ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಸೆಯಿಲ್ಲದ ಯುದ್ಧದಲ್ಲಿ ತಂತ್ರಜ್ಞಾನದ್ದೇ ಮೇಲುಗೈ

Last Updated 18 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಎರಡು ರಾಷ್ಟ್ರಗಳ ನಡುವೆ ಪ್ರಮುಖ ಯುದ್ಧವೊಂದು 15 ವರ್ಷಗಳ ಹಿಂದೆ ನಡೆಯಿತು. ಅತ್ಯಾಧುನಿಕ ಸೇನೆಯನ್ನು ಹೊಂದಿದ್ದ ಜಾರ್ಜ್‌ ಡಬ್ಲ್ಯೂ. ಬುಷ್ ಅವರು ಸದ್ದಾಂ ಹುಸೇನ್ ಅವರನ್ನು ಸೋಲಿಸಿದರು (ಇಲ್ಲಿ ನಾನು ಉಲ್ಲೇಖಿಸುತ್ತಿರುವುದು ಯುದ್ಧದ ಆರಂಭಿಕ ಹಂತದಲ್ಲಿ ಇರಾಕ್‌ ಮೇಲೆ ನಡೆದ ಆಕ್ರಮಣದ ಬಗ್ಗೆಯೇ ಹೊರತು, ಅಮೆರಿಕದ ಸೇನೆ ಅಲ್ಲಿ ನೆಲೆ ನಿಂತ ನಂತರದ ಸಂದರ್ಭದ ಬಗ್ಗೆ ಅಲ್ಲ). ಇರಾಕ್‌ ಸೇನೆಯು ಹಲವು ವರ್ಷಗಳಿಂದ ಆಧುನಿಕ ಶಸ್ತ್ರಾಸ್ತ್ರಗಳನ್ನು ಪಡೆದುಕೊಂಡಿರಲಿಲ್ಲ. ಇರಾಕ್‌ ಬಳಿ ಇದ್ದ ಹಳೆಯ ಕಾಲದ ಯುದ್ಧ ಟ್ಯಾಂಕ್‌ಗಳು, ಯುದ್ಧ ವಿಮಾನಗಳು ಅಮೆರಿಕದ ದೈತ್ಯ ಶಕ್ತಿಯ ಎದುರು ನಿಲ್ಲುವಂಥವಾಗಿರಲಿಲ್ಲ. ಯುದ್ಧದ ಸಂದರ್ಭದಲ್ಲಿ ಎರಡೂ ಕಡೆ ಇದ್ದ ಸೈನಿಕರ ಸಂಖ್ಯೆ ಸರಿಸುಮಾರು ಒಂದೇ ಆಗಿತ್ತಾದರೂ (ಎರಡೂ ಕಡೆ ತಲಾ ಅಂದಾಜು 3.50 ಲಕ್ಷ ಸೈನಿಕರಿದ್ದರು), ಅಮೆರಿಕದ ಸೈನಿಕರ ಸಾವಿಗಿಂತ ಹತ್ತು ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಇರಾಕ್‌ನ ಸೈನಿಕರು ಮಡಿದರು. ಏಕೆಂದರೆ, ಅಮೆರಿಕ ಹೊಂದಿದ್ದ ಶಸ್ತ್ರಾಸ್ತ್ರಗಳು ಉತ್ತಮವಾಗಿದ್ದವು.

ರಾಷ್ಟ್ರಗಳು ಮಿಲಿಟರಿಗಾಗಿ ಖರ್ಚು ಮಾಡುವ ದೊಡ್ಡ ಮೊತ್ತವು ಸಾಮಾನ್ಯವಾಗಿ ಯುದ್ಧ ಸಾಮಗ್ರಿಗಳ (ಅಂದರೆ ಟ್ಯಾಂಕ್‌ಗಳು, ಯುದ್ಧನೌಕೆಗಳು, ವಿಮಾನಗಳು) ಖರೀದಿಗೆ ಬಳಕೆಯಾಗುತ್ತದೆ. ಭಾರತದ ಈ ವರ್ಷದ ರಕ್ಷಣಾ ಬಜೆಟ್‌ನಲ್ಲಿ ₹ 1 ಲಕ್ಷ ಕೋಟಿಗಿಂತ ಹೆಚ್ಚಿನ ಮೊತ್ತ ಇಂತಹ ಸಾಮಗ್ರಿಗಳ ಖರೀದಿಗೆ ಮೀಸಲಾಗಿದೆ. ಗಣರಾಜ್ಯೋತ್ಸವದ ದಿನ ನಡೆಯುವ ಪಥಸಂಚಲನದಲ್ಲಿ ಬಳಕೆಯಾಗುವುದನ್ನು ಹೊರತು‍ಪಡಿಸಿದರೆ ಇಂತಹ ಸಾಮಗ್ರಿಗಳು ಬೇರೆ ಸಂದರ್ಭಗಳಲ್ಲಿ ಬಳಕೆಯಾಗುವುದಿಲ್ಲ ಎಂಬುದು ಮಿಲಿಟರಿ ‍ಪರಿಣತರಿಗೆ ಬಹುತೇಕ ಮನವರಿಕೆಯಾಗಿದೆ. ವಿಶ್ವದ ಎರಡು ಪ್ರಮುಖ ರಾಷ್ಟ್ರಗಳ ನಡುವೆ ಮುಂದಿನ ದಿನಗಳಲ್ಲಿ ನಡೆಯಲಿರುವ ಆಧುನಿಕ ಯುದ್ಧವು 2003ರಲ್ಲಿ ಇರಾಕ್‌ನಲ್ಲಿ ನಡೆದ ಯುದ್ಧಕ್ಕಿಂತಲೂ ಭಿನ್ನವಾಗಿ ಇರಲಿದೆ. 1757ರಲ್ಲಿ ನಡೆದ ಪ್ಲಾಸಿ ಕದನ ಹಾಗೂ 2003ರ ಇರಾಕ್‌ ಯುದ್ಧದ ನಡುವೆ ಎಷ್ಟು ವ್ಯತ್ಯಾಸ ಇತ್ತೋ, ಅಷ್ಟೇ ವ್ಯತ್ಯಾಸ 2003ರ ಯುದ್ಧ ಹಾಗೂ ಮುಂದಿನ ಆಧುನಿಕ ಯುದ್ಧದ ನಡುವೆ ಇರಲಿದೆ. ಇದನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ನಾವು ಯುದ್ಧ ಅಂದರೆ ನಿಜಕ್ಕೂ ಏನು ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕು. ಇನ್ನೊಂದು ರಾಷ್ಟ್ರವನ್ನು ಬಲಪ್ರಯೋಗದ ಮೂಲಕ ತನಗೆ ಬೇಕಾದಂತೆ ಬಗ್ಗಿಸಬಹುದು ಎಂದು ಒಂದು ರಾಷ್ಟ್ರಕ್ಕೆ ಮನವರಿಕೆ ಆದಾಗ ಆ ರಾಷ್ಟ್ರ, ‘ಇನ್ನೊಂದು’ ರಾಷ್ಟ್ರದ ವಿರುದ್ಧ ಯುದ್ಧ ಸಾರುತ್ತದೆ.

ಆದರೆ, ಇನ್ನೊಂದು ರಾಷ್ಟ್ರವು ತನಗೆ ಬೇಕಾದ ರೀತಿಯಲ್ಲಿ ವರ್ತಿಸುವಂತೆ ಮಾಡಲು ಹಿಂಸೆಯ ಪ್ರಯೋಗ ಇಲ್ಲದೆಯೂ ಸಾಧ್ಯವಿದೆ. 2016ರಲ್ಲಿ ನಡೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ನಡೆಸಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ಹೇಳಿವೆ. ಹಿಲರಿ ಕ್ಲಿಂಟನ್ ಸೋಲಬೇಕು, ಡೊನಾಲ್ಡ್ ಟ್ರಂಪ್ ಗೆಲ್ಲಬೇಕು ಎಂದು ವ್ಲಾದಿಮಿರ್ ಪುಟಿನ್ ಬಯಸಿದ್ದರು. ರಷ್ಯನ್ನರು ನಡೆಸಿದ ಹಸ್ತಕ್ಷೇಪದಲ್ಲಿ ಟ್ರಂಪ್‌ ಅವರೂ ಕೈಜೋಡಿಸಿದ್ದರು ಎಂಬ ಆರೋಪ ಕೂಡ ಇದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ, ಪುಟಿನ್ ಮತ್ತು ಅವರ ಗೂಢಚರರು ಅಮೆರಿಕದ ಚುನಾವಣೆಯ ಮೇಲೆ ಪ್ರಭಾವ ಬೀರಿದ್ದರು ಎಂಬುದರಲ್ಲಿ ಅನುಮಾನಗಳು ಉಳಿದಿಲ್ಲ – ಬಹುಶಃ ಅವರು ನಿರ್ಣಾಯಕ ರೀತಿಯಲ್ಲಿ ಪ್ರಭಾವ ಬೀರಿದ್ದರು.

ಟ್ರಂಪ್‌ ನೇತೃತ್ವದ ಸರ್ಕಾರದ ನ್ಯಾಯಾಂಗ ಇಲಾಖೆಯು ಫೆಬ್ರುವರಿ 16ರಂದು ರಷ್ಯಾದ 13 ಜನರ ಮೇಲೆ ದೋಷಾರೋಪ ಹೊರಿಸಿದೆ. ಈ ಹದಿಮೂರು ಜನರಲ್ಲಿ ಬಹುತೇಕರು ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿರುವ ‘ಅಂತರ್ಜಾಲ ಸಂಶೋಧನಾ ಸಂಸ್ಥೆ’ಗೆ ಸೇರಿದವರು. ಈ ಹದಿಮೂರು ಜನ ಸೇರಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಖಾತೆಗಳನ್ನು ತೆರೆದರು. ಈ ಖಾತೆಗಳು ಅಮೆರಿಕದಿಂದಲೇ ಕಾರ್ಯಾಚರಿಸುತ್ತಿವೆ ಎಂಬಂತೆ ತೋರಿಸಿದರು, ಆದರೆ ವಾಸ್ತವದಲ್ಲಿ ಅವು ರಷ್ಯಾದಿಂದ ಕೆಲಸ ಮಾಡುತ್ತಿದ್ದವು. ಈ ಕೆಲಸಕ್ಕಾಗಿ ಪುಟಿನ್ ಅವರು ₹ 2 ಕೋಟಿಗಿಂತ ಕಡಿಮೆ ಹಣ ಖರ್ಚು ಮಾಡಿದರು. ಈ ಖಾತೆಗಳು ಅಧ್ಯಕ್ಷೀಯ ಚುನಾವಣೆಯು ಟ್ರಂಪ್‌ ಪರ ವಾಲುವಂತೆ ಮಾಡುವಲ್ಲಿ ನೆರವಾದವು ಎಂಬುದು ಅಮೆರಿಕನ್ನರ ನಂಬಿಕೆ. ಟ್ರಂಪ್‌ ಜಯ ಸಾಧಿಸುವುದು ರಷ್ಯಾಕ್ಕೆ ಏಕೆ ಬೇಕಿತ್ತು? ಏಕೆಂದರೆ, ಹಿಲರಿ ಜಯ ಗಳಿಸಿದ್ದರೆ ಅವರು, ವಿಶ್ವದಲ್ಲಿ ರಷ್ಯಾದ ಪ್ರಭಾವಕ್ಕೆ ಕಡಿವಾಣ ಹಾಕಲು ದಿಬ್ಬಂಧನ ಸೇರಿದಂತೆ ಇತರ ಕ್ರಮಗಳ ಮೊರೆ ಹೋಗುತ್ತಿದ್ದರು. ಆದರೆ, ಅಮೆರಿಕದ ವಿರುದ್ಧ ಯುದ್ಧ ಸಾರದೆಯೇ ಪುಟಿನ್ ಅವರು ತಾವು ಬಯಸಿದ್ದನ್ನು ಸಾಧಿಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರು ಯುದ್ಧದ ಬಗ್ಗೆ ಆಡಿದ ಮಾತುಗಳ ಕಾರಣದಿಂದಾಗಿ ನಾನು ಈ ಎಲ್ಲ ಸಂಗತಿಗಳನ್ನು ಬರೆದೆ. ಆರ್‌ಎಸ್‌ಎಸ್‌ ತನ್ನದೊಂದು ಪಡೆಯನ್ನು ಮೂರು ದಿನಗಳಲ್ಲಿ ಸಂಘಟಿಸಿ, ಗಡಿಯ ಬಳಿ ಕಳುಹಿಸುವ ಸಾಮರ್ಥ್ಯ ಹೊಂದಿದೆ ಎಂದು ಭಾಗವತ್ ಹೇಳಿದ್ದಾರೆ. ಅವರ ಪ್ರಕಾರ, ಭಾರತೀಯ ಸೇನೆಗೆ ಇದೇ ಕೆಲಸ ಮಾಡಲು ಆರು ತಿಂಗಳು ಬೇಕಾಗಬಹುದು. ಭಾಗವತ್ ಅವರ ಮಾತುಗಳು ಸೇನೆಯ ವಿರೋಧಿ ಹೇಳಿಕೆ ಎಂಬಂತೆ ಟೀಕಿಸಲಾಗುತ್ತಿದೆ. ಆದರೆ ನಾನು ಆ ಟೀಕೆಗಳ ಬಗ್ಗೆ ಮಾತನಾಡುವುದಿಲ್ಲ. ನನ್ನ ಕಳಕಳಿ ಇಷ್ಟು: ತಮ್ಮ ಪಡೆಯು ಗಡಿಯ ಬಳಿ ಏನು ಮಾಡಬಲ್ಲದೆಂದು ಭಾಗವತ್ ಅಂದುಕೊಂಡಿದ್ದಾರೆ? ಬಹುಶಃ 1962ರ ಯುದ್ಧದ ಕೆಲವು ಸಾಕ್ಷ್ಯಚಿತ್ರಗಳನ್ನು ನೋಡಿ ಅವರು, ಕೈಯಲ್ಲಿ ರೈಫಲ್‌ ಹಿಡಿದ ಚೀನೀ ಸೈನಿಕರು ಪರ್ವತಗಳ ಮೇಲಿಂದ ಪ್ರವಾಹದ ರೀತಿಯಲ್ಲಿ ಬರುತ್ತಾರೆ ಎಂದು ಭಾವಿಸಿದ್ದಾರಾ? ಹಾಗೆ ಭಾವಿಸಿದ್ದರೆ, ಭಾರತಾಂಬೆಯನ್ನು ಕಾಯಲು ಸಂಘದ ಬೆಂಬಲಿಗರು ಏನು ಮಾಡಬಲ್ಲರು ಎಂದು ಭಾಗವತ್ ಯೋಚಿಸಿದ್ದಾರೆ?

ಆರ್‌ಎಸ್‌ಎಸ್‌ ಶಾಖೆಗಳಲ್ಲಿ ಸ್ವಯಂಸೇವಕರಿಂದ ಕೆಲವು ಶಾರೀರಿಕ ಚಟುವಟಿಕೆಗಳನ್ನು ಮಾಡಿಸಲಾಗುತ್ತದೆ, ದೇಶಭಕ್ತಿ ಗೀತೆಗಳನ್ನು ಅವರಿಂದ ಹಾಡಿಸಲಾಗುತ್ತದೆ. ಇಂದಿನ ಸಂದರ್ಭದಲ್ಲಿ ನಡೆಯುವ ಯುದ್ಧದ ಕಥೆ ಬದಿಗಿರಲಿ, 100 ವರ್ಷಗಳ ಹಿಂದೆ ನಡೆಯುತ್ತಿದ್ದ ಯುದ್ಧದ ಸಂದರ್ಭದಲ್ಲೂ ಇಂತಹ ತರಬೇತಿಗಳು ಪ್ರಯೋಜನಕ್ಕೆ ಬರುತ್ತಿರಲಿಲ್ಲ. ಪದಾತಿ ದಳದ ಸೈನಿಕರಿಗೆ ನೀಡುವ ಆಧುನಿಕ ತರಬೇತಿಗೆ ಕೂಡ 400 ವರ್ಷಗಳ ಇತಿಹಾಸ ಇದೆ. ಅದು ಶತಮಾನಗಳಿಂದ ವಿಕಾಸ ಹೊಂದುತ್ತ ಬಂದಿದೆ. ಗುರಿ ನಿರ್ದೇಶಿತ ಕ್ಷಿಪಣಿಗಳ ಬಳಕೆಯ ಈ ಯುಗದಲ್ಲಿ ಇಂತಹ ತರಬೇತಿಗಳು ಕೂಡ ನಿಷ್ಪ್ರಯೋಜಕ. ಆಧುನಿಕ ರಾಷ್ಟ್ರವೊಂದರ ವಿರುದ್ಧದ ಯುದ್ಧದಲ್ಲಿ ನಾವು ದುರ್ಬಲರಾಗುವುದು ಸೈನಿಕರ ಸಂಖ್ಯಾ ಕೊರತೆಯಿಂದ ಅಥವಾ ಟ್ಯಾಂಕ್‌, ಯುದ್ಧವಿಮಾನಗಳಂತಹ ಶಸ್ತ್ರಾಸ್ತ್ರಗಳ ಕೊರತೆಯಿಂದ ಅಲ್ಲ. ಸಂಖ್ಯೆಯ ದೃಷ್ಟಿಯಲ್ಲಿ ವಿಶ್ವದಲ್ಲೇ ಅತ್ಯಂತ ಬೃಹತ್ ಸೈನ್ಯಗಳಲ್ಲಿ ನಮ್ಮದೂ ಒಂದು. ತಂತ್ರಜ್ಞಾನ ಇಲ್ಲದಿರುವಿಕೆಯು ನಮ್ಮನ್ನು ನಿಜ ಅರ್ಥದಲ್ಲಿ ದುರ್ಬಲರನ್ನಾಗಿಸುತ್ತದೆ, ಇದು ಮಾರಣಾಂತಿಕವಾಗಿಯೂ ಪರಿಣಮಿಸುತ್ತದೆ.

ಆಧುನಿಕ ರಾಷ್ಟ್ರವು ಯುದ್ಧದ ವೇಳೆ ಶತ್ರು ರಾಷ್ಟ್ರದ ಸಂಪರ್ಕ ಸಾಧನಗಳನ್ನು ನಿಷ್ಕ್ರಿಯಗೊಳಿಸುವತ್ತ ಗಮನ ನೀಡುತ್ತದೆ. ಇಂಟರ್ನೆಟ್‌ ಸೇವೆಗಳು ಸ್ಥಗಿತವಾಗುವಂತೆ ಮಾಡಿದರೆ ಯಾವುದೇ ಆಧುನಿಕ ರಾಷ್ಟ್ರ ಕುಂಟನಂತೆ ಆಗುತ್ತದೆ. ಆ ದೇಶದ ಬ್ಯಾಂಕಿಂಗ್ ವ್ಯವಸ್ಥೆ ಕುಸಿದುಬೀಳುತ್ತದೆ, ಕೆಲವೇ ಗಂಟೆಗಳಲ್ಲಿ ದೇಶ ಮಂಡಿಯೂರುತ್ತದೆ. ಆಂತರಿಕ ಸಂಪರ್ಕ ಎಂಬುದು ಗೊಂದಲದ ಗೂಡಾಗುತ್ತದೆ, ಜನರಲ್ಲಿ ಭೀತಿ ಮೂಡುತ್ತದೆ, ಸಮಾಜದಲ್ಲಿನ ಸುವ್ಯವಸ್ಥೆ ಹಾಳಾಗುತ್ತದೆ. ಶತ್ರುಗಳು ದೇಶದ ಸಂಪರ್ಕ ಸಾಧನಗಳ ಮೇಲೆ ನಡೆಸುವ ದಾಳಿಯು, ಇಡೀ ದೇಶವನ್ನು ಮೂರ್ಛಾವಸ್ಥೆಗೆ ತಳ್ಳುತ್ತದೆ. ವಿಮಾನಗಳ ಹಾರಾಟಕ್ಕೆ, ಕ್ಷಿಪಣಿ ಪ್ರಯೋಗಕ್ಕೆ ದೇಶಗಳು ನಂಬಿಕೊಂಡಿರುವ ಜಿಪಿಎಸ್‌ ವ್ಯವಸ್ಥೆ ಕೂಡ (ಈ ವ್ಯವಸ್ಥೆ ಅಮೆರಿಕನ್ನರ ನಿಯಂತ್ರಣದಲ್ಲಿದೆ) ಆ ದೇಶಗಳನ್ನು ನಿರ್ಬಲನ ಸ್ಥಾನದಲ್ಲಿ ನಿಲ್ಲಿಸಬಹುದು. ಹುತಾತ್ಮರಾಗಲು ಸಿದ್ಧರಾಗಿರುವ ಲಕ್ಷಾಂತರ ಜನರನ್ನು ಹೊಂದಿರುವುದರಿಂದ ಹೆಚ್ಚಿನ ಪ್ರಯೋಜನವೇನೂ ಇಲ್ಲ. ಆಧುನಿಕವಲ್ಲದ ದೇಶವೊಂದು ತನಗೆ ಬೇಕಾದಂತೆ ವರ್ತಿಸುವಂತೆ ಮಾಡುವ ಸಾಮರ್ಥ್ಯ ಆಧುನಿಕ ತಂತ್ರಜ್ಞಾನ ಇರುವ ದೇಶಕ್ಕೆ ಇರುತ್ತದೆ– ಹೀಗೆ ಮಾಡಲು ಅತಿಯಾದ ಹಿಂಸೆಯ ಅಗತ್ಯ ಇಲ್ಲ. ಇದು ಇಂದಿನ ಕಾಲದ ಯುದ್ಧ ತಂತ್ರ. ಇದನ್ನು ಅರ್ಥ ಮಾಡಿಕೊಳ್ಳದಿರುವುದು ಮಾಹಿತಿಯ ಕೊರತೆಯಿಂದ ಅಲ್ಲ. ಬದಲಿಗೆ, ಇದು ಅಜ್ಞಾನದ ಫಲ ಎನ್ನಬೇಕಾಗುತ್ತದೆ.

ನಮ್ಮ ಪ್ರಧಾನಿ ಸೇರಿದಂತೆ ಆರ್‌ಎಸ್‌ಎಸ್‌ ಸಂಘಟನೆಯಿಂದ ಬೆಳೆದುಬರುವ ವ್ಯಕ್ತಿಗಳಲ್ಲಿನ ಮಾನಸಿಕತೆಯನ್ನು ರೂಪಿಸುವ ಆಲೋಚನೆಗಳ ಗುಣಮಟ್ಟ ಈ ರೀತಿ ಇರುತ್ತದೆ ಎಂಬುದು ನಮ್ಮ ಅರಿವಿನಲ್ಲಿ ಇರಬೇಕು ಎಂಬ ಉದ್ದೇಶದಿಂದ ನಾನು ಇದನ್ನು ಬರೆದೆ. ಈ ಆಲೋಚನೆಗಳು ತೀರಾ ಹಳತು, ತೀರಾ ಸರಳೀಕೃತವಾಗಿ ವಿಷಯಗಳನ್ನು ಅರ್ಥ ಮಾಡಿಕೊಳ್ಳುತ್ತವೆ. ಸಂಘದಲ್ಲಿ ದೇಶಭಕ್ತಿ ತುಂಬಿ ತುಳುಕುತ್ತಿರಬಹುದು, ಅದರ ಬಗ್ಗೆ ಅನುಮಾನ ಇಲ್ಲ. ಆದರೆ, ಅಲ್ಲಿನ ಯೋಚನೆಗಳ ಗುಣಮಟ್ಟ ಎಚ್ಚರಿಕೆಯ ಗಂಟೆಯಂತೆ ಇದೆ, ಅದು ನನ್ನಲ್ಲಿ ಭೀತಿ ಮೂಡಿಸುತ್ತದೆ.

ಲೇಖಕ: ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT