ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣುಮಗಳ ಮುಖದಲ್ಲಿ ನಗು ಮೂಡಿಸಿದ ತೃಪ್ತಿ

Last Updated 8 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನಾನು ಕೆಲಸಕ್ಕೆ ಸೇರಿದ ಹೊಸದು. ಮೈಸೂರಿನಲ್ಲಿ ತರಬೇತಿ ಮುಗಿಸಿಕೊಂಡು ಬಂದ ನಂತರ  ಬೆಂಗಳೂರಿನ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರೊಬೆಷನರಿ ಆಗಿ ಕೆಲಸ ನಿರ್ವಹಿಸುತ್ತಿದ್ದೆ. ಅಲ್ಲಿ ಕೆ.ಎನ್.ವೀರಪ್ಪ ಎಂಬ ಹಿರಿಯ ಸಬ್ ಇನ್ಸ್‌ಪೆಕ್ಟರ್ ಇದ್ದರು. ಅವರನ್ನು ವಿಶೇಷ ತರಬೇತಿಗೆಂದು ಕಳುಹಿಸಿದ ಕಾರಣ ಇನ್ನೊಬ್ಬರು ಎಎಸ್‌ಐ ಅವರಿಗೆ ಠಾಣೆಯ ಉಸ್ತುವಾರಿ ವಹಿಸಿದ್ದರು.

1977ರ ನವೆಂಬರ್‌ನಲ್ಲಿ ನಾನು ಕೆಲಸಕ್ಕೆ ಸೇರಿದ್ದು. 1978ರ ಪ್ರಾರಂಭದಲ್ಲಿ ಡಿಸಿಪಿ, ಒಂದು ಅರ್ಜಿಯನ್ನು ಠಾಣೆಗೆ ಕಳುಹಿಸಿಕೊಡುತ್ತಿರುವುದಾಗಿ ಫೋನ್ ಮಾಡಿದರು. ಒಂದು ಮುಖ್ಯವಾದ ಸಮಸ್ಯೆ ಇದೆಯೆಂದೂ ಅದನ್ನು ಎಎಸ್‌ಐಗೆ ಹೇಳಿ ಬಗೆಹರಿಸುವಂತೆಯೂ ಆದೇಶಿಸಿದರು. ಅಂದಂತೆಯೇ ಅವರಿಂದ ಅರ್ಜಿ ಬಂತು. ಅದನ್ನು ನೋಡಿ ಎಎಸ್‌ಐ ದಿಕ್ಕು ತೋಚದಂತಾದರು. ಆ ಅರ್ಜಿಯನ್ನು ನನಗೆ ತೋರಿಸಿ, ಇದಕ್ಕೆ ಏನಾದರೂ ಪರಿಹಾರವಿದೆಯೇ ಎಂದು ಸೂಕ್ಷ್ಮವಾಗಿ ಕೇಳಿದರು.

ಅರ್ಜಿಯನ್ನು ನೋಡಿದೆ. ಮೈಸೂರು ಮೂಲದ ತಮಿಳು ಭಾಷಿಕರೊಬ್ಬರಿಂದ ಅದು ಬಂದಿತ್ತು. ಆ ವ್ಯಕ್ತಿ ಬ್ರಿಗೇಡ್ ರಸ್ತೆಯ ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ಮಧ್ಯಮವರ್ಗದ ಕುಟುಂಬದವನು. `ಮದುವೆಯಾಗಿ ಹತ್ತು ವರ್ಷವಾಗಿದೆ. ಸಂಸಾರ ಹೇಗೋ ನಡೆದುಕೊಂಡು ಬಂದಿದೆ.

ಆದರೆ, ಹೆಂಡತಿ ದೈಹಿಕ ಸಂಬಂಧ ಬೆಳೆಸಲು ನಿರಾಕರಿಸುತ್ತಿದ್ದಾಳೆ. ಹತ್ತು ವರ್ಷದಿಂದ ಇದೇ ರೀತಿ ಬದುಕಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದೇನೆ. ನನಗೆ ನ್ಯಾಯ ದೊರಕಿಸಿ ಕೊಡಿ~ ಎಂಬ ಧಾಟಿಯ ಅಹವಾಲು ಆ ವ್ಯಕ್ತಿ ಸಲ್ಲಿಸಿದ ಅರ್ಜಿಯಲ್ಲಿತ್ತು.

ಭಾರತೀಯ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಪ್ರಕಾರ ಮಹಿಳೆಯರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸುವಂತಿಲ್ಲ. ಮೇಲಾಗಿ ಇಂಥ ಪ್ರಕರಣಗಳು ಪೊಲೀಸರ ವ್ಯಾಪ್ತಿಗೇ ಬರುವುದಿಲ್ಲ. ಕಾನೂನಿನ ಪುಸ್ತಕಗಳನ್ನು ಅದೇತಾನೆ ಓದಿ ಕೆಲಸಕ್ಕೆ ಸೇರಿದ್ದರಿಂದ ನನಗೆ ಈ ಸೂಕ್ಷ್ಮಗಳು ಸ್ಪಷ್ಟವಾಗಿ ಗೊತ್ತಿತ್ತು.

ತುಂಬು ಕುಟುಂಬದಲ್ಲಿದ್ದ ಎಎಸ್‌ಐ ಸಜ್ಜನರಾಗಿದ್ದರು. ಅವರಿಗೆ ಆ ಕುಟುಂಬದ ಸಮಸ್ಯೆ ಬಗೆಹರಿಸಬೇಕೆಂಬ ಕಳಕಳಿ ಇತ್ತು. ತಾವೇ ಹೋಗಿ, ದೂರು ಕೊಟ್ಟಿದ್ದ ವ್ಯಕ್ತಿಯ ಪತ್ನಿಯ ಜೊತೆಗೆ ಮಾತಾಡಿ ಮನವೊಲಿಸಲು ಯತ್ನಿಸಿ ಎಂದು ನಾನು ಹೇಳಿದೆ.

ಅವರು ಹೋಗಿ, ಬಂದರು. ಆ ಮಹಿಳೆ ಮಾತನಾಡಲು ಒಪ್ಪದೆ, ಕೂಗಾಡಿ ಕಳುಹಿಸಿಬಿಟ್ಟಿದ್ದಳು.  ಅಸಹಾಯಕರಾದ ಎಎಸ್‌ಐ ಏನೂ ಮಾಡಲು ಸಾಧ್ಯವಿಲ್ಲ ಎಂದು ಡಿಸಿಪಿಗೆ ತಿಳಿಸಿದರು. ಡಿಸಿಪಿ ಕೂಡ ತಮಿಳು ಮೂಲದವರಾದ್ದರಿಂದ ಆ ಅರ್ಜಿಯ ಬಗ್ಗೆ ಅವರಿಗೆ ಹೆಚ್ಚೇ ಮುತುವರ್ಜಿ ಇತ್ತು.

`ಏನ್ರೀ, ಇಂಥ ಸಣ್ಣ ಸಮಸ್ಯೆ ಬಗೆಹರಿಸಲು ಆಗುವುದಿಲ್ಲವೇ ನಿಮಗೆ~ ಎಂದು ಎಎಸ್‌ಐ ಮೇಲೆ ಹಾರಾಡಿದರು. ಆಮೇಲೆ ಆ ಸಮಸ್ಯೆ ಬಗೆಹರಿಸುವ ಕೆಲಸವನ್ನು ನನ್ನ ತಲೆಗೆ ಕಟ್ಟಿದರು. ನನಗೋ ಮುಜುಗರ. ಅಂಥ ಕುಟುಂಬದ ಸೂಕ್ಷ್ಮ ಸಮಸ್ಯೆಯನ್ನು ಕೇಳಿ, ಬಗೆಹರಿಸುವಷ್ಟು ವಯಸ್ಸು ನನ್ನದಾಗಿರಲಿಲ್ಲ. ನಾನಾಗಿಯೇ ಅವರ ಮನೆಗೆ ಹೋಗಿ ಅದರ ಪ್ರಸ್ತಾಪ ಮಾಡುವುದು ಕೂಡ ಕಷ್ಟವಿತ್ತು. ಡಿಸಿಪಿ ಹೇಳಿದ ಮೇಲೆ ಇಲ್ಲವೆನ್ನಲು ಸಾಧ್ಯವಿರಲಿಲ್ಲ. ಬಿಸಿ ತುಪ್ಪ ಬಾಯಿಗೆ ಹಾಕಿದಂತಾಯಿತು.

ಮೊದಲು ಆ ಪತಿ-ಪತ್ನಿಯನ್ನು ಒಟ್ಟಿಗೆ ಬಂದು ಮಾತನಾಡಲು ಒಪ್ಪಿಸಿದೆ. ಅವರು ತಮ್ಮ ತಮ್ಮ ಸಮಸ್ಯೆಗಳನ್ನು ಬಿಡಿಬಿಡಿಯಾಗಿ ಹೇಳಿಕೊಳ್ಳಲು ತುಸು ಹೆಚ್ಚೇ ಕಾಲ ಬೇಕಾಯಿತು.
ಪತ್ನಿಯ ಮೇಲೆ ದೂರು ಕೊಟ್ಟಿದ್ದ ವ್ಯಕ್ತಿ ಹಾಗೂ ಆತನ ತಾಯಿ ಕಟ್ಟಾ ಸಂಪ್ರದಾಯಸ್ಥರು.
 
ಮಾಂಸಾಹಾರ ತಿನ್ನುವ ಸಮುದಾಯದವರಾದರೂ ಅದನ್ನು ಮೂಸಿಯೂ ನೋಡುತ್ತಿರಲಿಲ್ಲ. ಸಂಖ್ಯಾಶಾಸ್ತ್ರ, ಲಗ್ನ,  ಜ್ಯೋತಿಶ್ಶಾಸ್ತ್ರವನ್ನು ವಿಪರೀತ ನಂಬುತ್ತಿದ್ದರು. ರಾಹುಕಾಲ, ಗುಳಿಕ ಕಾಲವನ್ನು ಕೂಡ ನೆಚ್ಚಿಕೊಂಡಿದ್ದರು. ಅದಕ್ಕಿಂತ ಮಿಗಿಲಾಗಿ ಇಬ್ಬರೂ ಹಾಲು-ಅನ್ನ, ಹಣ್ಣು-ಹಂಪಲು ತಿಂದುಕೊಂಡೇ ವರ್ಷಗಟ್ಟಲೆ ಕಳೆದಿದ್ದರು. ದೇವರ ಪೂಜೆ ತಪ್ಪಿಸುತ್ತಿರಲಿಲ್ಲ. ಸಭ್ಯ ಕುಟುಂಬ ಎಂದೆನಿಸಿದ್ದ ಕಾರಣ ಆ ಹುಡುಗನಿಗೆ (ದೂರು ಕೊಟ್ಟವರು) ಹುಡುಗಿಯನ್ನು ಆಕೆಯ ಮನೆಯವರು ಮದುವೆ ಮಾಡಿ ಕೊಟ್ಟರು.

ಆಹಾರ ಕ್ರಮದಿಂದಲೋ ಅಥವಾ ಮನಸ್ಸಿನ ಸಮಸ್ಯೆಯಿಂದಲೋ ಆ ಹುಡುಗನಿಗೆ ಪುರುಷತ್ವದ ಕೊರತೆ ಇತ್ತು. ಆತನ ಮನೆಯವರಿಗೆ ಇದು ಗೊತ್ತಿದ್ದೂ ಮುಚ್ಚಿಟ್ಟು ಮದುವೆ ಮಾಡಿದರು.

ಮೊದಲ ರಾತ್ರಿಯಲ್ಲೇ ಹುಡುಗಿಗೆ ತನ್ನ ಗಂಡನ ಸಮಸ್ಯೆ ಏನೆಂದು ಗೊತ್ತಾಯಿತು. ಆತನಿಗೂ ಮುಜುಗರವಾಯಿತು. ಆದರೆ, ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳಲು ಮಾತ್ರ ಆತ ಸಿದ್ಧನಿರಲಿಲ್ಲ. ಆ ಹೆಣ್ಣುಮಗಳದ್ದು ದೊಡ್ಡ ಮನಸ್ಸು. ಆ ಸಮಸ್ಯೆ ಇದ್ದರೂ ಅದನ್ನು ತನ್ನೊಳಗೇ ಇಟ್ಟುಕೊಂಡು ಅನ್ಯೋನ್ಯವಾಗಿ ಬಾಳಲಾರಂಭಿಸಿದಳು.

ಹಾಲು-ಅನ್ನ ತಿಂದುಕೊಂಡೇ ಇದ್ದ ದೈವಭಕ್ತನಿಗೆ ತನ್ನಲ್ಲೇ ಸಮಸ್ಯೆ ಇದೆ ಎಂಬುದು ಕೊನೆಗೂ ಸ್ಪಷ್ಟವಾಯಿತು. ಪತ್ನಿಗೆ ಗೊತ್ತಿಲ್ಲದಂತೆ ಆತ `ಕೌನ್ಸೆಲಿಂಗ್~ ಮಾಡಿಸಿಕೊಂಡ.

ಲೈಂಗಿಕ ಸಮಸ್ಯೆಗೂ ವೈದ್ಯಕೀಯ ಚಿಕಿತ್ಸೆ ಪಡೆದುಕೊಂಡ. ಮನೆಯಲ್ಲಿ ಎಲ್ಲರೂ ಸೇರಿದಾಗ ಮಗುವಿನ ಪ್ರಸ್ತಾಪ ಬಂದದ್ದುಂಟು. ಪದೇಪದೇ ಸಂಬಂಧಿಕರು ಆ ಬಗ್ಗೆ ಮಾತನಾಡತೊಡಗಿದ ನಂತರ ಆ ಹೆಣ್ಣುಮಗಳೇ ತನ್ನ ಕುಟುಂಬದ ಸಮಸ್ಯೆಯನ್ನು ಕೆಲವು ಹಿರಿಯರೆದುರು ಹೇಳಿಕೊಂಡಿದ್ದಳು. ಅಂಥ ಸೂಕ್ಷ್ಮ ಸಮಸ್ಯೆ ಇದ್ದೂ ಅದನ್ನು ನುಂಗಿಕೊಂಡು ಬದುಕುತ್ತಿದ್ದ ಅವಳ ನೇರವಂತಿಕೆ ಮನೆಯ ಹಿರಿಯರಿಗೂ ಹಿಡಿಸಿತ್ತು. ಆನಂತರ ಮತ್ತೆ ಮಗುವಿನ ಬಗ್ಗೆ ಯಾರೂ ಮಾತನಾಡಲಿಲ್ಲ.

ಅದೊಂದು ದಿನ ಹಾಲು-ಅನ್ನ ತಿಂದ ವ್ಯಕ್ತಿ ಬಂದವನೇ ತಾನಿನ್ನು ಮಗು ಹುಟ್ಟಿಸಲು ಸನ್ನದ್ಧ ಎಂದು ಹೇಳಿದ. ಹೀಗೆ ಅವನು ಹೇಳುವಷ್ಟರಲ್ಲಿ ಮದುವೆಯಾಗಿ ಎಂಟು ವರ್ಷ ಕಳೆದಿತ್ತು. ದಿಢೀರನೆ ತಾನು ತಂದೆಯಾಗಲು ಯೋಗ್ಯನೆಂದು ಹೇಳಿದಾಗ ಆಕೆ ಖುಷಿ ಪಡಲಿಲ್ಲ. ತಳಮಳ ಶುರುವಾಯಿತು.

ಕುಟುಂಬದ ಹಿರಿಯರಿಗೆಲ್ಲ ಮಕ್ಕಳಾಗುವುದಿಲ್ಲ ಎಂದು ಹೇಳಿದ್ದಾಗಿತ್ತಲ್ಲ; ಹಾಗಾಗಿ ಈಗ ಮಕ್ಕಳಾದರೆ ಎಲ್ಲರೂ ತನ್ನನ್ನು ಶಂಕಿಸುವುದಿಲ್ಲವೇ ಎಂಬುದು ಆ ಹೆಣ್ಣುಮಗಳ ಆತಂಕ. ಹಾಗಾಗಿ ಮಗು ಪಡೆಯಲು ತಾನು ಸಿದ್ಧವಿಲ್ಲವೆಂದು ಹೇಳಿಬಿಟ್ಟಳು. ಅಲ್ಲಿಯವರೆಗೆ ಸೌಮ್ಯವಾಗಿದ್ದ ಹಾಲು-ಅನ್ನದ ಆಸಾಮಿ ಕ್ರುದ್ಧನಾದ. ಅವಳನ್ನು ಬಾಯಿಗೆ ಬಂದಂತೆ ಬೈದ. ತನ್ನ ಆತಂಕವನ್ನು ಅವಳು ಹೇಳಿಕೊಂಡರೂ ಅವನು ಅದನ್ನು ಅರ್ಥಮಾಡಿಕೊಳ್ಳಲಿಲ್ಲ.

ದಾಂಪತ್ಯ ಬದುಕಿನ ಈ ಮುಖ್ಯವೂ ಸೂಕ್ಷ್ಮವೂ ಆದ ಸಮಸ್ಯೆಯನ್ನು ಆ ಹೆಣ್ಣುಮಗಳು ಮುಚ್ಚುಮರೆಯಿಲ್ಲದೆ ಹೇಳಿಕೊಂಡಾಗ ನನ್ನ ಕರುಳು ಚುರ‌್ರೆಂದಿತು. ಈ ಸಮಸ್ಯೆಗೆ ಪರಿಹಾರವನ್ನು ನೀವೇ ಹೇಳಿ ಎಂದು ಇಬ್ಬರನ್ನೂ ಕೇಳಿದೆ. ಪತಿ ನಿರುತ್ತರನಾದ. ಅವಳ ಬಳಿ ಒಂದು ಪರಿಹಾರವಿತ್ತು. ತಮ್ಮ ಮನೆಯ ಹಿರಿಯರನ್ನೆಲ್ಲಾ ಸೇರಿಸಬೇಕು.
 
ಈಗ ತನ್ನ ಗಂಡನಿಗೆ ಪುರುಷತ್ವ ಬಂದಿದ್ದು, ಮಗು ಪಡೆಯಬಹುದಾಗಿದೆ ಎಂಬ ಸತ್ಯವನ್ನು ಅವರೆಲ್ಲರ ಎದುರು ಹೇಳಬೇಕು. ಆಗ ಮಾತ್ರ ತಾನು ಅವನನ್ನು ಕೂಡಲು ಸಾಧ್ಯ ಎಂಬುದು ಅವಳು ಸೂಚಿಸಿದ ಪರಿಹಾರ. ನನಗೂ ಅವಳು ಹೇಳಿದ್ದು ಸರಿ ಎನಿಸಿತು. ಆ ವ್ಯಕ್ತಿ ಮಾತ್ರ ತನಗೆ ಮುಜುಗರವಾಗುತ್ತದೆಂದು ಹೇಳಿದ. ನಾನೇ ಅವರಿಗೆ ಈ ವಿಷಯ ತಿಳಿಸುತ್ತೇನೆಂದು ಹೇಳಿ ಸಮಾಧಾನಪಡಿಸಿದೆ.

ಅವರ ಮನೆಯಲ್ಲಿ ಕೆಲವು ಹಿರಿಯರನ್ನು ಸೇರಿಸಿದ್ದಾಯಿತು. ನಾನು ಕೂಡ ಹೋದೆ. ಆ ಸೂಕ್ಷ್ಮ ವಿಚಾರವನ್ನು ಎಲ್ಲರಿಗೂ ಹೇಳಿದ್ದಾಯಿತು. ಆ ಹೆಣ್ಣುಮಗಳ ಮುಖದಲ್ಲಿ ನಗು ಮರಳಿತು. ನಮ್ಮ ಇಲಾಖೆಗೆ ಸಂಬಂಧಪಡದ ವಿಷಯವನ್ನೂ ಬಗೆಹರಿಸಿದ ತೃಪ್ತಿ ನನ್ನದಾಗಿತ್ತು. ಆಗಿನ್ನೂ ಕೆಲಸಕ್ಕೆ ಸೇರಿದವನಾದ್ದರಿಂದ ದೊಡ್ಡ ಭಾರ ಇಳಿಸಿಕೊಂಡ ಭಾವ. ಆ ಪತಿ-ಪತ್ನಿಗೆ ವೈಯಕ್ತಿಕ ಸಮಸ್ಯೆ ಬಗೆಹರಿಸಿಕೊಳ್ಳಲು ನಾನು ನೆರವಾದ ರೀತಿ ಖುಷಿ ಕೊಟ್ಟಿತ್ತು. ನನ್ನ ಬಗ್ಗೆ ಅವರಿಗೆಲ್ಲಾ ಆಗ ಇನ್ನಿಲ್ಲದ ಗೌರವ.

ಜನ ಪೊಲೀಸರನ್ನು ಎಷ್ಟು ನಂಬುತ್ತಾರೆಂಬುದಕ್ಕೆ ಈ ಪ್ರಕರಣ ಸಾಕ್ಷಿ. ಲೈಟುಕಂಬದಿಂದ ವೈರ್ ಕಟ್ಟಾಗಿ ಬಿದ್ದರೆ ಕೆಪಿಟಿಸಿಎಲ್‌ಗೆ ಫೋನ್ ಮಾಡದೆ ಮೊದಲು ಪೊಲೀಸರಿಗೇ ಫೋನಾಯಿಸುತ್ತಾರೆ. ಮನೆಗೆ ಬೆಂಕಿ ಹತ್ತಿಕೊಂಡಾಗಲೂ ಮೊದಲಿಗೆ ಅವರಿಗೆ ಹೊಳೆಯುವ ನಂಬರ್ `100~. ಅಷ್ಟೇ ಏಕೆ, ಮನೆಯೊಳಗೆ ಹಾವು ಹೊಕ್ಕರೆ ಅವರಿಗೆ ನೆನಪಾಗುವುದು ಕೂಡ ಪೊಲೀಸರೇ. ಹಾವು ಎಂದಕೂಡಲೆ ಇನ್ನೊಂದು ಪ್ರಸಂಗ ನನಗೆ ನೆನಪಿಗೆ ಬರುತ್ತಿದೆ. ಅದರ ಬಗ್ಗೆ ಮುಂದಿನ ವಾರ ಬರೆಯುತ್ತೇನೆ.

ಶಿವರಾಂ ಅವರ ಮೊಬೈಲ್ ಸಂಖ್ಯೆ 94483 13066 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT