ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಕಣಿವೆಗಳಲ್ಲಿ ನಡೆದ ಯುದ್ಧದ ಆ ನೆನಪುಗಳು...

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಭಾರತ ಮತ್ತು ಚೀನಾ ದೇಶಗಳ ನಡುವಣ ಆ ಯುದ್ಧ ನಡೆದು ಇದೀಗ 50 ವರ್ಷಗಳು ಉರುಳಿವೆ. ಅಂದು ಭಾರತದ ಮಟ್ಟಿಗೆ ಅದು ಸೇನಾಪಡೆಗಳ ವೈಫಲ್ಯ ಅಥವಾ ರಾಜಕಾರಣಿಗಳ ಮಟ್ಟದ ಗೊಂದಲವೇ ಎಂಬ ಪ್ರಶ್ನೆಗಳಿಗೆ ಇಂದಿಗೂ ಉತ್ತರ ಸಿಕ್ಕಿಲ್ಲ.
 
ಅಂದು ಭಾರತೀಯ ಸೇನೆ ಹಿಮಾಲಯದ ಬೆಟ್ಟಸಾಲುಗಳಲ್ಲಿ ಇನ್ನಿಲ್ಲದಂತೆ ನೆಲಕಚ್ಚಿತ್ತು. ಭಾರಿ ಆಘಾತ ಕಂಡಿತ್ತು. ಆ ಸೋಲಿಗೆ ನಾವು ಸೇನೆಯ ಮೇಲೆ ಹೊಣೆಗಾರಿಕೆ ಹೊರಿಸುವುದು ಅದೆಷ್ಟು ಸರಿ ಎಂಬ ಬಗ್ಗೆ ಬಹಳಷ್ಟು ಚರ್ಚೆಯೂ ನಡೆದಿದೆ. ಅಗತ್ಯ ಸಿದ್ಧತೆಗಳನ್ನೇ ಮಾಡಿಕೊಂಡಿರದ ಸೇನೆಯನ್ನು ಏಕಾಏಕಿ ರಣರಂಗಕ್ಕೆ ತಳ್ಳಿದ ರಾಜಕಾರಣಿಗಳ ನಿರ್ಧಾರಗಳನ್ನೇ ಪ್ರಶ್ನಿಸಬೇಕು ಎನ್ನುವವರೂ ಬಹಳಷ್ಟು ಮಂದಿ ಇದ್ದಾರೆ.

ಆಗಿನ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರನ್ನು `ಆರೋಪ~ದ ವ್ಯಾಪ್ತಿಯಿಂದ ಹೊರಗಿಟ್ಟು ನೋಡುವಂತೆಯೇ ಇಲ್ಲ. ಗಡಿ ದಾಟಿ ಬಂದಿದ್ದ ಚೀನಾದ ಸೈನಿಕರ ವಿರುದ್ಧ ಖುದ್ದು ಯುದ್ಧ ಸಾರಿದವರು ನೆಹರು ತಾನೆ. ಅವತ್ತು ನೆಹರು ನೀಡಿದ್ದ ಆ ಆದೇಶ ಭಾರತದ ಮಟ್ಟಿಗೆ ಯಾವುದೇ ರೀತಿಯಲ್ಲಿಯೂ ಸಮರ್ಥನೀಯವಂತೂ ಅಲ್ಲವೇ ಅಲ್ಲ.

ಜತೆಗೆ ತೀರಾ ಬೇಜವಾಬ್ದಾರಿತನದ ನಡೆಯಾಗಿತ್ತು. ಅವರಿಗೆ ಅಂದು ಗಡಿ ಪ್ರದೇಶದಲ್ಲಿ ಭಾರತದ ಸೇನೆಯ ಸ್ಥಿತಿಗತಿ ಬಗ್ಗೆ ಯಾವುದೇ ವಾಸ್ತವದ ಅರಿವೂ ಇದ್ದಂತಿರಲಿಲ್ಲ.
ಆದರೆ ಇವತ್ತಿಗೂ ನನ್ನ ಒಳಮನಸ್ಸು ಮಾತ್ರ ನೆಹರು ಅವರಿಗೆ ನಮ್ಮ ಸೇನೆಯ ಅಂದಿನ ದುಸ್ಥಿತಿಯ ಅರಿವು ಇರಲಿಲ್ಲ ಎನ್ನುವುದನ್ನು ಒಪ್ಪಿಕೊಳ್ಳುತ್ತಲೇ ಇಲ್ಲ.

ಭಾರತದ ಯೋಧರು ಅಂದು ಆ ಹಿಮಕಣಿವೆಗಳಲ್ಲಿ ಹೋರಾಡಲು ಶಕ್ತಿ ಮೀರಿ ಶ್ರಮ ಪಡಬೇಕಾಗುತ್ತದೆ. ಅಂತಹ ವಾತಾವರಣದಲ್ಲಿ ಕಾದಾಡಲು ಬೇಕಾದ ಸೌಲಭ್ಯಗಳ ಕೊರತೆ ಇದೆ. ಅಗತ್ಯ ಪಾದರಕ್ಷೆಗಳೂ ಇರಲಿಲ್ಲ ಎಂಬ ಸಂಗತಿಗಳು ನೆಹರು ಅವರಿಗೆ ಗೊತ್ತಿಲ್ಲದಿರಬಹುದು. ಆದರೆ ಚೀನಾದಂತಹ ಪ್ರಬಲ ಶಕ್ತಿಯ ವಿರುದ್ಧ ಹೋರಾಡಲು ಅಗತ್ಯವಾದ ಶಸ್ತ್ರಾಸ್ತ್ರಗಳೇ ಆಗಲಿ, ಅದಕ್ಕೆಂದೇ ವಿಶೇಷ ರೀತಿಯಲ್ಲಿ ತರಬೇತಾದ ಸೈನಿಕರಾಗಲಿ ಅಂದು ನಮ್ಮಲ್ಲಿರಲಿಲ್ಲ ಎಂಬ ಸತ್ಯ ಗೊತ್ತಿರಲಿಲ್ಲ ಎನ್ನುವಂತಿಲ್ಲ.

ಆದರೆ ಪ್ರಧಾನಿಯವರು ಆಗಿನ ರಕ್ಷಣಾ ಸಚಿವ ಕೃಷ್ಣ ಮೆನನ್ ಅವರನ್ನು ಇನ್ನಿಲ್ಲದಂತೆ ನಂಬಿದ್ದರು. ಚೀನಾದಂತಹ ಕಮ್ಯುನಿಸ್ಟ್ ದೇಶವೊಂದು ಭಾರತದಂತಹ ಅಭಿವೃದ್ಧಿಶೀಲ ದೇಶದ ಮೇಲೆ ಯಾವುದೇ ಕಾರಣಕ್ಕೂ ಆಕ್ರಮಣ ನಡೆಸುವುದಿಲ್ಲ ಎಂಬ ಕುರುಡು ನಂಬಿಕೆಯೊಂದಕ್ಕೆ ಜೋತು ಬಿದ್ದಿದ್ದ ಕೃಷ್ಣಮೆನನ್ ಅವರು ನೆಹರು ಅವರಿಗೆ ಅದೆಂತಹ ಮಾಹಿತಿಗಳನ್ನು ನೀಡಿರಲು ಸಾಧ್ಯ ಎಂಬ ಪ್ರಶ್ನೆ ಏಳುತ್ತದೆ.

ಅಮೆರಿಕ- ರಷ್ಯಾ ನಡುವಣ ಶೀತಲ ಸಮರ ತಾರಕಕ್ಕೇರಿದ್ದ ಆ ದಿನಗಳಲ್ಲಿ ಚೀನಾ ಈ ತೆರನಾದ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕೃಷ್ಣ ಮೆನನ್ ಕನಸು ಮನಸ್ಸಿನಲ್ಲಿಯೂ ಎಣಿಸಿದ್ದಂತಿರಲಿಲ್ಲ.

ಆದರೆ ಚೀನಾದ ಪ್ರಧಾನಿ ಚೌ ಎನ್‌ಲಾಯ್ ಅವರು ಅಂದು ನೆಹರು ಅವರ ಜತೆಗೆ ಮಧುರ ಸ್ನೇಹದ ಬಗ್ಗೆ ಮಾತುಕತೆ ನಡೆಸಿದ ಕೆಲವೇ ಸಮಯದಲ್ಲಿ ಚೀನಾ ಸೇನೆ ಭಾರತದ ಗಡಿ ದಾಟಿದ್ದು ವಿಪರ್ಯಾಸವೇ ಹೌದು. ಚೀನಾ ತಾನು ನಂಬಿಕೆಗೆ ಅರ್ಹವಲ್ಲ ಎಂಬುದನ್ನು ಅಂದು ಸಾಬೀತು ಪಡಿಸಿತ್ತು. ದೆಹಲಿಗೆ ಭೇಟಿ ನೀಡಿದ್ದ ಚೌಎನ್ ಲಾಯ್ ಅವರು ನೆಹರು ಅವರನ್ನು ಅಪ್ಪಿಕೊಂಡು ಎರಡೂ ದೇಶಗಳ ನಡುವಣ ಅಮರ ಸ್ನೇಹದ ಬಗ್ಗೆ ಭಾವೋದ್ವೇಗದಿಂದ ಮಾತನಾಡಿದ್ದರು.
 
ಆದರೆ ಅವರು ಬೀಜಿಂಗ್‌ಗೆ ತೆರಳಿದ ನಂತರ ಭಾರತದ ವಿರುದ್ಧ ಯುದ್ಧ ಸಾರಿದ್ದರು. ಭಾರತದ ಸೇನೆಗೆ ಸಾಕಷ್ಟು ಸಾವು ನೋವು, ನಷ್ಟ ಉಂಟಾಯಿತು. ಇಪ್ಪತ್ತು ದಿನಗಳ ನಂತರ ಕದನ ವಿರಾಮವನ್ನೂ ಘೋಷಿಸಲಾಯಿತು. ಆದರೆ ಈ ಆಘಾತದಿಂದ ನೆಹರು ಅವರಿಗೆ ಚೇತರಿಸಿಕೊಳ್ಳಲಾಗಲೇ ಇಲ್ಲ. ಈ ಘಟನೆ ನಡೆದು ಒಂದೂವರೆ ವರ್ಷದ ನಂತರ ನೆಹರು ಹೃದಯಾಘಾತದಿಂದ ನಿಧನರಾದರು.

ಚೀನಾದ ವಿರುದ್ಧ ಏಕಾಏಕಿ ಯುದ್ಧ ನಡೆಸಲು ಭಾರತ ಸಿದ್ಧವಿಲ್ಲ ಎಂಬ ವಾಸ್ತವದ ಬಗ್ಗೆ ಸೇನೆಯು ಸರ್ಕಾರಕ್ಕೆ ತಿಳಿಸಿಲ್ಲ ಎನ್ನುವಂತಿಲ್ಲ. ಏಕೆಂದರೆ ಆಗಿನ ಸೇನಾ ಮುಖ್ಯಸ್ಥ ಪಿ.ಎನ್.ಥಾಪರ್ ಅವರು ಭಾರತದ ಸೇನೆಯ ಅಂದಿನ ಸ್ಥಿತಿಗತಿ, ಹಿಮಕಣಿವೆಯ ಯುದ್ಧಕ್ಕೆ ಭಾರತ ತಯಾರಿಲ್ಲದಿರುವ ಬಗ್ಗೆ ಪೂರ್ಣ ವಿವರಗಳಿರುವ ವರದಿಯನ್ನು ನೇರವಾಗಿ ಸರ್ಕಾರಕ್ಕೆ ಸಲ್ಲಿಸಿದ್ದರು. ಒಂದು ವೇಳೆ ಭಾರತ ಯುದ್ಧಕ್ಕೆ ಇಳಿದರೆ ಭಾರಿ ಹಾನಿಯನ್ನು ಅನುಭವಿಸಬೇಕಾಗುತ್ತದೆ ಎಂದು ಅದರಲ್ಲಿ ಬರೆದಿದ್ದರು. ಕೊನೆಗೂ ಥಾಪರ್ ಹೇಳಿದ್ದು ನಿಜವೇ ಆಯಿತು.

ಅಂದು ಥಾಪರ್ ಸರ್ಕಾರಕ್ಕೆ ನೀಡಿದ್ದ ವರದಿ ನೆಹರು ಅವರ ಕೈಸೇರಿರಲೇ ಇಲ್ಲ. ಸೇನೆಯ ಕುಂದುಕೊರತೆಗಳನ್ನೆಲ್ಲಾ ಆ ವರದಿ ಬಿಚ್ಚಿಟ್ಟಿದ್ದರಿಂದ ಅದನ್ನು ಕೃಷ್ಣ  ಮೆನನ್ ತಮ್ಮ ಕಡತಗಳ ಅಡಿಯಲ್ಲಿಟ್ಟು ಮೌನವಾಗಿ ಕುಳಿತು ಬಿಟ್ಟರು. ಈ ವಾಸ್ತವ ನೆಹರು ಅವರಿಗೆ ಗೊತ್ತಾಗುವುದು ಮೆನನ್ ಅವರಿಗೆ ಇಷ್ಟವಿರಲಿಲ್ಲ. ಅದೆಂತಹ ಯುದ್ಧ ಬರಲಿ ಅದನ್ನು ಸಮರ್ಥವಾಗಿ ಎದುರಿಸಲು ಭಾರತ ಸಿದ್ಧವಿದೆ ಎಂಬ ಚಿತ್ರಣವನ್ನು ಅದಾಗಲೇ ಮೆನನ್ ಅವರು ಪ್ರಧಾನಿಗೆ ಮನದಟ್ಟು ಮಾಡಿದ್ದರು.

ಭಾರತದಲ್ಲಿ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಗಳಂತೂ ಅತ್ಯಾಧುನಿಕವಾಗಿದ್ದು, ಸೇನೆಗೆ ಅಗತ್ಯವಿರುವಷ್ಟು ಶಸ್ತ್ರಾಸ್ತ್ರಗಳು ಪೂರೈಕೆಯಾಗುತ್ತಿವೆ ಎಂದೂ ಅವರು ನೆಹರು ಅವರಿಗೆ ವರದಿ ನೀಡಿದ್ದರು. ಇದೀಗ ಸೇನಾ ಮುಖ್ಯಸ್ಥರ ವರದಿಯನ್ನು ನೆಹರು ಅವರಿಗೆ ನೀಡಿದರೆ ತಾವು ಹಿಂದೆ ನೀಡಿದ್ದ ವರದಿಯ ಮಾಹಿತಿಗಳು ಹುಸಿ ಎನ್ನುವುದು ಗೊತ್ತಾಗುತಿತ್ತು. ಇದು ಮೆನನ್ ಅವರಿಗೆ ಬೇಕಿರಲಿಲ್ಲ.

ಚೀನಾ ಎದುರು ಭಾರತದ ಸೇನೆ ಅನುಭವಿಸಿದ ಹೀನಾಯ ಸೋಲಿಗೆ ಸಂಬಂಧಿಸಿದಂತೆ ಇಂತಹ ಅನೇಕ ಸಂಗತಿಗಳು ಆಂಡರ್ಸನ್ ಬ್ರೂಕ್ಸ್ ವರದಿಯಲ್ಲಿದೆ ಎನ್ನಲಾಗಿದೆ. ಆದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರ ಈ ವರದಿಯನ್ನು ಬಹಿರಂಗಗೊಳಿಸಿಲ್ಲ! ಇದಕ್ಕೆ ಸಂಬಂಧಿಸಿದಂತೆ ಮಧ್ಯಪ್ರವೇಶಿಸಲು ಕೇಂದ್ರ ಮಾಹಿತಿ ಆಯೋಗ ಕೂಡಾ ಹಿಂದೇಟು ಹೊಡೆದಿದೆ. ಈ ವರದಿಯನ್ನು ಬಯಲುಗೊಳಿಸಬೇಕೇ ಬೇಡವೇ ಎಂಬ ಬಗ್ಗೆ ವಾದ ವಿವಾದಗಳು ನಡೆದಿದ್ದು ಸುಪ್ರೀಂ ಕೋರ್ಟ್‌ನ ಕಡತಗಳ ನಡುವೆ ಹಲವು ವರ್ಷಗಳಿಂದ ಸಿಲುಕಿಕೊಂಡಿದೆ.

ಈ ವರದಿಯನ್ನು ಬಹಿರಂಗಗೊಳಿಸಲು ಇದು ಸಕಾಲ. ಏಕೆಂದರೆ 1962ರ ಯುದ್ಧಕ್ಕೂ ಈಗಿನ ಯುದ್ಧಗಳಿಗೂ ಬಹಳಷ್ಟು ವ್ಯತ್ಯಾಸವಿದೆ. ಆಗಿನ ಶಸ್ತ್ರಾಸ್ತ್ರಗಳೇ ಬೇರೆ, ಈಗ ಬಳಸುವ ಶಸ್ತ್ರಾಸ್ತ್ರ ಮತ್ತು ತಂತ್ರಗಳೂ ವಿಭಿನ್ನವೇ. ಭಾರತದ ಸೋಲಿಗೆ ಕಾರಣವಾದ ಸತ್ಯಸಂಗತಿಗಳನ್ನು ಬಯಲುಗೊಳಿಸುವುದರಿಂದ ಭಾರತದ ರಕ್ಷಣೆಗೆ ಸಂಬಂಧಿಸಿದಂತೆ ಯಾವುದೇ ಹಾನಿಯಂತೂ ಆಗಲಾರದು. ಆದರೆ ಈ ವರದಿಯನ್ನು ಬಹಿರಂಗಗೊಳಿಸಲು ಹಲವು `ರಾಜಕೀಯ~ ಕಾರಣಗಳೇ ಅಡ್ಡಿಯಾಗಿರುವುದಂತೂ ನಿಜ.

ಲಾಲ್‌ಬಹದ್ದೂರ್ ಶಾಸ್ತ್ರಿಯವರು ಆ ದಿನಗಳಲ್ಲಿ ಗೃಹಸಚಿವರಾಗಿದ್ದರು. ಚೀನಾ ಅಂದು ಏಕಪಕ್ಷೀಯ ಕದನ ವಿರಾಮ ಹೇರಿದ್ದನ್ನು ಒಪ್ಪಿಕೊಳ್ಳಬಾರದೆಂದು ಶಾಸ್ತ್ರಿಯವರು ಹೇಳಿದ್ದರು. ಆದರೆ ಅಂದು ಕದನ ವಿರಾಮಕ್ಕೆ ಒಪ್ಪಿಕೊಳ್ಳದೇ ಇದ್ದಿದ್ದರೆ ಚೀನಾ ಭಾರತದೊಳಗೆ ಇನ್ನಷ್ಟೂ ದೂರ ನುಗ್ಗಿ ಬರುತಿತ್ತು. ಇನ್ನಷ್ಟೂ ಪ್ರದೇಶವನ್ನು ನಾವು ಕಳೆದುಕೊಳ್ಳುತ್ತಿದ್ದೆವು. ಅದೇನೇ ಇರಲಿ, ಶಾಸ್ತ್ರಿಯವರ ಮಾತನ್ನಂತೂ ನೆಹರು ಒಪ್ಪಿಕೊಳ್ಳಲಿಲ್ಲ. ಭಾರತ ನೆರೆಹೊರೆ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಳ್ಳಲು ಬಯಸುತ್ತದೆ ಎಂಬುದನ್ನು ಜಗತ್ತಿಗೆ ತೋರ್ಪಡಿಸುವುದು ನೆಹರು ಅವರಿಗೆ ಅಂದು ಮುಖ್ಯವಾಗಿತ್ತು ಎನ್ನುವುದೂ ನಿಜ.

ಅಂದು ಆ ಹಿಮಕಣಿವೆಗಳಲ್ಲಿದ್ದ ಬಹಳಷ್ಟು ಸೇನಾಧಿಕಾರಿಗಳು ಕದನವಿರಾಮವನ್ನು ಅತ್ಯುತ್ಸಾಹದಿಂದ ಸ್ವಾಗತಿಸಿದ್ದು ನನಗಿನ್ನೂ ನೆನಪಿದೆ.  ಯುದ್ಧ ನಡೆದಿದ್ದ ಪ್ರದೇಶಗಳಿಗೆ ಲಾಲ್‌ಬಹದ್ದೂರ್ ಶಾಸ್ತ್ರಿಯವರು ಭೇಟಿ ಕೊಟ್ಟಿದ್ದರಲ್ಲಾ, ಅವರ ಜತೆಗಿದ್ದ ತಂಡದಲ್ಲಿ ನಾನೂ ಇದ್ದೆ. ಅಂದು ಶಾಸ್ತ್ರಿಯವರು ನನ್ನೊಡನೆ ಮಾತನಾಡುತ್ತಾ ಕದನವಿರಾಮದ ಬಗ್ಗೆ ಯೋಧರೊಡನೆ ಮಾತನಾಡಿ ಅಭಿಪ್ರಾಯ ತಿಳಿದುಕೊಳ್ಳಿ ಎಂದಿದ್ದರು. ಆಗ ನಾನು ಭೇಟಿಯಾದ ಪ್ರತಿಯೊಬ್ಬ ಸೇನಾಧಿಕಾರಿಯೂ ತಮಗಿಲ್ಲಿ ಹೋರಾಡುವ ಮನಸ್ಸೇ ಇಲ್ಲ ಎಂದು ಮುಕ್ತ ಮನಸ್ಸಿನಿಂದ ಹೇಳಿದ್ದರು.

ಸಮರಭೂಮಿಯಲ್ಲಿ ಯುದ್ಧತಂತ್ರಗಳ ಬಗ್ಗೆ ಮಾತ್ರ ಯೋಚನೆ ಮಾಡುವಂತಹ ಸೇನಾಧಿಕಾರಿಗಳನ್ನು ಆಯ್ಕೆ ಮಾಡುವ ಬಗ್ಗೆಯೂ ಸರ್ಕಾರ ಯೋಚಿಸಬೇಕಿದೆ ಎಂದೂ ಅಧಿಕಾರಿಯೊಬ್ಬರು ಹೇಳಿದ್ದೂ ನನ್ನ ನೆನಪಿನಲ್ಲಿದೆ. ಏಕೆಂದರೆ ಆಗ ಗಡಿಯಲ್ಲಿ ಕೆಲವು ಅಧಿಕಾರಿಗಳು ಚೀನಾದವರ ಯುದ್ಧತಂತ್ರಗಳ ಬಗ್ಗೆ ಯೋಚಿಸುತ್ತಿದ್ದುದಕ್ಕಿಂತ ಕ್ಲಬ್, ಬಾರ್‌ಗಳ ಕಲ್ಪನೆಯಲ್ಲಿ ವಿಹರಿಸುತ್ತಿದ್ದರೆಂಬ ಬಗ್ಗೆಯೂ ಆಗ ಮಾತುಗಳು ಕೇಳಿಬಂದಿದ್ದವು.

ಅದೇನೇ ಇರಲಿ, ಬಹಳಷ್ಟು ಮಂದಿ ಯೋಧರು ತಮ್ಮ ಹರಿದುಹೋದ ಪಾದರಕ್ಷೆಗಳನ್ನು ಮತ್ತು ಚೀನಾದ ಶಸ್ತ್ರಾಸ್ತ್ರಗಳ ಎದುರು ತೀರಾ ಹಳೆಯದು ಎಂಬಂತಹ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಿದ್ದರು. ಹೀಗಾಗಿಯೇ ಕೆಲವು ಅಧಿಕಾರಿಗಳು ಮಾತನಾಡುತ್ತಾ ಅತ್ಯುತ್ತಮ ತರಬೇತಿ, ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಅಗತ್ಯವನ್ನು ಒತ್ತಿ ಹೇಳಿದ್ದರು.

ಒಟ್ಟಾರೆ ಹೇಳುವುದಿದ್ದರೆ, 1962ರ ಯುದ್ಧದಲ್ಲಿ ಭಾರತಕ್ಕೆ ಇನ್ನಿಲ್ಲದ ಮುಖಭಂಗವಾಗಿರಬಹುದು. ಆದರೆ ಆಗ ಕಲಿತ ಪಾಠದಿಂದ ನಂತರದ ದಿನಗಳಲ್ಲಿ ಭಾರತಕ್ಕೆ ಬಹಳ ಲಾಭವಾಯಿತು.  ಭಾರತ ತನ್ನ ಯೋಧರ ಸಂಖ್ಯೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿತು. ಅತ್ಯಾಧುನಿಕ ಸಲಕರಣೆಗಳ ತಯಾರಿಕೆ ಮತ್ತು ಪೂರೈಕೆಗೆ ಹೆಚ್ಚಿನ ಗಮನ ಹರಿಸಿತು. ಈ ನಿಟ್ಟಿನಲ್ಲಿ ಅಮೆರಿಕಾದಿಂದ ಬಹಳಷ್ಟು ನೆರವು ಪಡೆಯಿತು.
 
ಈ ರೀತಿ ಎಚ್ಚೆತ್ತುಕೊಂಡಿದ್ದರಿಂದಲೇ ಭಾರತ 1965ರಲ್ಲಿ ಪಾಕಿಸ್ತಾನವನ್ನು ಸಮರ್ಥವಾಗಿ ಬಗ್ಗು ಬಡಿಯಲು ಸಾಧ್ಯವಾಯಿತು. 1965ರ ಯುದ್ಧದಲ್ಲಿ ಭಾರತ ಗೆದ್ದಿತು ಅಥವಾ ಪಾಕಿಸ್ತಾನ ಸೋಲೊಪ್ಪಿಕೊಂಡಿದ್ದರಿಂದ ಯುದ್ಧ ನಿಲ್ಲಿಸಿತು ಇತ್ಯಾದಿ ಚರ್ಚೆಗಳಿಗಿಂತಲೂ ಚೀನಾ ವಿರುದ್ಧದ ಯುದ್ಧದಲ್ಲಿ ಭಾರತಕ್ಕೆ ಅಂಟಿದ್ದ ಕಳಂಕದ ಕೊಳೆ ಒಂದಷ್ಟು ತೊಳೆದು ಹೋಯಿತು ಎನ್ನಬಹುದೇನೊ.

ಆದರೆ ಪಾಕಿಸ್ತಾನದ ಆಗಿನ ಸೇನಾ ಮುಖ್ಯಸ್ಥ ಟಿಕ್ಕಾಖಾನ್ ಹೇಳಿದ್ದೇ ಬೇರೆ. `ಭಾರತದ ಸೇನೆ ಪಾಕ್‌ನೊಳಗೆ ನುಗ್ಗಿ ಬರಲು ಎಲ್ಲಾ ಸಾಧ್ಯತೆಗಳಿತ್ತು. ಆದರೆ ನಮ್ಮಲ್ಲಿರುವ ಅತ್ಯಂತ ಕಡಿಮೆ ಸೇನಾ ಸಂಪನ್ಮೂಲಗಳ ನೆರವಿನಿಂದಲೇ ನಾವು ನೆಲ ಕಚ್ಚಿ ನಿಂತು ಬಿಟ್ಟಿದ್ದೆವು. ಹೀಗಾಗಿ ಭಾರತೀಯ ಸೇನೆ ಮುಂದುವರಿಯಲು ಸಾಧ್ಯವಾಗಲಿಲ್ಲ.
 
ಭಾರತದ ಸೇನೆ ಲಾಹೋರ್ ಸೇರಿದಂತೆ ಹಲವು ಹತ್ತು ಪಟ್ಟಣಗಳ ಮೇಲೆ ಕಣ್ಣಿಟ್ಟು ಆಕ್ರಮಣ ನಡೆಸಿತ್ತು. ಆದರೆ ನಮ್ಮ ಸೈನಿಕರ ಮಹಾಗೋಡೆಯನ್ನು ಭೇದಿಸಿ ಒಂದೇ ಒಂದು ಪಟ್ಟಣವನ್ನೂ ಅವರಿಗೆ ವಶಪಡಿಸಿಕೊಳ್ಳಲಾಗಲಿಲ್ಲ~ ಎಂದಿದ್ದರು.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT