ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣು, ಹಕ್ಕು ಮತ್ತು ಹೋರಾಟ: ನಾವು ಸಾಗುತ್ತಿರುವುದೆತ್ತ?

Last Updated 21 ಮೇ 2012, 19:30 IST
ಅಕ್ಷರ ಗಾತ್ರ

ವೈಯಕ್ತಿಕ ಮತ್ತು ಸಾರ್ವಜನಿಕ ಜೀವನಗಳೆರಡರಲ್ಲೂ ಮಹಿಳೆಯರು ಗೌರವಯುತವಾಗಿ ಬದುಕಲು ಅನುವು ಮಾಡಿ ಕೊಡಬಹುದಾಗಿದ್ದಂತಹ ಒಂದು ಹೊಸ ಕಾಯಿದೆ ಮತ್ತು ಎರಡು ತಿದ್ದುಪಡಿಗಳಿಗೆ ಇನ್ನೇನು ಸಂಸತ್ತಿನಲ್ಲಿ ಅಂಗೀಕಾರ ದೊರೆಯಲಿದೆ ಎನ್ನುವ ಹೊತ್ತಿನಲ್ಲೇ ಅವು ಪರ-ವಿರೋಧ ವಾದಗಳ ಸುಳಿಯಲ್ಲಿ ಸಿಲುಕಿವೆ.

ಇವುಗಳಲ್ಲಿ ಮೊದಲನೆಯದು ಹೊಸದಾಗಿ ಅಸ್ತಿತ್ವಕ್ಕೆ ಬರಲಿದ್ದ ಉದ್ಯೋಗ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯಗಳಿಂದ ಮಹಿಳೆಯರನ್ನು ರಕ್ಷಿಸುವ ಕಾಯಿದೆ.  ಎರಡು ದಶಕಗಳ ಐತಿಹಾಸಿಕ ಹಿನ್ನೆಲೆ ಇರುವ ಈ ಕಾಯಿದೆಯ ಅನುಷ್ಠಾನಕ್ಕೆ ಅಡ್ಡಿ ಬಂದಿರುವುದು ಸಂಸತ್ತಿನ ಒಳಗೆ ಹಾಗೂ ಹೊರಗೆ ಎದ್ದಿರುವ ಕೆಲ ಅನುಮಾನ-ಅಪಸ್ವರಗಳಿಂದ.

ಈಗಾಗಲೇ ದೇಶದಲ್ಲಿ ಜಾರಿಯಲ್ಲಿರುವ ಹಿಂದೂ ವಿವಾಹ ಕಾಯಿದೆ (1955) ಮತ್ತು ವಿಶೇಷ ವಿವಾಹ ಕಾಯಿದೆ (1954)ಗಳಿಗೆ ತಿದ್ದುಪಡಿಗಳನ್ನು ತರುವ ಮೂಲಕ ವಿವಾಹ ವಿಚ್ಛೇದನ ಪ್ರಕ್ರಿಯೆಯನ್ನು ಸರಳಗೊಳಿಸಿ ವೈವಾಹಿಕ ಆಸ್ತಿಯಲ್ಲಿ ಹೆಣ್ಣಿಗೆ ನ್ಯಾಯಸಮ್ಮತ ಪಾಲನ್ನು ದೊರಕಿಸಿಕೊಡುವ ಪ್ರಯತ್ನ ಮಾಡಲು ಸಂಸತ್ತಿಗೆ ಅವಕಾಶವಿತ್ತು.

ಆದರೆ ಹಾಗೆ ಮಾಡದೆ ವಿವಾಹದ ಮೂಲಕ ಹಾಗೂ ವಿವಾಹಾನಂತರ ಗಳಿಸಿದ ಆಸ್ತಿಯಲ್ಲಿ ವಿಚ್ಛೇದಿತ ಪತ್ನಿಗೆ ಸಮಪಾಲಿನ ಹಕ್ಕನ್ನು ನೀಡದೆ, ಸೀಮಿತವಾದ ಪಾಲನ್ನು ಮಾತ್ರ ನೀಡಲು ಹೊರಟ ಉದ್ದೇಶಿತ ತಿದ್ದುಪಡಿಗೆ ಸ್ವಾಯತ್ತ ಮಹಿಳಾ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ಕೆಲ ಸದಸ್ಯರು ಆಕ್ಷೇಪಣೆ ಎತ್ತಿದ್ದಾರೆ.

ವಿಚ್ಛೇದನವನ್ನು ಸುಲಭವಾಗಿ ಪಡೆಯಲು ಹಾಗೂ ವೈವಾಹಿಕ ಆಸ್ತಿಯಲ್ಲಿ ಪಾಲನ್ನು ಕೇಳಲು ಹೆಣ್ಣಿಗೆ ನೀಡುವ ಅವಕಾಶವನ್ನು ಅನೇಕ ಮಹಿಳೆಯರು ದುರುಪಯೋಗ ಪಡಿಸಿಕೊಂಡು, ವಿವಾಹವನ್ನು ಮಾರುಕಟ್ಟೆಯನ್ನಾಗಿ ಪರಿವರ್ತಿಸಿ, ಕುಟುಂಬಗಳನ್ನು ಮುರಿಯುವ ಮಟ್ಟಕ್ಕೆ ಹೋಗುತ್ತಾರೆ ಎಂಬ ಭಿನ್ನ ಧ್ವನಿಗಳೂ ಕೆಲ ವಲಯಗಳಿಂದ ಕೇಳಿ ಬಂದಿವೆ.

ಶೋಷಣೆಗೆ ಒಳಗಾಗಿರುವ ಯಾವುದೇ ವರ್ಗಕ್ಕೆ ನ್ಯಾಯ ದೊರಕಿಸಲು ಹೊರಟಾಗ ಅಂತಹ ಕ್ರಮಗಳ ಪರ-ವಿರೋಧ ವಾದಗಳು ಎಲ್ಲ ಸಮಾಜಗಳಲ್ಲೂ ಹೊರಹೊಮ್ಮುತ್ತವೆ.

ಅದರಲ್ಲೂ ಮಹಿಳೆಯರಿಗೆ ಹಕ್ಕುಗಳನ್ನು ನೀಡುವ ವಿಚಾರ ಬಂದಾಗ ಸಮಾಜದ ವಿವಿಧ ಸ್ತರಗಳಲ್ಲಿ ಈ ವಿರೋಧ ಸ್ವಲ್ಪ ತೀವ್ರವಾಗಿಯೇ ವ್ಯಕ್ತವಾಗುತ್ತದೆ. ಇದಕ್ಕೆ ನಮ್ಮ ದೇಶವೇನೂ ಹೊರತಲ್ಲ.

ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಹಕ್ಕುಗಳನ್ನು ನೀಡುವ ವಿಚಾರದಲ್ಲಿ ಕೆಲ ವಲಯಗಳಲ್ಲಿ ವ್ಯಕ್ತವಾಗುತ್ತಿರುವ ಭಾವನೆಗಳು ಹಾಗೂ ಪ್ರತಿರೋಧಗಳು ಪ್ರಜ್ಞಾವಂತರಲ್ಲಿ ಆತಂಕವನ್ನು ಮೂಡಿಸುತ್ತಿವೆ.
 
ಸುಮಾರು 200 ವರ್ಷಗಳಷ್ಟು ಇತಿಹಾಸ ಹೊಂದಿರುವ ಮಹಿಳಾ ವಿಮೋಚನಾ ಪ್ರಯತ್ನಗಳನ್ನು ಪುರುಷ ವಿರೋಧಿ ಮತ್ತು ಕುಟುಂಬ ವಿನಾಶಕಾರಿ ಎಂದು ಪ್ರತಿಪಾದಿಸುತ್ತ ಕಳೆದ ಮೂರು ದಶಕಗಳಿಂದ ದೇಶದ ನ್ಯಾಯ ವ್ಯವಸ್ಥೆಗೆ ಲಿಂಗ ಸೂಕ್ಷ್ಮತೆಯ ಆಯಾಮವನ್ನು ನೀಡಲು ನಿರಂತರವಾಗಿ ಶ್ರಮಿಸುತ್ತಿರುವ ಸ್ವಾಯತ್ತ ಮಹಿಳಾ ಚಳವಳಿಗಳ ಮೂಲ ಉದ್ದೇಶಗಳನ್ನೇ ಪ್ರಶ್ನಿಸುತ್ತಿರುವ ವ್ಯವಸ್ಥೆಯೊಂದು ನಮ್ಮ ದೇಶದಲ್ಲಿ ತಲೆ ಎತ್ತುತ್ತಿದೆ.

ಮಹಿಳೆಯರಿಗೆ ಹಕ್ಕುಗಳು ಹೆಚ್ಚಾದಷ್ಟೂ ಅವುಗಳ ದುರುಪಯೋಗ ಹೆಚ್ಚಾಗುತ್ತದೆ ಎಂಬ ಅನಾರೋಗ್ಯಕರವಾದ ಸಾಮಾನ್ಯೀಕರಣದಲ್ಲಿ ತೊಡಗಿರುವ ವ್ಯಕ್ತಿ-ವ್ಯವಸ್ಥೆಗಳು ಇಡೀ ಮಹಿಳಾ ಹಕ್ಕುಗಳ ಹೋರಾಟದ ಜಾಡನ್ನೇ ಬದಲಿಸಲು ಯತ್ನಿಸುತ್ತಿವೆ.

ದೇಶದ ಜನಸಂಖ್ಯೆಯಲ್ಲಿ ಅರ್ಧ ಭಾಗದಷ್ಟಿರುವ ಮಹಿಳೆಯರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಹಕ್ಕುಗಳನ್ನು ನೀಡುವುದರಿಂದ ಭಾರತೀಯ ಸಾಮಾಜಿಕ ವ್ಯವಸ್ಥೆ ಛಿದ್ರವಾಗಿ ಬಿಡುತ್ತದೆಂದು ಬಿಂಬಿಸಲಾಗುತ್ತಿದೆ.
 
ಲಿಂಗ ಅಸಮಾನತೆಯನ್ನು ಪ್ರಶ್ನಿಸುವ ಮಹಿಳೆಯರು ಪಾಶ್ಚಿಮಾತ್ಯ ಸಂಸ್ಕೃತಿಯ ಬಳುವಳಿಯಾದ ಸ್ತ್ರೀವಾದಿಗಳು, ಅಪಾಯಕಾರಿ ವ್ಯಕ್ತಿಗಳು ಹಾಗೂ ಭಾರತೀಯ ಕುಟುಂಬ ಜೀವನದ ನೆಮ್ಮದಿಯನ್ನು ನಾಶ ಮಾಡುವವರು ಎಂದು ಸಾರುತ್ತಾ ಪ್ರಶ್ನೆ-ಪ್ರತಿಭಟನೆಗಳನ್ನು ಹತ್ತಿಕ್ಕಲು ವ್ಯವಸ್ಥಿತ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

ಮಹಿಳೆಯರಿಗೆ ಕಾಯಿದೆಗಳ ಮೂಲಕ ಸ್ವಾತಂತ್ರ್ಯ ಮತ್ತು ಸಮಾನತೆಗಳನ್ನು ನೀಡುವ ಪ್ರಯತ್ನಗಳು ಪುರುಷರ ಸ್ವಾತಂತ್ರ ಹರಣ ಮಾಡುವ ಸಾಧನಗಳು ಎಂಬ ಆಲೋಚನೆಯೇ ಅರ್ಥರಹಿತವಾದದ್ದು. 

ಸ್ತ್ರೀಪರ  ಎಂದ ಮಾತ್ರಕ್ಕೆ ಅದು  ಪುರುಷ ವಿರೋಧಿ  ಎಂಬ ಭಾವನೆಗೆ ಬುಡವಿಲ್ಲ. ಮಹಿಳೆಯರ ವಿಚಾರದಲ್ಲಿ ಎಲ್ಲವೂ ಸರಿಯಾಗಿದ್ದಿದ್ದರೆ ಇಷ್ಟು ದೀರ್ಘಕಾಲದ ಹೋರಾಟದ ಅಗತ್ಯ ಎಲ್ಲಿತ್ತು? ಸಾರ್ವಜನಿಕ ಜೀವನಕ್ಕೆ ಮಹಿಳೆಯರ ಪ್ರವೇಶ ಇತ್ತೀಚಿನದಾದರೂ ಕುಟುಂಬದ ವಲಯದಲ್ಲೇ ಅವರು  ಶತಮಾನಗಳಿಂದ ದೌರ್ಜನ್ಯಗಳನ್ನು ಎದುರಿಸುತ್ತಿರುವುದರಿಂದಲೇ ಭಾರತೀಯ ಸಮಾಜ ಸುಧಾರಕರು ಬಹು ಹಿಂದೆಯೇ ಧ್ವನಿ ಎತ್ತಿದ್ದರು. ಕಾಯಿದೆಗಳ ರಚನೆಗಾಗಿ ಹೋರಾಟವನ್ನಾರಂಭಿಸಿದ್ದರು ಎಂಬುದನ್ನು ಮರೆಯಲಾದೀತೇ?

ಮಹಿಳಾ ಹಕ್ಕುಗಳಿಗಾಗಿ ವ್ಯವಸ್ಥಿತ ಹೋರಾಟ ನಮ್ಮ ದೇಶದಲ್ಲಿ ಆರಂಭವಾದದ್ದು ಹತ್ತೊಂಬತ್ತನೇ ಶತಮಾನದಲ್ಲಿ. ಅಂದಿನಿಂದ ಇಂದಿನವರೆಗೂ ಹೆಣ್ಣಿನ ಸ್ವಾತಂತ್ರ್ಯ-ಸ್ವಾಭಿಮಾನಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಅನೇಕ ಕಾಯಿದೆಗಳು ರೂಪಿತವಾಗಿವೆ.

ಇಂದಿಗೂ ಆ ಪ್ರಕ್ರಿಯೆ ಮುಂದುವರೆಯುತ್ತಿದೆ. ಕಾಲ ಬದಲಾಗುತ್ತಾ ಹೋದ ಹಾಗೆಲ್ಲಾ ಸಮಕಾಲೀನ ಸಂದರ್ಭಗಳು ಹಾಗೂ ಹೊಸ ಚಿಂತನೆಗಳಿಗೆ ಸ್ಪಂದಿಸಬೇಕಾದ ಅಗತ್ಯವನ್ನು ಮನಗಂಡು ಹಳೆಯ ಕಾಯಿದೆಗಳಿಗೆ ತಿದ್ದುಪಡಿಗಳನ್ನು ತರುವಂಥ ಪ್ರಕ್ರಿಯೆಗೂ ಚಾಲನೆ ದೊರೆಕಿತು.
 
ಇದರ ಜೊತೆಜೊತೆಗೆ ಬಹುಕಾಲ ಅಗೋಚರವಾಗಿಯೇ ಉಳಿದಿದ್ದ ಅನೇಕ ಮಹಿಳಾ ವಿರೋಧಿ ದೌರ್ಜನ್ಯಗಳನ್ನು ಗುರುತಿಸಿ ಅದಕ್ಕೆ ಕಾರಣರಾದವರನ್ನು ಕಾನೂನಿನ ಚೌಕಟ್ಟಿನೊಳಗೆ ತಂದು ಶಿಕ್ಷೆಯನ್ನು ವಿಧಿಸುವಂತಹ ವಾತಾವರಣವೂ ನಿರ್ಮಾಣವಾಯಿತು.

ಎರಡು ಶತಮಾನಗಳ ಹಿಂದೆ ಹೆಚ್ಚು-ಕಡಿಮೆ ಗೃಹ ಬಂಧಿಗಳಾಗಿದ್ದು, ಸಂಪ್ರದಾಯದ ಸಂಕೋಲೆಗಳಿಂದ ತತ್ತರಿಸುತ್ತಿದ್ದ ಮಹಿಳೆಯರಿಗೆ ತಮ್ಮ ಬದುಕಿನಲ್ಲಿ ಆಯ್ಕೆಯ ಸ್ವಾತಂತ್ರವನ್ನು ನೀಡುವಂತಹ ಪ್ರಯತ್ನಗಳು ನಡೆದಾಗ ಸಹಜವಾಗಿಯೇ ಅವುಗಳಿಗೆ ತೀವ್ರ ಸ್ವರೂಪದ ವಿರೋಧ ವ್ಯಕ್ತವಾಯಿತು.

ಧರ್ಮ ಮತ್ತು ಸಂಸ್ಕೃತಿಗಳ ಹೆಸರಿನಲ್ಲಿ ಸ್ತ್ರೀ ಶೋಷಣೆಯನ್ನು ಸಮರ್ಥಿಸಿಕೊಂಡು ಅವರ ಅಜ್ಞಾನ, ಅನಕ್ಷರತೆ ಹಾಗೂ ಅಸಹಾಯಕತೆಗಳನ್ನೇ ಬಂಡವಾಳವನ್ನಾಗಿಸಿ ಕೊಂಡಿದ್ದವರಿಗೆ ಹೆಣ್ಣು ಹೊಸಿಲಿನಾಚೆ ಬಂದು ಅವಳ ಹಕ್ಕುಗಳಿಗಾಗಿ ಹೋರಾಟ ನಡೆಸುವ ಕಲ್ಪನೆ ಕೂಡ ಅಸಮ್ಮತವಾಗಿತ್ತು.

ಆಗಿನ ಕಾಲಘಟ್ಟದಲ್ಲಿ ಮಹಿಳಾ ವಿಮೋಚನೆಗೆ ಅಡ್ಡಿಯಾಗಿದ್ದ ಸತಿ ಸಹಗಮನ, ವಿಧವಾ ವಿವಾಹದ ನಿಷೇಧ, ಬಾಲ್ಯ ವಿವಾಹ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿರೋಧ ಮುಂತಾದ ಸಾಮಾಜಿಕ ಅನ್ಯಾಯಗಳನ್ನು ಪ್ರಶ್ನಿಸಿ ಕಾಯಿದೆಗಳ ರಚನೆಗೆ ಒತ್ತಡವನ್ನು ತಂದ ಸಮಾಜ ಸುಧಾರಕರು ಕಟುವಾದ ಟೀಕೆಗಳನ್ನೂ, ವಿರೋಧಗಳನ್ನೂ ಎದುರಿಸಬೇಕಾಯಿತು.

ಈಗಿನ ಬದಲಾದ ಸಾಮಾಜಿಕ ಸಂದರ್ಭಗಳಲ್ಲಿ ಇವುಗಳೆಲ್ಲಾ ತೀರಾ ಸಾಮಾನ್ಯವಾದ ವಿಚಾರಗಳೆನಿಸಿದರೂ ಎರಡು ಶತಮಾನಗಳ ಹಿಂದೆ, ಹೆಣ್ಣಿಗೆ ಕೌಟುಂಬಿಕ ಮತ್ತು ವೈವಾಹಿಕ ವಲಯಗಳಲ್ಲಿ ಸ್ವಾತಂತ್ರ್ಯವನ್ನು ತಂದುಕೊಡುವ ಪ್ರಯತ್ನಗಳನ್ನು ಕ್ರಾಂತಿಕಾರಿ ಎಂದೇ ಪರಿಗಣಿಸಲಾಗಿದ್ದು ಪ್ರಗತಿ ವಿರೋಧಿ ಶಕ್ತಿಗಳಿಂದ ಅವುಗಳಿಗೆ ವಿರೋಧ ವ್ಯಕ್ತವಾದದ್ದು ಆಶ್ಚರ್ಯವೇನಲ್ಲ.

ಸ್ವಾತಂತ್ರ ಪೂರ್ವದ ಕಾಯಿದೆಗಳನ್ನು ವಿಶ್ಲೇಷಿಸಿದಾಗ ಅವುಗಳು ಹೆಣ್ಣಿನ ಸ್ಥಿತಿ-ಗತಿಗಳಲ್ಲಿ ತೀರಾ ಮೂಲಭೂತವಾದ ಬದಲಾವಣೆಗಳನ್ನೇನೂ ತರಲಾಗಲಿಲ್ಲವೆಂಬುದು ಅರ್ಥವಾಗುತ್ತದೆ. ಆದಾಗ್ಯೂ ಮಹಿಳಾ ವಿಮೋಚನೆಗೆ ಅವು ಭದ್ರ ಬುನಾದಿಯನ್ನು ಹಾಕಿದ್ದಂತೂ ನಿಜ.

ಲಿಂಗ ಸಮಾನತೆಯ ಹೋರಾಟಕ್ಕೆ ನಿಜವಾದ ಅರ್ಥ ಬಂದದ್ದು 1950ನೇ ಇಸವಿಯಲ್ಲಿ, ಸಂವಿಧಾನ ಜಾರಿಗೆ ಬಂದ ಮೇಲೆ. ಸ್ತ್ರೀ-ಪುರುಷರಾದಿಯಾಗಿ ಎಲ್ಲರಿಗೂ ಸಮಾನ ಅವಕಾಶಗಳ ನೀಡಿಕೆ, ಲಿಂಗಾಧಾರಿತ ತಾರತಮ್ಯಗಳ ನಿಷೇಧ ಮತ್ತು ವಿಶೇಷ ಸಂದರ್ಭಗಳಲ್ಲಿ ಹೆಣ್ಣಿಗೆ ಮೀಸಲಾತಿಯನ್ನು ನೀಡಬಹುದಾದಂಥ ವ್ಯವಸ್ಥೆಯ ಸೃಷ್ಟಿ. ಈ ಮೂರು ದೇಶದ ಮಹಿಳೆಯರಿಗೆ ಸಂವಿಧಾನ ದತ್ತವಾದ ಹಕ್ಕುಗಳೆಂದೇ ಹೇಳಬಹುದು.

ಸಂವಿಧಾನ ಜಾರಿಗೆ ಬಂದು 62 ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ ಹೊಸ-ಹೊಸ ಕಾಯಿದೆಗಳು ಜಾರಿಗೆ ಬಂದಿವೆ. ಈಗಾಗಲೇ ಅಸ್ತಿತ್ವದಲ್ಲಿರುವ ಕಾಯಿದೆಗಳಿಗೆ ತಿದ್ದುಪಡಿಗಳೂ ಬಂದಿವೆ.

ಮೊದಮೊದಲಲ್ಲಿ ಮೂಡಿ ಬಂದ ಕಾಯಿದೆಗಳು ಮಹಿಳೆಯರಿಗೆ ನ್ಯಾಯವನ್ನೊದಗಿಸುವಂತೆ ಮೇಲ್ನೋಟಕ್ಕೆ ಕಂಡು ಬಂದರೂ ಈ ಸಾಮಾಜಿಕ ವ್ಯವಸ್ಥೆಯಲ್ಲಿ ಹಾಸು ಹೊಕ್ಕಾಗಿರುವ ಲಿಂಗ ಅಸಮಾನತೆಯ ಬೇರುಗಳನ್ನು ಕಿತ್ತೊಗೆಯಲು ನೆರವಾಗಲಿಲ್ಲ.

ಮಹಿಳೆಯರನ್ನು ರಕ್ಷಿಸುವುದಕ್ಕಿಂತ ಕುಟುಂಬ ಮತ್ತು ವಿವಾಹ ಸಂಬಂಧಗಳನ್ನು ಉಳಿಸಿಕೊಳ್ಳುವುದರತ್ತ ವಿಶೇಷ ಗಮನವನ್ನು ಹರಿಸಿದ್ದ ಈ ಕಾಯಿದೆಗಳನ್ನು ಪುನರ್‌ಪರಿಶೀಲಿಸಿ, ಅಗತ್ಯವಾದ ಬದಲಾವಣೆಗಳನ್ನು ತರಬೇಕೆಂಬ ಬೇಡಿಕೆಯನ್ನಿಟ್ಟಿದೇ ಸ್ವಾಯತ್ತ ಮಹಿಳಾ ಚಳವಳಿ.

ಮಹಿಳೆಯರ ಹಕ್ಕುಗಳನ್ನು ಸಂರಕ್ಷಿಸಬೇಕಾದರೆ ಈ ಸಮಾಜದ ಸಾಂಸ್ಕೃತಿಕ ಮತ್ತು ಆರ್ಥಿಕ ವ್ಯವಸ್ಥೆಯ ಚೌಕಟ್ಟಿನಲ್ಲಿ ಕಾಯಿದೆಗಳ ವಿಮರ್ಶೆಯಾಗಬೇಕು ಎಂಬ ಪ್ರಗತಿಪರ ಸಂಘಟನೆಗಳ ಹೋರಾಟವೇ ಸ್ತ್ರೀ-ಪುರುಷ ಸಮಾನತೆಯ ತತ್ವ ಹಾಗೂ ಆಚರಣೆಗಳ ಬಗ್ಗೆ ನಿಜವಾದ ಕಾಳಜಿ ಇಲ್ಲದವರನ್ನು ಮುಜುಗರಕ್ಕೀಡು ಮಾಡಿರುವುದು.

ವರದಕ್ಷಿಣೆ ವಿರೋಧಿ ಕಾಯಿದೆ ಮತ್ತು ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರು ಎದುರಿಸುವ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟಲು ರೂಪಿತವಾಗಿರುವ ನಿಯಮಗಳನ್ನು ಕೆಲವು ಮಹಿಳೆಯರು ಅಥವಾ ಅವರ ಕುಟುಂಬಗಳು ದುರ್ಬಳಕೆ ಮಾಡಿರುವಂತಹ ಘಟನೆಗಳು ನಡೆದಿವೆ, ನಿಜ. ಆದರೆ ಇವುಗಳನ್ನೇ ವೈಭವೀಕರಿಸಿ ಇಂತಹ ಕಾಯಿದೆಗಳನ್ನು ಏಕಪಕ್ಷೀಯ ಎಂದು ಬಿಂಬಿಸಿ ಅವುಗಳ ಅನುಷ್ಠಾನಕ್ಕೇ ತಡೆಯೊಡ್ಡುವುದು ಯಾವ ನ್ಯಾಯ? 

ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರು ಎದುರಿಸುವ ದೌರ್ಜನ್ಯಗಳನ್ನು ತಡೆಗಟ್ಟುವ ಕಾಯಿದೆ ವ್ಯಾಪ್ತಿಗೆ ಮನೆಗೆಲಸದವರನ್ನೂ ಸೇರಿಸಬೇಕು ಎಂಬ ನಿಯಮದ ಸೇರ್ಪಡೆಗೆ ಸಂಸತ್ತಿನ ಒಳಗೆ  ಕೆಲ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.

ಇದನ್ನು ಒಪ್ಪಿದರೆ ಅವರಿಗೆ ಅತಿಯಾದ ಸ್ವಾತಂತ್ರ್ಯವನ್ನು ನೀಡಿ ಈ ಕಾಯಿದೆಯ ದುರುಪಯೋಗಕ್ಕೆ ಅವಕಾಶ ನೀಡಿದಂತಾಗುತ್ತದೆ ಎಂಬುದು ಅವರ ವಾದ. ಮತ್ತೆ ಮತ್ತೆ ಈ ವಿಧೇಯಕವನ್ನು ಚರ್ಚೆಗಳಿಗೆ ಒಡ್ಡಿ ಅದು ಕಾಯಿದೆಯ ರೂಪ ತಳೆಯಲು ಅಡ್ಡಿ ಮಾಡುತ್ತಿರುವವರಿಗೆ ಶೋಷಿತ ಮಹಿಳೆಯರಿಗೆ ಸಹಾಯ ಮಾಡುವುದಕ್ಕಿಂತ ಲೈಂಗಿಕ ದೌರ್ಜನ್ಯಕ್ಕೆ ಕಾರಣರಾದವರನ್ನು ರಕ್ಷಿಸುವುದರತ್ತಲೇ ಹೆಚ್ಚು ಗಮನ ಇದ್ದಂತಿದೆ!

ಕೌಟುಂಬಿಕ ವಲಯದಲ್ಲಿ ಮಹಿಳೆಗೆ ನೀಡುವ ಹಕ್ಕುಗಳು ಪುರುಷ ಶೋಷಣೆಗೆ ಸೋಪಾನ ಹಾಕಿದಂತೆ ಎಂದು ವಾದ ಮಾಡುತ್ತಿರುವ ಪುರುಷ ಹಕ್ಕು ರಕ್ಷಣಾ ವೇದಿಕೆಗಳು ಹಾಗೂ ಇತರ ವ್ಯಕ್ತಿಗಳು ಈ ದೇಶದಲ್ಲಿರುವ ವಾಸ್ತವ ಪರಿಸ್ಥಿತಿಗಳನ್ನು ತಿಳಿಯಲು ಯತ್ನಿಸಲಿ.

ದಿನೇ ದಿನೇ ನಮ್ಮ ಕಣ್ಣು ಮುಂದೆಯೇ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ನಾನಾ ರೀತಿಯ ದೌರ್ಜನ್ಯಗಳಿಗೆ ಒಳಗಾಗುತ್ತಿದ್ದರೂ ದೌರ್ಜನ್ಯಗಳನ್ನು ಕುರಿತ ಅಂಕಿ-ಅಂಶಗಳು ಸ್ತ್ರೀವಾದಿಗಳ ಸೃಷ್ಟಿ  ಎಂಬ ತಪ್ಪು ಭಾವನೆಯನ್ನು ಬಿತ್ತಲು ಯತ್ನಿಸುತ್ತಿರುವವರು ಅಸೂಕ್ಷ್ಮ ಮನಃಸ್ಥಿತಿಯಿಂದ ಮೊದಲು ಹೊರಬರಲಿ.

ದೌರ್ಜನ್ಯ ಯಾರು ಯಾರ ಮೇಲೆ ಮಾಡಿದರೂ ಅದು ಖಂಡನೀಯ ಹಾಗೂ ಶಿಕ್ಷಾರ್ಹ. ಮೂಲಭೂತವಾಗಿ ದೌರ್ಜನ್ಯ ಮಾನವ ಹಕ್ಕುಗಳ ಉಲ್ಲಂಘನೆ. ಪುರುಷರು ಮತ್ತು ಮಹಿಳೆಯರ ತಪ್ಪುಗಳನ್ನು ಪರಾಮರ್ಶಿಸಲು ಬೇರೆ ಬೇರೆ ಮಾನದಂಡಗಳಿರಬೇಕು.

ಸ್ತ್ರೀಯರು ಮಾಡಿದ ತಪ್ಪುಗಳನ್ನೆಲ್ಲಾ ಅವರು ಸ್ತ್ರೀಯರೆಂಬ ಏಕೈಕ ಕಾರಣಕ್ಕೆ ಮನ್ನಿಸಬೇಕು ಎಂಬ ಅರ್ಥಹೀನ ವಾದಗಳನ್ನು ಸ್ತ್ರೀವಾದ ಎಂದಿಗೂ ಮಂಡಿಸಿಲ್ಲ.

ಸಮಾಜದಲ್ಲಿರುವ ಸ್ತ್ರೀ-ಪುರುಷ ಅಸಮಾನತೆಯ ಬೇರುಗಳನ್ನು ಗುರುತಿಸಿ, ಅವುಗಳನ್ನು ಕಿತ್ತೊಗೆದು ಈ ಎರಡು ಗುಂಪುಗಳು ಸ್ವತಂತ್ರ, ಮುಕ್ತ ಹಾಗೂ ಸಮಾನತೆಯ ತತ್ವಕ್ಕೆ ಬದ್ಧವಾದ ಬದುಕನ್ನು ನಡೆಸುವಂಥ ವಾತಾವರಣ ನಿರ್ಮಾಣವಾಗಬೇಕು ಎನ್ನುವುದೇ ಮಹಿಳಾ ಹಕ್ಕುಗಳಿಗಾಗಿ ಹೋರಾಡುತ್ತಿರುವ ಸ್ತ್ರೀವಾದಿಗಳ ಗುರಿ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಷ್ಟೆ.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT