ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣುದೇಹ-: ಕೋಮುದಂಗೆಗಳ ಕದನ ಮೈದಾನ

Last Updated 14 ಮೇ 2017, 20:12 IST
ಅಕ್ಷರ ಗಾತ್ರ

ಕೋಮು ದಂಗೆಗಳಲ್ಲಿ ಅತ್ಯಾಚಾರಕ್ಕೆ ಗುರಿಯಾದ ಹೆಣ್ಣುಮಕ್ಕಳು ಬದುಕಿ ಉಳಿದದ್ದು ವಿರಳ. ಹೀಗೆ ಉಳಿದವರ ಪೈಕಿ ನ್ಯಾಯ ಬೇಕೆಂದು ಛಲದಿಂದ ಸೆಣಸಿದವರು ಇನ್ನೂ ಅಪರೂಪ. ಅಂತಹ ಒಬ್ಬ ದಿಟ್ಟ ಹೆಣ್ಣುಮಗಳು ಬಿಲ್ಕಿಸ್ ಬಾನು.

ತನ್ನ ದೇಹವನ್ನು ಉಲ್ಲಂಘಿಸಿದ ಅತ್ಯಾಚಾರಿಗಳಿಗೆ ಶಿಕ್ಷೆಯಾಗುವ ತನಕ ಹದಿನೈದು ವರ್ಷಗಳ ಕಾಲ ಆಕೆ ನಡೆಸಿದ ಹೋರಾಟ ಚರಿತ್ರಾರ್ಹ. ದೇಶದ ಕೋಮುದಂಗೆ ಅತ್ಯಾಚಾರಗಳ ಚರಿತ್ರೆಯಲ್ಲಿ ಸಜೆ ದೊರೆತ ಮೊಟ್ಟ ಮೊದಲ ಪ್ರಕರಣವಿದು ಎನ್ನಲಾಗಿದೆ.

ತನ್ನ ತಾಯಿ, ತಂಗಿಯರು, ರಕ್ತ ಸಂಬಂಧಿ ಹೆಣ್ಣುಮಕ್ಕಳ ಮೇಲೆ ನಡೆಯುವ ಬರ್ಬರ ಅತ್ಯಾಚಾರವನ್ನು ಕಣ್ಣಾರೆ ಕಂಡು, ಅವರ ಕಣ್ಣೆದುರಿಗೇ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗುವ ಬಿಲ್ಕಿಸ್‌ಳನ್ನು ಆಕೆಯ ಅದಮ್ಯ ಇಚ್ಛಾಶಕ್ತಿಯೇ ಬದುಕಿಸಿ ಉಳಿಸುತ್ತದೆ. ತನ್ನ ಹಸುಗೂಸನ್ನು ಕಸಿದು ಬಂಡೆಯ ಮೇಲೆ ತಲೆ ಒಡೆದು ಬಿದ್ದು ಸಾಯುವಂತೆ ಗಾಳಿಗೆ ತೂರಿದ್ದನ್ನೂ ತನ್ನ ಎಲ್ಲ 14 ಸಂಬಂಧಿಕರು ಹೆಣಗಳಾಗಿ ಉರುಳುವುದನ್ನೂ ಕಣ್ಣಾರೆ ಕಂಡವಳು.

ಹಳ್ಳಿಗಾಡಿನ ಆಪ್ತ ವಾತಾವರಣದಲ್ಲಿ ಬೇರೆ ಕೋಮುಗಳಿಗೆ ಸೇರಿದರೂ ಚಿಕ್ಕಪ್ಪ, ದೊಡ್ಡಪ್ಪ, ಮಾವ ಎಂದು ಕರೆಯುವ ರೂಢಿ. ಹೀಗೆಂದು ತಾನು ಸಂಬೋಧಿಸಿದ್ದ ಗಂಡಸರೇ ತನ್ನ ಒಡಲು ಬಗೆದ ಕ್ರೌರ್ಯ ಆಕೆಯನ್ನು ಇಂದಿಗೂ ಮರಗಟ್ಟಿಸಿದೆ.

ಮೊನ್ನೆ ಸಂಸತ್ ಭವನದ ಸಮೀಪದ ಪ್ರೆಸ್‌ಕ್ಲಬ್ ಆಫ್ ಇಂಡಿಯಾದಲ್ಲಿ ಪತ್ರಿಕಾಗೋಷ್ಠಿ. ಸಂಶಯ ಮಾತ್ರದಿಂದಲೇ ಹೆಂಡತಿಯನ್ನು ತ್ಯಜಿಸುವ ಭೂಪರಿರುವ ದೇಶದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಗುರಿಯಾದ ಪತ್ನಿಯನ್ನು ಕಣ್ಣರೆಪ್ಪೆಯಂತೆ ಪ್ರೀತಿಯಿಂದ ಕಾದಿರುವ ಗಂಡ ರಸೂಲ್ ಕೂಡ ಬಿಲ್ಕಿಸ್ ಪಕ್ಕದಲ್ಲಿದ್ದ. ತಾಸು ಮೀರಿ ನಡೆದ ಪತ್ರಿಕಾಗೋಷ್ಠಿಯುದ್ದಕ್ಕೂ ಬಿಲ್ಕಿಸ್ ಮುಖದ ಒಂದು ಗೆರೆಯೂ ಸಡಿಲಾಗಲಿಲ್ಲ. ಮಡಿಲಲ್ಲಿ ಆಡಿದ್ದ ಪುಟ್ಟ ಮಗಳಿಗಾಗಿ ಒಮ್ಮೆ ಕಂಡೂ ಕಾಣದ ನಸುನಗು ವಿನಾ ಮರಗಟ್ಟಿದ ನಿರ್ವಿಕಾರ ಮುಖದಲ್ಲಿ ನಗುವು ಸೆಡವು ಎರಡೂ ಇರಲಿಲ್ಲ.

ಗಂಡಸರ ಮೇಲಿನ ಹಗೆ ತೀರಿಸಿಕೊಳ್ಳಲು, ಅವಮಾನಪಡಿಸಲು, ಆತ್ಮಸ್ಥೈರ್ಯವನ್ನು ಉಡುಗಿಸಲು ಅವರ ತಾಯಂದಿರು, ಪುತ್ರಿಯರು, ಪತ್ನಿಯರು, ಸೋದರಿಯರು, ಸೊಸೆಯಂದಿರ ದೇಹಗಳನ್ನು ಅಮಾನುಷವಾಗಿ ಅತಿಕ್ರಮಿಸಿ ಉಲ್ಲಂಘಿಸುವ ಗಂಡಾಳಿಕೆಯ ವಿಕೃತಿ ಇಂದು ನೆನ್ನೆಯದಲ್ಲ. ಹೆಣ್ಣು ದೇಹವನ್ನು ತನ್ನ ಖಾಸಗಿ ಆಸ್ತಿಪಾಸ್ತಿ ಎಂದು ಬಗೆಯುತ್ತ ಬಂದಿರುವ ಗಂಡು ನೋಟದ ಆಳಗಳಲ್ಲಿ ಬೇರು ಬಿಟ್ಟಿರುವ ವಿಕೃತಿಯಿದು.

ಅಮೆರಿಕನ್ ಮಹಿಳೆಯೊಬ್ಬಳು ಹೇಳುತ್ತಾಳೆ: ಆಸ್ತಿಪಾಸ್ತಿ ಬಾಯಿಲ್ಲದ್ದು. ಅದಕ್ಕೆ ಆಯ್ಕೆಗಳು ಇರುವುದಿಲ್ಲ. ಅದನ್ನು ಸಾಗಿಸಬಹುದು, ಮೂಲೆಗೆ ಸರಿಸಬಹುದು, ನೆಲಸಮ ಮಾಡಲೂಬಹುದು. ಭಾರಿ ಒಜ್ಜೆ ಒತ್ತಡದಲ್ಲಿ ಮುರಿದು ಬಿದ್ದರೆ, ಒಡೆದು ಹೋದರೆ ಮತ್ತೊಂದನ್ನು ಖರೀದಿಸಿ ತರಬಹುದು. ತನ್ನನ್ನು ಎಲ್ಲಿ ಖರೀದಿಸಬೇಕು ಹೇಗೆ ಇರಿಸಬೇಕು ಎಲ್ಲಿಗೆ ಸಾಗಿಸಬೇಕು ಎಂದು ಆಸ್ತಿಪಾಸ್ತಿಯನ್ನು ಯಾರಾದರೂ ಕೇಳುತ್ತಾರೆಯೇ? ಹೆಣ್ಣು ಕೂಡ ಪಿತೃಪ್ರಧಾನ ವ್ಯವಸ್ಥೆಯ ಪಾಲಿಗೆ ಅಂತಹುದೇ ಒಂದು ಆಸ್ತಿಪಾಸ್ತಿ.

ಶತ್ರುವಿಗೆ, ಪರಧರ್ಮಕ್ಕೆ ಈ ಆಸ್ತಿ ಒಲಿಯುವಂತಿಲ್ಲ. ಒಲಿದರೆ ಅದನ್ನು ಹಾಳುಗೆಡುವುದು ಸಮಾಜಸಮ್ಮತ ಮತ್ತು ಮಗುಮ್ಮಾಗಿ ಧರ್ಮಸಮ್ಮತ ಕೂಡ. ಗುಜರಾತಿನ ಗೋಧ್ರೋತ್ತರ ದಂಗೆಗಳಲ್ಲಿ ಮುಸಲ್ಮಾನನನ್ನು ಮದುವೆಯಾದ ಗೌರಿಯನ್ನು 30- 40 ಮಂದಿ ಗುಂಪಿನ ಎದುರು ಬಹಿರಂಗವಾಗಿ ಸಾಮೂಹಿಕ ಅತ್ಯಾಚಾರದ ಶಿಕ್ಷೆಗೆ ಗುರಿಪಡಿಸಲಾಯಿತು.

ಗುಂಪಿನಿಂದ ಒಬ್ಬೇ ಒಬ್ಬ ವ್ಯಕ್ತಿಯೂ ತಡೆಯಲು ಮುಂದೆ ಬರಲಿಲ್ಲ. ಗೌರಿಯ ಅಪ್ರಾಪ್ತ ವಯಸ್ಸಿನ ಮಗಳು ಈ ಅತ್ಯಾಚಾರಕ್ಕೆ ಸಾಕ್ಷಿಯಾದಳು. ಮುಂದೆ ಗೌರಿ ಎರಡೆರಡು ಕೇಸುಗಳನ್ನು ಸೆಣಸಬೇಕಾಯಿತು. ಒಂದು ತನ್ನ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದರೆ ಮತ್ತೊಂದು ತನ್ನ ಮಗಳ ಅಪಹರಣ ಕುರಿತದ್ದು.

ಗಂಡಾಳಿಕೆಯ ವಿಕೃತಿಗಳಲ್ಲಿ ಹೆಣ್ಣುಮಕ್ಕಳೂ ಭಾಗಿಗಳಾಗುವಂತೆ ಅವರ ಮೆದುಳು ತೊಳೆಯಲಾಗಿದೆ. ನರೋಡ ಪಾಟ್ಯ ದಂಗೆಗಳ ರೂವಾರಿ ಬಾಬು ಭಜರಂಗಿ ತಾನು ತನ್ನ ಪತ್ನಿಯ ಕಣ್ಮುಂದೆಯೇ ಮತ್ತೊಂದು ಕೋಮಿನ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸಿದ್ದಾಗಿ ಜಂಭ ಕೊಚ್ಚಿಕೊಂಡದ್ದು ಕುಟುಕು ಕಾರ್ಯಾಚರಣೆಯ ಕ್ಯಾಮೆರಾದಲ್ಲಿ ದಾಖಲಾಗಿದೆ. ಗಂಡು ರುಂಡಗಳನ್ನು ತರಿದು ಹೆಣ್ಣು ಮುಂಡಗಳನ್ನು ಧ್ವಸ್ತಗೊಳಿಸಿದೆನೆಂಬ ಈ ಜಂಬದ ಹೇಳಿಕೆ ಭಜರಂಗಿಯ ಪಾಲಿಗೆ ಮುಳುವಾಯಿತು. ಜೀವಾವಧಿ ಶಿಕ್ಷೆಯಾಗಿ ಜೈಲುಪಾಲಾಗಿದ್ದಾನೆ.

ಕೋಮುದಂಗೆಗಳೂ ಸೇರಿದಂತೆ ಚರಿತ್ರೆ ಮತ್ತು ವರ್ತಮಾನ ಕಾಲದ ಧಾರ್ಮಿಕ, ಜನಾಂಗೀಯ, ರಾಜಕೀಯ, ಆರ್ಥಿಕ ಹಿತಾಸಕ್ತಿಯ ಕದನಗಳು, ಯುದ್ಧಗಳಿಗೆ ಲಕ್ಷ ಲಕ್ಷ ಹೆಣ್ಣು ದೇಹಗಳು ಕದನಭೂಮಿಗಳಾಗಿ ಪರಿಣಮಿಸಿದ್ದು ನಾಚಿಕೆಗೇಡಿನ ನಿಜ. ದೇಶ ದೇಶಗಳ ನಡುವೆ, ರಾಜ್ಯ ರಾಜ್ಯಗಳ ನಡುವೆ, ಪರಸ್ಪರ ಕೆಕ್ಕರಿಸಿ ನಿಂತ ಎರಡು ಧರ್ಮಗಳ ನಡುವೆ, ಎರಡು ಜಾತಿಗಳ ನಡುವೆ, ಅದೇ ಜಾತಿಯ ಎರಡು ಗುಂಪುಗಳ ಕುರುಡು ದ್ವೇಷಕ್ಕೂ ಹೆಣ್ಣು ದೇಹಗಳೇ ಆಹುತಿಯ ಸರಕುಗಳು. ಆಕೆಯನ್ನು ಎಷ್ಟು ತೀವ್ರವಾಗಿ ಎಷ್ಟು ಅಮಾನುಷವಾಗಿ ಉಲ್ಲಂಘಿಸಲಾದರೆ ಅಷ್ಟು ತೀವ್ರವಾಗಿ ಅಮಾನುಷವಾಗಿ ಆಕೆಯನ್ನು ಹೊಂದಿದ ಅವನ ಮರ್ಮಸ್ಥಾನಕ್ಕೆ ಇರಿದು ಅವಮಾನಪಡಿಸಿದಂತೆ.

‘ಕುಟುಂಬ ಮರ್ಯಾದೆ’ಯ ಹೊಣೆಗಾರಿಕೆಯನ್ನು ಹೆಣ್ಣುದೇಹಗಳ ಮೇಲೆಯೇ ಹೊರಿಸಲಾಗಿದೆ. ವಿಶೇಷವಾಗಿ ಆಕೆ ಮತ್ತೊಂದು ಜಾತಿ, ಧರ್ಮ ಅಥವಾ ವರ್ಗಕ್ಕೆ ಸೇರಿದ ಗಂಡನ್ನು ವರಿಸಿದಾಗ ನಡೆಯುವ ‘ಅವಮರ್ಯಾದೆ ಹತ್ಯೆ’ಗಳು ಇಲ್ಲವೇ ಯುದ್ಧಗಳು- ಘರ್ಷಣೆಗಳಲ್ಲಿ ಲೈಂಗಿಕ ಅತ್ಯಾಚಾರಗಳನ್ನು ಶತ್ರುವಿಗೆ ವಿಧಿಸುವ ಶಿಕ್ಷೆಯೆಂದು ಜರುಗಿಸಿದಾಗ ಈ ಮಾತು ಹೆಚ್ಚು ನಿಜವೆನಿಸುತ್ತದೆ.

ಗುಜರಾತಿನ ಕೋಮು ದಂಗೆಗಳಲ್ಲಿ ಕರುಳಿನ ಆಳದಿಂದ ದ್ವೇಷಿಸುವ ಎರಡು ಧರ್ಮಗಳ ಅಂಧ ಯುದ್ಧದಲ್ಲಿ ಹೆಣ್ಣುಮಕ್ಕಳು ನವೆದು ನಶಿಸಿದರು. ಆದರೆ ದೆಹಲಿಯ 1982ರ ದಂಗೆಗಳಲ್ಲಿ, ಭಿನ್ನ ಧರ್ಮಗಳಾದರೂ ಹಲವು ಸಾಮ್ಯತೆಗಳಿರುವ, ಕೂಡಿ ಬದುಕಿ ಬಾಳಿದ ಹಿಂದೂ- ಸಿಖ್ಖರ ನಡುವೆಯೇ ಇಂತಹ ಘೋರ ಘಟಿಸಿತು.

ಇಂದಿರಾ ಗಾಂಧಿ ಹತ್ಯೆಯ ನಂತರ ಜರುಗಿದ್ದ ಮತ್ತೊಂದು ಮಹಾ ಮಾರಣಹೋಮದಲ್ಲಿ ಸಿಖ್ ರುಂಡಗಳ ತರಿದವರ ರಕ್ತದಾಹ ಅಲ್ಲಿಗೇ ತಣಿಯಲಿಲ್ಲ. ಸಾವಿರಾರು ಸಿಖ್ ಹೆಣ್ಣುಮಕ್ಕಳ ದೇಹಗಳನ್ನು ಉಲ್ಲಂಘಿಸಲಾಯಿತು ಕೂಡ. ಗುಜರಾತ್ ಮತ್ತು ದೆಹಲಿಯ ಈ ಎರಡೂ ನರಮೇಧಗಳು ಮತ್ತು ಹೆಣ್ತನದ ಉಲ್ಲಂಘನೆಗಳು ನಡೆದದ್ದು ಪ್ರಭುತ್ವಗಳ ಮೂಗಿನ ಕೆಳಗೇ ಎಂಬುದನ್ನು ಮರೆಯುವಂತಿಲ್ಲ.

ಬಿಲ್ಕಿಸ್ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ದೂರು ದಾಖಲಿಸಿಕೊಳ್ಳಲೂ ಪೊಲೀಸರು ತಯಾರಿರಲಿಲ್ಲ. ವಿಷದ ಚುಚ್ಚುಮದ್ದು ನೀಡಿ ಕೊಲ್ಲುವ ಬೆದರಿಕೆ ಹಾಕಿದರು. ನಂತರವೂ ವಿಚಾರಣೆಯ ಹಾದಿ ತಪ್ಪಿಸಿ ಬರ್ಖಾಸ್ತುಗೊಳಿಸುವ ಹುನ್ನಾರ ಹೆಜ್ಜೆ ಹೆಜ್ಜೆಗೆ ನಡೆಯಿತು. ಇಂತಹ ಎಲ್ಲ ಸಂಚುಗಳನ್ನು ಮೆಟ್ಟಿ ನಿಂತ ಬಿಲ್ಕಿಸ್ ನೆರವಿಗೆ ಬಂದದ್ದು ಅಂತಿಮವಾಗಿ ಸುಪ್ರೀಂ ಕೋರ್ಟ್.

ಪ್ರಕರಣವನ್ನು ಸಿಬಿಐಗೆ ಒಪ್ಪಿಸಿತು. ವಿಚಾರಣೆ ಗುಜರಾತಿನಿಂದ ಹೊರಗೆ ಮಹಾರಾಷ್ಟ್ರದಲ್ಲಿ ನಡೆಯಿತು. ಸಿಬಿಐನ ದಕ್ಷ ತನಿಖೆಯು ಅಪರಾಧಿಗಳನ್ನು ಕಟಕಟೆಗೆ ತಂದು ನಿಲ್ಲಿಸಿತು. ಅಧೀನ ನ್ಯಾಯಾಲಯ ಸಜೆಯ ತೀರ್ಪು ನೀಡಿತು. ಬಾಂಬೆ ಹೈಕೋರ್ಟ್ ಈ ತೀರ್ಪನ್ನು ಮೊನ್ನೆ ಮೊನ್ನೆ ಎತ್ತಿ ಹಿಡಿಯಿತಲ್ಲದೆ, ಕಾನೂನಿನ ಉದ್ದ ಹಸ್ತಗಳಿಂದ ತಪ್ಪಿಸಿಕೊಂಡಿದ್ದ ಪೊಲೀಸ್ ಅಧಿಕಾರಿಗಳನ್ನೂ ಪಾತಕಿಗಳೆಂದು ಸಾರಿತು.

ಕದನಗಳಲ್ಲಿ ಹೆಣ್ಣುಮಕ್ಕಳ ಮೇಲೆ ಜರುಗುವ ಲೈಂಗಿಕ ಹಿಂಸೆಯು ಇತಿಹಾಸದ ಮಹಾಮೌನಗಳಲ್ಲಿ ಒಂದು ಎನ್ನುತ್ತದೆ ವಿಶ್ವಸಂಸ್ಥೆ. ಕದನನಿರತ ದೇಶಗಳ ನಡುವಣ ಕದನವಿರಾಮ ಒಪ್ಪಂದಗಳು, ನಿಶ್ಶಸ್ತ್ರೀಕರಣ ಕಾರ್ಯಕ್ರಮಗಳು ಹಾಗೂ ಶಾಂತಿ ಸ್ಥಾಪನೆಯ ಮಾತುಕತೆಗಳ ಮೇಜಿನಲ್ಲಿ ಲೈಂಗಿಕ ಹಿಂಸೆಯ ವಿಷಯ ಪ್ರಸ್ತಾಪಕ್ಕೆ ಬರುವುದೇ ಬಲು ವಿರಳ ಎನ್ನುತ್ತದೆ ವಿಶ್ವಸಂಸ್ಥೆ.

ಐದು ವರ್ಷಗಳ ಹಿಂದೆ ನಡೆದ ಉತ್ತರಪ್ರದೇಶದ ಮುಜಫ್ಫರ್ ನಗರ ಕೋಮು ದಂಗೆಗಳ ಸಂದರ್ಭದಲ್ಲಿ ಮೂರು ಹೆಣ್ಣುಮಕ್ಕಳ ತಾಯಿಯೊಬ್ಬಳ ಈ ಮಾತುಗಳು- ‘ನನ್ನ ಮೂವರು ಹೆಣ್ಣುಮಕ್ಕಳು (ವಯಸ್ಸು 17, 18, 21) ಮತ್ತು ನನ್ನ ಕುಟುಂಬದ ಮತ್ತೊಬ್ಬ ಹೆಣ್ಣುಮಗಳ ಮೇಲೆ 13 ಮಂದಿ ದಂಗೆಕೋರರು ಸಾಮೂಹಿಕ ಅತ್ಯಾಚಾರ ನಡೆಸಿದರು. ಈ ನಿರ್ಲಜ್ಜ ಮತ್ತು ಪಾಶವಿ ಕೃತ್ಯವನ್ನು ನೋಡುವಂತೆ ನನ್ನನ್ನು ಬಲವಂತಪಡಿಸಲಾಯಿತು...’
ಇಂತಹುದೇ ಅತ್ಯಾಚಾರಗಳಿಗೆ ಗುರಿಯಾದ ನೂರಾರು ಹೆಣ್ಣುಮಕ್ಕಳು ಪೊಲೀಸರಿಗೆ ದೂರು ನೀಡಲು ಮುಂದೆ ಬರಲಿಲ್ಲ. ತನ್ಮ ಮೇಲೆ ಅತ್ಯಾಚಾರ ಆಗಲಿಲ್ಲ, ಮತ್ತೊಬ್ಬಾಕೆಯ ಮೇಲೆ ಆಗಿದ್ದನ್ನು ನೋಡಿದೆ ಎಂದು ಹೇಳಿ ಅಪಮಾನ ನುಂಗಿಕೊಂಡ ಇವರಿಗೆ ಅತ್ಯಾಚಾರದ ಕಳಂಕ ಬದುಕಿನದ್ದಕ್ಕೂ ಅಂಟಿಕೊಳ್ಳುವ ಭಯ. ಗಂಡನಿಗೆ ಗೊತ್ತಾದರೆ ಕೈ ಬಿಟ್ಟಾನೆಂಬ ಅಳುಕು.

ಚರಿತ್ರೆ ಮತ್ತು ವರ್ತಮಾನಗಳೆರಡೂ ಇಂತಹ ಲಜ್ಜಾಸ್ಪದ ದಾರುಣಗಳಿಂದ ಕಿಕ್ಕಿರಿದಿವೆ. ಜಪಾನಿ ಸೈನಿಕರು ಕೊರಿಯಾದ ಹೆಣ್ಣುಮಕ್ಕಳನ್ನು ಲೈಂಗಿಕ ದಾಸಿಯರೆಂದು ನಡೆಸಿಕೊಂಡದ್ದರ ಕುರಿತು ಜಪಾನ್ ದೇಶಕ್ಕೆ ಇಂದಿಗೂ ವಿಷಾದವಿಲ್ಲ. ಭಾಷೆ ಮತ್ತು ಸಂಸ್ಕೃತಿಯ ದಬ್ಬಾಳಿಕೆ ವಿರುದ್ಧ ಸಿಡಿದೆದ್ದು ಪಾಕಿಸ್ತಾನದ ವಿರುದ್ಧ ಸೆಣಸಿ ಸ್ವತಂತ್ರ ದೇಶವಾಗಿ ಉದಯಿಸಿದ ಪೂರ್ವ ಬಂಗಾಳವನ್ನು ಮಣಿಸುವ ಪ್ರಯತ್ನಕ್ಕೆ ಪಾಕ್ ಸೇನೆ ಬಳಸಿದ್ದು ಬಂಗಾಳಿ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಅಸ್ತ್ರವನ್ನು.ಬಂಗಾಳಿ ಹೆಣ್ಣುಗಳ ಬಸಿರುಗಳಿಗೆ ಪಂಜಾಬಿ ಸಂತಾನ ತುರುಕುತ್ತೇವೆ ನೋಡಿ ಎಂಬ ಹೇಷಾರವ.

ಉತ್ತರ ಇರಾಕ್‌ನ ಸಾವಿರ ಸಾವಿರ ಯಜೀದಿ ಯುವತಿಯರನ್ನು ಇಸ್ಲಾಮಿಕ್ ಉಗ್ರವಾದಿಗಳು ವಶಕ್ಕೆ ತೆಗೆದುಕೊಂಡು ಲೈಂಗಿಕ ಗುಲಾಮಗಿರಿಗೆ ಇರಿಸಿಕೊಂಡದ್ದು, ತಮ್ಮ ತೆವಲು ತೀರಿದ ಮೇಲೆ ಇತರರಿಗೆ ಹರಾಜು ಕೂಗಿ ಮಾರಾಟ ಮಾಡಿದ್ದು ನೆನ್ನೆ ಮೊನ್ನೆಯ ನಾಚಿಕೆಗೇಡು. ಇಸ್ಲಾಮ್ ಧರ್ಮವನ್ನು ಒಪ್ಪದೆ ‘ಸೈತಾನ’ನನ್ನು ಪೂಜಿಸುವ ಧರ್ಮವನ್ನು ನೆಚ್ಚಿದ ಅಲ್ಪಸಂಖ್ಯಾತ ಯಜೀದಿ ಕುಲಕ್ಕೆ ಸೇರಿದ್ದು ಈ ಹೆಣ್ಣುಮಕ್ಕಳ ಅಪರಾಧ.

ಕಾಶ್ಮೀರದಲ್ಲಿ, ಮಣಿಪುರದಲ್ಲಿ ಬಸ್ತರಿನಲ್ಲಿ ಬಂಡುಕೋರರಿಗೆ ‘ಶಿಕ್ಷೆ’ ವಿಧಿಸಲು ಸ್ವತಂತ್ರ ಭಾರತದ ಸೇನೆ ಬಳಸಿಕೊಳ್ಳುತ್ತಿರುವುದು ಅದೇ ಹೆಣ್ಣು ದೇಹಗಳನ್ನು. ಸಶಸ್ತ್ರ ಪಡೆಗಳು ನಡೆಸುವ ಅತ್ಯಾಚಾರವನ್ನು ಪ್ರಶ್ನಿಸುವುದು ದೇಶದ್ರೋಹ ಎಂಬ ವಾತಾವರಣವನ್ನು ಸೃಷ್ಟಿಸಲಾಗಿದೆ.

ಮಾವೊವಾದಿನಿಗ್ರಹ ಕಾರ್ಯಾಚರಣೆ ನಡೆಸಲೆಂದು ವರ್ಷದ ಹಿಂದೆ ಬಸ್ತರಿನ ಐದು ಹಳ್ಳಿಗಳ ಮೇಲೆ ಎರಗಿದ ಪೊಲೀಸರು ಮತ್ತು ಅರೆಸೇನಾ ಪಡೆಗಳು ಅಸಹಾಯಕ ಆದಿವಾಸಿ ಹೆಣ್ಣುಮಕ್ಕಳ ಮೇಲೆ ನಡೆಸಿರುವ ದುಷ್ಕೃತ್ಯಗಳು ಮೈನಡುಗಿಸಿ ಹೇವರಿಕೆ ಹುಟ್ಟಿಸುವಂತಹವು.. ಹೆಣ್ಣುಮಕ್ಕಳ ತೊಡೆ ನಿತಂಬಗಳನ್ನು ಥಳಿಸಲಾಯಿತು. ಚಿಕ್ಕ ವಯಸ್ಸಿನ ಬಾಲೆ, ಗರ್ಭಿಣಿಯನ್ನೂ ಬಿಡದೆ ಅತ್ಯಾಚಾರ ನಡೆಸಲಾಯಿತು.

ಬಾಣಂತಿಯರೆಂದು ಬೇಡಿಕೊಂಡರೂ ಬಿಡದೆ ರವಿಕೆ ಬಿಚ್ಚಿ ಹಾಲು ಒಸರುತ್ತಿದೆಯೇ ಎಂದು ಹಿಸುಕಿ ನೋಡಲಾಯಿತು. ಬಸುರಿಯ ಬಟ್ಟೆ ಹರಿದು ನೀರಿಗೆ ನೂಕಿ ಉಸಿರು ಕಟ್ಟಿಸಿ ಅತ್ಯಾಚಾರ ಮಾಡಲಾಯಿತು. ಜನನಾಂಗಗಳಿಗೆ ಖಾರದ ಪುಡಿ ತುರುಕುವ ಬೆದರಿಕೆ. ಆ ಗ್ರಾಮದ ಗಂಡಸರು ಮಾವೊವಾದಿಗಳಿಗೆ ನೆರವಾಗಿದ್ದರೆಂದು ಅವರ ಕುಟುಂಬಗಳ ಹೆಣ್ಣುಮಕ್ಕಳಿಗೆ ನೀಡಿದ ಲೈಂಗಿಕ ಶಿಕ್ಷೆಯಿದು.

ಚರಿತ್ರೆಯಲ್ಲಿ ಹಿಂದೂ ಹೆಣ್ಣುಮಕ್ಕಳನ್ನು ವಶಪಡಿಸಿಕೊಂಡು ಮುಸಲ್ಮಾನ ಸಂತತಿಯನ್ನು ಹುಟ್ಟಿಸಿದ ದಾಳಿಕೋರ ಮುಸ್ಲಿಂ ದೊರೆಗಳ ಮುಸ್ಲಿಂ ಪತ್ನಿಯರು ಹಿಂದೂ ರಾಜರ ಕೈವಶ ಆದಾಗ ಅವರನ್ನು ಹೆಣ್ಣೆಂದು ಗೌರವಿಸಿ ಬಿಟ್ಟು ಕೊಟ್ಟ ಸದ್ಗುಣವನ್ನು ‘ಬುದ್ಧಿ ಕೆಟ್ಟ ನಡೆ’ ಮುಂತಾದ ಕಟುನುಡಿಗಳಲ್ಲಿ ಖಂಡಿಸುತ್ತಾರೆ ವಿನಾಯಕ ದಾಮೋದರ ಸಾವರ್ಕರ್.

ಕಲ್ಯಾಣದ ಮುಸ್ಲಿಂ ರಾಜ್ಯಪಾಲನ ಸೊಸೆಯನ್ನು ಗೌರವದಿಂದ ನಡೆಸಿಕೊಂಡು ವಾಪಸು ಕಳಿಸುವ ಛತ್ರಪತಿ ಶಿವಾಜಿ ಮತ್ತು ಪೋರ್ಚುಗೀಸ್ ರಾಜ್ಯಪಾಲನ ಪತ್ನಿಯನ್ನು ಸಮ್ಮಾನದಿಂದ ವಾಪಸು ಮಾಡುವ ಚೀಮಾಜಿ ಅಪ್ಪ ಅವರ ನಡೆಯನ್ನು ಓತಪ್ರೋತವಾಗಿ ಟೀಕಿಸುತ್ತಾರೆ.

ದಾಳಿಕೋರ ಮುಸ್ಲಿಮರು ಮಾಡಿದ್ದನ್ನು ಆರಂಭದಲ್ಲಿಯೇ ಹಿಂದೂ ರಾಜರು ಅವರ ಹೆಣ್ಣುಮಕ್ಕಳಿಗೆ ಮಾಡಿದ್ದರೆ, ಹಿಂದೂ ಹೆಣ್ಣುಮಕ್ಕಳತ್ತ ಕಣ್ಣೆತ್ತಿ ನೋಡುವ ಧೈರ್ಯ ಕೂಡ ಅವರಿಗೆ ಇರುತ್ತಿರಲಿಲ್ಲ ಎಂದು ವಾದಿಸುತ್ತಾರೆ.

Six Glorious Epochs of Indian History ಎಂಬ ಉದ್ಗ್ರಂಥದ ಎಂಟನೆಯ ಅಧ್ಯಾಯದ ಹೆಸರು Perverted Conception of Virtues. ಸಮಕಾಲೀನ ಭಾರತದ ಕೋಮು ದಂಗೆಗಳಲ್ಲಿ ಸಾವರ್ಕರ್ ಅವರ ಈ ರೊಚ್ಚು ಅಭಿವ್ಯಕ್ತಿ ಪಡೆದಿದ್ದರೆ ಅದು ಕೇವಲ ಆಕಸ್ಮಿಕ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT