ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ತನದ ನಿರ್ಣಾಯಕ ಘಟ್ಟ

Last Updated 10 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಪುಣ್ಯ ನನ್ನ ಬಾಲ ರೋಗಿ. ಆಕೆಗೆ ಈಗ 25 ವರ್ಷ. ತನ್ನ ತಾಯಿ ಮತ್ತು ಅಜ್ಜಿಯೊಂದಿಗೆ ನನ್ನ ಕ್ಲಿನಿಕ್ ಪ್ರವೇಶಿಸಿದಳು. ಚಿಕ್ಕಂದಿನಲ್ಲಿ ನನ್ನಲ್ಲಿ ಚಿಕಿತ್ಸೆ ಪಡೆದ ಬಹುತೇಕ ಮಕ್ಕಳು ದೊಡ್ಡವರಾದ ಮೇಲೆ ತಮ್ಮ ಮದುವೆಗೆ ಆಹ್ವಾನಿಸುವುದಕ್ಕಾಗಿಯೋ ಅಥವಾ ಮಗುವನ್ನು ತೋರಿಸುವ ಸಲುವಾಗಿಯೋ (ನನ್ನ ಎರಡನೇ ಪೀಳಿಗೆ ರೋಗಿಗಳು) ಬರುತ್ತಿರುತ್ತಾರೆ.

ಆದರೆ ಪುಣ್ಯ ತುಂಬಾ ವ್ಯಾಕುಲಗೊಂಡವಳಂತೆ ಕಂಡಳು. ಸಾಮಾನ್ಯವಾಗಿ ಮಕ್ಕಳ ಸಮಸ್ಯೆಗಳ ಇತಿಹಾಸವನ್ನು ನನ್ನ ಬಳಿ ತಾಯಂದಿರು ತೆರೆದಿಡುತ್ತಾರೆ. ಆದರೆ ಈ ಬಾರಿ ಮಗಳು ತನ್ನ ತಾಯಿಯ ಸಮಸ್ಯೆಯ ಇತಿಹಾಸವನ್ನು ಬಿಚ್ಚಿಡತೊಡಗಿದ್ದಳು. ಅದಕ್ಕೆ ನಡುವೆ ಅಜ್ಜಿಯೂ ನೆರವಾಗುತ್ತಿದ್ದರು. ಹೆಣ್ತನದ ವಿವಿಧ ಹಂತಗಳಲ್ಲಿದ್ದ ಈ ಮೂವರು ಮಹಿಳೆಯರನ್ನು ನೋಡುತ್ತಾ ಕುಳಿತೆ.

47 ವರ್ಷದ ಪುಣ್ಯಳ ತಾಯಿ ಕೆಲವೊಮ್ಮೆ ತೀವ್ರ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮತ್ತು ಸಾವಿನ ಕುರಿತು ಮಾತನಾಡುತ್ತಿದ್ದರು. ಈ ಕುಟುಂಬವನ್ನು ನಾನು 25 ವರ್ಷದಿಂದ ಬಲ್ಲೆ. ಪುಣ್ಯಳ ಜನನದ ಸಂದರ್ಭದಲ್ಲಿ, ತಾಯಿಯು ಪ್ರಸವಾನಂತರದ ರಕ್ತಸ್ರಾವದಿಂದ ಉಂಟಾಗುವ ಅಪರೂಪದ ದುರ್ಬಲ ಗರ್ಭಾಶಯ ಸಮಸ್ಯೆಗೆ ತುತ್ತಾಗಿದ್ದರು. ಗರ್ಭಕೋಶದ ಸ್ನಾಯುಗಳು ಸಂಕುಚಿತಗೊಳ್ಳದೆ ಆಕೆಯ ಗರ್ಭಕೋಶ ತೆಗೆದುಹಾಕುವುದು ಅನಿವಾರ್ಯವಾಗಿತ್ತು.

ಒಂದು ವೇಳೆ ಅದನ್ನು ತಕ್ಷಣವೇ ತೆಗೆದುಹಾಕದಿದ್ದರೆ ರಕ್ತಸ್ರಾವದಿಂದ ಆಕೆ ಸಾಯುವ ಅಪಾಯವಿತ್ತು. 25 ವರ್ಷದ ಹಿಂದೆ ಅದು ಬಹಳ ಕಠಿಣ ನಿರ್ಧಾರವಾಗಿತ್ತು. ಆ ತಾಯಿ ಮತ್ತೊಂದು ಮಗುವನ್ನು ಪಡೆಯುವ ಅವಕಾಶವನ್ನು ಕಳೆದುಕೊಂಡಿದ್ದರು. ಅವರು ಮಗುವನ್ನು ಕರೆದುಕೊಂಡು ನನ್ನ ಕ್ಲಿನಿಕ್‌ಗೆ ಬರುತ್ತಿದ್ದಾಗಲೆಲ್ಲಾ ನಾನು ದೇವರಿಗೆ- `ಆಕೆಯ ಅಮೂಲ್ಯ ಮಗುವಿನ ಜೀವಕ್ಕೆ ಮಾರಕವಾದ ಕಾಯಿಲೆ ಬಂದಿರದಿರಲಿ' ಎಂದು ಪ್ರಾರ್ಥನೆ ಸಲ್ಲಿಸುತ್ತಿದ್ದೆ. ಎಲ್ಲಾ ಮಕ್ಕಳೂ ಅಮೂಲ್ಯವೇ ನಿಜ. ಆದರೆ ಮತ್ತೆ ಗರ್ಭಿಣಿಯಾಗುವ ಅವಕಾಶವಂಚಿತರಾದ ಏಕೈಕ ಮಗುವಿನ ತಾಯಿಗೆ ಇದು ಅತಿ ಅಮೂಲ್ಯ ಮಗುವಲ್ಲವೇ?

ಶಿಶುರೋಗಿಯ ವಯಸ್ಸಿನ ಗುಂಪಿನಿಂದ ಪುಣ್ಯ `ಬಡ್ತಿ' ಪಡೆದ ಬಳಿಕ ನಾನು ನಿರಾಳಗೊಂಡೆ. ಆದರೆ ಆ ಕುಟುಂಬ ಅಂದಿನಿಂದ ಇಂದಿಗೂ ನನ್ನ ಸಂಪರ್ಕದಲ್ಲಿದೆ. ಉದ್ಯಾನದಲ್ಲಿ ಒಬ್ಬರೇ ನಡೆದಾಡುವ ಅಪ್ಪಾಜಿಯವರ ಸ್ನೇಹಿತ `ಎಂ' ಅವರ ಭೇಟಿ ಆಗಾಗ ನಡೆಯುತ್ತಿತ್ತು. ಅವರು ಯಾವಾಗಲೂ ಸ್ವಲ್ಪ ಹೊತ್ತು ನಿಂತು ನನ್ನನ್ನು ಮಾತನಾಡಿಸುತ್ತಿದ್ದರು. ಈ ಮಕ್ಕಳಿಲ್ಲದ ದಂಪತಿ ಒಬ್ಬರಿಗೊಬ್ಬರು ಸಂಗಾತಿಗಳಾಗಿದ್ದರು. ಅಂಕಲ್ `ಎಂ' ದೊಡ್ಡ ಸರ್ಕಾರಿ ಅಧಿಕಾರಿ ಆಗಿದ್ದವರು.

ಸದಾ ಕೆಲಸದಲ್ಲಿ ಮುಳುಗಿರುತ್ತಿದ್ದ ಅವರು ಪತ್ನಿಗಾಗಿ ಸಮಯ ನೀಡಿದ್ದೇ ಇಲ್ಲ. ಆದರೆ ಆಕೆ ಪತಿಯ ಎಲ್ಲಾ ಬೇಕು ಬೇಡಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ನಿವೃತ್ತಿಯ ನಂತರ ಯೂರೋಪ್ ಪ್ರವಾಸ, ಸಿನಿಮಾಕ್ಕೆ ಕರೆದೊಯ್ಯುತ್ತೇವೆ ಎಂದೆಲ್ಲ ಅವರು ಆಕೆಗೆ ಯಾವಾಗಲೂ ಭರವಸೆ ನೀಡುತ್ತಿದ್ದರು. ಅವರು ನಿವೃತ್ತಿಯಾದ ಒಂದೇ ವರ್ಷಕ್ಕೆ ಪತ್ನಿ ಹೃದಯಾಘಾತದಿಂದ ತೀರಿಕೊಂಡರು. ಆಗ ಅವರಿಗೆ 56 ವರ್ಷ. ಪತ್ನಿಯ ಸಾವನ್ನು ಮತ್ತು ಪೂರ್ಣಗೊಳಿಸಲಾಗದ ಭರವಸೆಯನ್ನು ಅರಗಿಸಿಕೊಳ್ಳುವುದು ಅವರಿಗೆ ಕಷ್ಟವಾಯಿತು.

ಹತ್ತು ವರ್ಷಗಳಾದರೂ ಈ ವ್ಯಕ್ತಿ ಒಂಟಿಯಾಗಿ ಜೀವಿಸುತ್ತಿದ್ದಾರೆ. ಇಳಿಸಂಜೆಯ ಬದುಕನ್ನು ನಿರ್ವಹಿಸುವುದು ಸಹ ಅವರಿಗೆ ಕಷ್ಟವಾಗುತ್ತಿದೆ. ಆಹಾರವೂ ಅವರಿಗೆ ದೊಡ್ಡ ಸಮಸ್ಯೆ. ಅವರು ನೇಮಿಸಿಕೊಂಡಿರುವ ಅಡುಗೆಯಾತ ರುಚಿಹೀನ ಅಡುಗೆ ತಯಾರಿಸುತ್ತಾನೆ ಮತ್ತು ಅಲ್ಲಿಂದ ತಕ್ಷಣವೇ ಹೊರಟುಬಿಡುತ್ತಾನೆ. ಸಂಗಾತಿಗಾಗಿ ಕನವರಿಸುವ ಅವರು ಕೆಲವೊಮ್ಮೆ ಖಿನ್ನತೆಗೆ ಒಳಗಾಗಿ `ನನಗೆ ಕೂಡಲೇ ಸಾಯುವ ಔಷಧವಿದ್ದರೆ ಕೊಟ್ಟುಬಿಡಿ' ಎಂದು ಕೇಳುತ್ತಿರುತ್ತಾರೆ.

80ರ ಹರೆಯದ ಪ್ರೊ. `ಎನ್' ಅವರ ಮಕ್ಕಳು, ಮೊಮ್ಮಕ್ಕಳು ಅಮೆರಿಕದಲ್ಲಿದ್ದಾರೆ. ಪತ್ನಿಯನ್ನು ಕಳೆದುಕೊಂಡ ದುಃಖಿ ಅವರು. 60 ವರ್ಷದ ಪತ್ನಿ ಬಾತ್‌ರೂಮ್‌ನಲ್ಲಿ ಕಾಲು ಜಾರಿ ಬಿದ್ದು ಹಿಂಭಾಗದ ಮೂಳೆ ಮುರಿಯಿತು. ಪತ್ನಿಯ ನಿರಂತರ ಆರೋಗ್ಯ ತಪಾಸಣೆ, ಔಷಧೋಪಚಾರದತ್ತ ಅವರು ಗಮನ ಹರಿಸಿದ್ದರೆ, ಆ ಚಿಕ್ಕ ಅವಘಡಕ್ಕಾಗಿ ಆಕೆಯನ್ನು ಕಳೆದುಕೊಳ್ಳುವ ಸಂದರ್ಭ ಉಂಟಾಗುತ್ತಿರಲಿಲ್ಲ. ಈಗ ಅವರಿಗೆ ಆಕೆಯ ಫೋಟೋಗಳೇ ಉಳಿದಿರುವ ನೆನಪುಗಳು.

ಹೆಣ್ತನವು ಋತುಸ್ರಾವದ (ಮೊದಲ ಮುಟ್ಟು) ಮೂಲಕ ರಜೋನಿವೃತ್ತಿ (ಮುಟ್ಟು ನಿಲ್ಲುವ) ಕಾಲದವರೆಗೂ ಸಾಗುತ್ತದೆ. ಅದು ವಿವಿಧ ಹಂತಗಳಲ್ಲಿ ಸಂಭವಿಸುತ್ತದೆ. ರಜೋನಿವೃತ್ತಿಯ ಸ್ಥಿತಿಯು 2-8 ವರ್ಷಗಳ ಸಮಯ ತೆಗೆದುಕೊಳ್ಳುತ್ತದೆ. ರಜೋನಿವೃತ್ತಿಗೆ ಮುನ್ನ ಅದು ಸಹಜ ಋತುಚಕ್ರದಿಂದ ಸಂಪೂರ್ಣ ನಿಲ್ಲುವವರೆಗೂ ಅನಿಯತ ಋತು ಚಕ್ರಕ್ಕೆ ಬದಲಾಗುತ್ತದೆ.

ಋತುಚಕ್ರ ಕೊನೆಗೊಳ್ಳುವ ಸನ್ನಿವೇಶವು ಮಹಿಳೆಯರಲ್ಲಿ ಸಾಮಾನ್ಯವಾಗಿ 40ರ ಬಳಿಕ ಅಥವಾ 50 ವರ್ಷಕ್ಕೆ ಮುನ್ನ ಸಂಭವಿಸುತ್ತದೆ. ಎಸ್ಟ್ರೋಜೆನ್ ಹಾರ್ಮೋನಿನ ಕೊರತೆಯಿಂದ ಅಂಡಾಶಯ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಕಾಲವಿದು. ಸಂತಾನೋತ್ಪತ್ತಿ ಹಂತದಿಂದ ಪ್ರತಿಜನಕ ಹಂತಕ್ಕೆ ಪರಿವರ್ತನೆಯಾಗುವ ಸಮಯ. ರಜೋನಿವೃತ್ತಿಯು ತಡೆಯಲು ಅಸಾಧ್ಯವಾದ ಬದಲಾವಣೆ. ಪ್ರತಿ ಮಹಿಳೆಯೂ ಈ ಅನುಭವಕ್ಕೆ ಒಳಗಾಗುತ್ತಾಳೆ ಮತ್ತು ಜೀವವಿಜ್ಞಾನದ ಬದಲಾವಣೆಯ ಪರಿಣಾಮ ಅನುಭವಿಸುತ್ತಾಳೆ. ಇಡೀ ಒಂದು ವರ್ಷ ಮುಟ್ಟು ಇಲ್ಲದೆ ಕ್ರಮಿಸಿದರೆ ಅದು ರಜೋನಿವೃತ್ತಿಯ ಅವಧಿ ತಲುಪಿದಂತೆ (ಕೊನೆಯ ಮುಟ್ಟು + 12 ತಿಂಗಳು).

ಮುಟ್ಟುನಿಲ್ಲುವ ಪರಿವರ್ತನೆ ಮತ್ತು ಮುಟ್ಟು ನಿಲ್ಲುವಿಕೆ ಪ್ರಕ್ರಿಯೆಗಳು ನೈಸರ್ಗಿಕ ಬದಲಾವಣೆಗಳೇ ಹೊರತು ಯಾವುದೇ ಕಾಯಿಲೆ ಅಥವಾ ಸಮಸ್ಯೆಯಲ್ಲ. ಈ ಪರಿವರ್ತನೆಯೂ ತನ್ನದೇ ವಿವಿಧ ಪರಿಣಾಮ ಹಂತಗಳನ್ನು ಹೊಂದಿದೆ; ಇದು ಜೀವನದ ಅತ್ಯಂತ ಸಂಕಷ್ಟದ ಸಮಯವೂ ಆಗಬಹುದು. ಈ ಪರಿವರ್ತನೆಯಲ್ಲಿರುವ ಮಹಿಳೆಯರದು ನಡುವಿನ ಪೀಳಿಗೆ (ಸ್ಯಾಂಡ್‌ವಿಚ್ ಜನರೇಶನ್). ವೃದ್ಧ ಅತ್ತೆ ಮಾವಂದಿರು/ಅಪ್ಪ ಅಮ್ಮ ಮತ್ತು ಅವರ ಮಕ್ಕಳು ಹಾಗೂ ಮೊಮ್ಮಕ್ಕಳ ಆರೈಕೆ ಅಥವಾ ಮರಣದ ಸಂದರ್ಭಗಳೊಂದಿಗೆ ವ್ಯವಹರಿಸಬೇಕಾಗುತ್ತದೆ.

ಈ ಗುಂಪಿನ ಮಹಿಳೆಯರು ಅವರ ದೈಹಿಕ ಸ್ಥಿತಿಯ ಕುರಿತು ಹೆಚ್ಚು ಸಂಕೋಚ ಹೊಂದುತ್ತಾರೆ ಮತ್ತು ತಮ್ಮ ಸಮಸ್ಯೆಗಳನ್ನು ಬಹುತೇಕ ಮುಚ್ಚಿಟ್ಟು, ಮೌನವಾಗಿ ಸಂಕಟಪಡುತ್ತಾರೆ. ಅವರು ಪರಿಸ್ಥಿತಿಗೆ ಅವರು ತುಂಬಾ ಹೊಂದಿಕೊಳ್ಳುತ್ತಾರೆ. ಹೀಗಾಗಿ ಅವರ ಜೀವನ ಶೋಚನೀಯವಾಗುತ್ತದೆ. ಈ ಅಸೌಖ್ಯದ ಸ್ಥಿತಿಯನ್ನು ಅರಿತುಕೊಳ್ಳದೆಯೇ ಬದುಕುತ್ತಿರುವ ಎಲ್ಲಾ ಬಡ ಮತ್ತು ಗ್ರಾಮೀಣ ಮಹಿಳೆಯರ ಕುರಿತು ಅನುಕಂಪ ಉಂಟಾಗುತ್ತದೆ. ತಮ್ಮ ಆರೋಗ್ಯದ ಸುಂಕ ತೆತ್ತು ತ್ಯಾಗ ಮಾಡುವ ಈ ಮಹಿಳೆಯರಿಗೆ ನನ್ನದೊಂದು ಸಲಾಮ್.
ಋತುಚಕ್ರ ಆರಂಭದ ಅವಧಿಯು ಅನಿಯತ. ಹರಿವಿನ ಸಮಯ ಊಹಿಸಲು ಅಸಾಧ್ಯ. ಇದರ ಅವಧಿ ಸುದೀರ್ಘ ಅಥವಾ ಅಲ್ಪದ್ದಾಗಿರಬಹುದು.

ಮುಟ್ಟು ನಿಲ್ಲುವಾಗ ಉದ್ಭವಿಸುವ ಉಷ್ಣದ ಧಗೆ ಶೇ 75ರಷ್ಟು ಮಹಿಳೆಯರನ್ನು ಬಾಧಿಸುತ್ತದೆ. ಇದು ರಜೋನಿವೃತ್ತಿಯ ಒಂದೆರಡು ವರ್ಷ ಅಥವಾ ಕೆಲವೊಮ್ಮೆ 10 ವರ್ಷದವರೆಗೂ ಕಾಡಬಹುದು. ಅತಿಯಾದ ಬೆವರುವಿಕೆ ಮತ್ತು ತಣ್ಣನೆಯ ನಡುಕವೂ ಹಿಂಬಾಲಿಸಬಹುದು. ಅವು ಗಾಢ ನಿದ್ದೆಯಿಂದ ನಿಮ್ಮನ್ನು ಎಚ್ಚರಗೊಳಿಸುವಷ್ಟು ಶಕ್ತಿಶಾಲಿಯಾಗಿರುತ್ತವೆ.

ಮೂತ್ರದ ಸಮಸ್ಯೆಗಳು, ಅಂದರೆ ಬಲವಂತದ ಮೂತ್ರ ವಿಸರ್ಜನೆ, ಪದೇಪದೇ ಮೂತ್ರವಿಸರ್ಜನೆ, ತಡೆರಹಿತ ಮೂತ್ರ (ಕೆಮ್ಮುವಾಗ, ನಗುವಾಗ, ಸೀನುವಾಗ ಅಥವಾ ಭಾರವನ್ನು ಎತ್ತುವಾಗ ವಿಸರ್ಜನೆಯಾಗುವುದು) ಮತ್ತು ಸೋಂಕು ಮಹಿಳೆಯರು ಎದುರಿಸಬಹುದಾದ ಕೆಲವು ಸಂಕಟಗಳು.

ರಜೋನಿವೃತ್ತಿಯ ಸಮಯದಲ್ಲಿ ಮಹಿಳೆಯರದು ಖಿನ್ನತೆಯ ಮತ್ತು ಸಿಡುಕಿನ ಮನಸ್ಥಿತಿಯಾಗಿರುತ್ತದೆ. ಅವರ ತೂಕ 2-2.5 ಕೆ.ಜಿವರೆಗೆ ಹೆಚ್ಚುವುದಲ್ಲದೆ ಸೊಂಟದ ಅಳತೆಯೂ ಹಿಗ್ಗುತ್ತದೆ. ಸ್ನಾಯು ಶಕ್ತಿಯನ್ನು ಕಳೆದುಕೊಂಡು ಕೊಬ್ಬು ಶೇಖರಣೆಯಾಗತೊಡಗುತ್ತದೆ. ಚರ್ಮ ತೆಳುವಾಗತೊಡಗುತ್ತದೆ. ಫ್ಯಾಷನ್ ಒಲವುಳ್ಳ ಸ್ತ್ರೀಯರು ಚರ್ಮ ತೆಳುವಾಗುವುದು ಮತ್ತು ಮುಖದ ಮೇಲೆ ಕೂದಲು ಬೆಳೆಯುವುದು ಹಾಗೂ ತಲೆಗೂದಲು ಉದುರುವುದರ ಕುರಿತು ತೀವ್ರ ಚಿಂತೆಗೀಡಾಗುತ್ತಾರೆ. ಸ್ಮರಣ ಶಕ್ತಿ ಸಮಸ್ಯೆಯೂ ಎದುರಾಗುತ್ತದೆ.

ಮೂಳೆ ಸಂಧಿಗಳು ಮತ್ತು ಸ್ನಾಯುಗಳು ಬಿಗುವಾಗಿ ಯಾತನೆ ನೀಡುತ್ತವೆ. ಈ ಮಹಿಳೆಯರಿಗೆ ಶುಷ್ಕ ಕಣ್ಣಿನ ರೋಗಲಕ್ಷಣದ ಅನುಭವವೂ ಉಂಟಾಗುತ್ತದೆ. ಅವರ ಕಣ್ಣುಗಳನ್ನು ಪರೀಕ್ಷೆಗೆ ಒಳಪಡಿಸಬೇಕು. ಹೃದಯದ ಕಾಯಿಲೆಗಳು: ಜೀವನದ ಈ ಹಂತದಲ್ಲಿನ ಶೇ 45ರಷ್ಟು ಸಾವುಗಳು ಹೃದಯ ಕಾಯಿಲೆಯಿಂದ ಸಂಭವಿಸುತ್ತದೆ. ಇದು ಎಸ್ಟ್ರೋಜೆನ್ ಹಾರ್ಮೋನು ಅಥವಾ ವಯಸ್ಸಿನ ಕಾರಣಕ್ಕೂ ಉಂಟಾಗಬಹುದು. ರಜೋನಿವೃತ್ತಿಯಲ್ಲಿರುವ ಮತ್ತು ವಯಸ್ಕ ಮಹಿಳೆಯರು ಹೆಚ್ಚು ತೂಕವನ್ನು ಪಡೆದುಕೊಳ್ಳುತ್ತಲೇ ಅತಿ ಉದ್ವೇಗದಂಥ ಸಮಸ್ಯೆಯನ್ನು ಬೆಳೆಸಿಕೊಳ್ಳುತ್ತಾರೆ.

ನನ್ನ ನಡಿಗೆ ಸ್ನೇಹಿತೆ ಸುಶೀಲಾ ಮಲ್ಲೇಶ್ ಅವರೊಂದಿಗೆ ಲಾಲ್‌ಬಾಗ್‌ನಲ್ಲಿ ನಡೆದುಕೊಂಡು ಹೋಗುವಾಗ ರಜೋನಿವೃತ್ತಿ ವಯಸ್ಸಿನ ಮಹಿಳೆಯರ ಗುಂಪೊಂದು ತಮ್ಮ ಸಮಸ್ಯೆಗಳನ್ನು ನನ್ನ ಜೊತೆ ಚರ್ಚಿಸಿದರು. ಅದನ್ನು ಅವರು ತಮ್ಮ ಪತಿ ಅಥವಾ ಮಕ್ಕಳೊಂದಿಗೆ ಹಂಚಿಕೊಳ್ಳಲು ಹಿಂಜರಿಯುತ್ತಿದ್ದರು. ಏಕೆಂದರೆ ಅವರ ಅಗತ್ಯಗಳು ಕುಟುಂಬಕ್ಕೆ ಹೆಚ್ಚುವರಿ ಆರ್ಥಿಕ ಹೊರೆಯಾಗುತ್ತಿತ್ತು.

ಈ ಲೇಖನವನ್ನು ನಾನು ವಿಸ್ತೃತವಾಗಿ ಬರೆದುದರ ಉದ್ದೇಶ, ಈ ಘಟ್ಟದಲ್ಲಿರುವ ಮಹಿಳೆಯರು ಯಾವುದು ಸಹಜ ಮತ್ತು ಯಾವುದು ಅಸಹಜ ಎಂಬುದನ್ನು ಅರ್ಥಮಾಡಿಕೊಳ್ಳಲಿ ಎನ್ನುವುದು. ಇದರಿಂದ ಒಂದು ಬಗೆಯ ನೆಮ್ಮದಿ ಮತ್ತು ಅಗತ್ಯವಿದ್ದಾಗ ಸಹಾಯಕ್ಕಾಗಿ ನೋಡಬಹುದು ಎಂದು. ತಮ್ಮ ಬದುಕಿನ 1/3 ಅವಧಿಯನ್ನು ಈ ಘಟ್ಟದಲ್ಲಿಯೇ ಕಳೆಯುವ ಮಹಿಳೆಯರ ಜೀವನ ಗುಣಮಟ್ಟದ್ದಾಗಿರಲಿ ಎಂಬುದು ನನ್ನ ಆಶಯ.

ಪ್ರತಿ ಐದು ವರ್ಷಕ್ಕೊಮ್ಮೆ (40, 45, 50, 55) ಮಹಿಳೆಯರು ಸಂಪೂರ್ಣ ವೈದ್ಯಕೀಯ ಇತಿಹಾಸ ಮತ್ತು ದೈಹಿಕ ಪರೀಕ್ಷೆಗೆ ಒಳಗಾಗುತ್ತಿರಬೇಕು. ಮತ್ತು ಈ ಕೆಳಕಂಡಂತೆ ವಾರ್ಷಿಕ ತಪಾಸಣೆಯೂ ಅಗತ್ಯ:

* ಅಸ್ಥಿರಂದ್ರತೆ ಪತ್ತೆಹಚ್ಚಲು ಮೂಳೆ ಎಕ್ಸ್‌ರೇ ಮಾಡಿಸುವುದು.
* ಹೃದ್ರೋಗ ಸಮಸ್ಯೆಯನ್ನು ಪತ್ತೆಹಚ್ಚಲು ಮೇದಸ್ಸು ಲಕ್ಷಣ ಮತ್ತು ಹೃದ್ರೋಗ ಪರೀಕ್ಷೆ.
* ಮಧುಮೇಹ ಪತ್ತೆಗೆ ರಕ್ತದಲ್ಲಿನ ಗ್ಲೂಕೋಸ್ ಅಂಶ ಪರೀಕ್ಷೆ.
* ಸ್ತನ ಕ್ಯಾನ್ಸರ್‌ಗೆ (ಮ್ಯಾಮ್ಮಗ್ರಫಿ) ತಪಾಸಣೆ, ಗರ್ಭಕೋಶದ ಕ್ಯಾನ್ಸರ್ (ಪಾಪ್ ಸ್ಮಿಯರ್), ಅಂಡಾಶಯ ಕ್ಯಾನ್ಸರ್ (ಅಲ್ಟ್ರಾಸೌಂಡ್) ಮತ್ತು ಗರ್ಭಕೋಶ ಒಳಪೊರೆಯ ಕ್ಯಾನ್ಸರ್ (ರಜೋನಿವೃತ್ತಿಯ ಅವಧಿಯಲ್ಲಿ ಮುಟ್ಟು ಸಂಭವಿಸಿದಾಗಿನ ಹರಿವು, ಹನಿಸುವುದನ್ನು ಒಳಗೊಂಡು ವೈದ್ಯರಿಗೆ ತೋರಿಸಲೇಬೇಕು).
* ಹಿರಿಯರಿಗೆಂದು ಇರುವ ಚುಚ್ಚುಮದ್ದುಗಳೆಂದರೆ- ಟೆಟೆನಸ್ ಟಾಕ್ಸೈಡ್, ನ್ಯುಮೊನಿಕಲ್ ವ್ಯಾಕ್ಸಿನೇಷನ್, ಹೆಪಟೈಟಿಸ್ ಎ ಮತ್ತು ಬಿ, ದಡಾರ ಮತ್ತು ಸಾಂಕ್ರಾಮಿಕ ರೋಗದ ಚುಚ್ಚುಮದ್ದು.
* ನಿರ್ನಾಳ ಗ್ರಂಥಿ ಕಾಯಿಲೆಯನ್ನು ನಿವಾರಿಸಲು ಥೈರಾಯ್ಡ ಸ್ಕ್ರೀನಿಂಗ್ ನಡೆಸುವುದು.
* ಜೀವನಶೈಲಿಯ ಬದಲಾವಣೆ ಹಾಗೂ ಆಧುನಿಕ ಬದುಕಿನ ಒತ್ತಡಗಳಿಂದ ಮುಕ್ತಿ ಪಡೆಯಲು ಆಪ್ತಸಮಾಲೋಚನೆ.
ರಜೋನಿವೃತ್ತಿಗೆ ಯಾವುದೇ ಚಿಕಿತ್ಸೆ ಬೇಕಾಗಿಲ್ಲ. ಚಿಕಿತ್ಸೆಯ ಬದಲು ರೋಗ ಲಕ್ಷಣಗಳನ್ನು, ಕುರುಹುಗಳನ್ನು ನಿವಾರಿಸುವುದರತ್ತ ಹಾಗೂ ವಯಸ್ಸಿಗೆ ಅನುಗುಣವಾಗಿ ಉಂಟಾಗುವ ದೀರ್ಘಕಾಲೀನ ಸಮಸ್ಯೆಗಳನ್ನು ನಿರ್ವಹಿಸುವುದರತ್ತ ಗಮನ ಹರಿಸಬೇಕು.

ರಜೋನಿವೃತ್ತಿಯ ಅವಧಿಯ ನಂತರದ ಹಿರಿಯ ಮಹಿಳೆಯರು ತಮ್ಮ ವೈದ್ಯರೊಂದಿಗೆ ಚರ್ಚಿಸಿ ಅವರ ಸಲಹೆ ಮೇರೆಗೆ ಈ ಕೆಳಗಿನ ಔಷಧಗಳನ್ನು ತೆಗೆದುಕೊಳ್ಳಬೇಕು:

* 50ಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರು ಒಂದು ಗ್ರಾಂ ವಿಟಮಿನ್ ಡಿಯೊಂದಿಗೆ ಪೂರಕವಾಗಿ ಕ್ಯಾಲ್ಸಿಯಂ ಸೇವಿಸಬೇಕು.
* 50ಕ್ಕೆ ಮೇಲ್ಪಟ್ಟ ಮಹಿಳೆಯರು ಊಟದ ಬಳಿಕ 1.5 ಗ್ರಾಂ ತೆಗೆದುಕೊಳ್ಳಬೇಕು.
* ಮನೆಯಲ್ಲಿಯೇ ತಯಾರಿಸಿದ ಆಹಾರ ಸೇವನೆ ಮಾಡಬೇಕು. ವಯಸ್ಸಾದ ದೇಹ ನಿಧಾನವಾಗುವುದರಿಂದ ಆಹಾರ ಪ್ರಮಾಣದಲ್ಲಿ ಇಳಿಕೆ ಮಾಡಬೇಕು.
* ಬೆಳಿಗ್ಗೆ ಅಥವಾ ಸಂಜೆ ಕನಿಷ್ಠ 30 ನಿಮಿಷ ಚುರುಕಾದ ನಡಿಗೆ ಮೂಲಕ ವ್ಯಾಯಾಮ.
* ತೂಕವನ್ನು ಒಂದೇ ಸಮನೆ ನಿಯಂತ್ರಿಸುವುದು ಅಥವಾ ಕಡಿಮೆ ಮಾಡಿಕೊಳ್ಳುವುದರಿಂದ ಸಾಕಷ್ಟು ಪ್ರಯೋಜನಗಳಾಗುತ್ತವೆ.
ಕೆಲವು ಸ್ತ್ರೀಯರು ಸಣ್ಣ ಇರುವೆಗಳು ಚರ್ಮದಡಿ ಹರಿದಾಡಿದಂತೆ ಕಡಿತವಾದಂತೆ, ಮೈಜುಂ ಎಂದಂತೆ, ಸೂಜಿ ಅಥವಾ ಮುಳ್ಳು ಚುಚ್ಚಿದ ಅನುಭವ ಹೊಂದುತ್ತಾರೆ. ಮಹಿಳೆಯರೊಂದಿಗೆ ಸಮಾಲೋಚನೆ ನಡೆಸುವ ವೈದ್ಯರು ಆರೋಗ್ಯದ ಮುನ್ನೆಚ್ಚರಿಕೆ ಸುರಕ್ಷತೆಗಳನ್ನು ಒದಗಿಸುವುದಕ್ಕೆ ಈ ಅವಕಾಶವನ್ನು ಬಳಸಿಕೊಳ್ಳಬೇಕು.

ನಡುವಯಸ್ಸಿನ ಮಹಿಳೆಯರ ಗುಂಪು ಹಿರಿದಾಗಿರುವುದರಿಂದ- ನಾವು `ರಜೋನಿವೃತ್ತ ಮಹಿಳೆ'ಯರಿಗಾಗಿ ಕ್ಲಿನಿಕ್ ಶುರುಮಾಡಿ, ಅವರ ಜೀವನ ಗುಣಮಟ್ಟವನ್ನು ಸುಧಾರಿಸಲು ನೆರವು ನೀಡುವತ್ತ ಚಿಂತನೆ ನಡೆಸಬೇಕಿದೆ.

ಪತಿಯರು ತಮ್ಮ ಪತ್ನಿಯರಿಗೆ ವಿವಾಹ ವಾರ್ಷಿಕೋತ್ಸವ ಮತ್ತು ಮಕ್ಕಳು ತಾಯಿಯ ಹುಟ್ಟುಹಬ್ಬದ ಸಂದರ್ಭದಲ್ಲಿ ನೀಡಬೇಕಾದ ಉಡುಗೊರೆಯೆಂದರೆ ಮುನ್ನೆಚ್ಚರಿಕೆಯ ಆರೋಗ್ಯ ತಪಾಸಣೆ. ಅವರು ಅದಕ್ಕಾಗಿ ಎಂದಿಗೂ ಕೇಳುವುದಿಲ್ಲ. ನೆನಪಿಡಿ.

ಜೀವನದ ಹೊಸ ಘಟ್ಟಕ್ಕೆ ಕಾಲಿಟ್ಟು, ಸಹನೆಯನ್ನು ನಿಧಾನವಾಗಿ ಕಳೆದುಕೊಳ್ಳಲು ಪ್ರಾರಂಭಿಸಿದ್ದ ತಾಯಿಯನ್ನು ಕರೆತಂದ ಪುಣ್ಯಳ ಕುರಿತು ಸಂತೋಷವಾಯಿತು. ಆದರೆ ಅಸ್ಥಿರಂದ್ರತೆಗಾಗಿ `ಎನ್'  ಮತ್ತು ಹೃದಯ ಕಾಯಿಲೆಗಾಗಿ `ಎಂ' ಅವರು ತಮ್ಮ ಪತ್ನಿಯರನ್ನು ಕಳೆದುಕೊಂಡದ್ದು  ತಡೆಗಟ್ಟಬಹುದಾಗಿದ್ದ ದುರಂತಗಳಾಗಿದ್ದವು.

ನನ್ನ ಬರವಣಿಗೆಯನ್ನು ಪ್ರೋತ್ಸಾಹಿಸುವ ಮತ್ತು ಉತ್ತೇಜಿಸುವ ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ಅನಿತಾ ಹೇಳಿದ್ದು- “ಮೇಡಂ, ಈವರೆಗೆ ಯಾರೂ ಪರಿಗಣನೆಗೆ ತೆಗೆದುಕೊಳ್ಳದ ವಿಷಯದ ಕುರಿತು ಬರೆಯುತ್ತಿರುವುದಕ್ಕೆ ಧನ್ಯವಾದ. ಇದು ಈ ಘಟ್ಟದಲ್ಲಿರುವ ಅನೇಕ ಮಹಿಳೆಯರಿಗೆ ಅನುಕೂಲವಾಗುತ್ತದೆ ಎಂಬ ಭರವಸೆ ಇದೆ. ಇದರಿಂದ ನಾನೂ ಪ್ರೇರಿತಳಾಗಿದ್ದೇನೆ. ನನ್ನ ತಾಯಿ ಮತ್ತು ಅತ್ತೆಯನ್ನು ರಜೋನಿವೃತ್ತಿಯಯ ನಂತರದ ಆರೋಗ್ಯ ತಪಾಸಣೆಗೆ ಕರೆದೊಯ್ಯುತ್ತೇನೆ ಮತ್ತು ಅವರಿಗೆ ಅದಕ್ಕೆ ಪೂರಕ ಅಗತ್ಯಗಳನ್ನು ಒದಗಿಸಲು ಪ್ರಾರಂಭಿಸುತ್ತೇನೆ”.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT