ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ . . .

Last Updated 9 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

 ನಮ್ಮ ಸ್ವತಂತ್ರ ಭಾರತದ ಪ್ರಥಮ ಪ್ರಧಾನಮಂತ್ರಿ ಪಂಡಿತ ಜವಾಹರಲಾಲ ನೆಹರೂರವರ ರಾಷ್ಟ್ರಪ್ರೇಮ ಅನನ್ಯವಾದದ್ದು, ಅವರು ದೇಶಕ್ಕಾಗಿ ದೊಡ್ಡ ದೊಡ್ಡ ಕನಸುಗಳನ್ನು ಕಂಡವರು, ಅಹರ್ನಿಶಿ ದುಡಿದವರು. ಅವರ ವಿಧಾನಗಳ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ ಅವರ ದೇಶಪ್ರೇಮವನ್ನು ಪ್ರಶ್ನಿಸುವುದು ಅಸಾಧ್ಯ.

ಒಂದು ಬಾರಿ ಪಂಜಾಬದ ಕಪುರ್ತಲಾ ಎಂಬ ಪ್ರದೇಶದಲ್ಲಿ ಅವರ ಪ್ರವಾಸ ನಿರ್ಧಾರವಾಗಿತ್ತು. ಬೃಹತ್ ಕೈಗಾರಿಕೆಗಳು, ಬೃಹತ್ ನೀರಾವರಿ ಯೋಜನೆಗಳು ನೆಹರೂರವರ ಹೊಸ ರಾಷ್ಟ್ರದ ಅಭಿವೃದ್ಧಿಯ ಸಂಕೇತಗಳಾಗಿದ್ದವು.
 
ಕಪುರ್ತಲಾದ ಹತ್ತಿರ ನದಿಗೆ ಒಡ್ಡುಕಟ್ಟಿ ನೀರು ನಿಲ್ಲಿಸಿ, ನಂತರ ಕಾಲುವೆಗಳ ಮೂಲಕ ಸಾವಿರಾರು ಎಕರೆ ಜಮೀನಿಗೆ ನೀರು ಹರಿಸಿ ನೀರಾವರಿಯಿಂದ ಸಮೃದ್ಧಿಯನ್ನುಂಟು ಮಾಡುವುದು ಯೋಜನೆಯ ನಕ್ಷೆಯಾಗಿತ್ತು. ಅದರ ಉದ್ಘಾಟನೆ ನೆಹರೂ ಅವರಿಂದ ಆಗುವುದಿತ್ತು.

ನೆಹರೂ ಬರುತ್ತಾರೆಂದರೆ ಸುಮ್ಮನೆ ಆಗುತ್ತದೆಯೋ? ಎಷ್ಟೊಂದು ತಯಾರಿ ಮಾಡಿಕೊಂಡರೂ ಸಾಲದೆನ್ನಿಸುತ್ತಿತ್ತು. ಜನಸಾಗರ ಈ ಕ್ಷೇತ್ರದೆಡೆಗೆ ನುಗ್ಗಿ ಬರುತ್ತಿತ್ತು. ಎಷ್ಟು ರಕ್ಷಣೆ ವ್ಯವಸ್ಥೆ ಮಾಡಿದರೂ ಅದನ್ನು ತಡೆಯುವುದು ಅಸಾಧ್ಯವೆನ್ನಿಸುತ್ತಿತ್ತು. ಅಷ್ಟರಲ್ಲಿ ನೆಹರೂ ಹತ್ತಿರವೇ ಬಂದಿದ್ದಾರೆಂದು ಸುದ್ದಿ ಹರಡಿತು. ಗುದ್ದಲಿ ಪೂಜೆ ಮಾಡಿ ಉದ್ಘಾಟನೆ ಮಾಡುವ ಸ್ಥಳವನ್ನು ಪೊಲೀಸರು ಸುತ್ತುವರೆದು ನಿಂತರು. ಕೇವಲ ಕಾರ್ಯಕ್ರಮದಲ್ಲಿ ಭಾಗಿಯಾಗುವ ಕೆಲವೇ ಹಿರಿಯರನ್ನು ಮಾತ್ರ ಒಳಗೆ ಬಿಟ್ಟರು.

ನೆಹರೂ ಜನರತ್ತ ಕೈ ಮಾಡುತ್ತ ಆ ಸ್ಥಳದ ಹತ್ತಿರ ಬಂದರು. ಮಹಿಳೆಯರು ತಿಲಕವನಿಟ್ಟು ಆರತಿ ಮಾಡಿದರು. ಹಿರಿಯ ನಾಯಕರು ಅವರಿಗೆ ಪ್ರಿಯವಾದ ಗುಲಾಬಿ ಹೂವಿನ ಹಾರ ಹಾಕಿದರು. ಛಾಯಾಚಿತ್ರಕಾರರು ಸನ್ನದ್ಧರಾಗಿ ನಿಂತರು. ನೆಹರೂ ಸಿದ್ಧರಾದುದನ್ನು ನೋಡಿ ಕಾರ್ಯಕರ್ತರು ಒಂದು ದೊಡ್ಡ ಬೆಳ್ಳಿಯ ತಟ್ಟೆಯಲ್ಲಿ ಸಿಮೆಂಟನ್ನು ನೀರಿನೊಡನೆ ಬೆರೆಸಿ ಹದಮಾಡಿ ತಂದರು. ನಂತರ ನೆಲವನ್ನು ಅಗೆಯಲು ಒಂದು ಪುಟ್ಟ ಗುದ್ದಲಿಯನ್ನು ಅವರ ಕೈಯಲ್ಲಿಟ್ಟರು. ನೆಹರು ಅದನ್ನು ತೆಗೆದುಕೊಂಡು ನೋಡಿ ಹಾವು ಹಿಡಿದವರಂತೆ ಅದನ್ನು ದೂರ ಎಸೆದುಬಿಟ್ಟರು. ಅವರ ಮುಖದಲ್ಲಿ ಕೋಪ ಕಾಣುತ್ತಿತ್ತು.
 
ಏರು ಧ್ವನಿಯಲ್ಲಿ ನುಡಿದರು, `ಇದೇನು ಮಾಡುತ್ತಿದ್ದೀರಿ? ಇದು ಬೆಳ್ಳಿಯ ಗುದ್ದಲಿ~ ಎಂದರು. ಹಿರಿಯ ರಾಜಕಾರಣಿಯೊಬ್ಬರು,  `ಹೌದು ಸ್ವಾಮಿ, ಇದು ಬಹು ಸಂಭ್ರಮದ ಸಮಾರಂಭವಲ್ಲವೇ? ಅದಕ್ಕೇ ಅದನ್ನು ಚೆಂದವಾಗಿಸಲು ಹೀಗೆ ಮಾಡಿದೆವು.~
 
ನೆಹರೂ ಸಿಟ್ಟಿನಿಂದ ನುಡಿದರು, `ನಮ್ಮ ರೈತರಿಗೆ ಎರಡು ಹೊತ್ತು ಊಟ ಇಲ್ಲ, ನೆಮ್ಮದಿಯ ನಿದ್ರೆ ಇಲ್ಲ. ಅವರಿಗೊಂದಿಷ್ಟು ಅನುಕೂಲವಾಗಲೆಂದು ಯೋಜಿಸಿದ ಕಾರ್ಯಕ್ರಮವಿದು. ನಮ್ಮ ದೇಶ ಬೇರೆ ದೇಶಗಳ ಮುಂದೆ ಆಹಾರ ಧಾನ್ಯಗಳಿಗಾಗಿ ಕೈ ಚಾಚುವಂಥ ಪ್ರಸಂಗವಿದ್ದಾಗ ಬೆಳ್ಳಿಯ ಗುದ್ದಲಿ ಮಾಡಿಸುವ ಅದ್ಧೂರಿಯ ಚಿಂತನೆ ನಿಮಗೆ ಹೊಳೆದದ್ದೇ ನಾಚಿಕೆಗೇಡು~ ಎಂದು ದೂರ ಸರಿದು ನಿಂತರು. ನಂತರ ಅವರಿಗೆ ಮತ್ತೊಂದು ಕಬ್ಬಿಣದ ಗುದ್ದಲಿ ಕೊಟ್ಟಾಗ ಉದ್ಘಾಟನೆ ನೆರವೇರಿಸಿ ನಡೆದರು.

ನಮ್ಮ ಸಮಾರಂಭಗಳು, ಉತ್ಸವಗಳು ನಮ್ಮ ವಾಸ್ತವದ ಸ್ಥಿತಿಗೆ ಹೊಂದುವಂತಿರಬೇಕು. ಕೆಲವೊಂದು ಬಾರಿ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಬೇಕೆಂದಂತೆ ಆಚರಣೆ ಮಾಡುತ್ತೇವೆ, ಆಡಂಬರಕ್ಕೆ ಮನ ನೀಡುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT