ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಂಗಸ್ರಿಗೆ ಹೆಣ್ತನ ಭಾರವಾದ್ರೆ; ಗಂಡಸರಿಗೆ ಗಂಡಸ್ತನವೇ ಭಾರ!

Last Updated 24 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ತನ್ನ ಪ್ರೊಫೆಸರ್ರು ಕಾಂಪ್ರಮೈಸ್ ಮಾಡಿಕೋ ಅಂತ ನೇರಾನೇರ ಹೇಳಿದ್ದು ಕೇಳಿ ನನ್ನಿಗೆ ಮೈ ನಡುಗಿ ಹೋಗಿತ್ತು. ಇತ್ತ ಆ ಸಮಸ್ಯೆ ತಮ್ಮ ಉಡಿಗೆ ಬಂದು ಬಿದ್ದುದ್ದರಿಂದ ಹುಡುಗಿಯರಿಗೂ ಒಂದು ಥರಾ ನೈತಿಕ ಭಾರ ತಲೆಯ ಮೇಲೆ ಏರಿ ಕುಂತಂತೆ ಆಗಿತ್ತು. ‘ಥತ್! ನಮಗ್ಯಾಕೆ ಹೇಳಿದ್ಲು ಈ ಹುಡುಗಿ? ಸುಮ್ನೆ ಈ ಹೆಣ ನಂ ಭುಜದ ಮೇಲೆ ಬಂದಂಗೆ ಆಯ್ತಲ್ಲ?’ ಎಂದು ವಿಜಿ ತನಗೆ ತಾನೇ ಮಾತಾಡಿಕೊಂಡಳು.

ಅದನ್ನು ಕೇಳಿಸಿಕೊಂಡ ರಶ್ಮಿಯೂ ಆ ಯೋಚನಾಲಹರಿಯನ್ನು ಅನುಮೋದಿಸಿದಳು. ‘ಹೌದು. ನಮಗೆ ಗೊತ್ತಾಗಿರಲಿಲ್ಲ ಅಂದ್ರೆ ನೆಮ್ಮದಿಯಾಗಿ ಇರಬಹುದಿತ್ತು. ಈಗ್ ನೋಡಿದ್ರೆ ಸಹಾಯ ಮಾಡಕ್ಕಾಗಲ್ಲ, ಸುಮ್ನೆ ಇರಕ್ಕಾಗಲ್ಲ ಅನ್ನೋ ಹಾಗಾಗಿದೆ’ ಎಂದಳು. ಇಂದುಮತಿ ಮಾತ್ರ ಈ ಇಬ್ಬರ ಆಲೋಚನಾಕ್ರಮವನ್ನು ಉಗ್ರ ಬೈಗುಳಗಳಿಂದ ಖಂಡಿಸಿ, ಅವರ ಜನ್ಮ ಜಾಲಾಡಿದಳು. 

‘ಏನೋ ಕಷ್ಟ ಅಂತ ಹೇಳ್ಕೊಂಡಿದಾಳೆ. ತೊಂದರೆ ನಿಮಗೆ ಅಲ್ವಲ್ಲ ಆಗಿರೋದು? ಸಹಾಯ ಮಾಡೋಕೆ ಸಾಧ್ಯ ಆದರೆ ಮಾಡೋದಪ್ಪ. ಇಲ್ಲಾಂದ್ರೆ ನಮ್ ಕೈಲಿ ಏನೂ ಆಗಲ್ಲ ಅಂತ ಸುಮ್ಮನಾಗೋದು. ಅದು ಬಿಟ್ಟು ಅವಳು ಹೇಳಿದ್ದೇ ತಪ್ಪು ಅಂದರೆ? ಅವಳಿಗೆ ಕಷ್ಟ ಫೇಸ್ ಮಾಡೋಕೆ ಒಂದಷ್ಟು ಬಲವನ್ನಾದ್ರೂ ಕೊಡಬಹುದಲ್ವಾ?  ಯಾವ್ ಸೀಮೆ ಹೆಂಗಸ್ರೇ ನೀವು? ನಿಮಗಿಂತ ಆವತ್ತು ಇವಳನ್ನು ಅತ್ಯಾಚಾರ ಮಾಡ್ತೀನಿ ಅಂತ ಹೇಳಿದ್ನಲ್ಲ ಆ ಶಿವರಾಜನೇ ವಾಸಿ. ಕನಿಷ್ಠ ಮನಸ್ಸಿನಲ್ಲಿ ಇರೋ ವಿಕೃತಿನಾದ್ರೂ ಹೊರಗೆ ಹಾಕಿದ. ನೀವ್ ನೋಡಿ, ಗುಮ್ಮನ ಗುಸುಕೀರು.

ಬರೀ ಮಾತಾಡೋಕೆ ಬಂದ್ರೆ ಎಲ್ಲರೂ ಹೆಣ್ಮಕ್ಕಳು ಸ್ಟ್ರಾಂಗ್ ಆಗಬೇಕು ಹಂಗೆ ಹಿಂಗೆ ಅಂತ ಹೇಳೋವ್ರೇ. ಸಮಸ್ಯೆ ಬುಡಕ್ಕೆ ಬಂದು ಬಿದ್ರೆ ನಮಗ್ಯಾಕಪ್ಪ ಅಂತ ಬಚ್ಚಿಟ್ಟುಕೋತೀರಿ’ ಇಂದುಮತಿ ಸಿಡಿಸಿಡಿದು ಮಾತನಾಡುತ್ತಿದ್ದರೆ ಉಳಿದವರು ತಾವೇನು ತಪ್ಪು ಮಾಡಿದೆವು  ಎಂದು ಬಾಯಿ ಬಿಟ್ಟು ನೋಡುತ್ತಿದ್ದರು.

‘ಅವಳು ನಮ್ಮ ಹತ್ತಿರ ಹೇಳಿದ್ದು ತಪ್ಪು ಅನ್ನಲಿಲ್ಲ ಇಂದೂ. ಅವಳು ಸಹಾಯ ಕೇಳ್ತಾ ಇದಾಳೆ ಅಂತ ನಮಗೂ ಅರ್ಥ ಆಗುತ್ತೆ. ಆದರೆ ಈ ವಿಷಯದಲ್ಲಿ ನಾವೇನು ಮಾಡೋಕೆ ಸಾಧ್ಯ ಹೇಳು? ಅವಳ ಪ್ರೊಫೆಸರ್‌ಗೆ ಹೆದರಿಸೋಕೆ ಆಗುತ್ತಾ? ಆ ಮನುಷ್ಯ ಯಾರೋ ಏನೋ ನಮಗೆ ಒಂದೂ ಗೊತ್ತಿಲ್ಲ. ನಾವೇನು ಸ್ಟೂಡೆಂಟ್ ಯೂನಿಯನ್ನೋರಾ ಅಥವಾ ಅಧಿಕಾರವಂತರ ಮಕ್ಕಳಾ? ನಾವೇನೋ ಹೇಳಿಕೊಟ್ಟು ಅವಳೇನೋ ಮಾಡೋಕೆ ಹೋಗಿ ಒಂದು ಹೋಗಿ ಇನ್ನೊಂದಾದ್ರೆ ಕಷ್ಟ. ನಾವೂ ಇದರಲ್ಲಿ ಹೆಲ್ಪ್‌ಲೆಸ್ ಅಲ್ವಾ?’ ಎಂದು ವಿಜಿ ವಿವರಿಸಿದಾಗ ಇಂದುಮತಿಗೆ ಸಿಟ್ಟು ನಿಧಾನವಾಗಿ ಇಳಿದು ವಿಷಯದ ಬೇರೆ ಆಯಾಮಗಳೂ ತಲೆಯಲ್ಲಿ ಬಿಚ್ಚಿಕೊಳ್ಳತೊಡಗಿದವು.

ಸಹಾಯ ಮಾಡಬೇಕನ್ನೋದೇನೋ ಸರೀನೇ... ಆದರೆ ಹೇಗೆ? ತಾವೂ ಅವಳಂತೇ ಸ್ಟೂಡೆಂಟ್ಸು. ಈ ವಿಷಯವನ್ನು ಬೇರೆಯವರ ಹತ್ತಿರ ಹೇಳುವ ಅಧಿಕಾರ ತಮಗಿಲ್ಲ, ಯಾಕೆಂದರೆ ಇದು ನನ್ನಿಗೆ ಸಂಬಂಧಪಟ್ಟ ವಿಷಯ. ಆದರೆ ಅವಳಿಗೆ ಹೆಚ್ಚಿನ ಸ್ನೇಹಿತರು ಇರುವಂತಿಲ್ಲ. ಅಲ್ಲದೆ ಪ್ರೊಫೆಸರ್ ವಿರುದ್ಧ ನಿಲ್ಲೋಕೆ ಜನಬಲ ಬೇಕು. ತಮ್ಮನ್ನ ಬೆಂಬಲಿಸುವ ನೆಟ್‌ವರ್ಕ್ ಅಥವಾ ಆಧಾರಗಳಂತೂ ಇಲ್ಲವೇ ಇಲ್ಲ. ಹಾಗಂತ ಈ ವಿಷಯದಿಂದ ಸಂಪೂರ್ಣವಾಗಿ ತಮ್ಮನ್ನು ತಾವು ಬಿಡಿಸಿಕೊಳ್ಳೋಕೆ ಸಾಧ್ಯವೇ? ಆಗಬಹುದೇನೋ. ಆದರೆ ಹಾಗೆ ಮಾಡಿದ ಮೇಲೆ ಆತ್ಮಸಾಕ್ಷಿ ಕುಟುಕದೆ ಬಿಡುತ್ತಾ? 

‘ಇದೊಂಥರಾ ಪ್ರಾಬ್ಲಂ ಕಣೆ. ಕಷ್ಟ ಹೇಳ್ಕೋಳೋರು ಇನ್ನೊಬ್ರ ಹತ್ರ ಮಾತಾಡಿ ಹಗುರ ಆಗ್ತಾರೆ. ಆದರೆ ಆ ದೆವ್ವ ಇನ್ನೊಬ್ಬರ ಹೆಗಲು ಏರಿ ಕೂತುಬಿಡುತ್ತೆ. ಸುಮ್ಮನೆ ಟೈಮ್ ಪಾಸ್ ಅಂತ ಕೆಲವರು ಕೇಳಬಹುದು. ಆದರೆ ಪ್ರತಿಕ್ರಿಯಿಸದೆ ಇರೋದು ಕಷ್ಟ ಅಲ್ವಾ? ಈಗ ನೋಡು, ನನ್ನಿ ಆರಾಮಾಗಿ ಕೂತಿರಬಹುದು. ನಾವಿಲ್ಲಿ ಅವಳ ಸಮಸ್ಯೆಗೆ ಪರಿಹಾರ ಹುಡುಕಿಕೊಂಡು ಜಗಳ ಆಡ್ತಾ ಇದೀವಿ. ಥತ್ ಎಲ್ ಹೋಗಿ ಸಾಯ್ಲಿ!’ ವಿಜಿಗೆ ರೊಂಯ್ ಅಂತ ಸಿಟ್ಟು ಬಂತು.  ರಶ್ಮಿ ಸಮಾಧಾನವಾಗಿ ಯೋಚಿಸುತ್ತ ಹೇಳಿದಳು. ‘ಇಂದೂ, ನನ್ನಿ ರೂಮಿಗೆ ಹೋಗಿ ಅವಳನ್ನ ಕರ್ಕೊಂಡು ಬಾ. ನಾಳೆನೇ ಎಕ್ಸಾಮು. ನಾವು ಅವಳಿಗೆ ಪರಿಹಾರ ಸೂಚಿಸೋದಿದ್ರೆ ಇವತ್ತೇ ಅದೆಲ್ಲ ಮುಗೀಬೇಕು’

ಇಂದುಮತಿಗೆ ಹಿಂಗೆಲ್ಲ ಇನ್ನೊಬ್ಬರ ರೂಮಿಗೆ ಹೋಗಿ ಬಾಗಿಲು ತಟ್ಟಿ ಅಭ್ಯಾಸ ಇರಲಿಲ್ಲ. ಅವಳದ್ದೇನಿದ್ದರೂ ಆನೆ ಪಥ. ತಾನು ತುಳಿದದ್ದೇ ದಾರಿ; ಇಲ್ಲದಿದ್ರೆ ಪರಾರಿ. ‘ಅಹಹಹಹ!ಅಮ್ಮಣ್ಣೀ ನಾನ್ ಹೋಗಲ್ಲ. ಮೊನ್ನೆ ತಾನೇ ಲೆಸ್ಬಿಯನ್ಸು ಸಲಿಂಗ ಅಂತೆಲ್ಲ ಮಾತಾಡಿದೀರ. ನಾನು ಒಬ್ಬಳೇ ಅವಳ ರೂಂ ಬಾಗಿಲು ತಟ್ಟಿ ಅವಳು ನನ್ನ ತಪ್ಪ್ ತಿಳ್ಕೊಂಡು ಬಿಟ್ರೆ? ಅದೆಲ್ಲ ಆಗಲ್ಲ. ಮುಚ್ಕೊಂಡು ನೀವೂ ಯಾರಾದ್ರೂ ಜೊತೆಗೆ ಬನ್ನಿ. ಲೈ ಬಾರೇ! ಹೋಗ್ ಬರಾನಾ!’ ಎಂದು ಈಶ್ವರಿಯನ್ನು ಕರೆದಳು.

‘ನಾನು ನಿನ್ನ ಜೊತೆ ಓಡಾಡ್ತಾ ಇದ್ರೆ ಯಾರೂ ತಪ್ಪ್ ತಿಳ್ಕೊಳಲ್ವಾ? ನಂಗಿನ್ನೂ ಬಾಯ್ ಫ್ರೆಂಡೇ ಸಿಕ್ಕಿಲ್ಲ!’ ಈಶ್ವರಿ ತಮಾಷೆ ಮಾಡಿದಳು.‘ಅಕ್ಕ! ಮುಚ್ಕೊಂಡು ಬಾರಕ್ಕ, ನಿನ್ ಬಾಯಿನಾ!’ ನನ್ನಿಯ ರೂಮಿಗೆ ಹೋಗಿ ಬಾಗಿಲು ಬಡಿದರೆ ಒಳಗಿನಿಂದ ಸದ್ದೇ ಇಲ್ಲ. ಎರಡು ಮೂರು ಸಾರಿ ಬಡಿದರೂ ಅಷ್ಟೇ. ಇಂದುಮತಿ ಜೋರಾಗಿ ಬಾಗಿಲು ಬಡಿಯುತ್ತಾ ಈಶ್ವರಿಯತ್ತ ನೋಡಿದಳು. ಇಬ್ಬರಿಗೂ ಹೇಳಲಾರದಂಥ ಗಾಬರಿ ಮನಸ್ಸಿನಲ್ಲಿ ಮೂಡಿತು. ಇನ್ನೊಂದು ಸಾರಿ ಜೋರಾಗಿ ಗುದ್ದಿ ನೋಡು ಅಂತ ಈಶ್ವರಿ ಇಂದುವಿಗೆ ಸನ್ನೆ ಮೂಲಕ ತೋರಿಸಿದಳು. ಇಬ್ಬರ ಗಂಟಲೂ ಒಣಗತೊಡಗಿತ್ತು.

‘ಇವ್ಳೇನೇ? ಬಾಗ್ಲೇ ತೆಗೆಯೋ ಹಂಗಿಲ್ಲ? ಏನಾದ್ರೂ...’ ಎನ್ನುವ ಮಾತನ್ನು ಇಂದುಮತಿ ಪೂರ್ಣಗೊಳಿಸುವ ಮುನ್ನವೇ ಬಾಗಿಲು ಧಡ್ ಎಂದು ತೆಗೆದುಕೊಂಡಿತು. ಒಳಗೆ ನೋಡಿದರೆ ನನ್ನಿ ಹುಲ್ಲಿನ ಮೆದೆ ಮೇಲೆ ನಾಯಿ ಮರಿ ಮಲಗಿದಷ್ಟು ಅನಾಯಾಸವಾಗಿ, ಮುಗ್ಧವಾಗಿ, ಅಷ್ಟೇ ನಿಶ್ಚಿಂತವಾಗಿ ನಿದ್ದೆ ಮಾಡಿದ್ದಳು. ಆದರೆ, ಮನಸ್ಸಿನಲ್ಲಿ ಒಮ್ಮೆ ಸಂಶಯ ಮೂಡಿದರೆ ಎಲ್ಲವನ್ನೂ ಆ ಭೂತಗಾಜಿನ ಮೂಲಕವೇ ನೋಡುವುದು ಮನುಷ್ಯ ಗುಣ.

ಹಾಗಾಗಿ ನನ್ನಿಯ ನಿದ್ದೆಯನ್ನು ಬರೀ ನಿದ್ದೆಯೆಂದು ಪರಿಗಣಿಸಲಾಗದೆ ಇಂದೂ ಹಾಗೂ ಈಶ್ವರಿ ಅವಳ ಸುತ್ತಲೂ ಗುಳಿಗೆ ಬಾಟಲಿಯ ಥರದ ಸಿನಿಮೀಯ ಲಕ್ಷಣಗಳುಳ್ಳ ವಸ್ತುವಿಗೆ ಹುಡುಕಾಟ ನಡೆಸಿದರು. ಏನೂ ಕಾಣಿಸದೇ ಹೋದಾಗ ಒಬ್ಬಳಿಗೆ ಅನುಮಾನ ಹೆಚ್ಚಾದರೆ, ಇನ್ನೊಬ್ಬಳಿಗೆ ಸಂಶಯ ನಿವಾರಣೆಯಾಯಿತು. ನನ್ನಿ ಅಂತೂ ಇಂತೂ ಕಣ್ಣು ತೆರೆದು ಇಬ್ಬರನ್ನೂ ನೋಡಿ ರಪ್ ಎಂದು ಎದ್ದು ಕೂತಳು.

ಕೆದರಿದ ಕೂದಲನ್ನು ತುರುಬು ಕಟ್ಟಿಕೊಳ್ಳುತ್ತಾ ಕಣ್ಣು ಕಿರಿದು ಮಾಡಿಕೊಂಡು, ‘ರೂಂ ಬಾಗಿಲು ಹಾಕಿರ್ಲಿಲ್ವಾ?’ ‘ಹಾಕ್ದೆ ಏನು? ಹಾಕಿತ್ತು!’ ಇಂದು ಉತ್ತರಿಸಿದಳು. ‘ಮತ್ತೆ, ಹೌ ಡಿಡ್ ಯು ಕಮ್ ಇನ್? ಹೇಗೆ ಒಳಗೆ ಬಂದ್ರಿ?’ ಬಹಳ ಸಂದಿಗ್ಧವಾದಾಗ ಅಥವಾ ಮಾನಸಿಕ ಕ್ಷೋಭೆಯಾದಾಗ ನನ್ನಿ ಒಂದೇ ಮಾತನ್ನು ಎರಡು ಭಾಷೆಯಲ್ಲಿ ಹೇಳುತ್ತಿದ್ದಳು. ಒಂಥರಾ ಇಂಗ್ಲಿಷ್ ಸಬ್ ಟೈಟಲ್ ಇರುವ ಸೀರಿಯಲ್ಲುಗಳನ್ನು ಈಗ ನೋಡ್ತೀವಲ್ಲ, ಹಾಗೆ! ‘ಹೌದು. ಇದು ಅದ್ಯಾವ್ದೋ ಪಿಚ್ಚರ್‌ನಲ್ಲಿ ಇರುತ್ತಲ್ಲ ಆ ಥರ ಆಯ್ತು ಕಣೇ. ಬಾಗಿಲ ಮುಂದೆ ನಿಂತು ಸೇಸಮ್ಮ, ಸೇಸಮ್ಮ ಬಾಗಿಲು ತೆಗಿ ಅಂತ ಕೂಗಿದ್ವಿ... ಬಾಗಿಲು ತಕ್ಷಣ ಓಪನ್ ಆಯ್ತು!’ ಎಂದು ನಕ್ಕಳು ಇಂದುಮತಿ.

‘ಥತ್! ನಿನ್ನಜ್ಜಿ!’ ‘ಅಲ್ಲಾ ನನ್ನಿ, ನಿನ್ ವಿಷಯಕ್ಕೆ ನಾವಲ್ಲಿ ತಲೆ ಕೆಡಿಸಿಕೊಂಡು ಕೂತಿದ್ರೆ ನೀನಿಲ್ಲಿ ನೆಮ್ಮದಿಯಾಗಿ ನಿದ್ದೆ ಮಾಡ್ತೀಯಲ್ಲ? ನಾಚ್ಕೆ ಆಗಲ್ವಾ? ನಮ್ಮನ್ನೆಲ್ಲಾ ಕಷ್ಟಕ್ಕೆ ತಳ್ಳಿ ತಾನು ಮಾತ್ರ...’ ‘ಸರಿ. ನಾನೇನ್ ಮಾಡ್ಬೇಕಿತ್ತು? ತಲೆ ಕೆಡಿಸಿಕೊಂಡು ಊಟ ನಿದ್ದೆ ಇಲ್ಲದೆ ಶಂಖ ಹೊಡೀಬೇಕಿತ್ತಾ? ಆವಾಗ ಏನ್ ಉಪಯೋಗ ಆಗ್ತಿತ್ತು? ಪ್ರೆಟಿ ಮಚ್ ದ ಸೇಮ್ ಥಿಂಗ್! ಪ್ರಾಬ್ಲಂ ಇದೆ. ಸಾಲ್ವ್ ಮಾಡ್ಕೋಬೇಕು. ಫ್ರೆಂಡ್ಸ್ ಇದಾರೆ. ಹೆಲ್ಪ್ ಮಾಡ್ತಾರೆ. ಹೀಗೆ ನಂಬೋದು, ಈಸ್ ದಿಸ್ ರಾಂಗ್? ಟೆಲ್ ಮಿ’  ‘ಅದೂ ಸರಿಯನ್ನು. ಆದ್ರೆ ಫ್ರೆಂಡ್ಸಿಗೂ ಹೆಲ್ಪ್ ಮಾಡೋ ದಾರಿ ಗೊತ್ತಿಲ್ಲದೆ ಇದ್ರೆ?’

‘ಅಧೆಂಗೆ ಗೊತ್ತಿರಲ್ಲ? ಎಲ್ರೂ ಕೂತ್ರೆ ಏನೋ ಒಂದು ದಾರಿ ಹೊರಡುತ್ತೆ’ ನನ್ನಿ ಬಹಳ ಆಶಾಭಾವನೆಯಿಂದ ಮಾತಾಡುತ್ತಿರುವುದನ್ನು ನೋಡಿ ಇಂದುಮತಿಗೆ ಸೋಜಿಗವಾಗಿ, ನಿನ್ನೆ ಅಳುತ್ತಾ ಕೂತಿದ್ದ ಹುಡುಗಿ ಇದೇನಾ ಅನ್ನಿಸಿತು. ‘ಸರಿ ಮತ್ತೆ. ಬಾ ರೂಮಿಗೆ. ಅಲ್ಲೇ ಮಾತಾಡೋಣ. ರೂಮಲ್ಲಿ ಬೇರೆಯೋರೂ ಇದಾರೆ’.

ಎಲ್ಲರೂ ರೂಮಿನಲ್ಲಿ ಸೇರಿದರು. ಮೊದಲ ಮಾತನ್ನು ನನ್ನಿಯೇ ಆಡಿದಳು. ‘ಲುಕ್ ನನ್ನ ವಿಷಯದಿಂದ ನಿಮಗೆಲ್ಲಾ ತೊಂದ್ರೆ ಆಗಿದ್ರೆ ಐ ಅಮ್ ಸಾರಿ. ಆದರೆ ನನಗೆ ಇಲ್ಲಿ ಹೆಚ್ಚು ಫ್ರೆಂಡ್ಸ್ ಇಲ್ಲ. ಅದಕ್ಕಾಗಿ ಅನಿವಾರ್ಯವಾಗಿ ನಿಮ್ಮ ಬಳಿ ಹೇಳಿಕೋಬೇಕಾಯ್ತು. ಈಗ ನನ್ನ ಮುಂದೆ ಇರೋದು ಒಂದು ಸಮಸ್ಯೆ. ಎರಡು ದಾರಿ. ಒಂದೋ ನಾನು ಪ್ರೊಫೆಸರ್ ಜೊತೆ ‘ಕಾಂಪ್ರಮೈಸ್’ ಮಾಡಿಕೊಂಡು ಒಳ್ಳೇ ಮಾರ್ಕ್ಸ್ ಗಿಟ್ಟಿಸಿಕೊಳ್ಳೋದು. ಅಥವಾ ಅವನನ್ನು ವಿರೋಧಿಸಿ, ಬರುವ ಫಲವನ್ನು, ಕಾನ್ಸಿಕ್ವೆನ್ಸಸ್ ಅನ್ನು ಫೇಸ್ ಮಾಡೋದು.

ಇವೆರಡು ದಾರಿ ಬಿಟ್ಟರೆ ನನ್ನ ಜೀವನದ ಮುಂದೆ ಇನ್ನು ಇಪ್ಪತ್ತನಾಲ್ಕು ಗಂಟೆಯಲ್ಲಿ ಇನ್ಯಾವ ಆಯ್ಕೆಯೂ ಇಲ್ಲ. ಇನ್ನೇನು ಮಾಡಿದರೂ ನನಗೆ ಡಿಗ್ರಿ ಸಿಕ್ಕಲ್ಲ ಅಥವಾ ಸಿಕ್ಕುತ್ತೆ – ಈ ಎರಡೇ ವಿಷಯಗಳು ಸಂಭವಿಸೋದು. ಸೋ ಹೆಚ್ಚು ಯೋಚಿಸಕ್ಕೆ ಏನೂ ಇಲ್ಲ’ ‘ನಿನಗೆ ಯಾವ ದಾರಿ ಒಪ್ಪಿಗೆ?’ ವಿಜಿ ಕೇಳಿದಳು.
‘ನನಗೆ ಸಹಜವಾಗೇ ಎರಡನೇ ದಾರಿಯೇ ಓಕೆ. ಆದರೆ, ನನ್ನ ಮೇಲೆ ನನ್ನ ತಂದೆ ತಾಯಿ ಜೀವ ಇಟ್ಕೊಂಡಿದಾರೆ.

ಇಲ್ಲಿ ಕಳೆದ ಎರಡು ವರ್ಷದ ನಂತರ ನಾನು ಡಿಗ್ರಿ ಸರ್ಟಿಫಿಕೇಟ್ ತಗೊಂಡು ಹೋಗ್ತೀನೋ ಬಿಡ್ತೀನೋ ಗೊತ್ತಿಲ್ಲ. ಆದರೆ ನನಗೆ ಈ ಥರಾ ಪ್ರಾಬ್ಲಂ ಆಯಿತು ಅಂತ ಗೊತ್ತಾದ್ರೆ ನನ್ನ ಮತ್ತೆ ಬೇರೆಲ್ಲಿಗಾದರೂ ಕಳಿಸಕ್ಕೆ ಹೆದರ್ತಾರೆ. ಹಾಗಾಗಿ ಎರಡನೇ ದಾರಿ ಸ್ಪಷ್ಟವಾಗಿ ಓಕೆ ಅಲ್ಲದಿದ್ದರೂ ನಾನು ಮೊದಲನೇ ದಾರಿಯನ್ನು ತುಳಿಯಲಾರೆ... ಹಾಗಾಗಿ ಎರಡನೇ ಆಯ್ಕೆಯೇ ಸರಿ’

‘ನೈತಿಕವಾಗಿ ಹೀಗೆ ‘ಕಾಂಪ್ರಮೈಸ್’ ಮಾಡಿಕೋ ಬಾರದು ಅನ್ನುವ ಆಲೋಚನೆಯನ್ನು ಪಕ್ಕಕ್ಕಿಟ್ಟೂ ನೋಡು. ಅಕಸ್ಮಾತ್ ಒಂದು ಸಾರಿ ಕಣ್ಣು ಮುಚ್ಚಿಕೊಂಡು ಪ್ರೀತಿಯಿಲ್ಲದೆ ಉಂಟಾಗುವ ಒಂದು ಕೆಟ್ಟ ಅನುಭವವನ್ನು ದಾಟಿ ಬಿಟ್ಟರೆ ನಿನ್ನ ಡಿಗ್ರಿ ಸರ್ಟಿಫಿಕೇಟ್ ಸಿಕ್ಕುತ್ತೆ. ನಿನ್ನ ಮುಂದಿನ ಜೀವನವೂ ಈಸಿ ಅನ್ನಿಸಲ್ವಾ ನಿನಗೆ? ಉದಾಹರಣೆಗೆ, ಆ ಕಾಂಪ್ರಮೈಸ್ ಅನ್ನು ನೀನು ಒಂದು ಘೋರವಾದ ಆಕ್ಸಿಡೆಂಟಿನ ರೀತಿ ನೋಡುವುದಾದರೆ, ಅಂದರೆ ಜಸ್ಟ್ ಲೈಕ್ ಆ್ಯನ್ ಇನ್ಸಿಡೆಂಟ್? ನಾನು ಇದನ್ನ ಅನುಮೋದಿಸ್ತಾ ಇಲ್ಲ. ಆದರೆ ನಿನ್ನ ಆಯ್ಕೆಯನ್ನು ಇನ್ನೂ ಸ್ಪಷ್ಟ ಮಾಡಿಕೊಳ್ಳಕ್ಕೆ ಇದೊಂದು ಆರ್ಗ್ಯುಮೆಂಟ್ ಅಷ್ಟೆ’ ವಿಜಿಗೆ ಸಮಸ್ಯೆಯ ಆಯಾಮಗಳನ್ನು ಗ್ರಹಿಸುವ ಒಂದು ವಿಶೇಷ ದೃಷ್ಟಿಕೋನ ಇತ್ತು.

‘ಹಾಗೂ ನೋಡಬಹುದು. ಬಹಳ ಜನ ಆ ದಾರಿ ಹಿಡೀತಾರೆ ಅನ್ನೋದೂ ನನಗೆ ಗೊತ್ತು. ಅದು ತಪ್ಪು  ಎಂದು ಖಡಾಖಂಡಿತವಾಗಿ ಹೇಳೋಕೆ ಆಗಲ್ಲ. ಇದು ಒಲ್ಲದ ಗಂಡನ ಜೊತೆ ಮಲಗಿದ ಹಾಗೆ ಅಂತ ವಾದ ಹಾಕಬಹುದು. ಆದರೆ  ಏನೇನು ಅನಿವಾರ್ಯತೆ ಇರುತ್ತೋ, ನಮ್ಮ ಪ್ರೊಫೆಸರ್ ಥರದವರಿಗೆ ಏನೇನು ತೆವಲು ಇರುತ್ತೋ ದೇವರಿಗೇ ಗೊತ್ತು. ಆದರೆ ನನಗೆ ಆ ದಾರಿ ಬೇಡ ಅನ್ನಿಸಿರುವುದು ಯಾವ ಮೊರಾಲಿಟಿ ಅಂದ್ರೆ ನೈತಿಕ ಕಾರಣಗಳಿಗೆ ಅಲ್ಲ’ ಎಂದಳು ನನ್ನಿ.

‘ಮತ್ಯಾಕೆ?’ ರಶ್ಮಿಗೆ ಎಲ್ಲವನ್ನೂ ಮೀರಿದ ಇನ್ನೊಂದು ಕಾರಣ ಕೇಳುವ ಬಗ್ಗೆ ಹುರುಪು. ‘ಈಗ ನಾನು ಫೋಟೊಗ್ರಫಿ ಕಲಿಯಲು ಬಹಳ ಸಮಯ ಕಳೆದಿದ್ದೇನೆ. ನಾನು ಹೀಗೇ ಮುಂದುವರೆದರೆ ಒಳ್ಳೆಯ ಫೋಟೊಗ್ರಫರ್ ಆಗ್ತೀನಿ ಅನ್ನೋದೂ ನನಗೆ ಗೊತ್ತು. ಅದು ಕುರುಡು ಕಾನ್ಫಿಡೆನ್ಸ್ ಅಲ್ಲ. ಐ ರಿಯಲೀ ಬಿಲೀವ್ ಮೈ ವರ್ಕ್ ಈಸ್ ಗುಡ್. ಕೆಲವು ಅಂತರರಾಷ್ಟ್ರೀಯ ಫೋಟೊಗ್ರಾಫರ್ಸಿಗೆ ನನ್ನ ಪಿಕ್ಚರ್ಸ್ ಕಳಿಸಿ ಅವರಿಂದ ಒಳ್ಳೆಯ ಮಾರ್ಗದರ್ಶನವನ್ನೂ ಪಡೆದಿದ್ದೇನೆ. ಸೋ, ನನ್ನ ಕೆಲಸದ ಬೆಲೆ ನನಗೆ ಗೊತ್ತು. ಒಂದು ಪಕ್ಷ ಬರೀ ಸರ್ಟಿಫಿಕೇಟಿಗೋಸ್ಕರ ಈ ‘ಕಾಂಪ್ರಮೈಸ್’ ಮಾಡಿಕೊಂಡೆ ಅಂತ ತಿಳುಕೋ. ನನ್ನ ಜೀವಮಾನವೆಲ್ಲ ನನ್ನ ವ್ಯಕ್ತಿತ್ವದ ಬಗೆಗಿನ ಅನುಮಾನವನ್ನು ಮೀರಲಾರೆ.

ಅಂದರೆ, ನನಗೆ ಅವಕಾಶಗಳು ಬರೋದು ಸರ್ಟಿಫಿಕೇಟಿಗಾ ಅಥವಾ ನನ್ನ ಪ್ರತಿಭೆಗಾ ಅನ್ನೋ ಅನುಮಾನ ಯಾವತ್ತೂ ಉಳಿದುಬಿಡುತ್ತೆ. ಯಾಕಂದರೆ ಸರ್ಟಿಫಿಕೇಟು ತಗೊಳ್ಳಕ್ಕೆ ಏನು ಮಾಡಬೇಕಾಯ್ತು ಅನ್ನೋ ಸತ್ಯ ನನ್ನನ್ನ ಸಾಯಿಸುತ್ತಿರುತ್ತಲ್ಲ? ಏನೇ ಆಗಲಿ. ನನ್ನ ಆತ್ಮಸಾಕ್ಷಿಯನ್ನು ಪ್ರಶ್ನೆ ಮಾಡಬಲ್ಲ ಆಯ್ಕೆ ನನಗೆ ಬೇಡ’ ವಾತಾವರಣ ಬಿಗಿಯಾಗುತ್ತಿರುವುದನ್ನು ಗಮನಿಸಿದ ಇಂದುಮತಿ ಹೊಸ ಗಾಸಿಪ್ಪಿಗೆ ಇದು ಸುಸಮಯವೆಂದುಕೊಂಡು ಹೇಳಿದಳು.

‘ಒಂದು ವಿಷಯ ಗೊತ್ತಾ? ಮೊನ್ನೆ ಹೀಗೇ ಯಾವುದೋ ಡಿಪಾರ್ಟ್ಮೆಂಟ್ ಪ್ರೊಫೆಸರ್ ಒಬ್ಬರು ತಮ್ಮ ಪಿಎಚ್ ಡಿ ಶಿಷ್ಯೆಯನ್ನು ಮನೆಗೆ ಬರೋಕೆ ಹೇಳಿದ್ರಂತೆ. ಅವಳು ಪೆದ್ದಿಯೋ ಬುದ್ಧಿವಂತೆಯೋ ದೇವರಿಗೇ ಗೊತ್ತು. ಯಾಕೆ ಏನು ಅಂತ ಕೇಳದೆ ಸೀದಾ ಅವರು ಹೇಳಿದ ಟೈಮಿಗೆ ಅಂದರೆ ಸಾಯಂಕಾಲ ಅವರ ಮನೆಗೆ ಹೋಗಿದಾಳೆ!’ ‘ಅಯ್ಯೊ ದೇವ್ರೆ! ಕಾಮನ್ ಸೆನ್ಸ್ ಇರ್ಲಿಲ್ವಾ ಆ ಹುಡುಗಿಗೆ?’ ಈಶ್ವರಿ ಗಾಬರಿಯಾದಳು.

‘ಬೇಕಾದಷ್ಟು ಕಾಮನ್ ಸೆನ್ಸ್ ಇತ್ತು. ಮುಂದೇನಾಯ್ತು ಕೇಳು. ಹೋಗಿ ನೋಡಿದರೆ ಡಿಸ್ಕಷನ್ನಿಗೆ ಯಾವ ವಿಷಯವೂ ಇರಲಿಲ್ವಂತೆ. ಮುಂದಿನ ಬಾಗಿಲು ಹಾಕಿ ಸುಮ್ಮನೆ ಅದೂ ಇದೂ ಮಾತಾಡ್ತಾ ಕೂತ್ರಂತೆ. ಇವಳಿಗೆ ಮನೇಲಿ ತನ್ನನ್ನು, ಪ್ರೊಫೆಸರನ್ನು ಬಿಟ್ಟರೆ ಇನ್ಯಾರೂ ಇಲ್ಲ ಅನ್ನೋದು ಅರ್ಧ ಗಂಟೆಯಲ್ಲಿ ಗಮನಕ್ಕೆ ಬಂದಿದೆ. ಹೊರಡೋಕೆ ಅಂತ ಎದ್ರೆ ಇನ್ನೂ ಸ್ವಲ್ಪ ಹೊತ್ತು ಇರು. ಊಟ ಮಾಡಿಕೊಂಡು ಹೋಗುವಂತೆ ಅಂತ ಹೇಳಿದ್ರಂತೆ’ ‘ಊಟದಲ್ಲಿ ಏನಾದ್ರೂ ಹಾಕಿ ಬಿಟ್ನಾ ಪಾಪಿ?’ ಈಶ್ವರಿ ಕೇಳಿದಳು.

‘ರೇಪ್ ಕೇಸೇನೇ?’ ವಿಜಿ ಕೂಡ ಗಾಬರಿಯಾದಳು. ‘ಎರಡೂ ಅಲ್ಲ. ಇವಳು ಹೋದಾಗ ಸುಮಾರು ಆರು ಗಂಟೆ ಇರಬಹುದು. ಅವರ ಮನೆಯಲ್ಲಿ ಒಂಬತ್ತು ಗಂಟೆವರೆಗೂ ಇದ್ದಳಂತೆ. ಅವರೇ ಅಡುಗೆ ಮಾಡಿ ಊಟಕ್ಕೆ ಬಡಿಸಿದರಂತೆ. ಆಮೇಲೆ ವಾಪಾಸ್ ಬಂದ್ಲು’ ‘ಸೀರಿಯಸ್ಲೀ? ಕತೆ ಕಟ್ತಿಲ್ಲ ತಾನೇ ನೀನು?’ ವಿಜಿ ಹುಬ್ಬೇರಿಸಿ ಕೇಳಿದಳು.

‘ಇಲ್ಲ ಕಣೆ. ಏನೂಂದ್ರೆ ಆ ಪ್ರೊಫೆಸರ್‌ಗೆ ಬೇರೆಯವರು ಟೀಸ್ ಮಾಡ್ತಿದ್ರಂತೆ. ಏನ್ ಸಾರ್? ಏನೂ ಆಗ್ತಾ ಇಲ್ವಾ ಅಂತೆಲ್ಲ ಕೆಟ್ಟದಾಗಿ ಮಾತಾಡೋವ್ರಂತೆ. ಅದಕ್ಕೆ ಆ ಪ್ರೊಫೆಸರ್ರು ಇವಳನ್ನ, ಇವಳ ಹಾಗೆ ಇನ್ನೂ ಕೆಲವರನ್ನ ಆಗಾಗ ಮನೆಗೆ ಕರೆಸಿಕೊಂಡು ಗಂಟೆಗಳ ಕಾಲ ನಿಲ್ಲಿಸಿಕೊಂಡು ಆಮೇಲೆ ಕಳಿಸ್ತಾರಂತೆ. ಉಳಿದವರು ಬಾಯಿ ಮುಚ್ಚಿಕೊಳ್ಳಲಿ ಅಂತ. ಅದೇನು ಒತ್ತಡವೋ ಏನೋ!’

‘ಏನ್ ದೇಶವಪ್ಪ ಇದು. ಹೆಂಗಸರಿಗೆ ಹೆಣ್ತನ ಭಾರವಾದ್ರೆ ಗಂಡಸರಿಗೆ ಗಂಡಸ್ತನ ಭಾರ. ಪಾಪಿಗಳ್ಯಾರೋ, ಪಾತಕಿಗಳ್ಯಾರೋ ಹೇಳೋದೇ ಕಷ್ಟವಾಯ್ತಲ್ಲ!’ ವಿಜಿ ಗೊಣಗಿಕೊಂಡಳು. ನನ್ನಿಗೆ ಭಾರ ತುಸು ಕಡಿಮೆಯಾದಂತೆ ಅನ್ನಿಸಿದರೂ ತನ್ನ ಸಮಸ್ಯೆಗೆ ತಕ್ಷಣ ಪರಿಹಾರ ಕಾಣುತ್ತೆ ಅಂತ ವಿಶ್ವಾಸ ಬರಲಿಲ್ಲ. ‘ಈಗ್ ನನ್ ಕತೆ ಏನಮ್ಮ?’ ‘ನಿನಗೂ ಪರಿಹಾರ ಹುಡುಕೋಣ ಕಣೇ! ಸ್ವಲ್ಪ ತಡೀ!’ ಎಂದಳು ವಿಜಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT