ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಸಾಚಾರವನ್ನು ಕರೆನ್ಸಿ ಸಮಸ್ಯೆಯಾಗಿ ಕಂಡಾಗ...

Last Updated 19 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

₹ 2,000 ಮುಖಬೆಲೆಯ ಹೊಸ ನೋಟುಗಳನ್ನು ಚಲಾವಣೆಗೆ ಬಿಟ್ಟ ಕೆಲವೇ ವಾರಗಳಲ್ಲಿ ಆ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಯಿತು. ಈ ಮುಖಬೆಲೆಯ ನಕಲಿ ನೋಟುಗಳು ಮೊದಲು ಪತ್ತೆಯಾಗಿದ್ದು ಗುಜರಾತ್‌ನಲ್ಲಿ, ನವೆಂಬರ್‌ ತಿಂಗಳಲ್ಲಿ. ಈಗ ದೇಶದ ಎಲ್ಲ ಕಡೆಗಳೆಲ್ಲೂ ಇಂಥ ನಕಲಿ ನೋಟುಗಳು ಪತ್ತೆಯಾಗುತ್ತಿರುವ ವರದಿಗಳು ಬರುತ್ತಿವೆ. ನೋಟು ರದ್ದತಿ ಕ್ರಮವು ನಕಲಿ ನೋಟುಗಳ ಹಾವಳಿ ತಡೆಯುತ್ತದೆ ಎಂದು ನಮಗೆ ಹೇಳಲಾಗಿತ್ತು. ಆದರೆ ಹಾಗೆ ಆಗಿಲ್ಲ.

ನಕಲಿ ನೋಟು ಹಾಗೂ ಹಿಂಸಾಚಾರದ ನಡುವೆ ಸಂಬಂಧ ಇದೆ ಎಂದು ಪ್ರಧಾನಿಯವರು ಹೇಳಿದ್ದರು. ಉಗ್ರವಾದ ಮತ್ತು ಭಯೋತ್ಪಾದನೆ ತಡೆಯುವ ಉದ್ದೇಶದಿಂದಲೂ ನೋಟು ರದ್ದತಿಯ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದರು. ಇಂಥದ್ದೊಂದು ಹೇಳಿಕೆಯನ್ನು ಪ್ರಧಾನಿಯವರು ನೀಡಬಾರದಿತ್ತು. ಏಕೆಂದರೆ, ಇದು ಭಾರತದಲ್ಲಿ ನಡೆಯುತ್ತಿರುವ ಸಶಸ್ತ್ರ ಹಿಂಸಾಚಾರಕ್ಕೆ ಕಾರಣಗಳ ತಿಳಿವಳಿಕೆಯ ಕೊರತೆಯನ್ನು ತೋರಿಸುತ್ತದೆ. ಕಾಶ್ಮೀರದಲ್ಲಿ ಸೇನೆಯ ವಿರುದ್ಧ ಹಿಂಸಾತ್ಮಕ ಕೃತ್ಯಗಳು ಕಡಿಮೆ ಪ್ರಮಾಣದಲ್ಲಿ ನಡೆಯುವ ಚಳಿಗಾಲದ ಅವಧಿಯಲ್ಲಿ ನೋಟು ರದ್ದತಿ ತೀರ್ಮಾನ ಕೈಗೊಳ್ಳಲಾಯಿತು. ಈಗ ಅಲ್ಲಿನ ಮಂಜು ಕರಗುತ್ತಿರುವಂತೆಯೇ, ಹಿಂಸಾಚಾರ ಮರುಕಳಿಸುತ್ತಿದೆ– ಎಂದಿನಂತೆ. ಹಿಂಸಾಚಾರದ ಕುರಿತು ಇಲ್ಲಿಯವರೆಗೆ ಹೇಳಿಕೊಂಡು ಬಂದಿದ್ದು ಸುಳ್ಳಾಗುತ್ತಿದೆ.

ಈಚಿನ ದಿನಗಳಲ್ಲಿ ಕಾಶ್ಮೀರದಲ್ಲಿ ಒಬ್ಬ ಮೇಜರ್‌ ಸೇರಿದಂತೆ ನಾಲ್ಕು ಯೋಧರ ಹತ್ಯೆಯಾಗಿದೆ. ಸಶಸ್ತ್ರ ಹಿಂಸಾಚಾರದ ಪ್ರಮಾಣ ನೋಟು ರದ್ದತಿಯಿಂದಾಗಿ ಕಡಿಮೆ ಆಗಿಲ್ಲ. ಹಿಂಸಾಚಾರ ಕಡಿಮೆ ಆಗುತ್ತದೆ ಎಂದು ಸೇನೆಗೆ ಹೇಳಲಾಗಿತ್ತು. ಆದರೆ ಈಗಿನ ಘಟನೆಗಳು ಸೇನೆಗೆ ಆಶ್ಚರ್ಯ ತರಿಸಿವೆ. ಸೇನೆಯ ಮುಖ್ಯಸ್ಥರು ಸ್ಥಳೀಯರ ವಿರುದ್ಧ ಕೋಪದಿಂದ ಒಂದು ಹೇಳಿಕೆ ನೀಡಿದ್ದಾರೆ. ‘ಸೇನೆಗೆ ತನ್ನ ಕೆಲಸ ಮಾಡಲು ಸ್ಥಳೀಯರು ಅಡ್ಡಿ ಮಾಡುತ್ತಿದ್ದಾರೆ. ಕೆಲವೊಮ್ಮೆ ಅವರು ಭಯೋತ್ಪಾದಕರಿಗೆ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತಿದ್ದಾರೆ’ ಎಂದು ದೂರಿದ್ದಾರೆ.

ಇದಕ್ಕಿಂತಲೂ ಗಂಭೀರವಾದ ವಿಚಾರವೊಂದಿದೆ. ‘ಪಾಕಿಸ್ತಾನ ಹಾಗೂ ಇಸ್ಲಾಮಿಕ್‌ ಸ್ಟೇಟ್‌ ಸಂಘಟನೆಯ ಧ್ವಜ ಪ್ರದರ್ಶಿಸುವ ಭಾರತೀಯರನ್ನು ರಾಷ್ಟ್ರದ್ರೋಹಿಗಳು ಎಂದು ಪರಿಗಣಿಸಲಾಗುವುದು. ಅವರನ್ನು ಹಿಡಿದು ಕಠಿಣ ಕ್ರಮಕ್ಕೆ ಗುರಿಪಡಿಸಲಾಗುವುದು’ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ. ತಪ್ಪು ಎಂದು ತಾವು ತಿಳಿದಿರುವ ವಿದ್ಯಮಾನವನ್ನು ಸೇನೆಯ ಮುಖ್ಯಸ್ಥರು ಅಥವಾ ಸೈನಿಕರು ಎಲ್ಲಾದರೂ ಗಮನಿಸಿದರೆ ಅವರು ಆ ಬಗ್ಗೆ ಜಮ್ಮು ಮತ್ತು ಕಾಶ್ಮೀರದ ಪೊಲೀಸರಿಗೆ ಮಾಹಿತಿ ನೀಡಬೇಕು. ಧ್ವಜ ಹಿಡಿದುಕೊಂಡವರ, ಘೋಷಣೆ ಕೂಗುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಸೇನೆಗೆ ಸಾಂವಿಧಾನಿಕ ಅಧಿಕಾರ ಇಲ್ಲ.

ಕಾಶ್ಮೀರದ ಜನ ಸೇನೆಯ ಬಗ್ಗೆ ಹೊಂದಿರುವ ದ್ವೇಷದ ಬಗ್ಗೆ ಸೇನಾ ಮುಖ್ಯಸ್ಥ ಜನರಲ್ ರಾವತ್ ಅವರು ಹೇಳಿದ್ದಾರೆ. ಭಾರತೀಯರಲ್ಲಿ ಬಹುತೇಕರಿಗೆ ಈ ದ್ವೇಷದ ಬಗ್ಗೆ ಗೊತ್ತಿಲ್ಲ. ‘ಭದ್ರತಾ ಸಿಬ್ಬಂದಿ ಕೈಗೊಳ್ಳುವ ಕ್ರಮಗಳಿಗೆ ಸ್ಥಳೀಯ ಜನ ಯಾವುದೋ ಕಾರಣಕ್ಕೆ ಬೆಂಬಲ ನೀಡುತ್ತಿಲ್ಲ ಎಂಬುದು ನಮ್ಮ ಗಮನಕ್ಕೆ ಬಂದಿದೆ’ ಎಂದು ಅವರು ಹೇಳಿದ್ದಾರೆ. ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಪಕ್ಷ, ರಾಜ್ಯ ಸರ್ಕಾರದ ಪಾಲುದಾರ ಕೂಡ ಹೌದು. ಆದಕಾರಣ ಕೇಂದ್ರ ಸರ್ಕಾರ  ಈ ಮಾತನ್ನು ಗಂಭೀರವಾಗಿ ಪರಿಗಣಿಸಬೇಕು. ಕಾಶ್ಮೀರದಲ್ಲಿ ಕಿಡಿಗೇಡಿತನದ ಕೃತ್ಯ ಎಸಗಲು ಗಡಿ ನಿಯಂತ್ರಣ ರೇಖೆಯ ಆಚೆಯಿಂದ ಜನರನ್ನು ಕಳುಹಿಸಲಾಗುತ್ತಿದೆ ಎಂದು ನಂಬುವುದು ಒಂದು ವಿಚಾರ. ರಾಜ್ಯದ ಇಡೀ ಜನಸಮೂಹ ತಮ್ಮ ವಿರುದ್ಧ ಇದೆ ಎಂಬುದನ್ನು ಒಪ್ಪಿಕೊಳ್ಳುವುದು ಇನ್ನೊಂದು ವಿಚಾರ.

ಸರಿಯೋ, ತಪ್ಪೋ. ಜನರಲ್ ರಾವತ್ ಅವರು ಒಪ್ಪಿಕೊಳ್ಳುತ್ತಿರುವುದು ಇದನ್ನೇ. ‘ಜನರಿಗೆ ತೊಂದರೆ ಆಗದಂತೆ ಕಾರ್ಯಾಚರಣೆ ನಡೆಸುವುದು ನಮ್ಮ ಗುರಿ. ಆದರೆ ಸ್ಥಳೀಯರು ನಮಗೆ ಕಾರ್ಯಾಚರಣೆ ನಡೆಸಲೂ ಅಡ್ಡಿ ಮಾಡುತ್ತಿದ್ದಾರೆ. ಕೆಲವೊಮ್ಮೆ ಅವರು ಭಯೋತ್ಪಾದಕರಿಗೆ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತಿದ್ದಾರೆ. ಈ ಕಾರಣಗಳಿಂದಾಗಿ ಭದ್ರತಾ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ’ ಎಂದು ರಾವತ್ ಹೇಳಿಕೆ ನೀಡಿದ್ದಾರೆ.

ಈ ಹೇಳಿಕೆ ಮುಂದಿಟ್ಟುಕೊಂಡು ಬಿಜೆಪಿ ಮತ್ತು ಕಾಂಗ್ರೆಸ್ ಈಗ ಕಚ್ಚಾಟದಲ್ಲಿ ತೊಡಗಿವೆ. ಆದರೆ, ಮೂವತ್ತು ವರ್ಷಗಳಿಂದ ನಾವು ನೋಡಿಕೊಂಡು ಬಂದಿರುವಂತೆ ಈ ವಿಚಾರದಲ್ಲಿ ಎರಡೂ ಪಕ್ಷಗಳ ನಡುವೆ ಅಂತಹ ವ್ಯತ್ಯಾಸವೇನೂ ಇಲ್ಲ. ಕಾಶ್ಮೀರದಲ್ಲಿ ಈಚೆಗೆ ನಡೆದ ಹಿಂಸಾತ್ಮಕ ಘಟನೆಗಳು ಹಾಗೂ ಮೊದಲಿನ ಘಟನೆಗಳ ವಿಚಾರದಲ್ಲಿ ದೆಹಲಿ ಮತ್ತು ಭಾರತದ ಇತರ ಪ್ರದೇಶಗಳ ಜನರ ದೃಷ್ಟಿಕೋನದಲ್ಲಿ ಬದಲಾವಣೆ ಕಂಡುಬಂದಿಲ್ಲ. ಭಯೋತ್ಪಾದನಾ ಕೃತ್ಯದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದ ಕಾಶ್ಮೀರದ ವಿದ್ಯಾರ್ಥಿಯೊಬ್ಬ ಕಳೆದ ವಾರ ದೋಷಮುಕ್ತನಾದ. ದೆಹಲಿಯಲ್ಲಿ ಬಾಂಬ್‌ ಸ್ಫೋಟಗೊಂಡ ದಿನ ಆತ ಶ್ರೀನಗರದ ಕಾಲೇಜೊಂದರಲ್ಲಿ ಇದ್ದ. ಆತ ಅಂದು ಕಾಲೇಜಿನಲ್ಲಿ ಇದ್ದ ಎಂಬುದಕ್ಕೆ ಸಾಕ್ಷಿಯಾಗಿ ಕಾಲೇಜಿನ ಹಾಜರಾತಿ ಪುಸ್ತಕ ಇತ್ತು. ಹಾಗಾಗಿ ಆತನ ವಿರುದ್ಧ ಆರೋಪ ಹೊರಿಸಬಾರದಿತ್ತು. ಆದರೆ, ತಾನು ಕಾಶ್ಮೀರಿ ಆಗಿರುವ ಕಾರಣಕ್ಕೇ ತನ್ನನ್ನು ಹರಕೆಯ ಕುರಿಯನ್ನಾಗಿಸಲಾಯಿತು ಎಂಬುದು ಆತನ ನಂಬಿಕೆ. ಇವೆಲ್ಲ ನಡೆದಿದ್ದು 2005ರಲ್ಲಿ. ಆಗ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಇತ್ತು. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಲ್ಲ.

ಭಾರತವು ಜನರ ಮೇಲೆ ರಾಷ್ಟ್ರೀಯತೆಯನ್ನು ಹೇರಿದಂತೆಲ್ಲ ಕಾಶ್ಮೀರದ ಜನ ದೂರವಾಗುತ್ತಾರೆ. ಕಾಶ್ಮೀರ ಕಣಿವೆಯಲ್ಲಿನ ಹಿಂಸಾಚಾರವನ್ನು ನೋಟು ರದ್ದತಿಯ ಮೂಲಕ ತಡೆಯಲು ಆಗದು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಇಲ್ಲಿ ಇನ್ನೂ ಆಳವಾದ ವಿಚಾರಗಳಿವೆ. ಆದರೆ ದುರದೃಷ್ಟದ ಸಂಗತಿಯೆಂದರೆ ಸೇನೆಯ ಹೊಸ ಮುಖ್ಯಸ್ಥರು ಅವನ್ನೆಲ್ಲ ಅರ್ಥಮಾಡಿಕೊಳ್ಳುವಂತೆ ಕಾಣುತ್ತಿಲ್ಲ.

‘ಯುವಕರನ್ನು ಕೊಲ್ಲುವುದು ನಮ್ಮ ಉದ್ದೇಶ ಅಲ್ಲ. ಅವರನ್ನು ಮುಖ್ಯವಾಹಿನಿಗೆ ತರುವುದೇ ನಮ್ಮ ಗುರಿ. ಆದರೆ ಹೀಗೇ ಇರುವುದು ಅವರ ಇರಾದೆಯಾಗಿದ್ದರೆ, ನಾವು ಅವರ ವಿರುದ್ಧ ಇನ್ನೂ ಕಠಿಣ ಕ್ರಮ ಪ್ರಯೋಗಿಸುತ್ತೇವೆ’ ಎಂಬ ಮಾತನ್ನು ಸೇನಾ ಮುಖ್ಯಸ್ಥರು ತಮ್ಮದೇ ಪ್ರಜೆಗಳ ವಿರುದ್ಧ ಆಡಿದ್ದಾರೆ.

ಹೊಸದಾಗಿ ಯಾವ ಕಠಿಣ ಕ್ರಮವನ್ನು ಈಗ ಕಾಶ್ಮೀರಿಗಳ ವಿರುದ್ಧ ಪ್ರಯೋಗಿಸಬಹುದು? ಗುಂಪು ಚದುರಿಸಲು ಅಲ್ಲಿ ಪೆಲೆಟ್‌ ಬಂದೂಕು ಬಳಸಿಯಾಗಿದೆ. ಆಲೋಚನೆಯನ್ನೇ ಮಾಡದೆ ಅವರ ಮೇಲೆ ಆರೋಪ ಹೊರಿಸಲಾಗುತ್ತಿದೆ, ಅಲ್ಲಿನ ಇಡೀ ಜನಸಮುದಾಯವನ್ನು ಅಪರಾಧಿಗಳು ಎಂಬಂತೆ ಕಾಣಲಾಗುತ್ತಿದೆ.

ನೋಟು ರದ್ದತಿಯಿಂದಾಗಿ ಪ್ರಯೋಜನ ಆಗಿದೆ ಎಂದು ನಾವು ಏನು ಬೇಕಿದ್ದರೂ ಹೇಳಬಹುದು. ಆದರೆ, ಉಗ್ರವಾದವನ್ನು ತಡೆಯುವ ವಿಚಾರದಲ್ಲಿ ಅದು ಸೋಲುತ್ತಿದೆ. ಇದನ್ನು ನಾವು ಒಪ್ಪಿಕೊಳ್ಳಬೇಕು. ಹೊಸ ಪರಿಹಾರ ಮಾರ್ಗಗಳನ್ನು ಹುಡುಕಬೇಕು. ಇದನ್ನು ಕೇವಲ ಕರೆನ್ಸಿ ಸಮಸ್ಯೆಯಾಗಿ ಕಾಣಬಾರದು. ಈ ಸಮಸ್ಯೆಗೆ ಬಾಹ್ಯ ಆಯಾಮಗಳು ಇರುವಂತೆಯೇ, ಆಂತರಿಕ ಆಯಾಮಗಳೂ ಇವೆ.
(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT