ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿವುಡ್ ನಾಯಿ ಕನ್ನಡದಲ್ಲಿ ಮಾತನಾಡಿದಾಗ!

Last Updated 16 ಜನವರಿ 2014, 19:30 IST
ಅಕ್ಷರ ಗಾತ್ರ

ಕನ್ನಡ ಚಿತ್ರರಂಗದಲ್ಲಿ ಒಂದೇ ರೀತಿಯ ಕತೆಗಳು ಹೇಗೆ ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಿವೆಯೋ ಅದೇ ರೀತಿ ‘ಡಬ್ಬಿಂಗ್ ಬೇಕೆ, ಬೇಡವೇ’ ಎನ್ನುವ ಭೂತ ಕೂಡ ಮರಳಿ ಮರಳಿ ಪ್ರತ್ಯಕ್ಷವಾಗುತ್ತಲೇ ಇದೆ. ಡಬ್ಬಿಂಗ್ ಚಿತ್ರಗಳಿಗೆ ಅವಕಾಶ ಕೊಡಬಾರದು ಎನ್ನುವ ವಾದ ವರ್ಷಗಳು ಉರುಳಿದಂತೆ ಕ್ಷೀಣವಾಗುತ್ತಾ, ಸಮರ್ಥನೆಯೇ ಕಷ್ಟಸಾಧ್ಯವಾಗುವಂತಹ ಪರಿಸ್ಥಿತಿ ತಲೆದೋರುತ್ತಿರುವಾಗ, ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಡಬ್ಬಿಂಗ್ ಪರವಾಗಿ ವರದಿ ಸಲ್ಲಿಸಿದೆ ಎನ್ನುವ ಗುಮ್ಮನನ್ನು ಛೂ ಬಿಡಲಾಗಿದೆ.

ಈ ರೀತಿಯ ತೀರ್ಪನ್ನು ಸಲ್ಲಿಸುವ ಮುನ್ನ ‘ಸಿಸಿಐ’ ಕನ್ನಡ ಚಿತ್ರರಂಗದ ಯಾವ ಅಧಿಕೃತ ಸಂಸ್ಥೆಯನ್ನು ಅಭಿಪ್ರಾಯಕ್ಕಾಗಿ ಸಂಪರ್ಕಿಸಿದೆ ಎನ್ನುವುದು ಸ್ವಷ್ಟವಿಲ್ಲ. ಯಾವುದೇ ಸಮಿತಿ ವರದಿ ಸಲ್ಲಿಸುವ ಮುಂಚೆ ಪ್ರಶ್ನೆಯ ಸಮಗ್ರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಾಗುತ್ತದೆ. ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಚಿತ್ರಗಳಿಗೆ ಅವಕಾಶ ನೀಡುತ್ತಿಲ್ಲ ಎನ್ನುವ ಆರೋಪ ಬಂದಾಗ, ಚಲನಚಿತ್ರ ವಾಣಿಜ್ಯಮಂಡಳಿಯ ವಾದವನ್ನು ಆಲಿಸಬೇಕಾಗುತ್ತದೆ.

ಚಲನಚಿತ್ರ ಅಕಾಡೆಮಿಯ ಅಭಿಪ್ರಾಯವನ್ನು ಪರಿಗಣಿಸಬೇಕಾಗುತ್ತದೆ. ಹಿರಿಯ ನಿರ್ದೇಶಕರು, ಕಲಾವಿದರು, ತಂತ್ರಜ್ಞರು, ಸಿನಿಮಾ ಇತಿಹಾಸಕಾರರು ಹೀಗೆ ಬಹುತೇಕರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನಕ್ಕೆ ಬರಬೇಕಾಗುತ್ತದೆ. ಆದರೆ ‘ಸಿಸಿಐ’ ಈ ಕೆಲಸಗಳನ್ನು ಮಾಡಿದಂತೆ ಕಾಣುತ್ತಿಲ್ಲ.

ಯಾರೋ ಯಾರದೋ ಹಿತಾಸಕ್ತಿಗಾಗಿ ನೀಡಿದ ದೂರನ್ನು ಕೈಗೆತ್ತಿಕೊಂಡಿರುವ ಭಾರತೀಯ ಸ್ಪರ್ಧಾತ್ಮಕ ಆಯೋಗದ ಅಸ್ತಿತ್ವವನ್ನೇ ನಾವು ಪ್ರಶ್ನಿಸಬೇಕಾಗಿದೆ ಎಂದು ಕೆಲವರು ಅಭಿಪ್ರಾಯ ಪಡುತ್ತಿರುವುದಕ್ಕೂ ಅರ್ಥವಿದೆ. ಸ್ಪರ್ಧಾತ್ಮಕ ಆಯೋಗ ಅದರದೇ ಆದ ನೀತಿ ನಿಯಮಾವಳಿಗಳ ಪ್ರಕಾರ ಭಾಷಾವಿವಾದದ ಸಂದರ್ಭದಲ್ಲಿ ತೀರ್ಮಾನ ಕೊಡಬಹುದೇ ಹೊರತು ಕಲೋದ್ಯಮದ ಚಟುವಟಿಕೆಗಳ ಬಗ್ಗೆಯೂ ವಿಚಾರಣೆ ನಡೆಸಬಹುದೇ ಎನ್ನುವುದು ಅಸ್ಪಷ್ಟ. ‘ಡಬ್ಬಿಂಗ್‌ನಿಂದ ಕನ್ನಡಭಾಷೆಗೆ, ಕನ್ನಡ ಚಿತ್ರರಂಗದ ಅಸ್ತಿತ್ವಕ್ಕೆ ಅಪಾಯವಿದೆ.

ಸಂಸ್ಕೃತಿ ನಾಶವಾಗುತ್ತದೆ, ಭಾಷೆಗೆ ಕಂಟಕ’ ಎನ್ನುವ ಮಾಮೂಲಿ ಬಾಯಿಮಾತಿನ ಮೇಲ್ನೋಟದ ಆತಂಕದಿಂದ ಕನ್ನಡ ಚಿತ್ರರಂಗದ ಒಂದು ದಿನದ ಬಂದ್‌ಗೂ ಕರೆನೀಡಿರುವುದೂ ಕೂಡ ಅರ್ಥಹೀನ. ಯಾರ ವಿರುದ್ಧ ಬಂದ್? ಇಲ್ಲಿ ಖಳನಾಯಕರು ಯಾರು? ಎದುರಾಳಿಯೇ ಇಲ್ಲದೆ ಯುದ್ಧ ಸಾರಿದಂತಿದೆ ಇಂದಿನ ಹೋರಾಟ. ಇಂತಹ ಪರಿಸ್ಥಿತಿ ಉದ್ಭವಿಸುವುದಕ್ಕೆ ಮೂಲಕಾರಣವನ್ನು ಹುಡುಕಿ, ಅದನ್ನು ಸರಿಪಡಿಸಿಕೊಳ್ಳುವತ್ತ ಉದ್ಯಮಿಗಳು ಮುಂದಾಗಬೇಕು. ಕನ್ನಡ ಚಿತ್ರರಂಗಕ್ಕೆ ನಾಯಕತ್ವದ ಕೊರತೆಕಾಡುತ್ತಿದೆ ಎಂದು ಹೇಳುವ ಬದಲು, ಚಲನಚಿತ್ರ ವಾಣಿಜ್ಯಮಂಡಳಿಯೇ ನಾಯಕತ್ವ ವಹಿಸಿಕೊಂಡು ಬಿಕ್ಕಟ್ಟು ಶಮನಕ್ಕೆ ಮುಂದಾಗಬಹುದಾಗಿದೆ.

ಡಬ್ಬಿಂಗ್‌ಗೆ ಅವಕಾಶವಿಲ್ಲದಿರುವುದರಿಂದ ಕನ್ನಡಿಗರು, ಮಹತ್ವದ ಚಿತ್ರಗಳನ್ನು ಅರ್ಥಮಾಡಿಕೊಂಡು ಅನುಭವಿಸುವುದಕ್ಕಾಗುವುದಿಲ್ಲ ಎನ್ನುವುದು ಒಂದು ಕೊರಗು. ಟೀವಿ ಚಾನೆಲ್‌ಗಳಲ್ಲಿ ಬರುವ ವಿಜ್ಞಾನ ಮಾಲಿಕೆ, ಚರಿತ್ರೆ ಮೊದಲಾದ ಜ್ಞಾನಧಾರೆಗಳು ನಮ್ಮ ಭಾಷೆಯಲ್ಲೇ ಮೂಡಿಬಂದರೆ ಇನ್ನೂ ಅನುಕೂಲ ಎನ್ನುವವರದು ಮತ್ತೊಂದು ಗುಂಪು.

ಬೇರೆ ಬೇರೆ ಸಂಸ್ಕೃತಿಗಳ ಪರಿಚಯ ನಮಗಾಗಬೇಕು, ಆದುದರಿಂದ ಡಬ್ಬಿಂಗ್ ಬರಬೇಕು ಅನ್ನುವುದು ಮತ್ತೆ ಕೆಲವರ ವಾದ. ನಮ್ಮ ಉಪಭಾಷೆಗಳ ಪರಿಚಯವೇ ನಮಗಾಗುತ್ತಿಲ್ಲ. ತುಳು, ಕೊಡವ, ಕೊಂಕಣಿಚಿತ್ರಗಳನ್ನೇ ನಾವು ವೀಕ್ಷಿಸಲು ಸಾಧ್ಯವಾಗುತ್ತಿಲ್ಲ, ನೆರೆ ರಾಜ್ಯಗಳ, ಪರದೇಶಗಳ ಚಿತ್ರಗಳನ್ನು ನೋಡಿ ಅರ್ಥಮಾಡಿಕೊಂಡು ಆನಂದಿಸಬೇಕೆಂದಿದ್ದೇವೆ!

ಹಾಲಿವುಡ್ ಚಿತ್ರಗಳಲ್ಲಿ ಹೊಸ ಹೊಸ ಪ್ರಯೋಗಗಳಾಗುತ್ತಿವೆ. ಅದರಲ್ಲಿ ನಾಯಿಗಳು, ಹಂದಿಗಳು, ಕುದುರೆ, ಕತ್ತೆ, ಗಿಳಿ, ಇರುವೆ ಇವುಗಳೆಲ್ಲಾ ಮಾತನಾಡುತ್ತವೆ. ಹೋರಾಡುತ್ತವೆ. ಸಾಹಸ ಕಾರ್ಯಗಳನ್ನು ಮಾಡುತ್ತವೆ. ಇಂತಹ ಚಿತ್ರಗಳೆಲ್ಲಾ ಡಬ್ ಆಗಿ ಕನ್ನಡಿಗರ ಮುಂದೆ ಬರಲು ಕಾತರಿಸುತ್ತಿವೆ. ಅದು ಬೆಳ್ಳಿತೆರೆಯ ಮೇಲಾದರೂ ಆಗಬಹುದು, ಕಿರುತೆರೆಯ ಮೇಲಾದರೂ ಆಗಬಹುದು. ಬಹುತೇಕ ಪ್ರಾಣಿಕತೆಗಳಿಗೆ ಭಾರತವೇ ಮೂಲ ಎಂಬುದು ನೆನಪಿನಲ್ಲಿರಲಿ.

‘ಪಂಚತಂತ್ರ’ದಲ್ಲಿ ಪ್ರಾಣಿಗಳು ಸಂವಾದ ಮಾಡುತ್ತವೆ. ಭಾರತದ ಬಹುತೇಕ ಜನಪದ ಚಲನಚಿತ್ರಗಳು ಪ್ರಾಣಿ, ಪಕ್ಷಿಗಳಿಗೆ ದೈವೀಕಸ್ಥಾನವನ್ನು ನೀಡಿವೆ. ಪ್ರಾಣಿಗಳು ಮಾನವನೊಂದಿಗೆ ಹೊಂದಿಕೊಂಡು ಹೋಗುವ ಸ್ವಭಾವದವಾಗಿರುತ್ತವೆ. ಇಂದು ವಿಶ್ವದಾದ್ಯಂತ ಪ್ರಚಲಿತದಲ್ಲಿರುವ ಬಹುತೇಕ ಜನಪದ ಕತೆಗಳು, ಪಕ್ಷಿ, ಪ್ರಾಣಿಜನ್ಯ ಕತೆಗಳಿಗೆ ಭಾರತವೇ ಮೂಲ. ಹೀಗಿರುವಾಗ ಹಾಲಿವುಡ್‌ನ ನಾಯಿ, ಇರುವೆ, ಕತ್ತೆಗಳೇಕೆ ಕನ್ನಡದಲ್ಲಿ ಮಾತನಾಡಬೇಕು? ನಮ್ಮ ನಾಯಿಯೇ ಮಾತನಾಡಬಹುದಲ್ಲ?

ಡಬ್ಬಿಂಗ್‌ನ ಸಾಧ್ಯಾಸಾಧ್ಯತೆಗಳನ್ನು ಹೇಳುವಾಗ ಕನ್ನಡಿಗರಿಗೆ ಅನ್ಯಾಯವಾಗುತ್ತದೆ ಎಂಬ ಮಾತು ಪ್ರಧಾನವಾಗಿ ವ್ಯಕ್ತವಾಗುತ್ತದೆ. ಕನ್ನಡ ಚಿತ್ರರಂಗ ಅವನತಿಯಾಗುತ್ತದೆ ಎಂದೂ ಹೇಳಲಾಗುತ್ತದೆ. ಚಿತ್ರರಂಗದ ಬಹುತೇಕರು ನಿರುದ್ಯೋಗಿಗಳಾಗುತ್ತಾರೆ ಎಂದು ಭಯಭೀತರಾಗುವವರ ಸಂಖ್ಯೆಯೂ ಹೆಚ್ಚಾಗಿದೆ. ನಾಯಕ ಪ್ರಧಾನವ್ಯವಸ್ಥೆಯಲ್ಲಿರುವ ಚಿತ್ರರಂಗ, ಕೋಟಿಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾ, ನಿರ್ಮಾಪಕರನ್ನು ಪಾತಾಳಕ್ಕೆ ತಳ್ಳುತ್ತಿರುವ ನಾಯಕನಟರ ಬಗ್ಗೆ ಮಾತನಾಡುತ್ತಿಲ್ಲ. ಕೋಟಿ ಸಂಭಾವನೆಯ ಕೆಲವೇ ಮಂದಿ ನಟರನ್ನು ರಕ್ಷಿಸುವುದಕ್ಕೋಸ್ಕರ ಡಬ್ಬಿಂಗನ್ನು ವಿರೋಧಿಸುತ್ತಿರುವುದೂ ತಪ್ಪಾಗುತ್ತದೆ.

ಚಲನಚಿತ್ರವೊಂದಕ್ಕೆ ಭಾಷಾಸೊಗಡೂ ಕೂಡ ಅವಿನಾಭಾವವಾಗಿರುತ್ತದೆ ಎನ್ನುವ ಅಂಶದತ್ತಲೂ ಗಮನಹರಿಸಬಹುದು. ದ್ರಾವಿಡ ಭಾಷೆಗಳಾದ ಕನ್ನಡ, ತಮಿಳು, ತೆಲುಗು ಭಾಷೆಗಳಿಗೂ, ಇಂಡೋ ಆರ್ಯನ್ ಭಾಷಾಗುಂಪಿನಲ್ಲಿ ಬರುವ ಹಿಂದಿಗೂ ಮಾತನಾಡುವ ಶೈಲಿಯಲ್ಲಿ ಬದಲಾವಣೆಗಳಾಗುತ್ತಿರುವುದನ್ನು ಭಾಷಾಶಾಸ್ತ್ರಜ್ಞರು ಗುರುತಿಸಿದ್ದಾರೆ. ಹೀಗಾಗಿ ಹಿಂದಿಚಿತ್ರವೊಂದನ್ನು ವೀಕ್ಷಿಸುವಾಗ ಅಲ್ಲಿನ ಪಾತ್ರಗಳು ಸ್ಥಳೀಯವಾದ ಆಡುಭಾಷೆಯ ಸೊಗಡನ್ನು ದನಿಸುವ ಮೂಲಕ ಭಾಷಾವೈವಿಧ್ಯವನ್ನು ಬಿಂಬಿಸುತ್ತವೆ. ಹಿಂದಿ ಚಿತ್ರದ ನಾಯಕ ಹಾಗೂ ನಾಯಕಿಯ ಭಾಷೆ ಒಂದು ಪ್ರಾಂತ್ಯದ್ದಾದರೆ, ಚಿತ್ರದ ಹಾಸ್ಯನಟ ಬಳಸುವ ಭಾಷೆ ಮತ್ತೊಂದು ಉಪಭಾಷೆಯದ್ದಾಗಿರಬಹುದು.

ಚಿತ್ರದೊಳಗಿನ ಮತ್ತೊಂದು ಪಾತ್ರವಾದ ಖಳನಟನ ಭಾಷೆ ಮತ್ತೊಂದು ಪ್ರದೇಶದ ಭಾಷೆಯನ್ನು ವ್ಯಕ್ತಪಡಿಸುತ್ತಾ ಒಟ್ಟಾರೆ ಆ ಚಿತ್ರಕ್ಕೆ ಭಾಷಾಬಂಧವೊಂದನ್ನು ಸೃಷ್ಟಿಸುತ್ತದೆ. ಕತೆ ಹೇಳುವಾಗ, ಕೇಳುವಾಗ ಇಂಥ ಒಂದು ಬಂಧ ಪ್ರೇಕ್ಷಕರನ್ನು ಕಟ್ಟಿಹಾಕುತ್ತದೆ. ಹೀಗಾಗಿಯೇ ಸುಮಾರು ಇನ್ನೂರು ಭಾಷೆಗಳಿವೆ ಎಂದು ಅಂದಾಜು ಮಾಡಲಾಗುವ ಭಾರತದಲ್ಲಿ ಆಯಾ ರಾಜ್ಯದಲ್ಲಿನ ಸಾಂಸ್ಕೃತಿಕವಲಯ ಅದರಲ್ಲೂ ಚಿತ್ರರಂಗ; ಭಾಷೆ ಮತ್ತು ಉಪಭಾಷೆಗಳನ್ನು ಒಟ್ಟೊಟ್ಟಿಗೆ ಪ್ರತಿನಿಧಿಸುತ್ತಾ ಅದನ್ನು ಬಳಸುಭಾಷೆಯಾಗಿ, ಜೀವಂತವಾಗಿಡಲು ಶ್ರಮಿಸುತ್ತಿವೆ.

ಕನ್ನಡ ಚಿತ್ರವೊಂದನ್ನೇ ಉದಾಹರಿಸುವುದಾದರೆ, ದರ್ಶನ್ ನಾಯಕನಾಗಿರುವ ಚಿತ್ರವೊಂದರಲ್ಲಿ ನಾಯಕನ ಭಾಷೆ ಮೈಸೂರುಭಾಗದ ಕನ್ನಡವಾಗಿರುತ್ತದೆ. ನಾಯಕಿಯೂ ಅದೇ ಕನ್ನಡದಲ್ಲಿ ಮಾತನಾಡುತ್ತಾಳೆ. ಖಳನಟ ಉತ್ತರಕರ್ನಾಟಕವನ್ನು ಪ್ರತಿನಿಧಿಸುವ ಹುಬ್ಬಳ್ಳಿ ಕನ್ನಡದಲ್ಲಿ ಮಾತನಾಡುತ್ತಾನೆ. ಹಾಸ್ಯಕಲಾವಿದರು ಕೆಲವೊಮ್ಮೆ ಮಂಡ್ಯ ಕನ್ನಡವನ್ನೂ, ಮತ್ತೆ ಕೆಲವು ಬಾರಿ ಮಂಗಳೂರು ಕನ್ನಡವನ್ನೋ ಮಾತನಾಡುತ್ತಾ ರಂಜಿಸುತ್ತಾರೆ.

ಇಷ್ಟೊಂದು ಭಾಷಾವೈವಿಧ್ಯವಿರುವ ದರ್ಶನ್ ನಾಯಕತ್ವದ ಕನ್ನಡ ಚಿತ್ರವನ್ನು ತೆಲುಗಿಗೋ, ತಮಿಳಿಗೋ ಡಬ್ ಮಾಡಿದರೆ, ಅದರಲ್ಲಿ ಮೂಲದಲ್ಲಿರುವ ಇಷ್ಟೊಂದು ಭಾಷಾವೈವಿಧ್ಯ ಬರಲು ಸಾಧ್ಯವೇ? ಎಲ್ಲಾ ಪಾತ್ರಗಳೂ ಒಂದೇ ತೆರನ ಭಾಷೆಯಲ್ಲಿ ಸಂಭಾಷಣೆ ಒಪ್ಪಿಸಿ, ಮುಂದೆ ಸಾಗುವಂತೆ ಭಾಸವಾಗುತ್ತದೆ. ಒಟ್ಟಾರೆ ಚಿತ್ರದಲ್ಲಿ ನಾವು ಕಾಣುವುದು ನಗರ ಕೇಂದ್ರೀಕೃತವಾದ ಒಂದೇ ಭಾಷೆ.

ಹೀಗಾಗಿ ಒಟ್ಟು ಚಿತ್ರದ ಕಥಾನಿರೂಪಣೆಯಲ್ಲಿ ಏರಿಳಿತಗಳೇ ಇಲ್ಲದಂತಾಗಿ ಇಡೀ ಚಿತ್ರ ಸತ್ವಹೀನವಾಗಿ ಕಾಣುತ್ತದೆ. ಮೂಲಚಿತ್ರದಲ್ಲಿ  ಪ್ರಾಪ್ತವಾದ ಸಂಸ್ಕೃತಿಯ ಲೇಪ ಡಬ್ಬಿಂಗ್‌ನಲ್ಲಿ ಮಾಯವಾಗುತ್ತದೆ. ತೆಲುಗು, ತಮಿಳು ಚಿತ್ರಗಳು ಕನ್ನಡಕ್ಕೆ ಡಬ್ ಆದಾಗ ಸಹ ಈ ರೀತಿಯ ಅಸಂಗತವನ್ನು ಕಾಣುತ್ತೇವೆ. ತಮಿಳು ಚಿತ್ರದ ನಾಯಕ ಸೂರ್ಯ ಚೆನ್ನೈತಮಿಳಿನಲ್ಲಿ ಮಾತನಾಡುತ್ತಾನೆ. ಹಾಸ್ಯನಟ ವಡಿವೇಲು ಮಧುರೆ ತಮಿಳಿನ ಮೂಲಕ ಪಂಚಿಂಗ್‌ಡೈಲಾಗ್ ಹೇಳುತ್ತಾನೆ.

ಉಳಿದ ಪಾತ್ರಗಳೂ ಕೂಡ ಬೇರೆಬೇರೆ ಪ್ರಾಂತ್ಯದ ಭಾಷಾವೈವಿಧ್ಯವನ್ನು ಸಾರುತ್ತಿರುತ್ತವೆ. ಇದೆಲ್ಲದರ ಒಟ್ಟು ಸಾರಸ್ವರೂಪ ಮೂಲಚಿತ್ರದಲ್ಲಿ ಘನೀಕೃತಗೊಂಡು ಕಲಾರಸಾಸ್ವಾದನೆಗೆ ಅವಕಾಶ ಕಲ್ಪಿಸಿರುತ್ತದೆ. ಕನ್ನಡಕ್ಕೆ ಈ ಚಿತ್ರ ಡಬ್ ಆದರೆ, ಈ ಹಿನ್ನೆಲೆ ಪರಿಗಣಿತವಾಗುವುದೇ ಇಲ್ಲ. ತಕ್ಷಣಕ್ಕೆ ಡಬ್‌ಮಾಡಿ ತೆರೆಗೆ ತಂದು, ದುಡ್ಡು ಬಾಚಿಕೊಳ್ಳುವ ತರಾತುರಿಯೇ ಹೆಚ್ಚಾಗಿರುವುದರಿಂದ ಏಕತಾನತೆಯ ಭಾಷಾ ಪ್ರಯೋಗಕ್ಕೆ ಅದು ಒಳಗಾಗಿರುತ್ತದೆ. ಇದರಿಂದಾಗಿ ಚಿತ್ರವೊಂದು ಕಥಾಕಾಲಕ್ಷೇಪವಾಗುವ ಅಪಾಯವೇ ಹೆಚ್ಚು.

ಹಿಂದಿಚಿತ್ರಗಳೇ ಹೆಚ್ಚಾಗಿ ಡಬ್ ಆಗಿ ಹೊರಬರುವುದರಿಂದ ಅಲ್ಲಿಯೂ ಇದೇ ರೀತಿಯ ಗೊಂದಲವಾಗುತ್ತದೆ. ಹಿಂದಿ ಚಿತ್ರದ ನಾಯಕನಟನ ಭಾಷೆ ಮುಂಬೈನಲ್ಲಿರುವ ಹಿಂದಿ, ಖಳನಟನ ಭಾಷೆ ಉಪಭಾಷೆಯಾದ ಭೋಜ್‌ಪುರಿಯಲ್ಲಿರಬಹುದು. ಉಳಿದ ಕೆಲವು ಪಾತ್ರಗಳು ಬ್ರಜ್, ಅವಧಿ ಉಪಭಾಷೆಗಳನ್ನು ಪ್ರಯೋಗಿಸಿದ್ದಿರಬಹುದು. ಕನ್ನಡದಲ್ಲಿ ಇದು ಅನುವಾದವಾದರೆ ಏಕತಾನತೆಯ ಗ್ರಾಂಥಿಕಭಾಷೆಯನ್ನಷ್ಟೇ ನಾವು ನೋಡಲು ಸಾಧ್ಯ. ಭಾಷಾನುಭವವನ್ನು ಪಡೆಯುವಲ್ಲಿ ಪ್ರೇಕ್ಷಕ ವಂಚಿತನಾಗುತ್ತಾನೆ.

ಈಗಾಗಲೇ ಹಾಲಿವುಡ್‌ ಚಿತ್ರಗಳು ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಡಬ್ ಅಗಿ ಬಿಡುಗಡೆಯಾಗುತ್ತಿವೆ. ಹಿಂದೀಚಿತ್ರಗಳೂ ಏಕಕಾಲದಲ್ಲಿ ಆಯಾಭಾಷೆಯ ಆವೃತ್ತಿಯಲ್ಲೇ ಬಿಡುಗಡೆಯಾಗುತ್ತಿವೆ. ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡ ನಂತರ ಹಾಲಿವುಡ್‌ನ ಬಹುತೇಕ ಚಿತ್ರಗಳು ಕಿರುತೆರೆಯಲ್ಲಿ ಪ್ರದರ್ಶನಗೊಳ್ಳುತ್ತಿವೆ. ಅವುಗಳ ವ್ಯಾಪಾರೀಕಣ್ಣು ಇರುವುದೇ ಈ ಮೂಲದಲ್ಲಿ.

ಈಗಾಗಲೇ ತಮಿಳಿನಲ್ಲಿ ಪ್ರದರ್ಶನವಾಗಿರುವ ಹಲವಾರು ಚಲನಚಿತ್ರಗಳನ್ನು ನೋಡಿದರೆ, ಡಬ್ಬಿಂಗ್‌ನ ಹಾಸ್ಯಾಸ್ಪದ ಅಂಶಗಳ ಪರಿಚಯವೂ ಆಗುತ್ತದೆ. ಹಾಲಿವುಡ್‌ನ ಕಪ್ಪು ನಾಯಕನಟನೊಬ್ಬ ರಜನೀಕಾಂತ್ ಬಗ್ಗೆ ಪ್ರಸ್ತಾಪಮಾಡುತ್ತಾನೆ! ತಮಿಳು ಹಾಡೊಂದರ ಶೀಟಿಹಾಕುತ್ತಾನೆ. ಎಷ್ಟೋ ಚಿತ್ರಗಳಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ‘ಅಮ್ಮ’ ಅವರ ಗುಣಗಾನವೂ ಇರುತ್ತದೆ.

ಚಿತ್ರಕ್ಕೆ ಪ್ರಾದೇಶಿಕತೆ ತರಬೇಕೆಂಬ ಹಟಕ್ಕೆ ಬಿದ್ದು ಇಂತಹ ಅನಾಹುತಕಾರಿ ಡಬ್ಬಿಂಗ್ ಕೆಲಸಗಳೂ ನಡೆಯುತ್ತವೆ. ಭಾಷೆಯ ಕೊಲೆ ಹೇಗೆ ಸಮರ್ಥನೀಯ? ಡಬ್ಬಿಂಗ್‌ನಿಂದಾಗಿ ಒಟ್ಟಾರೆ ಭಾರತೀಯ ಭಾಷೆಗಳು ಮತ್ತು ಉಪಭಾಷೆಗಳು ಅವಿಭಕ್ತ ಕುಟುಂಬದಿಂದ ದೂರವಾಗುವ ಸಂಭವನೀಯ ಸಾಧ್ಯತೆಗಳನ್ನು ಅವಲೋಕಿಸುವುದು ಸೂಕ್ತವೆನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT