ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಕ್ಟಿಂಗ್

Last Updated 4 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನಾಟಕ ಕಂಪನಿಯೊಂದರ ಯಜಮಾನರೊಬ್ಬರು ಹೇಳಿದ ಕಥೆ ಇದು. ಒಂದು ಹಳ್ಳಿಯಲ್ಲಿ ನಾಟಕ ಕಂಪನಿಯ ಮೊಕ್ಕಾಂ ಇತ್ತು. ದಿನ ನಿತ್ಯ ಸಾಯಂಕಾಲ ಮತ್ತು ರಾತ್ರಿ ಎರಡು ಪ್ರದರ್ಶನಗಳು ನಡೆಯುತ್ತಿದ್ದವು.
 
ನಾಟಕದ ರಿಹರ್ಸಲ್ ಬೆಳಿಗ್ಗೆ ಹತ್ತು ಗಂಟೆಗೆ ನಡೆಯುತ್ತಿತ್ತು. ಅದನ್ನು ನಡೆಸಲು ನಿರ್ದೇಶಕರು ಮತ್ತು ಗಮನಿಸಲು ಮಾಲಿಕರು ಬಂದು ಕೂಡ್ರುತ್ತಿದ್ದರು. ಮಾಲಿಕರೇ ಬಂದು ಕುಳಿತ ಮೇಲೆ ಕಲಾವಿದರೆಲ್ಲ ಸರಿಯಾದ ಸಮಯಕ್ಕೆ ಶಿಸ್ತಿನಿಂದ ಬಂದು ಭಾಗವಹಿಸುತ್ತಿದ್ದರು.

ವೀರ ಶಿವಾಜಿಯ ಜೀವನ ಆಧರಿಸಿದ ನಾಟಕದ ರಿಹರ್ಸಲ್ ನಡೆಯುತ್ತಿತ್ತು. ಪಾತ್ರಧಾರಿಗಳು ತಮ್ಮ ಮಾತುಗಳನ್ನು ಗಟ್ಟಿಮಾಡಿಕೊಂಡು ನಟನೆ ಮಾಡಿ ತೋರಿಸುವಾಗ, ನಿರ್ದೇಶಕರು ಬದಲಾವಣೆಗಳನ್ನು ಸೂಚಿಸಿ, ಇನ್ನೂ ಹೇಗೆ ಪಾತ್ರಕ್ಕೆ ಜೀವ ತುಂಬಬೇಕು ಎಂದು ತಿಳಿಸುತ್ತಿದ್ದರು. ನಟರೆಲ್ಲ ಬಹಳ ಅನುಭವಿಗಳಾದ್ದರಿಂದ ಬೇಗನೇ ಅರಿತುಕೊಂಡು ಬದಲಾಯಿಸಿಕೊಳ್ಳುತ್ತಿದ್ದರು.

ದಿನಾಲು ರಿಹರ್ಸಲ್ ನೋಡಲು ಒಬ್ಬ ಹಳ್ಳಿಯ ತರುಣ ಬಂದು ಕುಳಿತುಕೊಳ್ಳುತ್ತಿದ್ದ. ಅಷ್ಟು ಎತ್ತರವೂ ಅಲ್ಲ, ಕುಳ್ಳಗೂ ಅಲ್ಲ ಎನ್ನುವಂಥ ಶರೀರ. ಸರಿಯಾಗಿ ನೋಡಿದರೆ ಸೊಣಕಲೇ. ಕಣ್ಣು ಮಿಟುಕದೇ ಉಸಿರುಬಿಗಿಹಿಡಿದು ರಿಹರ್ಸಲ್ ನೋಡುತ್ತಿದ್ದ. ಖುಷಿಯಾದಾಗ ಜೋರಾಗಿ ಚಪ್ಪಾಳೆ ತಟ್ಟುತ್ತಿದ್ದ.

ಒಂದು ದಿನ ರಿಹರ್ಸಲ್ ಮುಗಿದ ಮೇಲೆ ಆತ ನಿರ್ದೇಶಕರ ಬಳಿ ಬಂದು ಕೈ ಮುಗಿದ. ಅವರು,  `ಏನಪ್ಪಾ ದಿನಾಲು ಬಂದು ರಿಹರ್ಸಲ್ ನೋಡುತ್ತಿ, ನಿನಗೆ ತುಂಬ ಇಷ್ಟಾನಾ~  ಎಂದು ಕೇಳಿದರು. ಆತ,  `ಹೌದು ಸಾಮಿ, ನಂಗ ನಾಟ್ಕ ಹಂದ್ರೆ ಭಾಳ ಪ್ರೀತಿ. ನಾನೂ ಹೆಕ್ಟಿಂಗ್ ಮಾಡ್ತೀನಿ. ನಂಗೂ ಹೊಂದು ಫಾತ್ರ ಕೊಡ್ರಿ~  ಎಂದ.

ಅವನ ಮಾತು ನೋಡಿದರೆ ಉತ್ತರ ಕರ್ನಾಟಕ, ಹಾಸನ ಸೀಮೆ ಮತ್ತು ತಮಿಳಿನಲ್ಲಿರುವ  ಅಂಶಗಳನ್ನು ಮಾತ್ರ ಸೇರಿಸಿ ವಿಶೇಷವಾಗಿ ಭಾಷೆ ಸೃಷ್ಟಿಸಿಕೊಂಡ  ಇತ್ತು. ಭಾಷೆಯಿಂದ ತಿಳಿಸಲಾಗದ್ದನ್ನೆಲ್ಲ ಹಾವ, ಭಾವಗಳಿಂದ ತಿಳಿಸಲು ಪ್ರಯತ್ನಿಸುತ್ತಿದ್ದ. ನಿರ್ದೇಶಕರಿಗೆ ನಗು ಬಂತು. 

`ಸರಿ, ಯಾವ ಪಾತ್ರ ಬೇಕು ನಿನಗೆ~  ಎಂದು ಕೇಳಿದರು. ಅವನ ಆತ್ಮವಿಶ್ವಾಸ ನೋಡಿ.  `ಸಾಮಿ, ನಾನು ಮಾಡೋದು ಈರೋ ಫಾತ್ರ ಹಷ್ಟೇ. ಸೊಣ್ಣದ್ದು ಮಾಡೋಲ್ಲ~  ಎಂದ ಗತ್ತಿನಿಂದ.  `ಸಿವಾಝಿ ಫಾತ್ರ ತೋರಸ್ಲಾ~ ಎಂದು ಚಾಲೆಂಜ್ ಮಾಡಿದ.  ಭಲೇ ಮಾಡು ನೋಡೋಣ  ಎಂದರು ನಿರ್ದೇಶಕರು ನಗುತ್ತ.

ತರುಣ ಠಣ್ಣನೇ ರಂಗಮಂದಿರಕ್ಕೆ ಒಂದೇ ನೆಗೆತದಲ್ಲಿ ಹಾರಿದ. ಉಳಿದ ನಟ, ನಟಿಯರು ತಮಾಷೆ ನೋಡಲು ನಿಂತರು. ಈತ ತನ್ನ ಹೆಗಲ ಮೇಲಿದ್ದ ಟಾವೆಲ್ಲನ್ನೂ ಸೊಂಟಕ್ಕೆ ಸುತ್ತಿದ, ಕೈಯಲ್ಲಿ ಕಾಲ್ಪನಿಕ ಖಡ್ಗವನ್ನು ಹಿಡಿದ. ಧ್ವನಿ ಏರಿಸಿ ಹೇಳಿದ. `ಹೇ ಅಮ್ಮ, ನನ್ನ ರುದ್ರ ಪ್ರತಿಜ್ಞೆಯನ್ನು ಕೇಳು.

ತಾಯಿ ಅಂಬಾಭವಾನಿಯನ್ನು ಸಾಕ್ಷಿಯಾಗಿಟ್ಟುಕೊಂಡು ಪ್ರಮಾಣ ಮಾಡಿ ಹೇಳುತ್ತೇನೆ, ಈ ದೇಹದಲ್ಲಿ ಒಂದು ಹನಿ ರಕ್ತ ಇರುವವರೆಗೂ ನನ್ನ ದೇಶದಲ್ಲಿ ಪರಕೀಯರು ಕಾಲೂರಲು ಬಿಡುವುದಿಲ್ಲ. ನನ್ನ ತಲೆಯನ್ನು ನಿನ್ನ ಪದತಲದಲ್ಲಿ ಅರ್ಪಿಸಿಕೊಂಡರೂ ಸರಿಯೇ, ನನ್ನ ದೇಶವನ್ನು ಮತ್ತೊಬ್ಬರಿಗೆ ಒಪ್ಪಿಸಲಾರೆ.

ಇದು ನನ್ನ ಪ್ರತಿಜ್ಞೆ ಅಮ್ಮ. ಇದೋ ಅದಕ್ಕೆ ಸಾಕ್ಷಿಯಾಗಿ ಈ ರಕ್ತ ತರ್ಪಣ~  ಎಂದು ಹೇಳುತ್ತಲೇ ಕಾಲ್ಪನಿಕ ಖಡ್ಗದಿಂದ ತನ್ನ ಎಡಗೈಯ ತೋರುಬೆರಳನ್ನು ಕತ್ತರಿಸಿದಂತೆ ಮಾಡಿ ಆ ಸುರಿಯುತ್ತಿದ್ದ ರಕ್ತವನ್ನು ಅಲ್ಲಿ ಇರಬಹುದಾದ ವಿಗ್ರ್ರಹದ ಪಾದಕ್ಕೆ ಒಪ್ಪಿಸಿದಂತೆ ಮಾಡಿದ. ಅವನ ದೇಹಭಾವವೇನು.
 
ಮುಖದಲ್ಲಿರುವ ರುದ್ರತೆ ಏನು. ಧ್ವನಿಯಲ್ಲಿದ್ದ ದೇಶಪ್ರೇಮ, ಧೈರ್ಯ, ಆತ್ಮವಿಶ್ವಾಸ ಅದರೊಂದಿಗೆ ತನ್ನ ಅಮ್ಮನಿಗೆ ಮಾತು ಕೊಡುವಾಗ ಇದ್ದ ವಿನಮ್ರತೆ ಎಲ್ಲ ಉಕ್ಕಿ ಉಕ್ಕಿ ಬರುವಂತಿದ್ದವು. ಎಲ್ಲ ನಟ ನಟಿಯರು, ಮಾಲೀಕರು ಬೆರಗಾಗಿ ಹೋದರು. ಈ ಅದ್ಭುತ ನಟನೆಯನ್ನು ಕಂಡು ನಿರ್ದೇಶಕರ ಕಣ್ಣಲ್ಲಿ ನೀರು ಮೂಡಿತು.
 
ಒಂದು ಶಬ್ದವನ್ನೂ ಸರಿಯಾಗಿ ಮಾತನಾಡದ ಈ ಹುಡುಗ ರಂಗವನ್ನೇರಿದಾಗ ಒಂದೂ ಅಪಭ್ರಂಶ ಇಲ್ಲದ ಹಾಗೆ, ಮಾತನಾಡಿದ್ದನ್ನು, ಭಾವನೆಗಳನ್ನು ಸಲೀಸಾಗಿ ಎತ್ತಿ ತೋರಿದ ನಟನಾ ಕೌಶಲ್ಯವನ್ನು ಮೆಚ್ಚಿ ಅವರು  `ಭಲೇ ಹುಡುಗ, ತುಂಬ ಚೆನ್ನಾಗಿ ನಟಿಸಿದೆ~ ಎಂದು ಬೆನ್ನು ತಟ್ಟಿದರು. ಆತ ನಕ್ಕು,  `ಹದೇ ಸಾಮಿ, ಹೆಕ್ಟಿಂಗು~  ಎಂದ. ಆತ ಮುಂದೆ ಬೆಳೆದು ದೊಡ್ಡ ನಟನಾದ. 

ಯಾವ ಹುತ್ತದಲ್ಲಿ ಯಾವ ಹಾವಿದೆಯೋ? ಯಾವ ದೇಹದಲ್ಲಿ ಯಾವ ಚೈತನ್ಯವಿದೆಯೋ. ಪ್ರತಿಯೊಂದು ಜೀವ ಒಂದು ವಜ್ರವಿದ್ದಂತೆ. ಅದರ ಮೇಲೆ ದೂಳು ಕುಳಿತಿರಬಹುದು, ಕೊಳೆಯಾಗಿರಬಹುದು, ಜಿಡ್ಡಾಗಿರಬಹುದು. ಯಾರಾದರೂ ಅದಕ್ಕೆ ಸಾಣೆ ಹಿಡಿದರೆ, ಒರೆಸಿ ಶುದ್ಧ ಮಾಡಿದರೆ ಒಳಗಿನ ಪ್ರಖರವಾದ ಬೆಳಕು ಹೊರಗೆ ಚಿಮ್ಮದೇ ಇರದು. ಈ ಸಾಣೆ ಹಿಡಿಯುವ ಪ್ರಕ್ರಿಯೆಯೇ ಸಂಸ್ಕಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT