್ಯವಾಗುತ್ತವೆ. ಈ ಮೂರು ವಿಚಾರಗಳಲ್ಲಿಯೇ ತಂತ್ರಜ್ಞಾನವನ್ನು ಬಳಸುವ ಪ್ರಯತ್ನ ನಡೆದರೆ ಮುಂದಿನ ಹತ್ತು ವರ್ಷಗಳಲ್ಲಿ ಶೇ 30ರಷ್ಟು ದಕ್ಷತೆಯನ್ನು ಹೆಚ್ಚಿಸಿಕೊಳ್ಳಬಹುದು.
ಒಂದು ಉದಾಹರಣೆಯನ್ನೇ ಗಮನಿಸಿ. ಅಮ್‌ಸ್ಟೆರ್‌ಡಾಂನಲ್ಲಿ ನಗರದ ಹೊರವಲಯದಲ್ಲಿರುವ ಕಚೇರಿಯಲ್ಲೇ ಕುಳಿತು ನೌಕರರು ನಗರ ಮಧ್ಯಭಾಗದಲ್ಲಿರುವ ಕಚೇರಿಯಲ್ಲಿನ ಸಿಬ್ಬಂದಿಯೊಂದಿಗೆ ಸಮನ್ವಯದಿಂದ ಕೆಲಸ ಮಾಡುತ್ತಿದ್ದಾರೆ.

ಇದೇ ವ್ಯವಸ್ಥೆಯನ್ನು ರೂಪಿಸಿಕೊಂಡಾಗ ವಾಹನ ಚಾಲನಾ ಪರವಾನಗಿಯನ್ನು ಪಡೆಯಲು ಸಹ ವ್ಯಕ್ತಿ ಕಚೇರಿಗೆ ಅಲೆಯುವ ಅಗತ್ಯ ಇರುವುದಿಲ್ಲ.ಇಂತಹ ಸಣ್ಣಪುಟ್ಟ ಕೆಲಸಗಳಿಗೆಲ್ಲ ನಮ್ಮ ಸಮಯ ವ್ಯರ್ಥವಾಗುವುದು, ಇಂಧನ ಪೋಲಾಗುವುದು ತಪ್ಪಿದರೆ ಅದರಿಂದ ನಗರದಲ್ಲಿ ಅದೆಷ್ಟು ಮಾನವ ಶಕ್ತಿಯ ಬಳಕೆ, ಇಂಧನ ಉಳಿತಾಯ ಆಗುತ್ತದೆ ಎಂಬುದನ್ನು ಗಮನಿಸಿ. ಐಟಿ ತಂತ್ರಜ್ಞಾನ ನೆರವಿಗೆ ಬರಬೇಕಿರುವುದು ಈ ರೀತಿಯಲ್ಲೇ.

ಭಾರತದಲ್ಲಿ ಇಂದು ನಗರೀಕರಣದ ಪ್ರಮಾಣ ಶೇ 30ರಷ್ಟಿದೆ. 2030ರ ಹೊತ್ತಿಗೆ ಈ ಪ್ರಮಾಣ ಜಾಗತಿಕ ಸರಾಸರಿಯಾದ ಶೇ 50ಕ್ಕೆ ತಲುಪಲಿದೆ. ಅಂದರೆ, ಮುಂದಿನ 20 ವರ್ಷಗಳಲ್ಲಿ ದೇಶದಲ್ಲಿರುವ 3 ಸಾವಿರಕ್ಕೂ ಅಧಿಕ ನಗರ/ಪಟ್ಟಣಗಳಿಗೆ 30 ಕೋಟಿಗೂ ಅಧಿಕ ಜನರು ಆಗಮಿಸಲಿದ್ದಾರೆ.

 ನಗರಗಳು ಎದುರಿಸುವ ಸವಾಲುಗಳಿಗೆ ನಮ್ಮ ತಂತ್ರಜ್ಞಾನ ನೆರವಾಗದಿದ್ದರೆ ಭೂತಾಕಾರವಾಗಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಕಷ್ಟ.

ಜನ/ವಾಹನದಟ್ಟಣೆ, ಸುರಕ್ಷತೆ ಮತ್ತು ಭದ್ರತೆ ಸಮಸ್ಯೆ ಬಗೆಹರಿಸುವುದು ಪ್ರತಿಯೊಂದು ನಗರದಲ್ಲಿ ಆಗಬೇಕಾದ ಅಗತ್ಯದ ಕೆಲಸ. ಕೆಲವೊಮ್ಮೆ ನಗರಗಳ  ನಡುವಿನ ಸವಾಲುಗಳು ವಿಭಿನ್ನವಾಗಿ ಕಾಣಿಸುತ್ತವೆ. ನ್ಯೂಯಾರ್ಕ್ ನಗರದ ಜಿಡಿಪಿ 1.3 ಲಕ್ಷ ಕೋಟಿ ಡಾಲರ್‌ನಷ್ಟಿದೆ. ಅಂದರೆ ಭಾರತದ ಆರ್ಥಿಕತೆಯಷ್ಟು ದೊಡ್ಡ ಆರ್ಥಿಕತೆ ಈ ಒಂದು ನಗರದಲ್ಲೇ ಇದೆ.

ಹೀಗಿರುವಾಗ ನ್ಯೂಯಾರ್ಕ್ ನಗರ ಮುಂದಿನ ದಿನಗಳಲ್ಲಿ ಸಾರಿಗೆ, ಕಟ್ಟಡಗಳಿಗೆ ಇಂಧನ, ನೀರು ಪೂರೈಕೆಯಂತಹ ವಿಚಾರಗಳಲ್ಲಿ ಸಮರ್ಥ ನಿರ್ವಹಣೆ ಮಾಡುವುದು ಅಗತ್ಯವಾಗುತ್ತದೆ.

ಭಾರತದ ನಗರಗಳಲ್ಲಿ ಮುಂದಿನ 10-12 ವರ್ಷಗಳಲ್ಲಿ ಪರಿಸ್ಥಿತಿ ಏನಾದೀತು ಎಂಬುದನ್ನು ನಾವು ಈಗಲೇ ಊಹಿಸುವುದು ಸಾಧ್ಯವಿದೆ.ನಗರಗಳ ಯೋಜನೆಗಳು ನಗರದ ಸುತ್ತಮುತ್ತಲಿನ ಕೃಷಿ ಭೂಮಿಯನ್ನು ನಗರ ಪ್ರದೇಶವಾಗಿ ಪರಿವರ್ತನೆ ಮಾಡುವುದರತ್ತಲೇ ಗಮನ ಹರಿಸಿರುತ್ತವೆ.ಅದರ ಹೊರತಾಗಿ ನಾವು ತಂತ್ರಜ್ಞಾನವನ್ನು ಬಳಸಿಕೊಳ್ಳುವುದರತ್ತ ಗಮನ ಹರಿಸುತ್ತಿಲ್ಲ.

ಅತಿಯಾದ ನಗರೀಕರಣದ ಈ ಹಂತದಲ್ಲೇ ನಾವೆಲ್ಲ ಇಂಧನ ಮತ್ತು ಇತರ ನೈಸರ್ಗಿಕ ಸಂಪನ್ಮೂಲವನ್ನು ಹೇಗೆ ಸಮರ್ಥವಾಗಿ ಬಳಸಿಕೊಳ್ಳಬಹುದು ಎಂಬುದರತ್ತ ಗಮನ ಹರಿಸಬೇಕಿದೆ. ನಮಗೆ ಎದುರಾಗಿರುವ ಸವಾಲುಗಳಿಗೆ ಈ ದಶಕದಲ್ಲಿ ಹುಡುಕುವ ಪರಿಹಾರವೇ ಮುಂದಿನ ಪೀಳಿಗೆಯ ಜೀವನಕ್ಕೆ ತಳಪಾಯ ಎಂಬುದನ್ನು ನಾವಾರೂ ಮರೆಯಬಾರದು.

‘ಭಾರತದ ಆರ್ಥಿಕತೆಯ ಯಂತ್ರ’ ಎಂದೇ ಬಿಂಬಿತವಾಗಿರುವ ಐಟಿ ಕ್ಷೇತ್ರ ದೇಶದಲ್ಲಿ ಇದೀಗ ತನ್ನ ಮಹತ್ವದ ಪಾತ್ರವನ್ನು ನಿರ್ವಹಿಸುವ ಅಗತ್ಯ ಎದುರಾಗಿದೆ. ನಮ್ಮ ನಗರ ಆಡಳಿತಗಳ ಮನಸ್ಸನ್ನು ಪರಿವರ್ತಿಸಿ ವ್ಯವಹಾರದ ಮಿತಿಯೊಳಗೆಯೇ ಪೂರೈಕೆಯನ್ನು ಸುಸ್ಥಿರಗೊಳಿಸುವಂತಹ ವಾತಾವರಣವನ್ನು ಐಟಿ ಕಂಪೆನಿಗಳು ಮಾಡುವುದು ಸಾಧ್ಯವಿದೆಯೇ? ಇದಕ್ಕೆ ಕಾಲವಷ್ಟೇ ಉತ್ತರ ನೀಡೀತು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT