ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈ. ಕ ನೆಲದ ಬನಿ, ಸಾಹಿತ್ಯದ ಖನಿ

Last Updated 1 ನವೆಂಬರ್ 2016, 20:00 IST
ಅಕ್ಷರ ಗಾತ್ರ

ಉದಯೋನ್ಮುಖ ಕಥೆಗಾರರೊಬ್ಬರು ಸ್ನೇಹಿತನೊಂದಿಗೆ ಚಹಾ ಕುಡಿಯುತ್ತಾ ‘ಪ್ರಜಾವಾಣಿ’ ಪತ್ರಿಕೆಯಲ್ಲಿನ ಪ್ರಕಟಣೆಯನ್ನು ಗಮನಿಸಿದರು. ಅದು ದೀಪಾವಳಿ ಕಥಾಸ್ಪರ್ಧೆಗೆ ಕಥೆಗಳನ್ನು ಆಹ್ವಾನಿಸಿದ್ದಾಗಿತ್ತು. ಗೆಳೆಯ ಕಥೆ ಕಳುಹಿಸುವಂತೆ ಹೇಳಿದನು. ಆದರೆ, ಕಥೆಗಾರ ‘ನೋಡೋಣ’ ಎಂದು ಸುಮ್ಮನಾಗಿಬಿಟ್ಟರು.

ಒಂದು ದಿನ ರಾಯಚೂರಿನಿಂದ ಕರೆ ಮಾಡಿದ ಗೆಳೆಯ ಎಸ್‌.ಜಿ.ಸ್ವಾಮಿ ‘ದೋಸ್ತಾ ನಿನ್ನ ಕಥಿ, ಹೊತ್ತು ಮೂಡುವ ಸಮಯಕ್ಕಾ ಎರಡನೇ ಬಹುಮಾನ ಬಂದೈತಿ’ ಎಂದು ಒಂದೇ ಉಸಿರಿನಲ್ಲಿ ಹೇಳಿದರು. ಕಥೆಗಾರನಿಗೆ ಇದನ್ನು ನಂಬಲು ಆಗಲೇ ಇಲ್ಲ. ಏಕೆಂದರೆ ಅವರು ಸ್ಪರ್ಧೆಗೆ ಕಥೆಯನ್ನು ಕಳುಹಿಸಿರಲೇ ಇಲ್ಲ!

ಆದರೆ, ಕಥೆಗಾರನ ಜೊತೆ ಅಂದು ಪ್ರಕಟಣೆಯನ್ನು ನೋಡಿದ್ದ ಗೆಳೆಯ ಕಲ್ಯಾಣರಾವ ಪಾಟೀಲ ಕಥೆಯನ್ನು ಸ್ಪರ್ಧೆಗೆ ಕಳುಹಿಸಿದ್ದರು! ಮುಂದೆ ಇದೇ ಕಥೆಗಾರನ ‘ನೀರು ತಂದವರು’ ಎರಡನೇ ಬಹುಮಾನ, ‘ತಮಂಧದ ಕೇಡು’, ‘ಧರೆ ಉರಿದರೆ’ ಕಥೆಗಳು ಪ್ರಥಮ ಬಹುಮಾನ ಪಡೆದವು. ಈ ಮೂಲಕ ಕನ್ನಡದ ಕಥಾಲೋಕದಲ್ಲಿ ಸ್ಥಾನವನ್ನೂ ಗಳಿಸಿಕೊಂಡರು– ಅಮರೇಶ ನುಗಡೋಣಿ.
ಕಳೆದ ಇಪ್ಪತ್ತೈದು ವರ್ಷಗಳ ‘ಪ್ರಜಾವಾಣಿ’ ಕಥಾಸ್ಪರ್ಧೆಯ ಫಲಿತಾಂಶವನ್ನು ಅವಲೋಕಿಸಿದರೆ ಹೈದರಾಬಾದ್‌ ಕರ್ನಾಟಕ ಭಾಗ, ಅದರಲ್ಲೂ ರಾಯಚೂರು ಜಿಲ್ಲೆಯ ಕಥೆಗಾರರು ಮುನ್ನಲೆಯಲ್ಲಿ ಇರುವುದು ಸ್ಪಷ್ಟವಾಗುತ್ತದೆ.

ಈ ಕಾರಣಕ್ಕಾಗಿಯೇ ಡಾ.ಬೆಸಗರಹಳ್ಳಿ ರಾಮಣ್ಣ ಅವರು ‘ತೊಂಬತ್ತರ ದಶಕದಲ್ಲಿ ಹೈದರಾಬಾದ್‌ ಕರ್ನಾಟಕದ ಕಥೆಗಾರರು ಮುಂಚೂಣಿಯಲ್ಲಿದ್ದಾರೆ’ ಎಂದು ಉಲ್ಲೇಖಿಸಿದ್ದರು.

ಇಂಥ ಪರಂಪರೆ ಅಮರೇಶ ನುಗಡೋಣಿ ಅವರಿಂದ ಆರಂಭವಾಯಿತು. ಇದನ್ನು ಕಲಿಗಣನಾಥ ಗುಡದೂರು (ಉಡಿಯಲ್ಲಿಯ ಉರಿ), ರಾಜಶೇಖರ ಹತಗುಂದಿ (ಕಾಳ ಬೆಳುದಿಂಗಳ ಸಿರಿ), ಶ್ರೀಕಾಂತ ಪಾಟೀಲ (ಭೂಮಿತಾಯಿ ಮುಣದಾಳ), ಡಿ.ಸಂಧ್ಯಾ ಹೊನಗುಂಟಿಕರ್‌ (ಹಾವು ಮುತ್ತಿನ ಹುಡುಕಾಟದಲಿ), ಕೆ.ನೀಲಾ (ತಿಪ್ಪೆಯನರಸಿ), ಶಂಕರಯ್ಯ ಆರ್‌.ಘಂಟಿ (ಹೀಂಗ ಒಂದೂರಾಗ..,), ಮಹಾಂತೇಶ ನವಲಕಲ್‌ (ಬುದ್ಧಗಂಟೆಯ ಸದ್ದು), ಚಿದಾನಂದ ಸಾಲಿ (ಕೊಟ್ಟ ಕುದುರೆಯನೇರಲರಿಯದೇ) ಅವರು ಮುಂದುವರೆಸಿದರು.
ಕಾವ್ಯ ಸ್ಪರ್ಧೆಯಲ್ಲಿ ಚಂದ್ರು ತುರವೀಹಾಳ, ಆರೀಫ್‌ ರಾಜಾ, ಬಸವರಾಜ ಹೃತ್ಸಾಕ್ಷಿ ಮುಂಚೂಣಿ ಹಾಕಿಕೊಟ್ಟಿದ್ದಾರೆ. ಹೀಗಾಗಿ ಪ್ರತಿ ವರ್ಷ ಒಂದಿಲ್ಲೊಂದು ಬಹುಮಾನವನ್ನು ಈ ಭಾಗದ ಕಥೆಗಾರರು, ಕವಿಗಳು ಪಡೆಯುತ್ತಲೇ ಇದ್ದಾರೆ.

ಇದು ಕುತೂಹಲಕರ ಸಂಗತಿ. ಇದರ ಜಾಡು ಹಿಡಿದು ಹೊರಟಾಗ ಹಲವು ಕೌತುಕದ ವಿಷಯಗಳ ಅನಾವರಣಗೊಂಡವು.
ರಾಜ್ಯದ ಇತರ ಭಾಗಗಳಲ್ಲಿ ಹೊಸಬಗೆಯ ಸಾಹಿತ್ಯ ರಚನೆಯಾಗುತ್ತಿದ್ದ ಸಂದರ್ಭದಲ್ಲಿ ಈ ಪ್ರದೇಶದ ಸಾಹಿತಿಗಳು ಗೊಂದಲದಲ್ಲಿ ಮುಳುಗಿದ್ದರು. ಆದ್ದರಿಂದ ಮುಖ್ಯವಾಹಿನಿಯಲ್ಲಿ ಒಂದಾಗಿ ಹರಿಯುವುದಕ್ಕೆ ಸಾಧ್ಯವಾಗಲಿಲ್ಲ. ಏಕೆಂದರೆ, ಹೈದರಾಬಾದ್‌ ಕರ್ನಾಟಕದಲ್ಲಿ ಪುರಾಣ–ಪುಣ್ಯಕಥೆಗಳು ಹೆಚ್ಚಾಗಿ ರಚನೆಯಾಗುತ್ತಿದ್ದವು. ಅವು ಹಳ್ಳಿಗರ ಬದುಕಿನ ಭಾಗವೇ ಆಗಿದ್ದವು. ಹೀಗಾಗಿ ಕಥೆಗಾರರಿಗೆ ನವ್ಯದ ಭಾಷೆ ಒಗ್ಗಿರಲಿಲ್ಲ. ಆದರೆ, ಪುರಾಣಗಳು, ವಚನಗಳು, ತತ್ವಪದಗಳು, ಸೂಫಿಸಂ ದೊಡ್ಡಶಕ್ತಿಯೇ ಆಗಿದ್ದವು. ತತ್ವಪದದ ಒಡಪುಗಳು ಕಥೆಗಾರರ ಮೇಲೆ ಪರಿಣಾಮ ಬೀರಿದವು. ಇಲ್ಲಿಯ ಕಥೆಗಾರರಿಗೆ ಅಮೂರ್ತ ಎನ್ನುವುದು ಇವುಗಳ ಮೂಲಕ ಸಿಕ್ಕಿತು.
ಹಲವು ಕಾರಣಗಳಿಂದ ಈ ಭಾಗ ಎಲ್ಲ ರೀತಿಯಿಂದಲೂ ಹಿನ್ನಡೆ ಅನುಭವಿಸಿತ್ತು. ಹೀಗಾಗಿ ಜನರಲ್ಲಿ ಆತ್ಮವಿಶ್ವಾಸದ ಕೊರತೆ ಮತ್ತು ಕೀಳರಿಮೆ ಹೆಚ್ಚಾಗಿತ್ತು. ಮುಂದೆ ಇದನ್ನು ಮೀರುವ ಒಳದಾರಿಗಳ ಹುಡುಕಾಟವೂ ನಡೆಯಿತು. ಸೃಜನಶೀಲರು ಕಥೆ, ಕಾವ್ಯ, ಸಂಗೀತ ಮತ್ತು ಚಿತ್ರಕಲೆಯ ಮೂಲಕ ‘ಬಿಡುಗಡೆಯ ದಾರಿ’ಯನ್ನು ಕಂಡುಕೊಂಡರು.

ಈ ಪ್ರದೇಶದಲ್ಲಿ ಬಡತನ, ಅನಕ್ಷರತೆ, ಅಸಹಾಯಕತೆ, ಭೂಮಾಲೀಕರ ದಬ್ಬಾಳಿಕೆ, ಮಹಿಳೆಯರ ಶೋಷಣೆ ಮೇರೆ ಮೀರಿದ್ದವು. ಲೇಖಕರಲ್ಲಿ ಇಂಥ ಸಹಜವಾದ ಅನುಭವದ ಲೋಕವಿತ್ತು. ಅನುಭವವನ್ನು ಪಳಗಿಸಿ ಕಥೆ ಮಾಡುವುದು ಹೇಗೆ? ಆಶಯ ಏನಿರಬೇಕು? ಕಥೆಯಲ್ಲಿ ಜೀವನಾನುಭವವನ್ನು ಹೇಗೆ ಕಟ್ಟಿಕೊಡಬೇಕು? ಯಾವ ವಸ್ತುವಿಗೆ ತಾಳಿಕೆ ಹೆಚ್ಚು? ಯಾವುದು ನಿಜವಾದ ಮಾದರಿ?–ಇಂಥ ಗೊಂದಲಗಳಿಗೆ ‘ಪ್ರಜಾವಾಣಿ’ ಕಥಾಸ್ಪರ್ಧೆಯು ಕಾಲ ಕಾಲಕ್ಕೆ ಸೂಕ್ಷ್ಮವಾದ ಸಾಹಿತ್ಯದ ಪಾಠವನ್ನು ಹೇಳಿಕೊಟ್ಟಿತು. ಇಲ್ಲಿನ ಕಥೆಗಳಿಂದ ಬರೆಯುವುದನ್ನು ಕಲಿಯಬಹುದು ಎನ್ನುವ ಭರವಸೆಯನ್ನು ಬಿತ್ತಿತು. ಕಥಾಸ್ಪರ್ಧೆಯ ಕಥೆಗಳು ಮತ್ತು ತೀರ್ಪುಗಾರರ ಟಿಪ್ಪಣಿಗಳು ‘ಮಾದರಿ ಪಾಠ’ವಾದವು.

ಇದಕ್ಕೆ ಪೂರಕವಾಗಿ ಅಮರೇಶ ನುಗಡೋಣಿ ಅವರು ಸಂಪಾದಿಸಿದ ‘ಬಿಸಿಲ ಹನಿಗಳು’ ಎನ್ನುವ ಹೈದರಾಬಾದ್‌ ಕರ್ನಾಟಕದ ಪ್ರಾತಿನಿಧಿಕ ಕಥಾ ಸಂಕಲನ ಕೂಡ ಉದಯೋನ್ಮುಖ ಕಥೆಗಾರರನ್ನು ಪ್ರೇರೇಪಿಸಿತು.
ಕಥೆಗಾರ ಮಹಾಂತೇಶ ನವಲಕಲ್‌ ಪ್ರಕಾರ ಹೈದರಾಬಾದ್‌ ಕರ್ನಾಟಕದ ಭಾಗದಲ್ಲಿ ಶಾಂತರಸರು ಹತ್ತಾರು ಸಾಹಿತಿಗಳಿಗೆ ಅವಕಾಶಗಳನ್ನು  ಸೃಷ್ಟಿಸಿಕೊಟ್ಟಿದ್ದರು. ತರುಣರಿಗೆ ಲಂಕೇಶ್‌ ಪತ್ರಿಕೆ ಓದಲು ಹಚ್ಚಿ ವೈಚಾರಿಕ ಪ್ರಜ್ಞೆ ಬೆಳವಣಿಗೆಗೆ ಕಾರಣರಾದರು. ಅವರು ಈ ಭಾಗದಲ್ಲಿ ವಿಶ್ವವಿದ್ಯಾಲಯದ ರೀತಿ ಕೆಲಸ ಮಾಡಿದರು.

‘ನಮ್ಮ ಭಾಗದಲ್ಲಿ ವಿದ್ಯಾವಂತರ ಪ್ರಮಾಣ ಕಡಿಮೆ ಇತ್ತು. ಎಂಬತ್ತರ ದಶಕದಲ್ಲಿ ಕೆಳ ಮತ್ತು ಮಧ್ಯಮ ವರ್ಗದವರು ಹೆಚ್ಚಾಗಿ ವಿದ್ಯೆ ಕಲಿತು ಸಾಹಿತ್ಯಕ್ಕೆ ಪ್ರವೇಶ ಪಡೆದರು. ನಮ್ಮದು ಪಶ್ಚಿಮದಿಂದ ಓದಿ ಪಡೆದ ಜ್ಞಾನದಿಂದ ಬರೆದಿದ್ದಲ್ಲ. ನಮ್ಮ ಸುತ್ತಲಿನ ಬದುಕು, ರಕ್ತ ಸಂಬಂಧ ಇರುವ ಅನುಭವವನ್ನೇ  ಕಥೆಯಾಗಿಸಿದೆವು’ ಎಂದು ಅಮರೇಶ ನುಗಡೋಣಿ ಹೇಳುತ್ತಾರೆ.

‘ಪ್ರಜಾವಾಣಿ’ ಕಥಾಸ್ಪರ್ಧೆಯು ‘ಟ್ರೆಂಡ್‌ಸೆಟ್‌’ ಮಾಡುತ್ತಿತ್ತು. ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪಿ.ಲಂಕೇಶ್‌, ಯು.ಆರ್‌.ಅನಂತಮೂರ್ತಿ, ಡಾ.ಬೆಸಗರಹಳ್ಳಿ ರಾಮಣ್ಣ, ಶ್ರೀಕೃಷ್ಣ ಆಲನಹಳ್ಳಿ, ಮೊಗಳ್ಳಿ ಗಣೇಶ, ಅಮರೇಶ ನುಗಡೋಣಿ ಅವರ ಕಥೆಗಳನ್ನು ಆಯಾ ಕಾಲಘಟ್ಟದ ಯುವಪೀಳಿಗೆ ‘ಮಾದರಿ’ ಎನ್ನುವಂತೆ ಸ್ವೀಕರಿಸುತ್ತಿತ್ತು.

‘ಕಥಾಸ್ಪರ್ಧೆಯೊಂದು ಒಂದು ಪ್ರದೇಶದಲ್ಲಿ ಲೇಖಕರನ್ನು ಹುಟ್ಟು ಹಾಕುತ್ತದೆ ಎನ್ನುವುದೇ ಮುಖ್ಯವಾಗುತ್ತದೆ.  ಪ್ರಶಸ್ತಿ ಬಂದರೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಸಾಹಿತ್ಯ ಮತ್ತು ವಿಮರ್ಶಕ ವಲಯವೂ ಮಾತನಾಡುತ್ತದೆ. ಅಲ್ಲದೇ ವಿಭಿನ್ನವಾಗಿ ಬರೆಯಲು ಪ್ರೇರೇಪಿಸುತ್ತದೆ’ ಎಂದು ಕವಿ ವಿಕ್ರಮ ವಿಸಾಜಿ ಅಭಿಪ್ರಾಯಪಡುತ್ತಾರೆ.

ವಿಶ್ವವಿದ್ಯಾಲಯಗಳು ಮಾಡಬೇಕಾದಂತಹ ‘ವರ್ಗ‘ದ (ಕ್ಲಾಸ್‌ರೂಂ) ಸಾಹಿತ್ಯಿಕ ಪಾಠವನ್ನು ‘ಪ್ರಜಾವಾಣಿ ಕಥಾಸ್ಪರ್ಧೆ’ ಮತ್ತು ‘ಸಾಪ್ತಾಹಿಕ ಪುರವಣಿ’ ಸಮರ್ಥವಾಗಿ ಮಾಡಿದವು ಎಂದರೆ ತಪ್ಪಾಗಲಾರದು.

‘ಪ್ರಜಾವಾಣಿಯ ದೀಪಾವಳಿ ಕಥಾಸ್ಪರ್ಧೆಗೆ ಕನ್ನಡ ಕಥಾ ಪರಂಪರೆಯಲ್ಲಿ ಮಹತ್ವದ ಸ್ಥಾನವಿದೆ. ಪ್ರತಿಭಾವಂತ ಕಥೆಗಾರರು ಈ ಸ್ಪರ್ಧೆಯ ಮೂಲಕವೇ ಬಂದರಾಗಿದ್ದಾರೆ. ಅತ್ಯುತ್ತಮ ಕಥೆಗಳ ಮೈಲಿಗಲ್ಲುಗಳು ಪ್ರಜಾವಾಣಿಯ ಮೂಲಕ ದಾಖಲಾಗಿವೆ. ಈ ವೇದಿಕೆಯಿಂದ ನಾಲ್ಕು ಬಾರಿ ಮೊದಲ ಬಹುಮಾನ ಪಡೆಯುವ ಮೂಲಕ ಕಥೆಗಾರನಾಗಿ ನಾನು ಗುರುತಿಸಿಕೊಂಡೆ. ಲಂಕೇಶ್‌, ತೇಜ್ವಸಿ, ಅನಂತಮೂರ್ತಿ ಅವರಂತಹ ಕಥೆಗಾರರು ಈ ಸ್ಪರ್ಧೆಯ ಮೂಲಕವೇ ಒದಗಿಬಂದವರು. ಇಂಥವರ ದೊಡ್ಡ ಪಟ್ಟಿಯೇ ಈ ವೇದಿಕೆಯ ಹೆಸರಿನಲ್ಲಿದೆ. ಇತರೆ ಯಾವೊಂದು ಸಾಹಿತ್ಯ ವೇದಿಕೆಯೂ ಇಷ್ಟೊಂದು ಕಥೆಗಾರರನ್ನು ಪರಿಚಯಿಸಲು ಸಾಧ್ಯವಾಗಿಲ್ಲ ಎಂಬುದು ಪ್ರಜಾವಾಣಿಯ ಹೆಗ್ಗಳಿಕೆ’ ಎಂದು ಈ ಬಾರಿ ‘ಪ್ರಜಾವಾಣಿ’ ಕಥಾಸ್ಪರ್ಧೆಯ ತೀರ್ಪುಗಾರರಾಗಿದ್ದ ಡಾ.ಮೊಗಳ್ಳಿ ಗಣೇಶ್‌ ತಮ್ಮ ಟಿಪ್ಪಣಿಯಲ್ಲಿ ದಾಖಲು ಮಾಡಿದ್ದಾರೆ.
ಹೌದು, ನನಗೂ ಹೀಗೆಯೆ ಅನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT