ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಹೀಗಳೆಯುವಿಕೆಗೆ ಮತ್ತೆ ಇಳಿದ ಕಾಂಗ್ರೆಸ್!

Last Updated 13 ಜೂನ್ 2017, 19:30 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಗಮನವನ್ನು ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಲು ಮೂರು ವರ್ಷಗಳಿಂದ ಯತ್ನಿಸುತ್ತಿದ್ದರೂ, ಸಂಘಪರಿವಾರದ ಸಣ್ಣ ಗುಂಪುಗಳು ನಡೆಸುವ ಹುಚ್ಚಾಟದಿಂದ ಉಂಟಾಗುವ ವಿಚಾರದ ಕಡೆಯೇ ಚರ್ಚೆಯನ್ನು ಹೊರಳಿಸುವ ಒಂದೇ ಒಂದು ಅವಕಾಶವನ್ನು ಅವರ ವಿರೋಧಿಗಳು ಬಿಟ್ಟಿಲ್ಲ. ಹಾಗೆಯೇ, ನ್ಯಾಯಾಲಯದ ಆದೇಶ ಆಧರಿಸಿ ಸರ್ಕಾರ ಕೈಗೊಳ್ಳುವ ಮಾಮೂಲಿ ಕ್ರಮವನ್ನೂ  ಅವರು ವಿವಾದವನ್ನಾಗಿಸಿದ್ದಾರೆ.

ಪ್ರಾಣಿಹಿಂಸೆ ತಡೆ (ಜಾನುವಾರು ಮಾರುಕಟ್ಟೆ ನಿಯಂತ್ರಣ) ನಿಯಮ– 2017ಕ್ಕೆ ಸಂಬಂಧಿಸಿದಂತೆ ಈಚೆಗೆ ಉಂಟಾದ ವಿವಾದ ಇದಕ್ಕೊಂದು ನಿದರ್ಶನ. ಈ ನಿಯಮದ ಉದ್ದೇಶ ಪ್ರಾಣಿಗಳನ್ನು ಹಿಂಸೆಯಿಂದ ರಕ್ಷಿಸುವುದೇ ಹೊರತು ಕಸಾಯಿಖಾನೆಗಳಿಗೆ ದನಗಳ ಮಾರಾಟ ನಿಯಂತ್ರಿಸುವುದಲ್ಲ. ಜಾನುವಾರುಗಳ ಅಕ್ರಮ ಮಾರಾಟ ಹಾಗೂ  ಕಳ್ಳಸಾಗಣೆಯನ್ನು ತಡೆಯುವುದೂ ಈ ನಿಯಮಗಳ ಉದ್ದೇಶಗಳಲ್ಲೊಂದು. ಇದು ನಿರ್ದಿಷ್ಟವಾಗಿ ಅನ್ವಯವಾಗುವುದು ಅಧಿಸೂಚಿತ ಜಾನುವಾರು ಮಾರುಕಟ್ಟೆಗಳಿಗೆ ತಂದು ಮಾರಾಟ ಮಾಡುವ ಪ್ರಾಣಿಗಳಿಗೆ, ಕಾನೂನು ಜಾರಿ ಸಂಸ್ಥೆಗಳು ಜಪ್ತಿ ಮಾಡಿಕೊಂಡ ಜಾನುವಾರುಗಳಿಗೆ ಮಾತ್ರ.  ಇಷ್ಟನ್ನು ಹೊರತುಪಡಿಸಿದರೆ ಈ ನಿಯಮಗಳು ಬೇರೆ ಎಲ್ಲಿಯೂ ಅನ್ವಯ ಆಗುವುದಿಲ್ಲ.

ಇವೆಲ್ಲಕ್ಕಿಂತಲೂ ಮುಖ್ಯವಾಗಿ, ಗೌರಿ ಮೌಲೇಖಿ ಮತ್ತು ಕೇಂದ್ರ ಸರ್ಕಾರದ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ಆದೇಶದ ಅನುಸಾರ ಈ ನಿಯಮಗಳನ್ನು ರೂಪಿಸಲಾಗಿದೆ. ಜಾನುವಾರುಗಳನ್ನು ನೇಪಾಳಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ವಿಚಾರಕ್ಕೆ ಸಂಬಂಧಿಸಿದ್ದು ಈ ಪ್ರಕರಣ. ನೇಪಾಳದಲ್ಲಿ ನಡೆಯುವ ಗಢಿಮಾಯಿ ಹಬ್ಬದ ವೇಳೆ ಪ್ರಾಣಿವಧೆ ದೊಡ್ಡಮಟ್ಟದಲ್ಲಿ ಆಗುತ್ತದೆ. ಈ ಹಬ್ಬಕ್ಕೆ ಭಾರತದಿಂದ ಜಾನುವಾರುಗಳ ಕಳ್ಳಸಾಗಣೆ ನಡೆಯದಂತೆ ಸರ್ಕಾರ ನಿಯಮ ರೂಪಿಸಬೇಕು ಎಂದು ಸುಪ್ರೀಂ ಕೋರ್ಟ್‌ 2015ರ ಜುಲೈ 13ರಂದು ಆದೇಶಿಸಿತು. 

ಈ ಕಳ್ಳಸಾಗಣೆ ಬಗ್ಗೆ ವಿಸ್ತೃತ ಪರಿಶೀಲನೆ ನಡೆಸುವಂತೆ, ಅದನ್ನು ತಡೆಯಲು ಕೆಲವು ಕ್ರಮಗಳನ್ನು ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ ಸಶಸ್ತ್ರ ಸೀಮಾಬಲದ (ಎಸ್‌ಎಸ್‌ಬಿ) ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿತು. ಕೆಲವು ಶಿಫಾರಸುಗಳನ್ನು ಅನುಷ್ಠಾನಕ್ಕೆ ತಂದು, ಜಾನುವಾರು ಮಾರುಕಟ್ಟೆ ಹಾಗೂ ಜಾನುವಾರುಗಳನ್ನು ಜಪ್ತಿ ಮಾಡಿದ ಸಂದರ್ಭದಲ್ಲಿ ಅವುಗಳ ನಿರ್ವಹಣೆಗೆ ಸಂಬಂಧಿಸಿದ ನಿಯಮಗಳನ್ನು ಜಾರಿಗೆ ತರುವಂತೆ ಸರ್ಕಾರಕ್ಕೆ ಸೂಚಿಸಿತು. 2016ರ ಜುಲೈ 12ರಂದು ಅಂತಿಮ ಆದೇಶ ನೀಡಿದ ಸುಪ್ರೀಂ ಕೋರ್ಟ್‌, ಪ್ರಾಣಿಹಿಂಸೆ ತಡೆ ಕಾಯ್ದೆ – 1960ರ ಸೆಕ್ಷನ್ 38ರ ಅಡಿ ನಿಯಮಗಳನ್ನು ಮೂರು ತಿಂಗಳಲ್ಲಿ ರೂಪಿಸಬೇಕು ಎಂದು ತಾಕೀತು ಮಾಡಿತು.

ಇದಾದ ನಂತರ, ಕೇಂದ್ರ ಪ್ರಾಣಿ ಕ್ಷೇಮಾಭಿವೃದ್ಧಿ ಮಂಡಳಿಯು, ಸುಪ್ರೀಂ ಕೋರ್ಟ್‌ ನಿರ್ದೇಶನಗಳ ಅನುಸಾರ ಕರಡು ನಿಯಮಗಳನ್ನು ರೂಪಿಸಿತು. ಜನವರಿ 16ರಂದು ಈ ಅಧಿಸೂಚನೆಗೆ ಸಲಹೆಗಳನ್ನು, ಆಕ್ಷೇಪಣೆಗಳನ್ನು ಆಹ್ವಾನಿಸಲಾಯಿತು. ಇವುಗಳನ್ನು ಸಲ್ಲಿಸಲು 30 ದಿನಗಳ ಅವಕಾಶ ನೀಡಲಾಯಿತು. ಸರ್ಕಾರಕ್ಕೆ 13 ಮನವಿಗಳು ಬಂದವು. ಇವುಗಳನ್ನು ಪರಿಶೀಲಿಸಿ, ಕಳೆದ ತಿಂಗಳು ನಿಯಮಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಯಿತು.

ಈ ನಿಯಮಗಳಿಗೆ ಸಂಬಂಧಿಸಿದಂತೆ ದೇಶದ ವಿವಿಧೆಡೆ ಇಂದು ನಡೆಯುತ್ತಿರುವ ಕರ್ಕಶ ಚರ್ಚೆಯ ವೇಳೆ ಈ ಎಲ್ಲ ವಿಚಾರಗಳ ಬಗ್ಗೆ ಅಥವಾ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶಗಳ ಬಗ್ಗೆ ಏನಾದರೂ ಉಲ್ಲೇಖ ಬಂದಿದೆಯೇ? ಈ ನಿಯಮಗಳು ಗೋಮಾಂಸ ಭಕ್ಷಣೆಯನ್ನು ಹತ್ತಿಕ್ಕುವ ಉದ್ದೇಶ ಹೊಂದಿವೆ ಎಂದು ಹೇಳುವುದು ವಿಕೃತಿಯಲ್ಲವೇ?

ಪ್ರಕರಣದ ಹಿನ್ನೆಲೆ ಹೀಗಿದೆ: ನೇಪಾಳದ ಬರಿಯಾರ್‌ಪುರ ಎನ್ನುವ ಹಳ್ಳಿಯಲ್ಲಿ ಐದು ವರ್ಷಗಳಿಗೆ ಒಮ್ಮೆ ನಡೆಯುವ ಗಢಿಮಾಯಿ ಹಬ್ಬದ ವೇಳೆ ಪ್ರಾಣಿಗಳನ್ನು ಬಲಿ ಕೊಡಲಾಗುತ್ತದೆ. ಇದಕ್ಕೆ ಬಿಹಾರ, ಉತ್ತರಪ್ರದೇಶ, ಪಶ್ಚಿಮ ಬಂಗಾಳದಿಂದ ಲಕ್ಷಾಂತರ ಪ್ರಾಣಿಗಳನ್ನು ಕಳ್ಳಸಾಗಣೆ ಮೂಲಕ ಒಯ್ಯಲಾಗುತ್ತದೆ. ಇದನ್ನು ತಡೆಯಲು ಏನಾದರೂ ಮಾಡಬೇಕು ಎಂಬ ಅರ್ಜಿಯನ್ನು ಡೆಹ್ರಾಡೂನ್‌ನ ಗೌರಿ ಮೌಲೇಖಿ ಎನ್ನುವವರು ಸುಪ್ರೀಂ ಕೋರ್ಟ್‌ಗೆ 2014ರಲ್ಲಿ ಸಲ್ಲಿಸಿದರು. ಇದು ವಿಶ್ವದಲ್ಲಿ ನಡೆಯುವ ಅತಿದೊಡ್ಡ ಪ್ರಾಣಿ ಬಲಿ. ಇಲ್ಲಿ ಬೀಭತ್ಸ ರೀತಿಯಲ್ಲಿ ಅಂದಾಜು ಐದು ಲಕ್ಷ ಪ್ರಾಣಿಗಳನ್ನು ಎರಡು ದಿನಗಳ ಅವಧಿಯಲ್ಲಿ ಹತ್ಯೆ ಮಾಡಲಾಗುತ್ತದೆ. ಈ ಪ್ರಾಣಿಗಳಲ್ಲಿ ಕುರಿ, ಎಮ್ಮೆ–ಕೋಣ, ಹಂದಿಗಳು ಸೇರಿವೆ. ಇಲ್ಲಿ ಬಲಿಕೊಡುವ ಪ್ರಾಣಿಗಳ ಪೈಕಿ ಶೇಕಡ 70ರಷ್ಟನ್ನು ಭಾರತದಿಂದ ನೇಪಾಳಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತದೆ.

ಜೀವಂತ ಜಾನುವಾರು, ಎಮ್ಮೆ–ಕೋಣಗಳನ್ನು ಭಾರತದಿಂದ ನೇಪಾಳಕ್ಕೆ ಅಕ್ರಮವಾಗಿ ಒಯ್ಯಲು ಅವಕಾಶ ಕೊಡಬಾರದು ಎಂದು ಸುಪ್ರೀಂ ಕೋರ್ಟ್‌ ಈ ಅರ್ಜಿಯ ಮೊದಲ ವಿಚಾರಣೆ ವೇಳೆ, ಅಂದರೆ 2014ರ ಅಕ್ಟೋಬರ್‌ನಲ್ಲಿ ನಿರ್ದೇಶನ ನೀಡಿತು. ನಂತರ, ಸಂಬಂಧಪಟ್ಟ ರಾಜ್ಯ ಸರ್ಕಾರಗಳ ಜಂಟಿ ಸಭೆ ಕರೆದು, ಅರ್ಜಿದಾರರ ಜೊತೆ ಮಾತುಕತೆ ನಡೆಸಿ, ಸಮಗ್ರ ಕ್ರಿಯಾಯೋಜನೆಯೊಂದನ್ನು ರೂಪಿಸಿ, ಅದರ ವರದಿಯನ್ನು ತನಗೆ ಸಲ್ಲಿಸುವಂತೆ ಸೀಮಾ ಸುರಕ್ಷಾ ಬಲದ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿತು. ಕೋರ್ಟ್‌ ಸೂಚನೆಯಂತೆ, ಮಹಾನಿರ್ದೇಶಕರು ಯೋಜನೆಯನ್ನು ಸಿದ್ಧಪಡಿಸಿದರು.

ಹಬ್ಬ ನಡೆಯುವ ಸಮಯದಲ್ಲಿ ಭಾರತದಿಂದ ಲಕ್ಷಾಂತರ ಜನ ನೇಪಾಳದ ಗಡಿ ದಾಟಿ ಹೋಗುತ್ತಾರೆ. ಭಾರತ–ನೇಪಾಳ ಗಡಿ ಮುಕ್ತವಾಗಿರುವ ಕಾರಣ, ಗಡಿಯವರೆಗೆ ಜಾನುವಾರುಗಳ ಸಾಗಾಟಕ್ಕೆ ಒಳನಾಡಿನಲ್ಲೇ ಪರಿಣಾಮಕಾರಿ ಕ್ರಮ ಕೈಗೊಳ್ಳದಿದ್ದರೆ, ಪ್ರಾಣಿಗಳನ್ನು ಗಡಿಯಾಚೆಗೆ ಒಯ್ಯುವುದನ್ನು ತಡೆಯುವುದು ಕಷ್ಟ ಎಂದು ಮಹಾನಿರ್ದೇಶಕರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಹೇಳಿದರು.

ಪ್ರಾಣಿಗಳನ್ನು ಹೀಗೆ ಒಯ್ಯುವುದು 17 ಸ್ವರೂಪದ ಉಲ್ಲಂಘನೆಗಳಿಗೆ ಕಾರಣವಾಗುತ್ತದೆ. ಇದರಲ್ಲಿ ಸಂವಿಧಾನದ ಆಶಯಗಳ ಉಲ್ಲಂಘನೆ, ಸಂಸತ್ ರೂಪಿಸಿರುವ ಕಾಯ್ದೆಗಳ ಉಲ್ಲಂಘನೆ ಹಾಗೂ ಈ ಕಾಯ್ದೆಯ ಅಡಿ ರೂಪಿಸಿದ ನಿಯಮಗಳ ಉಲ್ಲಂಘನೆ, ಸುಪ್ರೀಂ ಕೋರ್ಟ್‌ನ ಆದೇಶಗಳ ಉಲ್ಲಂಘನೆ ಸೇರಿದೆ ಎಂದೂ ಅವರು ಹೇಳಿದರು.

ಪ್ರಾಣಿಗಳನ್ನು ಹಿಂಸೆಯಿಂದ ರಕ್ಷಿಸಲು ಕಾನೂನುಬದ್ಧವಾದ ವ್ಯವಸ್ಥೆ ಹಾಗೂ ಸಂಸ್ಥೆಗಳನ್ನು ರೂಪಿಸಬೇಕು, ‘ಯಾವುದೇ ಧಾರ್ಮಿಕ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ’ ಪ್ರಾಣಿ ವಧೆ ನಿಷೇಧಿಸಬೇಕು, ಪ್ರಾಣಿಗಳನ್ನು ಹಿಂಸೆಗೆ ಗುರಿಪಡಿಸುವುದನ್ನು ತಡೆಯಲು ಸಮಿತಿಗಳನ್ನು ರಚಿಸಬೇಕು ಎಂಬ ಶಿಫಾರಸುಗಳನ್ನು ಮಹಾನಿರ್ದೇಶಕರ ವರದಿ ಒಳಗೊಂಡಿತ್ತು.

ಇವುಗಳಿಗಿಂತಲೂ ಮುಖ್ಯವಾಗಿ, ‘ಆರೋಗ್ಯವಂತ ಜಾನುವಾರುಗಳು ಕಾನೂನುಬದ್ಧ ಉದ್ದೇಶಗಳಿಗಾಗಿ ಮಾತ್ರ ಮಾರಾಟವಾಗುವಂತೆ ನೋಡಿಕೊಳ್ಳಲು, ಜಾನುವಾರು ಮಾರುಕಟ್ಟೆ ನಿಯಂತ್ರಿಸಲು ನಿಯಮಗಳನ್ನು ರೂಪಿಸಬೇಕು’ ಎಂಬ ಅಂಶವೂ ವರದಿಯಲ್ಲಿ ಇತ್ತು. ಜಾನುವಾರುಗಳ ಸಾಗಾಟವು ಜಾರಿಯಲ್ಲಿರುವ ವಿವಿಧ ಕಾಯ್ದೆ ಹಾಗೂ ನಿಯಮಗಳಿಗೆ ಅನುಗುಣವಾಗಿಯೇ ನಡೆಯುವಂತಾಗಬೇಕು, ಜಪ್ತಿ ಮಾಡಿದ ಜಾನುವಾರುಗಳು ಕಳ್ಳಸಾಗಣೆದಾರರಿಗೆ ಮತ್ತೆ ಸಿಗದಂತೆ ನೋಡಿಕೊಳ್ಳಲು ನಿಯಮ ರೂಪಿಸಬೇಕು ಎಂದೂ ವರದಿ ಹೇಳಿತ್ತು.

ಈ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವಂತೆ, ಮಹಾನಿರ್ದೇಶಕರು ತಮ್ಮ ವರದಿಯಲ್ಲಿ ಹೇಳಿರುವುದಕ್ಕೆ ಅನುಸಾರವಾಗಿ ನಿಯಮಗಳನ್ನು ರೂಪಿಸುವಂತೆ ನ್ಯಾಯಾಲಯವು ಸರ್ಕಾರಕ್ಕೆ ನಿರ್ದೇಶನ ನೀಡಿತು. ಆದೇಶವನ್ನು ಅನುಷ್ಠಾನಕ್ಕೆ ತರಲು ಸರ್ಕಾರವು ಹೆಚ್ಚಿನ ಸಮಯ ತೆಗೆದುಕೊಂಡಿತು, ಕೊನೆಯಲ್ಲಿ ಈಗಿನ ನಿಯಮಗಳನ್ನು ರೂಪಿಸಿತು.

ಗೋಮಾಂಸ ಸೇವನೆ ಅಥವಾ ಗೋರಕ್ಷಣೆಗೆ ಸಂಬಂಧಿಸಿದ ಯಾವ ನಿರ್ದಿಷ್ಟ ವಿಚಾರ ಈ ನಿಯಮಗಳಲ್ಲಿ ಇದೆ? ಸುಪ್ರೀಂ ಕೋರ್ಟ್‌ನ ಆದೇಶಗಳನ್ನು ಅನುಷ್ಠಾನಕ್ಕೆ ತರುವುದು ಅಪರಾಧವೇ? ಈಗ ಉಂಟಾಗಿರುವುದು ಪೊಳ್ಳು–ಜಾತ್ಯತೀತ ತಂಡ ಸೃಷ್ಟಿಸಿದ ಖೊಟ್ಟಿ ವಿವಾದ. ಗೋವಿನ ಬಗ್ಗೆ ಹಿಂದೂಗಳು ಹೊಂದಿರುವ ಪೂಜ್ಯ ಭಾವನೆಯನ್ನು ಲೇವಡಿ ಮಾಡುವುದು  ಈ ತಂಡದ ಬಹಳ ಇಷ್ಟದ ಕೆಲಸ. ಇದನ್ನು ಈ ತಂಡ ಮತ್ತೆ ಮತ್ತೆ ಮಾಡುತ್ತಿರುತ್ತದೆ.

ಕೋರ್ಟ್‌ ನಿರ್ದೇಶನದ ಅನುಸಾರ ಜಾರಿಗೆ ತಂದ ನಿಯಮಗಳಿಗೆ ‘ವಿರೋಧ’ ವ್ಯಕ್ತಪಡಿಸಲು ಹಿಂದೂ–ದ್ವೇಷಿ ಕಮ್ಯುನಿಸ್ಟರು ಕೇರಳದಲ್ಲಿ ರಸ್ತೆಬದಿಯಲ್ಲೇ ಗೋಮಾಂಸದ ತಿಂಡಿ ಸಿದ್ಧಪಡಿಸಿ, ಸೇವಿಸಿದ್ದಾರೆ. ಬೇಸರದ ಸಂಗತಿಯೆಂದರೆ, ಕಾಂಗ್ರೆಸ್‌ ಕೂಡ ಈಚಿನ ದಿನಗಳಲ್ಲಿ ಇದೇ ಮಾರ್ಗ ಅನುಸರಿಸುತ್ತಿದೆ. ಹಿಂದೂಗಳನ್ನು ಗೇಲಿ ಮಾಡಲು ಯುವ ಕಾಂಗ್ರೆಸ್ ಕೂಡ ಈ ಸಂದರ್ಭವನ್ನು ಬಳಸಿಕೊಂಡಿತು. ಅವರು ತಿರುವನಂತಪುರದ ರಸ್ತೆ ಬದಿ ಗೋಮಾಂಸದ ಖಾದ್ಯ ಸಿದ್ಧಪಡಿಸಿ, ಸೇವಿಸಿದರು. ಇವರಿಗೆ ಜನರೇ ಪಾಠ ಕಲಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT