ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾದಿ ಬಿಟ್ಟ ಕಲಬುರ್ಗಿ ರಂಗಾಯಣ! ಮುಂದಾ?

Last Updated 9 ಮಾರ್ಚ್ 2016, 4:01 IST
ಅಕ್ಷರ ಗಾತ್ರ

ಮೈಸೂರು ರಂಗಾಯಣದ ಹಲವು ನಿರ್ದೇಶಕರನ್ನು ಹತ್ತಿರದಿಂದ ಬಲ್ಲೆ. ಅವರು ಹೊಸ ಕನಸು, ಹೊಸ ಪ್ರಯೋಗ, ಹೊಸ ನಾಟಕಗಳ ಬಗ್ಗೆಯೇ ಮಾತನಾಡುತ್ತಿದ್ದರು. ಅವರ ಪಾಲಿಗೆ ರಂಗಭೂಮಿ  ಗಾಳಿ, ನೀರು, ಆಹಾರ, ನಿದ್ರೆ ಎಲ್ಲವೂ ಆಗಿತ್ತು. ಅದು ಅವರು ಹೊಂದಿದ್ದ ಒಲವು ಮತ್ತು ಬದ್ಧತೆ.
ಇಷ್ಟೆಲ್ಲ ಏಕೆ ನೆನಪಾಯಿತು ಎಂದರೆ, ಕಲಬುರ್ಗಿ ರಂಗಾಯಣ ಈಗ ಸುದ್ದಿಯಲ್ಲಿದೆ.

ಇದು ತನ್ನ ಹೊಸ ಪ್ರಯೋಗದಿಂದ ಖಂಡಿತ ಅಲ್ಲ! ಇದರ ನಿರ್ದೇಶಕ ಪ್ರೊ.ಆರ್‌.ಕೆ.ಹುಡಗಿ ಅವರು ಇಲ್ಲಿನ ದಲಿತ ಕಲಾವಿದರಿಗೆ ಜಾತಿ ನಿಂದನೆ ಮಾಡಿದ್ದಾರೆ ಎನ್ನುವ ವಿಷಯ ಪೊಲೀಸ್‌ ಠಾಣೆ ಮೆಟ್ಟಿಲೇರುವ ಮೂಲಕ. ಈ ಪ್ರಕರಣದಲ್ಲಿ ಯಾರದು ಸರಿ, ಯಾರದು ತಪ್ಪು ಎನ್ನುವುದನ್ನು ಪೊಲೀಸರು ಹಾಗೂ ರಂಗ ಸಮಾಜದವರು ನಿರ್ಧಾರ ಮಾಡುತ್ತಾರೆ. ಆದರೆ ಈಗಷ್ಟೇ ಹೆಜ್ಜೆ ಇಡುತ್ತಿರುವ ಎರಡು ವರ್ಷದ ಕೂಸು ರಂಗಾಯಣ ಹಿಡಿದ ಹಾದಿ ಮಾತ್ರ ಈ ‘ಸಂಸ್ಥೆ’ ಬಗ್ಗೆ ದೊಡ್ಡ ಆಸೆ ಇಟ್ಟುಕೊಂಡಿರುವವರು ಆತಂಕಗೊಳ್ಳುವಂತೆ ಮಾಡಿದೆ.

ಏಕೆಂದರೆ ‘ಹಿಂದುಳಿದ ಪ್ರದೇಶ’ ಎನ್ನುವ ಹಣೆಪಟ್ಟಿ  ಹೊಂದಿರುವ ಹೈದರಾಬಾದ್‌ ಕರ್ನಾಟಕದ ಕೇಂದ್ರ ಕಲಬುರ್ಗಿಯಲ್ಲಿ ರಂಗಾಯಣ ಸ್ಥಾಪನೆಯಾಗಿದೆ. ಇದು ಬಿ.ವಿ.ಕಾರಂತರ ಕನಸು. ರಂಗಾಯಣ ಮೈಸೂರಿಗೆ ಸೀಮಿತವಾಗಬಾರದು. ಅದು ರಾಜ್ಯದ ಬೇರೆ ಬೇರೆ ಪ್ರದೇಶಗಳಲ್ಲೂ ಸ್ಥಾಪನೆ ಆಗಬೇಕು. ಸ್ವತಂತ್ರವಾಗಿರಬೇಕು. ಆ ನೆಲದ ಭಾಷೆ,  ಜಾನಪದ ಪರಂಪರೆ ಮತ್ತು ಸಂಸ್ಕೃತಿ ಸಾರವನ್ನು ಹೀರಿಕೊಂಡು ಸಮೃದ್ಧವಾಗಿ ಬೆಳೆಯಬೇಕು.

ಊರಿನಿಂದ ಊರಿಗೆ, ಕೇರಿಯಿಂದ ಕೇರಿಗೆ ತಿರುಗಾಡಬೇಕು. ಆಯಾ ಭಾಗದ ಸಂಸ್ಕೃತಿಯನ್ನು ರಂಗಭೂಮಿ ಮೂಲಕ ಹುಡುಕುತ್ತಾ, ಅದನ್ನು ಪ್ರದರ್ಶಿಸಿತ್ತಾ ಹೋಗಬೇಕು. ಬಹುಮುಖಗಳ ಬಹುಸಂಸ್ಕೃತಿ ಅನಾವರಣಗೊಳ್ಳಬೇಕು ಎನ್ನುವುದು  ಅವರ ಆಶಯವಾಗಿತ್ತು. ರಾಜ್ಯದಲ್ಲಿ ಹಳೆ ಮೈಸೂರು, ಕರಾವಳಿ, ಮಲೆನಾಡು, ಮುಂಬೈ ಕರ್ನಾಟಕ, ಹೈದರಾಬಾದ್‌ ಕರ್ನಾಟಕ–ಹೀಗೆ ವಿಶಿಷ್ಟ ಬಹುಮುಖಿ ಸಂಸ್ಕೃತಿ ಇದೆ.

ಮೈಸೂರು ಜನರಿಗೆ ಹೈದರಾಬಾದ್‌ ಕರ್ನಾಟಕದ ದೊಡ್ಡಾಟ, ಇಲ್ಲಿಯವರಿಗೆ ಮೈಸೂರಿನ ಬೀಸು ಕಂಸಾಳೆಯೂ ನಾಟಕ ದೊಂದಿಗೆ ಮಿಳಿತವಾಗಿ ತಿಳಿಯಬೇಕು. ಆದ್ದರಿಂದ ಇಂಥ ಸಂಸ್ಥೆಯ ನಿರ್ದೇಶಕರಾದವರು ನಾಯಕ, ಮಾರ್ಗದರ್ಶಕ, ಕೃಷಿಕನಂತೆ ಕೆಲಸ ಮಾಡಬೇಕು. ‘ಸ್ಥಾನ’ ಎನ್ನುವುದು ಅಲಂಕಾರ ಅಥವಾ ಅಧಿಕಾರವಲ್ಲ ಎನ್ನುವ ಎಚ್ಚರ ಇರಬೇಕು. ಸದಾ ಕ್ರಿಯಾಶೀಲರಾಗಿರಬೇಕು. ಆಲೋಚನೆಯನ್ನು ಯೋಜನೆಯನ್ನಾಗಿಸಿ ಕಾರ್ಯರೂಪಕ್ಕೆ ತರಬೇಕು. ಅದು ಸಾಕಾರಗೊಂಡ ಮೇಲೆ ಮತ್ತೊಂದು ಹೊಸ ಕನಸು, ಯೋಜನೆ, ಪ್ರಯೋಗದ ಹುಡುಕಾಟ...

‘ನಿರ್ದೇಶಕರದು ಜವಾಬ್ದಾರಿಯುತ ಸ್ಥಾನ. ಅವರ ಮೇಲೆ ಸಾಂಸ್ಕೃತಿಕ ಹೊಣೆಗಾರಿಕೆ ಇರುತ್ತದೆ. ಅಂಥ ಸ್ಥಾನದಲ್ಲಿ ಇರುವವರಿಗೆ ವಿನಯ, ಶ್ರದ್ಧೆ, ತಾಳ್ಮೆ, ಬದ್ಧತೆ, ವಿಶ್ವಾಸದಂತಹ ಗುಣಗಳು ಇರಬೇಕು. ಇಲ್ಲದೇ ಹೋದರೆ ಸಂಸ್ಥೆ ಹಾಳಾಗುತ್ತದೆ. ಸಂಸ್ಕೃತಿ ದೃಷ್ಟಿಯಿಂದ ದೊಡ್ಡ ನಷ್ಟವಾಗುತ್ತದೆ. ಆ ಸ್ಥಾನದಲ್ಲಿ ಇರುವವರಿಗೆ ಎಲ್ಲರನ್ನೂ ಆತುಕೊಳ್ಳವ ಸಹನೆ ಮತ್ತು ಆದರತೆ ಇರಬೇಕು’ ಎನ್ನುವುದು ಹಿರಿಯ ರಂಗ ನಿರ್ದೇಶಕರೊಬ್ಬರ ಮಾತು.

ಹೈದರಾಬಾದ್‌ ಕರ್ನಾಟಕದಲ್ಲಿ ನೂರಾರು ಪ್ರತಿಭಾವಂತ ಕಲಾವಿದರು, ತಂತ್ರಜ್ಞರು ಇದ್ದಾರೆ. ಅವರಿಗೆ ತಮ್ಮ ನೆಲದ ಸಂಸ್ಕೃತಿಯ ಬನಿಯನ್ನು ರಂಗಭೂಮಿ ಮೂಲಕ ಅಭಿವ್ಯಕ್ತಗೊಳಿಸಲು ರಂಗಾಯಣ ವೇದಿಕೆಯಾಗಬೇಕು. ಇದನ್ನು ಬಿಟ್ಟು ಹೊರಗಿನಿಂದ ತಂಡಗಳನ್ನು ಆಹ್ವಾನಿಸಿ ನಾಟಕೋತ್ಸವ ಏರ್ಪಡಿಸುವುದೇ ರಂಗಾಯಣದ ಕೆಲಸವಲ್ಲ. ಈ ಕೆಲಸವನ್ನು ರಂಗ ಸಂಘಟಕರು ಸುಲಭವಾಗಿ ಮಾಡುತ್ತಾರೆ.

ರಂಗಾಯಣ ಒಂದು ರೆಪರ್ಟರಿ. ಅಂದರೆ ಸಂಪೂರ್ಣವಾಗಿ ರಂಗಭೂಮಿಗೇ ಅರ್ಪಿಸಿಕೊಂಡಿರುವ ಸಂಸ್ಥೆ. ಇದು ಶ್ರೇಷ್ಠ ನಾಟಕ ತಂಡವನ್ನು ಕಟ್ಟುವ ಶಾಲೆಯೂ ಹೌದು. ಇದೊಂದು ವಿಸ್ತರವಾದ ಕ್ಯಾನ್ವಾಸ್‌. ಕಲಾವಿದರನ್ನು ಸದಾ ಕಲಿಕೆ, ಅಧ್ಯಯನ, ಸಂಶೋಧನೆ, ಪ್ರಯೋಗಗಳಲ್ಲಿ ತೊಡಗಿಕೊಳ್ಳುವಂತೆ ಮಾಡಬೇಕು. ಆ ಮೂಲಕ ಕಲಾವಿದರಲ್ಲಿ ವೃತ್ತಿಪರ ಮನೋಭಾವವನ್ನು ಬೆಳೆಸಬೇಕು. ಆಗ ಮಾತ್ರ ಹೊಸ ಪ್ರಯೋಗಗಳು ಸಾಧ್ಯವಾಗುತ್ತವೆ.

‘ಕಲಾವಿದರು ಸಾಂಸ್ಕೃತಿಕ ಕಾಣಿಕೆಗಳು. ಅವರ ಮೈ, ಮನಸ್ಸು ಹೊಸತನ, ಪ್ರಯೋಗಕ್ಕೆ ಸಿದ್ಧವಾಗಬೇಕು. ಅವರು ಸದಾ ಕಲಿಕೆಯಲ್ಲಿ ತೊಡಗಿಸಿಕೊಂಡಿರಬೇಕು. ನಿರ್ದೇಶಕರು ದಾರ್ಶನಿಕರಾಗಿರಬೇಕು. ಸಂಸ್ಥೆ ಬಗೆಗೆ ಅಕ್ಕರೆ ಹೊಂದಿರಬೇಕು. ಗಿಡವನ್ನು ನೆಟ್ಟು ಅದಕ್ಕೆ ನೀರು, ಗೊಬ್ಬರ ಹಾಕಿ ಪೋಷಿಸುವ ಕೃಷಿಕನ ಧ್ಯಾನಸ್ಥ ಮನಸ್ಥಿತಿ ಇರಬೇಕು’ ಎನ್ನುತ್ತಾರೆ ರಂಗತಜ್ಞರೊಬ್ಬರು.

ರಂಗಸಮಾಜವು ಕಲಾವಿದರ ಆಯ್ಕೆಯಲ್ಲಿ ಪ್ರಾದೇಶಿಕತೆಗೆ ಆದ್ಯತೆ ನೀಡುವುದು ಖಂಡಿತ ಸರಿ. ಆದರೆ ಸಂಸ್ಥೆಯನ್ನು ಕಟ್ಟುವ ನಿರ್ದೇಶಕರನ್ನು ‘ಪ್ರಾದೇಶಿಕ ಬೇಲಿ’ಯೊಳಗೇ ನೋಡುವುದು ಅಥವಾ ಹುಡುಕುವ ಕ್ರಮ ಸರಿಯಲ್ಲ. ಒಂದು ಸಂಸ್ಥೆಯನ್ನು ಮುನ್ನಡೆಸುವ, ರಂಗಭೂಮಿಯ ಆಳ ಅಗಲ, ಬಹು ಆಯಾಮ ಬಲ್ಲ, ಉತ್ಸಾಹಿ, ಆಡಳಿತಾತ್ಮಕ ಮತ್ತು ಕಾಯಕ ತತ್ವದಲ್ಲಿ ನಂಬಿಕೆ ಇರುವವರು ನಿರ್ದೇಶಕರಾಗಬೇಕು.

ಮೈಸೂರು ರಂಗಾಯಣ ಇಪ್ಪತ್ತೇಳು ವರ್ಷಗಳನ್ನು ಪೂರೈಸಿದೆ. ಬಿ.ವಿ.ಕಾರಂತ, ಸಿ.ಬಸವಲಿಂಗಯ್ಯ, ಪ್ರಸನ್ನ, ಚಿದಂಬರರಾವ್‌ ಜಂಬೆ, ಬಿ.ಜಯಶ್ರೀ, ಪ್ರೊ.ಲಿಂಗದೇವರು ಹಳೆಮನೆ, ಡಾ.ಬಿ.ವಿ.ರಾಜಾರಾಂ ಇವರೆಲ್ಲರೂ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈಗ ಜನಾರ್ದನ್‌ (ಜನ್ನಿ) ಇದ್ದಾರೆ. ಇಷ್ಟೂ ಮಂದಿಯೂ ಮೈಸೂರಿನವರಲ್ಲ. ಇಷ್ಟೇ ಏಕೆ, ದೆಹಲಿಯಲ್ಲಿರುವ ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ)ಯ ನಿರ್ದೇಶಕರೆಲ್ಲರೂ ಹೊರಗಿನವರೆ. ಈ ವಿಷಯದಲ್ಲಿ ಕಿರಿದಾಗಿ ಆಲೋಚಿಸುವುದು ಸಮ್ಮತವಲ್ಲ.

ಈಗಲಾದರೂ ರಂಗ ಸಮಾಜ ಜಾಗೃತವಾಗಬೇಕು. ಜಡ್ಡಿಗೆ (ರೋಗ) ಸೂಕ್ತ ಚಿಕಿತ್ಸೆ ನೀಡಬೇಕು. ಇಲ್ಲದೇ ಹೋದರೆ ಜಡ್ಡು ಉಲ್ಬಣಿಸಿ ಸಂಸ್ಥೆಯನ್ನು ನುಂಗಿ ಹಾಕುವ ಅಪಾಯವಿದೆ.

ಯಾವುದೇ ಸಂಸ್ಥೆಗೆ ವ್ಯಕ್ತಿ ಮುಖ್ಯವಲ್ಲ; ಮುಖ್ಯವಾಗಬಾರದು. ವ್ಯಕ್ತಿಗಳು ಬರುತ್ತಾರೆ, ಹೋಗುತ್ತಾರೆ. ಆದರೆ ಸಂಸ್ಥೆ ಇರುತ್ತದೆ. ಆದ್ದರಿಂದ ಸಂಸ್ಥೆ ದೊಡ್ಡದು. ರಂಗಾಯಣ ಸಂಸ್ಥೆ ಆರೋಗ್ಯಕರವಾಗಿ ಇದ್ದರೆ ಮುಂದಿನ ಐದಾರು ವರ್ಷಗಳಲ್ಲಿ ರಾಜ್ಯದ ಜನರು ಹೈದರಾಬಾದ್‌ ಕರ್ನಾಟಕದ ಸಾಂಸ್ಕೃತಿಕ ವೈವಿಧ್ಯತೆಯನ್ನು ನೋಡಬಹುದು, ಅನುಭವಿಸಬಹುದು. ಇಲ್ಲದೇ ಹೋದರೆ ಹೈದರಾಬಾದ್‌ ಕರ್ನಾಟಕ ಜನರ ನಿರೀಕ್ಷೆಗೆ ಮೋಸ ಮಾಡಿದಂತಾಗುತ್ತದೆ. ಇದರ ಹೊಣೆಯನ್ನು ರಂಗ ಸಮಾಜವೇ ಹೊರಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT