ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮನದಿಯ ದಡಗಳಲ್ಲಿ ನಡೆದ ನೆನಪು

Last Updated 9 ಜುಲೈ 2011, 19:30 IST
ಅಕ್ಷರ ಗಾತ್ರ

ನದಿಮೂಲ ಅರಸಬಾರದು ಎಂಬ ಪ್ರಸಿದ್ಧ ಹೇಳಿಕೆ ಇದೆಯಷ್ಟೆ. ಅದರ ಒಳಾರ್ಥ, ನದಿಗೆ ಒಂದು ಮೂಲ ಇರುವುದಿಲ್ಲ ಎಂಬುದೊ ಅಥವಾ ಮೂಲ ಎಂಬುದೊಂದು ಸಿಕ್ಕರೆ ಅದು ಸೋಜಿಗ ಉಂಟು ಮಾಡುತ್ತದೆ ಎಂಬುದೊ?

ನಮ್ಮಲ್ಲಿ ನದಿಗಳಿಗೆ ಇದುವೇ ಮೂಲವೆಂದು ಗುರುತಿಸುವ ಪದ್ಧತಿಯಿದೆ. ಆದರೆ ವಾಸ್ತವದಲ್ಲಿ ನದಿಗಳು ಹಾಗೆ ನಿರ್ದಿಷ್ಟವಾದ ಜಾಗದಲ್ಲಿ ಜನಿಸುವುದಿಲ್ಲ; ಅವು ವಿಶಾಲವಾದ ಕಣಿವೆಯೊಂದರಲ್ಲಿ ನೂರಾರು ಕಡೆಯಿಂದ ಹುಟ್ಟುವ ಜಲಧಾರೆಗಳು ಒಗ್ಗೂಡಿ ರೂಪುಗೊಳ್ಳುತ್ತವೆ; ಈ ಜಲಧಾರೆಗಳು ಮರದ ಬೇರುಗಳಂತೆ ನದಿಯ ಉಗಮಸ್ಥಾನದಲ್ಲಿ ವಿಸ್ತಾರವಾಗಿ ಚೆಲ್ಲಿಕೊಂಡಿರುತ್ತವೆ.

ನದಿ ಹುಟ್ಟಿನ ಈ ವಿವರಣೆ, ನಮ್ಮ ಸಾಹಿತ್ಯ ಪರಂಪರೆ, ಸಂಸ್ಕೃತಿ ಭಾಷೆ ಧರ್ಮಗಳ ವಿಷಯದಲ್ಲಿಯೂ ನಿಜ. ಹಲವು ಮೂಲಗಳಿಂದ ಚರಿತ್ರೆಯ ಬೇರೆಬೇರೆ ಕಾಲಘಟ್ಟಗಳಲ್ಲಿ ಬಂದು ಸೇರುವ ಧಾರೆಗಳಿಂದ ಇವು ರೂಪುಗೊಳ್ಳುತ್ತವೆ. ಇವನ್ನು ರೂಪಿಸುವ ಆ ಹಲವು ಧಾರೆಗಳನ್ನು ಅರಸುತ್ತ ಹೋದರೆ ಸಿಗುವ ಸತ್ಯವು ಕೆಲವೊಮ್ಮೆ ಕಂಗೆಡಿಸಬಹುದು. ಆದರೆ ಭಾರತದಂತಹ ಬಹುಭಾಷಿಕ ಬಹುಧಾರ್ಮಿಕ ದೇಶಗಳ ಸಂಸ್ಕೃತಿಗಳ ನಿಜವಾದ ಚಹರೆಯೇ ಇದು. ನಮ್ಮ ಸಂಕರ ಸಂಸ್ಕೃತಿಯ ಗುಣಕ್ಕೆ ನದಿಗಳು ಒಳ್ಳೆಯ ರೂಪಕಗಳು. ಕನ್ನಡದ ದೊಡ್ಡ ಚಿಂತಕರಲ್ಲೊಬ್ಬರಾದ ಶಂಬಾ ಜೋಶಿಯವರ ಚಿಂತನೆಗಳು ಇದನ್ನೇ ಹೇಳುತ್ತವೆ.    

ನದಿ ಮೂಲದ ವಿಷಯ ಬಂದಾಗ, ನನಗೆ ಬಾಬಾಬುಡನಗಿರಿಯ ಜಲಪಾತವೊಂದು ನೆನಪಾಗುತ್ತದೆ. ಅದು ಮಾಣಿಕ್ಯಧಾರೆ ಜಲಪಾತ. ಚಿಕ್ಕಂದಿನಲ್ಲಿ ನಮಗೆ ಗಿರಿಯಲ್ಲಿರುವ ಈ ಅಬ್ಬಿಯ ವಿಚಿತ್ರ ಆಕರ್ಷಣೆ. ಬರ್ಫಿನಂತೆ ಕೊರೆವ ನೀರು ಉಂಡುಂಡೆಯಾಗಿ ಅಪ್ಪಳಿಸುತ್ತ, ಮೈಯೊಡ್ಡಿ ಕೆಳಗೆ ನಿಂತವರಿಗೆ ಕಲ್ಲಿನಿಂದ ಹೊಡೆತ ತಿನ್ನುವ ಅನುಭವ ಕೊಡುತ್ತದೆ.

ಹಾವಿನ ಹೆಡೆಯಂತಿರುವ ಬಂಡೆತುದಿಯಿಂದ ತೊಂಬತ್ತು ಡಿಗ್ರಿ ಕೋನದಲ್ಲಿ ಈ ತಣ್ಜಲವು ಧುಮುಕುತ್ತದೆ. ಈ ಜಲ, ಅಲ್ಲಿನ ಕಲ್ಲರೆಯೊಳಗೆ ಹೇಗೆ ಹುಟ್ಟುತ್ತದೆಯೆಂಬುದು ಯಾರಿಗೂ ಗೊತ್ತಿಲ್ಲವೆಂದೂ, ಅದನ್ನು ಹುಡುಕಲು ಹೋದವರು ವಾಪಾಸು ಬಂದಿಲ್ಲವೆಂದೂ, ನನ್ನಮ್ಮ ಹೇಳುತ್ತಿದ್ದಳು.
 
ಪ್ರಾಯಕ್ಕೆ ಬಂದಮೇಲೆ, ನಾವು ಕೆಲವರು ಮಾಣಿಕ್ಯಧಾರೆಯ ಮೂಲವನ್ನು ಪತ್ತೆ ಹಚ್ಚಿದೆವು. ಅದೊಂದು ಗಿರಿಶಿಖರದ ತಲೆಯನ್ನು ಯಾರೊ ಜಜ್ಜಿ ಗಾಯ ಮಾಡಿದಂತಿದ್ದ ಸ್ಥಳ. ಕಾಲಿಡುವುದಕ್ಕೆ ಸಾಧ್ಯವಿಲ್ಲದ ಪಂಕರಾಶಿ; ಸುತ್ತ ಮಬ್ಬುಗತ್ತಲೆ ಕವಿಸಿದ್ದ ಮರಗಳ ನೆರಳು. ಅಲ್ಲಿಂದ ಜಲ ಒಸರಿಕೊಂಡು ಹರಿಯುತ್ತ ಧಾರೆಯ ರೂಪವನ್ನು ಪಡೆಯುತ್ತಿತ್ತು.

ಸಾವಿರಾರು ಅಡಿ ಎತ್ತರದ ಬೆಟ್ಟದ ತುದಿಯಲ್ಲಿ ಇಂತಹದೊಂದು ಬುಗ್ಗೆ ಹುಟ್ಟುವುದು ಈಗಲೂ ಸೋಜಿಗ ಬರಿಸುತ್ತದೆ. ಈ ಮಾಣಿಕ್ಯಧಾರೆ ಮುಂದೆ ಹರಿದು, ಹಿರಿಯೂರಿನ ತನಕ ವೇದಾವತಿಯಾಗಿ, ಬಳಿಕ ಹಗರಿಯಾಗಿ, ಸಿರಗುಪ್ಪದ ಬಳಿ ತುಂಗಭದ್ರೆಯನ್ನು ಕೂಡಿ, ಈ ತುಂಗಭದ್ರೆ ಮತ್ತು ಕೃಷ್ಣೆಯರನ್ನು ಕೂಡಿ, ಸಾವಿರಾರು ಮೈಲಿ ದೂರದ ಬಂಗಾಳಕೊಲ್ಲಿಗೆ ಮಹಾಪ್ರಯಾಣ ಮಾಡುತ್ತದೆ.

ಭಾರತದ ಪ್ರತಿಯೊಂದು ದೊಡ್ಡನದಿಗೂ ಇಂತಹ ಸಣ್ಣಪುಟ್ಟ ಧಾರೆಗಳ ನೀರ್‌ಕೊಡುಗೆಯಿದೆ. ಈ ಕೊಡುಗೈ ಧಾರೆಗಳನ್ನು ಮರೆತು ಮಾಡುವ ದೊಡ್ಡ ನದಿಗಳ ಚರ್ಚೆಯೇ ಅಪೂರ್ಣ.

ಪ್ರಸಿದ್ಧ ಹಿಮನದಿಗಳ ಹುಟ್ಟು ಕೂಡ ಹೀಗೆ ಬಹುಮುಖಿಯಾಗಿ ಸಂಭವಿಸುತ್ತದೆ. ಬೆಳ್ಳನೆ ಹಿಮಗಂಬಳಿ ಹೊದ್ದು ಕೂತ ಯಜಮಾನರಂತೆ ಇರುವ ಹಿಮಾಲಯದ ಪರ್ವತಗಳು, ಹಿಮದ ನೀರನ್ನು ಹೊಟ್ಟೆತುಂಬ ಹಿಂಗಿಸಿಕೊಂಡು ತಂಪಾಗುತ್ತವೆ. ಇಂತಹ ಹಿಂಗುವಿಕೆಗೆ ಒಳಗೆ ಕೊಂಚ ಟೊಳ್ಳಿರುವ ಪರ್ವತ ರಚನೆ ಕೂಡ ತಕ್ಕನಾಗಿದೆ.

ಹಿಂಗಿದ ನೀರು ನೂರಾರು ಚಿಲುಮೆಗಳಾಗಿ, ಪರ್ವತದ ಮೈ ಕೊರೆದುಕೊಂಡು ಉಕ್ಕತೊಡಗುತ್ತದೆ. ಬೇಸಗೆಯಾದರೆ ಹಿಮದ ಮೇಲ್ಪದರವೂ ಕರಗಿ ಪರ್ವತಪ್ಪನ ಮೈಬೆವರಿನಂತೆ ಇಳಿಯತೊಡಗುತ್ತದೆ. ಇವೆಲ್ಲವೂ ಸೇರಿ ಒಂದು ದೂರ ಕ್ರಮಿಸಿದ ಬಳಿಕ ನದಿಯ ಅವತಾರ ತಳೆಯುತ್ತವೆ.

ಹೀಗೆ ರೂಪುತಳೆಯುವ ನದಿ, ಅಡ್ಡ ಸಿಗುವ ಪರ್ವತಗಳ ಮೈಯನ್ನು ಬಳಸಿಕೊಂಡು ಆಳವಾದ ಕಮರಿಗಳಲ್ಲಿ ಹರಿಯುತ್ತ, ತನ್ನಂತಹುದೇ ಹಲವು ಹೊಳೆಗಳನ್ನು ಜತೆಗೂಡಿಸಿಕೊಂಡು ಹೋಗುತ್ತದೆ. ಎಷ್ಟೋ ದೂರ ಕ್ರಮಿಸಿದ ಬಳಿಕ, ಅದಕ್ಕೆ ಪ್ರಸಿದ್ಧ ನದಿಯ ಹೆಸರು ದೊರಕುವುದು. ಉತ್ತರಾಂಚಲದ ಯಮುನಾ ಕಣಿವೆಯಲ್ಲೂ ಹಿಮಾಚಲ ಪ್ರದೇಶದ ಬಿಯಾಸ್ ಕಣಿವೆಯಲ್ಲೂ ಚಾರಣ ಮಾಡುವಾಗ ನನಗಿದು ಮನದಟ್ಟಾಯಿತು. ನಮ್ಮ ಭದ್ರೆ, ಕಾವೇರಿ, ತುಂಗೆಯ ವಿಷಯದಲ್ಲಿಯೂ ಈ ಮಾತು ನಿಜ. 

ಆದರೆ ಹರಿವ ವಿಷಯದಲ್ಲಿ ಹಿಮನದಿಗಳಿಗೆ ಕೆಲವು ವಿಶಿಷ್ಟತೆಗಳಿವೆ. ದಕ್ಷಿಣದ ನದಿಗಳ ಜತೆ ತೋರುವಂತೆ ಅಲ್ಲಿ ಸಲಿಗೆ ಸಾಧ್ಯವಿಲ್ಲ. ನಮ್ಮ ಸೀಮೆಯ ನದಿಗಳಿಗಿರುವಂತೆ ಅವಕ್ಕೆ ಸಕ್ಕರೆ ಮರಳಿನ ಹಾಸೂ ಇರುವುದಿಲ್ಲ. ಅವು ಬಿಟ್ಟಬಾಣದಂತೆ ವೇಗವಾಗಿ ಚಿಮ್ಮುತ್ತ ಸುಳಿಗಳನ್ನು ಹುಟ್ಟಿಸುತ್ತ ಹೆದರಿಸುತ್ತವೆ. ಅವುಗಳಲ್ಲಿ ಜಳಕಕ್ಕೆ ಇಳಿದರೆ ಚಳಿಯಿಂದ ಮೈಸೆಟೆತು ಮರಗಟ್ಟಿ ಹೋಗುತ್ತದೆ. ಬಯಲು ಪ್ರದೇಶಕ್ಕೆ ಬಂದ ಬಳಿಕವೇ ಅವುಗಳ ಜತೆ ಅಷ್ಟಿಷ್ಟು ಸ್ನೇಹ ಸಾಧ್ಯ.

ಹಿಮಾಲಯದಲ್ಲಿ ನಾನು ಕಂಡ ಮೊದಲ ನದಿ ಬಿಯಾಸ್. ಬೌದ್ಧಗುರು ದಲೈಲಾಮಾ ಇರುವ ಧರ್ಮಶಾಲೆಗೆ ಸಿಮ್ಲಾದಿಂದ ಹೋಗುವಾಗ ದಾರಿಯಲ್ಲಿ ಅದರ ದರ್ಶನವಾಯಿತು. ಅಗಲವಾದ ಆಳವಾದ ಕಣಿವೆಯೊಂದರಲ್ಲಿ ಅದು ಸರಿಯುತ್ತಿತ್ತು.

ನೀರಿನ ಆಳ ಸೂಚಿಸುವಂತೆ ಒಳಗಿಂದ ದುಂಡನೆಯ ಉಕ್ಕುಸುಳಿಗಳು, ಒಲೆಯ ಮೇಲಿಟ್ಟ ಎಸರಿನಂತೆ ತಳಮಳಿಸುತ್ತಿದ್ದವು. ಅದರ ನೀರು ಕಬ್ಬಿನಹಾಲಿನಂತೆ ಮಣ್ಣಿನ ಬಣ್ಣದ್ದಾಗಿತ್ತು. ಹಿಮನದಿಗಳ ನೀರು ಸ್ಫಟಿಕಶುಭ್ರ ಎಂದು ಭಾವಿಸಿದ್ದ ನನಗೆ ಕೊಂಚ ನಿರಾಸೆಯಾಯಿತು. ಬೇಸಗೆಯಲ್ಲಿ ಮೊದಲ ಹಿಮಕರಗಿ ನದಿಗಳಿಗೆ ಬಂದಾಗ ನೀರು ಮಾಸಲಾಗಿರುತ್ತದೆಯಂತೆ. ನಿಜ, ವಾರೊಪ್ಪತ್ತು ಕಳೆಯುವುದರಲ್ಲಿ ನದಿಯ ಬಣ್ಣ ನಾಟಕೀಯವಾಗಿ ಬದಲಾಯಿತು; ನಾವು ಹಿಂತಿರುಗುವಾಗಲಂತೂ ತಿಳಿಹಸಿರಿನಿಂದ ಎಳೆನೀರಿನಂತದು ಸ್ವಚ್ಫವಾಗಿತ್ತು. 

ಮಂಡಿಯಿಂದ ಕುಲು ಮನಾಲಿ ಮೂಲಕ ರೋಹಟಾಂಗ್ ಪಾಸಿನ ತನಕ, ಬಿಯಾಸ್ ದಡದಂಚಿನಲ್ಲಿ 150 ಕಿ.ಮೀ ಬಸ್ ಹಾದಿಯಿದೆ. ಹಾದಿಯುದ್ದಕ್ಕೂ ಬಿಯಾಸದ ಬೆಡಗು ಬಿಂಕದ ಹರಿವಾಟ ಅಲ್ಲಿ ಲಭ್ಯವಾಗುತ್ತದೆ. ರೋಹಟಾಂಗ್ ಕಣಿವೆಯಲ್ಲಿ ಸಾವಿರಾರು ವರ್ಷಗಳಿಂದ ಹೆಪ್ಪುಗಟ್ಟಿಕೊಂಡಿರುವ ಹಿಮದ ಮುದ್ದೆಗಳ ಕೆಳಗಿನಿಂದ ಸುಪ್ತವಾಗಿ ಜಿನುಗುತ್ತ, ಹಿಮದ ಹೊಲದಲ್ಲಿ ಏರಿಸಿದ ಬಿಳಿಯ ಬಾವುಟದಂತಿರುವ ಒಂದು ಜಲಪಾತದ ನೀರನ್ನೂ ಸೇರಿಕೊಂಡು, ಬಿಯಾಸದ ತೆವಳುಗೂಸಿನ ಪ್ರಯಾಣ ಶುರುವಾಗುತ್ತದೆ.

ಪರ್ವತದ ಹೊಸಲುಗಳನ್ನು ದಾಟಿ ಇಳಿಯುವ ಅದು, ಮನಾಲಿಯಲ್ಲಿ ಸಣ್ಣಸಣ್ಣ ಗದ್ದೆ ಬಯಲುಗಳ ನಡುವೆ, ಸ್ಕೂಲು ಹುಡುಗರಂತೆ ಕುಣಿದು ಕುಪ್ಪಳಿಸುತ್ತ ಹರಿಯುತ್ತದೆ.

ನಗ್ಗರದಲ್ಲಿ ಅದು ತನ್ನ ಎಳೆತನ ಬಿಟ್ಟುಕೊಟ್ಟು ತಾರುಣ್ಯದ ಚಂಚಲತೆ ಮತ್ತು ಕಸುವನ್ನು ಪಡೆಯುತ್ತದೆ. ಕುಲುವಿನಲ್ಲಿ ಅದು ಯೌವನದ ಗಡಸುತನ ಮತ್ತು ಹುಚ್ಚು ಆರ್ಭಟ ಗಳಿಸುತ್ತದೆ. ಮುಂದೆ ಪಾರ್ವತಿ ನದಿಯನ್ನು ಮಂಡಿಯ ಬಳಿ ಸೇರಿದ ಬಳಿಕವೇ ಅದಕ್ಕೊಂದು ಸಂಸ್ಥಾರಸ್ಥನ ಗಾಂಭೀರ್ಯ ಒದಗುವುದು. ಅದರ ಪ್ರೌಢತನ ಕಾಣಬೇಕಾದರೆ ಇನ್ನೂ ಕೆಳಗೆ, ಪಂಜಾಬಿನ ಮೈದಾನಗಳಿಗೆ ಬರಬೇಕು. ಅದು ಸಿಂಧುವಿಗೆ ಸೇರಿ ಅರಬ್ಬೀ ಕಡಲಿಗೆ ಬೀಳುವುದನ್ನು ನೋಡಲು ನನಗೆ ಸಾಧ್ಯವಾಗಿಲ್ಲ.

ಹಿಮನದಿಗಳಿಗೆ ಸೊಕ್ಕು ಮತ್ತು ಅವಸರ ಜಾಸ್ತಿ. ಪರ್ವತಗಳಿಟ್ಟ ಮೊಟ್ಟೆಗಳಂತೆ ತೋರುವ ಬಂಡೆಗಳ ನಡುವೆ ಗರ್ಜಿಸುತ್ತಾ ಯುದ್ಧಕ್ಕೆಂಬಂತೆ ಅವು ಅಟಾಟೋಪದಿಂದ ಹೊರಡುತ್ತವೆ; ಇಳಿದುಬಾ ತಾಯಿ ಎಂದು ಅವನ್ನು ಕರೆಯುವ ಅಗತ್ಯವೇ ಇಲ್ಲ. ಉಕ್ಕಿ ಸೊಕ್ಕಿ ಕೆಳಗೆ ಮಿಲನಕ್ಕೆ ಕಾದಿರುವ ಕಣಿವೆಗಳತ್ತ ಧಾವಿಸುತ್ತವೆ- ಪಾರ್ವತಿಯನ್ನು ಕೂಡಲು ಧಾವಿಸುವ ಪರಶಿವನಂತೆ. ಕುಲುವಿನ ಬಗಲಿಗಿರುವ ಬಿಜಲಿ ಮಹಾದೇವನ ಪರ್ವತದಿಂದ ಪಾರ್ವತಿಯು ಬಿಯಾಸವನ್ನು ಕೂಡುವ ಅಪೂರ್ವ ದೃಶ್ಯವಿದೆ. ಅದು ನೀರಿನೆರಡು ಕಾಮನಬಿಲ್ಲುಗಳು ಏಕೀಭವಿಸಿದಂತೆ ಕಾಣುತ್ತದೆ.

ಪರ್ವತದಲ್ಲಿ ಹುಟ್ಟಿದ್ದರಿಂದ ಪಾರ್ವತಿ ಎಂಬ ಹೆಸರು. ಆದರೆ ನಿಜಕ್ಕೂ ಆಕೆ ಪಾರ್ವತಿಯಲ್ಲ. ಉಗ್ರಕಾಳಿ. ನೂರು ಆನೆಗಳು ಒಟ್ಟಿಗೆ ಘೀಳಿಟ್ಟಂತಹ ಅಬ್ಬರ ಅವಳದು. ಮಣಿಕರ್ಣಿಕೆಯಲ್ಲಿ ಆಕೆಯ ರೋಷಾವೇಶಕ್ಕೆ ಪಾರವೇ ಇಲ್ಲ. ಬಿಜಲಿ ಮಹಾದೇವ ಪರ್ವತದಿಂದ ಮಣಿಕರ್ಣಿಕೆಯ ತನಕ, ಮೂಡಣಕ್ಕೆ ಸುಮಾರು ನಲವತ್ತು ಕಿ.ಮೀ ಫಾಸಲೆಯಲ್ಲಿ, ಪಾರ್ವತಿ ದಂಡೆಯಲ್ಲಿ ಸಾಗುವ ನಡೆದಾರಿಯಿದೆ. ಅದರಲ್ಲಿ ನಡೆಯುವುದೇ ಒಂದು ರೋಚಕ ಅನುಭವ.

ಕೆಳಗೆ ಬಲಕ್ಕೆ ಕಿ.ಮೀ ಆಳದಲ್ಲಿ ಹರಿವ ಪಾರ್ವತಿ. ಎಡಕ್ಕೆ ಗೋಡೆಯಂತೆ ನಿಂತ ಪರ್ವತ. ಒಮ್ಮೆ ಮಣಿಕರ್ಣಿಕೆಗೆ ಸಮೀಪ ಪಾರ್ವತಿ ದಡದಲ್ಲಿ ಮಲಗುವ ಸಂದರ್ಭ ಬಂದಿತ್ತು. ರಾತ್ರಿಯೆಲ್ಲ ಜೋಗದ ಜಲಪಾತದ ಕೆಳಗೆ ಮಲಗಿದಂತೆ ಭೋರಿಡುವ ಸಪ್ಪಳ- ನೂರು ಜನರೇಟರುಗಳ ನಡುವೆ ಮಲಗಿದ ಹಾಗೆ. ಆದರೆ ದಣಿದ ದೇಹಕ್ಕೆ ಇದೇ ಅಬ್ಬರ ಜೋಗುಳವೂ ಆಯಿತು. 

ಉತ್ತರಕಾಶಿ ಜಿಲ್ಲೆಯಲ್ಲಿ ಯಮುನಾ ಕಣಿವೆಯಿದೆ. ಅಲ್ಲಿ ರುಪಿನ್ ಸುಪಿನ್, ಹರಕಿಧುನ್ ಮುಂತಾದ ಹಲವಾರು ಪುಟ್ಟಪುಟ್ಟ ಚಂದದ ಹೊಳೆಗಳು ಹುಟ್ಟಿ ಯುಮುನೆಯನ್ನು ಸೇರುತ್ತವೆ. ಪಾರ್ವತಿ ಬಿಯಾಸರಿಗೆ ಹೋಲಿಸಿದರೆ ಇವು ಅಷ್ಟು ಗದ್ದಲದವಲ್ಲ.

ಅದಕ್ಕೂ ಮುಂಚೆ ಯುಮನೆ ಹರಿಯುವ ಭಾರತದ ಅತ್ಯಂತ ರುದ್ರಮನೋಹರವಾದ ನದಿ ಕಣಿವೆ ಸಿಗುತ್ತದೆ. ಮಸೂರಿಯಿಂದ ಯಮನೋತ್ರಿಗೆ ಹೋಗುವ ಹಾದಿಯಲ್ಲಿ ನದಿದಡದಲ್ಲಿ ಅಜಮಾಸು 50 ಕಿ.ಮೀ. ಅಷ್ಟು ಉದ್ದಕ್ಕೆ ಇದನ್ನು ನೋಡಬಹುದು. ಈ ಹಾದಿಯಲ್ಲಿ ಸಿಗುವ ದಮ್ಟಾ ಎಂಬಲ್ಲಿ, ಯಮುನೆ ದೊಡ್ಡದೊಂದು ಪರ್ವತವನ್ನು ಬಳಸುತ್ತ ಕುದುರೆ ಲಾಳಾಕಾರದ ಬಾಗನ್ನು ಪಡೆದು, ಆಳವಾದ ಕಮರಿಯಲ್ಲಿ ಎಷ್ಟೋ ಮೈಲಿ ಹರಿವ ಚೆಲುವಾದ ದೃಶ್ಯ ಒಂದೇ ನೋಟಕ್ಕೆ ಕಾಣಸಿಗುತ್ತದೆ.

ಹಿಮನದಿಗಳಿಗೆ ಈ ಚೆಲುವಿನಾಚೆ ಇನ್ನೊಂದು ಮುಖವಿದೆ. ಅದು ರೈತಾಪಿ ಉಪಯುಕ್ತತೆ. ನಾವೊಮ್ಮೆ ಉತ್ತರಕಾಶಿ ಜಿಲ್ಲೆಯ ಗ್ಯಾನ್‌ಗಾಡ್ ಎಂಬ ಹೊಳೆ ತಟದಲ್ಲಿ ವಸತಿ ಹಾಕಿದ್ದೆವು. ಭಾರತದ ಕೊನೆಯ ಊರಾದ `ತಾಲೂಕಾ~ದಿಂದ ಸಾಂಕ್ರಿಗೆ ಬರುವ ರಸ್ತೆಯಲ್ಲಿ ಇದು ಸಿಗುತ್ತದೆ.

ಇದು ಎಂತಹ ಅಬ್ಬರದ ಹೊಳೆಯೆಂದರೆ, ದಡದ ದೊಡ್ಡ ಮರಗಳನ್ನೂ ಮಾತ್ರವಲ್ಲ ತನಗೆ ಕಟ್ಟುವ ಎಲ್ಲ ಸೇತುವೆಗಳನ್ನೂ ಕೆಡಹುತ್ತ ಬಂದಿದೆ. ಆದರೆ ಅಲ್ಲಿನ ಜನ ಇದನ್ನು ಉಪಾಯವಾಗಿ ತಿರುಗಿಸಿ, ದಡದಲ್ಲಿ ಹಿಟ್ಟುಬೀಸುವ ಗಿರಣಿ ಹಾಕಿದ್ದಾರೆ. ಹೊಳೆಯ ನಿದ್ದೆಗೆ ಬೀಸುಕಲ್ಲಿನ ಜೋಗುಳ.

ಅಪಾಯಕಾರಿಯಾದ ಹುಚ್ಚುಹೊಳೆಯೊಂದನ್ನು ಬೀಸುವ ಕಲ್ಲಿಗೆ ಕಟ್ಟಿ ಕೆಲಸ ತೆಗೆಯುತ್ತಿರುವ ಪರಿ ಖುಷಿ ಕೊಟ್ಟಿತು. ಹಿಮನದಿಗಳ ನಿಜವಾದ ಕೆಲಸ ಬಯಲು ಪ್ರದೇಶದಲ್ಲಿದೆ. ಅವು ಎಲ್ಲೋ ದೂರದಲ್ಲಿ ಕಾದಿರುವ ಹೊಲಗದ್ದೆಗಳೆಂಬ ಕೂಸುಗಳ ಪಾಲಿಗೆ ಈ ಹಾಲುಣಿಸಲು ಹೊರಟ ತಾಯಿಗಳಂತೆ ನನಗೆ ತೋರುತ್ತವೆ.

ಇವಿಲ್ಲದೆ ಬಂಗಾಳ, ಬಿಹಾರ, ಉತ್ತರ ಪ್ರದೇಶ, ಪಂಜಾಬುಗಳ ಪೈರುಪಚ್ಚೆ ಕಲ್ಪಿಸಿಕೊಳ್ಳುವಂತೆಯೇ ಇಲ್ಲ. ನಾವಿಲ್ಲಿ ತಿನ್ನುವ ಚಪಾತಿ ಅಥವಾ ಬ್ರೆಡ್ಡು ಪಂಜಾಬಿನ ಗೋಧಿಯಿಂದ ಮಾಡಿದ್ದಾಗಿತ್ತೆಂದರೆ, ಅದರಲ್ಲಿ ಹಿಮನದಿಗಳ ಹಾಲಿನ ಕೊಡುಗೆ ಇದೆಯೆಂದೇ ಅರ್ಥ.  

ಯಮುನೆಯ ಇನ್ನೊಂದು ಬಾಗು ಹರಿವನ್ನು ನಾನು ಕಂಡಿದ್ದು ಆಗ್ರಾದಲ್ಲಿ- ತಾಜಮಹಲಿನ ಹಿಂಬದಿ. ತಾಜಮಹಲಿನ ಬಿಳುಪಿನ ಹಿನ್ನೆಲೆಯಲ್ಲಿ. ಬಿಳಿಹಿಮದ ಹೊಟ್ಟೆಯಲ್ಲಿ ಹುಟ್ಟಿದ ಯಮುನೆಯಿಲ್ಲಿ ಕಪ್ಪನೆಯ ಕಾಳಿಂದಿಯಾಗಿ ಕಾಣುತ್ತಾಳೆ. ಇಲ್ಲಿನ ನೀರಿನಲ್ಲಿ ಮಲಗಿದ ಎಮ್ಮೆಗಳೂ ಕಾಣುವುದಿಲ್ಲ.

ವಿಪರೀತ ಮಲಿನಗೊಂಡ ಆಕೆ, ತನ್ನ ದುರವಸ್ಥೆಗೆ ಪರಿತಪಿಸುತ್ತ, ಶೋಕತಪ್ತೆಯಾಗಿ, ಬಾಳನ್ನು ಕೊನೆಗಾಣಿಸಲು ಕಡಲ ಮಸಣದ ಕಡೆ ಹೊರಟವಳಂತೆ ತೋರುತ್ತಾಳೆ. ನದಿಗಳ ಮೇಲೆ ಅತಿ ಹೆಚ್ಚು ದುರಾಚಾರ ನಡೆಯುವುದು ಅವುಗಳ ದಡದ ನಗರಗಳಿಂದ. ಯಮುನೆಯ ಕರುಣಾಜನಕ ಅವಸ್ಥೆ ದೆಹಲಿಯಿಂದಲೇ ಶುರುವಾಗುತ್ತದೆ. ಅಲ್ಲಿ ಅದರ ತಟದಲ್ಲಿ ಐದು ಮಿನಿಟು ನಿಲ್ಲುವುದಕ್ಕೂ ಆಗುವುದಿಲ್ಲ. ಇದೇ ಯಮುನೆಯೇನು ನಗರ ನೋಡುವ ಕುತೂಹಲಕ್ಕೆ ದನಗಾಹಿ ಹುಡುಗಿಯಂತೆ ಪರ್ವತವನ್ನು ಬಿಟ್ಟು ಓಡಿ ಬಂದವಳು? ಬಹುಶಃ ನಗರದೊಳಕ್ಕೆ ನುಗ್ಗಿಬರುವ ಎಲ್ಲ ನದಿಗಳ ಪಾಡಿದು. 

ಗಂಗೆಯ ಪಾಡು ಇದಕ್ಕಿಂತ ಬೇರೆಯಲ್ಲ. ಗಂಗೆಯ ಮೊದಲ ದರ್ಶನಕ್ಕೆ ಮನಸ್ಸು ಭಾವುಕವಾಗಿ ಹಾತೊರೆಯುತ್ತಿತ್ತು. ಕನ್ನಡ ಸಾಹಿತ್ಯದಲ್ಲಿ ಎಷ್ಟೊಂದು ಇದರ ಉಲ್ಲೇಖವಿದೆ.

ರಾಘವಾಂಕನ `ಹರಿಶ್ಚಂದ್ರ ಕಾವ್ಯ~ದಲ್ಲಿ ದೊರೆಯು `ನೆನೆವವರ ದುರಿತಾರಣ್ಯವ ಉರುಹಲು ಸಮರ್ಥೆಯಹ ಗಂಗೆ~ಯಲ್ಲಿ `ಮರುಜೇವಣಿಯನು ಸವಿದಮೃತಮಂ ಕುಡಿದಂತೆ~ ಸಂಭ್ರಮಿಸುತ್ತ ಮೀಯುವ ಚಿತ್ರವು ನೆನಪಾಯಿತು; `ಗಂಗವ್ವ ಗಂಗಾಮಾಯಿ~ ಕಾದಂಬರಿಯಲ್ಲಿ ಗಂಗವ್ವ ತನ್ನ ಗಿಂಡಿಯಲ್ಲಿದ್ದ ಗಂಗಾಮಾಯಿಯನ್ನು ಹೊರಚೆಲ್ಲುವ ದೃಶ್ಯವೂ ನೆನಪಾಯಿತು; ರಾಮಚಂದ್ರಶರ್ಮರ `ಹರಿದ್ವಾರ-ಹೃಷಿಕೇಶ~ ಕವನವೂ ನೆನಪಾಯಿತು.

ಹರಿದ್ವಾರದಲ್ಲಿ ನದಿಯ ತಗುಲಿಕೊಂಡಂತೆ ಕಟ್ಟಿರುವ ಧರ್ಮಛತ್ರದಲ್ಲಿ ಉಳಿಕೆ ಮಾಡಿದೆವು. ಗಂಗೆಯ ಮೇಲೆ ಸೂರ‌್ಯನ ಬಿಸಿಲು ಬಿದ್ದು ಅಲೆಗಳು ಕತ್ತಿಯಲಗಿನಂತೆ ಥಳಥಳಿಸುವ ನೋಟ ಛತ್ರದೊಳಗೆ ಕೂತರೂ ಸಿಗುತ್ತಿತ್ತು. ಮೀಯುವ ಆಸೆಯಿಂದ ನಾನು, ಮಿತ್ರರಾದ ವಿಕ್ರಮ ವಿಸಾಜಿ, ಅರುಣ್ ಜೋಳದಕೂಡ್ಲಿಗಿ ನೀರಿಗಿಳಿದೆವು.

ರಭಸವಿಲ್ಲದ ಮಾಸಲು ನೀರು. ನಾನು ಈಸುಬಿದ್ದೆ. ಏನೊ ಕಟ್ಟಿಗೆಯೊಂದು ಅಡ್ಡ ತಾಕಿದಂತಾಯಿತು. ನೋಡಿದರೆ ಬಿಳಿಬಟ್ಟೆಯಲ್ಲಿ ಸುತ್ತಿದ್ದ ತಾಜಾ ಕಳೇಬರ.
ಗಾಬರಿಯಿಂದ ದಡಕ್ಕೋಡಿ ಬಿದ್ದೆ. ಶವವು ಅಲ್ಲಿ ದಡದಲ್ಲಿ ಸಿಲುಕಿಕೊಂಡಿತು. ಅಲ್ಲಿದ್ದ ಹುಡುಗರು ಮಾಮೂಲಿ ಎಂಬಂತೆ ದೊಣ್ಣೆಯಿಂದ ಅದನ್ನು ಮತ್ತೆ ನೀರಿನ ಸೆಳವಿಗೆ ನೂಕಿದರು.

ಪಾಪನಾಶಿನಿ ಎಂಬ ಜನರ ನಂಬಿಕೆಯಿಂದ ಅತಿ ಹೆಚ್ಚು ಮಲಿನಗೊಳ್ಳುವ ದುರವಸ್ಥೆ ಗಂಗೆಯದು. ಈ ಅವಸ್ಥೆ ಗಂಗೆಯ ಶಾಖೆಯಾದ ಕೊಲ್ಕತ್ತೆಯ ಹೂಗ್ಲಿಯಲ್ಲೂ ಕಾಣಸಿಗುತ್ತದೆ. ಹೂಗ್ಲಿಯು ಬಂಗಾಳ ಸಮುದ್ರ ಸೇರುವ ಸಾಗರ ದ್ವೀಪದಲ್ಲಿ, ಕಡಲು ಸಹ ಕೆಸರಾಗಿತ್ತು. ನದಿಮೂಲವನ್ನಾದರೂ ಅರಸಬಹುದು, ಅದರ ಅಳಿವೆಯನ್ನಲ್ಲ.

ನಾಥರಲ್ಲಿ ದೀಕ್ಷೆ ಪಡೆದವರು, ಒಂದು ನದಿದಡ ಹಿಡಿದು ಅದು ಹುಟ್ಟುವ ಜಾಗದವರೆಗೆ ಹೋಗಿ, ತಿರುಗಿ ಇನ್ನೊಂದು ದಡದಲ್ಲಿ ಅದು ಕಡಲಿಗೆ ಸೇರುವ ತನಕ ಚಾರಣ ಮಾಡುವ ಪದ್ಧತಿಯಿದೆ.

ಬಾಳಿನ ಲೌಕಿಕ-ಅಲೌಕಿಕವೆಂಬ ಎರಡೂ ದಡಗಳ ಅನುಭವವಾಗಲಿ ಎಂಬ ಸಾಂಕೇತಿಕ ತಿರುಗಾಟವಿರಬೇಕು ಇದು. ಈಗ ನದಿದಡಗಳಲ್ಲಿ ನಡೆದು ಹೋದರೆ, ಅವನ್ನು ನಾವೆಷ್ಟು ಹದಗೆಡಿಸಿದ್ದೇವೆ ಎಂದು ಗಾಬರಿ ಆಗುತ್ತದೆ. ಬಹುಶಃ ನಾವು ರೂಢಿಸಿಕೊಂಡಿರುವ ಜೀವನ ವಿಧಾನದಲ್ಲಿ, ಆಸ್ವಾದನೆ, ಆರಾಧನೆ ಮತ್ತು ಉಪಯುಕ್ತತೆಗಳ ಜತೆ, ಮಲಿನತೆಯೂ ಅನಿವಾರ್ಯ ಆಗಿದೆ ಅಥವಾ ಮಲಿನತೆಯೀಗ ನದಿಯೆಂಬ ಮಾಯಿಯ ನಾಲ್ಕನೆಯ ಮುಖವಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT