ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುತ್ತಿರುವ ನಗರ ಜನಸಂಖ್ಯೆ: ಎಚ್ಚರಿಕೆ ಕರೆಗಂಟೆ

Last Updated 18 ಜುಲೈ 2011, 19:30 IST
ಅಕ್ಷರ ಗಾತ್ರ

ಹಳ್ಳಿಗಳ ನಾಡೆಂದೇ ಪ್ರಖ್ಯಾತವಾದ ನಮ್ಮ ದೇಶದಲ್ಲಿ ನಗರ ಜನಸಂಖ್ಯೆ ಕಾಲಕ್ರಮೇಣ ಏರುತ್ತಿರುವ ಸಂಗತಿಯನ್ನು ಈಗಷ್ಟೇ ಬಿಡುಗಡೆಯಾಗಿರುವ 2011ರ ಜನಗಣತಿಯ ವರದಿಗಳು ನಮ್ಮ ಮುಂದಿಟ್ಟಿವೆ.

ಈ ಹೊತ್ತು ಭಾರತದ ಶೇಕಡ 30ರಷ್ಟು ಜನಸಂಖ್ಯೆ ನಗರಗಳಲ್ಲಿ ವಾಸಿಸುತ್ತಿದ್ದು, ಕಳೆದ ಎರಡು ದಶಕಗಳಲ್ಲಿ ದೇಶದ ನಗರ ಜನಸಂಖ್ಯೆ ದ್ವಿಗುಣಗೊಂಡಿದೆ.
 
ಈಗಾಗಲೇ ಭಾರತದ ನಗರ ಜನಸಂಖ್ಯೆ ಅಮೆರಿಕಾದ ಜನಸಂಖ್ಯೆಗೆ ಹೆಚ್ಚು ಕಡಿಮೆ ಸಮವಾಗಿದ್ದು, ದೇಶದ ಒಟ್ಟು ಜನಸಂಖ್ಯಾ ಬೆಳವಣಿಗೆಯ ಪ್ರಮಾಣಕ್ಕಿಂತ ನಗರ ಜನಸಂಖ್ಯಾ ಬೆಳವಣಿಗೆ ತ್ವರಿತ ಗತಿಯಲ್ಲಿ ಸಂಭವಿಸುತ್ತಿದೆ.

ಭಾರತದ ಜನಸಂಖ್ಯೆ ನಗರದತ್ತ ಪಯಣ ಬೆಳಸುವ ಪ್ರವೃತ್ತಿ ಮುಂಬರುವ ವರ್ಷಗಳಲ್ಲಿ ಇನ್ನೂ ಬಲವಾಗಲಿದೆ. ಜನಸಂಖ್ಯಾ ತಜ್ಞರ ಪ್ರಕಾರ 2030ರ ವೇಳೆಗೆ ಭಾರತದ ಶೇಕಡ 40ರಷ್ಟು ಜನಸಂಖ್ಯೆ ನಗರಗಳಲ್ಲಿ ವಾಸಿಸುತ್ತಿದ್ದರೆ, ಈ ಶತಮಾನದ ಅರ್ಧ ಭಾಗ ಕಳೆಯುವಷ್ಟರಲ್ಲಿ, ಎಂದರೆ 2050ರ ವೇಳೆಗೆ ದೇಶದ ನಗರವಾಸಿಗಳ ಪ್ರಮಾಣ ಶೇಕಡ 55ರಷ್ಟಾಗಲಿದೆ.
 
ಮುಂಬರುವ 20ವರ್ಷಗಳಲ್ಲಿ ಭಾರತದಲ್ಲಿ ಹೆಚ್ಚಳವನ್ನು ಕಾಣಲಿರುವ ನಗರ ಜನಸಂಖ್ಯೆ ದೇಶದ ಐದು ರಾಜ್ಯಗಳಲ್ಲಿ ವಿಶೇಷವಾಗಿ ಕೇಂದ್ರೀಕೃತವಾಗಲಿದೆ. ಆ ರಾಜ್ಯಗಳೆಂದರೆ ಕರ್ನಾಟಕ, ಗುಜರಾತ್, ತಮಿಳುನಾಡು ಮತ್ತು ಪಂಜಾಬ್.

ನಗರ ಜನಸಂಖ್ಯಾ ಹೆಚ್ಚಳ ಕೇವಲ ಭಾರತಕ್ಕೆ ಸೀಮಿತವಾಗಿಲ್ಲ. ಒಂದು ಜಾಗತಿಕ ಮಟ್ಟದಲ್ಲಿಯೂ ಕೂಡ ಕಳೆದ ಅರವತ್ತು (60) ವರ್ಷಗಳಲ್ಲಿ ನಗರ ಜನಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ. 1950ರಲ್ಲಿ ವಿಶ್ವದ ಜನಸಂಖ್ಯೆಯಲ್ಲಿ ಶೇಕಡ 30ರಷ್ಟು ನಗರವಾಸಿಗಳಾಗಿದ್ದು, 2000ದ ವೇಳೆಗೆ ಇವರ ಪ್ರಮಾಣ ಶೇಕಡ 47ಕ್ಕೆ ಏರಿತ್ತು.

ಮುಂದಿನ ಇಪ್ಪತ್ತು ವರ್ಷಗಳಲ್ಲಿ, ಎಂದರೆ 2030ರ ವೇಳೆಗೆ ಜಾಗತಿಕ ಮಟ್ಟದಲ್ಲಿ ನಗರವಾಸಿಗಳ ಪ್ರಮಾಣ ಶೇಕಡ 60ರಷ್ಟಾಗಲಿದೆ ಎಂದು ಅಂದಾಜು ಮಾಡಲಾಗಿದೆ.
ಜಗತ್ತಿನಾದ್ಯಂತ ನಗರ ಜನಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿದ್ದರೂ, ಅದರಲ್ಲಿ ಏಕಪ್ರಕಾರತೆಯಿಲ್ಲ.

ವಿಶ್ವಸಂಸ್ಧೆಯ ಜನಸಂಖ್ಯಾ ತಜ್ಞರ ಪ್ರಕಾರ ಸುಮಾರು ಐದು ವರ್ಷಗಳ ಹಿಂದೆಯೇ, ಜಗತ್ತಿನ ಅಭಿವೃದ್ಧಿ ಸಾಧಿಸಿರುವ ದೇಶಗಳ ಜನಸಂಖ್ಯೆಯ ಮುಕ್ಕಾಲು ಭಾಗ ನಗರಗಳಲ್ಲಿ ವಾಸಿಸುತ್ತಿದ್ದು, 2030ರ ವೇಳೆಗೆ ಈ ಪ್ರಮಾಣ ಶೇಕಡ 80ನ್ನು ದಾಟಲಿದೆ. ಈ ದೇಶಗಳಲ್ಲಿ ಹೆಚ್ಚಿನ ಸಂಖ್ಯೆಯವು ಯೂರೋಪ್ ಮತ್ತು ಉತ್ತರ ಅಮೆರಿಕಾ ಖಂಡಗಳಲ್ಲಿರುವಂಥವು.

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ನಗರ ಜನಸಂಖ್ಯೆಯ ಪ್ರಮಾಣ ಕಡಿಮೆಯಿದ್ದರೂ, 2030ರ ವೇಳೆಗೆ ಅವುಗಳಲ್ಲಿಯೂ ನಗರ ಜನಸಂಖ್ಯೆಯ ಪ್ರಮಾಣ ಶೇಕಡ 56ರಷ್ಟಾಗಲಿದೆ. ಮುಂಬರುವ 30ವರ್ಷಗಳಲ್ಲಿ ಉಂಟಾಗಲಿರುವ ನಗರ ಜನಸಂಖ್ಯೆಯ ಹೆಚ್ಚಳ ಅಭಿವೃದ್ಧಿಶೀಲ ದೇಶಗಳಿಗೇ ಹೆಚ್ಚುಕಡಿಮೆ ಸೀಮಿತವಾಗಲಿದೆ!

ಅಭಿವೃದ್ಧಿ ಪಥದಲ್ಲಿ ಬಹುದೂರ ಸಾಗಿರುವ ದೇಶಗಳು ಆರ್ಥಿಕ ಪ್ರಗತಿಯನ್ನು ಸಾಧಿಸಲು ನಗರೀಕರಣವೇ ಪ್ರಮುಖ ಕಾರಣವಾಗಿರುವುದರಿಂದ, ನಗರವಾಸಿಗಳ ಸಂಖ್ಯೆ ಹೆಚ್ಚುತ್ತಿರುವುದು ಭಾರತದ ಮಟ್ಟಿಗೆ ಒಂದು ಸಕಾರಾತ್ಮಕ ಬೆಳವಣಿಗೆ ಎಂದು ಹೇಳಲಾಗುತ್ತಿದೆ.

ಆದರೆ ಕೇವಲ ನಗರ ಜನಸಂಖ್ಯಾ ಹೆಚ್ಚಳದಿಂದ ಆರ್ಥಿಕ ಬೆಳವಣಿಗೆ ಉಂಟಾಗುವುದಿಲ್ಲ. ಏಕೆಂದರೆ ಈ ಹೆಚ್ಚಳಕ್ಕೆ ಕಾರಣವಾಗುವ ಪ್ರಧಾನ ಅಂಶಗಳಲ್ಲಿ ಗ್ರಾಮಗಳಿಂದ ಸಂಭವಿಸುವ ನಗರಾಭಿಮುಖವಾಗಿ ವಲಸೆಯೂ ಒಂದು.
 
ಹೀಗೆ ವಲಸೆ ಬಂದ ಬಹುಪಾಲು ಜನಸಂಖ್ಯೆ ಗ್ರಾಮೀಣ ಪ್ರದೇಶಗಳಲ್ಲಿ ಜೀವನ ನಿರ್ವಹಣೆ ಕಷ್ಟವಾದಾಗ ಜೀವನಾಸರೆಗಳನ್ನು ಅರಸಿ ನಗರಗಳಿಗೆ `ತಳ್ಳಲ್ಪಟ್ಟಂಥವರು~.

ಇಂದಿಗೂ ಗ್ರಾಮೀಣ ಜನಸಂಖ್ಯೆಗೆ ಕೃಷಿಯೇ ಪ್ರಮುಖ ಜೀವನಾಧಾರವಾಗಿದ್ದು, ಕೃಷಿಯಿಂದ ಬರುವ ಆದಾಯದ ಹಂಚಿಕೆಯಲ್ಲಿ ತೀವ್ರ ಸ್ವರೂಪದ ಅಸಮಾನತೆಯಿರುವುದರಿಂದ `ಗ್ರಾಮೀಣ ಬಡವರ~ ಸೆಲೆಯೊಂದು ನಿರಂತರವಾಗಿ ನಗರಗಳತ್ತ ಹರಿದು ಬರುತ್ತಲೇ ಇರುತ್ತದೆ.

ಹೀಗೆ ಬಂದಂಥವರು ವಾಸಸ್ಥಾನಗಳನ್ನು ಹುಡುಕುವುದು ಕೊಳಚೆ ಪ್ರದೇಶಗಳು ಅಥವಾ ಈಗಾಗಲೇ ಜೀರ್ಣಾವಸ್ಥೆಯ ಸ್ಥಿತಿಯಲ್ಲಿರುವ ನೆರೆಹೊರೆಗಳಲ್ಲಿ. ಭಾರತದಲ್ಲಿ ನಗರ ಜನಸಂಖ್ಯೆಯ ಹೆಚ್ಚಳಕ್ಕೆ ಗ್ರಾಮೀಣ-ನಗರ ವಲಸೆಯ ಕೊಡುಗೆ ಶೇಕಡ 30ರಷ್ಟು ಎಂದು ಕೆಲ ಅಧ್ಯಯನಗಳು ತಿಳಿಸಿವೆ.

ನಗರ ಜನಸಂಖ್ಯೆ ಹೆಚ್ಚುತ್ತಾ ಹೋದ ಹಾಗೆಲ್ಲಾ ಬಡತನದ ಪ್ರಮಾಣ ಇಳಿಮುಖವಾಗುತ್ತಾ ಹೋಗುತ್ತದೆ ಎನ್ನುವುದು ಒಂದು ದೃಷ್ಟಿಕೋನ. ಆದರೆ ಇದು ಅನ್ವಯಿಸುವುದು ನಗರಗಳಲ್ಲಿ ಕನಿಷ್ಠಮಟ್ಟದ ಗುಣಮಟ್ಟದ ಜೀವನವನ್ನಾದರೂ ನಡೆಸುವಂಥ ಸ್ಥಿತಿಯಲ್ಲಿರುವ ನಗರವಾಸಿಗಳಿಗೆ ಮಾತ್ರ.
 
ಈ ಹೊತ್ತು ದೇಶದ ಬಡವರಲ್ಲಿ ಕಾಲು ಭಾಗ ನಗರವಾಸಿಗಳು, ಹಾಗೂ ನಗರ ಜನಸಂಖ್ಯೆಯಲ್ಲಿ ಶೇಕಡ 31ರಷ್ಟು ಬಡವರು. ನಿರಂತರ ನಗರಾಭಿಮುಖ ವಲಸೆಯ ಕಾರಣದಿಂದಾಗಿ ಗ್ರಾಮೀಣ ಬಡತನ ನಿಧಾನವಾಗಿ `ನಗರ ಬಡತನ~ವಾಗಿ ಪರಿವರ್ತಿತವಾಗುತ್ತಿದೆ.

ಹೀಗೆ ವಲಸೆ ಬಂದವರಲ್ಲಿ ಹೆಚ್ಚಿನವರು ಅಸಂಘಟಿತ ಉದ್ಯೋಗ ಕ್ಷೇತ್ರದಲ್ಲಿಯೇ ಅವಕಾಶಗಳನ್ನು ಅರಸಬೇಕಾದಂಥ ಸ್ಥಿತಿಯಿದ್ದು, ಅವರಿಗೆ ವಸತಿ ಸೌಕರ್ಯ, ಚರಂಡಿ ವ್ಯವಸ್ಥೆ, ಶೌಚಾಲಯಗಳು, ಆರೋಗ್ಯ ಸೇವೆಗಳು, ಶಿಕ್ಷಣಾವಕಾಶಗಳು ಹಾಗೂ ಸಾಮಾಜಿಕ ಭದ್ರತೆಯನ್ನು ಒದಗಿಸಲು ನಗರಾಡಳಿತಗಳಿಗೆ ಸಾಧ್ಯವಾಗುತ್ತಿಲ್ಲ.

ಹೆಚ್ಚುತ್ತಿರುವ ನಗರ ಬಡತನದ ನಕಾರಾತ್ಮಕ ಪರಿಣಾಮಗಳನ್ನು ವಿಶೇಷವಾಗಿ ಎದುರಿಸುತ್ತಿರುವವರು ಮಕ್ಕಳು, ಮಹಿಳೆಯರು ಮತ್ತು ವೃದ್ಧರು.

ನಗರಗಳಲ್ಲಿ ಬಡವರ ಜನಸಂಖ್ಯೆಯಲ್ಲಿ ಏರಿಕೆಯಾಗುತ್ತಾ ಹೋಗುತ್ತಿದ್ದಂತೆ ಬೀದಿಗಳಲ್ಲೇ ಬದುಕನ್ನು ಸವೆಸುತ್ತಿರುವಂಥ ನಗರವಾಸಿಗಳ ಸಂಖ್ಯೆಯೂ ಹೆಚ್ಚುತ್ತಾ ಹೋಗುವ ಸಾಧ್ಯತೆಗಳಿವೆ.
 
ಕೊಳಚೆ ಪ್ರದೇಶಗಳಲ್ಲಾಗಲೀ ತಾತ್ಕಾಲಿಕ ವಸತಿ ಸಂಕೀರ್ಣಗಳಲ್ಲಾಗಲೀ ವಾಸಿಸಬೇಕಾದರೆ ಬಾಡಿಗೆಯನ್ನು ಕೊಡಬೇಕಾಗಿದ್ದು, ಲಕ್ಷಾಂತರ ನಗರವಾಸಿಗಳಿಗೆ ಅದನ್ನು ಕೂಡ ಪಾವತಿಸುವಂಥ ಶಕ್ತಿಯಿಲ್ಲ. ಆದ್ದರಿಂದ ಅನೇಕರು ಬೀದಿ ಬದಿಯಲ್ಲಿಯೇ ವಾಸಿಸುತ್ತಿದ್ದಾರೆ.

ದೆಹಲಿಯಲ್ಲಿ 2011ರ ಜನಗಣತಿಯ ಮಾಹಿತಿಯನ್ನು ಸಂಗ್ರಹಿಸುವಾಗ ಬೆಳಕಿಗೆ ಬಂದ ವಿಷಯವೆಂದರೆ ಸುಮಾರು ಒಂದೂವರೆ ಲಕ್ಷ ಜನ ನಗರದ ವಿವಿಧ ಪ್ರದೇಶಗಳಲ್ಲಿ ಬೀದಿಗಳನ್ನೇ ತಮ್ಮ ವಾಸಸ್ಥಾನಗಳನ್ನಾಗಿ ಪರಿವರ್ತಿಸಿಕೊಂಡಿದ್ದಾರೆ ಎಂಬುದು.

2001ರ ಜನಗಣತಿಯ ವೇಳೆಗೆ ದೇಶದ ವಸತಿಹೀನ ಜನಸಂಖ್ಯೆಯಲ್ಲಿ ಶೇಕಡ 3ರಷ್ಟು ದೆಹಲಿಯಲ್ಲೇ ವಾಸಿಸುತ್ತಿದ್ದು, ಈಗ ಈ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳವಾಗಿದೆ. ಮುಂಬೈಯಲ್ಲಿ ಸುಮಾರು ಒಂದು ಲಕ್ಷ ಜನರು ಬೀದಿ ಬದಿಗಳಲ್ಲಿ ವಾಸಿಸುತ್ತಿದ್ದಾರೆ ಎಂಬುದು ಒಂದು ಅಂದಾಜು.

ನಗರ ಜನಸಂಖ್ಯೆಯಲ್ಲಿ ಹೆಚ್ಚಳವಾಗಲು ಮತ್ತೊಂದು ಪ್ರಮುಖ ಕಾರಣವೆಂದರೆ ಜಾಗತೀಕರಣ ಹಾಗೂ ಆರ್ಥಿಕ ಉದಾರೀಕರಣದ ಫಲಶ್ರುತಿಯಾಗಿ ನಗರ ಪ್ರದೇಶಗಳಲ್ಲಿ ಸ್ಫೋಟಗೊಂಡ ಉದ್ಯೋಗಾವಕಾಶಗಳು.

ಇವುಗಳಲ್ಲಿ ಅನೇಕ ಕೆಲಸಗಳಿಗೆ ವಿಶೇಷ ಕೌಶಲಗಳ ಅಗತ್ಯವಿಲ್ಲದ  ಕಾರಣ ಗ್ರಾಮೀಣ ಜನತೆ, ಅದರಲ್ಲೂ ವಿಶೇಷವಾಗಿ ಯುವಜನತೆ ಅಪಾರ ಸಂಖ್ಯೆಯಲ್ಲಿ ನಗರಾಭಿಮುಖವಾಗಿ ವಲಸೆ ಬರಲಾರಂಭಿಸಿದರು.
 
ಅನಿಯಂತ್ರಿತ ಕಟ್ಟಡ ನಿರ್ಮಾಣ ಚಟವಟಿಕೆಗಳು, ಹೊಸದಾಗಿ ಅಸ್ತಿತ್ವಕ್ಕೆ ಬಂದಂಥ ಸಹಸ್ರಾರು ಕಚೇರಿಗಳು, ಐ.ಟಿ-ಬಿ.ಟಿ. ಕಂಪೆನಿಗಳು ಹಾಗೂ ವ್ಯಾಪಾರ ಕೇಂದ್ರಗಳಲ್ಲಿ ಭದ್ರತಾ ವ್ಯವಸ್ಥೆ, ರಸ್ತೆ ಕಾಮಗಾರಿಗಳು ಹಾಗೂ ಸೇತುವೆಗಳ ನಿರ್ಮಾಣ-ಇವೇ ಮುಂತಾದ ಕ್ಷೇತ್ರಗಳಲ್ಲಿ ಸೃಷ್ಟಿಯಾದ ಉದ್ಯೋಗಾವಕಾಶಗಳು ಗ್ರಾಮೀಣ ಜನತೆಯನ್ನು ನಗರಗಳತ್ತ ಆಕರ್ಷಿಸುತ್ತಿವೆ. ಇಂಥ ಉದ್ಯೋಗಗಳಲ್ಲಿ ತೊಡಗುವವರಿಗೆ ದೊರೆಯುವ ಸಂಬಳದಿಂದ ಗುಣಮಟ್ಟದ ಜೀವನವನ್ನು ನಡೆಸಲು ಸಾಧ್ಯವೇ ಇಲ್ಲ.
 
ಆದ್ದರಿಂದ ಈ ವರ್ಗದ ನಗರವಾಸಿಗಳು ಮೂಲ ಸೌಕರ್ಯಗಳಿಂದ ವಂಚಿತವಾದ ಅಥವಾ ನಗರದ ಕೇಂದ್ರ ಭಾಗದಿಂದ ದೂರವಾಗಿರುವ ಸ್ಥಳಗಳಲ್ಲಿಯೇ ನೆಲೆಸಬೇಕಾಗುವಂಥ ಪರಿಸ್ಥಿತಿ ಸೃಷ್ಟಿಯಾಗಿ, ನಗರಗಳ ಮೇಲೆ ಅಪಾರ ಒತ್ತಡ ಬೀಳುತ್ತಿದೆ.

ನಗರ ಜನಸಂಖ್ಯೆಗೆ ಮೂಲಸೌಕರ್ಯಗಳನ್ನು ಒದಗಿಸಿ ಗುಣಮಟ್ಟದ ಜೀವನವನ್ನು ನಡೆಸಲು ಪೂರಕವಾದ ಸೌಲಭ್ಯಗಳನ್ನು ಸೃಷ್ಟಿಸಬೇಕೆಂಬ ಆಶಯ ಸಂವಿಧಾನದಲ್ಲೇ ಅಡಕವಾಗಿದೆ.
 
ಸಂವಿಧಾನಕ್ಕೆ ತಂದ 74ನೇ ತಿದ್ದುಪಡಿಯಲ್ಲಿ ಈ ಜವಾಬ್ದಾರಿಯನ್ನೂ ನಗರ ಸ್ಥಳೀಯ ಸಂಸ್ಥೆಗಳಿಗೆ ವಹಿಸಲು ಅವಕಾಶಗಳನ್ನೂ ಕಲ್ಪಿಸಲಾಗಿದೆ. ಆದಾಗ್ಯೂ ರಾಜ್ಯ ಸರ್ಕಾರಗಳು ಈ ಸಂವಿಧಾನಾತ್ಮಕ ಆಶಯವನ್ನು ಸಾಕಾರಮಾಡಲು ಉತ್ಸುಕವಾಗಿಲ್ಲದಿರುವುದು ಶೋಚನೀಯ.

ಒಂದೆಡೆ ಹೆಚ್ಚುತ್ತಿರುವ ನಗರ ಜನಸಂಖ್ಯೆ, ಮತ್ತೊಂದೆಡೆ ಕುಸಿಯುತ್ತಿರುವ ಸೌಕರ್ಯಗಳು-ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಈಗಾಗಲೇ ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ 100 ನಗರ ಪ್ರದೇಶಗಳಲ್ಲಿ 25ಕ್ಕೆ ತವರಾಗಿರುವ ಭಾರತದ ನಗರ ಜೀವನದ ಗುಣಮಟ್ಟ ಸಂಪೂರ್ಣವಾಗಿ ಏರುಪೇರಾಗುವುದರಲ್ಲಿ ಸಂಶಯವಿಲ್ಲ ಎನ್ನುವುದು ವಿಶ್ವಸಂಸ್ಥೆಯ ಜನಸಂಖ್ಯಾ ತಜ್ಞರ ಭವಿಷ್ಯ ನುಡಿ.

ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ದೊಡ್ಡ ನಗರಗಳ ಜನಸಂಖ್ಯೆಗೆ ಗ್ರಾಮೀಣ ಪ್ರದೇಶಗಳಿಂದ ಸಂಭವಿಸುವ ನಗರಾಭಿಮುಖ ವಲಸೆ ಒಂದು ಕಾರಣವಾದರೆ, ಈ ಪ್ರದೇಶಗಳಲ್ಲಿ ದೊರೆಯುವ ಅಪರಿಮಿತವೆನಿಸುವ ಸೌಲಭ್ಯಗಳ ಆಕರ್ಷಣೆಯೂ ವಲಸೆಯನ್ನು ಪ್ರಚೋದಿಸುವ ಮತ್ತೊಂದು ಅಂಶ.
 
ವಿಶೇಷವಾಗಿ ಬೃಹತ್ ನಗರಗಳಲ್ಲಿ  ಲಭ್ಯವಿರುವ ಸೌಕರ್ಯಗಳಿಂದ ಆಕರ್ಷಿತರಾಗಿ ಈ ಪ್ರದೇಶಗಳಿಗೆ ದೇಶದ ನಾನಾ ಭಾಗಗಳಿಂದ ಜನರು ನಿರಂತರವಾಗಿ ವಲಸೆ ಬರುತ್ತಿರುವುದೇ ನಗರ ಜನಸಂಖ್ಯಾ ಸ್ಫೋಟಕ್ಕೆ ಮುಖ್ಯ ಕಾರಣಗಳಲ್ಲಿ ಒಂದು.

ದೇಶದ ಬೃಹತ್ ನಗರಗಳಲ್ಲಿ ದೊರೆಯುತ್ತಿರುವ ಉತ್ತಮ ಮಟ್ಟದ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳೂ ಈಗಾಗಲೇ ಸಣ್ಣ ಸಣ್ಣ ಪಟ್ಟಣಗಳಲ್ಲಿ ವಾಸಿಸುತ್ತಿರುವ ಅನೇಕ ಜನರನ್ನು ಈ ನಗರಗಳತ್ತ ಆಕರ್ಷಿಸುತ್ತಿವೆ. ಇದು ವಿಶೇಷವಾಗಿ ಮಧ್ಯಮ ವರ್ಗದ ಹಾಗೂ ಸರ್ಕಾರಿ ಸೇವಾ ನಿರತ ಉದ್ಯೋಗಿಗಳಿಗೆ ಅನ್ವಯಿಸುತ್ತದೆ.

ನಗರ ಜೀವನ ಎಷ್ಟೇ ದುಬಾರಿಯಾಗಿರಲಿ, ಅದರ ಅನುಕೂಲಗಳನ್ನು ಮನಗಂಡು ತಮ್ಮ ಮಕ್ಕಳು ಈ ಎಲ್ಲ ಅನುಕೂಲಗಳನ್ನೂ ಪಡೆದುಕೊಳ್ಳಲು ಅಗತ್ಯವಾದ ವ್ಯವಸ್ಥೆಯನ್ನು ಕಲ್ಪಿಸಲು ಶ್ರೀಮಂತರಿಗಂತೂ ಯಾವುದೇ ಬಗೆಯ ತೊಂದರೆಯೂ ಇರುವುದಿಲ್ಲ.
 
ವಲಸೆಯ ಕಾರಣ ಯಾವುದಾದರೂ ಇರಲಿ, ಪರಿಸರದ ಮೇಲೆ ಅಪಾರ ಒತ್ತಡಗಳು ಬೀಳುತ್ತಿದ್ದು ಮುಂಬರುವ ವರ್ಷಗಳಲ್ಲಿ ನಗರ ಜೀವನ ದುಸ್ತರವಾಗುವುದರಲ್ಲಿ ಸಂದೇಹವಂತೂ ಇಲ್ಲ.

ಕಾಲ ಕಳೆದ ಹಾಗೆಲ್ಲಾ ಭಾರತದಲ್ಲೇ ಏಕೆ, ಇಡೀ ಜಗತ್ತಿನ ಜನಸಂಖ್ಯೆ ನಗರಗಳ ಕೇಂದ್ರಿತವಾಗುವುದರಲ್ಲಿ ಸಂದೇಹವಿಲ್ಲ. ಈ ಪ್ರವೃತ್ತಿಯನ್ನು ತಪ್ಪಿಸಲಾಗದಿದ್ದರೂ ಅದಕ್ಕೆ ತಡೆಯನ್ನು ಹಾಕಬೇಕಾದರೆ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಪರಿಸ್ಥಿತಿ ಮೊದಲಿಗೆ ಸುಧಾರಿಸಬೇಕು.
 
ಉತ್ತಮ ಬದುಕು ನಗರಗಳಲ್ಲೇ ದೊರೆಯುವುದು ಎಂಬ ಭ್ರಮಾ ಲೋಕದಿಂದ ಜನರನ್ನು ಹೊರತರಬೇಕಾದರೆ ಗುಣಮಟ್ಟದ ಶಿಕ್ಷಣ ಸಂಸ್ಧೆಗಳು, ಆರೋಗ್ಯ ರಕ್ಷಣಾ ಸೇವೆಗಳು, ಕೃಷಿಯೇತರ ಉದ್ಯೋಗಗಳು, ಸುಲಭ ದರಗಳಲ್ಲಿ ಸಾಲ ವಿತರಣ ವ್ಯವಸ್ಥೆ-ಇವೇ ಮುಂತಾದ ಅನುಕೂಲಗಳನ್ನು ಗ್ರಾಮೀಣ ಪರಿಸರದಲ್ಲಿ ಒದಗಿಸಬೇಕು.
 
ಹೀಗೆ ಮಾಡಿದಾಗ ಮಾತ್ರ ಅನಿಯಂತ್ರಿತ ನಗರಾಭಿಮುಖ ವಲಸೆಯನ್ನು ತಪ್ಪಿಸಿ, ನಗರಗಳನ್ನೂ ರಕ್ಷಿಸಬಹುದು, ಗ್ರಾಮಗಳನ್ನು ಪುನಶ್ಚೇತನಗೊಳಿಸಬಹುದು.

(ನಿಮ್ಮ ಅನಿಸಿಕೆಗಳನ್ನು ಕಳುಹಿಸಿ: editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT