ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರಿನಲ್ಲಿ ಏನಿದೆ ಎನ್ನಬೇಡಿ...

Last Updated 1 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ರಾಜ್ಯದ ಎಷ್ಟೋ ಗ್ರಾಮಗಳಿಗೆ ಸರಿಯಾದ ರಸ್ತೆ ಇಲ್ಲ. ಕೆಲವು ಗ್ರಾಮಗಳಿಗೆ ಇನ್ನೂ ವಿದ್ಯುತ್ ಸರಬರಾಜು ಆಗಿಯೇ ಇಲ್ಲ. ಕುಡಿಯುವ ನೀರಿಲ್ಲದ ಎಷ್ಟೊ ಹಳ್ಳಿಗಳು ನಮ್ಮ ರಾಜ್ಯದಲ್ಲಿವೆ. ಜಗಜ್ಯೋತಿ ಬಸವಣ್ಣನವರ ಹುಟ್ಟೂರು ಇಂಗಳಗಿಗೆ ಹೋಗಲು ಇರುವ ರಸ್ತೆಯಲ್ಲಿ ಪಯಣಿಸುವುದೇ ದುಸ್ತರ. ವಚನಕಾರರು ನಡೆದಾಡಿದ ಉಳವಿಯ ಗವಿಗಳು, ಅನುಭವ ಮಂಟಪಕ್ಕೆ ದಾರಿ ಹುಡುಕುವ ಕೆಲಸ ಆಗಿಯೇ ಇಲ್ಲ. ಅಲ್ಲದೆ, ರಾಜ್ಯದಲ್ಲಿ ಕಿತ್ತು ತಿನ್ನುತ್ತಿರುವ ಬಡತನವಿದೆ.

ವಿಧಾನಸಭೆ ಕಲಾಪದ ಚರ್ಚೆಯಲ್ಲಿ ಭಾಗವಹಿಸಿ ಜನಸಾಮಾನ್ಯರ ಹಿತಕಾಯುವ ಕೆಲಸವಾಗಬೇಕಿದೆ. ಗಮನಿಸಬೇಕಾದ ಜನ ಜೀವಾಳದ ಪ್ರಶ್ನೆಗಳು ನೂರೆಂಟು ಇರುವಾಗ; ಕಳೆದವಾರ ನಮ್ಮ ಜನಪ್ರತಿನಿಧಿಗಳು, `ವೀರ ಬಸವಣ್ಣ' ಚಿತ್ರದ ಟೈಟಲ್ ಬದಲಾಗಬೇಕು, ಟೈಟಲ್ ಬದಲಿಸಿ, ನಿರ್ಮಾಪಕ ನಿರ್ದೇಶಕರನ್ನು ಬಂಧಿಸಿ ಎಂದು ವೀರಾವೇಶದಿಂದ ಕೂಗಾಡಿದ್ದು, ಒಂದು ತಮಾಷೆಯ ಪ್ರಸಂಗವಾಗಿಯೇ ಕಾಣುತ್ತದೆ.

`ವೀರ ಬಸವಣ್ಣ' ಚಿತ್ರದ ಶೀರ್ಷಿಕೆಯ ಬಗ್ಗೆ ಆಕ್ಷೇಪ ತೆಗೆದು ಕೂಗಾಡಿದ ಮಾನ್ಯ ಶಾಸಕರು ಎಷ್ಟು ಕನ್ನಡ ಚಿತ್ರಗಳನ್ನು ನೋಡಿದ್ದಾರೋ, ನನಗೆ ಗೊತ್ತಿಲ್ಲ. ಕನ್ನಡ ಚಿತ್ರರಂಗದ ಬಗ್ಗೆ, ಉತ್ತಮ ಕನ್ನಡ ಚಿತ್ರಗಳು ಬರಲಿ ಎಂಬ ಸದುದ್ದೇಶದಿಂದ, ಉದ್ಯಮದ ಒಳಿತಿಗೆ ಏನೇನು ಕೊಡುಗೆ ನೀಡಿದ್ದಾರೋ ಗೊತ್ತಿಲ್ಲ. ಸರ್ಕಾರದಿಂದ ಉದ್ಯಮಕ್ಕೆ ಯಾವ ರೀತಿಯ ಯೋಜನೆ ಕೊಡುಗೆಯಾಗಿ ತರಲು ಸಹಕರಿಸುತ್ತಿದ್ದಾರೋ ಗೊತ್ತಿಲ್ಲ.

`ವೀರ ಬಸವಣ್ಣ' ಟೈಟಲ್ ವಿವಾದ ಪ್ರಸ್ತಾಪವಾದ ಕೂಡಲೇ ವೀರಾವೇಶದಿಂದ ಕೂಗಾಡಲು ಎದ್ದು ನಿಂತಿದ್ದಾರೆ! ವಿಧಾನ ಸಭೆಯಲ್ಲಿ ಈಗ ಸಚಿವರಾಗಿರುವ, 200 ಚಿತ್ರಗಳಲ್ಲಿ ಅಭಿನಯಿಸಿದ ಅನುಭವವಿರುವ ಅಂಬರೀಷ್ ಇದ್ದಾರೆ. ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗವೇ ಕುಲುಕುಲು ಎಂದು ನಗುವಂತೆ ಮಾಡಿದ ಉಮಾಶ್ರೀ ಸಚಿವೆಯಾಗಿ ಅಲ್ಲೇ ಕುಳಿತಿದ್ದಾರೆ. ಇನ್ನೂ ಮುಖ್ಯವಾಗಿ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿರುವ ಮುನಿರತ್ನ ಅವರು ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದಾರೆ.

ಉದ್ಯಮದ ಜೊತೆ ನೇರ ಸಂಪರ್ಕವಿರುವ ಇವರುಗಳೇ ಮೌನವಾಗಿರಬೇಕಾದರೆ ಅನಿರೀಕ್ಷಿತ ವಲಯದ ಶಾಸಕರು ಎದ್ದೆದ್ದು ಕುಣಿದದ್ದು ಸೋಜಿಗದ ಸಂಗತಿ. `ದಂಡು ಪಾಳ್ಯ' ಎಂಬ ಚಿತ್ರ ಬಿಡುಗಡೆಯಾಗಿ, ರಾಜ್ಯದ ಬಹುತೇಕ ಕಡೆ ಒಂಟಿ ಮಹಿಳೆಯರ ಕಗ್ಗೊಲೆ ಸಾಲು ಸಾಲಾಗಿ ನಡೆಯಿತು. ಇದರ ಬಗ್ಗೆ ನಮ್ಮ ಜನಪ್ರತಿನಿಧಿಗಳು ಚಕಾರ ಎತ್ತಲೇ ಇಲ್ಲ. ಸೆಕ್ಸ್, ಮಾರಾಮಾರಿ, ಅಸಂಬದ್ಧ ಕತೆಗಳಿರುವ ಚಿತ್ರಗಳು ಬರುತ್ತಲೇ ಇವೆ. ಅಂತಹ ಚಲನಚಿತ್ರಗಳನ್ನು ನೋಡಿದ ಜನ, ಚಿತ್ರದ ಕೆಲ ದೃಶ್ಯಗಳಿಂದ ಪ್ರೇರಣೆಗೊಂಡು, ಅಪರಾಧ ಕೃತ್ಯಗಳನ್ನು ನಡೆಸಿದ ಘಟನೆಗಳನ್ನು ನಾವು ಕೇಳಿದ್ದೇವೆ. ಅಂತಹ ಸಮಯದಲ್ಲಿ ಜನಪ್ರತಿನಿಧಿಗಳು ಮೌನವಾಗಿದ್ದರು.

ಪತ್ರಿಕೆಗಳಲ್ಲಿ `ವೀರ ಬಸವಣ್ಣ' ಎಂಬ ಜಾಹೀರಾತು ಪ್ರಕಟವಾದ ನಂತರ ಈ ರೀತಿಯ ಒಂದು ವಿವಾದ ಆರಂಭವಾಯಿತು. ತಪಸ್ಸಿಗೆ ಕುಳಿತ ಶಿವನ ತೊಡೆಯ ಬಳಿ ಪಿಸ್ತೂಲೊಂದು ಕಾಣಿಸಿಕೊಂಡು ಶಿವಾರಾಧಕರನ್ನು ಕೆರಳಿಸಿತ್ತು. ಬರಿ ಮೈಯಲ್ಲಿ, ಬೋಳು ತಲೆಯಲ್ಲಿ ಖಡ್ಗ ಹಿಡಿದು ನಿಂತ ನಾಯಕ ನಟ ಉಪೇಂದ್ರ ಅವರ ಪೋಸ್ಟರ್‌ಗಳನ್ನು ನೋಡಿಯೇ ಈ ಚಿತ್ರ `ಬಸವಣ್ಣ'ನವರಿಗೆ ಅವಮಾನ ಮಾಡಿದಂತಿದೆ ಎಂದು ಟೀಕಾಕಾರರು ನಿರ್ಧಾರಕ್ಕೆ ಬಂದುದು ಆಶ್ಚರ್ಯದ ವಿಷಯವೂ ಹೌದು. ಟೀವಿ ಚಾನೆಲ್‌ಗಳಲ್ಲಿ ಈ ವಿಷಯದ ಬಗ್ಗೆ ಗಂಟೆಗಟ್ಟಲೆ ಚರ್ಚೆ ಆರಂಭವಾಯಿತು. ಈ ವಿವಾದದ ಭುಗಿಲಿಗೆ ಎಣ್ಣೆ ಸುರಿದವರಲ್ಲಿ ಟೀವಿ ಚರ್ಚಾಕಾರರೇ ಮೊದಲಿಗರು.

ಚರ್ಚೆಯಲ್ಲಿ ಭಾಗವಹಿಸಿದವರೆಲ್ಲಾ ಜಗಜ್ಯೋತಿ ಬಸವೇಶ್ವರರನ್ನು ಅವಮಾನಿಸಲಾಗುತ್ತಿದೆ ಎಂದೇ ಹೇಳಲಾರಂಭಿಸಿದರು. ಈ ವಿವಾದದಲ್ಲಿ ಜೋರು ದನಿಯಲ್ಲಿ ಮಾತನಾಡುತ್ತಿದ್ದ ಯಾರಿಗೂ ಚಿತ್ರದ ಕತೆ ಗೊತ್ತಿರಲಿಲ್ಲ. ಸಿನಿಮಾ ಶೂಟಿಂಗ್ ಯಾವಾಗ ಆರಂಭವಾಗಿದೆ ಎಂಬುದೂ ಗೊತ್ತಿರಲಿಲ್ಲ. ಆದರೆ ಚರ್ಚೆ ಮಾತ್ರ ಜೋರಾಗಿಯೇ ನಡೆದಿತ್ತು. ಟೀವಿ ಚರ್ಚೆಗೆ ಸಂಬಂಧಪಟ್ಟಂತೆ ಉಪೇಂದ್ರ ಅವರು ಹೇಳಿದ್ದು ಸ್ವಾರಸ್ಯಕರವಾಗಿದೆ.

`ನಾವಿನ್ನೂ ಸಿನಿಮಾ ಚಿತ್ರೀಕರಣವನ್ನೇ ಆರಂಭಿಸಿಲ್ಲ. ಚಿತ್ರಕ್ಕೆ ಟೈಟಲನ್ನು ಇಟ್ಟಿಲ್ಲ. ಎಲ್ಲವನ್ನು ನೀವೇ ನಾಮಕರಣ ಮಾಡಿ, ನೀವೇ ವಿವಾದ ಸೃಷ್ಟಿ ಮಾಡಿ ನನ್ನ ಅಭಿಪ್ರಾಯ ಕೇಳ್ತಿರಲ್ಲಾ ಹೇಗೆ?' ಎಂದು ಅವರು ಟೀವಿ ವರದಿಗಾರರನನ್ನೇ ಪ್ರಶ್ನಿಸುತ್ತಿದ್ದರು. ಇಲ್ಲದ ವಿಷಯ ಸೃಷ್ಟಿ ಮಾಡಿ, ನನ್ನನ್ನು ಟೀವಿ ಸ್ಟೇಷನ್‌ಗೆ ಬಂದು ಚರ್ಚೆ ಮಾಡಿ ಅಂತ ಕರೀತಿದ್ದೀರಾ. ಟೈಂ ವೇಸ್ಟ್ ಏಕೆ ಮಾಡಬೇಕು. ಎಲ್ಲರದೂ ಟೈಂ ವೇಸ್ಟ್. ನಾನು ಸಿನಿಮಾಗೆ ಹೆಸರನ್ನೇ ಇಟ್ಟಿಲ್ಲ ಇನ್ನು ಚರ್ಚೆ ನಡೀತಿದೆ' ಎಂದು ಉಪೇಂದ್ರ ಎಷ್ಟು ಹೇಳಿದರೂ ಟೀವಿ ಚಾನೆಲ್ ವರದಿಗಾರರು ಅದನ್ನು ಕಿವಿಗೆ ಹಾಕಿಕೊಳ್ಳದೆ, `ಈ ಚಿತ್ರದ ಹೆಸರನ್ನು `ಬ್ರಾಹ್ಮಣ' ಎಂದು ಬದಲಿಸಲಾಗಿದೆ' ಎಂದು ಬ್ರೇಕಿಂಗ್ ನ್ಯೂಸ್ ನೀಡಿದರು.

ಐದೇ ನಿಮಿಷಕ್ಕೆ ಚಿತ್ರದ ನಿರ್ಮಾಪಕರು ಈ ಚಿತ್ರಕ್ಕೆ ಟೈಟಲ್ ಇಲ್ಲದೇ ಬಿಡುಗಡೆ ಮಾಡುತ್ತೀವಿ ಎಂದು ಹೇಳಿದ್ದಾರೆ ಎನ್ನುವ ಮತ್ತೊಂದು ಬ್ರೇಕಿಂಗ್ ನ್ಯೂಸ್ ನೀಡಿದರು. ಹೀಗೆ ಚಿತ್ರದ ಟೈಟಲ್ಲೊಂದು ಸಾಕಷ್ಟು ಸುದ್ದಿ ಮತ್ತು ಸದ್ದುಗಳನ್ನು ಮಾಡಿತು. ಈಗಾಗಲೇ `ಬಸವಣ್ಣ' ಎನ್ನುವ ಟೈಟಲ್ ವಾಣಿಜ್ಯ ಮಂಡಳಿಯಲ್ಲಿ ದಾಖಲಾತಿ ಆಗಿದೆ. ಚಲನಚಿತ್ರ ವಾಣಿಜ್ಯ ಮಂಡಳಿ, ಜನರ ಭಾವನೆಗಳಿಗೆ ನೋವು ತರುವ ರೀತಿಯಲ್ಲಿ ಶೀರ್ಷಿಕೆ ಇರಬಾರದು ಎಂದು ಹಿತವಚನ ಹೇಳಿರುವುದರಿಂದ `ವೀರ ಬಸವಣ್ಣ' ವಿವಾದದ ಇತಿಹಾಸಕ್ಕೆ ಸರಿದಿದೆ.

ಚಲನಚಿತ್ರ ಶೀರ್ಷಿಕೆಗಳು ವಿವಾದಾಸ್ಪದವಾದಷ್ಟೂ ಚಿತ್ರದ ಮಾರುಕಟ್ಟೆ ವೃದ್ಧಿಯಾಗುತ್ತದೆ ಗಳಿಕೆ ಹೆಚ್ಚಾಗುತ್ತದೆ ಎನ್ನುವ ಒಂದು ವರ್ಗವಿದೆ. ಈ ಬೆಳವಣಿಗೆ ಕನ್ನಡದಲ್ಲಷ್ಟೇ ಅಲ್ಲ ಬೇರೆ ಭಾಷೆಗಳಲ್ಲೂ ಇದೆ. ಭಾರೀ ಹಗರಣಗಳಲ್ಲಿ ಸಿಲುಕಿರುವ ನಾಯಕರ ಹೆಸರಿನಲ್ಲೇ ಚಿತ್ರಗಳು ತಯಾರಾಗಿ ನಿಷೇಧಗೊಂಡಿರುವ ಉದಾಹರಣೆ ಇದೆ. ಇಂತಹ ಗಿಮಿಕ್‌ಗಳು ಆಗಾಗ ನಡೆಯುತ್ತಲೇ ಇರುತ್ತವೆ. ಅಂತಹ ಗಿಮಿಕ್‌ಗಳನ್ನು ಮಾಡುವುದರಲ್ಲಿ ಉಪೇಂದ್ರ ಮುಂದು. ಈ ಕಾರಣದಿಂದಲೂ ಈ ವಿವಾದ ಕಾವು ಪಡೆದಿರಬಹುದು.

ಕೆಲವು ವರ್ಷಗಳ ಹಿಂದೆ `ಮುಖ್ಯಮಂತ್ರಿ ಐ ಲವ್ ಯೂ ...' ಎಂಬ ಚಿತ್ರದ ಟೈಟಲ್ ವಿವಾದ ಸೃಷ್ಟಿಸಿತ್ತು. ಅಂದಿನ ಒಬ್ಬರು ಮುಖ್ಯಮಂತ್ರಿಯ ವೈಯಕ್ತಿಕ ಬದುಕಿನ ಕತೆ ಎನ್ನುವ ವಿವಾದದಿಂದಾಗಿ ಆ ಚಿತ್ರ ಚಿತ್ರೀಕರಣವನ್ನೇ ಆರಂಭಿಸಿರಲಿಲ್ಲ. `ದೇವ್ ಸನ್ ಆಫ್ ಮುದ್ದೇಗೌಡ' ಚಿತ್ರವೂ ಹೀಗೇ ವಿವಾದಕ್ಕೆ ಕಾರಣವಾಗಿತ್ತು. `ಗೊಲ್ಲ' ಎನ್ನುವ ಚಿತ್ರವೊಂದನ್ನು ಕೆಲವರು ನಿರ್ಮಿಸ ಹೊರಟಿದ್ದರು. ತೀವ್ರ ಆಕ್ಷೇಪದ ನಂತರ ಚಿತ್ರದ ಹೆಸರನ್ನು ಬದಲಿಸಲಾಯಿತು. ರವಿಚಂದ್ರನ್ ಅಭಿನಯದ ಚಿತ್ರವೊಂದಕ್ಕೆ `ಬ್ರಾಹ್ಮಣ' ಎಂಬ ಹೆಸರನ್ನಿಡಲಾಗಿತ್ತು. ಬ್ರಾಹ್ಮಣ ಸಮುದಾಯದ ತೀವ್ರ ವಿರೋಧದ ನಂತರ ಆ ಚಿತ್ರಕ್ಕೆ `ರವಿ ಶಾಸ್ತ್ರಿ' ಎಂಬ ಹೆಸರನ್ನಿಡಲಾಯಿತು.

ತೀರಾ ಇತ್ತೀಚೆಗೆ `ಮಾಸ್ತಿ' ಎನ್ನುವ ಚಿತ್ರದ ಬಗ್ಗೆ ಸಾಹಿತ್ಯವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾದುದನ್ನು ಗಮನಿಸಿ. ಈ ಚಿತ್ರವೂ ಉಪೇಂದ್ರ ನಾಯಕತ್ವದ ಚಿತ್ರ. ಕೈಯಲ್ಲಿ ಲಾಂಗು ಹಿಡಿದ ನಾಯಕನನ್ನು ಮಾಸ್ತಿ ಎಂಬ ಹೆಸರಿನಿಂದ ಕರೆದರೆ, ಕನ್ನಡದ ಸಣ್ಣಕತೆಗಳ ಪಿತಾಮಹನಿಗೆ ಅವಮಾನ ಮಾಡಿದಂತೆ ಎನ್ನುವ ಸಾರ್ವತ್ರಿಕ ಅಭಿಪ್ರಾಯ ವ್ಯಕ್ತವಾಯಿತು. ಆದರೆ ಚಿತ್ರ ನಿರ್ಮಾಣ ತಂಡಕ್ಕೆ ಈ ಹೆಸರನ್ನು ಬದಲಿಸುವ ಇಚ್ಛೆ ಇರಲಿಲ್ಲ. ಕೊನೆಗೂ ಒತ್ತಡಕ್ಕೆ ಮಣಿದು ಚಿತ್ರದ ಹೆಸರನ್ನು `ಮಸ್ತಿ' ಎಂದು ಬದಲಾಯಿಸಲಾಯಿತು. ಇದರಿಂದ ಚಿತ್ರಕ್ಕೇನೂ ಲಾಭವಾಗಲಿಲ್ಲ.

ಒಂದು ಚಿತ್ರದ ಶೀರ್ಷಿಕೆಗೂ ಚಿತ್ರದ ಯಶಸ್ಸಿಗೂ ಸಂಬಂಧವಿದೆಯೇ? ಮೂಢನಂಬಿಕೆಗಳೇ ಹೆಚ್ಚಾಗಿರುವ ಸಿನಿಮಾ ಜನ ಅದನ್ನು ನಂಬುತ್ತಾರೆ. ಗಿಮಿಕ್ ಇಲ್ಲಿ ಹೆಚ್ಚಿನ ಕೆಲಸ ಮಾಡುತ್ತದೆ. `ಸತ್ಯಾನಂದ' ಎನ್ನುವ ಹೆಸರಿನ ಚಲನಚಿತ್ರದ ಹೆಸರು ಬದಲಿಸುವಂತೆ ಸೆನ್ಸಾರ್ ಮಂಡಳಿಯೇ ಸೂಚಿಸಿತು. ನಿತ್ಯಾನಂದ ಸ್ವಾಮೀಜಿಯ ವಿವಾದಗಳನ್ನೆಲ್ಲಾ ರಸವತ್ತಾಗಿ ಚಿತ್ರಿಸಿ, ಅವರದೇ ಹೆಸರನ್ನೇ ಹೋಲುವ `ಸತ್ಯಾನಂದ' ಚಿತ್ರದ ಟೈಟಲ್‌ಗೆ ಸ್ವಾಮೀಜಿಯ ಅಭಿಮಾನಿಗಳೇ ಆಕ್ಷೇಪ ವ್ಯಕ್ತಪಡಿಸಿದರು.

ಚಿತ್ರದ ಅದೇ ಶೀರ್ಷಿಕೆ ಉಳಿಸಿಕೊಳ್ಳಲು ಶತಾಯಗತಾಯ ಯತ್ನಿಸಿದ ನಿರ್ಮಾಪಕರು, ಕೊನೆಗೆ ಚಿತ್ರಕ್ಕೆ `ಯಾರಿವನು?' ಎನ್ನುವ ಹೆಸರನ್ನಿಟ್ಟರು. ಎಷ್ಟೇ ಪ್ರಚಾರ ಮಾಡಿದರೂ ಚಿತ್ರ ಜನಮನ್ನಣೆ ಗಳಿಸಲಿಲ್ಲ. `ಸತ್ಯಾನಂದ' ಎನ್ನುವ ಹೆಸರೇ ಇದ್ದಿದ್ದರೆ ಚಿತ್ರ ಜನಪ್ರಿಯವಾಗುತ್ತಿತ್ತೇ? ಖಂಡಿತಾ ಇಲ್ಲ ಎನ್ನಬಹುದು. ಇಂತಹ ಗಿಮಿಕ್‌ಗಳಿಗಿಂತ ಗಟ್ಟಿ ಕಥೆ, ಉತ್ತಮ ನಿರೂಪಣೆ, ಸಾಹಿತ್ಯ ಶಕ್ತಿ ಇರುವ ಚೆಲುವಾದ ಶೀರ್ಷಿಕೆ ಇರುವ ಚಿತ್ರಗಳು ಜನಮನ ಗೆದ್ದಿವೆ. ಈ ಸತ್ಯವನ್ನು ಗಿಮಿಕ್‌ದಾರರು ಅರ್ಥಮಾಡಿಕೊಂಡರೆ ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT